Monday, May 2, 2016

ಗೊಂಚಲು - ನೂರಾ ತ್ತೊಂಬತ್ತು.....

ಹೀಗಿಷ್ಟು.....

ಮುದ್ದಿಗೆ ಮುದಗೊಂಡ ಕಂದನಮ್ಮನ ಕೈಯ ತುಂಟಾಟಕೆ ಅಮ್ಮನ ಮುಡಿ ಬಿಚ್ಚಿಕೊಂಡಂತೆ ಬೆಚ್ಚನೆ ಹಗಲೊಂದು ಬಿಚ್ಚಿಕೊಳ್ಳುತ್ತೆ...
ಕೂಸಿನ ಕಿಲಕಿಲದ ಉಸುರಿಗೆ ಅಮ್ಮನ ನಿಶಾಂತ ಮೊಗದ ಮೇಲೆ ಕುರುಳು ಕುಣಿವಂತೆ ಬೆಳಕ ಕೋಲ್ಗಳು ವಸುದಮ್ಮನಡಿಮುಡಿಯನೆಲ್ಲ ಆವರಿಸಿ ಅರಳುತ್ತವೆ...
ಶುಭ ಮುಂಜಾವು...

((()))

ನೋವ ಕರುಳನು ಕಡೆದು ನಗೆಯ ರಾಗವ ಮಿಡಿವ ನಿನ್ನ ನೇಹದ ಕಸುವು ನನ್ನ ಜನ್ಮಾಂತರಗಳ ಹಸಿವು... 
ಸ್ನೇಹ ಸ್ವಾರ್ಥವಾದರೆ ನಾ ಮಹಾ ಸ್ವಾರ್ಥಿ...

((()))

ಚಲನಶೀಲತೆಯೇ ಹಾಗೆ - ಅದರ ಕೈಯ ತಕ್ಕಡಿಯಲಿ ಒಂದ್ಕಡೆ ಹೊಸ ಆಗಸಕೆ ಬಿಚ್ಚಿಕೊಳ್ಳುವ ಉತ್ಸವದ ಉತ್ಸಾಹೀ ಖುಷಿ ಮತ್ತು ಇನ್ನೊಂದ್ಕಡೆ ಕಳೆದುಕೊಂಡ ಹಳೆಯದರ ಕಳೆದು ಹೋಗದೆ ಕಾಡುವ ಕರುಳ ಹಳಹಳಿಕೆಯ ಬಿಸಿ ಸದಾ ತೂಗುತ್ತಲೇ ಇರುತ್ತೆ...
ಯಾವುದರ ತೂಕ ಹೆಚ್ಚು ಅಥವಾ ಎಷ್ಟು...?
ನಿರ್ಧಾರ ಬಹುಶಃ ಯಾವುದನ್ನ ಮೀರಿ ಯಾವುದು ಬದುಕನಾಳುತ್ತೆ ಎಂಬುದರ ಮೇಲಿದೆ...
...ಇಷ್ಟಕ್ಕೂ ಕಣ್ಣ ಕಡಲಲಿ ಕರಗಿ ಕದಲುವ ಎದೆಯ ಭಾವ ಬಿಂದುಗಳ ತೂಕಕ್ಕಿಡಬಹುದೇ...??

((()))

ಕ್ಷಮಿಸಿ ಹೀಗೆಲ್ಲ ಅನ್ನಿಸುತ್ತೆ:
ಆತ್ಮೀಕವಾಗಿ ಬೆಸಗೊಂಡ ಬಂಧಗಳಲಿ ಯಾವುದೋ ಭಾವ ಸ್ಫೂರ್ತಿಯ ಧನ್ಯತೆಯ ಹೇಳುವಾಗ ಅಥವಾ ಬೆಂದ ಭಾವದಿ ಕ್ಷಮೆಯ ಕೇಳುವಾಗ ಕರುಳ ಮಿಡಿತದ ತೀವ್ರತೆಯ ವ್ಯಕ್ತವಾಗಿಸಲು ಈ 'ಥ್ಯಾಂಕ್ಯೂ' ಮತ್ತು 'ಸಾರಿ'ಗಳು ತೀರಾ ಕೆಳಸ್ತರದ ಒಣ ಒಣ ಶಬ್ಧಗಳಂತೆ ಭಾಸವಾಗುತ್ತೆ.
ಆಪ್ತತೆಯಲಿ ನಾವು ಮಾತ್ರವೇ ಕೂಗಲು ಇಟ್ಟುಕೊಂಡ ಅಡ್ಡ ಹೆಸರನು ಉದ್ದಕೆ ಉಸುರಿದರೂ ಸಾಕು; ಆ ಒಂದು ಕರೆ ಈ ಥ್ಯಾಂಕ್ಸ್, ಸಾರಿಗಳಿಗಿಂತ ಸಾವಿರ ಪಾಲು ಹೆಚ್ಚು ಸಂವೇದನಾಶೀಲ ಎನ್ನಿಸುತ್ತೆ ನಂಗೆ.
ಅಪರಿಚಿತತೆಯಲಿ ಸೌಜನ್ಯ ಸೂಚಕ ಎನಿಸೋ ಇದೇ ಪದಗಳು ಆಪ್ತರ ನಡುವೆ ಭಾವೋತ್ಕರ್ಷದಲ್ಲಲ್ಲದೇ ನಿತ್ಯ ನೈಮಿತ್ಯಗಳಲೂ ಮತ್ತೆ ಮತ್ತೆ ನುಸುಳುವಾಗ ಭಾವ ಮಾಲಿನ್ಯದ ದ್ಯೋತಕ ಅಥವಾ ಬಾಂಧವ್ಯದ ಸೂತಕದಂತೆ ತೋರಿ ಕಂಗೆಡುತ್ತೇನೆ.
ಜಗಳವೂ ಜೀವಂತಿಕೆಯ ದಾರಿ ಅನ್ನಿಸೋ ಪ್ರೀತಿ, ಸ್ನೇಹಗಳ ನಡುವೆ ನಾಲಿಗೆಯ ಸೌಜನ್ಯದ ಶಬ್ಧ ಸಂಚಯಕೂ ಮೀರಿದ ಕರುಳ ತಂತಿಯ ರಾಗಾಲಾಪವೇ ತಾರಕದಲಿ ಉಲಿಯಲಿ ಸದಾ.

((()))

ನಂಗೆ ತಾರೀಖುಗಳು ನೆನಪಿರುವುದಿಲ್ಲ - ಎಂಥಾ ದೊಡ್ಡ ವರವೆಂದರೆ, ಕನಸ ಸಾವಿನ ಶ್ರಾದ್ಧಕೆ ನೆಪವೇ ಇರುವುದಿಲ್ಲ...

((()))

ಸಂವಹನದಲ್ಲಿ ಶಬ್ಧ ವಿನಿಮಯದ ಬೌದ್ಧಿಕ ಪಕ್ವತೆಯ ಶ್ರೀಮಂತಿಕೆಗಿಂತ ಭಾವ ವಿನಿಮಯದ ಮುಗುಳ್ನಗೆಯ ಮುಗ್ಧತೆ ಹೆಚ್ಚು ಆಪ್ತವೆನ್ನಿಸುತ್ತೆ...
ಯಾರದೇ ಭೇಟಿಯ ಖುಷಿಯನ್ನು ಅವರ ಸಮ್ಮುಖದಲ್ಲಿಯೂ ಕೂಡ ಶಬ್ಧಕು ಮೀರಿದ ಭಾವ ಭಾಷೆಯಲ್ಲಿ ವ್ಯಕ್ತಪಡಿಸಲಾಗದ ನನ್ನೊಳಗಿನ ಖಾಲಿತನಕ್ಕೆ ನಾ ಇಟ್ಟುಕೊಂಡ ಹೆಸರು ನಾಗರೀಕ ನಡವಳಿಕೆ...

((()))

ಪ್ರೀತಿ ಕೂಡ ಸಾವಿನಂತೆಯೇ - ಗೆಲ್ಲಲಾರದ ಯುದ್ಧ...
ಇರಲಿರಲಿ ಜಾರಿಯಲಿ ಬಡಿದಾಟ, ತುಂಬಿಕೊಳಲು ಸೋಲಿಗೂ ಮುಟಿಗೆಯಷ್ಟಾದರೂ ಮಾಧುರ್ಯ... 
ಬದುಕಿನೊಡನೆ ಹುಚ್ಚು ಪ್ರೀತಿಗೆ ಬಿದ್ದೆ - ಇದೀಗ ತೋಳ್ದೆರೆದ ಸಾವೂ ಮಗುವಂತೆ ಕಾಣುತಿದೆ...  

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment