ಹರಿವೇ ಹೊಳೆಯ ಧ್ಯಾನ.....
ಪ್ರೀತಿ ಅಂದರೆ ಹೂ ಅರಳುವ ಸದ್ದು; ಹಂಗೇ ಅವಳ ಹೂವಾಗಿಸುವ ನನ್ನ ಮುದ್ದು...
ಅವಳೋ ಮಹಾ ಮೌನದ ಗರ್ಭವ ಕಡೆಕಡೆದು ಉದಿಸಿದ ಒಂದು ತುಂಟ ನಗು...
___ ಪ್ರೀತಿಯೋ ತುಂಬಿ ಹರಿವ ಹೊಳೆ ಮತ್ತು ಹರಿವೇ ಹೊಳೆಯ ಧ್ಯಾನ...
␢␢␢
ಬಯಸೀ ಬಯಸೀ ಪ್ರೇಮದಲ್ಲಿ(?) ಕೊಚ್ಕೊಂಡೋಗಿ ಸಮಾಧಾನದಲ್ಲೂ ಇರಲ್ಲ - ಪ್ರೇಮ ಸುಖವಲ್ಲ ಸಾಯದಿರಿ ಅಂದ್ರೆ ಹಲಹಲಾ ಅಂದು ಏರಿ ಬಂದು ಮಾತಲ್ಲೇ ಕೊಂದಾಕೋರೇ ಇಲ್ಲೆಲ್ಲಾ...
____ ಪ್ರೇಮ ಕುರುಡು ಅಂತಂದು ಪ್ರೇಮಿಸಲು ಕತ್ತಲನ್ನು (ಗೌಪ್ಯತೆಯ) ಆಯ್ದುಕೊಂಡ ಪರಮ ಸಭ್ಯರು...
␢␢␢
ಇಲ್ಕೇಳೇ -
ಇಲ್ಲಿ ನಾ ಹೇಗಿದ್ದೇನೆ ಎಂಬುದು ನನ್ನ ಸಹಜ ಇರುವಿಕೆಯ ಬಿತ್ತರ...
ಜಗತ್ತಿಗೆ ನೀ ನನ್ನ ಹೇಗೆ ತೋರಿದೆ ಎಂಬುದು ನಿನ್ನ ನಿಜ ಪ್ರೇಮದ ಎತ್ತರ...
___ ರಾಧೆಯ ಕಣ್ಣಲ್ಲಿನ ಯಮುನೆಯ ಹರಹು ಕೃಷ್ಣನ ಪ್ರೇಮ...
␢␢␢
ಅಲ್ಲಾ,
ಈ ಪ್ರೇಮಿಗಳಿಗೆ ಮತ್ತು ಪ್ರೇಮಿ/ಕೆಯೊಡನೆ ಜೀವಾಭಾವದ ಒಡನಾಟ ಚಂದ ತೀವ್ರತೆಯಲಿರುವಾಗ ಮತ್ತು ಪ್ರೇಮಿ/ಕೆ ಮುಖ ತಿರುವಿದ ಭಾವ ಖಡಕ್ಕಾಗಿ ಕಾಡುತಿರುವ ಎಡಹೊತ್ತಿನಲ್ಲಿ ಸುತ್ತಲಿನ ಜಗದ ಸಂವಾದಗಳೆಲ್ಲ ಬರೀ ನೀರಸ ವ್ಯವಹಾರ ಅನ್ನಿಸುವುದೇಕೋ ಕಾಣೆ...
ಪ್ರೇಮಿಯನ್ನು ಅವಲಂಭಿಸಿ ಪ್ರೇಮವನ್ನು ಜೀವಿಸುತ್ತೇನೆ ಎಂಬುದು ಕಳ್ಳ ಮನಸಿನ ಮರುಳಲ್ಲದೇ ಇನ್ನೇನು...
____ ಪ್ರೇಮ(?)ವೆಂಬೋ ವಿಚಿತ್ರ ವ್ಯವಹಾರ/ಆಚರಣೆ...
␢␢␢
ಪ್ರೇಮವಾಗಲೀ, ಆಧ್ಯಾತ್ಮವಾಗಲೀ ಎದೆ ಹೊಕ್ಕ ಮಧುರ ಬೆರಗಾಗಿರುವವರೆಗೂ ಚಂದ ಚಂದ - ಅದೇ, ವಾಸ್ತವಿಕ ಪ್ರಜ್ಞೆಯನೇ ಕೊಲ್ಲುವ ತುಡುಗು ಆಡಂಬರದ ನಶೆಯಾದರೆ ಮಾತ್ರ ಕಷ್ಟ ಕಷ್ಟ...
____ ಮೋಹಾ - ಮಾಯೆ - ಸುಭಗತನ - ಧಾರ್ಮಿಕತೆ...
␢␢␢
ಇಷ್ಟು ಕೊಡುವಾಗ ಅಷ್ಟಾದರೂ ಪಡೆಯುವ ನಿರೀಕ್ಷೆ ಇಲ್ಲದೇ ಹೋದರೆ ಪ್ರೇಮ ರಸಹೀನವಲ್ಲವಾ...?
ಕೇವಲ ನಂದ್‌ನಂದೇ ಅಂತ ಅಲ್ಲದೇ ಹೋದರೆ ಅದು ನನ್ನ ಪ್ರೇಮ ಹೇಗಾದೀತು...??
ನಾ ಹೀಗೆ ನಂಬಿರುವವರೆಗೂ ನನ್ನ ಪ್ರೇಮದ(?) ಫಲ ನೀನೆಂಬ ನೋವು ಮಾತ್ರ...
ಕಾರಣ - ಕೊಡುವ ಪಡೆವ ಲೇವಾದೇವಿಯಲ್ಲಿ ಯಾವತ್ತೂ ನೀನು ಕಂಜೂಸು ಪ್ರೇಮಿ, ನಾನು ಅತಿ ಆಸೆಯ ಕಾಮಿ...
ನಿಜದಲ್ಲಿ,
ಪ್ರೇಮವೆಂದರೆ ನಿನ್ನ ಹಬ್ಬಿ ನನ್ನ ತುಂಬಿಕೊಂಡ ನನ್ನೊಳಗಿನ ನಾನು...
ನಿನ್ನ ಸನ್ನಿಧಿಯಲ್ಲಿ ಸುಟ್ಟು ಹೋಗಬೇಕು ನನ್ನೊಳಗೆ "ನಾನು..."
____ "ರಾಧಾಕೃಷ್ಣ..."
␢␢␢
ಒಂದೊಂದೇ ದಳ ದಳವ ಬಿಡಿಸಿಕೊಳ್ಳುತ್ತಾ ಬೆಳದಿಂಗಳ ತಬ್ಬುವ ಕನ್ನೈದಿಲೆಯಂತೆ ನನ್ನ ಕನಸುಗಳ ಹಬ್ಬುತ್ತಾಳೆ ಅವಳು...
_____ ಕಾಡುಗಪ್ಪು ಕಣ್ಣಲ್ಲಿ ನೀಲಿ ನೀಲ ಕನಸು...
ಈ ರಣ ಅಮಾಸೆಯ ಕತ್ತಲ ಮಗ್ಗುಲಲ್ಲಿ ನೆಟಿಗೆ ಮುರಿಯುತಿರೋ ಬೆರಳ ಸಂಧಿಗಳಲಿ ಬೆತ್ತಲಾಗಿ ಮುಟ್ಟಾಟ ಆಡುತ್ತಿವೆ - ನಾ 'ನಿನಗಾಗಿ' ಬರೆದ ಕವಿತೆ ಮತ್ತು ನಿನ್ನ 'ಮೇಲೆ' ಬರೆದ ಕವಿತೆ...
______ ನಿನ್ನೊಳಗೆ ಮೈಮರೆತ ನನ್ನ ಉಸಿರು...
ಬಿಸಿ ಉಸಿರ ಕಾವ್ಯ - ನಿನ್ನಾ ನೆನಪು...
ಮೋಹಾಗ್ನಿ ಪಾದದ ಸೋಬಾನೆ ಪದ - ಇರುಳ ಬೆಮರು...
____ ಮಧುರ ಪಾಪದ ಸಾರಥಿ...
ನನ್ನ ಕಪ್ಪು ಹುಡುಗಿ ಮತ್ತು ನಮ್ಮ ಕತ್ತಲ ಏಕಾಂತ - ಎಂಥಾ ಸುಂದರ ಸಂಯೋಜನೆ...
____ ನಾವೇ ಅಲ್ಲಿ ಉರಿಯುತಿರೋ ದೀಪ/ಧೂಪ...
ಕೊರಳ ಬಳಸಿ ತುಟಿ ಕಚ್ಚಿ ನಾಭಿ ಮೂಲವ ಗಾಯಗೊಳಿಸಿ ಸಿಕ್ಕೂ ಸಿಗದಂಗೆ ಸಂಜೆಯಲಿ ಜಾರಿ ಇರುಳ ಮಂಚವ ಏಕಾಂಗಿಯಾಗಿಸಿದವಳೇ -
"ವಿರಹದ ದೀಪ ಜ್ವಾಲೆಗೆ ಸಿಕ್ಕಿ ರೆಕ್ಕೆ ಸುಟ್ಟುಕೊಂಡಿದೆ ಪೋಲಿ ಪೋರನ ಮೋಹದ ಹಾತೆ..."
____ ಎದೆಯ ಸುಡುವ ಮಧುರ ಜ್ವಾಲೆ...
ರಕ್ತ ತಣ್ಣಗಾದರೆ ಜೀವ ಸತ್ತಂತೆ ಲೆಕ್ಕ...
ಚೂರು ಬೆಂಕಿ ಹಚ್ಚು ನಾಭಿಗೆ...
ದಯಪಾಲಿಸೂ ಈ ಸಂಜೆಗೊಂದು ಕರಡಿ ತಬ್ಬುಗೆ...
______ ತುಟಿಯಂಚಿನ ಜೇನು, ಕಟಿಯಂಚಿನ ಸುಖ ಸೋಮ ದುಕಾನು, ಬೆನ್ನ ಬಯಲಿನ ಮಚ್ಚೆ, ನೀನೆಂಬ ಅಗ್ಗಿಷ್ಟಿಕೆ...
ಆ ಕಡು ಸಂಜೆ ಅಂಚಿನ ಅಪರಿಚಿತ, ಅಯಾಚಿತ ಮಂದಹಾಸದಲಿ ಸಿಕ್ಕ ಕನಸಿನ ಚಿಲ್ಟಾರಿ ಮರಿಯೊಂದು ಇರುಳ ಗೂಡಲ್ಲಿ ಒಂದೇ ಸಮ ಚೀಂವ್ಗುಡುತಿದೆ - ಎಂಥ ಚಂದವೇ ಮೋಹದ ಕಲರವ...
ನೀ ಮತ್ತೆ ಸಿಗಬಹುದೇ - ನಾ ಮತ್ತೆ ಮತ್ತದೇ ನಗೆ ಮುಗುಳ ಹೆಕ್ಕಬಹುದೇ...
____ಕಾಯುವಿಕೆ ಮತ್ತು ಹುಡುಕಾಟಗಳಲಿ ಕರುಳು ಜೀವಂತ...
ನನ್ನ ತೋಳಲ್ಲಿನ ಕರಿ ಮೋಡದ ಬಿಳಲು - ನೀನು...
ನಾ ಉಟ್ಟು ಮೆರೆವ ಚಂದದ ಉತ್ತುಂಗ ನಿನ್ನ ಬಿಡುಗಣ್ಣ ಬಿಚ್ಚು ತೋಳಲ್ಲಿ...
_____ಎದೆ ಬಿರಿವ 'ನಾಚಿಕೆ' ಮುಳ್ಳು...
ಕರಿ ಮುಗಿಲಿಗೆ ಮಲ್ಲಿಗೆಯೊಡನೆ ಕೆಂಡ ಹಬ್ಬಲಿಗೆಯ ಸೇರಿಸಿ ಹೆಣೆದ ದಂಡೆಯನು ಅಂಟಿಸಿದಂಗೆ - ನಸು ನಾಚಿಕೆಯ ಹೊದ್ದ ನಿನ್ನ ನಗು...
___ ನನ್ನ ಹುಡುಕುವ ಕನಸು ಕಂಪನ...
ನನ್ನ ಕಪ್ಪು ಹುಡುಗಿಯ ಕಾಡುಗಪ್ಪು ಕಂಗಳೇ ಹುಣ್ಣಿಮೆ ಚಂದಿರನ ಅಂತಃಪುರದ ಕನ್ನಡಿ...
ಅವು ನಾ ಬಯಸಿ ಬಯಸಿ ಮುಳುಗಿದ ಅಂತಃಕರುಣೀ ಸರೋವರ...
________ ಮಡಿಲು...
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)
ಜಗುಲಿಗೆ ಇಣುಕಿದ ಚಂದಿರ; ಮನಮಂದಿರದಿ ಮೂಡಿಸುವ ಭಾವಗಳೆ ಸುಂದರ... ಕ್ಷಣ ಕ್ಷಣಕೂ ಅದಲುಬದಲಾಗುವ ನನ್ನೊಳಗಿನ ನನ್ನದೇ ಭಾವಗಳು ನನ್ನನೇ ಬೆಚ್ಚಿಬೀಳಿಸುತ್ತವೆ ಹಲವೊಮ್ಮೆ...
Tuesday, March 14, 2023
ಗೊಂಚಲು - ನಾಕು ನೂರಾ ಐದು.....
Subscribe to:
Post Comments (Atom)
No comments:
Post a Comment