Thursday, April 27, 2017

ಗೊಂಚಲು - ಎರಡ್ನೂರಾ ಹದ್ನೆಂಟು.....

ಶಬ್ದದಿಂಪಿನ ಮೋಹ.....  

ಪ್ರೌಢ ಶಾಲಾ ದಿನಗಳಲ್ಲಿ ಗುರುಗಳೊಬ್ಬರು ಹೇಳ್ತಾ ಇದ್ರು: ಯಾರಿಗಾದರೂ ನಾಯಿ ಅಂತ ಬೈಯ್ಯಬೇಕೆನಿಸಿದರೆ ನಾಯಿ ಅನ್ನುವ ಬದಲು ಶ್ವಾನ ಅಂತ ಬೈದರೆ ಒಂದು ಒದೆ ಕಡಿಮೆ ಬೀಳತ್ತೆ ಅಂತ... "ಜನಕ್ಕೆ ಶಬ್ದದ ಇಂಪಿನ ಮೇಲೆ ಮೋಹ ಜಾಸ್ತಿಯಾ" ಅಂತ ನಕ್ಕ ನೆನಪು... ಆದ್ರೆ ಅವರ ಆ ಮಾತು ಎಷ್ಟು ಸತ್ಯ ಅನ್ನೋದು ಈಗ ಅಷ್ಟಿಷ್ಟು ಹುಚ್ಚುಚ್ಚು ಬರಹಗಳ ರೂಢಿಸಿಕೊಂಡ ಮೇಲೆ ಈ ಕ್ಷೇತ್ರದಲ್ಲಿ ಕಾಣಿಸ್ತು... 

ಇಷ್ಟಾಗಿಯೂ ನನ್ನ ಮೂಲ ಭಾವ ಬದಲಾಗಿಲ್ಲ...
ಬಳಸಿದ ಶಬ್ದದ ಹಿಂದಿನ ಭಾವದ ಬಗ್ಗೆ ಬಳಸಿದವನಲ್ಲಿ ಸ್ಪಷ್ಟತೆ ಇದ್ದರೆ ಸಾಕು ಬಿಡಿ... ಹಿಂದಿನ ಭಾವ ಗ್ರಹಿಸಲಾಗದೇ ಹೋದಾಗ ಶಬ್ದಕ್ಕೆ ಜೋತುಬೀಳ್ತೇವೇನೋ ಅನ್ನಿಸುತ್ತೆ... ಭಾವಕ್ಕೂ ಶಬ್ದಕ್ಕೂ ಸಂಬಂಧವೇ ಇಲ್ಲದಾಗ ಮಾತ್ರ ಶಬ್ದದ ಬಗ್ಗೆ ಯೋಚಿಸಿದರೆ ಸಾಕು ಅನ್ನಿಸುತ್ತೆ... ಅದೂ ಅಲ್ಲದೇ ಬರೆದವನ ಭಾವವೇ ಓದುಗನದ್ದೂ ಆಗಬೇಕೆಂಬುದಿಲ್ಲ... ಹಾಗಾಗಿ ವಿರೋಧವನ್ನು ನಕ್ಕು ಸ್ವೀಕರಿಸಿ, ತೀರಾ ಅವರ ಮಾತು ನಮ್ಮದೂ ಆಗಬೇಕಿತ್ತಲ್ಲವಾ ಅನ್ನಿಸಿದರೆ ಒಪ್ಪವಾಗಿ ಪಾಲಿಸುತ್ತಾ, ಅದಿಲ್ಲದಿದ್ದಲ್ಲಿ ಅವರ ಭಾವವನ್ನು ಅದಿದ್ದಂತೆ ಗೌರವಿಸ್ತಾ, ನಮ್ಮ ಹಾದೀಲಿ ನಾವು ನಡೆಯೋದು ಸುಖ ಅನ್ನಿಸುತ್ತೆ... ಇಷ್ಟಕ್ಕೂ ಓದುಗನಿಗಾಗಿಯೇ ಬರೆಯುತ್ತ ಹೋದರೆ ನಮ್ಮ ನಮ್ಮ ಮೂಲ ಭಾವ ಬ್ರಷ್ಟವಾಗುವ ಸಾಧ್ಯತೆ ಇದೆ ಅಲ್ಲವಾ...

ಇನ್ನು ವೇಶ್ಯೆ ಅಥವಾ ಸೂಳೆ ಎಂಬ ಪದ - ಆ ಪದಗಳು ಸ್ತ್ರೀಲಿಂಗವೋ ಏನೋ ಗೊತ್ತಿಲ್ಲ ಆದರೆ ನನಗನ್ನಿಸೋ ಮಟ್ಟಿಗೆ ಆ ಪದಗಳು ಇಂದು ಕೇವಲ ಹೆಣ್ಣಿಗೆ ಅನ್ವಯಿಸೋ ಪದಗಳಂತೂ ಆಗಿ ಉಳಿದಿಲ್ಲ... ಇದರ ಅರಿವಾಗಬೇಕೆಂದರೆ ಪ್ರವಾಸೋದ್ಯಮವನ್ನೇ ಅನ್ನವಾಗಿಸಿಕೊಂಡ ನಾಡುಗಳ ಬೀದಿಗಳಲ್ಲಿ ನಡು ರಾತ್ರಿಗಳಲ್ಲಿ ಅಲೆದು ಬಂದರೆ ಸಾಕು - ಹೆಣ್ಣುಗಳಷ್ಟೇ ಗಂಡು ಸೂಳೆಗಳ ಲೋಕ ಬಿಚ್ಚಿಕೊಳ್ಳುತ್ತದೆ... ಅದೊಂದು ವೃತ್ತಿ ಮತ್ತು ಪ್ರವೃತ್ತಿಯಾಗಿ ಬೆಳೆದು ನಿಂತದ್ದಂತೂ ಸತ್ಯ... (ಅದು ತಪ್ಪೋ ಸರಿಯೋ ಎಂಬ ವಿಮರ್ಶೆ ಅವರವರ ಚಿಂತನೆಗೆ ಬಿಟ್ಟದ್ದು... ಯಾಕೆಂದರೆ ಪ್ರತಿ ವೃತ್ತಿಯೂ ಸ್ವ ಇಚ್ಛೆ ಮತ್ತು ನೂಕಲ್ಪಡುವಿಕೆಯಿಂದ ತುಂಬಿದೆ...) ಅಲ್ಲದೇ ಹೇಗೆ ಸೂರ್ಯ ಅಂದ ಕೂಡಲೇ ಎಲ್ಲವನ್ನೂ ಬೆಳಗೋ ಬೆಳಕು ಅನ್ನೋ ಭಾವಾರ್ಥ ಮೂಡುತ್ತೋ ಹಾಗೆಯೇ ಸೂಳೆ ಅಂದರೆ ಒಳ್ಳೆಯ ಕೆಟ್ಟ ಎಂಬ ಬೇಧ ಮಾಡದೇ ಎಲ್ಲವನ್ನೂ ಒಳಗೆಳೆದುಕೊಳ್ಳುವ ಒಂದು ಸಾಮಾನ್ಯ ಮನಸು ಅನ್ನುವ ಭಾವಾರ್ಥ ಅಷ್ಟೇ ಮೂಡಿದರೆ ಸಾಕಲ್ಲವಾ...  ಅದಲ್ಲದೇ ದೈಹಿಕ ವ್ಯಭಿಚಾರವಷ್ಟೇ ಸೂಳೆತನ ಅಂತಾಗಿ ನಮಗೆ ಅದ್ಯಾವುದೋ ಬೀದಿಯ ಗಂಡು ಅಥವಾ ಹೆಣ್ಣು ನೆನಪಾದರೆ, ನಮಗವರದ್ದು ಅಸ್ವಾಭಾವಿಕ ನೋವು ಅನ್ನಿಸಿದರೆ ಹಾಗನ್ನಿಸಿದವರು ಆ ನೋವನ್ನ ಕಳೆಯಲು ಮಾರ್ಗ ಹುಡುಕಬೇಕಲ್ಲವಾ... ಅದು ಬಿಟ್ಟು ಆ ಶಬ್ದವನ್ನ ಕೊಲ್ಲಿ ಅನ್ನೋದು ನಗು ತರಿಸುತ್ತೆ... ಆ ಪದ್ಧತಿಯನ್ನ ಕೊಲ್ಲಿ ಅನ್ನುವುದನ್ನ ಒಪ್ಪುತ್ತೇನೆ; ಮತ್ತದಕ್ಕೆ ನಾನು, ನೀವು ಸಾಹಿತಿಯಾಗಬೇಕಿಲ್ಲ ಮನುಷ್ಯರಾಗಬೇಕು... ಎಲ್ಲೋ ಕೂತು ಬರೆಯುವವನಿಗಿಂತ ಆ ಬೀದಿಯ ಬಾಯಿಯಲ್ಲಿ ಕಾಂಡೋಮ್ ಮಾರೋನು ಉತ್ತಮನೆನ್ನಿಸ್ತಾನೆ ನಂಗೆ... ಕಾಂಡೋಮ್ ಕೊಳ್ಳುವಾಗ ಒಂದ್ಯಾವುದೋ ಕೈ ನಡುಗಿದರೆ ಅದು ಬರೆವವನ ಶಬ್ದಕ್ಕಿಂತ ಹೆಚ್ಚು ಪ್ರಭಾವೀ ವಾಸ್ತವಿಕ ಬೆಳವಣಿಗೆ ಅನ್ನಿಸುತ್ತೆ...

ಇಷ್ಟಕ್ಕೂ ಮೊದಲು ಬದಲಾಗಬೇಕಾದದ್ದು ಆ ಶಬ್ದಗಳಿಗೆ ನಾವೇ ಮೆತ್ತಿದ ಕೀಳು ಭಾವಗಳು... ಅಷ್ಟೇ...

ಭಾವವನ್ನ ಅರ್ಥೈಸಿಕೊಳ್ಳದೇ ಶಬ್ದದ ಮೇಲಿನ ಮಡಿವಂತಿಕೆಗಾಗಿ ಬರಹವನ್ನ ವಿರೋಧಿಸುವುದಾಗಲೀ, ಹೀಗಳೆಯುವುದಾಗಲೀ, ಅಂಥ ಪದಬಳಕೆಯನ್ನೇ ಧಿಕ್ಕರಿಸಬೇಕೆಂಬುದಾಗಲೀ ಒಪ್ಪುವಂತದ್ದಲ್ಲ ಎಂಬುದಷ್ಟೇ ನನ್ನ ಮಾತು...

ಇನ್ನು ಬಳಸುವ ಶಬ್ದದಿಂದ ಕ್ರಿಯೆಯ ವಿವರಕ್ಕೊಂದು ಚಂದ ಒದಗುತ್ತೆ ಎಂಬ ಲೋಕಾರೂಢಿಯ ಅನುಮೋದನೆಯ ಮಾತಿಗೆ ಬಂದರೆ ನಾನೂ ಅದನ್ನು ಅನುಮೋದಿಸ್ತೇನೆ...
ಹಂಗಿದ್ದಲ್ಲಿ ಶಬ್ದಕ್ಕೆ ಘನತೆ ಬಳಕೆಯಾಗೋ ಸಂದರ್ಭದ ಮೇಲೆ ಆಧಾರಿತ ಅಂತಲೂ ಆಗುತ್ತೆ ಅಲ್ವಾ... ಹಾಗಾದಾಗ ಬೀದಿ ರಂಪದಲ್ಲಿ ಬೈಗುಳದ ಅವಾಚ್ಯ ಶಬ್ದವಾದದ್ದು ಬರಹಗಾರನ ಭಾವಾಭಿವ್ಯಕ್ತಿಯಲ್ಲಿ ಕಿಂಚಿತ್ತಾದರೂ ಮಹತ್ತನ್ನ ಹೇಳೀತು ಅಲ್ಲವಾ...😊
ಅಥವಾ ಇನ್ನೂ ಸರಳವಾಗಿ ಹೇಳೋದಾದ್ರೆ ಕವಿಭಾವ ಅಭಿವ್ಯಕ್ತಿಯಲ್ಲಿ ಅವಾಚ್ಯ (?) ಅನ್ನಿಸಿಕೊಂಡ ಶಬ್ದಕ್ಕೂ ಯಾವುದೋ ಒಂದು ಮೃದು ವಲಯ ಇದ್ದೀತಲ್ಲವಾ...
ಹಾಗಿದ್ದಲ್ಲಿ ಒಂದು ಶಬ್ದವನ್ನೇ ಧಿಕ್ಕರಿಸೋದು ಎಷ್ಟು ಸರಿ...😊

ಮತ್ತೇನಿಲ್ಲ... ನನ್ನ ಮಟ್ಟಿಗೆ ನಾನು ಆವಾಹಿಸಿಕೊಂಡ ಭಾವಕ್ಕೆ ನಾಯಿ ಅನ್ನೋ ಪದ ಹೆಚ್ಚು ಸೂಕ್ತ ಅಂತ ನಂಗನ್ನಿಸಿದರೆ ಶ್ವಾನ ಎಂಬ ಸಮಾನಾರ್ಥಕ ಪದ ಗೊತ್ತಿದ್ದರೂ ನಾನು ನಾಯಿ ಅಂತಲೇ ಬಳಸಿಬಿಡ್ತೇನೆ... ನಾಯಿ ಪದ ಕೀಳು ಅಂತನ್ನಿಸಿ ಓದುಗರಿಗೆ ಮುಜುಗರ ಅಥವಾ ಕೋಪ ಮೂಡಿದರೆ ಅದರ ಹೊಣೆ ನನ್ನದಲ್ಲ ಅಂತಲೇ ಭಾವಿಸ್ತೀನಿ... ಅಷ್ಟು ಸ್ವೇಚ್ಛೆ ತನ್ನ ಕಲ್ಪನೆ ಮತ್ತು ಪದಬಳಕೆಯಲ್ಲಿ ಬರಹಗಾರನಿಗಿರೋದು ತಪ್ಪಲ್ಲ ಅನ್ಕೋತೇನೆ... ಬಹುಶಃ ನಾನು ತಪ್ಪೂ ಇರಬಹುದು ಗೊತ್ತಿಲ್ಲ....😊

ಇತ್ತೀಚೆಗೆ ನನ್ನ ತುಂಬ ತಾಕಿದ ಗೆಳೆಯರೊಬ್ಬರ ಶ್ರೇಷ್ಠ ಭಾವದ ಸಾಲುಗಳು :
ವೇಶ್ಯೆಯೊಬ್ಬಳ ಎದೆಯಲ್ಲೂ
ಜಿನುಗುವ ಹಾಲಿಗೆ
ತಾಯಿಹಾಲು ಎಂದೇ
ಕರೆಯೋದು;
____ ಟೈಪಾಸ್ ಕವಿತೆಗಳು 💓💓
(ಈ ಸಾಲುಗಳ ಆಳವನ್ನು ವಿವರಿಸಲು ನಾನು ಅಶಕ್ತ...)


*** ಇದು ನನ್ನ ಭಾವ - ಇದನ್ನ ಹೇಳಿಯಾಯಿತು - ಇನ್ನು ನಿಮ್ಮ ನಿಮ್ಮ ಭಾವಗಳನ್ನು ಗೌರವಿಸುತ್ತಲೇ ನನ್ನದನ್ನ ಕಾಯ್ದುಕೊಳ್ಳುತ್ತೇನಷ್ಟೇ - ಹಾಗಾಗಿ ಮುಂದಿನ ವಾದ ವಿವಾದ ಅಥವಾ ನನಗೆ ಉತ್ತರಿಸಬೇಕೆನಿಸದ ಚರ್ಚೆಗಳಿಂದ ನಾನು ದೂರ... ಮತ್ತಿಲ್ಲಿ ಯಾರನ್ನೂ ನೋಯಿಸುವ ಹಂಚಿಕೆಯಿಲ್ಲ...

No comments:

Post a Comment