Tuesday, March 14, 2023

ಗೊಂಚಲು - ನಾಕು ನೂರಾ ನಾಕು.....

ಮಳೆಯೊಂದಿಗೆ.....

ಎಳೆ ಕನಸಿನಂತಾ ಕೂಸೇ -
ಚಂದ್ರ ಮುಳ್ಗಿದ್ ಕೊಳದಲ್ಲಿ ಮಿಂದ್ಕಂಡ್ ಮೈಯ್ ಒರಸ್ಕ್ಯಳದ್ದೆ, ಮುಡಿಂದ ಇಳಿಯು ನೀರನ್ನ ಹಂಗೆ ಕೈಯ್ಯಲ್ಲಿ ತೀಡ್ಕ್ಯತ್ತಾ ಕಟ್ಟೆ ಮೇಲೆ ಕುಂತಂಗೆ ಕುಂತು ತೆರಗಣ್ಣಲ್ಲೇ ಎದೆಯ ತಿವಿದ್ರೆ ನೀನು,
ಹ್ಯಾಂಗ್ ತಡ್ಕಳವು ಮಧುರ ಪಾಪಕ್ಕೆ ಸದಾ ಹಾತ್ಬರಿಯೂ ಹುಟ್ಟಾ ಪೋಲೀ ಹೈದ ನಾನು... 😍🙈
___ ಸೂರ್ಯ ಎದ್ದ ಮೇಲೂ ಚಂದ್ರ ಮಲಗದಿದ್ದಾಗ ಸೂರ್ಯನ ಮರಿ ಕಿರಣಗಳು ಚಂದಮನ ಮೇಲೆ ಆಡಿದಂತಿದೆ ಇಲ್ಲೀಗ ದಿನ ಬೆಳಗು...
↟↜↺↻↝↟

ಕರಿ ಮೋಡದಾ ಸವತೀ -
ಸುರಿವ ಮಳೆಯ ಒಟ್ಟೊಟ್ಟಿಗಿಷ್ಟು ಬೆವರೂ ಸುರಿದು ಬೆರೆಯಲಿ....
ಬಾ 
ಬೆತ್ತಾಲೆ ತೋಳ ತೊಟ್ಟಿಲಲ್ಲಿ ಮಕ್ಳಾಟ ಆಡೋಣ...
ಪೋಲಿ ಪೋರನ ಕಣ್ಣ ತುಂಟ ಓಡಾಟಕ್ಕೆ ಸೋತು ಖಾಲಿ ಬೆನ್ನ ಮೇಲೆ ಪಾನ ಮತ್ತ ಚಿಟ್ಟೆ ಓಡಾಡಿದಂಗಾಗಿ ಉಸಿರಿಗೆ ಕಚಗುಳಿ‌ ಇಟ್ಟಂಗಾದರೆ ತಪ್ಪೇನಲ್ಲ ಬಿಡು... ಜೀವಂತಿಕೆ‌ಯ ಸಿಹಿ ಲಕ್ಷಣ ಅದು ಅಷ್ಟೇ...
ಸಂಜೆ ಮಳೆ ತೊಳೆದ ಹೊಸ್ತಿಲಿಗೆ ರಾತ್ರಿ ಬೆಳದಿಂಗಳು ರಂಗೋಲಿ ಇಟ್ಟಂಗೆ, ನನ್ನ ನೆನಪ ನವಿರು ರೋಮಾಂಚದಲಿ ನಿನ್ನಾ ಮೈಮನವು ಮೋಡಗಟ್ಟಿ ತೊನೆದು ಮೈನೆರೆದು, ನಿನ್ನನೇ ನೀನು ಹೊಸತೆಂಬಂತೆ ನೋಡಿಕೊಂಬಾಗ ಆ ಕನ್ನಡಕದೊಳಗಿನ ಅಬೋಧ ಕಂಗಳಲಿ ನಾ ಕೂತು ಜಗ ಮರೆಯಬೇಕು - ಕನ್ನಡಿ ತೋರುವ ಹಸಿ ಮೈಯ್ಯ ಹಸಿವನ್ನ ನಾ ನಿನ್ನ ಕಣ್ಣ ನಾಚಿಕೆಯಲೇ ಕುಡಿಯಬೇಕು...
"ನಶೆಯಲಿ ತೇಲುವವಳ ನಿಶೆಯ ಆಹಾರವಾಗಬೇಕು..."
ಹೊಕ್ಕುಳ ಸುಳಿ ಅಗ್ನಿಯೊಂದೇ ನನ್ನ ಜೀವಂತವಿಟ್ಟ ಮಂತ್ರ ತಂತ್ರ...
↟↜↺↻↝↟

ಮೋಹದ ಮೊಗ್ಗೊಡೆದು ಸಿಗ್ಗು ಹರಿದು ಸಗ್ಗವಾಗಬಹುದಿದ್ದ ಈ ಛಳಿ ಮಳೆಯ ರಾತ್ರಿಯಲ್ಲಿ ನೀನಿಲ್ಲ ಸಜ್ಜೆಮನೆಯಲ್ಲಿ...
___ ಬರಗಾಲದಲ್ಲಿ ಅಧಿಕ ಮಾಸ...
↟↜↺↻↝↟

ಎಂಥದ್ದೇ ಇರುಳನಾದರೂ ಹಾಯಬಹುದು - ತೋಳ ಆಳ್ಕೆಯಲಿ ನಿನ್ನ ಹೂ ಮೈಯ್ಯಿ ಆಸೆಯಾ ಬೆಳಕನುಟ್ಟು ಅರಳುತಿದ್ದರೆ...
____ ಚೆಲುವಿನುನ್ಮಾದವಿಲ್ಲದ ಇರುಳು ನನ್ನ ಕನಸಿಗೂ ಸುಳಿಯದಿರಲಿ...
↟↜↺↻↝↟

ಮಳೆಗೆ ನೆಂದು ಗಡಗುಡುವ ಮೈಯನ್ನು ನಿನ್ನಾ ಬೆತ್ತಾಲೆ ಬೆಂಕಿಗೆ ಒಡ್ಡಿ ಮಲಗುವ ಆಮೋದದಾಸೆಗೆ ಮತ್ತೆ ಮತ್ತೆ ಮಳೆಯ ನೆನೆಯುತ್ತೇನೆ / ಮಳೆಯಲ್ಲಿ ನೆನೆಯುತ್ತೇನೆ...
___ ಮಳೆಯೊಂದಿಗೆ...

ತಾರಕದಲಿ ಮಿಡಿವ ದುಂಬಿಗೆ ಮಂದ್ರದಲಿ ಜೇನುಣಿಸುವ ಹೂವಂತೆ ಅಂಗಳದ ಕೂಗಿಗೆ ಒಳ ಮನೆಯ ಗೊಣಗೊಣ ಮಾರುತ್ತರವಿಲ್ಲ...
ವಿರಹವೆಂದರೆ ಇಷ್ಟೇ - ಮೈದುಂಬಿ ಸುರಿವ ಮಳೆಯ ಧಾರೆ ಮತ್ತು ಮೈಯ್ಗಳರಳಿ ಬೆವರ ಮೀಯದ ಹಾಸಿಗೆ...
___ ರೆಕ್ಕೆ ನೆನೆದ ಒಂಟಿ ಕಾಡು ಹಕ್ಕಿ...

ನೀನು ಒಂದೊಳ್ಳೆಯ ಕವಿತೆ ಮತ್ತು ನಾನು ಅತಿ ದಡ್ಡ ಓದುಗ - ಎಂಥಾ ಚಂದ ಸಂಸಾರ...
ನಿನ್ನ ನಗು ಮತ್ತು ನನ್ನ ಬೆರಗು - ಈ ಬದುಕಿನ ಸಿರಿ ಸಾರ...
____ ಮಳೆಹನಿಯ ಕುಡಿಯುತ್ತಾ ಕರಿಕಾನು ಹಾಯುವ ಸಾಂಗತ್ಯ...

ದೂರವಿದ್ದಾಗ ನಿನ್ನ ಭಾರ ಉಸಿರಿನ ಮೌನ ಮತ್ತು ಮಗ್ಗುಲಲ್ಲಿ ನಿನ್ನ ಇನಿ ದನಿ ಸಮ್ಮತಿ ಸಂಚಲನ‌ದಂತೆ ಹಾಡಿ, ಕಾಡಿ ಅಪೂರ್ವ ಉನ್ಮತ್ತ ನಶೆ ತುಂಬುತ್ತದೆ ನನ್ನಲ್ಲಿ...
ನೀನೆಂಬ ನಲ್ಮೆ ಮೋಹದೆದುರು 'ನಾನು' ಸೋಲುವುದು ಎಂಥ ಚಂದ ಮಾಯಕ ಹದ ಗೊತ್ತಾ..‌.
____ ಮಳೆಯ ಮಗ್ಗುಲಿನ ಪ್ರಣಯ ಕುಶಲೋಪರಿ...

ಅವಳ ಮುಡಿಗೋ
ಅವಳಡಿಗೋ
ಘಮ ತುಂಬುವ ಅಂಗಳದಾ ಹಸೆ ಹಾಡು...
___ ಅಕಾಲ ಮಳೆಗೆ ಕೆನ್ನೆ ತೋಯಿಸಿಕೊಂಡ ಅರೆ ಬಿರಿದ ಪಾರಿಜಾತ...

ಪ್ರಾಣವಾಯು ಗಂಗೆಯೇ -
ನಿನ್ನ ಜಗದ ಸುಪ್ತ ಆಸೆಗಳೆಲ್ಲ ನನ್ನನ್ನೇ ಸೇರಬೇಕಿದೆ ಅನ್ನುವಂಗೆ ಅಮಲು ಅಮಲು ಅರೆಗಣ್ಣಾಗಿ, ತೋಳಲ್ಲಿ ಕೊರಳ ಬಳಸಿ, ತುಟಿಯಿಂದ ಎದೆಯ ಎಂಜಲಾಗಿಸುತ್ತೀಯಲ್ಲ, 
ನಿಗಿ ನಿಗಿ ಉರಿವ ಆ ಉತ್ಸವ ಕಾಲ; 
ನನ್ನಲ್ಲಿ ನಾನೂ ಸಹಾ ಜೀವಂತ ಅನ್ನಿಸೋ ಮಹಾ ಮಧುರ ಪ್ರಹರ ಅದೊಂದೇ ನೋಡು...
ಮತ್ತೆ ಮತ್ತೆ ಸಿಗುತಿರು, ಉಸಿರ ತುಂಬಿ ಕೊಡುತಿರು...
___ ಮಳೆಯಂಗೆ / ಮಳೆ ಗಂಗೆ...

ಮೋಹಗಳು ನಿಗಿ ನಿಗಿ ಸುಡುತ್ತವೆ, ಉಕ್ಕುಕ್ಕಿ ಬಡಿಯುತ್ತವೆ - ಅತೃಪ್ತ ಒಡಲನ್ನೂ, ನಾಭಿ ಕಡಲ ದಂಡೆಯನ್ನೂ...
____ ಮಳೆ ಇರುಳ ವೃತ್ತಾಂತ...

ಹೇ ಕಾಡಿಗೆ ಹೊಳಪಿನ ಕಾವ್ಯ ಕನ್ನಿಕೆಯೇ -
ಮನಸು ಹಾಗೂ ದೇಹ ಎರಡನೂ ಒಟ್ಟೊಟ್ಟಿಗೆ ದುಡಿಸಿಕೊಂಡು ಒಂದೇಸಮ ಬೆಚ್ಚಗಿಡುವ ಮಧುರ ಪಾಪದ ದಿವ್ಯ ಒಡಲಾಗ್ನಿಯ ಅಗ್ಗಿಷ್ಟಿಕೆ ನಿನ್ನ ಸಾಂಗತ್ಯ...
ನನ್ನ ಕನಸಿನ ರೂಹು ನಿನ್ನ ಗೆಲುವು...
___ ಮಳೆಗೊಡ್ಡಿಕೊಂಡ ಮೆದು ರುದಯ...

ನಿನ್ನೆಡೆಗಿನ ಸವಿಗನಸುಗಳ ಸವಿಸ್ತಾರ ಚಿತ್ರ ಚಿತ್ತಾರಗಳನು ನಿನ್ನ 'ಮೇಲೆಯೇ' ಬರೆಯಬೇಕೆಂಬುವುದು ಈವರೆಗಿನ ಎಲ್ಲಕಿಂತ ನವಿರಾದ ಸಿಹಿ ಪೋಲಿ ಕನಸು...
_____ ಮಳೆ ಇರುಳ ಬೆತ್ತಾಲೆ ಕಣ್ಣು...

ಆ ತೀರದ ಜಂಗಮ‌ಳು ನೀನು...
ಹಾದಿಗಿಂತ ಮೊದಲೇ ನಿನ್ನ ತಲುಪುವ ಹುಚ್ಚು ಕಣ್ಣ ಬೆಳಕಿನ ನಾನು...
ಮೋಹಾಂಬುಧಿಯ ಹನಿಯೇ -
ಮಾತಿಗೆ, ಮುತ್ತಿಗೆ, ತೋಳು ಕಡೆಯುವ ಮತ್ತಿಗೆ ಸಂಗಾತವೊಂದಿಲ್ಲದ ಛಳಿ ಛಳಿ ರಾತ್ರಿಗಳು ಕಡು ವಿರಹಿ ಹಾಸಿಗೆಯನ್ನೂ, ಸೃಷ್ಟಿ‌ಬೀಜದ ಕನಸುಗಳನೂ ತುಂಟು ನಗೆಯಲ್ಲೇ ಅಣಕಿಸುತ್ತವೆ...
_______ ನೀನಿರಬೇಕಿತ್ತು ಈ ಮಳೆಯೊಂದಿಗೆ...


*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

No comments:

Post a Comment