Saturday, November 30, 2013

ಗೊಂಚಲು - ತೊಂಬತ್ತು ಮತ್ತು ಒಂಬತ್ತು.....

ಚಂದಮನ ಮಾತು...
(ಕೆಲ ಸಂಜೆಗಳ ಕಾಯುವ ಗೆಳೆಯನ ಬಗ್ಗೆ ತುಂಡು ತುಂಡು ಮಾತುಗಳು...)

ಮೇಲೆ ಮೋಡದ ಮರೇಲಿ ನಗೋ ಅರ್ಧ ಚಂದಿರ...ಕೆಳಗಿನ ಬೀದೀಲಿ ರಜೆಯ ಖುಷೀಲಿ ಕುಣಿದು ಕುಪ್ಪಳಿಸಿ ಬೀದಿ ತುಂಬ ಶೃಂಗಾರ ರಸ ಚೆಲ್ಲುತಿರೋ ಹೊಸ ಹರೆಯದ ಚಂದ್ರಮುಖಿಯರು... ಆಹಾ ಈ ಸಂಜೆಗೆಂಥ ಸೊಬಗು...;)
***
ಬಿಳಿ ಮೋಡದ ಹಿಂಡು – ನಡುವೆ ನಲಿವ ಚಂದಮ – ಆ ಮೂಲೆಯಲೊಂದು ಮಿನುಗೊ ಒಂಟಿ ತಾರೆ – ನಿನ್ನೊಡಗೂಡಿದ ಒಂದಿಷ್ಟು ಮಧುರ ನೆನಪುಗಳು – ಮೌನದ ಮುಸುಕಿನೊಳಗಿಂದ ಸಾವಿರ ಮಾತಾಡೊ ಮನಸು – ಸಂಜೆಯೊಂದು ಶೃಂಗಾರದ ಶೃಂಗವನೇರಿ ಸೊಬಗ ಸುರಿದು ನಗುತಲಿದೆ...
***
ಇದೀಗ ಜೊತೆಗೆ ನಿನ್ನ ನಗೆ ಬೆಳದಿಂಗಳೂ ಸೇರಿಕೊಂಡಿತು...
***
ಬಿಡುವಿದ್ರೆ ಆಚೆ ಬಂದು ಒಂದು ಕ್ಷಣ ಚಂದಮನ ನೋಡು... ನನ್ನ ನಗು ಕಾಣಿಸೀತು... ಬದುಕ ಪ್ರೀತಿ ಉಮ್ಮಳಿಸೀತು...
***
ಅಮ್ಮನ ಮಡಿಲಂಥ ತನ್ನ ತಂಪು ಹೊನಲಿನಿಂದ ನನ್ನ ಸಣ್ಣ ಕರುಳಿನಾಳದಲ್ಲಿ ಅವಳ (ನಿನ್ನ) ನಗೆಯ ನೆನಪ ಉರಿಯ ಹೊತ್ತಿಸೋ, ಅವಳ ಅಪರಿಮಿತ ಪ್ರೀತಿಯನೂ ಕೂಡ ಗೆದ್ದಿಟ್ಟುಕೊಂಡ ಈ ಚಂದಿರನೆಂದರೆ ನಂಗೆ ಒಮ್ಮೆಲೆ ಇನ್ನಿಲ್ಲದ ಪ್ರೀತಿ, ಈರ್ಶ್ಯೆ, ಸಿಟ್ಟು, ಉಲ್ಲಾಸ, ಬದುಕ ಪ್ರೀತಿ ಕಟ್ಟಿಕೊಡೋ ಸ್ನೇಹ ಎಲ್ಲವೂ...
***
ಗೆಳತೀ –
ಆಗಾಗ ಚಂದಿರ ನನ್ನ ಹೇಗೆಲ್ಲ ಕಾಡುತ್ತಾನೆ ಅಂದ್ರೆ – ಅಮ್ಮನ ಮಮತೆಯ ತಂಪಿನ ಹಾಗೆ, ಆಯಿಯ ಹಳೆ ಸೀರೆಯ ಘಮದ ಹಾಗೆ... ಬಾಲ್ಯದ ಮೊಣಕೈಯ ತರಚು ಗಾಯದ ಕಲೆಯ ಹಾಗೆ... ಆಗಾಗ ಕಾಡುವ ಛಳಿ ಜ್ವರದ ಹಾಗೆ.... ನಿನ್ನ ಕುಡಿನೋಟದ ಹಾಗೆ, ಹಸಿ ಪ್ರೀತಿಯ ಹಾಗೆ, ಹುಸಿ ಮುನಿಸಿನ ಹಾಗೆ, ಅಕಾರಣ ಮೌನದ ಹಾಗೆ, ನಿದ್ದೆ ಮಂಪರಿನ ನಿನ್ನ ಮುದ್ದು ನಗೆಯ ಹಾಗೆ ಮತ್ತು ಅರಿವೇ ಆಗದೆ ಬದುಕೇ ನೀನಾಗಿಹೋದ ಹಾಗೆ... 
***
ನೆನಪು ಕಾಡುವಾಗ – ಕನಸು ಹಾಡುವಾಗ – ಖುಷಿಯ ಹರಿವಿನಲಿ – ಹಸಿ ನೋವಿನಲಿ – ಸುಖದ ಅಮಲಿನಲಿ – ಎಲ್ಲ ಕಳಕೊಂಡು ಕಬೋಜಿಯಾದ ಭಾವ ಮನವ ಕದಡುತ್ತಿದ್ದಾಗ – ನೀ ಸಿಕ್ಕು ಮೊದ ಮೊದಲು ನಕ್ಕಾಗ – ನೀ ಅಲ್ಲೇಲ್ಲೋ ಕಳೆದು ಹೋದಾಗ – ಬದುಕ ಏರಿಳಿತದ ಎಲ್ಲ ಘಳಿಗೆಯಲೂ ನೆರಳಂತೆ ಜೊತೆಯಿದ್ದು ಮನವ ತುಂಬಿದ ನನ್ನ ಪ್ರೀತಿಯ ಗೆಳೆಯ – ಅವನು ನನ್ನ ಚಂದಮ... 
***
ಕಳೆದು ಹೋದ ಕನಸುಗಳ ನೆನಪಲ್ಲಿ ನಾ ಅಳುವಾಗ ಮೋಡದ ಮರೆ ಸೇರೋ ಆತನ ಕಂಡರೆ ನಂಗನ್ನಿಸುತ್ತೆ ಅವನೂ ಅಳುತಿರುವನೇನೋ... ತನ್ನಳುವ ತೋರಿ ನನ್ನಳುವ ಹೆಚ್ಚಿಸದಿರಲು ಮೋಡದ ಆಸರೆ ಪಡೆದನೇನೋ... ನಾನಳುವಾಗಲೆಲ್ಲ ಅವನೂ ಮಂಕಾದ ಭಾವ ನನ್ನಲ್ಲಿ – ಆತ ನನ್ನ ಚಂದಮ... 
***
ಚಂದಿರನೆಂದರೆ ನಂಗೆ ನನ್ನ ಕಾಡುವ ನನ್ನದೇ ಮನಸಿನ ಹಾಗೆ...  

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

9 comments:

  1. ನಿನ್ನ ಭಾವ ಬರಹ ಎಂದಿನಂತೆ ಚಂದ ಚಂದ ...... ಆ ಚಂದಿರನ ತಿಳಿ ಮೊಗದಂತೆಯೇ.....

    ReplyDelete
  2. ಹೇಗಿದೆ ನೋಡು.... ಇಲ್ಲಿ ಚಂದಿರ ಹೆಚ್ಚು ಹೊಳೆಯುತ್ತಿದ್ದಾನೋ
    ನೀನೆಣಬ ನಿನ್ನ ಭಾವ ಹೆಚ್ಚು ಹೊಳೆಯುತ್ತಿದೆಯೋ ಗೊತ್ತಾಗುತ್ತಿಲ್ಲ........
    ಚಂದಿರನ ನೋಡದಿದ್ದರೂ ನಿನ್ನ ನಗೆ ಕಾಣಿಸುತ್ತಿದೆ......

    ನಿನ್ನ ನಗೆ ಒಂದು ಇನ್ನೊಂದಾಗಿ ನೂರಾಗಿಬಿಡಲಿ......

    ReplyDelete
  3. ನೂರನೇ ಬರಹದೆಡೆಗೆ ಕುತೂಹಲವಿದೆ... congratulations ...

    ReplyDelete
  4. ನೂರಕ್ಕೆ ಒಂದೇ ಬಾಕಿ.ಕಾವ್ಯಾತ್ಮಕ ಬರಹ.

    ReplyDelete
  5. ಚಂದದ ಗೊಂಚಲು...
    ಅದೆಷ್ಟು ಉತ್ಸಾಹವ ,ಪ್ರೋತ್ಸಾಹವ,ಸಮಾಧಾನವ ಕೊಟ್ಟುಬಿಡ್ತಾನಲ್ವಾ ಈ ಚಂದಮ.
    ತುಸು ಜಾಸ್ತಿ ಪ್ರೀತಿಯಾಯ್ತು ಇವತ್ತಿನ ಈ ಚಂದಮನ ಮೇಲೆ :)
    ಚಂದಮನಷ್ಟೇ ಚಂದವೀ ಭಾವ.

    ReplyDelete
  6. ಚ೦ದಮನಿಗೆ ಚ೦ದಮನೇ ಸಾಟಿ.. ಬಹಳ ಚನ್ನಾಗಿದೆ :)

    ReplyDelete
  7. ಪಡುವಣ ಬಾನಿನ ನೀಲಿಯ ಹಣೆಯಲಿ ಬಿದಿಗೆಯ ರೇಖಾ ಚಂದ್ರಮನು ...

    ಚಂದ್ರಮನೆಂಬೋ ದೂರದ ಸಖನನ್ನು ಪಕ್ಕಕ್ಕೆಳೆದುಕೊಂಡು ಅಪ್ಪುಗೆಯಲ್ಲಿ ಬಚ್ಚ್ಹಿಟ್ಟು ಕೊಳ್ಳುವಂತೆ ಮಾಡುತ್ತೆ ಈ ಭಾವಗಳು

    ReplyDelete