Sunday, June 7, 2020

ಗೊಂಚಲು - ಮುನ್ನೂರ್ಮೂವತ್ತೇಳು.....

ಸನ್ನಿಧಾನ.....

ಅನ್ನ ಕಲೆಸಿ ತುತ್ತನಿಟ್ಟು - ಊಟ ಚೆಲ್ಲಿದಾಗ ಪೆಟ್ಟು ಕೊಟ್ಟು - ಹೆಳವನ ಕಣ್ಣಲ್ಲೂ ರಾಜಕುಮಾರನ ಕನಸ ನೆಟ್ಟು - ಕಡಗೋಲಲಿ ಬದುಕ ಕಡೆಯುತಾಳೆ...
ನಾ ಸೋತು ಮಂಡಿಯೂರಿದಾಗಲೆಲ್ಲ ಭರವಸೆಯ ಹೊಸ ಲಾಲಿ ಕಟ್ಟುವವಳು - ಕರುಳ ಬಳ್ಳಿಯ ಹಿಳ್ಳು ನಾ ಹಸಿವೂ ಅಂದ್ರೆ ತಾ ಸೋತಂತೆ ಕಣ್ತುಂಬಿ ಕನಲುವಳು; "ಉದರದಲ್ಲಿ ರುದಯ ಸಾಕಿಕೊಂಡವಳು..."
ಬೆವರು ಅನ್ನವಾಗುವ ಕಥೆಯಲ್ಲಿ ಬದುಕಿನ ಗೆಲುವಿನ ನಂಬಿಕೆ ಮಡಗಿದವಳು - ಸೆರಗಿನಲ್ಲಿ ಕಣ್ಹನಿಯ ಸಾಗರವ ಬಂಧಿಸಿಟ್ಟವಳು - ಈ ಬದುಕಿಗಿರುವ ಮೊದಲ ಹಾಗೂ ಕೊನೇಯ ಏಕಮಾತ್ರ ಉದ್ದೇಶ ಅವಳು...
#ಆಯಿ...

"ಕಂದನ ಹಸಿವನು ನೆನೆದು ಗೊಲ್ಲತಿ ಕೋಟೆಯ ಹಾರಿದ ಸಾಹಸಗಾಥೆ - ಹಡೆದಬ್ಬೆಯ ಕರುಳ ಕಥೆ..."
#ಎದೆಹಾಲಿನ_ಪದ...

ಬದುಕು ಕೈಸೋತು ಕಣ್ಣ ಮಳೆ ಮಣ್ಣ ಸೇರುವಂತಾದಾಗಲೆಲ್ಲ ಬೊಗಸೆ ಕಾರುಣ್ಯದ ಮಡಿಲ ಹರವಿ ರಟ್ಟೆಗೆ ಮತ್ತೆ ಮತ್ತೆ ನಗುವ ಬಲ ತುಂಬೋ ವಿನಾಕಾರಣದ ಮಮತೆಯ ಸಾಟಿ ಮನಸುಗಳೂ ಅಮ್ಮನದೇ ಪಡಿಯಚ್ಚು...
#ಪ್ರೀತಿ_ಜಗದಬ್ಬೆ...

"ಯಶೋಧೆ ಊಡಿದ ಅಮೃತ ಲೋಕದ ವಿಷವ ತೊಳೆದ ಕಥೆ - ಕೃಷ್ಣ..."
#ಬೆಣ್ಣೆ_ತೇಲಿದ_ಹದ...

ಜಗದೆಲ್ಲ ದೇವಕಿ, ಯಶೋಧೆಯರಿಗೆ ಕೆನ್ನೆಗೆ ಕೆನ್ನೆ ತಾಕಿಸಿ ಮನವ ತಟ್ಟಿ ತಟ್ಟಿ ಮಾಡಿ ಹೇಳಬೇಕಿದೆ ನಾನು - ಪ್ರತಿ ದಿನವೂ ನಿಮ್ಮದೇ, ನಿಮಗೆ ನನ್ನದೂ ಚೂರು ಪ್ರೀತಿ ಪ್ರೀತಿ ಮತ್ತು ಪ್ರೀತಿ ಅಷ್ಟೇ...
↺⇋⇈⇌↻

ನೀನಲ್ಲಿ ಅಳು ನುಂಗಿ ನಕ್ಕಾಗಲೆಲ್ಲ ನಾನಿಲ್ಲಿ ಇಷ್ಟಿಷ್ಟೇ ಕೊಳೆಯುತ್ತೇನೆ - ಆದರೂ, ತಲೆಗೇರಿದ ಬದುಕಿನ ನಶೆಯಲ್ಲಿ ನಿನ್ನಿಂದ ಇನ್ನಷ್ಟು ದೂರ ನಿಲ್ಲುತ್ತೇನೆ - ಮತ್ತು ಒಳಗಿನ ಸ್ವಾರ್ಥಕ್ಕೆ ಕಾಲನ ಹೆಸರಿಟ್ಟು ಕೈತೊಳೆದುಕೊಳ್ತೇನೆ - ಸಾವಿನ ಛತ್ರದಡಿಯಲಿ ಎಲ್ಲವೂ ಒಂದಿನ ಮುಗಿಯುತ್ತದೆ, ಮುಗಿಯಲೇಬೇಕು ಎಂಬ ರಣ ವೇದಾಂತ ಇಬ್ಬರನೂ ಕಾಯುತ್ತದೆ - ಹಾಗೇ ಇದೆಲ್ಲ ನಾಳೆಗೂ ಮುಂದುವರಿಯುತ್ತದೆ ಇಂದಿನಂತೆ...
ಒಣ ಒಣ ನಗೆಯೊಂದನು ಸಾಕಲು ಅಪರಂಪಾರ ಗುದ್ದಾಟ - ನೀನಲ್ಲಿ, ನಾನಿಲ್ಲಿ...
ಸಜೀವ ಶ್ರದ್ಧಾಂಜಲಿ...
ಗೊತ್ತು, ನಾಳೆಯೆಂಬೋದು ಕನಸು - ಆದರೂ ನಿನ್ನೆಯು ಇಂದನ್ನು ಕಂಡ ಧೈರ್ಯದಲಿ ನಿದ್ದೆಗೆ ಕರೆಯುತ್ತೆ ಮನಸು - ಅಪರಾತ್ರೀಲಿ ಆ ನಾಳಿನ ಸ್ವಪ್ನಕೆ ಬೆಚ್ಚಿ ಎಚ್ಚರಾದರೆ ಮತ್ತೆ ನಿನ್ನನೇ ನೆನೆಯುತ್ತೇನೆ - ಕಾರಣ, ನಿನ್ನ ಅಳು ನುಂಗಿದ ನಗುವಿದೆಯಲ್ಲ ಅದರಲ್ಲಿ ರಕ್ಕಸ ಬಲವಿದೆ ಉಳಿದ ಬದುಕಿನದು...
ಉಸಿರ ಭಾರದ ಭರವಸೆ...
#ವಿಪರೀತಗಳು...
⇋⇈⇌↻

ಮನವು ಹದಗೆಟ್ಟು ಹರತಾಳಕೆ ಕುಂತಾಗಲೂ, ಖುಷಿಯು ಕುಪ್ಪಳಿಸಿ ಕುಣಿದಾಡುವಾಗಲೂ ನನ್ನ ನಾ ಸಂಭಾಳಿಸಿಕೊಳ್ಳಲು ಏಕಾಂತವೆಂಬೋದು ದಿವ್ಯ ಸನ್ನಿಧಿ...
ಮತ್ತು
ನನ್ನ ಏಕಾಂತವೆಂದರೆ ನೀ ಕುಚ್ಚು ತಟ್ಟುವ ಲಾಲಿಯ ಗುಂಜಾರವದ ಅನುಭಾವ ಸಿದ್ಧಿ...
#ಸನ್ನಿಧಾನ...

ನಿನ್ನೆಗಳ ಹಳಿಯಬೇಡಿ - ಅದು ಅವಳಿದ್ದ ಹಾದಿ...
ಆ ನೆನಪ ಜೀವಂತ ಚಿತ್ರಗಳನೆಲ್ಲ ಎದೆ ಗೋಡೆಗೆ ಅಂಟಿಸಿಕೊಂಡು ಅಲ್ಲೇ ಎದುರು ಕೂತು ಕಳೆದೋಗಿದ್ದೇನೆ...
ದಯವಿಟ್ಟು ಹುಡುಕಬೇಡಿ ನಾ ಅವಳ ಮಡಿಲಲ್ಲಿದ್ದೇನೆ...
#ನೆನಪು_ಬೆಚ್ಚಾನೆ_ಬೆಳಕು...
#ಅವಳೆಂದರೆ_ಹಾಯ್ದುಬಂದ_ತಂಪುಹಾದಿ...
⇋⇈⇌↻

ದ್ಯಾವ್ ಭಟ್ರ ಪಂಚಾಂಗದಲ್ಲಿ ಮುಹೂರ್ತವೇ ಇಲ್ಲ...
ಇನ್ನು ಒಕ್ಕಣ್ಣ ಶುಕ್ರಾಚಾರಿ ಶುಭ ನುಡಿದರೆ ರಕ್ಕಸ ಗಣಗಳು ಮೆರೀತಾವೆ...
ಒಟ್ನಲ್ಲಿ ನಿನ್ನ ಸೇರುವ ಹಂಬಲಿನ ಹಾದಿಯಲಿ ಅಂಬಲಿಗೂ ತತ್ವಾರ ಎಂಬ ಸ್ಥಿತಿ...
ಸಾಗರನ ಕನಸುವ ಕಾನನದ ಒರತೆಯ ಹಿಳ್ಳುಗಳಿಗೆ ಗ್ರೀಷ್ಮದಲೂ ಉಕ್ಕುವ ಬಲ ಬೇಕು...
ಹೆಳವ ನಾನು, ಕೂತಲ್ಲೇ ನಿನ್ನ ಕನವರಿಸುತ್ತೇನೆ; ಮತ್ತದನು ಕನಸೂ ಅಂತ ಕರೀತೇನೆ...
ಅನಾಥ ಪ್ರೇತವೊಂದು ಇರುಳ ಉದ್ದ ಅಳೆಯುವಂತೆ ನಿನ್ನ ಕನವರಿಸೋ ನನ್ನ ಕನಸು...
#ಬರಗೆಟ್ಟ_ಬದುಕಿಗೆ_ಮೌನ_ಸದ್ಗತಿ...
⇋⇈⇌↻

ಸಂಜೆ ಮಳೆ ಸಣ್ಣಗೆ ನೆಲದ ಬಾಗಿಲು ಬಡೀತಿದೆ - ಮನಮನೆಯ ಕಿಡಕಿಗೆ ನೆನಪುಗಳ ಶಿಗ್ರಣಿ ಹೊಡೀತಿದೆ...
ಇಂದು ನಾಳೆಗಳಲ್ಲಿ ನೀನಿಲ್ಲದ ಭಾರಕ್ಕೆ ಭಾವದ ಹೆಗಲು ಕುಸಿಯುವಾಗ ಎದೆ ವಾಡೆಯ ಕಿಬ್ಬಿಯಲಿ ಕಣ್ಣ ಹನಿ ಕಾಲ್ಚಾಚಿ ಕೂರುತ್ತದೆ...
ಶರಧಿಯ ಬಯಲಲ್ಲಿ ಕಳೆದೋದ ಹಾಯಿಲ್ಲದ ದೋಣಿಯ ದಡದಾಸೆಗೆ ನಕ್ಷತ್ರವೇ ತುಸು ಭರವಸೆ...
ಇಲ್ಲಿಂದ ಎದ್ದು ಹೋದ ಎದೆಯ ಪ್ರೀತಿ ಕಿಡಿಗಳೆಲ್ಲ ನಕ್ಷತ್ರವೇ ಆಗುವುದಂತೆ - ಅಮ್ಮ ಹೇಳಿದ್ದು...
ಮಳೆ ನಿಂತ ಆಗಸವ ತಲೆ ಎತ್ತಿ ನೋಡಿದ್ರೆ ಎಷ್ಟೆಲ್ಲಾ ಜನ...!!!
ಕವಳಾ ಜಗಿಯವ್ವು, ಕಂಬ್ಳಿ ಕರೆ ಕಟ್ಟವ್ವು, ತುಂಬು ಮುಡಿ ಕಟ್ಟತಾ ರಾಮಾ ಶಿವಾ ಹೇಳವ್ವು...
ಗಗನದ ಅಸೀಮ ನೀಲಿಯ ಫಳಫಳ ಅಲಂಕಾರ ದೀಪಗಳು - ಇಲ್ಲಿನಂತೆಯೇ ಅಲ್ಲೂ ಹೊಳೆವ, ಕಣ್ಣು ಹಾಯದ ದೂರ ಸಾಗಿಯೂ ಎದೆಯ ಬೆಸಗೊಂಡು ಬಲ ತುಂಬೋ ಮಾಯಕಾರರು...
ಕನಸೇ -
ನೀನು ನಕ್ಷತ್ರವಾಗಿ ದಿನವೆಷ್ಟಾಯಿತೋ - ಲೆಕ್ಕ ತಪ್ಪಿದ್ದೇನೆ ಮತ್ತು ಬೇಕಂತಲೇ ಲೆಕ್ಕ ಮರೆಯುತ್ತೇನೆ...
ಸಾವೇ -
ನೀ ಆಡಿ ಕಳೆಗಟ್ಟಿಸಿ ಕಳಚಿಕೊಂಡು ಹೋದ ಪಾತ್ರಗಳೆಲ್ಲ ಈಗಿಲ್ಲಿ ಈ ಎದೆಯ ಹೊಳೆಯಲ್ಲಿ ಭಾವದ ಮೀನುಗಳಾಗಿ ಈಜಿ ಈಜಿ...
ಉಫ್,
"ನೆನಪು ಒಂದೇ ಪೆಟ್ಟಿಗೆ ಹಿತ ಹಾಗೂ ಸಂಕಟ..."
#ಪ್ರೀತಿ...
⇋⇈⇌↻

ಅಪರಂಪಾರ ಮಳೆಯಲ್ಲಿ ನೆಂದು ಬಂದಾಗಲೆಲ್ಲಾ ತಲೆ ಒರೆಸಲು ನೀನಿಲ್ಲ ಅಂಬುದು ಮಳೆಯ ಖುಷಿಯೆಲ್ಲ ಮಳೆಯಲೇ ತೇಲಿಹೋದಂತೆ ಎದೆಯಲೊಂದು ಪ್ರೇತಕಳೆ ತುಂಬುತ್ತೆ...
#ಮಳೆಯಲ್ಲಿ_ಕಣ್ಣು_ತೊಳೆದುಕೊಂಬುವವನ_ಅನಾಥ_ಕಥೆ...
⇋⇈⇌↻

ಸಣ್ಣವರನು ದೊಡ್ಡವರಾಗಿ ಪರಿಚಯಿಸಿ ಹರಡುವ ನಗೆ - ದೊಡ್ಡವರು ದೊಡ್ಡವರಾಗಿ ಬೆಳೆದು ನಿಲ್ಲುವ ಬಗೆಯೇ ಹಾಗೆ...
#ಪ್ರೀತಿಯಲ್ಲಿ_ಹಿರೀಕರು...

ಹಂಚಿಕೊಂಡದ್ದಷ್ಟೇ ನನ್ನ ಆಸ್ತಿ...
#ಪ್ರೀತಿ...

ನಗೆಯು ಆತ್ಮವ ತಾಕುವ ಬಲು ಚಂದಾನೆ ಬೆರಗು...
#ಬೆಸುಗೆ...

"ಕನ್ನಡವೆಂದರೆ ಎನಗೆ ಎನ್ನೆದೆಯ ನಗುವಿನ ಭಾಷೆ - ಆಯಿಯ ಸೆರಗಿನ ಘಮದ ನೆನಪು ಲಾಲಿಯಾಗುವ ಭಾಷೆ - ಅವಳೆಂಬ ಅವಳ ಕನಸೂ ಮಾತಾಗುವ ಭಾಷೆ..."

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment