ನಾನೇನು ನಿನ್ನಲ್ಲಿ.....
ಸುಡು ಸುಡು ಮಧ್ಯಾಹ್ನದ ಆಲಸ್ಯದಲಿ ಅವಳ ತಬ್ಬಬೇಕು - ಕಣ್ಣ ದೀಪವು...
ನನ್ನೇ ನಾನು ಹುಡುಕಹೊರಡುವ ನಿರಾಮಯ ಸಂಜೆಗಳಿಗೆಲ್ಲ ಅವಳದೇ ಹೆಸರಿಡಬೇಕು - ಎದೆಯ ಕಾವ್ಯವು...
ಕೆನೆಗಟ್ಟಿದ ಹಗಲು - ನನ್ನ ಕಪ್ಪು ಹುಡುಗಿ...
____"ಆ ಕಪ್ಪು ಮೋಡದಂತವಳ ಕಣ್ಣಲ್ಲಿನ ಕಾಮನ ಬಿಲ್ಲು ನನ್ನ ನಿತ್ಯದ ಹೋಳಿ..."
__ 07.03.2023
&&&
ಪ್ರೇಮದ ಬೆಳಕೇ -
ಕಡಲುಕ್ಕಿ ಬಂದಂತೆ ಮೈಮನ ಕೆರಳಿ ಅರಳುವುದು ಕೊಳಲ ಖಾಲಿಯ ತುಂಬಿ ಹರಿಯುವ ನಿನ್ನುಸಿರ ರಾಗಕೆ ಗೆಳೆಯಾ...
ನಿನ್ನಷ್ಟು ಪ್ರೀತಿಯಿಂದ ಕೂಡುವ, ಕೂಡಲೆಂದೇ ಕಾಡುವ ಗಂಡು ಗೊಲ್ಲ ಜಗದೆಲ್ಲ ಗೋಪಿಯರ ಎದೆಯಾಳದ ಕಳ್ಳ ಕನಸು ಕಣೋ ಕರಿಯಾ...
___ ಗೋಪಿ ಹಕ್ಕಿಗಳ ಅನುಕ್ಷಣದ ಅನುಲಾಪ...
&&&
ನಿನ್ನ ಅರಳು ಕಂಗಳಲಿ ತುಂಬಿ ತೊನೆಯುವ ಆಸೆ ಹುಯಿಲಿನ ಕಂಗಾಲು...
ನನ್ನ ನೋಟಕೆ ಸಿಕ್ಕಿ ಸಿಡಿದು ಸಣ್ಣ ಸೆಳಕಿನ ಮಿಂಚಿನಂದದಿ ನಿನ್ನ ಮೈಯ್ಯ ಯೌವನದ ನಾಡಿಗಳ ತುಳಿಯುವ ಸಿಹಿ ಕಂಪನ...
ಅಲ್ಯಾರೋ ಕರೆದಂತೆ, ಇಲ್ಯಾರೋ ಬಂದಂತೆ, ಬೆರಳ ಬೆಸೆದು ಕೊರಳ ಕುಣಿಸುವ ನಿನ್ನೊಳಗಣ ಎಳೆಗರುವಿನಂತ ಹುಸಿ ನಾಚಿಕೆ...
ಜನ ಜಾತ್ರೆಯ ಸೆರಗಿನ ಆಚೆ ಈಚೆ ಕಳ್ಳ ಕಿಂಡಿಗಳಲಿ ಬೆರಗಿನಲೇ ಆತುಕೊಳ್ಳುವ, ಹುಡುಹುಡುಕಿ ಹೂತು ಸೋಲುವ ನಿನ್ನಾ ಕಣ್ ಕಣ್ಣ ಸಲಿಗೆ...
ಹೇ ಮೋಹವೇ,
ಕಳ್ಳು ಕುಡಿದಂತ ಈ ಹರೆಯದ ಹಳ್ಳ ಹರಿವಿಗೆ ನಿನಗಿಂತ ಅನ್ಯರಿಲ್ಲ ಎಂಬುವಂತೆ ಕಾಡುವ ಕಪ್ಪು ಕಡಲು ನೀನು....
ಜಾತ್ರೆಯಲಿ ಇಂದ್ರಚಾಪದಂದದಿ ಕಂಡ ನಿನ್ನ ಯೌವನವ ಇರುಳ ಕನಸಲಿ ಕೆಣಕಿ ಕಾಡಿ 'ಕಾಯುವ' ಪರಮ ಪೋಲಿ ಹರೆಯ ನಾನು...
___ ಬಲು ಚಂದ ಕಾಡುವ ಕಾಡು ಮೌನ - ಕಪ್ಪು ಹುಡುಗಿ...
&&&
ಈ ಬದುಕ ಕೊರಳ ಬಳಸಿದ ದಿವ್ಯಾನುಭೂತಿಯೇ -
ಕೇಳು,
ನಾನು ನಿನ್ನ ಬಲಹೀನತೆ ಆಗಿರುವಾಗ ನಿಂಗೆ ನನ್ನಿಂದ ಸಿಗಬಹುದಾದದ್ದು ಎದೆಯ ತುಂಬಾ ಗೊಂದಲಗಳ ಕಲೆಸಿದ ನೋವಿನದೇ ಕಸರು ಅಷ್ಟೇ...
ಅದೇ,
ನಾನು ನೀನು ಎಂಬುದು ನನ್ನಲ್ಲೂ ನಿನ್ನಲ್ಲೂ ಈ ಹಾದಿಯ ಹಲ ಕ್ಷಣಗಳ ಮಧುರ ಸಂಭ್ರಮದ ಸಂಗಮವೆನಿಸುವಾಗ ಕಾಲ ಕವಿತೆಯಾಗಿ ಉಸಿರೊಳಗರಳುವ ನೆನಹು ಕನಸುಗಳ ಹಾಸು ಹಸಿರು ಇಷ್ಟಿಷ್ಟೇ...
____ ಈಗಿಲ್ಲಿ ನಾನೇನು ನಿನ್ನಲ್ಲಿ...
&&&
ಅವಳು -
ಈ ದೇಹದ ಬೆತ್ತಲು ನಿನಗಲ್ಲ, ಆಸೆ ಬಿಡು; ಆದರೋ, ಭಾವದಲಿ ನಿನ್ನೆದುರು ಕತ್ತಲೆಯೇ ಇಲ್ಲ ನೋಡು...
ಇವಳು -
ನನ್ನೀ ಜೀವ ಭಾವಗಳೆಲ್ಲ ನಿನ್ನೆದೆಯ ಬಿಸುಪನು ಹೊಕ್ಕು ಬಳಸಿ ನೀರಾಗಿ ನಿಸೂರು ನಿರಾಳ ಹಾಡು...
___ ನೇಹಾಮೋಹದ ಬಿಗಿಯಲ್ಲಿ ಕರಗಿ ಹಗುರಾಗುವ ನಾನಾ ಬಗೆ...
&&&
ಹೇ ಹತ್ತಿರದವಳೇ -
ನಿನ್ನ ನಡು ಯೌವನವು ಕಣ್ಣ ಕುಡಿಯ ಬಾಣವಾಗಿ,
ತುಟಿಗಳ ತೇವದ ಆಸೆ ಹಸಿಯಾಗಿ,
ಮೂಗು ಮೊನೆಯ ಬಿಗುಮಾನದ ಕಾವಾಗಿ,
ಎದೆ ಮಿದುವು ಬಿಗಿದ ಬಿಲ್ಲಾಗಿ ಎನ್ನ ತೋಳ ಹಸಿವ ಕೆಣಕಿ ಕರೆವಾಗ ಬಾಚಿ ತಬ್ಬದೇ ದೂರ ನಿಲ್ಲುವುದು ಎಷ್ಟು ಕಷ್ಟವೇ ಮಾರಾಯ್ತೀ...!!
____ಬಾ, ಮಾಗಿಯ ಬೇಗೆಗೆ ಮೋಹದ ತುಟಿಯ ಗಾಯ ಮಾಯಗೊಡಬಾರದು...
&&&
ಒಲವೇ -
ಅಲೆಗಳ ನಿರಂತರ ಪೆಟ್ಟು ತಿಂದೂ ಶಿಲ್ಪವಾಗದೇ ಉಳಿದ ಒರಟು ಶಿಲೆ ನಾನು...
ಜಲಗರ್ಭದ ಮೊರೆತವ ನೋಡುವ ನಿನ್ನ ಬೆರಗಿನ ಪಾದ ನೆತ್ತಿ ತುಳಿದದ್ದರಲ್ಲೇ ನನ್ನ ಪುನೀತ ಭಾವ...
ಮತ್ತೆ ಮತ್ತೆ ಬರುತಲಿರು ಕನಸೇ ನನ್ನ ತೀರಕೆ...
____ ಕಪ್ಪು ಹುಡುಗೀ...
&&&
ಕಡು ನೀಲ ಮುಗಿಲಿಗೆ ಮಲ್ಲಿಗೆಯೊಡನೆ ಕೆಂಡ ಹಬ್ಬಲಿಗೆಯ ಸೇರಿಸಿ ಹೆಣೆದ ದಂಡೆಯ ಅಂಟಿಸಿದಂಗೆ ಸಂಜೆಯ ಬಾಗಿಲು ತೆರೆವಾಗ ಅಧರದ ಸವಿ ಮುತ್ತಾಗಿ ಮೋಹದಾ ಹೆಣ್ಣೇ ನೀನು ಸಿಗಬೇಕು...
ವಸಂತ ಬಯಲಿಗೆ ಬಂದಾಗ ಎದೆಗೆ ಬಾಗ್ಲಾಕ್ಕೊಳ್ಳೋದು ಯಾವ ನ್ಯಾಯಾ ಹೇಳು...
ಉತ್ಕಟತೆಯಲ್ಲೇ ಅಲ್ಲವಾ ಜೀವಾಭಾವದ ಜೀವಂತಿಕೆ...
ಶಿಲೆ ಶಿಲ್ಪವಾಗಿ, ಶಿಲ್ಪ ಕಲ್ಪದ ಮೂರ್ತಿಯಾಗಿ, ಹೃದಯಕ್ಕದು ಪವಿತ್ರ ಅನ್ನಿಸೋದು ಭಾವದ ಉತ್ಕಂಠ ಮಂತ್ರದಲ್ಲಲ್ಲವಾ...
ಹಾಗೆಂದೇ,
ನಿನ್ನ ಕೂಡುವಾಗಲೇ ನನ್ನ ಪ್ರೇಮ ಜೀವಂತ ಅನ್ನಿಸಿದ್ದು...
____ತುಟಿಯಂಚಿನ ಮಚ್ಚೆ, ಕೊರಳ ಶಂಖ ಇತ್ಯಾದಿ - ಭಾವಕ್ಕೆ ಜೀವ ಚಿತ್ರದ ಚಿತ್ತಾರ...
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)
ಜಗುಲಿಗೆ ಇಣುಕಿದ ಚಂದಿರ; ಮನಮಂದಿರದಿ ಮೂಡಿಸುವ ಭಾವಗಳೆ ಸುಂದರ... ಕ್ಷಣ ಕ್ಷಣಕೂ ಅದಲುಬದಲಾಗುವ ನನ್ನೊಳಗಿನ ನನ್ನದೇ ಭಾವಗಳು ನನ್ನನೇ ಬೆಚ್ಚಿಬೀಳಿಸುತ್ತವೆ ಹಲವೊಮ್ಮೆ...
Tuesday, March 14, 2023
ಗೊಂಚಲು - ನಾಕು ನೂರಾ ಏಳು.....
Subscribe to:
Post Comments (Atom)
No comments:
Post a Comment