Saturday, January 25, 2020

ಗೊಂಚಲು - ಮುನ್ನೂರಿಪ್ಪತ್ತೆರ್ಡು.....

ಆಯುಷ್ಯರೇಖೆ..... 
(ಒಂಭತ್ತು ದಾಟಿ ಹತ್ತರ ಬಾಗಿಲಿಗೆ...)  

ಈ ಬಕ್ಕಬಾರಲು ಬಿದ್ದ ಬರಡು ಎದೆ ನೆಲದ ಮೇಲೆ ನಿನ್ನ ಪ್ರೀತಿ ಪಾದಪಲ್ಲವವನೂರು - ಉತ್ತರಾಯಣ ಪುಣ್ಯ ಕಾಲವಂತೆ...
ನೆತ್ತಿಗೇರಿದ ಖೂಳ ಮದಗಳೆಲ್ಲ ಮಣ್ಣು ಸೇರಲಿ - ಅಕ್ಷಯವಾಗಲಿ ನಗೆಯ ಹುಗ್ಗಿ ಎದೆಯ ಭಾಂಡದಲಿ.‌‌..
"ಬಿತ್ತಿದ ಪ್ರೀತಿ ಕಾಳು - ತೆನೆ ತೆನೆ ತೊನೆವ ಪ್ರೀತಿ - ಬಳ್ಳ ಬಳ್ಳ ನಗೆಯ ಕೌಸ್ತುಭ..."
ಸುಗ್ಗಿಯ ಶುಭಾಶಯ... 
     ___15.01.2020
↜↯↹↯↝

ಬಡಿದು ಉಂಬಲೆ ಬಾಳೆ ತುಂಬಾ ನೋವು - ಬಾಳೆ ತುದಿಯಲಿ ನಾಲಿಗೆಗೆ ನೆಂಚಿಕೊಳ್ಳಲು ಚಿಟಿಕೆ ನಗು - ನಿತ್ಯ ಸಮೃದ್ಧ ಭೋಜನ...
ಬದುಕೇ -
ನೀ ಸೆರೆ ಬಿಡಿಸಿ ಕೊಡುವ ಅತಿ ಸಣ್ಣ ಖುಷಿಯನೂ ದೊಡ್ಡದಾಗಿ ಸಂಭ್ರಮಿಸುತ್ತಾ, ಅದೇ ನೀನು ಎತ್ತಿ ಕೊಡುವ ಸಣ್ಣ ನೋವಿಗೂ ಬಹುವಾಗಿ ನರಳುತ್ತಾ; ಹೀಗೆ ಸಾಗುವ ಹಾದಿಯಲ್ಲೀಗ ಉಸಿರನೇ ಸೀಳುವ ದೊಡ್ಡ, ಅಡ್ಡ ನೋವೂ ಅಷ್ಟೇ ಹರಹಿನ ನಗುವಾಗಿ ತುಟಿ ಬಿರಿಯುತ್ತದೆ...
#ಕಣ್ಣ_ಹನಿಯೂ_ಉಸಿರಿನಷ್ಟೇ_ಬಿಸಿ...
↜↯↹↯↝

ನನ್ನ ಹೆಣದ ಕಣ್ಣಲ್ಲಿ ಹಾಗೇ ಉಳಿದ ನಗು - ನಿನ್ನ ಕುಂಚದ ಕವಿತೆ...
#ಬದುಕ_ಮೇಜವಾನಿ...
↜↯↹↯↝

ಇಂತಿಪ್ಪಂತೆ ಮಾಯದ ನಿದ್ದೆ ಕವಿದರೆ ನಿನ್ನನ್ನೂ ಮರೆಯಬಹುದು...
#ನೀನೆಂದರೆ_ನಾನೂ...
↜↯↹↯↝

ನನ್ನೊಳಗೆ 'ನಾನು' ಸತ್ತು 'ನೀನು' ಹುಟ್ಟುವ ಹಾದಿ...
#ಧ್ಯಾನ...
↜↯↹↯↝

ದಡಕಪ್ಪಳಿಸೋ ನೀರಿನ ಹೋರು - ಬಕ ಧ್ಯಾನ - ಮೀನಿನ ಜಾತಕದಲ್ಲಿ ಮರಣ ಮುಹೂರ್ತ.‌‌..
#ನಾನೆಂಬ_ವಿಕ್ಷಿಪ್ತ...
↜↯↹↯↝

ಚಿತೆಯೊಂದಿಗೆ ಮಾತಿಗಿಳಿದೆ - ಬದುಕಿನ ಅಡುಗೆಗೀಗ ಹಳಸದ ಹದ...
#ನಿರ್ಮೋಹ...
↜↯↹↯↝

"ಬಡವ ನಾನು ಬದುಕು ಶ್ರೀಮಂತ ನಂದು - ನಿನ್ನಿಂದ..."
ಉಹೂಂ...
ನೀನೆಂದೂ ಸಿಗಲೇಬಾರದು...
ಸಿಕ್ಕು ಬಿಟ್ಟರೆ ಸಿಕ್ಕ ಆ ತಿರುವಿನಾಚೆ ನಿನ್ನ ಹುಡುಕುವ ತಲ್ಲಣಗಳೊಂದಿಗೆ ಬೆಸೆದುಕೊಂಡ ಜೀವೋನ್ಮಾದ ಸತ್ತು ಹೋದೀತೆಂಬ ಭಯವಿದೆ...
ಹರಿಯುತ್ತಲೇ ಇರಬೇಕು - ನಿಲ್ದಾಣದ ಕನಸು, ಖಬರು ಒಂದೂ ಇಲ್ಲದೆ...
ಹರಿವಿನ ಹಾದಿಯಲಿ ಒಂದೋ ಸಾಗರ ಸಂಗಮ, ಇಲ್ಲಾಂದ್ರೆ ಭುಜಗಳಲಿ ಹಸಿರ ಸಿರಿ ವಿಹಂಗಮ - ಎರಡೂ ನನ್ನ ಪ್ರೀತಿಯನುಂಡೇ ಅರಳಿದ ಆಲಾಪಗಳು...
#ವಿಹ್ವಲವಿಸ್ತಾರ...
↜↯↹↯↝

ನೀರಂತೆ ನಾನು...
ಬಿಟ್ಟು ಚೆಲ್ಲಿದರೆ ಹೊರಗೆ, ಬೊಗಸೆ ತುಂಬಿ ಹೀರಿದರೆ ಒಳಗೆ - ಒಟ್ನಲ್ಲಿ ಹರಿವೊಂದೇ ನನ್ನ ಅನವರತ ಅಸ್ತಿತ್ವ...
#ಗೆಳೆತನ...
↜↯↹↯↝

"ಮಸಣವೇ ಮನೆಯಾದರೂ ಮೌನದ ಭಯ ಜೀವಕೆ..."
ಯಾವ ಹಾಡ ಹಾಡಲಿ - ಉಸಿರು ಸತ್ತ ದನಿಯಲಿ...
#ನೀರವ_ಕುಲುಮೆ...
↜↯↹↯↝

ಉಸಿರೇ -
"ಬಂಧಿಸಿಟ್ಟರೂ ಬಯಲನಾಳುವ ಬೆಳಕು: ಪ್ರೀತಿ ಲಾಲಿ..."
ದಿನದ ಯಾಪಾರ ಮುಗಿಸಿ ಹಾಸಿಗೆಯ ಸುರುಳಿ ಬಿಚ್ಚೋ ಹೊತ್ತಿಗೆ ಎದೆ ಸಂದೂಕದಲಿ ನಾಕಾಣಿಯಷ್ಟಾದರೂ ಪ್ರೀತಿ ಪ್ರಾಪ್ತಿ ಉಳಿಯಲಿ...
ಇರುಳ ತಬ್ಬೋ ದಿಂಬಿಗೂ ನಗೆಯ ಬಿಂದಿ ಅಂಟಲಿ...
ನಾಳೆ ಅಂಬೋ ಕನಸಿಗೂ ಹುಡಿ ಅಣುಗು ಸೋಂಕು ದಾಂಟಲಿ...
#ಅನುರಾಗದಂಬುಧಿ...
↜↯↹↯↝

ಸೂರ್ಯ ತುಳಿದಾಳುವ ಹಾದಿಯ ಇಬ್ಬನಿಯ ಹನಿ ನಾನು - ಮಾತುಮೌನಗಳನೂಳಿ ದಿವ್ಯವ ಬೆಳೆದು ರಸಿಕರಾತ್ಮವ ಕಡೆವ ಕಬ್ಬಿಗರ ಸಭೆಯ ಧೂಳು...
#ನಾನೆಂದರಿಲ್ಲಿ_ಬರಿ_ಮೂಕಧಾತು...
↜↯↹↯↝

ತಾನೆಲ್ಲಿದೀನಿ ಅಂತ ತನಗೇ ತಿಳಿಯದಷ್ಟು ಬಣ್ಣ ಮಾಸಿದ, ಅಂಚುಗಳೆಲ್ಲ ಹರಿದ್ಹೋದ ಆ ಹಪ್ಪು ಹಳೇ ಫೋಟೋದ ಇಪ್ಪತ್ತೋ ಮೂವತ್ತೋ ಚಿಗುರು ಹರೆಯದ ಕಂಪನದ ಮುಖಗಳಲ್ಲಿ ತನ್ನ ಮೊದಮೊದಲ ಎಳಸು ಪ್ರೇಮವೋ, ಬಣ್ಣದ ಕಣ್ಹನಿಯ ನೆನಪೋ ಏನೋ ಒಂದು, ಎಂದೋ ತಾಕಿ ಹೋದ ಅಲೆಯ ಒಂದೊಂದೇ ಹನಿ ಹನಿ ತಿಳಿನಗುವನ್ನು ತಿಣುಕಾಡಿ ಹುಡುಕೋ ನಡು ಮುರಿದ ವಯಸಿನ ಚಶ್‌ಮಿಶ್ ಕಣ್ಣುಗಳು - ಮನಸಿನ ಬೆನ್ನ ಮೇಲೆ ಹಿನ್ನೋಟದ ಚಿನ್ನಾಟದ ಕೂಸುಮರಿ...

ಭಯಭಯದ ಬೆವೆತ ಮುಟ್ಟಿಯಿಂದ ಹಾದಿ ತುಂಬಾ ಬಿತ್ತುತ್ತಾ ಬಂದ ಬೆಲ್ಲದ ಭಾವದ ಕನಸ ಬೀಜಗಳಲ್ಲಿ ಮಣ್ಣ ತಿಂದು ಮರವಾದದ್ದೆಷ್ಟೋ, ಮಣ್ಣೇ ತಿಂದವುಗಳೆಷ್ಟೋ - ಬಿದ್ದ ಗಾಯದ ಗುರುತು ಗೆದ್ದ ಹೆಗಲಿಗೂ ಪದಕ...

ಹಲ್ಲು ಹುಟ್ಟದ ಹಾಲುಗಲ್ಲದಿಂದ ಹಲ್ಲೆಲ್ಲ ಉದುರಿದ ಬೊಚ್ಚುಗೆನ್ನೆಯವರೆಗೆ "ಹಾಯ್ದು ಬಂದ ನಿನ್ನೆಗೆ ಕಾಲವೇ ಬೇಲಿ..."
#ಕಾಲನುಕ್ಕಡದಿ_ಕಳೆದೇ_ಹೋದವರು... 


ನಾನೆಲ್ಲಿದೀನಿ...?

↜↯↹↯↝

"...... ಮತ್ತೆ ಎಲ್ಲಾ ಅಲ್ಲಿಂದಲೇ ಶುರುವಾಗುವಂತಿದ್ದಿದ್ದರೆ ಅಂತನ್ನಿಸೋ ಹೊತ್ತಿಗೇ; ಬೀಳು ಬೀಳಲು ಬಿಡದೇ ಬಿತ್ತುತಿರು ಎದೆ ಗದ್ದೆಯಲಿ ಮುಟಿಗೆ ಪ್ರೀತಿ ಬೀಜವ ಈ ಮುಂದೆಯೂ ಎಲ್ಲ ಚೆಂದವೇ ಇದೆ ಮರುಳೇ ಅಂತಂದು ಹೆಗಲ ತಬ್ಬುತ್ತದೆ ಬದುಕು..."

ಒಂದು ಸಣ್ಣ ಸಂತಸ:
ಬ್ಲಾಗ್ ಎಂಬೋ ನಂದ್‌ನಂದೇ ಅನ್ನುವ ನನ್ನ ಈ ಹುಚ್ಚುಚ್ಚು ಅಕ್ಷರ ಜಾಲ ತೇಕುತ್ತಾ, ತೆವಳುತ್ತಾ, ತಡವರಿಸುತ್ತಾ ಅದು ಹೇಗೋ ಒಂಭತ್ತು ವರುಷಗಳ ದಾಟಿ ಹತ್ತನೇ ವಸಂತಕ್ಕೆ ಹಾಯುತ್ತಿದೆ - ನಾನೇ ಬೆಚ್ಚುವ ಹಾಗೆ...
ಮುರಿದ ಸಂಸಾರದ ವಾರಸುದಾರನ ಬಾಯಲ್ಲಿ ಪ್ರೇಮಮಯೀ ಲೋಕದ ಭಾಷಣ ಓತಪ್ರೋತ...

ಗಹನ ಓದಾಗಲೀ, ಸಾಹಿತ್ಯದ ಗಂಧ ಸಾಂಗತ್ಯದ ಕಸುವಾಗಲೀ, ಗಟ್ಟಿ ನಡೆಯುವ ಯಾವ ತಯಾರಿಯಾಗಲೀ ಇಲ್ಲದ - ವ್ಯಾಕರಣದ ಗುಣ, ಮಾತ್ರೆ, ಪ್ರಾಸ, ತ್ರಾಸಗಳ ಒಡ್ಡೋಲಗದ ಕಿಂಚಿದ್ ಅರಿವೂ ಇಲ್ಲದೇ ಕೇವಲ ಭಾವಾನುಭಾವದ ಸ್ಪಂದನೆಯನಷ್ಟೇ ನಂಬಿ ಅಕ್ಷರಗಳ ಹೆಣೆಯುತ್ತ ಬಂದವನ ಬಡಬಡಿಕೆಗಳನೂ ಅರ್ಹತೆಗೆ ಮೀರಿದ ಪ್ರೀತಿ ತೋರಿ ಓದಿಕೊಂಡವರು ನೀವುಗಳು...

ಕರುಳು ಕಲಮಲಿಸಿ ಕಣ್ಣು ತೋಯ್ದಾಗಲೆಲ್ಲ ಕೈನೀಡಿದ್ದು ನೇಹಗಳು - ಎದೆಯ ಕಿಬ್ಬಿಯ ಬೇಗೆಯ ಹೆಣಭಾರವ ಇಳುಕಿ ಹಗುರಾಗಿಸುತಿರುವುದು ಅಕ್ಷರ... 
#ಸೋಲಗೊಡದ_ಬೆನ್ನಿನಾಸರೆ...   

ಈ ಪಯಣವ ನಚ್ಚಗಿಟ್ಟ ನಗುವೇನಿದ್ದರೂ ಅದು ನೀವುಗಳಿಟ್ಟ ಪ್ರೀತಿ ತುತ್ತು...
ದೈವ ಮುನಿದಾಗಲೂ ಕಾಯ್ದ ಪ್ರತಿ ಜೀವಾಭಾವಗಳ ಮುಚ್ಚಟೆಯ ಅಕ್ಕರೆಗೂ ಆಭಾರಿ...
ಪ್ರೀತಿ ಕಾಯುತ್ತದೆ, ಕಾಯಲಿ ಸದಾ...
ಧನ್ಯವಾದ... ಲವ್ಯೂ ಆಲ್... 💞💞

No comments:

Post a Comment