Saturday, October 12, 2024

ಗೊಂಚಲು - ನಾಕ್ನೂರ್ನಲ್ವತ್ತರಮೇಲೈದು.....

ವೈರುಧ್ಯಗಳಿಗೆ ಹಣೆಬರವೇ ಹೊಣೆಯಂತೆ(!).....

ನಾವೆಲ್ಲಾ,
ಕಳೆಗೆ ಬೇಲಿ ಕಟ್ಟಿ ಕಾಯುತ್ತಾ,
ಬೆಳೆಯ ಬಯಲಲಿ ಬಿಟ್ಟು ಹಳಹಳಿಸುತ್ತಿರುತ್ತೇವೆ ವತ್ಸಾ...
ನಮ್ಮ ಸಮಯವ ನಾವೇ ಹರಣ ಮಾಡಿದರೆ ಆಲಸ್ಯದ ಸುಖವಾದರೂ ಇರುತ್ತೆ ಕಣೋ - 
ನಾವೇ, ಅದೇ ನಮ್ಮ ಸಮಯವ ಹಡಬೆ ದನ ತುಡುಗು ಮೇಯುವಂತೆ ಇನ್ಯಾರೋ ಸುಖಾಸುಮ್ಮನೆ ತಿಂದು ತೇಗಲು ಬಿಟ್ಟು ಕನಲುತ್ತ ಕೂರುವಂತಾದರೆ ಅದಕೇನೆನ್ನುವುದು, ಯಾರ ಹಳಿಯುವುದು ಹೇಳು...?!
ನಮಗೆ ನಾವೇ ಕೊಟ್ಟುಕೊಳ್ಳುವ ಏನೇನೋ ಸುಳ್ಳು ಸಮಜಾಯಿಷಿಗಳು ಆ ಕ್ಷಣಕೆ ಸಮಾಧಾನಿಸಿದರೂ, ಒಳಗಿಂದೊಳಗೆ ಮನಸು ಅಶಾಂತವೇ ಅಲ್ವಾss...
___ ಸುತ್ತ ನೆರೆಯುವ ಸುಖವಿಲ್ಲದ, ಹಾಗಂತ ಅಸಮಾಧಾನವ ಮುಕ್ತ ಹೇಳಲೂ ಆಗದ ಹತ್ತಿರದ (?) ಸಂಬಂಧಗಳು... 
&&&

ಜಗವೆಲ್ಲಾ ತುಂಡಿಲ್ಲದ ಕೆಲಸದಲ್ಲಿ (?) ಗಡಿಬಿಡಿಯಲ್ಲಿರುವಾಗ ನಾನೊಬ್ಬ ಖಾಲೀ ಕುಂತು ಮಾಡುವುದೇನು...!?
ನಾನು ಕೋಣೆ ಸೇರಿ ಸುಖವಾಗಿ ಮಲಗಿ ಸಂಪರ್ಕಗಳಿಗೆಲ್ಲ ಬೀಗ ಹಾಕಿ ಜಗತ್ತಿನಿಂದ ಬೇರೆಯಾಗಿ ಅದೇನೋ ಅಗೋಚರ ತರಾತುರಿಯಲ್ಲಿದ್ದೇನೆಂದು ಸ್ವಯಂ ಸಾರಿಕೊಂಡೆ...
ಇದೀಗ -
ಅಲ್ಲಲ್ಲಿ ಕೃತಕ ಕುತೂಹಲ ಮತ್ತು ಅಚ್ಚರಿಯ ಭಯ ಸೃಷ್ಟಿಸಿದ ಸುಖವೂ ನನ್ನದಾಯಿತು...
____ ಬಲು ಬೆರಕಿ ಬುದ್ಧಿವಂತ... 😜
&&&

ಬೆತ್ತಲ ಅರಸುವ ಆ ಕಾಮಕ್ಕಿಂತ ಬೆಳಕ ಮೇಯುವ ಈ ಪ್ರೇಮವೇ ಹೆಚ್ಚು ಬೆತ್ತಲಾಗಿಸುತ್ತದೆ...
____ ಬೆಳಕಿನ ನಿಗಿ ನಿಗಿ ಉರಿ ಪ್ರೇಮ - ಇರುಳಿಗೂ ಬೆಳಕೀವ ಧಗಧಗ ಕಾಮ...
*** ಅರ್ಥ ಗಿರ್ಥ ಕೇಳಬೇಡಿ...
&&&

