ಸ್ಮಶಾನ ಭಸ್ಮ ಲಲಾಟದ ಅಲಂಕಾರವಾಗಿ.....
'ಅಳು' ಅಗಾಧ ಶರಧಿಯೇ ಯಾವತ್ತೂ -
'ನಗು' ಅದರ ವಿಸ್ತಾರದ ನಡುವೆ ಎಲ್ಲೋ ನಾಕು ಹನಿಗಳ ಮೇಲೆ ತೇಲೋ ಹಾಯಿ ದೋಣಿ ಅಷ್ಟೇ...
ಕ್ಷಣಕಾದರೂ ಸಾಗರದ ಎದೆಯನೇ ಸೀಳಿ ಹಾಯಬಲ್ಲೆ ಎಂಬುದೇ ನಗೆ ಹಾಯಿಯ ಸ್ವಂತದೊಂದು ಸಣ್ಣ ಹುಚ್ಚು ಹೆಮ್ಮೆ...
____ ಬದುಕಿನ ಋಣ ತೀರುವ ತನಕ...
&&&
ಬಂದೇ ಬರುವ ಬೆಳಕಿ(ಗಿ)ಗೆ ತನ್ನೆದೆ ಒಲಿದಂತೆ ಉಲಿಯುವ ಕಾಕ, ಪಿಕ, ಗುಬ್ಬಿ, ಗೋಪಿ ಹಕ್ಕಿಗೊರಳಿನ ಕೂಜನ...
ಅಂಗಳದಂಚಿನ ದೇವ ಕಣಗಿಲೆ, ಅಮ್ಮನ ಕೈಸಾರಣೆಯ ಡೇರೆ, ಸೋಣೆ ಹೂ ಸಂಸಾರ, ತೋಟ, ತೊರೆ ಏರಿಯಲ್ಲಿ ಬಿರಿದ ತೆಂಗು, ಅಡಿಕೆಯ ಸಿಂಗಾರ - ಮನೆ ಬಾಗಿಲಿಗೇ ಬರುವ ಕಂಪಿನುತ್ಸವ...
ಮಳೆ ಕಾಡಿನ ಊರು ಕೇರಿಯಲಿ ತಾನು ಹಬ್ಬಿಸಿದ ನಿತ್ಯ ವಸಂತದ ಬಳ್ಳಿಯ ಸೊಕ್ಕು ಸೊಬಗನು ನೋಡಿ ನಲಿಯಲು ಮೋಡದ ರಥವೇರಿ ನಿತ್ಯವೂ ತಾನೇ ಬರುವ ನೀಲಿ ಬಾನಿನ ಸಂತ...
___ ಸಾಹಿತ್ಯದ ಹಂಗಿಲ್ಲದ ಹಾಡು ಹಸೆ - ನನ್ನೂರ ಭಾವ ಪಸೆ...
&&&
ಇಲ್ಕೇಳು -
ನಿರೀಕ್ಷಿಸುವುದಾದರೆ ಪ್ರೀತಿಯನ್ನು,
ಘನವಾಗಿ, ಗೌರವದಿಂದ ಪ್ರೀತಿಸಬಲ್ಲವರಿಂದ ನೇಹದ ನೆತ್ತಿಯ ನೇವರಿಕೆಯ ಅಪೇಕ್ಷಿಸಬೇಕು...
ಕಾರಣ -
ಪ್ರೀತಿ ಅಂದ್ರೆ ಅಂಗಡಿಯವ ಚಿಲ್ಲರೆಯ ಬದಲಿಗೆ ಕೊಡುವ ನಾಲ್ಕಾಣೆ ಚಾಕ್ಲೇಟಲ್ಲ ಅಲ್ವಾ...
ಏನ್ಗೊತ್ತಾ -
ಪ್ರೀತಿಯ ಆಳ, ಅಗಲ, ಎತ್ತರ, ಘನತೆ ಗೊತ್ತಿಲ್ಲದ ನಾನೆಂಬ/ನನ್ನಂಥ ಕಾಂಜಿಪೀಂಜಿಗಳಿಂದ ಪ್ರೀತೀನ ಬಯಸಿದ್ರೆ ಅವ್ರು ಅಕ್ಕರೆಯನ್ನೂ ಹೆಣದ ಮೆರವಣಿಗೇಲಿ ಎಸೆವ ಚಿಲ್ಲರೆಯಾಗಿಸ್ಬಿಡ್ತಾರೆ...
____ ಕಥೆಯಲ್ಲದ ಕಥೆಯ ಮುಖ್ಯ ಪಾತ್ರದ ಹೆಸರು "...ನಾನು..."
&&&
ಸ್ವಾತಂತ್ರ್ಯ - ಸಾಧ್ಯತೆಗಳ ಎದುರು ಆಯ್ಕೆಯ ಸ್ವಾತಂತ್ರ್ಯ ನಿನ್ನದೇ ಆಗಿರಲಿ...
ಸ್ವಾತಂತ್ರ್ಯ - ನಿನ್ನ ನಗುವ ನೀನೇ ಆಳುವ ಸ್ವಾತಂತ್ರ್ಯ ನಿನಗಿರಲಿ...
ಸ್ವಾತಂತ್ರ್ಯ - ಸಹಬಾಳ್ವೆ, ಸಹಚಾರಗಳ ಚಂದ ಸ್ವಾದವನುಂಡು ಬಾಳ್ಮೆ ಮಾಡುವ ಸ್ವಾತಂತ್ರ್ಯ ನಿನ್ನದಾಗಿರಲಿ...
ಗೆಳತೀ - ನಿನ್ನ ದಿನವಂತೆ, ನಿನ್ನಂತೆ ನೀ ನಿನ್ನ ಪ್ರೀತಿಸಿಕೊಳ್ಳುವಂತಾಗಿ, ನಿನಗೆ ನಿನ್ನದೇ ಶುಭ ಸಾಂಗತ್ಯವಿರಲಿ....
ಶುಭಾಶಯವು... 🧚
___08.03.2025
&&&
ಹೆಣ ಭಾರವಾ...?
ಅಥವಾ
ಹೆಣ ಹೊತ್ತ ಹೆಗಲಿನ ಉರಿ ಉರಿ ನೆನಪು ಹೆಚ್ಚು ಭಾರವಾ...?
ಸುಟ್ಟ ಜಾಗದಲ್ಲಿ ನೆಟ್ಟ ಕಲ್ಲುಗಳು ಉತ್ತರಿಸಬಹುದಾ...
ಮಸಣದ ಬೆಂಕಿಯೆದುರು ಮೈ ಸುಟ್ಟುಕೊಂಡ ಪ್ರಶ್ನೆಗಳು ಹೆಗಲಿಂದ ಇಳಿಯುವುದೆಂತು / ಎಂದು...?!
ಕಥೆ ಮುಗಿಯುವುದಿಲ್ಲ ಸಾವಿನಲ್ಲೂ ಅಥವಾ ಅಲ್ಲಿಂದಲೇ ಶುರುವಾಗುತ್ತದೆ...!!
____ ಉಸಿರ ಮೈತುಂಬಾ ಎದೆಯ ಚುಚ್ಚುವ ಖಾಲಿತನದ ಮುಳ್ಳುಗಳು...
&&&
ಈ
ಬದುಕು ತನ್ನ ಕ್ರಿಯೆಗಳ ಮೂಲಕ ಮತ್ತೆ ಮತ್ತೆ ನನ್ನ ನಶ್ವರತೆಯ ಪಾಠ ಹೇಳುತ್ತೆ...
ನಾನೋ ಪ್ರತೀ ಬಾರಿಯೂ ನನ್ನ ಪ್ರತಿಕ್ರಿಯೆಗಳ ಮೂಲಕ ನಗೆಯಾಗಿ ಬದುಕ ಜೀವಿಸುವ ಹಾಡಾಗುತ್ತೇನೆ...
ಸಾವನ್ನೂ ನೆಪಗಳ ಜೊತೆಗೆ ಸಮೀಕರಿಸಿ ಸಮಾಧಾನಗೊಂಡು ಬದುಕ ಸಂಯೋಜಿಸಿ ಸಂಭ್ರಮಿಸುವುದು...
___ ಸ್ಮಶಾನ ಭಸ್ಮ ಲಲಾಟದ ಅಲಂಕಾರವಾಗಿ...
&&&
ವತ್ಸಾ -
ವಿಷಯ ಚಿಕ್ಕದೇ ಇರತ್ತೆ - ಆದ್ರೆ, ಬದುಕು ತುಂಬಾ ದೊಡ್ಡದಿರತ್ತೆ...
ಮತ್ತು
ಚಿಕ್ಕ ಚಿಕ್ಕ ಸಂಗತಿಗಳನು ಚೊಕ್ಕದಾಗಿ ಹರಿಬಿಡಿಸುವುದರಲ್ಲೇ ಬಾಳಿನ ದೊಡ್ಡತನವೂ ಇರತ್ತೆ...
____ ಸಣ್ಣ ಕಾಳಜಿ - ರೂಢಿಗತ ನಿರ್ಲಕ್ಷ್ಯ...
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)
ಜಗುಲಿಗೆ ಇಣುಕಿದ ಚಂದಿರ; ಮನಮಂದಿರದಿ ಮೂಡಿಸುವ ಭಾವಗಳೆ ಸುಂದರ... ಕ್ಷಣ ಕ್ಷಣಕೂ ಅದಲುಬದಲಾಗುವ ನನ್ನೊಳಗಿನ ನನ್ನದೇ ಭಾವಗಳು ನನ್ನನೇ ಬೆಚ್ಚಿಬೀಳಿಸುತ್ತವೆ ಹಲವೊಮ್ಮೆ...
Tuesday, March 18, 2025
ಗೊಂಚಲು - ನಾಕ್ನೂರಾ ಐವತ್ತು ಮತ್ತೇಳು.....
Subscribe to:
Post Comments (Atom)
No comments:
Post a Comment