Wednesday, September 5, 2018

ಗೊಂಚಲು - ಎರಡ್ನೂರಾ ಎಪ್ಪತ್ತು.....

ಆಯಿ_ಆನು..... 

ಇಬ್ಬರೂ ಒಟ್ಟಿಗೇ ಕೆಮ್ಮುತ್ತೇವೆ - ಅವಳು ಮುಂಬಾಗಿಲ ಎಡ ಬಲದಲ್ಲಿ, ನಾನು ಅಂಗಳದಂಚಲ್ಲಿ...
ಅವಳು ಅತ್ತ ಮುಖ ತಿರುವ್ತಾಳೆ - ನಾನು ಸರಸರನೆ ಸರಗೋಲು ಸರಿಸ್ತೇನೆ...
ಇಬ್ಬರೂ ನಮ್ಮ ನಮ್ಮ ನೆಳಲಲ್ಲಿ ಒಬ್ಬರನ್ನೊಬ್ಬರು ಹುಡುಕಿಕೊಳ್ತೇವೆ - ನೆರಳು ನರಳಿದಂಗೆ ಅಸ್ಪಷ್ಟ ಕಣ್ಣಿಗೆ...
ಅಲ್ಲಿಂದಾಚೆ ಖಾಲಿ ಮನೆಯೊಳಗೆಲ್ಲ ನಾನು - ಹಾದಿ ಬಯಲ ತುಂಬಾ ಅವಳು...
#ವಿದಾಯ...
↯↹↹↹↯

ಸಾವೇ ಇಲ್ಲವೇ ನೋವಿಗೆ...??
ನಗು ಕೂಡಾ ನೋವಿನ ಸುಂದರ ಮುಖವಾಡವಾ...??
ಸಾವೂ ಸಹಿತ ನೋವಿನ ಸ್ಥಾನ ಪಲ್ಲಟವಷ್ಟೇಯೇನೋ...
ಕೇದಗೆಯ ಕಂಪು - ಮುಳ್ಳು ಹಾದಿ - ಸರ್ಫ ಬಂಧ - ಬದುಕಿನ ಬಣ್ಣ...
ನಗೆಯ ಹಿಂದಣ ನೋವಿಗೆ ನಾವೇ, ನಾವಷ್ಟೇ ವಾರಸುದಾರರು....
#ಬೆಳಕಿಗೆ_ಹಾದಿಯದೇ_ಬಣ್ಣ#ಬಣ್ಣವಿಲ್ಲದ_ಕಣ್ಣಹನಿ...
↯↹↹↹↯

ಅತ್ತಾರೆ ಅತ್ತು ನಿಡುಸುಯ್ಯುವಂತೆ ಅಳು ಒಗ್ಗದ ಹುಂಬನಿಗೆ ನೋವ ನಸನಸೆಯ ದಾಟಿ ಕನಸ ಕುತ್ರಿಯ ಕಾಯಲು ಮೊಗಬಿರಿಯೆ ನಗುವೊಂದೆ ಶಾಶ್ವತ ಆಸರೆ...
#ಸ್ವಯಂಭೂ_ನೋವೂ_ಸ್ವಯಾರ್ಜಿತ_ನಗುವೂ...
↯↹↹↹↯

ಕಂದನಿಗೆ ಉಸಿರು ತುಂಬಲು ಸಾವಿಗೂ ಎದೆ ಕೊಟ್ಟೇನೆಂಬಳು - ತುಂಬು ಬದುಕನೇ ಎಡೆ ಇಟ್ಟೇನೆಂಬಳು... 
ಗೆಳತಿ ಅವಳು ಪುಟ್ಟ ಅಮ್ಮ...
ಅಮ್ಮ ಅಂದರೆ ದೇವನೂ ಬೆದರುವ ಗುಮ್ಮ...
#ಆಯಿ...
↯↹↹↹↯

ಬಣ್ಣ ಮಾಸಿದ ಮೇಲೂ ಬೆಚ್ಚನೆ ಭಾವವನೇ ನೇಯುವುದು ಅಮ್ಮನುಟ್ಟ ಸೀರೆ... 
ಅದರ ಮುದುರಿನ ಕನಸೆಲ್ಲಾ ಹೊತ್ತು ತಿರುಗುವುದು ನನ್ನ ಏಳ್ಗೆಯ ತೇರೇ...
ಅಮ್ಮ ಅವಳು ಪುಟ್ಟ ಗೆಳತಿ - ನನ್ನ ನೆತ್ತಿ ಕಾಯೋ ಬೇಶರತ್ ಪ್ರೀತಿ...
#ಆಯಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment