Thursday, December 11, 2025

ಗೊಂಚಲು - ನಾಕ್ನೂರಾ ಎಪ್ಪತ್ತೈದು.....

 ಬೆಳಗೆಂಬೋ ಬೆಳಕಿನ ಕರುಣಾಲಯ... 🪔

ದೀಪದಿಂದ ದೀಪ ಉರಿಸಿ ಕುಹರಗಳನೂ ಬೆಳಗುವಂಗೆ, 
ಎದೆಯಿಂದ ಎದೆಗೆ ಪ್ರೀತಿಯಿಂದ ಪ್ರೀತಿ ಹರಿಸಿ ನಗೆಯ ಘಂಟೆ ಮೊಳಗಿಸಿದಲ್ಲಿ ಮುಳ್ಳು ಕಂಟಿಯಲಿ ಹೂವರಳುವಂತೆ ನಾನೂ ನೀನೂ ನಡೆವ ಹಾದಿ ಬದಿ ಬೆಳಕ ಮಿಂದು ಹಸನಾಗುವುದು... 
ಒಲವು ಹಾಯುವ ಯೆದೆಯ ತೀರದಲೆಲ್ಲ ಬೆಳಕಿನ ಹಬ್ಬವಾಗುವುದು... 
ಶುಭದಿನವು - ಶುಭಾಶಯವು... 🪔🤝🫂🍬

ಬೆಳಗೆಂದರೆ ಬೆಳಕಿನ ದಿವ್ಯ ಸಾಂಗತ್ಯ... 
ಬೆಳಗೂ ಎಂದರೆ ಒಂದು ಪ್ರೇಮಮಯೀ ಸಾತತ್ಯ... 
ಬೆಳಗಿನಂಥಾ ಒಲವು ಬೆಳಕಾಗಿ ಬೆಳಗಲಿ ನನ್ನೊಳಗೂ, ನಿನ್ನೊಳಗೂ...
ಬೆಳಗಿನ ಶುಭಾಶಯವು... 🤝🫂

ಕಣ್ಮುಚ್ಚಿ ನಿನ್ನ ಪ್ರೀತಿಯ ನೆನೆದು ನಾ ಶುಭವ ಕೋರಿದರೆ ಬೆಳಗು ಜಗದ ಒಲವಾಗಿ ಹರಿದು ನಗೆಯ ಹರಸಿ ಕಣ್ತೆರೆಸಿತು - ಯದೆಯ ಜೋಪಡಿಯೀಗ ಬೆಳಕೇ ಆಯಿತು; ನಿನ್ನದೂ, ನನ್ನದೂ... 
ಶುಭದಿನ... 🤝🫂

ನೇಹನಾಲೆಯೇ -
ರಣ ಇರುಳ ಬದಿ ಸರಿಸಿ ಬಂಗಾರ ಬಣ್ಣದಿ ಬೆಳಗುತ್ತ ಬರುವ ಬೆಳಗು ಬಗಲ ಚೀಲದ ತುಂಬಾ ಶುಭದ ಬೆಳಕನೇ ತುಂಬಿ ತಂದು ನಿನ್ನ ಮಡಿಲಿಗೆ ಸುರಿಯಲಿ - ನಿನ್ನೆದೆಯ ಪ್ರೀತಿ ಕಣಜದಲಿ ನಗೆ ಹೊನಲು ತುಂಬಿ ತುಂಬಿ ಮರಿಯಲಿ... 
ಶುಭದಿನವು ನಿನಗೆ... 🤝🫂

ಕಣ್ಣ ಗುಡ್ಡೆಯ ಬೆಳಕಿನೆಚ್ಚರ
ಯೆದೆಗೂಡಿನ ಎಚ್ಚರದ ಬೆಳಕು
ಕೂಡಿಯಾಡಲಿ
ಬೆಳಗು ಬೆಳಗಲಿ... 
ಪ್ರೀತಿ ಪಡಿನುಡಿಯೆ 
ನಗೆಯ/ಯೇ ಸುಪ್ರಭಾತ...🤝🫂

ನೇಹವೇ-
ಕತ್ತಲೆಕಾನ ದಾಟಿ ಬಂದ ಬೆಳಗಿನ ಬೆಡಗಿನ ಪ್ರಭಾವಳಿಯೆದುರು ಬೊಗಸೆಯೊಡ್ಡಿ ನಿಂತು ಶುಭವ ಹರಸೆಂದು ಬೇಡಿದೆ...
ಈಗ,
ಪ್ರಾರ್ಥನೆಯ ಮರುಘಳಿಗೆ ಯೆದೆಯ ಭಿತ್ತಿಯಲಿ ಇರುಳ ಕನಸು ನನಸಾದಂಗೆ ನಿನ್ನ ಚಿತ್ರ ಪಡಿಮೂಡಿದೆ... 
ಜೀವಾಭಾವದ ನಾಡಿ ನುಡಿಗಳಲಿ ನಗೆಯ ರಾಗ ತರಂಗಗಳೆದ್ದಿವೆ... 
ಬೆಳಗುವ ನೀನು ಮತ್ತು ನಗು ಶುಭವಲ್ಲದೇ ಇನ್ನೇನು... 
ಶುಭೋದಯ... 🤝🫂

ಆ ಬೆಳಕಿನಕ್ಷಯ ಪಾತ್ರೆಯಿಂದ ಒಂದಗುಳು ಬೆಳಕನು ಕಡ ತಂದಾದರೂ ಇಲ್ಲಿನೀ ಬೆಳಕಿನ ಹಸಿವನಿಷ್ಟು ನೀಗಿಕೊಳ್ಳಬೇಕು ನಾನು - ಎನ್ನ ಒಳಮನೆಯ ಕತ್ತಲು ಕಳೆಯಬೇಕು... 
ಮುಡಿಗೆ ಬಿದ್ದ ಬೆಳಕು ಉಡಿಯ ತುಂಬಬೇಕು - ಬೆಳಕಿನಿಂದ ಬೆಳಕ ಬೆಳೆಯಬೇಕು... 
ಯೆದೆಯ ಕಾವಿನಲ್ಲಿ ಪ್ರೀತಿ ಹೂ ಅರಳಬೇಕು...
ಶುಭದಿನ... 🪔🤝🫂

ಬೆಳಕಿನ ಹಾದಿಗೂ, ಅದರ ನೂರು ಕವಲಿಗೂ, ಬೆಳಕಿನುರಿ ಸುಡದಂತೆ ಬೆಳಕೇ ಬೆಳೆಸಿದ ಹಸುರಿನ ನೆರಳಿಗೂ ಒಲವೊಂದೇ ಉಸಿರು, ಒಲವೆಂದೇ ಹೆಸರು... 
ಆ ಹಾದಿಯಲಿ ನಡೆವ ನನ್ನೆದೆ ಪಾತ್ರೆಯ ಪ್ರೀತಿ ಎಷ್ಟೋ ನನ್ನ ಪಾತ್ರವೂ ಅಷ್ಟೇ... 
ಶುಭದಿನ... 🤝🫂

ಬೆಳಕಿನ ಬೇರು
ಪ್ರೀತಿಯ ನೀರು
ನಗೆ ಮುಗುಳ ಸೂರು... 
ಚೂರೇ ಚೂರು
ಗಳಿಸಿದರೂ ಸಾಕು ಈ ಮೂರೂ
ಸೊಗದಿ ಆಳೋಕೆ ಮೂರು ಊರು...
ನಿದಿರೆ ಕಳೆದು ಬೆಳಗಾಯಿತು 
ಯೆದೆಯಿಂದಲೆದೆಗೆ ಕಕ್ಕುಲಾತಿಯ ಹಂಚುವ ಹೊತ್ತಾಯಿತು... 
ಶುಭದಿನ... 🤝🫂

ಚಿತ್ರದಲಿರುವ ಅವಳೂ, ಚಿತ್ತ ಸ್ವಾಸ್ಥ್ಯವಿಲ್ಲದ ನಾನೂ ಪರಸ್ಪರ ಅಭಿವಂದಿಸಿ 'ಬೆಳ್ಗಾತು, ದೇವ್ರ್ ದೊಡ್ಡಂವ, ಬೇವರ್ಸಿ ಬದ್ಕಿಂಗೂ ಒಂದ್ ಬೆಳಕ್ನ್ ತುತ್ತು ಇಟ್ಟಿರ್ತ ನೋಡು' ಅಂತಂದ್ಕಂಡು ದೊಡ್ಡಕ್ಕೆ ನೆಗಿಯಾಡಿ ಅಂದಿನಂದಿನ ಹೊಸ ನಾಟ್ಕಕ್ಕೆ ವೇಷ ಕಟ್ಟುವ ಗಡಿಬಿಡಿಗೆ ಬೀಳ್ತೇವೆ... 
ಬದ್ಕಿ ಸಾಯಿ ಮಗ್ನೇ ಅಂದಂಗೆ ನಗ್ತಿರೋ ಅವ್ಳು - ಸತ್ತು ಬದಕ್ಯಂಡೆ ನೀನು ಅಂದು ನಿಡುಸುಯ್ಯೋ ನಾನು; ಈ ಇಂಥಾ ಮರುಳರ ನೆತ್ತಿ ನೇವರ್ಸಿ ಸಾಂತ್ವನಿಸೋ ಬೆಳಗು... 
ಶುಭದಿನ... 🫂

ಬೆಳಕ ಬಾಗಿಲಲಿ ಪ್ರೀತಿ ಹಸೆ ಬರೆದು ನಿನ್ನ ಹೆಸರಿನ ಅಂಕಿತವ ಹಾಕಿದೆ... 
ಶುಭದ ಗಣಗಳೆಲ್ಲ ನಗೆಯ ಬಾಗಿನ ಹಿಡಿದು ಎನ್ನೆದೆ ಬಾಗಿಲಲಿ ಸಾಲುಗಟ್ಟಿವೆ ಈಗ... 
ನಗೆ ಮುಗುಳ ಬಗೆ ಬೆಳಗು... 🤝🫂

ನನ್ನಲಿರುವ ಹನುಮ ಶಕ್ತಿಯ ಮರೆತು ಅಳುತ ಕೂತ ಮಂಗನಂಥಾ ನನಗೆ, 
ಕರಡಿ ಪ್ರೀತಿಯ ಕೊಟ್ಟು ಕಿವಿ ಹಿಂಡಿ ಅನುದಿನವೂ ಹೊಸತು ನಭದ ಕನಸನು ತುಂಬುವ ಜಾಂಬವಂತ ಬೆಳಗು...
ಅರಿವಿನ ಪರಿವಿಲ್ಲದ ಈ ಪಡಪೋಶಿ ಜೀವವ ಪ್ರೀತಿ ಪರಿಪಾಕದಲಿ ಪೊರೆವ ಜಾಂಬವ ನೇಹಗಳೇ - ಶುಭದ ಪ್ರಾರ್ಥನೆಯು ನಿಮಗೆ... 
ಶುಭದಿನ... 🤝🫂

ಹಗಲಾಗುವುದೇನೂ ಸುಲಭವಿಲ್ಲ... 
ಆಕಳಿಸುವವನ ಕಣ್ಣ ತಿವಿದು, ಇರುಳು ಕಲಿಸಿದ ಆಲಸ್ಯವ ಮುರಿದು ನಿತ್ಯಕರ್ಮಕೆನ್ನ ಅಣಿಗೊಳಿಸಬೇಕು... 
ನಿಶೆಯ ಸುಖದ ನಶೆಯನೂ ಮೀರಿದ ಗೆಲುವಿನ ಸುಖದ ಕನಸಿನ ಬೆಳಕನೆನ್ನೆದೆಗೆ ತುಂಬಬೇಕು... 
ಪ್ರತಿ ಬೆಳಗೂ ತುಂಬು ಪ್ರೀತಿಯ ಶುಭದ(ದ್ದೇ) ಕಣಿ ಹೇಳಬೇಕು... 
ನಗೆ ಪಲ್ಲವಿಯ ನಾಂದಿ ಪದ್ಯವೀ ಬೆಳಗು... 🤝🫂

ಬೆಳಕಿನೊಡ್ಡೋಲಗದಲಿ ಕೂರಲು ಜಾಗವಿಲ್ಲದ ಕತ್ತಲು ಬೆಳಕಿನ ಬೆನ್ನಲ್ಲಿ ನೆರಳಾಗಿ ನೆಲೆಯಾಗಿ ಉಸಿರ ಕಾಯ್ದುಕೊಂಡಿತು... 
ಪ್ರೀತಿ ಹಂಚುವ ಎದೆ ಜೋಳಿಗೆಗೆ ನಗೆ ಸಂಪದ ಸುರಿವ ಬೆಳಕು... 
ಶುಭದ ಸಾನಿಧ್ಯ ಬೆಳಗು... 🤝🫂

ಇರುಳನು ಕಾಡಿದ ದುಃಸ್ವಪ್ನಗಳೆಲ್ಲ ಬೆಳಕಿನ ಪ್ರೀತಿಯ ಹೊಡ್ತಕ್ಕೆ ಹೆದರಿ ಮತ್ತೆ ಉಸಿರೆತ್ತದಂತಾಗಲಿ... 
ಒಂದೊಂದೇ ದಳ ಬಿರಿದು ಹೂವರಳುವಂತೇ ಮೈದೋರುವ ಬೆಳಗಿನ ಬೆಡಗಿನ ಪರಿಯಲೇ ನಗುವು ಗಂಟೊಡೆದು ಯೆದೆತುಂಬಿ ನಳನಳಿಸಲಿ... 
ಶುಭದಲರು ಈ ಮುಂಜಾವು... 🤝🫂

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

No comments:

Post a Comment