Tuesday, March 4, 2014

ಗೊಂಚಲು - ನೂರಾ ಹನ್ನೊಂದು.....

ಗೆಳತೀ.....

ಇಂದಿಲ್ಲಿ ಬಾನು ಭೋರ್ಗರೆದು ಭುವಿಗೆ ತನ್ನ ಮೊದಲ ಸ್ನೇಹದ ಸಂದೇಶ ಕಳಿಸಿತು...
ಭುವಿ ತಾ ಖುಷಿಯಿಂದ ಘಮ್ಮೆಂದಿತು...
ಮಳೆಯಲ್ಲಿ ನೆನೆದು, ಮಣ್ಣ ಘಮಕ್ಕೆ ಮೂಗರಳಿಸಿದ ನನಗೀಗ ನಮ್ಮಗಳ ಗೆಳೆತನದ ಮೊದ ಮೊದಲ ಆ ದಿನಗಳು ನೆನಪಾಗುತ್ತಿವೆ...

***

‘ಕಾಲ’ ಕಳೆದಂತೆ ಕಳೆಯುತ್ತಾ (-) ಕೊಳೆಸುತ್ತಾ ಹೋಗುತ್ತದೆ ಎಲ್ಲವನೂ – ನಾಳೆ ಎಲ್ಲೋ ಹೇಗೋ ಕೂಡಬರುವ ಹೊಸದರೆಡೆಗೂ ಭಯದಿಂದ ನೋಡುವಂತೆ...:(
ಒಂದು ವಿಶಾದವನ್ನೂ ಹೊರತೋರಗೊಡದೆ ನಗಬೇಕಾದ ಅನಿವಾರ್ಯತೆಯ ಸುಸ್ತು ಮನಕೆ...

***

ಹೊಸ ತೀರದೆಡೆಗೆ ತುಡಿವ ಚೈತನ್ಯ ಕಳೆದು ಹೋಗಿ ಭಾವಸೆಲೆ ಬತ್ತಿ ಹರಿವು ನಿಂತ ಘಳಿಗೆಯಲೇ ನೀನು ಹಾಯ್ ಅಂದು, ಕೈಕುಲುಕಿ, ನಗುಬೀರಿ ಬದುಕ ತಬ್ಬಿಬಿಟ್ಟೆ... 
ಜೊತೆ ಸಾಗುವ ಭರವಸೆಯ ನುಡಿ ಜೋಡಿಸಿ ಬೆರಳ ಬೆಸೆದುಬಿಟ್ಟೆ...
ಮನಸಿಗೀಗ ಹೊಸ ಸೆಳವು ದಕ್ಕಿಬಿಟ್ಟಂತಿದೆ - ಅಲ್ಲೀಗ ಹೊಸ ಕನಸುಗಳ ಪ್ರವಾಹ...

***

ಯಾರೂ ಸುಳಿಯದ ದಟ್ಟ ಕಾಡಿನ ನಟ್ಟ ನಡುವೆ ಅರಳಿದ ಪುಟ್ಟ ಹೂವಂತೆ ನನ್ನ ಮನಸು...
ಚಂದ್ರನು ತನ್ನ ನೋಡದೇ – ರವಿಯ ತಾನೇ ನೋಡಲಿಚ್ಛಿಸದೇ ಮಣ್ಣ ಸೇರಿದ ಅಮಾವಾಸ್ಯೆಯ ಇರುಳಲ್ಲಿ ಅರಳಿದ ಪಾರಿಜಾತದಂತೆ ನನ್ನ ಕನಸು...

***

ಗೊತ್ತು ಪ್ರಜ್ಞೆಗೆ – ಯಾರೊಂದಿಗೂ ನಾ ತುಂಬ ಕಾಲ ಜೊತೆ ನಡೆಯಲಾರೆ...
ಎಲ್ಲಿಯೂ ನೆಲೆ ನಿಲ್ಲದ ಜೋಗಿ ಜಂಗಮ ಮನಸು ನನ್ನದು...
ಆದರೂ ನಿನ್ನ ಸ್ನೇಹದ ಮಡಿಲಲ್ಲಿ ಒಂದಷ್ಟು ಕಾಲ ವಿರಮಿಸುವ ಕನಸು ಕೈಜಗ್ಗಿದೆ...
ಕಟ್ಟಿಕೊಳ್ಳಹೊರಟ ಮನೆ ಮಕ್ಕಳಾಟಿಕೆಯದೇ ಆದರೂ ಅಲ್ಲೊಂದಿಷ್ಟು ಮುಗ್ಧ, ಪ್ರಾಮಾಣಿಕ ನಗುವಿದೆ...
ಕ್ಷಣಿಕವೇ ಆದರೂ ನಗುವೆಂದರೆ ತುಂಬ ಪ್ರೀತಿ ನನಗೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

3 comments:

  1. ಚಂದದ ಭಾವ ಬರಹ...
    ಕ್ಷಣಿಕವೇ ಆದರೂ ನಗುವೆಂದರೆ ತುಂಬ ಪ್ರೀತಿ ನನಗೆ...
    ಇಷ್ಟ ಆಯ್ತು

    ReplyDelete
  2. This comment has been removed by the author.

    ReplyDelete