Saturday, November 21, 2015

ಗೊಂಚಲು - ನೂರು + ಅರವತ್ತು + ಒಂಬತ್ತು.....

ಹಂಗೇ ಸುಮ್ಮನೆ ಹಿಂಗೆಲ್ಲ ಅನ್ನಿಸ್ತದೆ.....

ಹೆಜ್ಜೆ ಎತ್ತಿಡದಂತೆ ಎದೆಯ ಹಿಂಡುವ ಛಳಿ (!) - ನಿನ್ನೆಡೆಗಿನ ಹಸಿವು ಹಾಗೇ ಉಳಿದು ಹೋದ ನೆನಪಿನ ಸುಳಿ - ಕನಸು ಕಳೆದು ಹೋದ ದಾರಿಯ ತುಂಬಾ ಇತಿಹಾಸದ ವೈಭವದ ಅಸ್ಥಿಯ ತುಂಡುಗಳು - ಕರೆಯೋಲೆಯ ದಕ್ಷಿಣ ಮೂಲೆಯಲ್ಲಿ ವಿಳಾಸ ಬರೆದು ಚಿತ್ರಗುಪ್ತ ನಟಿಗೆ ಮುರಿದ ಸದ್ದು - ಸಾವೆಂಬೋ ಅರೆಹುಚ್ಚು ಕುಂಬಾರನ ಒರಟು ಕೈಗಳಲ್ಲಿ ಅರ್ಧಂಬರ್ದ ಅರಳಿದ ಬದುಕೆಂಬೀ ಒಗಟೊಗಟು ಚಿತ್ತಾರದ ಮಡಕೆ...
@@@
ಕನಸುಗಳ ಹೊತ್ತಗೆಯ ಎದೆಗವುಚಿಕೊಂಡು, ಧಮನಿಯೊಳಗೇಳುವ ಹೊಸ ಭಾವ ಪುಳಕಗಳ ಹಿತದಮಲಿನಲ್ಲಿ ನಾಳೆಯೊಂದಿಗೆ ಪಿಸುನುಡಿಯನಾಡುತ್ತ ಜಿಗಿ ಜಿಗಿದು ನಡೆವಾಗ, ಜೀರ್ಣವಾಗದೇ ಉಳಿದ ಒಂದ್ಯಾವುದೋ ಹಳೆಯ ಬಿಕ್ಕಿನ ಹಾಡು ಸಣ್ಣ ಕರುಳಿಂದೆದ್ದು  ಗೋನಾಳಕೆ ಚುಚ್ಚಿ ಕಣ್ಣ ಮೊನೆಯ ಹನಿಯಾಗಿ ಇಳಿದು ಕನಸುಗಳೆಲ್ಲ ಬಣ್ಣ ಕಳಕೊಂಡು ಸಂಜೆಯೊಂದು ಇರುಳಿಗೆ ಜಾರುತ್ತದೆ...
ಇಂದು ನಾಳೆಗೆ ದಾಟುವಾಗ ನಿನ್ನೆ ಜೀರ್ಣವಾಗಬೇಕೇನೋ ಮರೆವು ವರವಾಗಿ ನಾಳೆ ಹೊಸತಾಗಿ ನಗಲು...
ಕನಸಿಗೆ ಬಲ ತುಂಬೋ ಅಲ್ಲಲ್ಲಿ ಉಲಿದಿದ್ದ ಸವಿ ನೆನಪುಗಳೂ ಅಳಿಸಿಹೋದಾವು - ಅವನಷ್ಟೇ ಉಳಿಸಿಕೊಂಬ ಆಸೆಯಾಚೆಯೂ ಮರೆವೆಯೇ ಹಿತವೇನೋ ಕೆಲ ಬದುಕುಗಳಿಗೆ...
@@@
...ನೋವಿನ ತಂಟೆ, ತಕರಾರುಗಳ್ಯಾವುದೂ ಇಲ್ಲದ ಸಂತೃಪ್ತ ಸಾವು - ಈ ಬದುಕಿನ ಅತಿ ದೊಡ್ಡ ಹಸಿವು ಮತ್ತು ಅಷ್ಟೇ ದೊಡ್ಡ ಭ್ರಮೆ ಕೂಡಾ...
@@@
