Tuesday, March 31, 2026

ಗೊಂಚಲು - ನಾಕ್ನೂರೆಂಬತ್ನಾಕು.....

ಬೆಳಗು - ಬೆಳಕಿನ ತಿಲ್ಲಾನ... 🤝🫂

ಬೆಳಗೆಂದರೆ ಬಲು ಬೆರಕಿ ಮಾಯಾ ಬಜಾರು...  
ಯೆದೆಯ ನೂರು ಭಾವಾನುಭಾವಗಳ ಕೊಟ್ಟು, ಕೊಂಡು, ಕೊಟ್ಟುದಕ್ಕೆ ಬೀಗಿ, ಕೊಂಡುದಕ್ಕೆ ಕರುಬಿ, ಕೊಡಬೇಕಿದ್ದುದನು ಕೊಡಲಾಗದೇ, ಕೊಳ್ಳಬೇಕಿದ್ದುದು ಸಮಾ ಸಿಗದೇ ಅಷ್ಟೋ ಇಷ್ಟೋ ಅಷ್ಟೂವೋ ಬಾಕಿಯಾಗಿ, ದಿನದ ಬಗಲ ಚೀಲದಲಿ ಸಂಜೆಗಿಷ್ಟು ನಗು, ನೋವುಳಿದರದಕೆ ಕಣ್ಣೀರೋ ಪನ್ನೀರೋ ಕುಡಿಸಿ ಮಲಗಿಸಿ ಅಷ್ಟೇ... 
ಅದ್ಕೂ ಹೆಚ್ಚು ಕಳಮಳವೇನೂ ಬೇಡ, ನಾಳೆಗೆ ಮತ್ತೆ ಬೆಳಗಾಗುತ್ತದೆ... 
ಬೆಳಗೆಂದರೆ ನಿತ್ಯ ಬಿಚ್ಚಿಕೊಳ್ಳುವ ಸಂತೆ - ಬಲು ಬೆರಕಿ ಮಾಯಾ ಬಜಾರು... 
ಶುಭದಿನ... 🤝🫂

ಬೆಳಕಿನ ಭಾಷೆ ಪ್ರೀತಿ...
ಹರಡಿಕೊಳ್ಳಲಿ ಯೆದೆಯಿಂದ ಯೆದೆಗೆ ಬೆಳಕಿನಾ ನೀತಿ
ಬೆಳಗು ಬಯಲ ಹರವಿಕೊಳ್ಳುವ ರೀತಿ... 
ಶುಭದಿನ... 🤝🫂💞

ಕಾಯುವ ಎದೆಯ ಬಾಗಿಲಿಗೇ ಬಂದು ಬೆಳಕು ಪ್ರೀತಿಯ ಸುರಿಯುವಾಗ - ಭುವಿ ಬಣ್ಣಗಳ ಗರಿಬಿಚ್ಚಿ ಪ್ರೀತಿಯನು ಸಂಭ್ರಮಿಸುವುದು... 
ಯೆದೆಯಿಂದ ಯೆದೆಗೆ ಪ್ರೀತಿಯನಷ್ಟೇ ಕೊಟ್ಟು ಕೊಳ್ಳುವ ಕಾರುಣ್ಯದ ಕಲಿಕೆ/ಸಲಿಗೆ ಬೆಳಗು... 
ಶುಭದ ಪರಿಭಾಷೆ... 
ಶುಭದಿನ... 🍫🤝💞

ಅನಕ್ಷರಸ್ಥ ನಾನು, ಅಕ್ಷರಕ್ಷರ ಜೋಡಿಸಿ ಬರೆದ ಒಂದು ಸಾಲೂ ಬೆಳಕಾಗಬಹುದೇನೋ - ಕಣ್ಣ ತುಂಬಿದ ಬೆಳಕು ಯೆದೆಯ ಬೆಳಗಬಹುದಾದರೆ... 
ನಿನ್ನ ಬೆಳಗೊಂದು ನಗೆಯ ಕಿಡಿಯ ಮುಡಿಯಬಹುದೇನೋ - ನಾ ಹಂಚಿಕೊಂಡ ಶುಭದ ನುಡಿಯಲಿಷ್ಟು ಪ್ರೀತಿಯ ಹುಡಿಯಿದ್ದರೆ... 
ಶುಭದಿನ... 🤝🫂

'ನಾನು' ಕಟ್ಟಿಕೊಂಡಿರುವ ಗೋಡೆಗಳ ನಡುವೆ ಬಾಗಿಲು, ಕಿಟಕಿ, ಯಾವುದೂ ಇಲ್ಲದಿದ್ದರೆ ಎಲ್ಲೋ ಮೂಲೆಯಲಿ ಸೀಳಿರುವ ಸಣ್ಣ ಬಿರುಕನಾದರೂ ಹುಡುಕಿ ಒಳಬರಲು ಹವಣಿಸುವ ಬೆಳಕು... 
ಆ ಬರಡು ಗೋಡೆಯನೇ ತಬ್ಬಿ ಹಬ್ಬಿ ಹೂಬಿಡುವ ಯಾವುದೋ ಬಳ್ಳಿ... 
ದಿವ್ಯ ಕಾರುಣ್ಯದ ಪಾಠ...!!!
ಬೆಳಗೆಂದರೆ ನಿಷ್ಕಾರಣವಾದ ಸಮೃದ್ಧ ಪ್ರೀತಿಯ ಭವ್ಯ ಸನ್ನಿಧಿ... 
ಶುಭದಿನ ನೇಹೀ... 🤝🫂

ಪಟ ಸೌಜನ್ಯ: ಸ್ನೇಹಿತೆ 'ವೀಣಾ...'

ಬೆಳಕು ಬಾಗಿಲಿಗೆ ಬರುತಿದೆ... 
ಏಳಿ, ಎದ್ದೇಳಿ...
ಪ್ರೀತಿಯ ಮಸೆಗಲ್ಲಿಗೆ ಉಜ್ಜಿ ಉಜ್ಜಿ 
ಕನಸ ಕುಡುಗೋಲಿನ ಸಾಣೆ ಹಿಡಿದು
ಸನ್ನದ್ಧರಾಗಿ
ಶುಭದ ಕೊಯ್ಲಿಗೆ ಹೊರಡಿ... 
ಬೆಳಗಾಯಿತು - ಶುಭದಿನದ ಶುರುವಾತು... 🌾

ಬೆಳಗಾಯಿತು...
ಬೆಳಕಿನ ಬೈರಾಗಿಯ ಸಂತೀಗೆ ಶುಭದ ಮರಿ ಕಿಡಿಗಳು ಬಾಗಿಲ ಬಡಿಯುತಿವೆ... 
ಕಣ್ಣ ಬೊಗಸೆಯಿಂದ ಮೊಗೆಮೊಗೆದು ಎದೆಯ ಹರಿವಾಣವ ತುಂಬಿಕೊಳ್ಳುವಾ... 
ಪ್ರೀತಿಯ ಕರುಳ ಕಣಜದಲಿ ನಗೆ ಮುಗುಳು ತುಂಬಿ ತುಳುಕಲಿ...
ಶುಭದಿನ... 🤝🫂🌾

ಕನಸ ಹೂಗಳು ಅರಳುವ ಹಾದಿ
ಪ್ರೀತಿ ಕಂಗಳ ಹಬ್ಬ
ಯೆದೆಯ ಹಿಗ್ಗಿನ ಕಬ್ಬ
ಬಣ್ಣ ಬೆಡಗಿನ ಬೆಳಗು... 
ನೇಹದಲಿ ಹೆಗಲು ತಬ್ಬಿ 
ನಗೆಯ ಬಣ್ಣಗಳ ಮೆತ್ತಿ 
ಬೆಳಕ ಮೀಯುವಾ, 
ಈ ಹಗಲಿದು ಮಧುರ ಹಾಡಾಗಲಿ... 
ಶುಭದಿನ... 🤝🫂

ಬೆಳಗಾಯಿತು...
ಬೆಳಕಿನ ಹೂ ಅರಳಿದೆ 
ಕನಸಿನ ಕೇಸರವನುಂಡು
ನಗೆಯ ಅಂದ, ಗಂಧವ ಉಸಿರಾಡುವಾ...
ಬಾ
ದಿನದಾರಂಭಕೆ ಪ್ರೀತಿಯ ಬಣ್ಣ ಬೆಡಗಿನುಡುಗೆ ಉಟ್ಟು
ಶುಭದ ಕಾವ್ಯ ಸವಿ ಸೊಬಗ ಮುಡಿದುಕೊಳ್ಳುವಾ...
ಶುಭದಿನ... 🤝🫂

ಮುಂಜಾನೆಯೆಂಬೋ ಮಧುರ ಮಾಯಾಲಾಪ...
ಕಣ್ಣ ಹನಿಗಳ ಗಾಳಿಸಿ ನಗೆಯ ಆಯುವ/ಆಳುವ ಭಂಡ ಭಾವದೆದೆಗಳಲ್ಲಿ ಬೆಳಗೆಂದರೆ ಶುಭದ ಮಯೂರ ನರ್ತನ... 
ಶುಭದಿನ... 🤝🫂

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

No comments:

Post a Comment