Thursday, August 1, 2024

ಗೊಂಚಲು - ನಾಕ್ನೂರ್ಮೂವತ್ನಾಕು.....

 ಬಡಪಾಯಿ ನಗುವಿಗೆ ಮಿಠಾಯಿ ಸವರಿ.....
(ಚಿಟಿಕೆ ಮಾತು_ಮುಟಿಗೆ ಮೌನ_ಬದುಕು ಪ್ರೀತಿ ಕಟಕಟೆ...)

ಅಪರಿಚಿತ ದಾರಿ - ನಲ್ದಾಣಗಳ ಪರಿಚಯಿಸಿಕೊಳ್ಳುವ ಹುಡುಕಾಟದ ಪಯಣ...
ನೀ ತೊಡಿಸಿದ ಭರವಸೆಯ ಚಪ್ಪಲಿ ತೊಟ್ಟು ಕಾಲನ ಹಾದಿ ಹಾಯುತ್ತಾ ಹಾಯುತ್ತಾ ಚಾಳೀಸಿನ ಮೇಲೆ ಮತ್ತೆ ಮೂರು ಗ್ರೀಷ್ಮಗಳು ಕಳೆದು ಹೋದವು...

ಹುಟ್ಟಿಯಾಗಿದೆ ತಕರಾರೇನಿಲ್ಲ - ಸಾವಿನ ಬಗೆಗೋ ಯಾವ ತಕರಾರಿ ಅರ್ಜಿಗೂ ಕಿಲುಬು ಕಾಸಿನ ಕಿಮ್ಮತ್ತಿಲ್ಲ - ದೂರು ದುಮ್ಮಾನಗಳನೇನಿದ್ದರೂ ಪಾಪ ಈ ಪಾಪದ ಬದುಕಿನ ಮೇಲೇಯೇ ಹೊರಿಸಬೇಕು...
ಉಹೂಂ,
ಅದಕ್ಕೂ ಮನಸಾಗುವುದಿಲ್ಲ - ಬದುಕನು ಬೈದರೆ ಬದುಕನು ಕೊಟ್ಟವಳು ನೋಯಬಹುದು...
ಹಾಗೆಂದೇ -
ಏನೋ ಒಂದು, ಇದು ನಂದು ಅಂದುಕೊಂಡು ಆಡಿ ಗೆಲ್ಲಬೇಕು...
ಆಟ ಆಡಿ ಪಾಡು ಮರೆಯಬೇಕು...
ಸೋಲನೂ ಆಡಿ ಹಾಡಿ ನಗೆಯಾಡಿ ಗೆಲ್ಲಬೇಕು...
___ ನಾನೇ ಉರುಳಿಸುವಾಗಲೂ ದಾಳ - ನನ್ನ ಕೈಮೀರಿದ ಆಟ - ಏಳು ಬೀಳಿನ ಬಾಳ ಪಟ...

ಬಾಗಿಲ ಕಿಬ್ಳಿಯಲಿ ನನಗೆಂದೇ ಕಾಯುವ ಪ್ರೀತಿಯನು ಪ್ರೀತಿಯಿಂದಲೇ ತಬ್ಬಿ ಉಂಡು ಋಣವ ತುಂಬಿಕೊಳ್ಳುತ್ತೇನೆ...
ಬದುಕಿದು ಎಷ್ಟೋ ಸಹನೀಯ ಅನ್ನಿಸುತ್ತೆ...
ತಂಪು ಹೊತ್ತಲ್ಲಿ ನೆನೆಯಬೇಕು ನಾನು - ಮೊಗೆಮೊಗೆದು ನಗೆಯ ನೀಡುವ ಅಂಥ ತಂಪಾದ ನೇಹದೊಲುಮೆಗಳ...
___ ಪ್ರೀತಿಗೆ ಪ್ರೀತಿಯೇ ಸಂಭಾವನೆ...

ದಡದಲ್ಲಿ ಕೂತ ಕನಸಿಲ್ಲದ ಕವಿ ಕಲ್ಪನೆಯ ನೇಯ್ಗೆಯ ನೆಚ್ಚಿ ಕವಿತೆಗಳ ಹಡೆವ ಹೊತ್ತು...
ಕುದಿ ಕುದಿವ ಬದುಕನೇ ಗಾಳಿಸಿ ಬಸಿದುಕೊಂಡ ನಗೆಯ ಪೇಯವ ನಿಮಗೂ ಚೂರು ಹಂಚಲೇ...
ಬಯಸಲೂ, ಹರಸಲೂ ನಗೆಯನಲ್ಲದೇ ಇನ್ನೇನ ಹೊಂಚಲೇ...
___ ನನ್ನ ನಗುವಷ್ಟೂ ನನಗೇ ಸಿಗಲಿ - ನಿಮಗೂ ಹಂಚಲಿಷ್ಟು ಮಿಕ್ಕಲಿ - ನನಗೇ ನನ್ನ ಶುಭಾಶಯ... 💞

ತಿರುಗಿ ಬಂದರೂ ನಗೆಯೇ ಸಿಕ್ಕಲಿ - ಪ್ರೀತಿ ಹಪಾಹಪಿ...

ನಾ ಹುಟ್ಟಿದ ದಿನ ನಿನ್ನ ನೆನೆಯದೇ ಹೇಗಿರಲಿ...
ಮತ್ತು
ನಿನ್ನ ನೆನಪೀಗ ನಿನ್ನ ಸಾವಿನೊಂದಿಗೆ ತಳುಕು...
ಹಾಗಾಗೇ
ಹುಟ್ಟನ್ನು ನೆನೆದರೆ ಸಾವನ್ನು ಕರೆದಂತಾಗುವ ವಿಷಾದದ ನಿಷಾದ ರಾಗಕ್ಕೆ ನೀನೇ ಹೊಣೆ...
~ ~ ~

ಉಫ್!!!
ಎಂಥ ನಿಗಿ ನಿಗಿ ಪ್ರೀತಿಯೂ ಚಿತೆಯೆದುರು ತಣ್ಣಗೆ ಕೊರೆಯುತ್ತದಲ್ಲ...
ಉರಿಯ ಚಿಟ ಚಿಟವು ಬದುಕಿದ ಬದುಕಿನ ಅಷ್ಟೂ ಅಲಂಕಾರಗಳ ಕೆದಕಿ, ಅಹಂಕಾರ, ಅಂಧಕಾರಗಳ ಎತ್ತಿ ಆಡಿಕೊಳ್ಳುತ್ತದಲ್ಲ...
ತಲೆ ಓಡು ಸಿಡಿವ ಸದ್ದು ಎಂಥವನ ಎದೆ ಗೂಡನೂ ಒಡೆದು ಕೆಡವುತ್ತದಲ್ಲ...
ಸಾವು ನಮ್ಮವರದ್ದಾದಾಗ ನಮ್ಮನ್ನು ಬದುಕಿಸಿ ಕಾಡುತ್ತದೆ - ಸಾವಿಗಿಂತ ಸಾವಿನ ಎದುರು ಕೈಕಟ್ಟಿ ನಿಲ್ಲುವ ಕರ್ಮವಿದೆಯಲ್ಲ ಅದು ಕರುಳ ಚುಚ್ಚಿ ಚುಚ್ಚಿ ಕೊಲ್ಲುತ್ತದೆ...
___ ಅದು ಎಲ್ಲಾ ಪ್ರಾರ್ಥನೆಗಳೂ ಕ್ಲೀಷೆ ಅನ್ನಿಸುವ ಹೊತ್ತು...
~ ~ ~

ಮಳೆಯೆಂದರೆ ಪ್ರಾಣ ಪ್ರೀತಿ ಎನಗೆ - ನಡುರಾತ್ರಿಯ ಧೋ ಮಳೆಯ ಸದ್ದಿನ ಜೊತೆ ಎಷ್ಟೆಲ್ಲ ಕನಸುಗಳ ಸರಸ ಸಂವಾದವಿತ್ತಲ್ಲ ಆವಾಗೆಲ್ಲ...
ಇಂಥ ತುಂಡಿಲ್ಲದೇ ಹೊಯ್ಯುತ್ತಿದ್ದ ಒಂದು ಮಳೆಯ ರಾತ್ರಿಯಲೇ ಅಲ್ಲವಾ ನೀ ಇನ್ನು ಬಾರದಂತೆ ಬಿಟ್ಟೆದ್ದು ಹೋದದ್ದು...
ಪ್ರೀತಿಯೆಂದರೆ ಮಳೆಗೂ ಆರದ ಚಿತೆಯ ಭಯ ಈಗ - ಇರುಳೆಂದರೆ ದುಃಸ್ವಪ್ನ...
___ ಶ್ರಾದ್ಧ - ಶ್ರದ್ಧೆಯಿಂದ ನೆನಪುಗಳ ಎಳೆತಂದು ಎದೆಯಂಗಳದಲಿ ಕುಣಿಸುತ್ತದೆ...
~ ~ ~

ಎಷ್ಟೇ ತಿದ್ದಿ ತೀಡಿ ಉಚ್ಛರಿಸಿದರೂ ಯಾವುದೇ 'ಸಾವೂ' ಅನ್ನುವಾಗ ಉಸಿರು ತಡವರಿಸುತ್ತದೆ...
___ ಮೌನದೊಳಗಿನ ಅರಿ ಗದ್ದಲ...
&&&

ಜಗದ ಜಾತ್ರೆಗೆ ಅದೆಷ್ಟು(ಷ್ಟೋ) ಮುಖಗಳು... !!!
ಎಷ್ಟೇ ಪರಾಂಬರಿಸಿ ನೋಡಿದರೂ ನನ್ನ ಕಣ್ಣಿಗಿಷ್ಟು ಕುರುಡೇ... ii
ದೇವರಿಗೂ ಕಣ್ಣಿಲ್ಲದ ಬೆನ್ನಿರಬಹುದು ಅಥವಾ ಮೈಯ್ಯೆಲ್ಲಾ ಕಣ್ಣಾದ ಶಾಪವಿರಬಹುದು...
___ ಆದರೂ ತುಂಬಾ ಮಜವಾಗಿದೆ ಈ ಬದುಕು...
&&&

ಹೀಗೆ ಬದುಕುವುದು ಆಯ್ಕೆಯೇ ಆಗಿರಬಹುದು,
ಹೀಗೇ ಬದುಕುವುದು ಅನಿವಾರ್ಯವೂ ಇರಬಹುದು...

ಕನ್ನಡಿಯಲಿ ಮುಖ ಉಲ್ಟಾನೇ ಕಾಣುವುದು...

ಸಮಯ ಬರದೇ ಹೊರಡುವಂತಿಲ್ಲ - ಸಮಯ ನನ್ನ ಕೇಳಿ ಬರುವುದೂ ಇಲ್ಲ...
**ಕೂಡಿಸಿಕೊಂಡು ಓದಬಹುದಾದ / ಓದಬೇಕಾದ ಬಿಡಿ ಬಿಡಿಯ ಸಾಲು ಈ ಬದುಕು...
&&&

ಪ್ರಿಯಾನುಬಂಧಗಳೇ -
ನನ್ನದೊಂದು ಸಣ್ಣ ನಗೆಯ ಪಲ್ಲವದ ಹಿಂದೆ ನಿಮ್ಮಗಳ ಅಕಾರಣ ಪ್ರೀತಿ, ಆಪ್ತ ಹರಕೆ, ಮನಸ್ವೀ ಹಾರೈಕೆಗಳ ನೀರು ಗೊಬ್ಬರದ ನಿರಂತರ ಆರೈಕೆಯಿದೆ...
ನಿಮ್ಮೆಲ್ಲರ ಸದಾಶಯದ ಶುಭಾಶಯವೇ ನನ್ನ ಹುಟ್ಟಿನೀದಿನದ ಸಂಭ್ರಮಾಚರಣೆ...
ನಿಮ್ಮಾ ಪ್ರೀತಿಗೆ, ಅದರ ರೀತಿಗೆ ಈ ಜೀವ ಆಭಾರಿ...
ಅನವರತ ಕಾಯುವ ಅಕ್ಕರೆಯ ಭಾವಜೀವಗಳಿಗೆ ಧನ್ಯತೆಯ ನಮನ... 💞🍬🙏🏻
ಪ್ರೀತಿಯಿಂದ - 
___ಶ್ರೀವತ್ಸ ಕಂಚೀಮನೆ.

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

No comments:

Post a Comment