Saturday, March 1, 2014

ಗೊಂಚಲು - ಒಂದು ಒಂದು ಸೊನ್ನೆ.....

ಆಗೀಗ ಹೀಗೆಲ್ಲ ಅನ್ನಿಸಿ.....
{ಒಂದಿಷ್ಟು ಸಂಚಾರೀ ತುಂಡು ಭಾವಗಳು...}

ಆದರೂ ವ್ಯಕ್ತಿಯ ಪ್ರೀತಿಯ ಆಸ್ತೆ - ಆದ್ಯತೆಗಳು ಎಷ್ಟು ಬೇಗ ದಿಕ್ಕು ಬದಲಿಸುತ್ತವಲ್ಲಾ ಎಂಬುದರ ಬಗ್ಗೆ ತೀವ್ರ ಬೆರಗು ಮತ್ತು ನನ್ನ ಅಶಾಶ್ವತತೆಯ ಮಾತಿನ ವಾಸ್ತವವಾದವೇ ಮತ್ತೆ ಮತ್ತೆ ಗೆಲ್ಲುವುದರ ಬಗ್ಗೆ ತೀವ್ರ ಕಂಗಾಲು ನನ್ನಲ್ಲಿ...
***
ಥುತ್ ಹಾಳಾದ ಈ ಸಂಜೆಗಳು – 
ಮತ್ತೆ ಮತ್ತೆ ನಂಬಿಕೆಗಳ ಕೊಂದ ನೆನಪುಗಳ ಸುತ್ತವೇ ಪ್ರದಕ್ಷಿಣೆ ಹಾಕುತ್ತವೆ... 
ಆ ನೆನಪುಗಳೇ ದೇವರೇನೋ ಎಂಬಂತೆ...:(
***
ಕೊಬ್ಬಿದ ಹೆಗ್ಗಣಗಳಂತೆ ಮನವ ಕೊರೆಯುವ ಕೆಲ ಭಾವಗಳ ನಿಯಂತ್ರಿಸಲು ಯಾವುದಾದ್ರೂ ಪಾಶಾಣ ಇದ್ದಿದ್ದಿದ್ರೆ ಎಷ್ಟು ಚೆಂದವಿತ್ತು... 
ತಂದಿಟ್ಟುಕೊಳ್ಳಬೇಕಿದೆ ಮನದ ಮನೆಗೆ - ಹೆಗ್ಗಣಗಳ ಬಂಧಿಸಬಲ್ಲ ಬೋನೊಂದನ್ನಾದರೂ...
***
ಸ್ನೇಹದಲ್ಲಿ ನಿರೀಕ್ಷೆಗಳಿರಬಾರದು ಅನ್ನೋ ನಾನು ಅದನ್ನ ಪ್ರಾಮಾಣಿಕವಾಗಿ ಪಾಲಿಸಿದ್ದೇ ಆದ್ರೆ ಎದುರಿನೋರು ಸತ್ಯಾನೇ ಹೇಳಬೇಕು ಅಂತಾ ಬಯಸೋದೂ ತಪ್ಪೇ ಅಲ್ವಾ..? 
ನನ್ನತ್ರ ಸತ್ಯ ಹೇಳಬೇಕಾ, ಮುಚ್ಚಿಡಬೇಕಾ, ಅರ್ಧ ಸತ್ಯ ಮಾತ್ರ ಹೇಳಬೇಕಾ ಅನ್ನೋದನ್ನ ಅವರು ನಿರ್ಧರಿಸಬೇಕು ತಾನೆ... 
ಇಷ್ಟು ಸರಳ ಸತ್ಯ ಯಾಕಿಷ್ಟು ಕಾಲ ಅರ್ಥವೇ ಆಗಿಲ್ಲ ನಂಗೆ... 
ಇಷ್ಟೆಲ್ಲವನ್ನು ಕಳಕೊಳ್ಳುವವರೆಗೂ...:( 
ಇನ್ನಾದರೂ ಅರ್ಥ ಆಗಿದದ್ದನ್ನು ಮೈಗೂಡಿಸಿಕೊಂಡರೆ ಬೇರೆಯದೇ ಮನುಷ್ಯನಾದೇನು... 
ಆದ್ರೆ ಅದನ್ನ ಮೈಗೂಡಿಸಿಕೊಳ್ಳುವುದು ಅಂದಷ್ಟು ಸುಲಭವಾ... 
ಯಾಕೋ ಮೌನಿ ನಾನು...:(
***
ಹೊಸ ಬೆಳಗೆಂದರೆ ಹೊಸ ಹೊಸ ಪ್ರಶ್ನೆಗಳು – ಅದೇ ನಾನು ಮತ್ತು ಸಿಗದೇ ನುಣುಚಿಕೊಳ್ಳೋ ಉತ್ತರಗಳು...
***
ನೆಲೆ ಇಲ್ಲದ ಕನಸಿನಂಥ ಜಾಳು ಜಾಳು ಬೆಳಗು...
***
ಮನದ ಮಾತಂತೆ ಕಣ್ಣಲ್ಲೂ ಸೆರೆಯಾಗೋ ಬೆಳಕು – ಈ ಬೆಳಗು...
***
ಮನದ ಒಳಮನೆಯಲ್ಲಿ ಅಲೌಕಿಕ ಖುಷಿಯ ಬಿಕ್ಕಳಿಕೆ... 
ಆಹಾ ಎಂಥದೀ ಹೃದ್ಯ ಬೆಳಗು...
***
ಗೆಳತೀ –
ನಿದ್ದೆ ಮಡಿಲಿಂದೆದ್ದು ಬೀರೊಂದು ಮುದ್ದು ನಗೆಯ – ಬೆಳಗಿದು ಸಂಭ್ರಮಿಸಲಿ...
***
ಗೆಳತೀ –
ನನ್ನೆದುರು ನಿಂತಾಗಲೆಲ್ಲ ನಿನ್ನ ಕಣ್ಣ ಕಲ್ಯಾಣಿಯಲಿ ನಾಚಿಕೆಯಲೆಯ ರಂಗೋಲಿ...
ನನ ಮುಂಜಾನೆ ಮುಸ್ಸಂಜೆಗಳ ಹಸಿ ಹಸಿ ಮನಸಲ್ಲಿ ನನ್ನೊಡನೆ ನೀ ನಗುವ ಕನಸುಗಳ ಜೋಕಾಲಿ...
ಎನ್ನ ಮನದ ಕತ್ತಲೆಯ ಕಿತ್ತೋಡಿಸಲು ಹೆಣಗುವ ಪುಟ್ಟ ಹಣತೆಯಂಥ ಹುಡುಗಿ ನೀನು...
ನಿನ್ನೆದೆಯಿಂದ ನನ್ನೆಡೆಗೆ ತುಯ್ಯುವ ಪ್ರೀತಿಯಲೆಯಲಿ ಮಿಂದು ನಲಿದಾಡುವ ಬಡ ಪುಂಡ ಫಕೀರ ನಾನು...


*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

3 comments:

  1. ಎಲ್ಲರೊಡನೆ ಹಂಚಲು ಮತ್ತೊಂದು ಭಾವ ಗೊಂಚಲು ತೆರೆದಿಟ್ಟಿದ್ದೀರಿ.. ಗೊಂಚಲಿನ ಪ್ರತಿ ತುಂಡು ಭಾವಗಳೂ ಮಜಬೂತಾಗಿವೆ..

    ReplyDelete
  2. Nice lines... "ತಂದಿಟ್ಟುಕೊಳ್ಳಬೇಕಿದೆ ಮನದ ಮನೆಗೆ - ಹೆಗ್ಗಣಗಳ ಬಂಧಿಸಬಲ್ಲ ಬೋನೊಂದನ್ನಾದರೂ" tumba ishta aytu

    ReplyDelete
  3. ತುಂಡುಗಳು ಇಷ್ಟವಾದವು.

    ReplyDelete