Saturday, October 12, 2024

ಗೊಂಚಲು - ನಾಕ್ನೂರ್ನಲ್ವತ್ತರಮೇಲ್ನಾಕು.....

ಕವಿತೆ(?).....

ಇನಿದು ಇನಿದು ಮಳೆ ಬೀಳುವಾಗ ಈ ಎದೆಗೆ
ಘಲ್ ಘಲಿರೆನುವುದು ನಿನ್ನಾ ಕನಸ ಕಾಲಂದುಗೆ...
ಕಳ್ಳ ರುದಯವಿದು ಸುಮ್ಮನಿದ್ದುಬಿಡುವುದಾದರೂ ಹೆಂಗೆ
ಉಸಿರ ತುಂಬಿ ಹರಿವಾಗ ನಿನ್ನಾಸೆ ಪ್ರಣಯ ಗಂಗೆ...

ಸದ್ದೇ ಇರದೇ ಸ್ವಾಗತಿಸೋ 
ನಿನ್ನಾ ಕಣ್ಣಾ ರೆಪ್ಪೆಗಳಾ...
ಸ್ವಾತೀ ಹನಿಯಾ ಕುಡಿದಾ
ಪ್ರೀತಿ ಕಪ್ಪೆ ಚಿಪ್ಪುಗಳಾ...
ಅರ್ಥವಾಗದ ಭಾವಗಳ ಹಿಡಿದು
ಅರ್ಧವೇ ಬರೆದ ಕವಿತೆಗಳಾ...

ನೆನೆದು ನೆನೆದು ನೆನೆಯುತ್ತೇನೆ
ದಾಂಟಲು ಕಡು ವಿರಹದ ಈ ರಾತ್ರಿಗಳಾ...
ಇರು ನೀನು ಹಿಂಗೇ 
ಅಷ್ಟು ದೂರವಿದ್ದೂ ಇಷ್ಟೊಂದು ಹತ್ತಿರ...
ಅಲ್ಲಿದ್ದೇ ಕಾಡುವಂಗೆ
ಆ ಕಾಡಿನಾಚೆಯಾ ಆ ನೀಲ ಸಾಗರ...

ಪ್ರೀತಿಯ ಹುಡುಕುವ ಕವಿಯೂ
ಸಾವನು ಹಲುಬುವ ಕವಿತೆಯೂ
ಒಟ್ಟಿಗೇ ಮಲಗಿದ ರಮಣೀಯ(?) ಕಥೆಗೆ 
ಖಾಯಂ ನಾಯಕನೀ ನನ ಒಡಲು... 

ಭಾವ ಬೇಯುವ ಇರುಳು
ಕಟ್ಟಿ ಬರುವಾಗ ಕೊರಳು
ನೆತ್ತಿಯಾ ಮಿಡಿವ ನಿನ ಬೆರಳು
ಮಾತನಾಡುವ ಕಡಲು...
ನೀನು 
ನನ್ನ ಮೌನ ಮಡಿಯುವ ಮಡಿಲು...

***ಕೆಲಸವಿಲ್ಲದ ಕವಿ ಕವಿತೆ(?) ಕ(ಕು)ಟ್ಟುವ ಪರಿ - ಪದ ಪಾದ ಬೆರಕೆಗೆ ಸೂತ್ರ ಸಂಬಂಧ ಕೇಳಬೇಡಿ... 🫢

No comments:

Post a Comment