Thursday, July 24, 2014

ಗೊಂಚಲು - ನೂರಾ ಇಪ್ಪತ್ತೇಳು.....

ಸುಮ್ಮನೇ ಒಂದಿಷ್ಟು.....

ನೋವುಗಳೇ ಜಾಸ್ತಿ ನೆನಪಲ್ಲಿ ಉಳಿಯುತ್ತವೆ ಮತ್ತು ನೋವುಗಳು ಕಳೆದ ಮೇಲೆ ನಾಳೆಗಳಲ್ಲಿ ಅವು ನಿಟ್ಟುಸಿರ ನಗುವಾಗಿ ಬದಲಾಗುತ್ತವೆ...
ಅಲ್ಲದೇ ಆತ್ಮೀಕವಾದ ಪ್ರೀತಿ ಜತೆಯಿದ್ದಾಗ ನೋವು ಕೂಡ ಹಿತವೇ ಅನ್ನಿಸುತ್ತಂತೆ...
ಯಾಕೋ ಎದೆಯ ಗೂಡಲ್ಲಿ ಉಸಿರು ಖಾಲಿಯಾಗುವ ಮುನ್ನ ಎಲ್ಲರನ್ನೂ ಒಂದಿಷ್ಟು ನೋಯಿಸಿ ಶಾಶ್ವತ ನೆನಪಾಗಿ ಹೋಗಲಾ ಎಂಬ ಕೆಟ್ಟ ಬಯಕೆ ಮೂಡುತ್ತೆ ಆಗೀಗ...
(ಕ್ಷಮಿಸಿ ಈಗೇನು ಕಡಿಮೆ ನೋಯಿಸಿದ್ದೀಯಾ ಅಂತ ಕೇಳುವವರಿಗೆ ಉತ್ತರ ಇಲ್ಲ ನನ್ನಲ್ಲಿ...)


ಕಪ್ಪು ಬಿಳುಪಿನ ಬದುಕಿಗೆ ಬಣ್ಣದ ಕನಸುಗಳ ಮದರಂಗಿ ಮೆರಗಿನ ಕೈಯ ಆಸರೆ ನೀಡಿ - ನನ್ನಲ್ಲಿ ಸಾವಿನಂಥ ಸಾವಿನೆದುರೂ ನಗೆಯ ತಂಬಿಟ್ಟಿನ ಬುತ್ತಿ ಬಿಚ್ಚಿ ಕೂರಬಲ್ಲ ಶಕ್ತಿ ತುಂಬಿ - ತಾನೇನೂ ಮಾಡಿಲ್ಲ, ತನಗೇನೂ ಗೊತ್ತಿಲ್ಲ, ನಿನ್ನ ಗೆಲುವೆಲ್ಲ ಕೇವಲ ನಿನ್ನ ಬದುಕ ಪ್ರೀತಿಯ ಫಲ ಅಂತಂದು ಅಲ್ಲೆಲ್ಲೋ ಮೂಲೆಯಲಿ, ಮೌನ ಮುಸ್ಸಂಜೆಯಲಿ ಖುಷಿಯ ಕಣ್ಣ ಹನಿ ಜಾರಿಸುವ ನನ್ನಾತ್ಮ ದೀಪಕ್ಕೆ ನಾನಿಟ್ಟ ಪ್ರೀತಿ ಹೆಸರು "ನನ್ನ ಕಪ್ಪು ಹುಡುಗಿ..."


ಅಲ್ಯಾವುದೋ ದೂರದ ಊರಿನ ಕಾಡ ದಾರೀಲಿ ಓಡಾಡುತಿರುವ ಗೆಳೆಯ ಸಂದೇಶ ಕಳಿಸ್ತಾನೆ: ನವಿಲೊಂದು ಹಾರುವುದ ಕಂಡು ಮುದಗೊಂಡೆ ಅಂತಂದು...
ನಿದ್ದೆ ಮರುಳಲ್ಲಿ ನಗುತಿದ್ದ ಅವಳ ನೆನಪ ಖುಷಿಯ ಕಚಗುಳಿಯಿಂದ ನಾನಿಲ್ಲಿ ಮುಗುಳ್ನಗುತ್ತೇನೆ ನನ್ನರಿವನ್ನು ಮೀರಿ...
ಈ ಬದುಕೆಂಬ ಬದುಕೇ ಸುಸ್ತಾಗಿ ದಕ್ಷಿಣಕೆ ತಲೆಯಿಟ್ಟು ಅಡ್ಡಡ್ಡ ಮಲಗೋಕೆ ಹವಣಿಸುತಿರೋ ಹೊತ್ತಲ್ಲಿ ಗೆಳೆಯನದೊಂದು ಸಂದೇಶ, ಗೆಳತಿಯ ಗುಳಿ ಕೆನ್ನೆ ನೆನಪು ಜೊತೆಯಾದ ಆ ಕ್ಷಣ ಮನದ ಅದ್ಯಾವುದೋ ಮೂಲೆಯಿಂದ ಪುಟ್ಟ ಕನಸೊಂದು ಸೂರ್ಯ ಮುಖಿಯಾಗಿ ಗರಿಬಿಚ್ಚಲು ಹೆಣಗಾಡುತ್ತೆ...!!
ಅಚ್ಚರಿಯ ಆ ಕನಸಿಗೆ ನಾ "ನನ್ನ ಕಪ್ಪು ಹುಡುಗಿ" ಎಂದು ಹೆಸರಿಟ್ಟು ನಗುತ್ತೇನೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

4 comments:

  1. "ಈ ಬದುಕೆಂಬ ಬದುಕೇ ಸುಸ್ತಾಗಿ ದಕ್ಷಿಣಕೆ ತಲೆಯಿಟ್ಟು ಅಡ್ಡಡ್ಡ ಮಲಗೋಕೆ ಹವಣಿಸುತಿರೋ ಹೊತ್ತಲ್ಲಿ" ನಾನೂ ಈ ಬರಹ ಓದಿಕೊಂಡೆ! )

    ReplyDelete
  2. ದಕ್ಷಿಣಕ್ಕೆ ತಲೆ ಇಟ್ಟು ಮಲಗಲು ಚಿಂತೆಯಿಲ್ಲ ! ಉತ್ತರಕ್ಕಾದರೆ ಸಲ್ಲ !

    ReplyDelete
  3. ದಕ್ಷಿಣಕ್ಕೆ ತಲೆಯಿಟ್ರೆ ಎಂತ ಆಗ್ತೋ ಅಣ್ಣಯ್ಯ ? ;-)

    ReplyDelete
    Replies
    1. ಪ್ರಶಸ್ತಿ -
      ನಂಗೆ ತಿಳಿದ ಮಟ್ಟಿಗೆ ದಕ್ಷಿಣಕ್ಕೆ ತಲೆ ಇಡದು ಅಂದ್ರೆ ಸಾವು... ಅಂದ್ರೆ ನಮ್ಮಲ್ಲಿ ಹೆಣವನ್ನ ದಕ್ಷಿಣಕ್ಕೆ ತಲೆ ಇಟ್ಟು ಮಲಗಸ್ತ - ಸುಡೋವಾಗ...

      Delete