Thursday, October 24, 2024

ಗೊಂಚಲು - ನಾಕ್ನೂರ್ನಲ್ವತ್ತರಮೇಲೇಳು.....

 ಶುಭವೇ ನಂಬಿಕೆ.....

ನಿದ್ದೆ ತಿಳಿದೆದ್ದು ಕನಸು ಮೈಮುರಿಯುವಾಗ 
ನೆನಪು ತೋಳ ಚಿವುಟಿ ದಿನವು ಶುಭವೆಂದರೆ 
ಆ ಮುಗುಳ್ನಗುವಿಗೆ ನಿನ್ನ ಹೆಸರು...
ಶುಭವೇ ನೀನೇ ನೆಹವೇ...
ಶುಭದಿನ... 🫂
***

ತುಸು ಬೆಳಕಿಗೆಂದು ಬಾಗಿಲು ತೆರೆದೆ 
ನಿನ್ನ ನಗೆ ಮುಗುಳು ಒಳತೂರಿ ಬಂತು
ತುಂಬು ಬೆಳಗಾಯಿತು...
ಶುಭದಿನ... 😚
***

ಬೆಳಗು ಎಂಬುವ ನಗೆ ಧುನಿಯ ರಾಗ ಸಂಯೋಜನೆ...
ಶುಭದಿನ... 🕊️
***

ಶಬ್ದವೇ ಇರದೆ ಹೂವರಳುವಂಗೆ ಅರಳುವ ಒಂದು ಮುಗುಳ್ನಗೆ - ನೂರು ಖುಷಿ ಖುಷಿಯ ಬಣ್ಣಗಳ ಎದೆಯಿಂದ ಎದೆಗೆ ದಾಂಟಿಸುವ ಪ್ರೀತಿ ಸಂಕಲನ...
ಈ ಬೆಳಗಿನೊಂದಿಗೆ ನಗೆಯೊಂದನು ಕಳಿಸಿರುವೆ, ಬರಮಾಡಿಕೊಂಡು ನಕ್ಕುಬಿಡು - ನೇಹ ಬೆಳಕಾಗಲಿ...
ಶುಭದಿನ... 🫂🕊️
***

ಎದೆಯು ನು(ಮಿ)ಡಿದ ಶುಭವನೆಲ್ಲ ಬೆಳಕು ತನ್ನುಡಿಯಲಿ ಲಾಲೈಸಿ ಸಲಹಲಿ...
ಬೆಳಗು ಎದೆಯ ಬೆಳಕಾಗಲಿ...
ಶುಭದಿನ... 🧚
***

ಬೆಳಗೆಂದರಿದು ಬೆಳಕಿನ ಕಿಡಿಯ ಮಂಗಳ ಮಂತ್ರದಿ ಎದೆಯಿಂದ ಎದೆಯನು ಮೀಟುವ ಒಂದು ಪ್ರೀತಿ ಸಾಲು...
ಶುಭದಿನ... 💞🫂
***

ಬೆಳಕಿಗೆಂದು ಬಾಗಿಲು ತೆರೆದೆ - ಶುಭವಾಗಿ ನಿನ್ನ ಅಕ್ಕರೆಯ ನಗು ಕೈಕುಲುಕಿತು...
ನೇಹ ಲತೆಯ ಹೂವರಳಿ ಬೆಳಗಾಯಿತು...
ಶುಭದಿನ... 🤝🫂
***

ಮಗು ತುಳಿದ ರಂಗೋಲಿಯ ಸವರಿ ಹಬ್ಬದ ಸಡಗರವನೆತ್ತಿ ನೆನಪಿನ ಜೋಳಿಗೆಯ ಖಾನೆಗಳ ತುಂಬಿಕೊಳುವ ವಿಲಾಸದ ನಗುವಿನ ಮರು ಹಗಲು...
ಶುಭದಿನ... 🍫🍬
***

ಎನ್ನ ದಿನವೊಂದ ಬೆಳಗಿಸಿಕೊಳ್ಳುವಾಸೆಗೆ ನಿನ್ನ ನಗೆಯೊಂದನು ಕಡವ ಕೇಳುತ್ತಾ ಶುಭದಾಶಯದಿ ಸಂದೇಶವ ಕಳಿಸುತ್ತೇನೆ...
ದಿನ ದಿನವೂ ಶುಭದಿನ - ನಿನ್ನ ನಗೆಯಿಂದ... 🫂🤝
***

ಅತಿ ಮುದ್ದಿಗೆ ಬಿದ್ದ ಮೋಡ ಮತ್ತು ಬೈಯ್ಯಲಾರೆ, ಭರಿಸಲಾರೆ ಎಂಬಂತೆ ಮೈಯ್ಯೊಡ್ಡಿ ಛಳಿಯ ಛವಿಯೇರಿ ನಿಂತ ಒದ್ದೊದ್ದೆ ನೆಲ...
ಮಿಜಿ ಮಿಜಿ ಮಳೆ ಬೆಳಗು... 🌧️☔
***

ನೆಲಕುರುಳಿದ ಹೂವ ಕಣ್ಣಲ್ಲಿ ದುಂಬಿಯ ಚಿತ್ರವೊಂದು ಹಾಗೇ ಇದ್ದಿರಬಹುದಾ...
ಹೊಸ ಪಾತ್ರದ ಗಾಂಭೀರ್ಯ, ಸಾವಿನ ಸೌಂದರ್ಯ, ಮುಕ್ತವಾಗುವ ಔನ್ನತ್ಯಗಳನು ಎದೆಗೆ ಸುರಿದು ಬೆಳಕೇ ಹೂವಿನೊಡಲ ಮಗುವಾಗಿರಬಹುದಾ...
ತುಳಿದವರ ಪಾದಕೂ ತನ್ನ ಘಮ ಅಂಟಿಸುವ ಔದಾರ್ಯ ಪ್ರಕೃತಿಯ ಅಕಾರಣ ಪ್ರೇಮದ್ದೇ ರುಜುವಲ್ಲವಾ...
ಕಣಕಣದಲೂ ಭರವಸೆ, ಪ್ರೀತಿಯ ನೂರಾರು ಮುಖಗಳ ರೂಪಾಂತರಗಳ ಘನತೆ - ಬೆಳಗು ಹೇಳಿದ ಜೀವಾಭಾವದ ಪಾಠ...
ಶುಭದಿನ... 💞🪻
***

ಇರುಳ ತುಂಬಾ ಅವನ ಕೊರಳ‌ ಬಳಸಿ ಹಂಚಿಕೊಂಡ ಪ್ರೇಮದ ಸವಿಯ ಕಂಪು ಕಂಪನ ಅವಳೆದೆಯಲಿನ್ನೂ ಬಾಕಿ ಉಳಿದು ಕನಸಿನಂಥ ಕಾವ್ಯವಾಗಿ ಮುಂಬಾಗಿಲ ರಂಗೋಲಿಯಾಗಿ ಅರಳುವ ನವಿರಾದ ರಸಿಕ ರಸರಾಗ ಬೆಳಗು...
ಶುಭದಿನ... 🪻🦋🙈
***

ಗಿರಿ ವಕ್ಷದ ತೆರೆಯಾಗಿ ಮೋಡವ ಹೊದ್ದು ಮಲಗಿ ರವಿಯ ಮುದ್ದಿನಾಸೆಯ ಅಣಕಿಸುವ ಭುವಿಯ ಬಿಂಕದ ನಗು ಈ ಬೆಳಗು...
ಶುಭದಿನ... 🌫️
***

ಹೊಳೆಯ ‌ಹರಿವಿನ ಸದ್ದಿಗೆ ಸಂವಾದಿಯಾಗಿ ನೀ ಎನ್ನೊಳಗರಳುವ ಧ್ಯಾನ ಬೆರೆತ ಉಗುರು ಬೆಚ್ಚನೆಯ ಕಂಪನದ ಕಾವ್ಯ ಬೆಳಗು...
ಶುಭವೇ ನಂಬಿಕೆ - ಶುಭದಿನ... 🫂

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

No comments:

Post a Comment