Thursday, October 24, 2024

ಗೊಂಚಲು - ನಾಕ್ನೂರ್ನಲ್ವತ್ತರಮೇಲಾರು.....

ಶುಭದಿನವೇ ಖರೆ..... 

ಶುಭದಿನ ಪೋಲಿಯೆದೆಯ ಪುಟ್ಟ ಮೋಹವೇ... 😘😘😘
***

ಶುಭವು ನಡೆದು ಬರುವ ರಾಜಬೀದಿಯನು ಬೆಳಕು ಸಿಂಗರಿಸಿದ ಹಾಂಗೆ ಈ ಬೆಳಗು...
ಶುಭದಿನ... 🍂🏜️
***

ನಗೆಯ ಬಣ್ಣ ಯಾವುದು ಅಂದೆ - ಎದೆಗಣ್ಣ ಬೆಳಕು ಎಂದು ನಕ್ಕಿತು ಬೆಳಗು...
ಶುಭದಿನ... 🤩🎉
***

ಇರುಳು ಮೈಗಂಟಿಸಿದ ಹಸಿ ಬಿಸಿ ಝೇಂಕಾರಗಳ ನೆನಹು ದಡದಂಚಲೇ ಹೊಯ್ದಾಡುವ ಕಿರು ಅಲೆಗಳಂತೆ ಕಟ್ಟುಸಿರಾಗಿ ಆಲಾಪಿಸುವಾಗ ಕಣ್ಮಿಟುಕಿಸಿ ನಾಚಿಕೆಯ ಸುರಿವ ತುಂಟ ಬೆಳಗು...
ಶೃಂಗಾರ ಸಿಂಗಾರ ಕಾವ್ಯೋದಯ - ಶುಭದಿನ... 🪻🦋
***

ಮರುಳಾ, ರಜೆಯೆಂಬುದು ನಿನ್ನ ವ್ಯವಸ್ಥೆ - ಕಾಲನೋಟಕ್ಕೆ ರಜೆಯೆಂಬುದಿಲ್ಲ ಎಂದು ಎನ್ನ ಆಲಸ್ಯವ ತಿವಿದ ಮಾಸ್ತರರಂತ ಬೆಳಗು...
ಶುಭದಿನ... 🧑‍🏫
***

ಬೆಳಗೆಂಬ ಸಂಜೀವಿನಿಯ ಕರ ಸ್ಪರ್ಷಕೆ ರುದಯದ ಕನಸ ತಾಯ್ಬೇರಿನಲಿ ಹೊಸತಾಗಿ ಜೀವಸಂಚಾರ - ನಗೆಯ ನೂರು ಬಣ್ಣಗಳ ಹೂವರಳಿ ಮೈಮನದಿ ಚೈತನ್ಯದ ದಿವ್ಯ ಗಂಧ...
ಶುಭದಿನ...  🧚💞
***

ಹೆಸರೇ ಇಲ್ಲದ ಹೂವು, ಹೆಸರ ಹಂಗ್ಯಾಕೆ ಎನುವ ದುಂಬಿ - ಬನವೆಲ್ಲ ಸೃಷ್ಟಿ ಸಿಂಗಾರ...
ಎದೆಯರಳಿ, ಕರುಳು ತುಂಬಿ, ಯಾರುಯಾರಿಗೆ ಎಷ್ಟೆಷ್ಟು ಕೊಟ್ಟದ್ದೂ, ಪಡೆದದ್ದೂ ಲೆಕ್ಕವಿಡದ ಸಾನಿಧ್ಯ - ಪ್ರೇಮ ಪುರೋಹಿತ ಬೆಳಗು...
ಶುಭದಿನ... 🪻🦋🫂
***

ನನ್ನೆದೆಗೆ ದಾಂಟಿಸಿದ ನಿನ್ನದೊಂದು ಕಣ್ಣ ಹೊಳಪಿನ ಮುಗುಳುನಗೆ - ಹಚ್ಚಿಕೊಟ್ಟಂಗೆ ನೀ ದಿನವಿಡೀ ನನ್ನೊಳಗೆ ನಾ ಬೆಳಗಲು ಪ್ರೀತಿ ದೀಪವನೆನಗೆ...
ಶುಭದಿನವೇ ಖರೆ... 💞
***

ಬೊಗಸೆಯೊಡ್ಡಿ ಬೆಳಕ ತುಂಬಿಕೊಂಡೆನಾದರೆ ಹೋಕಿಲ್ಲದೆ ಹೊಸತೇನೋ ಒಂದನು ಎದೆಗೆ ಸುರಿದು ನಗುವ ನಿತ್ಯ ಉತ್ಸವದೊಂದು ಸೆಳಕು ಈ ಬೆಳಗು...
ಶುಭದಿನ... 🍬🧚
***

ಒಂದು ನಗೆಯ ಹೊಳಪಿನಲ್ಲಿ ನೂರು ಭಾವ ಮುನ್ನುಡಿ...
ಬೆಳಕು ಬೆಳಕ ತಬ್ಬಿದಂತೆ ನಗೆಗೆ ನಗೆಯ ಮರುದನಿ...
ನಕ್ಕುಬಿಡು ನೇಹವೇ, 
ಎದೆಯ ಕಾವ್ಯ ಅರಳಲಿ - ಬೇಲಿಸಾಲಿನಲ್ಲಿ ಹೂವು ಹೊಸತು ಹಾಡ ಕಟ್ಟಲಿ - ಜೀವ ಭಾವ ಬೆಳಗಲಿ...
ಶುಭ ಬೆಳಗು... 🤩
***

ಇರುಳೆಲ್ಲ ಕಾಡಿದ (ನಿನ್ನ) ಕನಸು ಮುಂಬೆಳಗಿನ ಮಂದಹಾಸವಾಗಿ ಸಣ್ಣ ಬಿನ್ನಾಣದಲಿ ಬೆಳಕ ಎದುರ್ಗೊಳ್ಳುತ್ತದೆ - ಅವ್ಯಕ್ತ ರೋಮಾಂಚವೊಂದು ಹಾಗೇ ಮುಂದುವರೆಯುತ್ತದೆ...
ಶುಭದಿನ... ☺️
***

ನನ್ನ ಸಾವಿರಾರು ಶುಭಾಶಯಗಳ ಒಟ್ಟು ತೂಕ = ಒಂದೇ ಒಂದು ಬೆಳಕಿನ ಕುಡಿಯ ಮೊತ್ತ...
ಶುಭವೆಂದರೇ ಬೆಳಕು - ಶುಭದಿನ... 🍬🍫
***

ಇನ್ನೆಲ್ಲ ಹೊಸತು, ಅಲ್ಲಿಯದೆಲ್ಲಾ ಮರೆತೇ ಮುಂದೆ ಬಂದೆ ಅಂದುಕೊಳ್ಳುವಾಗಲೂ ಒಂದ್ಯಾವುದೋ ಭಾವ ತಂತು ನೆನಪಿನ ಕೋಶವ ಕಿರುಬೆರಳಲ್ಲಿ ಕೆರೆಯುತ್ತದಲ್ಲ - ಅರೇ, ಅಷ್ಟುದ್ದ ಇರುಳ ದಾಂಟಿದ ಮೇಲೂ ನಿನ್ನೆಯ ಬೆಳಕಿನುಂಡೆಯ ತುಂಡೇ ಉಳಿದು ಇಂದಿನ ಬೆಳಗಾಯಿತಾ...?!
ಗೊಂದಲದ ನಡುವೆಯೇ ಯಾವುದೋ ಭರವಸೆ - ಜೋಳಿಗೆಯಲಿ ನಿನ್ನೆ ಕಣ್ತಪ್ಪಿದ ಶುಭದ ಹರಳಿರಬಹುದು - ಅದನಾಯ್ದುಕೊಳ್ಳೋಕೆ ಇದು ಇನ್ನೊಂದು ಅವಕಾಶವಿರಬಹುದು...
ಶುಭದ್ದೇ ದಿನ... 🧚
***

ಅದೇ ನಿನ್ನೆಯ ಹಾದಿಯಲ್ಲೇ ಇಂದೆಂಬ ಇಂದಿನ ಬೆಳಕೂ ಮೈದಳೆದಿದೆ - ಹಾಗಿದ್ದೂ ಹೊಸತೇ ನಗೆಯ ಮುನ್ನುಡಿ, ಮತ್ತೊಂದು ಭರವಸೆಯ ಬೆಳಕ ಕಿಡಿಗೆ ಕಣ್ಣು ಕೂಡಿದೆ ಎಂಬಂತೆ ಭಾಸವಾಗುವುದಿದೆ ನೋಡು...
ಶುಭವೆಂದರೆ ಅದೇ -
ತುಳಿದ ಹಾದಿಯ ಧೂಳಿನಲ್ಲೇ ನಿತ್ಯ ಮೈಮನವ ತೊಳೆದು ಹಸನಾಗುವ ಹಿರಿತನ ಅಥವಾ ಕೊಳಕೆಂಬುದೇನಿಲ್ಲ ಕೊರಳೆತ್ತಿ ಕೊನರುವ ಕುಡಿಯ ಎದೆ ಕುದಿಗೆ ಎಂದು ತಿವಿಯುವ ಬೆಳಕು...
ಶುಭದಿನ... 🪴
***

ಕನಸಿನ ಮರಿ ಹಕ್ಕಿಯ ಕಣ್ಣಲ್ಲಿ ಬೆಳಕಿನ ಕಿಡಿ ಬೆಳಗು...
ಶುಭದಿನ... 🐣🕊️

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

No comments:

Post a Comment