Monday, June 1, 2020

ಗೊಂಚಲು - ಮುನ್ನೂರ್ಮೂವತ್ತೈದು.....

ಸೀರೆಗಣ್ಣು - ಸೀರೆ ಮತ್ತು ಕಣ್ಣು.....  
(ಅವಳು ಹೇಳಿದ ಸೀರೆ ವೃತ್ತಾಂತ...)

ಸುಮ್ನೇ ಕೇಳ್ತೀನಿ - ಸೀರೆ ಅಂದ್ರೆ ಯಾಕೆ ಅಷ್ಟೊಂದಿಷ್ಟ...?
ಮಂಗ್ಯಾss - ಸೀರೆ ಅಂದ್ರೆ ಬರೀ ಬಟ್ಟೆ ಅನ್ಸಲ್ಲ; ಅದು ಹುಡುಗಿಯನು ಹೆಣ್ಣಾಗಿಸಿದ ಭಾವಗುಚ್ಛ...
ಕುಚ್ಚು ಕಟ್ಟಿದ್ದು ಸೀರೆಗಾ ಇಲ್ಲಾ ಕನಸಿಗಾ ಅನಿಸುವ ಬೆಚ್ಚಾನೆ ಮೋದ ಅಂತಂದ್ಲು ಒಂದೇ ಉಸಿರಿಗೆ...
ಕೊಂಡು ತಂದಲ್ಲಿಂದ ಹಳತಾಯ್ತೆಂದು ಬದಿಗಿಟ್ಟ ಕಾಲದ ನಂತರವೂ ಸೀರೆಯದ್ದು ಹೆಣ್ಣೆದೆಯಲಿ ಶ್ರೀಮಂತ ಹಾದಿ ಗೊತ್ತಾ ಅಂದು ಸೆರಗನು ನಡುವಿಗೆ ಸಿಕ್ಕಿಸಿಕೊಂಡು ಕೂತಳು...
ಮಡಿಲು ಅಂದಾಗಲೆಲ್ಲ ಬಿಸುಪಾಗಿ ಸೀರೆಯೇ ಕಣ್ಣ ಮುಂದೆ ಅಂದಿದ್ದನ್ನು ಬೇಶರತ್ ಒಪ್ಪಿಕೊಂಡೆ...
ಸೆರಗು ಅಂದ್ರೆ ಆ ತುಂಟ ನೆನ್ಪಾಗ್ತಾನೆ ಅನ್ನುತ್ತಾ ತೆಳ್ಳಗೆ ಬೆವರಿದ ನೊಸಲ ತೀಡಿಕೊಂಡಳು; 'ಗೋಪಿಯ ಸೆರಗಿನಂಚಲಿ ಕೊಳಲ ಕಣ್ಣೊರೆಸಿ ಉಸಿರೂಡಿದವನ ಮೋಹರಾಗದಲಿ ಕಣ್ಣು ತೂಗುತ್ತಾ ಗೋಕುಲವು ಅಮೃತವ ಕಡೆದು ಬೆಣ್ಣೆ ತೇಲಿಸಿದ ಕಥೆ ಎಷ್ಟು ಚಂದ' ಎನ್ನುವಾಗಿನ ಮಳ್ಳ ನಾಚಿಕೆಯಲಿ ಹೊಳೆವ ಕಂಗಳಲಿ ಅಡಗಿರುವ ಹಳೇ ಬೀದಿಯ ಕಳ್ಳ ಕರಿಯನ ಕುರುಹಿಗೆ ಹೆಸರು ಹುಡುಕಿ ಸೋತೆ...

ಯಾವುದೋ ಹಾದಿಯಲಿ ಎನ್ನ ಕಣ್ಣು ಕಟ್ಟಿದ ಸೆರಗಿನಂಚಿನ ಜಾಡು ಹಿಡಿದು ಎದೆಯ ಅಂತಃಪುರದ ಬಾಗಿಲು ಕಾಯ್ದ ಹಳೆಯ ಕಥೆ ನೆನಪಾಗಿ ತಡವರಿಸುವ ಕಣ್ಮಿಟುಕಿಸಿ ಅಂದೆ: ಸೀರೆ, ಹೂಂ - ಪಟ್ಟಿ ಮಾಡಿ ಎಲ್ಲಾ ಮುಚ್ಚಿಟ್ಟೂ ನೋಡುಗನೆದೆಯಲಿ ಬಹುವಾಗಿ ಬೆವರಿಳಿಸುವುದಂತೂ ದಿಟ...
ಗಲಗಲಿಸಿ ನಕ್ಕಳು, ಸೀರೆಯ ಎದೆ ಬೀಗಿದಂತೆನಿಸಿತು; ಸೀರೆಗಂಟಿ ಅರಳಿದ ಕಂಗಳದ್ದೇ ಮಜವಾದ ಕಥೆ ಅಂತಂದು ಮಾತಾದಳು - ತೆರೆದ ಕಿವಿಯಾದೆ...

ಓತಪ್ರೋತ ಜೋಡಿಸಿಟ್ಟ ಅವಳ ಸೀರೆ, ಹಂಗೇ ಸೀರೆಗಾತುಕೊಂಡ ಕಂಗಳ ಮಾತು:
ಗೊಂಬೆಗೆ ಸೀರೆಯುಡಿಸಿದ ಬೆರಳ ಕೌಶಲ್ಯಕೆ ಮೆಚ್ಚುಗೆ ಪತ್ರ - ಸೀರೆಯಂಗಡಿಯ ಕಣ್ಣಿಲ್ಲದ ಬೊಂಬೆಯುಟ್ಟ ಸೀರೆ ಮಡತೆಗಳ ಮೇಲೆ ಇವಳ ಕಣ್ಣು...
ಮನಕೊಪ್ಪಿದ ಸೀರೆಯ ಸೊಬಗಿನ ಬಗ್ಗೆ ಮನಮೆಚ್ಚುವಂತೆ ತಿರುವಿ, ಹರವಿ ಮಾತಾಡೋ ಮಾರುವಾತನ ಲಾಭದಾಸೆಯ ಕಣ್ಣು...
ಬಣ್ಣಕೆ, ಅದಕೊಪ್ಪುವ ಬಣ್ಣದ ರವಿಕೆ ಖಣಕೆ, ಅಂಚಿನ ಹಾಗೂ ಸೆರಗಿನ ಚಿತ್ತಾರಕೆ, ಬೆರಳಿಗಂಟಿದ ಹಿತ ಸ್ಪರ್ಶಕೆ ಮಾರುಹೋಗುವ ಹೆಂಗಣ್ಣು...
ಸೀರೆ ಕುಪ್ಪಸಗಳ ನಡುವಿನ ನುಂಪು ಇಳಿಜಾರು ಹೊಳೆಯ ಈಸುವಾಸೆಯ ಬೆನ್ನಿಗಂಟಿದ ಗಂಡು ಕಣ್ಣು...
ಹೊಕ್ಕುಳ ಸುಳಿ ದಾಟಿ ಉದ್ದುದ್ದ ಬಿಳಲು ಬಿದ್ದ ಅಲೆಅಲೆ ನೆರಿಗೆಗಳ ಸೀಳುವ ಬಾವಲಿ ಕಣ್ಣು...
ತುಂಬು ಎದೆ ಗುಂಭಗಳ ಬಳಸಿ ಛಾವಣಿಯಾದ ಸೆರಗ ತುದಿಗೆ ಜೀಕೋ ಅವನ ಮತ್ಸರದ ಬಿಸಿಯ ಉರಿಗಣ್ಣು...
ಯಾವ ಎಳೆಯ ಸೆಳೆದರೆ ಯಾವ ಸುಳಿ ಬಯಲ ಸಂಗಕೆ ಬಿದ್ದೀತೆಂದು ಒಳಗೇ ಮಂಡಿಗೆ ಬೇಯಿಸೋ ಮನದನ್ನನ ಆಶೆಬುರುಕ ಮತ್ತ ಕಣ್ಣು...
ಸೀರೆಯ ನವಿಲು, ಚಿಟ್ಟೆ, ಚುಕ್ಕಿಗಳೆಲ್ಲ ಗೆಜ್ಜೆ ಕಟ್ಟಿ ಕುಣಿದಂಗೆ ಅವನ ಉನ್ಮತ್ತ ಬೆರಗುಗಣ್ಣು...
ಅಂದವ ಮೆಚ್ಚಲು ಅಸೂಯೆ ಕಾಡುವಾಗ ಸೀರೆಯನು 'ಸುಮಾssರು' ಅನ್ನುವ ಸಾಟಿಯವಳ ಹೊಟ್ಟೆಕಿಚ್ಚಿನ ಸಣ್ಣ ಕಣ್ಣು...
ಹಳೆ ಸೀರೆ ಜೋಲಿಯಲಿ ಕೇಕೆಯಾಗುವ, ಅಲ್ಲೇ ದೇವನಿದ್ದೆಯಾಳುವ ಬಾಲ ಗೋಪಗೋಪಿಯರ ಮುಗ್ಧ ಕಣ್ಣು...
ಅವಳುಡುವ ಸೊಬಗನು ಆದಿಯಿಂದ ತುಂಬಿಕೊಂಡು ಅವಳ ಅವಳಿಗೇ ತೋರಿ ಬಿಂಕದ ನಾಚಿಕೆಯ ನೆಟಿಗೆ ಮುರಿಯೋ ಅವಳಂತಃಪುರದ ಕನ್ನಡಿಯ ಬಿಂಬಗಣ್ಣು...
ಮುಚ್ಚಿಡುವ ನೆಪದಲಿ ಸೆರಗ ಸರಿಮಾಡಿಕೊಂಬವಳ ಪರಚುಗಣ್ಣು - ಎಡೆಯಿಂದ ಇಣುಕೋ ಯೌವನ ಫಲ ಸಮೃದ್ಧಿಗೆ ರುದಯ ಬಡಿತ ಏರಿ ಚಡಪಡಿಸೋ ಅವನ ಹದ್ದುಗಣ್ಣು...
ತುಂಟ ಗಾಳಿ, ಮರುಳು ಸೆರಗು, ಹೊಕ್ಕುಳ ತೀರ, ಭುಜದ ತಿರುವಿನ ಭವ್ಯ ಮಾಟ, ಸೆರಗ ಪಟ್ಟಿ ಆಳ ಸುಳಿಯಲಿ ಉಸಿರು ಸಿಕ್ಕಿಕೊಂಡ ಹಪಾಪೋಲಿ ಕಣ್ಣು...
ಸೀರೆ ಸೀಮೆಯ ಈ ಅಂದ, ಬೆಡಗು, ಬಿನ್ನಾಣ ಎಲ್ಲ ಎಲ್ಲಾ ತಂದೆಂದು ಬೀಗಿ ಗತ್ತಿನಲಿ ನಡೆವ ಅವಳವನ ಸೊಕ್ಕಿನ ಬೆಕ್ಕುಗಣ್ಣು...
ಹೆಣ್ಗಮವ ತಬ್ಬಿ, ಸಂತೆಯಲೂ ಅವಳ ಹಬ್ಬಿದ ತನ್ನ ಸಮನಾರೆಂದು ಅವಳ ಹೆಜ್ಜೆಯೊಂದಿಗೆ ಚಿಮ್ಮಿ ನಲಿಯುವ ಸೀರೆ ನೆರಿಗೆಗಳ ಮೈತುಂಬಾ ನವಿಲ ಬಣ್ಣದ ಕಣ್ಣು...
ಅವಳಂದವ ಗುಣಿಸಿ, ಅವನ ಮತ್ಸರವ ದಣಿಸಿ, ಅವರ ಏಕಾಂತ ಪ್ರೇಮ ಪಾರಾಯಣದಲಿ ತಾನೇ ನುರಿ ನುರಿ ದಣಿದು ಚದುರಿ ಸಜ್ಜೆಮನೆಯ ಅನಾಮಿಕ ಅಂಚಲ್ಲಿ ಮುದುರಿ ಕೂತು ಅರೆಬರೆ ಎವೆ ಮುಚ್ಚಿದ ಜರಿಯಂಚ ಸೀರೆಯ ಕಳ್ಳ ಕಣ್ಣು...
ಸೀರೆಯ ಅವಸ್ಥೆಗೆ ಗುಂಬನದ ನಗೆ ಬೀರಿ, ಮುಂದಿನ ಕಥೆಯ ಅವರೀರ್ವರ ಉನ್ಮಾದಕೆ ಸಿಕ್ಕಿ ಗಾಯಗೊಂಡ ಕುಪ್ಪಸವ ಕೇಳಿ ಅಂತಂದು ಮೆಲ್ಲನೆ ಆರಿದ ಕೋಣೆ ದೀಪದ ಬತ್ತಿದ ಕಣ್ಣು...
ಅವಳ ಬೆತ್ತಾಲೆ ಚೆಲುವಿನ ಬೆಳಕೇ ಕಣ್ಕುಕ್ಕುವಾಗ ಹೊರಗಣ ಬೆಳಕಿನ್ಯಾಕೆ ಅನ್ನುತ್ತಾ ಸೀರೆ ಮುಚ್ಚಿಟ್ಟ ಅವಳಂಗಾಂದಕೆ ತೋಳ್ದೆರೆದವನ ಅಮಲುಗಣ್ಣು...
ರವಿಕೆ ಗಾಯವ, ಮೈಯ್ಯ ಹೂಳಿದ ಸುಖದ ಗಾಯಗಳೊಡನೆ ತುಲನೆ ಮಾಡಿ ಅವನ ಒರಟು ಬೆರಳುಗಳ ಹಿತಾಘಾತವ ನೆನೆಯುತ್ತಾ ಬೆಚ್ಚಗೆ ನಕ್ಕು ಸುಕ್ಕಾದ ಸೀರೆಯ ಮೃದುವಾಗಿ ಸವರಿ ಮಡಚಿಟ್ಟವಳ ಹಿಂಗದ ಹಸಿವು, ಉಂಡಷ್ಟೂ ರುಚಿಯೆನುವ ಮರು ಹಗಲಿನ ಉಲ್ಲಾಸದ ನಾಭಿ ಕಣ್ಣು...
ಅವನು ಉಸಿರೂಡಿ ಹೋದ ಅವಳೀಗ ಕೊಳಲು - ಅವಳ ಬೆವರು ಸವರಿದ ಅವನೀಗ ನವಿಲ್ಗರಿಯ ಚವರಿ; ಅಂತೆಲ್ಲಾ ಮೋಹಾ ಮಾಯದ ಆಟಕೆ ನೆರವಾದ ಸೀರೆ ಈಗ ತನಗಂಟಿದ ಅವಳ ಬೆವರ ಘಮವ ಆಘ್ರಾಣಿಸುತ್ತಾ ಅವಳ ಸಂದೂಕದಲಿ ಒಪ್ಪವಾಗಿ ಕುಂತು ಸುಖದ ಬೇಗೆಯ ಕಥೆ ಹೇಳುತಿದೆ...

ಅವಳೋ ಪೆಟಾರಿ ತೆರೆದಾಗಲೆಲ್ಲ ಒಂದೊಂದನೇ ಮುಟ್ಟಿ ನೋಡಿ ನೆನಹುಗಳ ನೆಳಲ ಕೆನ್ನೆ ಸವರುತ್ತಾಳೆ:
ಮೊದಲಾಗಿ ಅಮ್ಮ ಉಡಿಸಿದ ಕಂಬಿ ಸೀರೆ - ಆಯಿ ಉಡುತಿದ್ದ ಅಮ್ಮನ ಘಮದ ಸೀರೆ ಬೇರೆಯೇ ಇದೆ...
ಮನೆ ಅಂಗಳದಲ್ಲೇ ಅಪ್ಪ ಕೊಡಿಸಿದ ಪತ್ತಲ ಸೀರೆ...
ಗೆಳತಿಯೊಂದಿಗೆ ತಾನೇ ಕೊಂಡ ಕಪ್ಪಂಚಿನ ಬಿಳಿ ಸೀರೆ...
ಮೊದಲ ದಿನ ಅವನು ನೆರಿಗೆ ಕೆಡಿಸಿದ ಧಾರೆ ಮಂಗಲ ಸೀರೆ...
ಬಸಿರ ಬಯಕೆಯಲ್ಲಿ ಪ್ರೇಮದ ಫಲವಂತಿಕೆಗೆ ಉಡಿ ತುಂಬಿ ಹಾರೈಸಿದ ಗಿಣಿ ಹಸಿರು ಸೀರೆ...
ಹಸುಗೂಸಿಗೆ ಹಾಸಿಗೆಯಾಗಿಸಲು ಅಜ್ಜಿ ಹರಿದು ಪೆಂಡೆಯಾಗಿಸಿಟ್ಟ ಬಾಣಂತಿ ಸೀರೆ...
ಗಳಿಗೆ ಮುರಿಯದ ಹೊಸ ಸೀರೆಯ ಹೊಸ ಘಮ - ಹಳತಾಗುವ ಹೊತ್ತಿಗೆ ಅದಕಂಟಿ ಅವನ ಮೀಂಟುವ ತನ್ನದೇ ಕಂಪು...
ಕನಸಿನಂತ ನೆನಪುಗಳು ಹನಿ ತುಳುಕಿಸುವ ಅವಳ ಕಡುಗಪ್ಪು ಕಣ್ಣೀಗ ಬದುಕ ಚೆಲುವನು ಹರವಿಕೊಂಡ ಅವ್ಯಕ್ತ ಖುಷಿಯು ಮೈನೆರೆದ ಚಿತ್ರಶಾಲೆ...
#ಸೀರೆಯೆಂಬ_ಅವಳ_ಶಾಯರಿ...

No comments:

Post a Comment