Thursday, June 25, 2026

ಗೊಂಚಲು - ನಾಕ್ನೂರೆಂಬತ್ತಾರು.....

ಆಯಿ ಎಂಬ ಭಗವದ್ಗೀತೆ.....

ಅವಳ‌ ಮಡಿಲ ತುಂಡರಸ ನಾನು...
ಮುಸುಕು ಸರಿಸಿ ಅಳಶಾತನದಲಿ ಮುಸುಡಿ ಉಜ್ಜಿಕೊಂಡು ಕೂತಾಗ ಅವಳ ನಿತ್ಯದ ಬೈಗುಳವೊಂದು ಅಚಾನಕ್ ನೆನಪಾಗಿ ಬೆಳಗಿಗೆ ಕಣ್ಬಿಟ್ಟೆ - ನೂರು ದೈವಗಳ ದಿವ್ಯ ಮಂತ್ರೋಕ್ತ ಆಶೀರ್ವಾದ ನೆತ್ತಿ ಸವರಿದಂತ ಕಂಪನದ ನಗು ಯೆನ್ನೆದೆಯಲಿ... 
ಇನ್ನೀಗ ಈ ದಿನದ ಶುಭದ ಪ್ರವಾಹಕ್ಕೆ ಅಡೆತಡೆಗಳಿಲ್ಲ...
ಮಮತೆ ಮಡಿಲು ನಗೆಯ ಮುಡಿ ಕಾಯುವಾಗ ಹಗಲುಗಳೆಲ್ಲ ಶುಭದ ಶ್ರೀಮಂತ ತೊಟ್ಟಿಲು...
ಶುಭದಿನ... 
ಹೂವರಳುವಂಗೆ ನಗುತಿದ್ದವಳ ಮಡಿಲ ನೆನಪಿಗಿಂತ ಶುಭವಿನ್ನೇನಿದೆ... 🥰
&&&

ಆಗೆಲ್ಲಾ ಸಣ್ಣ ರಂಪಕ್ಕೂ ಎಲ್ಲಾ ಬಿಟ್ಟೆದ್ದು ಓಡಿ ಬರೋಳು... 
ಈಗ ಅವಳ ಮಡಿಲು ಬೇಕೆಂದರೆ ಅವಳಿದ್ದಲ್ಲಿಗೇ ಹೋಗಬೇಕು... 
ಆದರೂ, 
ದಾರಿ ಹೇಳದೇ ಅಷ್ಟು ದೂರ ಬಿಟ್ಟು ಹೋದದ್ದು ಎಷ್ಟು ಸರಿ...!? 
___ ಆಯೀ... 

ಬದುಕ ಬವಣೆಗಳ ಯುದ್ಧಕೆ ತಾನು ಎದೆ ಕೊಟ್ಟು ಎನ್ನೆದುರು ಪ್ರೀತಿಯ ಎಡೆ ಇಟ್ಟವಳು
...
ಅರ್ಥಾರ್ಥಗಳ ಹಂಗಿಲ್ಲದೇ ಬರಿ ಸ್ವಾರ್ಥದಲಿ ನಾನೋದಿದ ಏಕೈಕ ಮಹದ್ಗ್ರಂಥ ಅವಳು...
___ ಆಯಿ ಎಂಬ ಭಗವದ್ಗೀತೆ... 

ಇಲ್ಲೇ ಎಲ್ಲೋ ಎನ್ನ ಮನೆ ಬೀದಿಯಲ್ಲೇ ನೀನು ಮತ್ತೆ ಸಿಕ್ಕಿ ಯೆದೆಯ ತಬ್ಬಿದಂತೆ ಕನಸಾಗುತ್ತದೆ - ಅದೇ ಅಂದಿನ ಬಿಸುಪಿನಲ್ಲಿ...
ನೋಡಿದ್ಯಾ -
ನನ್ನ ಕನಸೂ ನನ್ನ ಆಡಿಕೊಂಡು ನಗುತ್ತದೆ ಇಂದೀಗ...
ಉಸಿರಾದವರ ವಿದಾಯ, ವಿಯೋಗವನ್ನು ಎಂದೂ ಒಪ್ಪದ ಮಳ್ಳು ಮನಸನು ಕಟ್ಟಿಕೊಂಡು ಇಂದು ನಾಳೆಗಳ ದಾಟುವುದು ಹೇಗೆ ಹೇಳು...
ಎಲ್ಲಕ್ಕೂ ಕಾಲವೇ ಮದ್ದು ಎಂಬುದು ಎಂಥ ಕ್ಲೀಷೆಯ ಮಾತು ಗೊತ್ತಾ - ಮರಳಿ ಕೊಡಲಾರದ್ದನ್ನು ಕಿತ್ತುಕೊಂಡ ಕಾಲ ಕಳೆದುಕೊಂಡವರ ಕರುಳ ನೋವಿಗೆ ಮದ್ದಾಗುವುದಾದರೂ ಹೇಗೆ ನೀನೇ ಹೇಳು...
ಕಾಣದ ವಿಧಿಯನು ಹಳಿದು, ಎದುರಿರುವ ಹರಿವನ್ನು ಒಪ್ಪಿ, ನಾ ಪಡೆದು ಬಂದದ್ದೇ ಇಷ್ಟು, ಜಗನಿಯಮ ಇರುವುದೇ ಹೀಗೆ ಎನ್ನುತ್ತಾ ನಗೆಯ ನಟನೆಯಲ್ಲಿ ಪಳಗಬಹುದಷ್ಟೇ - ನಿನ್ನ ಬೆನ್ನಿಗೆ ಮುಖ ಮಾಡಿ ಇಲ್ಲೇ ಉಳಿದ ನನಗಾಗಿ, ಬಿಟ್ಟೂ ಬಿಡದೆ ನೆನಪಾಗಿ ತಬ್ಬುವ ನಿನಗಾಗಿ, ನನ್ನವರೆಂಬುವರ ಸುಳ್ಳು ಸಮಾಧಾನಕ್ಕಾಗಿ...
ಆದ್ರೂ,
ಭಾವದಲಿ ನೂರಿದ್ದೇನು, ಜೀವದಲಿ ಉಸಿರಿಲ್ಲದ ಮೇಲೆ - ನನ್ನೊಂದಿಗೀಗ ನೀನಿಲ್ಲ ಎಂಬುದಷ್ಟೇ ಅಂತಿಮ ಸತ್ಯ ಅಲ್ವಾ - ಅದನು ಒಪ್ಪಿಕೊಂಡು ಕಾಲದೊಂದಿಗೆ ಮುನ್ಸಾಗುವ ಶಕ್ತಿ, ಯುಕ್ತಿಯನು ಕಾಲದಲಿ ಕಾಲವಾದ ನೀನೇ ಕೊಡಬೇಕಷ್ಟೇ...
 ___ ಬದುಕು ನಾಟಕ ರಂಗ - ಚೆನ್ನಾಗಿ ನಗಬಲ್ಲವನು ನಟನವಿಶಾರದ...

ಅವೆಲ್ಲಾ ಸಂಭ್ರಮಗಳು ನಿನ್ನೊಂದಿಗೇ ಮುಗಿದು ಹೋದವು... 

ಮತ್ತು 
ಸಂಭ್ರಮದಲಿ ಆಡಲು ಮರೆತ ಮಾತುಗಳು ಎಲ್ಲ ಮುಗಿದ ಖಾಲಿಯಲಿ ನೆನಪಾಗಬಾರದು ನೋಡು... 
___ ನಿತ್ರಾಣ ಮೌನ...

ಈ ಚಿತ್ತ ಕೋಶದಲಿ ನಿನ್ನ ನೆನಪಿನ ಕಾವು ಅಂಟದ ಒಂದಾದರೂ ನೆನಪು ನಗುವುದು ಕಾಣುವುದಿಲ್ಲ... 
ಮತ್ತು 

ನಿನ್ನಿಂದಾಚೆ ಹೊಸ ನೆನಪುಗಳ ಸೃಷ್ಟಿಸುವ ಕನಸೂ, ಕಸುವೂ ಈ ಮನಸಿಗುಳಿದಿಲ್ಲ...
____ ಚಿತ್ತುಕಾಟು ಚಿತ್ತ(ತ್ರ) ಭಿತ್ತಿ... 

ಬೆಳದಿಂಗಳು ಯೆದೆಕೊರೆವ ಮಾತಾಡುವಾಗ,
ಕತ್ತಲು ವಿಚಿತ್ರವಾಗಿ ಸಂತೈಸುತ್ತದೆ...
___ ದಾರಿ ಮರೆತು ದಿಕ್ಕೆಟ್ಟವರಿಗೆಂದೇ ರಾತ್ರಿಗಳನು ಹೆಣೆಯಲಾಗಿದೆಯಾ...?! 

ಎಲ್ಲಾ ಮರೆತುಹೋಗಲೀ ಎಂದೊಮ್ಮೆ ಶಪಿಸಬಾರದೇ... 
___ ಮೈಯ್ಯೆಲ್ಲಾ ಕಣ್ಣಿನ ನೆನಪಿನ ಶಾಪಕ್ಕೊಂದು ಉಶ್ಯಾಪ ಬೇಕಿದೆ... 

ದಿನವೂ ತಲೆಚಿಟ್ಟು ಹಿಡಿವಂತೆ ಮನೆ ಅಂಗಳದಲೇ ಅವುಗಳ ಕಛೇರಿ ನಡೆದಿರುತ್ತದೆ...
ಆದರೋ,
ಶ್ರಾದ್ಧದ ದಿನ ಮಾತ್ರ ನಾ ಗಂಟಲು ಹರಿವಂತೆ ಕೂಗಿ ಕರೆದರೂ ಒಂದೇ ಒಂದು ಕಾಕೆಯ ಮುಖವೂ ಕಾಣದೇ ಕರುಳು ತಿವಿಯುತ್ತದೆ... 
ಎನ್ನ ಪಾಪದ ಬಾಬತ್ತಿಗೆ ಅವಳ ಹೆಸರಿಗಿಟ್ಟ ಅಗುಳು ಹಳಸುವಂಗೆ ಮಾಡಬೇಡೀ ಎಂದು ಯಾರಲ್ಲಿ ಕೇಳುವುದು, ಅವಳೇ ಮುನಿದಂತ ಭಾವ ಕಾಡುವಾಗ... 
____ ಬಲಿ ಬಾಳೆಯ ಬಯಲಿಗಿಡುವಾಗ ಉಸಿರು ನಡುಗುತ್ತದೆ ಪ್ರತೀಸರ್ತಿ...  
&&&

ಬದುಕಿಗಷ್ಟೇ ಋತುಗಳ ಲೆಕ್ಕ... 
ಸಾವಿಗಾದರೋ ವರುಷಗಳು ಲೆಕ್ಕಕ್ಕಿಲ್ಲ - ಸಾವಾದರೆ ಯಾವ ಲೆಕ್ಕಾಚಾರದ  ಬಾಕಿಯೂ ಲೆಕ್ಕಕ್ಕೆ  ಸಿಗದಂತೆ ಎಲ್ಲ ಎಲ್ಲಾ ಚುಕ್ತಾ ಮೋಕ್ತ... 
___ ನೆಪ ಹೇಳದೇ ನೆನಪುಗಳ ನೇಯುವ ಬದುಕು - ಇನ್ನೆಲ್ಲ ನೆನಪು ಮಾತ್ರವೆನ್ನಲೊಂದು ನೆಪ ಹುಡುಕುವ ಸಾವು... 

ಬಲು ಬೆರಕಿ ಜನುಮ - ಮರಾಮೋಸದ ಸಾವು - ನಗುವ ಹುಡುಕಿ ಹುಡುಕಿ ಬಣಗುಡುವ ರಣರಣ ಸುಸ್ತು... 
ಎಂಥ ಸಾವು ಮಾರಾಯ ಅನ್ನುವಲ್ಲಿ ಸಾವೇ ಹಿತ ಅನ್ನೋದು ಒಳ ಭಾವವಾ...?! 
&&&

ಮಾಣೀ -
ತುಂಬಾ ದುಡಿಯಬೇಕು... 
ತುಂಬಾ ಸಂಪಾದಿಸಬೇಕೆಂದರೆ ತುಂಬಾನೇ ದುಡಿಯಬೇಕು... 
ಕರುಳ ದಾರದಲಿ ರುದಯವ ಕಡೆ ಕಡೆದು, 
ಕಣ್ಹನಿಯ ಗಾಳಿಸಿ ಗಾಳಿಸಿ ಕುಡಿದು, 
ಕಟ್ಟುಸಿರ ಕಡಿದು ಬಾಗಿ ಬಾಗಿ ಭಂಡ ಬಿದ್ದು ರುದ್ರ ನಗೆಯಲೇ ಬದುಕ ಸುಡಬೇಕು... 
ತುಂಬಾ ತುಂಬಾ ಸಂಪಾದಿಸಬೇಕೂ ಅಂದರೆ, ತುಂಬಾ ಅಂದ್ರೆ ತುಂಬಾನೇ ದುಡಿಯಬೇಕು... 
___ "ಪ್ರೀತಿ ಸಂಪಾದನೆ... "
&&&

ಕೇಳೇ, 
ಸತ್ತು ಸುಖಿಯಾದವಳೇ -
ಅಡಿಗಡಿಗೆ ಎಡಗುವ ನಿನ್ನ ನೆನಪು - ಉಸಿರ ನಾಳ ಹಿಸುಕಿದಂಗೆ ಗಂಟಲ ಒಣಗಿಸೋ ಉಮ್ಮಳಿಕೆ - ಯೆದೆಯ ಹಸಿ ಗೋಡೆ ತುಂಬಾ ಬದುಕು ಗುರಿಯಿಟ್ಟು ಹೊಡೆದ ಕಲ್ಲುಗಳ ಮಾಯದ ಗಾಯ...
ಅಷ್ಟಾಗುವಾಗಲೂ,
ಏನೋ ಹಳೆಯದ್ಯಾವುದೋ ಪಾಪ/ತಾಪ ನೆನಪಾದಂತೆ ತಲೆತಲೆಗೆ ಹೊಡೆದುಕೊಂಡು, ಎಲ್ಲಾ ಮರೆತಂತೆ ಕಣ್ಣೊರೆಸಿಕೊಂಡು, ತೋಳೇರಿಸಿ ಹಲ್ಕಿರಿದು ಗಹಗಹಿಸೋ ಹುಂಬ ಹುಚ್ಚು - ಬದುಕಿಗಾಗಿ ಅಲ್ಲ, ಬದುಕಿರುವ ಕರುಮಕ್ಕಾಗಿ...
ಅಲ್ಲೂ, ಗೊತ್ತಿಲ್ಲೆ ಯೆನ್ಗೂ,
ಯಾವ ಮೋಹದ ಮುರಳಿ ಕರೆಯ ಮೋಹ/ದಾಹವಿನ್ನೂ ಯೆದೆಯಲಿ ಬಾಕಿ ಇದೆಯೋ...!!! 
ಹಂಗಂದ್ಕಂಡು,
ಈ ಹುಚ್ಚನ/ಹುಚ್ಚಿನ ನಗೆಯ ಸತ್ಯವನು ಶಂಕಿಸಬೇಡಾ ಅಂತೇನೆ...
ಅದೂ -
ನೀನೇ ಕಲಿಸಿಟ್ಟು ಹೋದ ವಿದ್ಯೆಯೇ ಅಹುದು...
___ ಸಾವಾಸಲ್ಲ ಮಾರಾಯ್ತೀ, ಅರ್ಥವೇ ಆಗದ ಈ ಬದುಕು, ಸಾವಿನ ಲೆಕ್ಕಪತ್ರದ್ದು... 
&&&

ಅತ್ತು ತೊಟ್ಟಿಲ ಹುಡುಕಿದರೂ, ತೊಟ್ಟಿಲ ನೆನಪಾಗಿ ಅತ್ತರೂ ಎತ್ತಾಡಿಸಿ ತೂಗಿದ ಕೈ ಅವಳು... 
ಮತ್ತೆ ಮತ್ತೆ ಬದುಕು ಚಿವುಟುವಾಗಲಂತೂ ಮೊದಲು ನೆನಪಾಗುವುದೇ ಅವಳ ಮಡಿಲು... 
ಹೊಟ್ಟೆ ಬಟ್ಟೆ ಕಟ್ಟಿ ನಗೆಯ ಬಟ್ಟಿ ಇಳಿಸುವ ವಿದ್ಯೆ ಬಲ್ಲವಳು... 
ಕರುಳ ಸ್ವಾರ್ಥ ಕೈಗೂಡದೇ ಎದೆಯು ಬಣಗುಡುವಾಗಲೂ ತನ್ನೊಡಲ ಪ್ರೀತಿ ಒರತೆ ಬತ್ತದಂಗೆ ಕಾಯ್ದುಕೊಂಬವಳು... 
ಎಲ್ಲ ಆಯಿಯಂದಿರು ಅದ್ಹೇಗೆ ಹಾಗೆಯೇ ಇರುವುದು...!!!
ಪ್ರೀತಿಯ ಕೊಡುವ ಕಾರುಣ್ಯವ ಕಲಿವುದಾದರೆ ಆಯಿಯಿಂದಲೇ ಕಲಿಯಬೇಕು... 
ಅವಳೆದೆಯ ಹಾಲು ಬತ್ತಿದರೂ ಮನದ ಮಮತೆ ಬತ್ತುವುದೇ ಇಲ್ಲ...
___ ಆಯೀ ಎಂಬ ಬೆರಗು, ಬೆಳಕು... 

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

No comments:

Post a Comment