ನಿನ್ನೆಗಳೇ ನಿಮ್ಮ ಕರುಳ ತಿಜೂರಿಯಲಿ ಕರಗದೇ ಉಳಿದ ನೆನಪುಗಳ ಖಾತೆಯಿಂದ ಹೇಗಾದರೂ ಹೊಂಚಿ ಒಂದಿನಿತು ನಗೆಯ ಸಾಲ ಕೊಡಿ...
ಅದರ ಕಿಡಿಯಿಂದ ಸೂಡಿ ಹಚ್ಚಿಕೊಂಡು ಈ ನಿಶೀತವ ದಾಟಿ ಆ ನಾಳೆಯ ಸೇರಿಕೊಳ್ಳುತ್ತೇನೆ...
ನೆನಪುಗಳಲಿ ನಗೆಯ ಹುಡುಕೋ ಯತ್ನದಲಿ ಕಿಂಚಿತ್ ಯಶ ಸಿಕ್ಕರೂ ಅಲ್ಲೆಲ್ಲೋ ಹೊಂಚಿ ಕೂತ ಅಂತಕನ ಕೈಗೂ ಒಂದು ಹಿಡಿಯಷ್ಟು ನಗೆಯನೇ ಸುರಿದು ಬದುಕ ಕರುಣೆಯ ಋಣ ಇನಿತಾದರೂ ಹರಿದುಕೊಳ್ಳುವಾಸೆಯಿದೆ...
@@@
ಯಾವ ಮಡಿಲಲ್ಲಿ ಕರುಣೆ ಕೆಡುಕೆನಿಸದೇ ಕರುಳ ವೇದನೆ ಕಣ್ಣ ಕನಿಯಾಗಿ ಹರಿವುದೂ ಸರಾಗವೋ - ಯಾರ ಎದುರಲ್ಲಿ ಬುದ್ಧಿಯ ಕಟ್ಟಳೆಗಳೆಲ್ಲ ಮುರಿದು, ನಾನೆಂಬೋ ಹುಸಿ ಹಿರಿತನದ ಸೊಕ್ಕೆಲ್ಲ ಅಳಿದು, ಮರುಳ ಪೊರೆಗಳೆಲ್ಲ ಕಳೆದು ನಿಗಿ ನಿಗಿಯಾಗಿ ಮನಸಿದು ಬತ್ತಲಾಗಬಲ್ಲುದೋ - ಆ ತೀರದಾಚೆಯೆಲ್ಲೋ ನನಗೆಂದೇ ಒಲವಿನಂಗಡಿಯ ಕದ ತೆರೆದು ಕೂತ ಯಾವ ಜೀವದ ಒಂದು ಮುಗುಳ್ನಗೆ, ಒಂದೇ ಒಂದು ಅಕ್ಕರೆಯ ಹಾರೈಕೆ ಎನ್ನಲ್ಲಿಯ ಸೋತ ಕನಸೊಂದರ ಹೆಜ್ಜೆಯ ಜಾಡು ಬದಲಿಸಿ ನಡೆಯ ಬಸಿರ ಪೊರೆಯಬಲ್ಲುದೋ - ಅಂಥದೊಂದೇ ಒಂದಾದರೂ ಹೆಗಲಿನ ಸ್ನೇಹ ಸನ್ನಿಧಿ ಎಲ್ಲರಿಗೂ ದಕ್ಕಿ ಪ್ರತಿ ಬದುಕನೂ ಕಾಯಲಿ - ಉಹುಂ, ಅಷ್ಟೇ ಅಲ್ಲ; ಈ ಉಸಿರ ಹಾಡು ನಿಲ್ಲುವ ಮುನ್ನ ಒಂದಾದರೂ ಜೀವಕ್ಕೆ ಒಂದರೆ ಘಳಿಗೆಯಾದರೂ ಆ ಭಾವ ಸನ್ನಿಧಿಯ ತುಂಬಿಕೊಡಬಲ್ಲ ಶಕ್ತಿ ಎನ್ನ ಹೆಗಲಲೂ ಸಂಚಯಿಸಲಿ...
ಹೇಳಬೇಕಿದ್ದದ್ದು ಇಷ್ಟೇ; ಆತ್ಮ ಸಾಂಗತ್ಯದ ಶೃಂಗಾರ ಸಿರಿಯಲ್ಲಿ ಬದುಕ ಬವಣೆಗಳೆಲ್ಲ ಕತ್ತಲ ಕುಹರದಲ್ಲಡಗಲಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment