Sunday, June 7, 2020

ಗೊಂಚಲು - ಮುನ್ನೂರ್ಮೂವತ್ತೆಂಟು.....

ನೀನೊಂದು ನಗೆಯ ನಶೆ.....

ಬೇಸಿಗೆಯಂಚಿನ ಮಳೆಯಂಥ ಚಂಚಲೇ -
ನಾಭಿಯಿಂದ ಉಕ್ಕಿ ಬಂದ ಬಿಸಿಯುಸಿರು ಒಂಟೊಂಟಿ ಹೊರಳುವ ಪ್ರತಿ ಆವರ್ತಕೂ ನನ್ನ ಒರಟು ಬೆನ್ನ ಮೇಲೆ ನಿನ್ನ ಉಗುರಿನ ಉನ್ಮಾದದ ಒಂದಾದರೂ ಸ್ಪಷ್ಟ ಗುರುತು ಉಳಿಯದೇ ಬದುಕೇ ಮುಗಿದು ಹೋದರೆ ಅಂತ ದಿಗಿಲು ತುಂಬ್ತದೆ...
ಸಿಡಿಸಿಡಿ ಮುನಿಸಿನಂತ ಆಡ್ಮಳೆಯ ಹಾದಿಯಲ್ಲಾದರೂ ಸಿಗಬಾರದೇ - ಮಣ್ಣ ಘಮ, ಸುಖದ ಕಂಪು ಕೂಡಿಯಾಡಲಿ...
ಮುಂಗಾರಿನ ಕನಸಿನ ಹಾದಿಯ ಸಂಜೆಗಳಲಿ ಹಿಡಿಯಷ್ಟು ಕಳ್ಳ ಪ್ರೇಮ ಮುಡಿ ಬಿಚ್ಚಿ ವಿರಹವ ಸುಡುವ ಮಧುರ ಪಾಪಕೆ ಪ್ರಕೃತಿ ನ್ಯಾಯದಲಿ ಮಾಫಿ ಸಿಗಲೆಂದು ಮದನ ಹರಸಿದ್ದಾಗಿದೆ...
ಚೂರೇಚೂರು ಸಹಕರಿಸು - ಮೈಯ್ಯ ಕತ್ತಲ ರೋಮಗಳೆಲ್ಲ ಅಮೃತ ಕುಡಿಯಲಿ...
ಹಿಂಗಾರಿನ ಕಳವಳದ ಮೌನದಂತೆ ನಿನ್ನ ಮೈಕಣಿವೆಗಳಲಿ ಕಳೆದೇ ಹೋಗುವುದೊಂದು ಸಣ್ಣ ಬಯಕೆ...
#ಈ_ಮಳೆ_ಸಾಲಿನ_ಚೂರು_ಪೋಲಿ_ಕನಸು..
↘↙←↔→↘↙

ಸುರತದಿ ಮಿಂದ ಎರಡು ಮತ್ತ ದೇಹಗಳು ಇನ್ನೂ ಮುಗಿಯದ ನಶೆಯಲ್ಲಿ ಹಂಗಂಗೇ ಮೈಯ್ಯೊಣಗಿಸಿಕೊಳ್ಳುವಾಗ ಬೆಳಕಿಗೆ ನಾಚಿಕೆ, ಗಾಳಿಗೆ ಸಿಹಿ ಕಂಪನ...
ಕಾಲನೂ ಮನಸೋತು ನಿಂತಂತೆನಿಸುತಿದ್ದ ಆ ಹೊತ್ತು - ಎರಡು ದಿವ್ಯ ಪ್ರಣಯೋತ್ಸವಗಳ ನಡುವಿನ ಹಗೂರತೆಯ "ಆ ಅಸ್ತವ್ಯಸ್ತ ವಿರಾಮ" ಬಿಡದೇ ನೆನಪಾಗುತಿದೆ...
ಮದವೆತ್ತ ಮೋಹ ಮೈದಣಿದು ಮೈಮರೆಯುವ ಪ್ರತಿ ಬಾರಿಯೂ ಹೊಸತೇ ಆಗಿ ಪರಿಚಯಿಸಿಕೊಳ್ಳೋ ಆ ಬೆತ್ತಲೆ ತಿರುವುಗಳ ಮತ್ತೊಂದು ಭೇಟಿಯ ಕನಸಾಗುತಿದೆ...
#ರತಿರಾಗ_ರಜನಿ...
↘↙←↔→↘↙

ಎಲ್ಲೋ ನೋಡುತ್ತಾ ಅಂಥದ್ದೇನೂ ಇಲ್ಲ ಅನ್ನುವಲ್ಲೇ ಏನನ್ನೋ ಕೆಣಕಿ, ಗೊತ್ತೇ ಆಗದಂಗೆ ಏನೋ ಒಂದಾಗಿ ಹುಟ್ಟಿ ಬಿಡುವ ವಿಚಿತ್ರ ಸಾಧ್ಯತೆ ನೀನು...
#ಮೋಹ...
↘↙←↔→↘↙

ಮಳೆ ಪರಿಚಯಿಸಿದ ಕವಿತೆ ನೀನು - ಹಾಯ್ದಲ್ಲೆಲ್ಲ ನಗೆಯ ಹಸಿರು ಕಾನು...
#ಪ್ರೀತಿ...
↘↙←↔→↘↙

"ಕಾಯುವ ಸುಖ" - ನಿನಗಾಗಿ ಮತ್ತು ನಿನ್ನಿಂದ...
#ಬೇರೆಬೇರೆ_ದಿವ್ಯ_ಮಜಲುಗಳು...
↘↙←↔→↘↙

ಬದುಕಿನ ಚಂದ ಇನಾಮಾಗಿ ಸಾವಿಗಾದರೂ ನಿನ್ನ ತೋಳ ಸುಖಸಖ್ಯ ಸಿಕ್ಕುವಂತಿದ್ದಿದ್ದರೆ......
#ಇರುಳ_ದಹಿಸುವ_ಕನಸು_ನೀನು...
↘↙←↔→↘↙

ನಾ ನಿತ್ಯ ಅಲೆಯುವ ಅಪರಿಚಿತ ದಾರಿ...
#ನಿನ್ನ_ಪ್ರೇಮ...

ನಿನ್ನ ಅಬೋಧ ಬಿಡುಗಣ್ಣು ನನ್ನ ಎದೆ ನೆಲವ ಹೂಡಿ ಬೊಗಸೆ ಬೊಗಸೆ ಕನಸ ಬೀಜವ ಬಿತ್ತುವ ಬೆಡಗನ್ನು ಬೆಳಕಿಗೆ ಯಾವ ಮಾತಲ್ಲಿ ಹೇಗೆ ಹೇಳಲಿ ಸಖೀ...
#ನೀನೊಂದು_ನಗೆಯ_ನಶೆ...

ಕಳೆದೋಗಬೇಕು ನಿನ್ನೊಂದಿಗೆ - ಕಳೆದೇ ಹೋಗಬೇಕು ನಿನ್ನಲ್ಲಿ - ಘಮ್ಮೆಂದು ಝುಮ್ಮೆನಿಸೋ ನಿನ್ನಂದದ ಬಳಸು ತಿರುವುಗಳ ತಿಳಿಗತ್ತಲ ಅಪರಿಚಿತ ದಾರಿಯಲಿ...
#ಪರವಶ...

ಸ್ವಪ್ನದಲ್ಲೂ ಸಭ್ಯನಾಗೋ ಪಾಪ ಏತಕೆ - ಹರೆಯವನ್ನೂ ಒಂಟಿ ಕೊಲ್ಲಲೇಕೇ ಗೋಪಿಕೆ...
#ಬೃಂಗದ_ಬೃಂದಾವನದ_ಹಸಿವು...

ಸಾವಿನಷ್ಟೆ ಸನಿಹ ನೀನು, ಅಷ್ಟೇ ದೂರವೂ...
#ಕನಸು...

ಆ ಹಾದಿಯ ಪ್ರತಿ ಸೋಲೂ ಉತ್ಕಟ ಜೀವೋದ್ರೇಕದಲ್ಲಿನ ಭಾವಸಮಾಧಿಗೆ ಸಾಕ್ಷಿ ಹೇಳುತ್ತದೆ - ನಿನ್ನ ತೋಳಲ್ಲಿ ಕರಗಿ ಕಳೆದೋದಷ್ಟೂ ಸುಖದ ಕಣಜ ತುಂಬಿ ಬರುತ್ತದೆ...
#ಪ್ರೇಮ_ಕಾಮ...

ನಿನ್ನ ಚಂದವೆಂದರೆ ನನ್ನ ಕಣ್ಣು ತೋರುವ ನಿನ್ನ ಚಿತ್ರವಷ್ಟೇ ಅಲ್ಲ - ಅದು ಎನ್ನೆದೆಯು ತುಂಬಿಕೊಂಡು ನಿನ್ನ  ಮುಟ್ಟುವ ಭಾವಗೀತೆ...
#ಕರಿಮೋಡ...
↘↙←↔→↘↙

ತನ್ನದೆಂದು ತಾ ಆಯ್ದುಕೊಂಡ ಜೀವ ತನ್ನಂದಕೆ ಕಣ್ಣರಳಿಸಲಿ ಎಂಬ ಒಳ ಆಸೆಯಲಿ ತನ್ನ ತಾ ಅಲಂಕರಿಸಿಕೊಂಡು ಸುತ್ತ ಸುಳಿಯುವ ಹೆಣ್ತನಕೆ - ಕಣ್ಣರಳಿದರೆ ಸುಳ್ಳು ಬಿಂಕದಲಿ ಸೊಂಟ ತಿರುವಿ, ಮೂಗು ಮುರಿದು, ಎದೆ ಬಿರಿಯೆ ಗೆಲುವ ಸಂಭ್ರಮಿಸೋ ಮರಳುತನಕೆ - ತನಗಾಗಿ ಕಣ್ಣರಳುವ ಹಂಬಲು ಇವನಲಿನ್ನೂ ಜೀವಂತವಿದೆಯಾ ಎಂದು ಮತ್ತೆ ಮತ್ತೆ ಪರೀಕ್ಷೆಗೊಳಪಡಿಸುತ್ತಲೇ ಇರುವ ಮಗುತನಕೆ - ತನ್ನನು ತಾನು ಹಚ್ಚಿಕೊಂಡಷ್ಟೇ ಅವನೂ ತನ್ನ ನೆಚ್ಚಿಕೊಳಲೆಂದು ಬಯಸೋ ಅಖಂಡ ಭೋಳೆತನಕೆ ಅವಳೆಂದು ಹೆಸರು...
ಗಂಡು ಬೇಕೂಫ ನಾನು ಅವಳ ಇಂತೆಲ್ಲಾ ಸಣ್ಣ ಸಣ್ಣ ಹಿಗ್ಗಿನ ಖಯಾಲಿಗಳ ತುಂಟು ನೇಹದಲಿ ಪಾಸಾಗುತಿದ್ದಷ್ಟೂ ಕಾಲ ಬದುಕು ಚಂದ ಚಂದ ಅವಳಿಂದ...
#ಅವಳೆಂದರೇ_ಮಾಧುರ್ಯ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment