Tuesday, July 7, 2020

ಗೊಂಚಲು - ಮುನ್ನೂರ್ಮೂವತ್ತೊಂಭತ್ತು.....

ನದಿಯಾಗಬೇಕು.....

ಯೋಗ್ಯನಲ್ಲದವನ ತಪಸ್ಸು ಫಲಿಸಿದರೆ ಅಸ್ತು ಅಂದ ಒಡಲಿಗೇ ಶಾಪವಾಗಿ ಸುತ್ತೀತು... #ಬಂದಳಕ...
↺↹↻

ನಾ ಲಘುವಾಗಿ ಕಣ್ತೆರೆದೆ - ನೀ ಗುರುವಾಗಿ ಬೆಳಕೆರೆದೆ...
ಬದುಕೇ -
ನಾನೆಂಬ ಪ್ರಶ್ನೆಗೆ ನೀನೆಂಬೋ ಬೆರಗು ಉತ್ತರವಾಗಿ ಜವನ ಕೈಯ್ಯಲ್ಲಿ ನನ್ನ ನಗೆಯ ಅಂಕಪಟ್ಟಿ...
#ಗುರು_ನಕ್ಕರೆ_ಹುಣ್ಣಿಮೆ...
↺↹↻

ನಿರಾತಂಕದಲಿ ಜಗಳಾಡುವ ಸ್ವಾತಂತ್ರ್ಯವ ಕೊಟ್ಟು ನೋಡು - ನಿರಂತರ ಪ್ರೀತಿಸುವುದ ಕಲಿಸುತ್ತೇನೆ...
#ಮಾತು...
↺↹↻

ಒಳಗಿಲ್ಲದ ನಗುವನ್ನು ಹೊರತೋರುವ ಹೆಣಗಾಟದಲ್ಲಿ ಒಳಗು ಇನ್ನಷ್ಟು ಬರಡಾಗಿ ಬೀಳು ಬೀಳುತ್ತದೆ...
"ದಯವಿಟ್ಟು ತುಂಬಾ ನಗಿಸಬೇಡಿ - ಎದೆ ಸಡಿಲಾದರೆ ಅಳು ನುಂಗುವುದು ಬಲು ಕಷ್ಟ..."
#ತೆರೆದೇ_ಇರುವ_ಗೂಢ_ಕಂಗಳಲಿ_ಕಲೆಸಿಹೋದ_ಬಣ್ಣಗಳು...
↺↹↻

ಪ್ರಜ್ಞೆಯ ಪೂರ್ಣ ಪ್ರಮಾಣದ ಹುಚ್ಚು, ಇಲ್ಲಾ ಪ್ರಜ್ಞೆಯನು ಬಡಿದು ಮಲಗಿಸಬಲ್ಲ ಹುಚ್ಚುಚ್ಚೆನಿಸೋ ಮಧುರ ನಶೆ ಇವೆರಡೇ ತಾನೆ ಮೈಮನದ ನೋವಿನ ಜಡ್ಡನು ಅಲ್ಲಲ್ಲೇ ಮರೆಸೋಕಿರೋ ಮದ್ದು...
#ಎದೆಯ_ಗಾಯ_ಮಿದುಳ_ತಲುಪಬಾರದು...
↺↹↻

ಅಕ್ಷರಕಕ್ಷರ ಉಜ್ಜಿ ಪದ ಪಾದ ಭಾವದ ಕಿಡಿ ಹೊತ್ತಿ - ಅಂತರಂಗವ ಹೂಳಿ ಚೈತನ್ಯದ ಬೀಜವ ಬಿತ್ತಿ - ವ್ಯಾಸಪೀಠವನಾತು ಮೌನದೆ ಕುಳಿತಿತ್ತು ಹೊತ್ತಿಗೆ...
#ಪುಸ್ತಕ: ಬಯಲಿಗೆ ಬಿದ್ದ ಎದೆಯ ಬೆಳಕು...
↺↹↻

ನೋಡಿದ್ದು ಯಾರು ಎಂಬುದರ ಮೇಲೆ ನೋಟದ ಗುಣ, ಪರಿಣಾಮಗಳ ನಿರ್ಧಾರ...
#ಸ್ವಭಾವ... #ರುಚಿ...
↺↹↻

ನಿನ್ನ ಬಗ್ಗೆ ಹೇಳೋ ಅಂದಳು...
ಭಯವಾಯಿತು - ಪ್ರಶ್ನೆ ಪತ್ರಿಕೆ ಎದುರಿನ ದಡ್ಡ ಹುಡುಗನ ಖಾಲಿತನ, ಸಾವಿನೆದುರಿನ ಸುಸ್ತು...
ಏಸು ಜನುಮ ಓದಿದರೆ ನನಗೆ ನಾನು ತಿಳಿದೇನು - ಒಳಗು ಬೆಳಗಾದಲ್ಲಿಗೆಲ್ಲ ಮುಕ್ತ ಮುಕ್ತ ಅಲ್ಲವಾ...?

ಹೋಗ್ಲೀ ನನ್ ಬಗ್ಗೆ ಆದ್ರೂ ಹೇಳೂ ಅಂದ್ಲು...
ಭಯಂಕರ ತಳಮಳ ನನ್ನೊಳಗೆ - ಯಾವುದೋ ದ್ಯಾಸದಲಿ ಸಿಗರೇಟಿನ ಬೆಂಕಿಯನು ಬುಡಮಟ್ಟ ಜಗ್ಗಿ ಉಸಿರ ಜೊತೆ ತುಟಿ ಸುಟ್ಟಾಗಿನ ಕಕ್ಕಾಬಿಕ್ಕಿ, ಮೊದಲ ಹಸ್ತ ಮೈಥುನದ ಪಾಪ ಭೀತಿ...
ಅಪರಿಚಿತತೆಯೇ ಸೆಳೆತವ ಕಾಯುವುದಲ್ಲವಾ - ಎಲ್ಲ ತಿಳಿದರೆ ನೀನೆಂಬ ಬೆರಗೆಲ್ಲಿಯದು...?

ನಮ್ಮ ಬಗ್ಗೆ ಅನ್ನೋದೀಗವಳ ಕಣ್ಣ ಪ್ರಶ್ನೆ...
"ಬೆತ್ತಲು ಕೂಡಾ ಒಂದಿನಿತು ಕತ್ತಲನು ಉಳಿಸಿಕೊಂಡಿರುತ್ತದೆ..."
ಬದುಕಿನ್ನೆಷ್ಟೋ, ಸಾವು ಇನ್ಹೇಗೋ - ಬಯಲು ಕೂಡಾ ಕಣ್ಣ ವ್ಯಾಸದಷ್ಟೇ ಬಯಲಾಗುವುದು - ಇನ್ನು ನೀನು, ನಾನು...?
ಎಲ್ಲ ಅರ್ಧಂಬರ್ಧ ಮತ್ತು ಈ ಅರೆಬರೆಯೇ ಚಂದ ಅಲ್ಲವಾ...?
'ನಾನು' 'ನೀನು' ಕೂಡಿ ಪೂರ್ಣವಾದೆವು ಅನ್ನೋ ಜೊಳ್ಳು ಪ್ರಭಾವಳಿ 'ನಾವಲ್ಲ' - ಪ್ರಾಮಾಣಿಕ 'ನಾನು' 'ನೀನು' ಹಂಗಂಗೇ ಇದ್ದಂಗೇ 'ಜೊತೆ ನಡೆಯುವ' ಸಹಜ ಸೊಬಗಿನ ಪಯಣ 'ನಾವು...'

ನನ್ನ ತಿಳುವಳಿಕೆ ಇಷ್ಟೇ ಕಣೇ:
"ಹರಿದಲ್ಲೆಲ್ಲ ಹನಿ ಪ್ರೀತಿಯ ಪಸೆ ಉಳಿಸಬೇಕು - ನದಿಯಾಗಬೇಕು..."
ಅಲೆಯ ಹೋರು - ದಡದ ಮೌನ - ಬದುಕ ಶ್ರೀಮಂತಿಕೆ...
ಸಾವು ಕೂಡಾ ತಡೆಯಲಾಗದ ಹರಿವು ಪ್ರೀತಿಯೊಂದೇ ಇದ್ದೀತಲ್ಲವಾ - ಉಹುಂ, ಆ ಅರಿವು ಪ್ರೀತಿಯೊಂದೇ ಆಗಿರಬೇಕು ಅಲ್ಲವಾ...
ಅರ್ಥ ಅನರ್ಥಗಳ ಹಂಗನಳಿದು ಹರಿದರಾಗದೇ ಸುಮ್ಮನೇ - ಸಲಿಲದ ಹನಿ ಹನಿ ಹರಿದಂತೆ ಮೆಲ್ಲನೆ; ಸಾಗರಕಿಷ್ಟು, ಮೋಡಕ್ಕಿಷ್ಟು...

ನಸು ನಗೆಯ ಉತ್ತರ ಈಗ ಅವಳು - ಬೆಸೆದು ಜನುಮದ ಬೆರಳಿಗೆ ಬೆರಳು...
#ಈಹೊತ್ತಿಗೆ_ಇಂತಿಷ್ಟು...
↺↹↻

ಎಲ್ಲಾ ಮರೆವಾಗೋ ವರವಾಗಿ ಬಾ...
#ನಿದ್ದೆ...
↺↹↻

ಅಂದಿನಂತೇಯೇ, ಅಂದಿನಷ್ಟೇ ಇಂದೂ ಪ್ರೀತಿಸ್ತೇನೆ ಗೊತ್ತಾ...?!
ಅರೇ, ಅಲ್ಲೇ ನಿಂತುಹೋದೆಯಾ - ಅಲ್ಲಿಂದಿಲ್ಲಿಗಿಷ್ಟು ಬೆಳೆಯಬೇಕಿತ್ತಲ್ಲವಾ - ಬೇರನಿಷ್ಟು ಆಳಕಿಳಿಸಿ, ಗೆಲ್ಲುಗಳ ಅಗಲಗಲಿಸಿ...
ನಿಂತು ಮಲೆತದ್ದಾ, ಹರಿದು ಕಲೆತದ್ದಾ ಅಂದರೆ ಹರಿವನ್ನೇ ಬೆರಗಿನಿಂದ, ಬೆಡಗಿನಿಂದ ತಬ್ಬುತ್ತೇನೆ...
"ಹಕ್ಕಿಯ ಚೆಲುವನು ರೆಕ್ಕೆಯ ಸ್ವಾತಂತ್ರ್ಯದಲ್ಲಿ ಕಾಣು - ದಾರಿ ನೆಳಲಿನೆಡೆಗೆ ಹಾಯುವುದು..."
#ಪ್ರೀತಿ_ಬೇಡಿಯಲ್ಲ_ಬಯಲ_ಬೆಳಕು...

ನಿನ್ನೊಂದಿಗೆ ಗುದ್ದಾಡಿ ಗೆದ್ದಾಗಲೆಲ್ಲ ಮತ್ತೆ ಮತ್ತೆ ಸತ್ತಿದ್ದೇನೆ ಒಳಗೇ - ಸೋತ ಮುಹೂರ್ತವಿದೆಯಲ್ಲ ಅದು ಮಾತ್ರ ಚೂರು ಜೀವಿಸಿದ್ದಕ್ಕೆ ದೊಡ್ಡ ಸಾಕ್ಷಿ...
#ಹರಿಯುವುದೆಂದರೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment