Friday, May 8, 2015

ಗೊಂಚಲು - ನೂರಾ ಐವತ್ತು ಮತ್ತೈದು.....

ಹೀಗೆಲ್ಲ ಅನ್ನಿಸಬಹುದಾ.....!!!
(ಇದು ಕೇವಲ ನನ್ನ ಭಾವ...)

ಸ್ನೇಹವೇ -
ಪ್ರೀತಿ ಹುಟ್ಟಲು, ಸ್ನೇಹಿಗಳಾಗಲು ಕಾರಣಗಳ ಹಂಗಿಲ್ಲ ಅಂತಾರೆ – ನಿಜವಿರಲೂಬಹುದು...(?!)
ಕಾರಣವಿಲ್ಲದೇ ಕುಡಿಯೊಡೆದ ಸ್ನೇಹ, ಪ್ರೀತಿ ಕಾಲಕೂ ಅದೇ ಚಂದವನುಳಿಸಿಕೊಂಡು ನಗಬೇಕೆಂಬುದಾದರೆ ಖಂಡಿತಾ ಒಂದಿಷ್ಟಾದರೂ ಕಾರಣಗಳು ಬೇಕೆನಿಸುತ್ತೆ ನಂಗೆ – ಕಾರಣ ಎನ್ನುವುದಕಿಂತ ತಯಾರಿ ಎಂಬುದು ಸೂಕ್ತವೇನೋ ಅಲ್ಲವಾ...
ಒಂದಿಷ್ಟಾದರೂ ಭಾವಗಳ ಸಾಮ್ಯತೆ ಬೇಕೇನೋ – ಉಹುಂ ಸಾಮ್ಯತೆಯೊಂದೇ ಸಾಲದು ಭಾವಗಳ ಪ್ರಾಮಾಣಿಕ ವ್ಯಕ್ತ ಅನುಸರಣೆಯೂ ಬೇಕು...
ಒಂದಷ್ಟು ಸಮಾನ ಅಭಿರುಚಿಗಳ ಒಡನಾಟ – ಆ ಅಭಿರುಚಿಯಿಂದ ಮೂಡಿದ ಪರಸ್ಪರ ಅಭಿಮಾನ – ಆ ಅಭಿಮಾನ ಹುಟ್ಟು ಹಾಕೋ ಜೀವೋತ್ಸಾಹ ಜೊತೆಗಿರಬೇಕೇನೋ...
ಅಲ್ಲೊಂದಿಷ್ಟು ಭಿನ್ನ ರುಚಿಗಳೂ ಇರಲಿ – ಆಗೀಗ ಸಣ್ಣ ಮುನಿಸೂ ಚಂದವೇ ಬಂಧದಲ್ಲಿ – ಕಾಡಿ ಕೂಡೋವಾಗ ಮೂಡುವ ಹಾಡು ಎಂಥ ಚಂದ ಚಂದ...
ಬಂಧವನ್ನು ಸಲಹಿಕೊಳ್ಳುವಾಗ ನಿಭಾಯಿಸುವ ನಿಟ್ಟಿನಲ್ಲಿ ತನ್ನತನವ ಕಾಯ್ದುಕೊಳ್ಳುತ್ತಲೇ ಒಂದಷ್ಟನ್ನ ಬಿಟ್ಟುಕೊಟ್ಟು ದೊಡ್ಡವರಾಗುವುದು – ‘ನಾನು’ ಕಳೆದು ‘ನಾವು’ ಆಗುವುದು ಎಲ್ಲವೂ ನಮ್ಮೊಳಗೆ ಚಂದವೆನಿಸಬೇಕು...
ಭೂತಾಯ ನಿಭಾವಣೆ ಇಲ್ಲದೇ ಹೋದರೆ, ಹಮ್ಮು ಬಿಟ್ಟು ಭೂಮಿಯಾಳಕೆ ಬೇರನಿಳಿಸದೇ ಹೋದರೆ ಅಷ್ಟು ಹಿರಿದಾದ ಆಲವೂ ಸಣ್ಣ ಸುಳಿ ಗಾಳಿಗೂ ಅಡ್ಡಡ್ಡ ಮಲಗೀತು ಅಲ್ಲವಾ...
ಪ್ರಜ್ಞೆಯ ಕೈಸಾರಣೆಯಲ್ಲಿ ಒಡನಾಟದ ನೀರು ಗೊಬ್ಬರದ ಆರೈಕೆ ನೀಡಿ ಸಲಹಿಕೊಳ್ಳದೇ ಹೋದರೆ ಸಾಗುತ್ತಾ ಸಾಗುತ್ತಾ ಆರಂಭದ ತೀವ್ರತೆ ಕಳಕೊಂಡ ಪ್ರೀತಿ ಸಲಿಗೆ ಸತ್ತು ಸದರಕ್ಕೆ ಬಿದ್ದು ನಿತ್ಯದ ನಾವೀನ್ಯ ಉಳಿಯದೇ ಅರಿವೇ ಆಗದೇ ಕಳೆದು ಹೋಗುತ್ತೆ – ಜತೆ ಜತೆಗೆ ಬದುಕಿನ ಅಮೂಲ್ಯ ಘಳಿಗೆಗಳು ಮತ್ತು ಭಾವಗಳನ್ನೂ ಕೊಂಡೊಯ್ದಿರುತ್ತೆ...
ಮೌನ ಮುರಿದು ಮಾತಾಗುವುದೆಂದರೆ, ಸರಾಗವಾಗಿ ಒಡನಾಡುವುದೆಂದರೆ ಬಯಲಲ್ಲಿ ಬೆತ್ತಲಾಗುವುದು ಎಂದರ್ಥವಲ್ಲ – ನಮಗೇ ಅಂತ ನಾವೇ ಸೃಷ್ಟಿಸಿಕೊಂಡ ಕೆಲವೇ ಕೆಲವು ಆತ್ಮ ಸಾಂಗತ್ಯಗಳೆದುರಾದರೂ ಮನಸ ಬಿಚ್ಚಿಡಬಲ್ಲವರಾಗುವುದು – ನಮ್ಮವರೆಂದು ನಾವು ಪ್ರಾಮಾಣಿಕವಾಗಿ ನಂಬಿದವರ ಎದುರಾದರೂ ಹಮ್ಮು ತೊರೆದು ಕಣ್ಣ ಹನಿಯಾಗಬಲ್ಲವರಾಗುವುದು...
ಪ್ರೀತಿ, ಸ್ನೇಹಗಳೆಲ್ಲ ಹುಟ್ಟಿದಷ್ಟು ಸುಲಭಕ್ಕೆ ಬದುಕಿ ಬಾಳಲಾರವು – ನಾವೇ ಶಕ್ತಿ ನೀಡಿ ಸಲಹಿಕೊಳ್ಳದೇ ಹೋದರೆ...
ಪ್ರೀತಿಸಲ್ಪಡುವುದನ್ನು ಪ್ರೀತಿಸುವುದಕ್ಕಿಂತ ಮಿಗಿಲಾಗಿ ಪ್ರೀತಿಯ ಹಂಚುವುದನ್ನು ಪ್ರೀತಿಸುವೆವಾದರೆ ಪ್ರಿತಿ ನಮ್ಮ ಶಕ್ತಿಯಾಗಿ ಬೆಳೆದೀತು...
ಈ ಹಂಚುವಿಕೆ ಎಂಬುವಲ್ಲಿ ನಮ್ಮೊಳಗಣ ನೈಜ ಭಾವವನ್ನ ಹಾಗೆ ಹಾಗೇ ಆ ಆ ಕ್ಷಣಕ್ಕೆ ಅದಿದ್ದಂತೆ ವ್ಯಕ್ತಪಡಿಸುವಿಕೆ ಅತಿ ಮುಖ್ಯ ಧಾತು...
ಪ್ರೀತಿ ನನ್ನ ಸಂಪತ್ತು – ಅದನ್ನು ನಾನು ಯಾರಿಗೂ ವ್ಯಕ್ತವಾಗಿ ತೋರಿ ದೊಡ್ಡವನೆನಿಸಿಕೊಳ್ಳಬೇಕಿಲ್ಲ – ನಾನದನ್ನ ಬಯಲಲ್ಲಿ ಬಿಕರಿಗಿಡಲಾರೆ (?) ಎಂದು ಗೋಡೆ ಕಟ್ಟಿಕೊಂಡು ಕೂತರೆ ಸ್ನೇಹದ, ಭಾವ ಬಂಧಗಳ ಒಡನಾಟದ ಆ ಎಲ್ಲ ಖುಷಿಗಳಿಂದ ನಿನ್ನನ್ನ ನೀನೇ ದೂರವಿಟ್ಟುಕೊಂಡು ನಿನಗೆ ನೀನೇ ವಂಚಿಸಿಕೊಂಡಂತೆ ಅನ್ನಿಸುತ್ತೆ ನಂಗೆ...
ವ್ಯಕ್ತವಾಗದೇ ಹೋದರೆ ನೀನೇನೆಂಬುದು ನನಗೂ, ನಾನು ನಿನಗೂ ಸ್ಪಷ್ಟವಾಗುವುದೆಂತು - ಪ್ರೀತಿ ವಿಸ್ತಾರವಾಗುವುದೆಂತು - ಪ್ರೀತಿಯಾಳದ ತಂಪು ಕೈಗೆಟುಕುವುದೆಂತು...
ಮೌನದ ಅರ್ಥ ನಮ್ಮಲ್ಲಿ ನಾವು ಸೃಷ್ಟಿಸಿಕೊಂಡಷ್ಟು - ಕಂಡುಕೊಂಡಷ್ಟು...
ಮಾತೂ ಅರ್ಥವಾಗದೇ ಹೋದೀತು - ಅನರ್ಥವೂ ಆದೀತು - ಆದರೆ ಪರಸ್ಪರ ಒಂದು ಸಂವಹನವನ್ನಾದರೂ ಜಾರಿಯಲ್ಲಿಡುತ್ತೆ - ಅಷ್ಟು ಸಾಕು ಬಂಧ ಉಳಿದುಕೊಳ್ಳಲು, ನಿಧಾನವಾದರೂ ಬೆಳೆದು ನಿಲ್ಲಲು...

ಕಾರಣ ಮತ್ತು ಆತ್ಮದ ತಯಾರಿ ಇಲ್ಲದ ಬದುಕು, ಭಾವ, ಬಂಧ ಯಾವುದಾದರೂ ಹಾಗೇ ಉತ್ಕಟ ಭಾವದ ಬೆಂಬಲ ಇಲ್ಲದ ಶುಷ್ಕ ಸಂಭೋಗದಂತೆ – ಕೊನೇಲಿ ಉಳಿಯುವುದು ಬರೀ ಸುಸ್ತು ಅಷ್ಟೇ...

ಅಲ್ಲೆಲ್ಲೋ ಬೀದಿ ಮೂಲೆಯಲಿ ಅಲೆದಾಡುತಿರೋ ಖುಷಿಗಳನೆಲ್ಲ ಒಂದೊಂದಾಗಿ ಹೆಕ್ಕಿ ತಂದು ಎದೆಯ ಹುಂಡಿಯಲ್ಲಿ ತುಂಬಿಟ್ಟುಕೊಳ್ಳುವಾಸೆ...
ಜೊತೆಗೆ ಬರ್ತೀಯಾ....???

ಬದುಕು ಮಹಾ ಜಿಪುಣ ವ್ಯಾಪಾರಿ – ದಾರಿ ತುಂಬ ಸುಂಕದ ಕಟ್ಟೆಗಳೇ – ಸುಂಕವಾಗಿ ಕಾಲನ ಮಡಿಲಿಗೂ ನಗೆಯನೇ ತುಂಬುವಾಸೆ...
ಕೈ ಜೋಡಿಸ್ತೀಯಾ...???

5 comments:

  1. ಆಹಾ..!!
    ಜಿಪುಣ ವ್ಯಾಪಾರಿಯೂ ನಿನ್ನ ನಗೆಗೆ ಉದಾರಿಯಾಗಲಿ :)

    ಚಂದ ಎಂದಿನಂತೆ :)

    ReplyDelete
  2. ತುಂಬ ಇಷ್ಟವಾಯಿತು.

    ReplyDelete
  3. ಚಂದವಿದೆ.. ಸಲಹಿ ಶಕ್ತಿನೀಡಿ ಬೆಳೆಸುವ ಆಸೆ ಅಭಿಲಾಷೆ ಇರಬೇಕು ನಂತರ ಪ್ರೀತಿಯನ್ನು ಹುಟ್ಟಿಸಬೇಕು. ನಾನು ಮೊಗ್ಗಾಗೆ ಇರುವೆ ಅರಳಲಾರೆ ಎಂಬ ಭಾವ ಶೂನ್ಯವಷ್ಟೇ. ಪ್ರೀತಿ ಅರಳಬೇಕು, ಘಮಗಮಿಸಿ ಪಸರಿಸಿ ಪರಿಸರ ತುಂಬಬೇಕು.

    ReplyDelete
  4. ಚೆಂದಿದ್ದು.. ಹೆಂಗೋ ಮೂಡಿದ ಸ್ನೇಹ ಸದಾ ಉಳಿಯಲು ಸಮಾನ ಮನಸ್ಥಿತಿ ಮತ್ತು ವಿಚಾರಗಳ ಕೊಡುಕೊಳ್ಳುವಿಕೆ ಬೇಕೆನ್ನೋ ನಿಮ್ಮ ಮಾತನ್ನು ನಾನೂ ಅನುಭವಿಸಿದ ಕಾರಣ ಮೆಚ್ಚುಗೆಯಾಯಿತು :-) ಅಂದಾಗೆ ಮರೆತೇ ಬಿಟ್ಟಿದ್ದಿ. ನೂರೈವತ್ತಕ್ಕೊಂದು ಅಭಿನಂದನೆ :-) ನಿಮ್ಮ ಗೊಂಚಲುಗಳು ಹೀಗೇ ಮುಂದುವರೆಯಲೆಂಬ ಹಾರೈಕೆ

    ReplyDelete