ತುಂಬಾ ಹತ್ತಿರ ಬರಬೇಡ - ಪರಮ ಪೋಲಿ (?) ಹಾಡಲ್ಲೂ ಒಂದು ಪದ ಪಾದ ನೋವಿನ ಬೀಜ ಕಂಡೀತು...
___ ಉಗೋಡಾಗದ ಕಾಡು(ವ) ಮಾತು...
&&&

ಜಗವೆಲ್ಲಾ ಪುರುಸೊತ್ತಿಲ್ಲದೇ ಓಡುವಾಗ ನಾನೊಬ್ಬ ನಿಂತು ನೋಡುತ್ತೇನೆ, ನೋಡುತ್ತಾ ನಿಂತೇ ಇರುತ್ತೇನೆ...
ನಿಂತು ನೋಡುತ್ತಲಿರುವಷ್ಟೆಲ್ಲಾ ಗಳಿಸಿದ್ದೇನಂತ ಅಲ್ಲ; ನಿಂತು ನೋಡುವ ಸಮಾಧಾನಕ್ಕೆ, ಬದುಕಿದು ಬಡಿದು ಕಲಿಸಿದ ಅಂಥ ಸಾವಧಾನದ ಸಮಪಾಕವ ಹಾಂಗೇ ಕಾಯ್ದುಕೊಳ್ಳುವುದಕ್ಕೆ...
ಓಡಲಾಗದ ಆಲಸ್ಯ ಅಂತೀರೇನೋ - ಅದನ್ನೂ ಅತೀವ ಆರಾಮದಲೇ ಸ್ವೀಕರಿಸುತ್ತೇನೆ...
ಗೆಲುವಿನಷ್ಟೇ ಗೆಲುವಿಗಾಗಿ ಚಪ್ಪಾಳೆ ತಟ್ಟುವುದೂ ಹಿರಿಮೆಯೇ ಅಂತನ್ನಿಸುತ್ತೆ ನಂಗೆ ಈಗೀಗ...
____ ನನ್ನ ಸಾಧನೆ...
&&&

ಈ ಬಂಧ, ಸಂಬಂಧಗಳ ನೆಚ್ಚಿಕೊಳ್ಳಲೇಬಾರದು ನೋಡು...
ಯಾಕೆ...? ಏನಾಯ್ತು...??
ನನ್ನವರೂ ಅನ್ನಿಸಿಕೊಂಡವರು ನನ್ನನು ನಿತ್ಯವೂ ಮಾತಾಡಿಸ್ತಿರಬೇಕು ಅನ್ಕೋತೀನಿ...
ಅದ್ಕೆ...?
ಮಾತು ಹೋಗ್ಲಿ, ಹಗಲಿಗೆ, ರಾತ್ರೀಗೆ ಒಂದು ಶುಭಾಶಯವೂ ತತ್ವಾರ ಈಗಿತ್ಲಾಗೆ...
ಅದೇ ನಿನ್ನವರೂ ಅಂತ ನೀ ಅಂದುಕೊಂಡವರನ್ನು ನೀನೇ ಮುಂದಾಗಿ ನಿತ್ಯವೂ ಮಾತಾಡಿಸ್ತೀಯಾ...?  
ಮಾತಾಡ್ತೀನಲ್ಲ, ಯಾವಾಗ ಅವರ ಮಾತಿಗೆ ಉತ್ತರ ಕೊಡದೇ ಇದೀನಿ ಹೇಳೂ...
ಅವರ ಸಂದೇಶಕ್ಕೆ, ಅವರ ನುಡಿಸಾಣಿಕೆಗೆ ಮರು ಉತ್ತರ/ಮಾರುತ್ತರಗಳನ್ನು ಕೊಡುವುದನಲ್ಲ ನಾ ಕೇಳ್ತಿರೋದು, ನೀನೇ ನೀನಾಗಿ ಅವರೊಡನೆ ಒಮ್ಮೆಯಾದರೂ ಪ್ರೀತಿಯಿಂದ ಸಂವಾದಕ್ಕಿಳೀತೀಯಾ ಅಂತ...
ಅವರು ಮಾತಾಡಿಸದೇ ನಾನ್ಯಾಕೆ ಮಾತಾಡಿಸ್ಲಿ, ಅವ್ರಿಗೆ ಬೇಡ ಅಂದ್ಮೇಲೆ ನಂಗೂ ಬೇಕಿಲ್ಲ...
ನಿನ್ನ ಮೌನವನೂ ಅವರು ಅರ್ಥೈಸಿಕೊಳ್ಳಬೇಕೆಂದು ಹಠ ಹೂಡ್ತೀಯಲ್ಲ, ಅವರ ಮೌನಕೆ ಕಿವಿಯಾಗುವ ಸಣ್ಣ ಪ್ರಯತ್ನವನಾದರೂ ಮಾಡ್ತೀಯಾ ಹೋಗ್ಲೀ...? 
ಹೇಳಿದ್ರೆ ಹೇಳಿದ್ನೆಲ್ಲಾ ಕೇಳಿಸ್ಕೊಳ್ಳಲ್ವಾ...? ಅವರಾಗಿ ಹೇಳದೇ ನಾನಾಗಿ ಕೆದಕಿ ಕೇಳುವುದೇನು...?? ನಂಗೆ ಬೇರೆಯವರ ವಿಷಯದಲ್ಲಿ ಮೂಗು ತೂರ್ಸೋದು ಆಗಲ್ಲ...
ಮತ್ತೆ ನಿನ್ನವರೂ ಅಂದದ್ದಲ್ವಾ ನೀನು ಅಥವಾ ಅವರು ಹಂಗಂದಿದ್ದನ್ನು ಒಪ್ಪಿಯೇ ಈಗ ಇಷ್ಟು ಅವರು, ಇವರು, ಬೇರೆಯವರು ಎಂಬ ಪರಿತಾಪದ ಆರೋಪಗಳು ತಾನೆ...
ನಿಂಗೆ ನನ್ನ ನೋವು ಅರ್ಥ ಆಗಲ್ಲ ಬಿಡು - ಎಷ್ಟೆಲ್ಲಾ ಮಾಡಿದೀನಿ ನಾ ಅವರಿಗೆ, ಈಗ ನಾನೇ ಬೇಡಾಗಿದೀನಿ, ನೀನೂ ಅವರ ಪರವೇ ಅಥವಾ ಅವರಂಥವನೇ, ನಿನ್ನತ್ರ ಹೇಳ್ಕೊಂಡಿದ್ದೇ ನನ್ನ ತಪ್ಪು - ಎಲ್ಲಾ ಇಷ್ಟೇ, ಒಳ್ಳೇತನಕೆ ಬೆಲೆ ಇಲ್ಲ...
"ಧ್ವನಿಯಾಗುವುದಕ್ಕೂ ಪ್ರತಿಧ್ವನಿಯನಷ್ಟೇ ನೀಡುವುದಕ್ಕೂ ವ್ಯತ್ಯಾಸವೇ ಗೊತ್ತಿಲ್ಲದ/ಗೊತ್ತಿಲ್ಲದಂತಾಡುವ ಪರಮ ಮುಗ್ಧ (?) ಹೃದಯಿಗಳ ವಿಲಾಪ" ಇದು ಅನ್ಸಲ್ವಾ...
ಹೋಗೋ, ನಿನ್ನತ್ರೆಂತಾ ಮಾತು - ನೀನು ಭಾಳ ತಿಳ್ಕೊಂಡೋನು ಬಿಡು, ನಾವೆಲ್ಲ ದಡ್ರು, ಸುಮ್ಮಿರು ಸಾಕು, ನಂಗೆಲ್ಲಾ ಗೊತ್ತು...
____ ಟಾಟಾ, ಬೈಬೈ, ಗಯಾ... 
&&&

ಸ್ವರ್ಗದಲ್ಲಿ ನನ್ನ ಬಿಡಾರ...
ಸ್ಮಶಾನದಲ್ಲಿ ಸಂಸಾರ...
ನನ್ನೀ ಸುಖವ ಆಡಿಕೊಂಡು ನರಿಯು ಊಳಿಡುವಾಗ - ಕುಂಡೆ ಕುಣಿಸಿ ನಗುವ ಈ ಬದುಕದೆಷ್ಟು ಸುಂದರ...
____ ವೈರುಧ್ಯಗಳಿಗೆ ಹಣೆಬರವೇ ಹೊಣೆಯಂತೆ(!)...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

ಗೊಂಚಲು - ನಾಕ್ನೂರ್ನಲ್ವತ್ತರಮೇಲ್ನಾಕು.....

ಕವಿತೆ(?).....

ಇನಿದು ಇನಿದು ಮಳೆ ಬೀಳುವಾಗ ಈ ಎದೆಗೆ
ಘಲ್ ಘಲಿರೆನುವುದು ನಿನ್ನಾ ಕನಸ ಕಾಲಂದುಗೆ...
ಕಳ್ಳ ರುದಯವಿದು ಸುಮ್ಮನಿದ್ದುಬಿಡುವುದಾದರೂ ಹೆಂಗೆ
ಉಸಿರ ತುಂಬಿ ಹರಿವಾಗ ನಿನ್ನಾಸೆ ಪ್ರಣಯ ಗಂಗೆ...

ಸದ್ದೇ ಇರದೇ ಸ್ವಾಗತಿಸೋ 
ನಿನ್ನಾ ಕಣ್ಣಾ ರೆಪ್ಪೆಗಳಾ...
ಸ್ವಾತೀ ಹನಿಯಾ ಕುಡಿದಾ
ಪ್ರೀತಿ ಕಪ್ಪೆ ಚಿಪ್ಪುಗಳಾ...
ಅರ್ಥವಾಗದ ಭಾವಗಳ ಹಿಡಿದು
ಅರ್ಧವೇ ಬರೆದ ಕವಿತೆಗಳಾ...

ನೆನೆದು ನೆನೆದು ನೆನೆಯುತ್ತೇನೆ
ದಾಂಟಲು ಕಡು ವಿರಹದ ಈ ರಾತ್ರಿಗಳಾ...
ಇರು ನೀನು ಹಿಂಗೇ 
ಅಷ್ಟು ದೂರವಿದ್ದೂ ಇಷ್ಟೊಂದು ಹತ್ತಿರ...
ಅಲ್ಲಿದ್ದೇ ಕಾಡುವಂಗೆ
ಆ ಕಾಡಿನಾಚೆಯಾ ಆ ನೀಲ ಸಾಗರ...

ಪ್ರೀತಿಯ ಹುಡುಕುವ ಕವಿಯೂ
ಸಾವನು ಹಲುಬುವ ಕವಿತೆಯೂ
ಒಟ್ಟಿಗೇ ಮಲಗಿದ ರಮಣೀಯ(?) ಕಥೆಗೆ 
ಖಾಯಂ ನಾಯಕನೀ ನನ ಒಡಲು... 

ಭಾವ ಬೇಯುವ ಇರುಳು
ಕಟ್ಟಿ ಬರುವಾಗ ಕೊರಳು
ನೆತ್ತಿಯಾ ಮಿಡಿವ ನಿನ ಬೆರಳು
ಮಾತನಾಡುವ ಕಡಲು...
ನೀನು 
ನನ್ನ ಮೌನ ಮಡಿಯುವ ಮಡಿಲು...

***ಕೆಲಸವಿಲ್ಲದ ಕವಿ ಕವಿತೆ(?) ಕ(ಕು)ಟ್ಟುವ ಪರಿ - ಪದ ಪಾದ ಬೆರಕೆಗೆ ಸೂತ್ರ ಸಂಬಂಧ ಕೇಳಬೇಡಿ... 🫢

ಗೊಂಚಲು - ನಾಕ್ನೂರ್ನಲ್ವತ್ತರಮೇಲ್ಮೂರು.....

ಮಾತು ಮೌನಗಳ ಜುಗಲ್ಬಂಧಿ.....

ನಂದಿನ್ನೂ ಮಾತು ಮುಗಿದೇ ಇರಲಿಲ್ಲ - ಅವಳು ಮಹಾಮೌನಕೆ ಜಾರಿದಳು...
ನಾನಿನ್ನೂ ವಟವಟ ಹಲುಬುತ್ತಲೇ ಇದ್ದೇನೆ - ಅವಳ ಗಾಢ ಸುಷುಪ್ತಿಯಲೂ ನನ್ನ ದನಿಯವಳನು (ಕೂ)ಕಾಡಬಹುದೆಂಬ ಭ್ರಮೆಯಲೂ ಹಿತವಿಹುದು...
ಮಾತು ಜಾರಿಯಿರುತ್ತದೆ ಶತಾಯಗತಾಯ - ಅವಳೆದುರು ಹಚ್ಚಿಟ್ಟ ದೀಪದೆದುರು ಅವಳು ಹಚ್ಚಿದ ದೀಪ ಸೋಲಬಾರದೆಂಬ ಹಠವೂ ಇರಬಹುದು...
ನೂರು ನಶೆಗಳಲಿ ದೊಡ್ಡ ನಗೆ ನಕ್ಕು ಮರೆತೇನು ಅಂದುಕೊಂಡೆ - ಇದೆಲ್ಲ ನಗೆಯ ನೆರಳಲೂ ನನ್ನ ಹರಕೆಯಿದೆ ಮಾಣೀ ಅಂದಂತಾಗಿ ನೆನಪಾದಳು...
____ ಉಳಿದಷ್ಟೂ ಬದುಕಿನ್ನು ಅವಳೊಡನೆಯ ಮಾತು ಮೌನಗಳ ಜುಗಲ್ಬಂಧಿಯೇ...


ಎಲ್ಲರೂ ದೇವರ ಕಾಣಲು ದೀಪ ಬೆಳಗುತ್ತಿದ್ದಲ್ಲಿ ನಾನು ಮಳ್ಳನಂತೆ ಅವರನೇ ನೋಡುತ್ತಾ ನಿಂತಿದ್ದೆ... 🤐
___ ಕೈಮುಗಿಯೋ ಅಂತ ಬೈಯ್ಯಲು ಈಗ ನನ್ನ ದೇವಿಯೂ ಸ್ವರ್ಗಸ್ಥೆ...
&&&

ರುದಯದ ದಿನವಂತೆ...
ಚಂದಗೆ ಕಾಯ್ದುಕೊಳ್ಳುವಾ ನಮ್ಮ ನಮ್ಮ ಹೃದಯವ...
ಸಣ್ಣ ರಂಧ್ರಕೂ ದೊಡ್ಡ ನೋವಿದೆ ಅಲ್ಲಿ...
ಹೃದಯ ಅನಗತ್ಯ ದೊಡ್ಡದಾದರೆ ಸಣ್ಣ ಸಣ್ಣ ನೋವುಗಳ ಮೂಟೆಯೇ ಬರುತ್ತೆ ಜೊತೆಗೆ...
ಇರಲಿ,
ಆದಾಗ್ಯೂ ಆದಷ್ಟೂ ನಗೆಯನೇ ತುಂಬಿಕೊಳ್ಳೋಣ - ಪುಟ್‌ಪುಟಾಣಿ ಖುಷಿಗೂ ದೊಡ್ಡ ಸಂಭ್ರಮ ಕೂಡಾ ಇದೆ ಅಲ್ಲಿ...
ನೋವಾದರೆ ಹಂಚಿಕೊಂಡಷ್ಟೂ ಹಸನಾಗುವ, ಪ್ರೀತಿಯಾದರೆ ಮೊಗೆದು ಸುರಿದಷ್ಟೂ ತುಂಬಿ ತುಳುಕುವ ಮಾಯಾ ಜೋಳಿಗೆಯೂ ಹೌದು ಅದು...
ಹಾಗಾಗಿ,
ಪ್ರೀತಿಯಿಂದ ಪ್ರೀತಿಯೊಂದಿಗೆ ನಡೆಯೋಣ, ಪ್ರೀತಿಯಾಗೋಣ/ಪ್ರೀತಿಯೇ ಆಗೋಣ...
ಶುಭಾಶಯ - ಪ್ರಿಯ ಹೃದಯಗಳಿಗೆ... 💞
___ ೨೯.೦೯.೨೦೨೪
&&&

ಈ ಇವಳ ಮೈಯ್ಯ ಘಮದಿ 
ಆ ಅವಳ ಪ್ರೇಮವ ಹುಡುಕಿ 
ಉಳಿಯಬಹುದೇ ನಾನು ನನಗೆ 
ಅವಳು ಪರಿಚಯಿಸಿದ ಹಾಗೇ...
ಅಲ್ಲಿ ಸಿಗದ ಕಿಚ್ಚಿಗೆ 
ಇಲ್ಲಿ ಉರಿವ ಹುಚ್ಚಿಗೆ
ತಣಿಯಬಹುದೇ ಅವಳ ಬಿಸಿ
ಈ ಕರುಳ ಕಾಂಡದೊಳಗೆ...
___ ತಾಳ ತಪ್ಪಿದ ತ್ರಿಶಂಕು ಸುಖ...
&&&

ನನ್ನ ಪಾಲಿನ ಶುಭ್ರ ಶುಭವೇ -
ನೆತ್ತಿ ಮೇಲಿನ ಚಂದಮ ಬೆಳುದಿಂಗಳ ಕೈಯಿಟ್ಟು "ಶುಭದ ತೋಳಲ್ಲಿ ಸರಸ ಯೋಗ" ಅಂದು ಹರಸಿ ಕಳಿಸಿದ...
ಬೇಗ ಬರಬಾರದೇ (ಬಾsss) - ಈ ಉಸಿರಿಗಾಗಲೇ ಉಗ್ಗು ರೋ(ವೇ)ಗ...
ಮಧುಮಂಚದ ಮಂದ ದೀಪಕೆ ತುಂಟ ತೂಕಡಿಕೆ...
ಇರುಳಿಗಾಗಿ ಕಂಡ ಕನಸು ಇನಿತಿನಿತೂ ನಿಜವಾಗಲಿ - ನಿನ್ನ ಹೊದ್ದು ಮೆದ್ದ ಮುದ್ದು ಲೆಕ್ಕ ತಪ್ಪಿಹೋಗಲಿ...
___ ಶುಭರಾತ್ರಿ ಅಂದವರಿಗೆಲ್ಲಾ ಶುಭವೇ ಆಗಲಿ...
*** ನಾಳೆ ಅಮಾವಾಸ್ಯೆ, ನಿಂಗೆ ಈಗೆಲ್ಲಿ ಚಂದ್ರ ಕಾಣಿಸ್ದ ಅಂತೆಲ್ಲಾ ಅರಸಿಕ ಪ್ರಶ್ನೆ ಕೇಳಂಗಿಲ್ಲ... 😜
&&&

ಉದಿ ಆದಾಗಿಂದ ಕೊರಳು ಗುನುಗಿದ ರಸಿಕ ಹಾಡೊಂದು ಇರುಳ ಬಾಗಿಲಲಿ ನಿನ್ನುಸಿರ ಬಿಸುಪ ಬಯಸಿ, 
ನೀನೀಗ ಈ ಕಂಗಳು ಮುಡಿದ ಮಧುರ ಮೋಹದ ಪೋಲಿ ಪೋಲಿ ಕನಸು...
ನಿನಗೂ ಶುಭರಾತ್ರಿ... 🥰
&&&

ಈ ಬದುಕು ಒಂಥರಾ ಹಸ್ತಮೈಥುನದ ಸುಸ್ತಿನಂಗೆ...
ಸುಖವಾ ಅಂದ್ರೆ ಸುಖವೇ - ಆದ್ರೆ, ತೃಪ್ತಿಕರವಾ ಅಂತ್ಕೇಳಿದ್ರೆ ಮಾತ್ರ ಪರಮ ಗಲಿಬಿಲಿ...
____ ಅತೃಪ್ತ ಸುಖ ಸಾಗರ...
&&&

"ಪೋಲಿ ರುದಯದ ಪ್ರಾಯ ಕಳೆಯುವುದೇ ಇಲ್ಲ..."
___ ಹಿತ ಮತ್ತು ನೋವು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)