Sunday, August 4, 2024

ಗೊಂಚಲು - ನಾಕ್ನೂರ್ಮೂವತ್ಯೆಂಟು.....

ನಿನ್ನೆಗಳೇ ನಾಳೆಗಳಲೂ ಇರಬಹುದು.....

ಎದೆ ಗಂಗೆ ಹೊನಲುಕ್ಕಿ ನೀ ಕುಣಿಕುಣಿದು ನಡೆದ ಆ ಹಾದಿಯನೊಮ್ಮೆ ಮಿಡಿದು ಬರಬೇಕು...
ನಿನ್ನ ಗೆಜ್ಜೆ ಗಿಲಕಿಗಳು ಚದುರಿ ಬಿದ್ದಂತೆ ಚೆಲ್ಲಿಕೊಂಡ ಪಾರಿಜಾತವ ಆಯ್ದುಕೊಂಡು ನಿನ್ನ ಘಮವನೆರೆದುಕೊಂಡೋಗಲು ಆ ಹಾದಿಯಲೊಮ್ಮೆ ಹಾದು ಬರಬೇಕು...
ನಿನ್ನಾ ಹೂನಗೆಯ ತುಟಿಯಿಂದ ಮುತ್ತೊಂದ ಕದ್ದೊಯ್ಯಲು ಆ ಅದೇ ಹಾದಿಯ ನೆರಳನೊಮ್ಮೆ ಸಂಧಿಸ(ಸಿ) ಬರಬೇಕು...
ಹಾಯೆನುವ ಕಣ್ಣ ನಗು, ಕಮ್ಮಗಿನ ಹೆರಳ ಗಂಧ, ಅರಳಿ ಮೊರೆವ ನಿನ್ನಂದ ಎಲ್ಲಾ ನಂದೆನುವ ಕಳ್ಳ(ಳ್ಳು) ಭಾವವೊಂದ ಸಾಕಿ ಸಲುಹಿಕೊಳ್ಳಲಾಗಿ ನಿನ್ನಾ ಹಾದೀಲೊಮ್ಮೆ ಸುಳಿದು ಬರಬೇಕು...
ನಿನ್ನುಡಿಯ ನಲುಮೆ ಪಡಿ ಪಡೆದು, ನನ್ನನೇ ನಿನಗಿತ್ತು, ನನ್ನ ನಾ ಮರೆಯಲೋಸುಗ ನಿನ್ನ ಹಾದಿಯಲೇ ಒಮ್ಮೆ ನಡೆದು ಬರಬೇಕು...
____ ಕನಸೇ...

"ಕಾವ್ಯ ಚಿಗುರುವ ಹಾದಿ"
ಪಟ ಸೌಜನ್ಯ: ನೇಹಿ ಶ್ಯಾಮಲಾ ರವಿರಾಜ್...
ನಿನ್ನ ಕಣ್ಬೆಳಕಲ್ಲಿ ಗರಿಬಿಚ್ಚುವ
ನನ್ನೆದೆಯ ನೂರು ವೈಯ್ಯಾರ;
ಈಗಷ್ಟೇ ಮೈತುಂಬಾ ಬಿಳಲು ಬಿಟ್ಟ 
ಚಿನಕುರುಳಿ ಪ್ರಾಯ...
ತಾರಸಿಯ ತಿಳಿ ಕತ್ತಲಲಿ
ತಬ್ಬಿಕೊಳಲಿ ಪ್ರೇಮ ಮನಸಾರ;
ಎದೆಯ ಭಾವದುಬ್ಬರಕೆಲ್ಲ ಕಳ್ಳ(ಳ್ಳು) ಸೂತ್ರ 
ನಾಭಿ ಮೂಲದ ಗಾಯ...
___ ತಂಪಿರುಳ ತಾಳ ತಪ್ಪಿಸುವ ಬೆಂಕಿ ಬೆಂಕಿ ಕಾಯ...
&&&

ಸಣ್ಣ ಸದ್ದಿನ ಮಳೆ - ಬೀದಿ ಬೆಳಕಲಿನ್ನೂ ಊರ ಗದ್ದಲ - ಸುರುಳಿ ಛಳಿ ಗಾಳಿಯಲಿ ಪಾರಿಜಾತದ ಘಮಲು - ನಿನ್ನ ನೆನಪಲ್ಲಿನ ನನ್ನ ಮಧುರ ಏಕಾಂತ - ನಾನಿಲ್ಲಿ ನನ್ನಲಿಲ್ಲ, ಬಹುಶಃ ನೀನಲ್ಲಿ ನಿನ್ನಲಿಲ್ಲ; ಕನಸಲ್ಲಿ ಪ್ರೇಮಲೋಕದ ಅಮಲು...
___ ಇಳೆ ಮಿಂದ ಇರುಳು...
&&&

ಪರಿಪೂರ್ಣ ಪೋಲಿತನದ ಒದ್ದೊದ್ದೆ ದಿವ್ಯ ಗಂಧವ ಎದೆ ತುಂಬಾ ಸುರಿಯೋ ಮಳೆಯ ಸಂಜೆ - ನೀನಿಲ್ಲದೆ ಅರಳಲಾರದೆ ಮಗುಚಿ ಬಿದ್ದ ನನ್ನದೆನಿಸದ ನನ್ನ ಶಾಪಗ್ರಸ್ತ ಇರುಳು...
___ ಮೋಹಿಯೆದೆಯ ಗರಗಸ...

ಸುಖ ಒಂದು ನಶೆಯಾದರೆ, ಸುಖದ ಗಾಯದ ಔಷಧಿಯೂ ನಶೆಯೇ - ನೀನು...
___ ಬಯಕೆ ಮಂಗನ ಮೈಯ್ಯ ಹುಣ್ಣು...

ಸುರಿವ ಮುನ್ನಿನ ಹುರಿ ಹುರಿ ಕವಣೆ ಉಸಿರಿನಂತೆ ಕೆನೆಗಟ್ಟಿದ ಕರಿ ಮೋಡ - ತೆನೆ ತೆನೆ ಜೀವ ಸಂಚಾರ...
ಒಂದು ಸಂಜೆಯ ಕಡು ಪ್ರೇಮ ಸಲ್ಲಾಪ...
ನೋಡೆಂಥ ಚಂದ ಇವರ ಮಿಲನ ಮುನ್ನುಡಿ...
____ ನೀನಿರಬೇಕಿತ್ತು - ತೇವ ತೇವ ತುಟಿಯಲೊಂದು ಕವಿತೆ ನುಡಿಸಬಹುದಿತ್ತು...
&&&

ದಾರಿ ಖರ್ಚಿಂಗೆ ಎನಗೇ ಅಂತ ಆನೇ ಬರೆದುಕೊಂಡ ಎರಡು ಸಾಲನು ನೀನೂ ಗುನುಗಿ ಖುಷಿಗೊಂಡರೆ - ಕಡಲಾಗುವುದು ಎನ್ನೆದೆ...
___ ನನ್ನ ಹಾಡು ನೀನಾಗುವ ಜಾಡು...
&&&

ಚೂರೂ ಗಾಂಭೀರ್ಯವೇ ಇಲ್ಲ, ಯಾವಾಗ ನೋಡಿದ್ರೂ ನಗ್ತಿರ್ತೀಯ ಒಳ್ಳೆ ಹಲ್ಲಿಟ್ಟಿ ರಾಮನ್ ಥರ, ಹು(ಚ್ಚು)ಟ್ಟು ತರ್ಲೆ...
ಅಯ್ಯೋ ಮರುಳೇ -
ಬದ್ಕಿಂದು ಯಾವತ್ತಿದ್ರೂ ಘನ ಗಂಭೀರ ಗುರು ಸ್ಥಾನವೇ; ನಾವು ಚಿಕ್ಕವ್ರು, ಶಿಕ್ಷಾರ್ಥಿಗಳು, ಪಾಠಕ್ಕೂ, ಪಥ್ಯಕ್ಕೂ ನಮ್ಮದೇ ನಮೂನೆಗಳಲಿ ನಗು ತುಂಬಿಕೊಳ್ಬೇಕು, ಮಗುವಾಗಿ ಆಟ ಕಟ್ಟಿಕೊಳ್ಬೇಕು - ಬಾಲ್ಯದ ಬೆಚ್ಚು ಬೆರಗು, ತಾರುಣ್ಯದ ಹಸಿ ಬಿಸಿ ರೋಮಾಂಚಗಳಿಲ್ದೇ ಬದ್ಕಿನ ಘನತೆಗೆ ಅಲಂಕಾರದ ಆಸ್ವಾದ ಏನಿರತ್ತೆ ಹೇಳು...
ಮೌನ ಭಾರ ಆಗ್ಬಾರ್ದು, ಮಾತು ಹಗುರ ಆಡ್ಬಾರ್ದು ಅಂದ್ರೆ ಅನುಭವದ ಊಟದ ರುಚಿ ವಿನೋದದ ವೀಳ್ಯದ ರಂಗಿನಲಿ ನಗೆಯಾಗಿ ತೇಗಬೇಕು...
____ ಪರಮ ಪೋಕರಿಯ ಒಣ ವೇದಾಂತ...
&&&

ಕೇಳು -
ನಿನ್ನ ಕಣ್ಣು ನನ್ನ ಕೂಡಿದ ದಾರಿಯಲಿನ್ನೂ ಬೆಳಕು ಹಾಗೇ ಉರಿ(ಳಿ)ದಿದೆ...

ಸಮಾಧಾನಕ್ಕೆ ನೂರು ದಾರಿಗಳಿದ್ದರೆ, ನೆನಪಿಗೆ ಸಾವಿರ ಮುಖಗಳು ನೋಡು...

ವತ್ಸಾ -
ಅಕ್ಕರೆಯ ಋಣ ಧನ್ಯತೆಯ ತುಂಬಬೇಕು, ಹೊರತೂ ಒಂದು ಧನ್ಯವಾದದಲಿ ಮುಗಿದು ಹೋಗಬಾರದು...
ಕಣ್ಣ ಹೊಳಪಲ್ಲಿ ಮೌನ ಪ್ರೀತಿ ಹೇಳಬೇಕು...

ಕೊಡುವಾಗ ಪ್ರೀತಿಯ ಕಾರಣಕ್ಕೂ, ಪಡೆಯುವಾಗ ನಡತೆಯ ಕಾರಣಕ್ಕೂ ಕ್ಷಮೆ ಸಿಂಧುವಾಗಬೇಕು...
ಮಾತು ಎದೆಯ ಧ್ವನಿಸಬೇಕು...

ಅಲ್ವಾ -
ಮೋಟು ಬೀಡಿಯ ತೆಳು ಘಾಟು ಹೊಗೆಯಂಥಾದರೂ ಪ್ರೀತಿ ಎದೆಯ ಸುಡುತಿರಬೇಕು...
ಬಿಡಿ ಸಾಲುಗಳ ನಡುವಿನ ಹಿಡಿ ನಶೆಯಲ್ಲಿ ಒಂಟಿ ಕವಿಯ ಜೀವಂತ ಭಾವಕಿಷ್ಟು ನಗೆಯು ಕೂಡುತಿರಬೇಕು...

ಹುಣ್ಣಿಮೆಯ ಬೆಳಕಲ್ಲಿ ಶರಧಿ ಅಳುವುದು,
ಕಲ್ಲಿನೆದೆಯಲ್ಲೂ ಒಂದ್ಯಾವುದೋ ಕನಸು ನರಳುವುದು,
ನಿನ್ನ ಹಾಡನು ನೀ ಹಾಡುವಾಗ ವಿರಾಮದ ನಗು ಚೆಲ್ಲಿ ಹೆಸರೊಂದನು ಉಸುರದೇ ಮರೆಸಲು ಹೆಣಗುತ್ತಾ ಗಟ್ಟಿ ಎಳೆದು ಬಿಟ್ಟ ಉಸಿರಲ್ಲಿ ನಾನಿರುವುದು,
ಪರಮ ಪೋಲಿಯ ಎದೆಯಲೂ ಒಂದು ಪ್ರೇಮದ ಕರ್ಮ ಸಂಸ್ಕಾರದ ಎಡೆಬಾಳೆ ಇರುವುದು,
ಎಲ್ಲಾ ಸುಳ್ಳೇ ಇರಬಹುದು (?) - ಆದರೆ.......

ಯಾರೂ ಬರೆಯದೇ ಹೋದದ್ದನ್ನ ನಾನೇನೂ ಬರೆದಿಲ್ಲ...
ಯಾರೋ ಬರೆಯದೇ ಇದ್ದದ್ದನ್ನ ಇಲ್ಯಾರೂ ಬರೆದಿಲ್ಲ...
ನಿನ್ನೆಗಳೇ ನಾಳೆಗಳಲೂ ಇರಬಹುದು...
&&&

ಎಲ್ಲಿದೀಯಾ...?
ಮನೇಲಿ...
ಯಾರೆಲ್ಲಾ ಇರ್ತೀರಿ...??
ನಾನು ಮತ್ತು ನನ್ನ ಪರಮ ಪೋಲಿ ಕನಸುಗಳು...
ಓಹೋ...! ಮಳೆ ಜೋರಾ...???
ಇನ್ನೂ ಬರೀ ಮೋಡ ಮುಸುಕಿದ ವಾತಾವರಣ...
ಹಂಗಾ...!!
ನೀ ಬಂದ್ರೆ ಮಳೆಯಾಗಬಹುದು... 😉
ಥೂ ಕರ್ಮ... 🤦
____ ನನ್ನೊಳಗೀಗ ನೀನು ಬಲು ಇಂಪಾದ ಪೋಲಿ ಹಾಡು... 

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

ಗೊಂಚಲು - ನಾಕ್ನೂರ್ಮೂವತ್ಯೋಳು.....

ನಾನೋ ದಂಡೆ ಮತ್ತು ಅಲೆ ಎರಡೂ ನಿನ್ನೆದುರು.....

ನೆಲದ ಹುಳ ನಾನು - ಹಾಡಹಗಲು ಗಗನಕ್ಕೆ ಗಾಳ‌ ಹಾಕಿ ಮೋಡಗಳ ತೆರೆಯಡಿಯ ತಾರೆಗಳ ಹಿಡಿಯುವ ಕನಸಾಯಿತು...
ಅಲ್ಲಿಯೂ ಪ್ರೀತಿಗೆ‌ ನಿನ್ನದೇ ಹೆಸರಿರಬಹುದು - ಮಳೆಗರೆವ ಮೋಡಗಳ ತವರೂರಂತೆ ಅದು...
ಪಕ್ಕೆಗಳಲಿ ರೆಕ್ಕೆಗಳಿಲ್ಲ ಖರೆ - ಗೊತ್ತಲ್ಲ, ಹಾರು ಹಕ್ಕಿಯಂಥಾ ಮನಸಿಗೆ ಮೇರೆಯೂ ಇಲ್ಲ...
ಗಿರಿಯ ನೆತ್ತಿಯ ಗಾಳಿಯಲಿ ಆಗಸನ ಬಗಲ ಬೆವರ ಕಂಪು ಪ್ರೇಮದ ಕೊರಳ ತೀಡಿ, ಕರುಳ ಕೆಣಕುವುದು...
ವಾಸ್ತವದ ಕನ್ನಡಿಯಲಿ ಕಂಡ ಸೋತ ಮುಖಕೂ ನಗೆಯ ತುಂಬಿಕೊಳುವುದೇ ನಿಜ ಭಾವುಕತೆ...
___ ಬಿಡಿ ಸಾಲುಗಳ ಮಾಲೆಯಲಿ ನಿನ್ನನರಸುವ ತುರುಸು...

ಶೀರ್ಷಿಕೆ ಇಲ್ಲದ ಭಾವ ನಾಡಿ... 
















ನಮ್ಮ ಸ್ನೇಹಕ್ಕೆ ಕಾರಣ ಏನೋ...?

ನಿನ್ನೂರಲ್ಲಿ ಸಾಗರ ಇದೆ...
ಇದ್ರೆ...?
ನನ್ನೂರ ಕಾಡ ನಡುವಿನ ಕಿರು ತೊರೆಯ ಎದೆಯಲ್ಲಿ ನಿನ್ನೂರ ಶರಧಿಯ ಕನಸಿದೆ...
ಎಂದಿನಂತೆ "ನೀನೋ ನಿನ್ನ ಮಾತುಗಳೋ" ಅಂತನ್ನೋಕೆ ಹೊರಟು ಕಣ್ಣಾಳಕಿಳಿದು ಸುಮ್ಮನಾದಳು - ಯಾವುದೋ ತಂಪು ನೆರಳು ಸಿಕ್ಕಂಗೆ...
ಜಗಕೆಲ್ಲ ಜೀವಪ್ರೀತಿಯನಿತ್ತ ಮೇಲೂ, ಕಾರ್ಯ ಕಾರಣ ಪರ್ಯಾಯಗಳ ಮೀರಿ ನದಿಯ ತಪನೆ ಸಾಗರವೇ ಅಂತೆ...
ನಿಜ ಅಂದ್ರೆ 'ಸ್ನೇಹಕ್ಕೇ' ಕಾರಣಗಳಿರಬಾರದು - 'ಇರುವ ನೇಹಕ್ಕೆ' ಕಾರಣಗಳು ಇನ್ನಷ್ಟು ಹೊಳಪು ತುಂಬಬೇಕು...
ನೆಮ್ಮದಿಯಿಂದಿದ್ದುಬಿಡಬೇಕು - ಕಾರಣವೇ ಇಲ್ಲದೆ ನಗುವೊಂದು ಕೈಹಿಡಿಯುವುದಾದರೆ, ಕಾರಣ ಕೇಳದೇ ಸಮಾಧಾನವೊಂದು ಜೊತೆ ನಡೆವುದಾದರೆ; ಹೊಳೆಯೊಂದಿಗೆ ಹರಿವ ಮಣ್ಣ ರುಚಿಯಂತೆ...
___ ಜೀವ ಭಾವ ಸಾನಿಧ್ಯ...
&&&

ಅಲ್ಯಾರೋ ನನ್ನ ಪರಿಚಯ ಕೇಳಿದರು...
ವಿವರಗಳಿಗಾಗಿ ನಿನ್ನ ವಿಳಾಸ ಕೊಟ್ಟಿದ್ದೇನೆ...
ಕತ್ತಲಿನಂಥಾ ಕಾರುಣ್ಯವೇ -
ನಿನ್ನ ಮೌನವೇ ಅಲ್ಲವಾ ನನಗೂ ನನ್ನ ಪರಿಚಯಿಸಿದ್ದು...!!
___ ಮಡಿಲು...

ಮನವು ಅಲೆವಾಗ ಅಲ್ಲಿ ಇಲ್ಲಿ ನಿನ್ನ ಹುಡುಕುತ್ತಾ...
ಮುಂದುವರಿದು -
ಇಲ್ಲೇ ನಿಂತಿದೆ ಈ ನಗೆಯು ನಿನಗೆ ಕಾಯುತ್ತಾ...
ನಿ(ನ)ಲ್ದಾಣವ ಮರೆತಿದ್ದೇನೆ - ಇಳಿಸಿಕೊಳ್ಳಲು / ಉಳಿಸಿಕೊಳ್ಳಲು ನೀನೇ ಹುಡುಕಿ ಬರಬೇಕು...
ಕಾರುಕುರುಳ ಕಾವ್ಯವೇ -
ನಾನೋ ದಂಡೆ ಮತ್ತು ಅಲೆ ಎರಡೂ ನಿನ್ನೆದುರು...
___ ಪ್ರೀತಿ...
&&&

ಹಂಗೇ
ಅಂಥ ಅಪಾಯವೂ ಏನಿಲ್ಲ, ಮನಸಿಗೊಂದಿಷ್ಟು ಹೇವರಿಕೆ ಅಷ್ಟೇ - ಅವರಿರುವ ಬಗ್ಗೆ...
ಹಾಗಂತ
ಕೆಟ್ಟವರೇನಲ್ಲ, ಒಂದಷ್ಟು ಕೆಟ್ಟ ಕುತೂಹಲಗಳಿವೆ ಅಷ್ಟೇ ಇವರಿಗೆ - ಅವರಿವರ ಬಗ್ಗೆ...
ಹಾಗೆಂದೇ
ಸಂತೆ ಗಾಳಿಯಲಿ ಸುದ್ದಿಗಳ ತೂರಿಬಿಡಲು ನಾಲಿಗೆಯೊಂದು, ಬೀದಿ ಗಾಳಿಯಲಿ ತೇಲಿಬಹ ಮಾತುಗಳ ಹೀರಲು ಕಿವಿಗಳೆರಡು, ಎದೆ ಬಿರಿದು ನಿಂತುದಾದರೆ ಭಾವದೋಲೆಯ ಓದಲೋ/ಆಲಿಸಲೋ ಮನವು ಕುರುಡು - ಕಂಡವರ ಬಗ್ಗೆ...
___ ಗೊತ್ತಲ್ಲ ಇವರ ಬಗ್ಗೆ...
&&&

ಎಷ್ಟು ಘನವಾಗಿ ಮಾತಾಡಿದೆ ಎಂಬುದಲ್ಲ ವಿಶೇಷ...
ಯೆಷ್ಟು ಚೆಂದವಾಗಿ ಎದೆಗಿಳಿಯಿತು ಮಾತು ಅಂಬೋದು ವಿಷ್ಯಾ...
ಮಾತಾಗಿ ಮುತ್ತಾಗಿ ಗಲಗಲಿಸುವುದಷ್ಟೇ ಅಲ್ಲ ಪ್ರೀತಿ...
ಕಾರುಣ್ಯವಾಗಿ, ಕಾಳಜಿಯಾಗಿ ಮೈದಳೆದು ಒಡನಾಡಿದ್ದೆಷ್ಟೋ ಅಷ್ಟಷ್ಟೇ ನಿಜ ಪ್ರೀತಿ...
___ ಭಾವುಕತೆ...
&&&

ಎನ್ನೆದೆಯ ಕಾವ್ಯ ಕೌಮುದೀ -
ನಾ ಇರುವಂಗೇ ನನ್ನ ಪ್ರೀತಿಸಿಕೊಂಡು,
ನನ್ನಿಷ್ಟದಂಗೆ ನನ್ನಿಂದ ಪ್ರೀತಿಸಲ್ಪಡುವ
ನಿನ್ನ ಹಿರಿಯೆದೆಯ ಸಮಾಹಿತವ ಎಷ್ಟಾರೆ ಹಾಡಲೇ...
ಈ ಹೆಗಲಿಗಂಟಿದ ನಿನ್ನಾ ನಗೆಯ ಪರಮಾಪ್ತ(ತ್ಮ) ಘಮವ,
ಭಾವದೆಲ್ಲಾ ಬಿಳಲುಗಳ ಒಪ್ಪವಾಗಪ್ಪುವ ಆ ಅನೂಹ್ಯ ಮೋಹಾಲಾಪವ
ನಾನೆಂಬ ನನ್ನಿಂದ ನನಗಾಗಿ ಹೆಂಗಾರೆ ಕಾಪಿಡಲೇ...
ಇಲ್ಕೇಳೇ -
ಈ ನೇಹದ ಹರಿವನು ಹಸಿಯಾಗೇ ಕಾಯುವುದು ಹೇಗೆಂದು ನೀನೇ ಕಲಿಸಿ ಕಾಯಬೇಕು - ಬರಿದು ನೆಲವ ಒಲವು ಹಸಿರಾಗಿ ಧರಿಸಬೇಕು...
&&&

ಕಲ್ಲು ಹೃದಯ ಅಂತಂದು ಕಲ್ಲನ್ನು ಬೈದವನಾರು...?!
ನಾಕು ಕುಡ್ತೆ ಪ್ರೀತಿ ಮಳೆಯ ಸುರಿಸಿ ನೋಡು - ರಣಗಲ್ಲಿನೆದೆಯಲೂ ಹಸಿರ ನಗು ಹೇಗೆ ಚಿಗುರುವುದೆಂದು ಕಾಣು...
___ ಶಿಲೆ ಶಿಲ್ಪವಾಗುವುದು ಪ್ರಕೃತಿಯದ್ದೇ ಪ್ರೀತಿ ಕಲೆ...
&&&

ನೀ ನನ್ನ ಇಷ್ಟ ಅಷ್ಟೇ, ದೌರ್ಬಲ್ಯವಲ್ಲ...
___ ಅದಕೂ ಇದಕೂ ಎದಕೂ...
&&&

ವತ್ಸಾ - 
ಹೋದೆವಾದರೆ ಕರೆದು ಸತ್ಕರಿಸೋ ಚಂದ ಮನಸಿರುವವರ ಮನೆಗೆ ಹೋಗ್ಬೇಕು...
ಹೊರತೂ,
ನಿಂಗೆ ಬೇಕಿದ್ರೆ ಬಾ ಅನ್ನೋ ಅಥವಾ ನಿಂಗೆ ಬೇಕಿದ್ದಿದ್ದಕ್ಕೆ ಬಂದಿದೀಯಾ ಅನ್ನೋಥರ ನಡೆಸಿಕೊಳ್ಳುವ, ಹಂಗಾಗಿ ಸಹಿಸ್ಕೋ ಅನ್ನುವಂಗೆ ನಡೆದುಕೊಳ್ಳುವ ಅಹಂಭಾವಿಗಳ ಮನೆಗೆ ಹೋಗುವುದಲ್ಲ ಅಂತಂದ್ಲು - ಕೆನ್ನೆ ಮುಟ್ಟಿ ನೋಡಿಕೊಂಡೆ...
ಬರ್ಬೋದಿತ್ತೂ ಅಂದೆ - ಬರುವ ಮನಸಾಗುವಂಗೆ ಕರೆದೆ(ದೀ)ಯಾ ಅಂದ್ಲು...!!
ಅವಳು ನನ್ನ ನಂಗೆ ಪರಿಚಯಿಸಿದ್ದು ಹಿಂಗೆ...
___ ಎಲ್ಲಿಯೂ ನಿಲ್ಲದವನು ಅವಳ ಇಲ್ಲಿಯೇ ನಿಲ್ಲೆನುವುದು ಎಷ್ಟು ಸಾಧು ಅಥವಾ ಹಾಗನ್ನಲು ಸಾಧ್ಯವಾ...?!

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

ಗೊಂಚಲು - ನಾಕ್ನೂರ್ಮೂವತ್ತಾರು.....

ಶುಭದ ಕಣ್ಬೆಳಕೇ ನಿನಗೆ ಶುಭದಿನ.....

ಬೆಳಗು ಕಿವಿ ತೆರೆದು ಮಾತಾಡುವಾಗ ನೀ ನಿನ್ನೆದೆ ದನಿಯ ತೋರು... 🎍
ಶುಭದಿನ... 🪹

ಊರ ಕಿಬ್ಬಿಯ ಕರಿ ಕಾನಿನ ಹೆಬ್ಬಾಗಿಲಲಿ ಸ್ಮಶಾನ ಶಂಕರನಂತೆ ದಿವ್ಯ ಗಾಂಭೀರ್ಯದ ಹೆಜ್ಜೆ ಇಡುವ ಹಗಲು ನನ್ನೊಳಗಿನ ಅಸಂಗತಗಳ ಚುಚ್ಚುವ ಕಂಕರದಂತೆ...
ಬೆಳಗಾಯಿತು... 🧘

ಜೀವ ಭಾವದ ಒಳಿತು ಕೆಡುಕುಗಳ ಪದ ಕಟ್ಟಿ ಹಾಡಿ ಬೆಳಕ ಬಿತ್ತುವ ವಚನ ವಲ್ಲರಿ ಬೆಳಗು... 🗣️
ಶುಭದಿನ... 🫂

ಕಳೆದಿರುಳ ಮೊದಲ ಜಾವದಲಿ ಮಳೆ ತೊಳೆದಿಟ್ಟ ಅಂಗಳದ ತುಂಬಾ ಈ ಬೆಳಗು ಬೆಳಕಿನ ಹಸೆ ಬರೆಯುತ್ತಿದೆ... ⛈️
ಶುಭದಿನ... 🌤️

ಬೆಳಗಿಳಿಯಿತು ಬೆಳಕಾಗಿ - ಹೂವೆದೆ ಅರಳಿ ನಗೆ ತುಳುಕುವ ಹೊತ್ತು...
ಶುಭದಿನ... 🪻

ಈ ಬೆಳಗು, ಈ ಬೆಳಕು ಬೇಗುದಿಗಳ ತೊಡೆದ್ಹಾಕಲಿ...
ಬಯಸಿದೆಲ್ಲ ಶುಭವೀಯಲಿ... 
ಶುಭದಿನ... 🪻🍬

ಮಣ್ಣು (ಅವಳು) ಅರಳಿ ಮೋಡ (ಅವನು) ಸುರಿದು ಎಳೆ ಬೆಳಕಿಗೆ ಮಿಳನ ಘಮ...
ಮಳೆ ಬೆಳಗು... 🌦️

ಕರಿ ಮೋಡದ ಮರೆಯಿಂದ ಕಿರು ನಗೆಯು ಹೊಳೆದಂಗೆ ಬೆಳಕಿಳಿಯಿತು...
ಬೆಳಗಾಯಿತು... 🌥️

ಬೆಳಕೇ ಬಂದು ಬಾಗಿಲಲಿ ನಿಂದು ತನ್ನ ತೋರಿಕೊಂಡು ಬೆಳಗಾಯಿತೆಂದು ನಗೆ ಬೀರುವುದಿದು ಹರಸುವ ಕೈಗಳ ಸರಳತೆಯ ಪ್ರೀತಿ ಸೊಬಗು...
ಶುಭದಿನ... 🌻🦋

ಇಳಿದು ಬಾ ಬೆಳಕೇ ಜೀವ ಜೀವಾತ್ಮ ಪ್ರೇಮ ಸುರಸಿಂಧುವಾಗಿ...
ನೆಲೆಸು ಬಾ ಬೆಳಕೇ ಎದೆ ಎದೆಗಳ ಭಾವ ಕಾರುಣ್ಯವಾಗಿ...
ಶುಭದಿನ... 🐚

ಮಮತೆಯೇ ಬೆಳಕಾಗಿ ನಗೆಯನೂಡುವ ಬೆಳಗು...
ಶುಭದಿನ... 🪻🍬

ಕತ್ತಲೆಯ ಸರಿಸಿ ನನ್ನ ಹುಡುಕುವ ಬೆಳಕಲ್ಲಿ ನನ್ನ ನಾ ತೂರಿಕೊಂಡರೆ ನಾನಳಿದು ಬೆಳಕೇ ಆದ ನಾ ಸಿಗಬಹುದು ನನಗೆ ಈ ಬೆಳಗಿಗೆ...
ಶುಭದಿನ... 🧘

ಕನ್ನಡಿ ಹೇಳಿದ ಪ್ರೀತಿ ಗುಟ್ಟಿಗೆ ನನ್ನ ನೋಡಿ ನಾನೇ ನಸು ನಕ್ಕು ಎತ್ತಿಕೊಂಡ ಭಾವ ಭರವಸೆ ಬೆಳಗು...
ಶುಭದಿನ... 🧘🍬

ಗುಬ್ಬಿ ಎಂಜಲು ಮಾಡಿ ನೀ ಹೆಕ್ಕಿಕೊಂಡ ನಗೆಯಲಿಷ್ಟು ಪಾಲು ಎನಗೂ ಕೊಡುವ ಶುಭವೇ ನಿನಗೆ ಶುಭೋದಯ... 💞

ಕತ್ತಲ ಬೆದಕಿ ಬೆದಕಿ ಏನನೋ ಹುಡುಕುವ ಬೆಳಕು ನನಗೆಂದೇ ನನ್ನ ಎತ್ತಿ ಕೊಡಬಹುದು - ನಿ(ನ)ನ್ನ ಪರಿಚಯಿಸಬಹುದು - ಬೆಳಗು ಶುಭವೇ ಆಗಬಹುದು...🫂

ಹೂವು ಹಕ್ಕಿ ಪ್ರೀತಿ ಹಂಚಿಕೊಂಬಾಗ ಶೃಂಗಾರದ ಪದ ಕಟ್ಟುವ ತುಂಟ ಕನಸು - ರಸಿಕನೆದೆಯ ಸುಪ್ರಭಾತ... 🌻🦋

ನಿದ್ದೆಯಲಿದ್ದೆ, ಬೆಳಕು ತಟ್ಟಿ ಎಬ್ಬಿಸಿತು - ಕಲಸಿಹೋದ ಕನಸನು ನಗೆಯು ಕೈಕುಲುಕಿತು...
ಬಾಗಿಲಿಗೆ ಬಂದ ಯಾವುದೋ ಶುಭದ ಆಮಂತ್ರಣ - ಬೆಳಗು...
ಶುಭದಿನ... 🧚

ನಿನ್ನೆಡೆಗಿನ ಹೊಸ ನಡಿಗೆಯ ಪುಟ್ಟ ಹೆಜ್ಜೆ - ಬೆಳಗು...
ದಿಟ್ಟವಾಗಲಿ ದಿಟ್ಟಿ...
ಶುಭದಿನ... 🌻🦋

ಬೆಳಕ ಬೆನ್ನೇರಿ ಬರುವ ಶುಭದ ಕಡೆಗೆ ಕಣ್ತೆರೆದು ಕಾಯ್ವ ಹೂ ಬೆಳಗು... 🌻

ನೆಲದ ನೆತ್ತಿಯ ಸವರಿ ತಾ ನೆನೆವ ಬೆಳಕಿನ ಕೋಲು - ಬೆಳಗೆಂದರೆ ಹೂ ಎದೆಗಳಲಿ ಅರಳರಳೋ ಕನಸುಗಳಲಿ ಕರಗಿ ಕಸುವಾಗೋ ಪ್ರೀತಿಯ ಕಾಯಾಲು...
ಶುಭದಿನ... 🌻🦋

ಇರುಳಿಗರಳಿ ಹಗಲಿಗಾಗಲೇ ಕಳಚಿ ಬಿದ್ದ ಪಾರಿಜಾತದ ಕಣ್ಣಲೂ ಸೋತದ್ದು ಬೆಳಕಿನೆದುರು ಎಂಬ ಸಪ್ರೇಮ ಸಾರ್ಥಕತೆಯ ಬೆಳಕ ಸೆಳಕಿದ್ದಂತಿದೆ...
ಶುಭದಿನ... 💮🌼

ಇರುಳ‌ ಸರಿಸಿ, ನಿದ್ದೆಯಿಂದೆಚ್ಚರಿಸಿ, ಮರಣವೂ ಬೆಳಕಿನ ಹಾದಿಯೇ ಅಂದಂತೆ ಭಾಸ ಈ ಬೆಳಗು...
ಶುಭದಿನ... 🥀

ಶುದ್ಧ ಆಳಸಿ ನಾನೂ, ಪರಮ ಚುರುಕು ಬೆಳಕೂ, ಸದಾ ನಡುವೆ ನಿಂತು ಸಂಧಾನ ಮಾಡಿಸುವ ಹಸಿವು...
ಕಾಲ ನೇಮಕ್ಕೆಂದೂ ರಜೆಯಿಲ್ಲ ಅಂದು ಮೈಮುರಿದು ನಕ್ಕ ಶಾಂತ ಬೆಳಗು... 😁

ಒಂದು ಚೆಂದ ಮುಗುಳ್ನಗೆಯಾಗಿ ಕೈಕುಲುಕಿ, ಖುಷಿಗಳ ಗುಣಿಸಿ, ಬೇಗುದಿಗಳ ಭಾಗಿಸಿ, ಬದುಕ ಬೊಗಸೆಗೆ ಭರವಸೆಗಳ ತುಂಬಿಕೊಡುವುದು 'ಎನ್ನ ಸ್ನೇಹವೇ' ಎಂದು ಹೆಗಲು ತಬ್ಬುವ ಪ್ರೀತಿ, ವಿಶ್ವಾಸದ ಕಣ್ಬೆಳಕ ಅಕ್ಷಯ ಪಾತ್ರೆ/ಪಾತ್ರ...
ನಗೆಯ ಮೊಗೆದು ಕೊಟ್ಟ ಎದೆಗೂ ನಗೆಯೇ ಮರಳಿ ಸಿಗಲಿ...
ಶುಭದಿನ ನೇಹವೇ... 🫂😘

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

ಗೊಂಚಲು - ನಾಕ್ನೂರ್ಮೂವತ್ತೈದು.....

ಶುಭದಿನ - ಬೆಳಕಿನ ಸವಿರುಚಿ.....

ನಾನು ನೀನೆಂಬ ನೇಹದೆದೆಯಲಿ
ಹೂ ಮಾಲೆ ಕಟ್ಟುವ ನಾರಿನಂದದಿ
ನಲಿವ ನೇಯಲಿ, ನಗುವ ಬೆಸೆಯಲಿ
ಜಗದ ನೇಹಿಗನ ಕಾರುಣ್ಯದ ಬೆಳಕು...
ಶುಭವೇ ಈ ಬೆಳಗು... 🍬🪻

ಮುಫತ್ತಾಗಿ ಪ್ರೀತಿಯ ಹೊನಲ ಬಿತ್ತುತ್ತಾ ಬಾಗಿಲಿಗೆ ಬಂದ ಬೆಳಕಿಗೆ ಮುಟಿಗೆ ನಗೆಯ ಬಾಗಿನ ಕೊಟ್ಟು ಎದೆಗಿಳಿಸಿಕೊಂಬುವಾ...
ಬೆಳಗಾಯಿತು... 🍬🫂

ಕಣ್ಕುಕ್ಕದೇ ಹಾದಿ ಬೆಳಗಲಿ ಬೆಳಕು...
ಶುಭದ ರೂಹುಗಳ ಬಣ್ಣ ಬೆಡಗಿನ ಬೆಳಗು...
ಶುಭದಿನ... 🧚🎉

ಇರಲಿರಲಿ ಅನವರತ ಬೆಳಕ ಕಾಣುವ ಯೋಗ - ಒಂದು ಒಂದೊಂದೂ ಯೋಗಾ ಯೋಗದ ಬೆಳಗು...
ಶುಭದಿನ... ಶುಭಾಶಯ... 🧘🤸🧎

ನಟ್ಟಿರುಳ ಕೆಟ್ಟ ಕನಸಿಗೂ ಸೇರಿ ನೂರು ನೂರಾರು ನಗುವಿಗೆ ಒಂದು ಪ್ರೀತಿಯ ಅಂಕಿತ - ಮತ್ತೆ ಅರಳಿದ ಬೆಳಗು... 🥀🫂

ಕೋಳಿಯ ಕಾಗುಣಿತ
ಕಾಕಗಳ‌ ಕರೆಯೋಲೆ
ಕೋಗಿಲೆಯ ಕೂಜನ
ಮಂತ್ರಕೆ ಮಣಿದ ದೇವನಿಗೂ ಮಜ್ಜನ
ದೇವಳದ ಘಂಟೆ ನಾದದಿ ಶುಭವೇ ಪ್ರಾರ್ಥನೆ
ಬೆಳಗೆಂದರೆ ನೂರು ಅವ್ಯಕ್ತ ಪ್ರೀತಿಯ ಸಂಯೋಜನೆ...
ಶುಭದಿನ... 🍬🪻

ನಿನ್ನೆಯ ಗೆಲುವಿನ ಖುಷಿಗೆ ನೆನಪ ನಗೆಯ ಪಾರಿತೋಷಕವಿತ್ತು ಶುಭ ನುಡಿವ ಈ ಬೆಳಗು...
ಶುಭದಿನ... 🏅🏆

ಬೆಳಗೆಂಬುದೇ ಶುಭದ ಕಾಣ್ಕೆ... 🌱

ಕಾಡಿನಂತೆ ಕಾಡುವ ಕವಿತೆಯಂಥ ಬೆಳಗು... 🌱🍬

ಸ್ವಾಗತಕೆ ನಿಂತ ಅಮ್ಮನಿಟ್ಟ ರಂಗೋಲಿಯಲಿ ಬಿಡಿ ಬಿಡಿಯ ಚುಕ್ಕಿಗಳೆಲ್ಲ ಹೆಗಲು ತಬ್ಬಿ ಪ್ರಾರ್ಥಿಸುತಿವೆ - ಬೆಳಕೇ ಮಡಿಲ ತುಂಬಾ ನಗೆಯ ತುಂಬು ಬಾ...
ಬೆಳಗಾಯಿತು... 🌱🍬

ಬೆಳಕು ಹಾಡುವ ಸುಪ್ರಭಾತ... 🌺🪻

ಹಳೆಯ ಅಶುಭಗಳ ಅಶ್ರುವನಳಿಸಿ ಹೊಸತು ಶುಭವನು ಹರಸಲೀ ಬೆಳಗು...
ಶುಭೋದಯ... 🫂

ಅಮ್ಮನ ಕನಸಿ ನಿದ್ದೆ ಮರುಳಲ್ಲೇ ತೊಟ್ಟಿಲಲೂ ಅಮ್ಮಿಯುಣ್ಣುವ ಹಸುಳೆಯ ತುಟಿಯಂಚಿನ ರಂಗು ಬೆಳಗು... 👩🏻‍🍼

ಚಂಡಿ ಹಿಡಿದ ಮಳೆಗೆ ಮೈಯೊಡ್ಡಿ ನಗುವ ಇಳೆ...

ಪ್ರೀತಿ ಪಲ್ಲಕ್ಕಿ ಉತ್ಸವ ಬೆಳಗು... 🌧️

ಬಾನಿನೊಲುಮೆ ಸೊಕ್ಕಿ ಉಕ್ಕಿ ಧುಮ್ಮಿಕ್ಕಿ ಧೋ ಧಾರೆ ಮಳೆ - ಇಳೆಗೆ ಮಹಾ ಮಜ್ಜನ...
ಕರಡಿ ಮುದ್ದು ಬೆಳಗು... 🌧️

ಊರು ಕೇರಿಯ ಅಕ್ಕರೆಯ ಕಲರವ - ಮಳೆ, ಮೇದಿನಿಯ ಯುಗಳ ಗಾನ - ನಾನು ನನ್ನದೆಂಬ ಕರುಳ ಬಿಳಲು - ಪ್ರೀತಿ ಹಡೆಯುವ/ಹರಡುವ ಹಗಲು...
ಶುಭದಿನ... 🌧️🍬🥀💞

ಎದ್ದಾಕ್ಷಣ ಕನ್ನಡಿಯಲಿ ಶುಭ ಶಕುನದ ಮುಖವ ಕಂಡೆ...
ನನಗೇ ನಾನು ಪ್ರೀತಿ ಹೇಳಿ ಸಣ್ಣ ನಗೆಯ ಎತ್ತಿಕೊಂಡ ಬಲು ಚಂದ ಅರಳು ಬೆಳಗು...
ಹೌದೇ ಹೌದು ಇದು ಶುಭದಿನ... 💞🍬

ಬೆಳಕು ನಗೆಯ ಸಂಧಿಸುವಲ್ಲಿ ಶುಭವು ಶುಭವನರಸಿ ತೆಕ್ಕೆ ಬಿದ್ದ ಸಂಭ್ರಮ...
ನಗು ಬೆಳಗೇ... 🫂

ನಾವಾಡುವ ಶುಭವನೇ ಪಡಿನುಡಿಯಲಿ ಬೆಳಕ ಬೇರು...
ಬೆಳಗೆಂಬ ಪ್ರೀತಿ ಪರಿಚಾರಿಕೆ... 🥀💞

ಶುಭವೇ ಬೆಳಕಿನ ರೂಪದಲ್ಲಿ ಹುಡುಕಿ ಬಂದು ನನ್ನ ಕೂಗುವಾಗ ಮಲಗಿದಲ್ಲಿಂದಲೇ ಹೊದಿಕೆ ಸರಿಸಿ ಹಾಯ್ ಅಂದು ಮತ್ತೆ ಮುಸುಕೆಳಕೊಂಡೆ... 😁
ನಾನೆಂಬ ಸೋಂಬೇರಿ ಮತ್ತು ಬೆಳಗೆಂಬ ಸುಪ್ರಭಾತ... 🙈

ನೀನು - ಬೆಳಕಿನ ಕಿಡಿ ತೇರು ಚಿತ್ತ ಭಿತ್ತಿಯಲಿ ಕೆತ್ತಿ ಹೋದ ಸಂಭ್ರಮದ ಮೊಹರು...
ಈಗೀ ದಿನದ ನೂರು ಬಣ್ಣ ಬೆಡಗಿಗೆ ನಿನ್ನದೇ ಹೆಸರು...
ಶುಭದಿನ... 🥀🍬

ನಿನ್ನೆ ಇದ್ದವನು ಇಂದೀಗಲೂ ಇದ್ದೇನೆನ್ನುವ ಸಮಾಧಾನ, ನಾಳೆಯೂ ಇದ್ದೇನು ಎನ್ನುವ ಭರವಸೆ - ಸಮಾಧಾನ ಹಾಗೂ ಭರವಸೆಗಳ ಜೋಡಿಸಿ ಕಟ್ಟಿದ ಜೋಕಾಲಿಯಲಿ ನಗೆಯ ತೂಗುವ ಕಾರುಣ್ಯದ ಹಗ್ಗ ಬೆಳಗು... 🕺💃
ಶುಭದಿನ... 🫀

ಪ್ರತಿ ಹೆಜ್ಜೆಗೂ ಹೊಸತೇ ನಗೆಯಾಗಿ ಹೊರ ಚಿಮ್ಮು ಎಂದರುಹುತ್ತದೆ - ನಿತ್ಯವೂ ಹೊಸತಾಗಿ ಬೆಳಗುವ ಪ್ರಕೃತಿ...
ಎದೆಗಿಳಿಯಲಿ ಬೆಳಕು...
ಶುಭದಿನ... 🪻🎉

ಅದೇ ಹಳೆ ಗೊಂಬೆಗೆ ಹೊಸ ಅಂಗಿ ತೊಡಿಸಿದರೂ ಎದೆಮಾಳಕಿಷ್ಟು ಅಲಂಕರಣದ ಹೊಸಾ ಖುಷಿ...
ಆಪ್ತವಾಗಿ ಹೆಗಲು ತಬ್ಬಿ ಹಗಲರಳಲಿ...
ಶುಭದಿನ... 🎉🪻

ಅರಿವಾಗಿ, ಗುರುವಾಗಿ, ವರವಾಗಿ ಕಾಯಲಿ ಅನವರತ ಒಳ ಹೊರಗಿನ ಬೆಳಕು...
ಹೆಜ್ಜೆ ಸೋಲದಂತೆ ಅರಿವಿನ ಊರುಗೋಲನು ಬಳಸಿ, ಎನಗೆ ಆನೇ ದಾರಿ ದೀಪವಾಗಿ ಉರಿದರೆ ನಿತ್ಯವೂ ಇರುಳಿಗೆ ಪೌರ್ಣಿಮೆಯ ಸೊಬಗು...
ಶುಭದಿನ... 🧘🐚 

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

Thursday, August 1, 2024

ಗೊಂಚಲು - ನಾಕ್ನೂರ್ಮೂವತ್ನಾಕು.....

 ಬಡಪಾಯಿ ನಗುವಿಗೆ ಮಿಠಾಯಿ ಸವರಿ.....
(ಚಿಟಿಕೆ ಮಾತು_ಮುಟಿಗೆ ಮೌನ_ಬದುಕು ಪ್ರೀತಿ ಕಟಕಟೆ...)

ಅಪರಿಚಿತ ದಾರಿ - ನಲ್ದಾಣಗಳ ಪರಿಚಯಿಸಿಕೊಳ್ಳುವ ಹುಡುಕಾಟದ ಪಯಣ...
ನೀ ತೊಡಿಸಿದ ಭರವಸೆಯ ಚಪ್ಪಲಿ ತೊಟ್ಟು ಕಾಲನ ಹಾದಿ ಹಾಯುತ್ತಾ ಹಾಯುತ್ತಾ ಚಾಳೀಸಿನ ಮೇಲೆ ಮತ್ತೆ ಮೂರು ಗ್ರೀಷ್ಮಗಳು ಕಳೆದು ಹೋದವು...

ಹುಟ್ಟಿಯಾಗಿದೆ ತಕರಾರೇನಿಲ್ಲ - ಸಾವಿನ ಬಗೆಗೋ ಯಾವ ತಕರಾರಿ ಅರ್ಜಿಗೂ ಕಿಲುಬು ಕಾಸಿನ ಕಿಮ್ಮತ್ತಿಲ್ಲ - ದೂರು ದುಮ್ಮಾನಗಳನೇನಿದ್ದರೂ ಪಾಪ ಈ ಪಾಪದ ಬದುಕಿನ ಮೇಲೇಯೇ ಹೊರಿಸಬೇಕು...
ಉಹೂಂ,
ಅದಕ್ಕೂ ಮನಸಾಗುವುದಿಲ್ಲ - ಬದುಕನು ಬೈದರೆ ಬದುಕನು ಕೊಟ್ಟವಳು ನೋಯಬಹುದು...
ಹಾಗೆಂದೇ -
ಏನೋ ಒಂದು, ಇದು ನಂದು ಅಂದುಕೊಂಡು ಆಡಿ ಗೆಲ್ಲಬೇಕು...
ಆಟ ಆಡಿ ಪಾಡು ಮರೆಯಬೇಕು...
ಸೋಲನೂ ಆಡಿ ಹಾಡಿ ನಗೆಯಾಡಿ ಗೆಲ್ಲಬೇಕು...
___ ನಾನೇ ಉರುಳಿಸುವಾಗಲೂ ದಾಳ - ನನ್ನ ಕೈಮೀರಿದ ಆಟ - ಏಳು ಬೀಳಿನ ಬಾಳ ಪಟ...

ಬಾಗಿಲ ಕಿಬ್ಳಿಯಲಿ ನನಗೆಂದೇ ಕಾಯುವ ಪ್ರೀತಿಯನು ಪ್ರೀತಿಯಿಂದಲೇ ತಬ್ಬಿ ಉಂಡು ಋಣವ ತುಂಬಿಕೊಳ್ಳುತ್ತೇನೆ...
ಬದುಕಿದು ಎಷ್ಟೋ ಸಹನೀಯ ಅನ್ನಿಸುತ್ತೆ...
ತಂಪು ಹೊತ್ತಲ್ಲಿ ನೆನೆಯಬೇಕು ನಾನು - ಮೊಗೆಮೊಗೆದು ನಗೆಯ ನೀಡುವ ಅಂಥ ತಂಪಾದ ನೇಹದೊಲುಮೆಗಳ...
___ ಪ್ರೀತಿಗೆ ಪ್ರೀತಿಯೇ ಸಂಭಾವನೆ...

ದಡದಲ್ಲಿ ಕೂತ ಕನಸಿಲ್ಲದ ಕವಿ ಕಲ್ಪನೆಯ ನೇಯ್ಗೆಯ ನೆಚ್ಚಿ ಕವಿತೆಗಳ ಹಡೆವ ಹೊತ್ತು...
ಕುದಿ ಕುದಿವ ಬದುಕನೇ ಗಾಳಿಸಿ ಬಸಿದುಕೊಂಡ ನಗೆಯ ಪೇಯವ ನಿಮಗೂ ಚೂರು ಹಂಚಲೇ...
ಬಯಸಲೂ, ಹರಸಲೂ ನಗೆಯನಲ್ಲದೇ ಇನ್ನೇನ ಹೊಂಚಲೇ...
___ ನನ್ನ ನಗುವಷ್ಟೂ ನನಗೇ ಸಿಗಲಿ - ನಿಮಗೂ ಹಂಚಲಿಷ್ಟು ಮಿಕ್ಕಲಿ - ನನಗೇ ನನ್ನ ಶುಭಾಶಯ... 💞

ತಿರುಗಿ ಬಂದರೂ ನಗೆಯೇ ಸಿಕ್ಕಲಿ - ಪ್ರೀತಿ ಹಪಾಹಪಿ...

ನಾ ಹುಟ್ಟಿದ ದಿನ ನಿನ್ನ ನೆನೆಯದೇ ಹೇಗಿರಲಿ...
ಮತ್ತು
ನಿನ್ನ ನೆನಪೀಗ ನಿನ್ನ ಸಾವಿನೊಂದಿಗೆ ತಳುಕು...
ಹಾಗಾಗೇ
ಹುಟ್ಟನ್ನು ನೆನೆದರೆ ಸಾವನ್ನು ಕರೆದಂತಾಗುವ ವಿಷಾದದ ನಿಷಾದ ರಾಗಕ್ಕೆ ನೀನೇ ಹೊಣೆ...
~ ~ ~

ಉಫ್!!!
ಎಂಥ ನಿಗಿ ನಿಗಿ ಪ್ರೀತಿಯೂ ಚಿತೆಯೆದುರು ತಣ್ಣಗೆ ಕೊರೆಯುತ್ತದಲ್ಲ...
ಉರಿಯ ಚಿಟ ಚಿಟವು ಬದುಕಿದ ಬದುಕಿನ ಅಷ್ಟೂ ಅಲಂಕಾರಗಳ ಕೆದಕಿ, ಅಹಂಕಾರ, ಅಂಧಕಾರಗಳ ಎತ್ತಿ ಆಡಿಕೊಳ್ಳುತ್ತದಲ್ಲ...
ತಲೆ ಓಡು ಸಿಡಿವ ಸದ್ದು ಎಂಥವನ ಎದೆ ಗೂಡನೂ ಒಡೆದು ಕೆಡವುತ್ತದಲ್ಲ...
ಸಾವು ನಮ್ಮವರದ್ದಾದಾಗ ನಮ್ಮನ್ನು ಬದುಕಿಸಿ ಕಾಡುತ್ತದೆ - ಸಾವಿಗಿಂತ ಸಾವಿನ ಎದುರು ಕೈಕಟ್ಟಿ ನಿಲ್ಲುವ ಕರ್ಮವಿದೆಯಲ್ಲ ಅದು ಕರುಳ ಚುಚ್ಚಿ ಚುಚ್ಚಿ ಕೊಲ್ಲುತ್ತದೆ...
___ ಅದು ಎಲ್ಲಾ ಪ್ರಾರ್ಥನೆಗಳೂ ಕ್ಲೀಷೆ ಅನ್ನಿಸುವ ಹೊತ್ತು...
~ ~ ~

ಮಳೆಯೆಂದರೆ ಪ್ರಾಣ ಪ್ರೀತಿ ಎನಗೆ - ನಡುರಾತ್ರಿಯ ಧೋ ಮಳೆಯ ಸದ್ದಿನ ಜೊತೆ ಎಷ್ಟೆಲ್ಲ ಕನಸುಗಳ ಸರಸ ಸಂವಾದವಿತ್ತಲ್ಲ ಆವಾಗೆಲ್ಲ...
ಇಂಥ ತುಂಡಿಲ್ಲದೇ ಹೊಯ್ಯುತ್ತಿದ್ದ ಒಂದು ಮಳೆಯ ರಾತ್ರಿಯಲೇ ಅಲ್ಲವಾ ನೀ ಇನ್ನು ಬಾರದಂತೆ ಬಿಟ್ಟೆದ್ದು ಹೋದದ್ದು...
ಪ್ರೀತಿಯೆಂದರೆ ಮಳೆಗೂ ಆರದ ಚಿತೆಯ ಭಯ ಈಗ - ಇರುಳೆಂದರೆ ದುಃಸ್ವಪ್ನ...
___ ಶ್ರಾದ್ಧ - ಶ್ರದ್ಧೆಯಿಂದ ನೆನಪುಗಳ ಎಳೆತಂದು ಎದೆಯಂಗಳದಲಿ ಕುಣಿಸುತ್ತದೆ...
~ ~ ~

ಎಷ್ಟೇ ತಿದ್ದಿ ತೀಡಿ ಉಚ್ಛರಿಸಿದರೂ ಯಾವುದೇ 'ಸಾವೂ' ಅನ್ನುವಾಗ ಉಸಿರು ತಡವರಿಸುತ್ತದೆ...
___ ಮೌನದೊಳಗಿನ ಅರಿ ಗದ್ದಲ...
&&&

ಜಗದ ಜಾತ್ರೆಗೆ ಅದೆಷ್ಟು(ಷ್ಟೋ) ಮುಖಗಳು... !!!
ಎಷ್ಟೇ ಪರಾಂಬರಿಸಿ ನೋಡಿದರೂ ನನ್ನ ಕಣ್ಣಿಗಿಷ್ಟು ಕುರುಡೇ... ii
ದೇವರಿಗೂ ಕಣ್ಣಿಲ್ಲದ ಬೆನ್ನಿರಬಹುದು ಅಥವಾ ಮೈಯ್ಯೆಲ್ಲಾ ಕಣ್ಣಾದ ಶಾಪವಿರಬಹುದು...
___ ಆದರೂ ತುಂಬಾ ಮಜವಾಗಿದೆ ಈ ಬದುಕು...
&&&

ಹೀಗೆ ಬದುಕುವುದು ಆಯ್ಕೆಯೇ ಆಗಿರಬಹುದು,
ಹೀಗೇ ಬದುಕುವುದು ಅನಿವಾರ್ಯವೂ ಇರಬಹುದು...

ಕನ್ನಡಿಯಲಿ ಮುಖ ಉಲ್ಟಾನೇ ಕಾಣುವುದು...

ಸಮಯ ಬರದೇ ಹೊರಡುವಂತಿಲ್ಲ - ಸಮಯ ನನ್ನ ಕೇಳಿ ಬರುವುದೂ ಇಲ್ಲ...
**ಕೂಡಿಸಿಕೊಂಡು ಓದಬಹುದಾದ / ಓದಬೇಕಾದ ಬಿಡಿ ಬಿಡಿಯ ಸಾಲು ಈ ಬದುಕು...
&&&

ಪ್ರಿಯಾನುಬಂಧಗಳೇ -
ನನ್ನದೊಂದು ಸಣ್ಣ ನಗೆಯ ಪಲ್ಲವದ ಹಿಂದೆ ನಿಮ್ಮಗಳ ಅಕಾರಣ ಪ್ರೀತಿ, ಆಪ್ತ ಹರಕೆ, ಮನಸ್ವೀ ಹಾರೈಕೆಗಳ ನೀರು ಗೊಬ್ಬರದ ನಿರಂತರ ಆರೈಕೆಯಿದೆ...
ನಿಮ್ಮೆಲ್ಲರ ಸದಾಶಯದ ಶುಭಾಶಯವೇ ನನ್ನ ಹುಟ್ಟಿನೀದಿನದ ಸಂಭ್ರಮಾಚರಣೆ...
ನಿಮ್ಮಾ ಪ್ರೀತಿಗೆ, ಅದರ ರೀತಿಗೆ ಈ ಜೀವ ಆಭಾರಿ...
ಅನವರತ ಕಾಯುವ ಅಕ್ಕರೆಯ ಭಾವಜೀವಗಳಿಗೆ ಧನ್ಯತೆಯ ನಮನ... 💞🍬🙏🏻
ಪ್ರೀತಿಯಿಂದ - 
___ಶ್ರೀವತ್ಸ ಕಂಚೀಮನೆ.

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)