ಕವಿತೆ.....
(ಹೇಳದೆ ಉಳಿದದ್ದೇ ಹೆಚ್ಚು...)
ಕಾಲ್ಗಡಗ, ಕೈಯ ಕರಿಮಣಿ ಕಟ್ಟುಗಳ ಕುಣಿಸುತ್ತ ಅಮ್ಮನಮ್ಮಿಯನುಂಡು ದೇವ ನಗೆಯ ಚೆಲ್ಲುವ ಹಸುಳೆಯ ತುಟಿಯಂಚಲಿ ಹಾಗೇ ಉಳಿದ ಹಸಿ ಹಾಲ ಘಮ; ಅದು ಬದುಕಿನ ಮೊದಲ ಒಲವ ನೀಳ್ಗವಿತೆ...
-----
ಅಪ್ಪನ ಬಂಡೆ ಎದೆಯಮೇಲೊರಗಿ
ಅಪ್ಪ ನಂದೂ ಎಂದು
ಅಮ್ಮನ ಅಣಕಿಸುವ ಮುಗ್ಧ ಕೂಸು;
ಅಮ್ಮನ ಕರುಳ ಹಸಿ ಕವಿತೆ...
-----
ಹೊಲ ಉತ್ತಿ ಬಳಲಿ ಬಂದಪ್ಪನ ತೋಳಲ್ಲಿ
ತನ್ನೊಡಲ ತೆನೆ ಕುಡಿಯ
ತೊಟ್ಟಿಲ ಹಗ್ಗವ ಜೀಕಲು
ಇನ್ನೂ ಉಳಿದಿರುವ ಕಸುವು;
ಕನಸ ಕಣಜ ಕವಿತೆ...
-----
ಅವನ ಕನಸಿನ ಬೀಜ
ಅವಳ ಕರುಳ ಬಳ್ಳಿಯ ಕಾಯಾಗಿ
ಒಡಲಲೊಳಗೆ ಒದೆವಾಗ,
ಹೊಕ್ಕುಳಿಗೆ ಕೆನ್ನೆಯಾನಿಸಿ ಕಣ್ಮುಚ್ಚಿ
ಒಳಗಿನ ಉಸಿರಿಗೆ ಕಿವಿಯಾಗಿ
ಮೀಸೆ ಮುರಿಯುವ ಅವನಲ್ಲಿ ಗಂಡಸೆಂಬ ಹೆಮ್ಮೆ;
ತನ್ನ ಪ್ರೇಮದ ತೋಳಲ್ಲಿ ಅವನ ಬಂಧಿಸುತ್ತ
ಇನ್ನೂ ಕಣ್ಬಿಡದ ಕಂದಗೆ ಛಳಿಗಿರಲೆಂದು ಇಂದೇ ಚುಂಚಿಗೆ ಹೊಲಿಯುವವಳಲಿ
ಇಷ್ಟಿಷ್ಟೇ ತುಂಬಿಕೊಳುವ ತಾಯ್ಹಾಲ ಬಿಂದಿಗೆ
ಹೇಳಲಾಗದ ಧನ್ಯತೆ - ಪ್ರಕೃತಿ ಕವಿತೆ...
-----
ಹುಟ್ಟು ಸಾವಿನ ಮೊದಲ ಕವಿತೆ...
ಸಾವು ಬದುಕಿನ ಕೊನೆಯ ಕವಿತೆ...
ಹುಟ್ಟು ಸಾವಿನ ನಡುವೆ ಬದುಕಿದು ಅರೆಬರೆದ ಸಂಕಲನ...
#ಅಳು_ಅಳು_ಅಳುಮತ್ತುನಗು...
-----
ನಗುವಿಗಿಂತ ಚಂದ ಕವಿತೆ ಓದಲು ಸಿಕ್ಕಿಲ್ಲ
ಅದನೆ ಆಯ್ದುಕೊಂಡು ಕಾಯ್ದುಕೊಂಡೆ
ಬದುಕು ಮಗುವಾಯಿತು...
#ಕರೆದ_ಕವಿತೆಗಳಿಗೂ_ಬರೆದ_ಮನಗಳಿಗೂ_ಶುಭಾಶಯಗಳು...💞
No comments:
Post a Comment