ಪ್ರೀತಿಯ ಮರಿಗಳ ಕಿಲಕಿಲ ಬೆಳಗು.....
ಬೆಳಕು ಯೆದೆಯೇರಿ, ಹೆದೆಯೇರಿಸಿ ಆಳಲು ನಿಂತರೆ, ಹೆಗಲೇರಲು ಬಂದ ಶನಿಯೂ ನಡು ಬಗ್ಗಿಸಿ ಆಳಾದಾನು... 
ಪಟ ಸೌಜನ್ಯ: ಸ್ನೇಹಿತೆ 'ವೀಣಾ...'
ನಡಿ, ಬೆಳಗಾನೆದ್ದು ಒಂದೀಸು ಬೆಳಕನು ಒಳಗೆಳಕೊಳ್ಳುವಾ...
ಶುಭದಿನ... 🤝🫂
ಒಂದು ಹಿಡಿ ಪ್ರೀತಿ ಬೆಳಕಿದ್ದರೆ ಯೆದೆಯಲಿ
ಶುಭದ ಗಣಿಗಳನೇ ಕಾಣಬಹುದು ಎಲ್ಲೆಂದರಲ್ಲಿ, ಎಲ್ಲದರಲ್ಲಿ...
ಶುಭದ ನಗೆಯ ಖನಿಯೇ - ಶುಭದಿನ... 🤝🫂
ಒಲ್ಲದ ಮನಸಲ್ಲಿ ಬಿಗಿದ ತೋಳಿಂದ ಕಳಚಿಕೊಂಡು, ಮೈಯ್ಯ ಬಿಲ್ಲಾಗಿಸಿ ಆಲಸ್ಯದ ಗಂಟು ಬಿಡಸಿ, ಕಳೆದಿರುಳ ಕಾವ್ಯವಾಗಿಸಿದ ಸಿಂಗಾರ ಸೊಬಗ ನೆನೆದು ಪಿಸುನುಡಿಯಲಿ ತುಟಿಗೆ ಪ್ರೀತಿ ಹೇಳಿ, ಅಮಲುಗಣ್ಣಲ್ಲೇ ಅರಳು ಹೂವಿನ ನಗೆ ನಕ್ಕಳು...
ಯೆದೆಯ ಗೂಡಲಿ ಕನಸ ರೆಕ್ಕೆ ಪಟಪಟಿಸಿ ಹೊಸ ಹಗಲಿನ ಶುಭದ ಸಂಭಾಷಣೆ ಮೊದಲಾಯಿತು...
ಶುಭದಿನ... 🫂🤝
ತನ್ನ ಸ್ಪರ್ಷಕೆ ಹೂವರಳೋ ಸದ್ದಿಗೆ ಮುದಗೊಂಡು ಮಧುರ ಕಂಪನದಿ ಹೊಳೆಯೋ ಬೆಳಕನು, ಹೂವಿನೆದೆ ತೊಟ್ಟನು ಹೀರಿ ಸುಖದಿ ತೇಗುವ ದುಂಬಿ ಅಭಿಮಾನದಿ ಅಭಿವಾದಿಸುವಾಗ, ಪ್ರೀತಿ ಮಡಿ ಮಡಿಯಾಗಿ ಜಗದ ಒಡಲ ತುಂಬಿ ನಗೆ ಬೀರಿತು...
ಹಗಲು ಮೈನೆರೆಯಿತು...
ಶುಭದಿನ... 🌻💞
ಮಣ್ಣಿಂದ ಅರಳೋ ಹೂವಿನ ಜೀವ
ಮತ್ತೆ
ಮಣ್ಣಾಳಕೆ ಮರಳೋ ಹೂವಿನ ಭಾವ
ಎರಡೂ ಬೆಳಕ ತಬ್ಬಿದವೇ ಅಲ್ಲವೇ...
ನಾವೂ
ಅರಳಿ, ಮರಳುವ ನಡು ಹಾದಿಗಿಷ್ಟು ನಗೆಯ ಬೆಳಕ ಹಬ್ಬಿಸಿದಿರಾಗದೇ...
ಬೆಳಗು ಬಡಿಸುವ ಪ್ರೀತಿಯ ಕಂಡು
ಈ ರುದಯವೂ ಒಂದೀಸು ಪ್ರೀತಿ ನಗೆಯ ಹಡೆಯಲಿ...
ಶುಭದಿನ ನೇಹೀ... 🤝🫂
ಕತ್ತಲಷ್ಟೇ ತುಂಬಿದ ನನ್ನೀ ಮಬ್ಬು ತಲೆಯೊಳಗೂ ನಿನ್ನದೊಂದು ಮುಗುಳ್ನಗುವು ಇಷ್ಟೇ ಇಷ್ಟು ಬೆಳಕ ಬಿತ್ತಬಹುದು...
ಬೆಳಗಾನೆದ್ದು ನಾ ನಿನ್ನೆದೆಗೆ ನಗೆಯ ಬಯಸಿದರೆ ನಂಗೂ ಇನಿತು ನಗೆಯು ಸಿಗಬಹುದು...
ಕೇಳಿಲ್ಲಿ -
ಹಗಲ ಮೊದಲ ಹೆಗಲಲ್ಲಿ ಶುಭದ ಫಲ ಸಿಕ್ಕರೆ ಯೆದೆಯಲ್ಲಿ ದಿನವೆಲ್ಲಾ ಪ್ರೀತಿ ಒಸಗೆ ಒಸರಬಹುದು...
ಶುಭದಿನ ನೇಹೀ... 🤝🫂
ನಭದ ಮೂಲೆಯಲೆಲ್ಲೋ ಅಡಗಿ ಮಲಗಿದಂತಿದ್ದ ಬೆಳಕು ಮೋಡದ ಹೊದಿಕೆಯ ಒದ್ದು ವಸುಧೆಯ ಕಣ್ಣಿಗೆ ಕಣ್ಣ ಕೂಡಿಸಿ ಕೂಕೀ ಅಂದಂತೆ ಮೆಲ್ಲಗೆ ಬೆಳಗಾಯಿತು....
ನಿದ್ದೆಯ ಮುಸುಕು ಸರಿಸಿ ಮೈಮುರಿದು ನಿನ್ನ ನನ್ನ ಯೆದೆಯ ಸೊಂಪಾದ ನಗೆಯು ತಂಪಾಗಿ ತೆಕ್ಕೆ ಬೀಳಲಿ...
ಪ್ರೀತಿಯ ಮರಿಗಳ ಕಿಲಕಿಲ ಬೆಳಗು...
ಶುಭದಿನ... 🤝🫂
ನಗೆ ಮುಗುಳ ದೀಪ ಹಚ್ಚಿ
ಬೆಳಕಿಗೆ ಬೆಳಕಿನಾರತಿ ಎತ್ತು...
ಪ್ರೀತಿ ಪಾರಾಯಣದ ನಾಂದಿ ಹಾಡಿ
ಬೆಳಗನು ಬೆಳಕಿಂದ ಬೆಳಗು...
ಯೆದೆಯ ಬೆಳಕು ಜಗದ ಬೀದಿಯ ಬೆಳಕಲಿ ಬೆರೆತು ಇನ್ನಷ್ಟು ಬೆಳೆಯಲಿ, ಹೊಳೆಯಲಿ, ಹೊಳೆಯಾಗಿ ಹರಿಯಲಿ...
ಶುಭದಿನ... 🤝🫂
ಬೆಳಕಿನ ಬಾಗಿಲಲಿ ಕನಸಿನ ಹಸೆ ಬರೆದು, ಯಾರೂ ತುಳಿಯದಿರಲೆಂದು ಬೆಳಕನೇ ಬೇಡಿಕೊಂಡು, ಬೆಳಕಿನಧಿಪತಿಗೆ ಕರ ಜೋಡಿಸಿ ತಲೆ ಬಾಗಿ, ಶುಭದ ತುಂಬು ಭರವಸೆಯಲಿ ಯೆದೆಯುಬ್ಬಿಸಿ ಬದುಕ ಬವಣೆಗಳ ಗೆಲ್ಲಲು ಹೊರಟು - ಯಾವುದೋ ನಗೆಯು ತೋಳ್ದೆರೆದು ಕರೆದಂತೆ ಭಾವ ತುಂಬಿ, ಎಳೆ ಬೆಳಕು ಚೆಲ್ಲಿದ ಹಾದಿಯ ಮೇಲೆ ಮತ್ತೆ ಚೂರು ಪ್ರೀತಿಯಾಯಿತು...
ಬೆಳಗಾಯಿತು...
ಶುಭದಿನ... 🤝🫂
ಕಾಲನ ಹೊಳೆಯಲಿ ಯಾವುದೂ ಹಳತಾಗುವುದಿಲ್ಲ; ಸೋಲಿಲ್ಲ, ಗೆಲುವಿಲ್ಲ - ಪ್ರೀತಿಯೊಂದೇ ಹರಿವು...
ಮುರಿದ ಇಮಾರತಿನ ಗೋಡೆ ಮೂಲೆಯ ಇರುವೆ ಗೂಡಲ್ಲಿ ದಿನವೂ ಸಹಸ್ರ ಮರಿಗಳ ಜನ್ಮೋತ್ಸವ; ಆಳ್ವಿಕೆ ಮುಗಿದರೂ ಅರಳುವಿಕೆಯ ಸೊಬಗಿಗೆ ಕೊನೆಯಿಲ್ಲ - ಖಾಲಿಯಾಗದ ಪ್ರೀತಿ ಖಜಾನೆ...
ಕಲ್ಲೆದೆಯ ಬಿರುಕಿನಲೇ ನೀರ್ಜಿನುಗು, ಹಸಿರೂ, ಹೂವೂ ವಸಂತೋತ್ಸವ - ಬೋರ್ಗಲ್ಲಿಗಿಂತ ಬಲು ಬಿರುಸು ಪ್ರೀತಿ...
ಪ್ರಕೃತಿ ಪ್ರೇಮದಾಟದ ಮೂರ್ತ ಮಜಲುಗಳಿಗೆ ಋತುಗಳ ಹೆಸರು, ಬಣ್ಣ, ಬೆಡಗು; ನಿತ್ಯ ನವೀನ ಸಿಂಗಾರ ಸಂಭ್ರಮ, ವಿಭ್ರಮ - ಬೇವು, ಬೆಲ್ಲ ಪ್ರೀತಿ...
ನಲಿವಿಗೊಂದು ನೆಪ - ನಗುವರಳುವಾಗಲೆಲ್ಲ ಹಬ್ಬ...
ಪ್ರೀತಿ ಪ್ರೀತಿ ಪ್ರೀತಿ - ಉಗಾದಿ...
ಶುಭಾಶಯ - ಶುಭದಿನ... 💞🤝🫂🍬
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)
ಜಗುಲಿಗೆ ಇಣುಕಿದ ಚಂದಿರ; ಮನಮಂದಿರದಿ ಮೂಡಿಸುವ ಭಾವಗಳೆ ಸುಂದರ... ಕ್ಷಣ ಕ್ಷಣಕೂ ಅದಲುಬದಲಾಗುವ ನನ್ನೊಳಗಿನ ನನ್ನದೇ ಭಾವಗಳು ನನ್ನನೇ ಬೆಚ್ಚಿಬೀಳಿಸುತ್ತವೆ ಹಲವೊಮ್ಮೆ...
Tuesday, March 31, 2026
ಗೊಂಚಲು - ನಾಕ್ನೂರೆಂಬತ್ತೈದು.....
Subscribe to:
Post Comments (Atom)
No comments:
Post a Comment