Thursday, December 11, 2025

ಗೊಂಚಲು - ನಾಕ್ನೂರಾ ಎಪ್ಪತ್ತು ಮತ್ತೂ ಒಂಭತ್ತು.....

ದಿನಕ್ಕೊಂದು ಮುತ್ತಿನ ಕಥೆ.....
ಭಾವಕಾವ್ಯ ಕೌಮುದೀ -
ಸೋಲು ಒಳ್ಳೆಯದೇ - ಸೋತದ್ದು ಪ್ರೀತಿಗೇ ಆದಲ್ಲಿ... 
ನಿಂಗೆ ಸೋತೇ ಅನ್ನುವಾಗ ಜಗವ ಗೆದ್ದ ಬೀಗು ಉಸಿರಲ್ಲಿ... 
___ ದಿನಕ್ಕೊಂದು ಮುತ್ತಿನ ಕಥೆ...
💞💞💞

ಮುಸುಕು ಮಂಜು, ಬಿರು ಮಳೆ, ಹೋರು ಗಾಳಿ, ಎತ್ತರದ ಏರಿನೆದುರು ಸಳಸಳನೆ ಸುರಿದ ಬೆವರು, ಅಷ್ಟೆಲ್ಲಾ ರುದ್ರ ರಮಣೀಯತೆಯ ಯಥಾವತ್ತು ಬರೆದ ಚಿತ್ರವೂ ಉಸಿರ ಬಳ್ಳಿಗೆ ಚುಚ್ಚಿದ ಮುರಿದ ಭಾವದ ಮುಳ್ಳಿನ ಗಾಯದ ಆಳ ಹೇಳುವುದಿಲ್ಲ... 
ಧಾರೆ ಧಾರೆ ಸುರಿವ ಕಣ್ಣ ಹನಿಯೂ ಹೆಪ್ಪು ಮೌನದಿ ಗುಮಿಗೂಡಿದ ಗಾಢ ನೋವಿನ ಒಂದಂಶದ ಭಾರ ತೂಗುವುದಿಲ್ಲ... 
ಹತ್ತಾರು ನಶೆಗಳಲಿ, ನೂರು ನಖರೆಗಳಲಿ ಕಳೆದುಹೋದರೂ ಕಳೆದುಕೊಂಡ ನಿನ್ನ(ನ್ನೆ) ನಗೆಯ ಪ್ರೀತಿ ಸಾರ ಸಿಗುವುದಿಲ್ಲ...
___ ಕೂಗಿ ಕೂಗಿ ಕರೆದಂತೆ ಭಾಸವಾಗಿ ಸುಸ್ತಾಗಿಯೂ ಗಂಟಲಲ್ಲೇ ಉಳಿದ ನಿನ್ನ ಹೆಸರು... 
💞💞💞

ಎಂಥ ಗಾಢವೋ ನದಿಯ/ನದಿಯಂಥವಳ ವಿರಹದ ಎದೆಗುದಿ - ಒಡೆದೂ ಮುರಿದೂ ದುಡು ದುಡು ಧುಮ್ಮಿಕ್ಕಿ ಹರಿಯುತಾಳೆ ಸೇರಲು ಅವನ/ಸಾಗರನ ಎದೆಗುಡಿ... 
___ ಪ್ರೀತಿ ಪಾರಾಯಣ... 

ಕಂಗಳಾಳ(ಡಿ)ದ ಮಾತು... 
ಬೆನ್ಬಯಲು ಬರೆದ ಕವಿತೆ... 
ನಡು ಮ(ಮಿ)ಡತೆ ತೀಡಿದ ತಲ್ಲಣ... 
ಯೆದೆಯಮೇಲೂರಿದ ಬೆಳದಿಂಗಳ ಕಾಲ್ಗಳ ಗೆಜ್ಜೆ ಘಲಿರು... 
ಆಹಾ...!! 
ಹೆಣ್ಹರೆಯದ ಚೆಲುವು ರಸಿಕನೂರ ಚೆಂಡಾಡುವ ಪರಿಯೇ...!!!
____ ಮೋಹಾ ಮಾರುತ...

ಸಾಯಬೇಡಾ ಅಂತಂದು ಮಧುರವಾಗಿ ಕೊಲ್ಲುವ ಕಲೆಯ ಕಲಿಸಿದ್ಯಾರು ಚೆಲುವಿ(ವೆ)ಗೆ... 
____ ಬಿನ್ನಾಣದ ಕಾವ್ಯ...

ಯೆದೆಯ ನೂರು ಗಾಯಕೂ ಪ್ರೀತಿ ಒಂದೇ ಮದ್ದಂತೆ... 
ಮತ್ತು
ಈ ಪ್ರೀತಿ ಒಂಥರಾ ದೇವ ಪೂಜೆಗಿಟ್ಟ ನೈವೇದ್ಯದಂತೆ - ಇಟ್ಟದ್ದೇನೋ ಅವರೆದುರಿಗೆ, ರುಚಿ ದಕ್ಕುವುದು ಮಾತ್ರ ನನ್ನದೇ/ನನ್ನೆದೆ ನಾಲಿಗೆಗೆ...
____ ಎದೆಗಣ್ಣ ಬೆಳಕು... 
💞💞💞

ಒಡೆದ ತುಟಿಗಳಿಗೆ ಮದ್ದನು
ಒಡೆದ ತುಟಿಗಳೇ ಕೊಡಬೇಕು... 
ಬಂದು ಹೋಗು ಮತ್ತೊಮ್ಮೆ
ಅಡ್ಡ ಮಳೆ, ಉದ್ದುದ್ದ ಛಳಿಯ ಇರುಳ(ಲಿ) ಮೈಗೆ ಬೆಂಕಿ ಬೀಳಲಿ... 
___ ಮಧುರ ಪಾಪದ ಮಾಧುರ್ಯ... 
💞💞💞
ನಾನು - ನೀರಿಗಿಳಿವ ಧೈರ್ಯ ಇಲ್ಲಾ ಅಂದವಳೆದುರು  ನಡು ಹಿಡಿದು ಈಜು ಕಲಿಸುವ ಖುಷಿಯ ಕನಸು ಕಾಣ್ತೇನೆ... ಜಲಕ್ರೀಡೆಯ ಆಸೆಯೇ ಇಲ್ಲವೆಂದರೆ ನೀನು  ಸೇರುವ ಹಾಗೂ ಮರೆಯುವ ನಡು ದಾರಿ ಸಿಗದ ವಿರಹದ ಮಡುವಲಿ ಒಂಟಿ ತೇಲುವ ಕೊರಡಾಗುತ್ತೇನೆ... ___ ಪ್ರಣಯ ಶರಧಿಯ ತೀರಗಳಲಿ ನಿನ್ನ ಮೋಹಕ ಮೋಹಕೆ ನಗು(ಡು)ವನೊತ್ತೆಯಿಟ್ಟವನು... ಆ ಚೆಲುವು ಅದರ ಹಸಿವು ನನ್ನ ಬದುಕಿಸಿರೋ ಅಮೃತವೂ ಅದೇ ನಾ ಸಾವನು ಒಪ್ಪುವ ಪ್ರಾರ್ಥನೆಯೂ ಅಲ್ಲೇನೇ...  ____ ಅವಳಾ ಬೆತ್ತಲೆ ಮೈ ಬಯಲು... 💞💞💞
ಕೇಳೇ - ನಿನ್ನ ಹೆಸರಲೀ ನಾ ಬರೆದಿಟ್ಟ ನನ್ನ ಉಸಿರಿದೆ... ನನ್ನ ಇರುಳ ತೋಳಲೀ ನೀ ಮರಮರಳಿ ಅರಳಿ  ಬೆವರಾಗಿ ಘಮಿಸುವುದು ಗೆದ್ದು ಗೆದ್ದು ಸಂಭ್ರಮಿಸುವುದು ನನ್ನ ಜೀವ ಜಾತ್ರೆಯ ಮಹಾ ಮೋಹಕ ಸೋಲು...  ಇಲ್ಲೇ ನಿನ್ನ ಮನೆಯ ದಣಪೆಯಾಚೆ ನಿಂತಿದ್ದೇನೆ - ಹಸಿ ಹಸಿವು;  ಕರೆದುಕೋ ಬಿಸಿ ಕನಸಿಗಾದರೂ - ಇಷ್ಟಾದರೂ ತೃಷೆ ತಣಿದರಷ್ಟೇ ಉಳಿವು... ____ ಹೇ!! ಕಾಡು ಹೂವಿನಂಥ ಹುಡುಗೀ... 💞💞💞
ಕೇಳೇ ಕಾವ್ಯ ಕಂಪನವೇ - ನನ್ನೆಲ್ಲಾ ಖುಷಿ ಖುಷಿಯ ಘಳಿಗೆಗಳಲೂ ನಿನ್ನದೊಂದು ಆಪ್ತ ಒಡನಾಟದ ನೆನಪು ನನ್ನ ಸಲಹುತ್ತದೆ ಇನ್ನಷ್ಟು ಮತ್ತಷ್ಟು ಮಗದಷ್ಟು ಮೊಗೆದಷ್ಟೂ ಸವಿಯಾಗಿ... ___ ನೆನಪು ಬಾಧಿಸುತ್ತದೆ - ಬಾಗಿಸುತ್ತದೆ - ಮಾಗಿಸುತ್ತದೆ - ಬಾಳಿಸುತ್ತದೆ ಬರಗೆಟ್ಟ ಭವವ... (ಮು)ಮಂದಸ್ಮಿತ ಮಾಯೆಯೇ - ಎವೆ ಬಾಡದೇ ಕನವರಿಸಿ ಕಾಯುತ್ತ ಕೂತ ನಗ್ನ ಕಂಗಳ ತೀರಕೆ ಬೆಚ್ಚಗೆ ಬುಳ್ಳಗೆ ಕನಸಾಗಿಯಾದರೂ ಬಾ... ಇರುಳ ಮೈದುಂಬಿ ಬರಲಿ ಸುರತ ಸಗ್ಗದ ಸೊಗವು - ಬಿಸಿ ಹರೆಯದ ಹಸಿ ಸುಖಾಘಾತಕೆ... ನಿನ್ನುಸಿರ ಹೋರೆನ್ನ ಮೀಸೆ ಬೇರುಗಳ ಸುಡುವಲ್ಲಿ, ನಿನ್ನ ತೋಳಿನಬ್ಬರಕೆ ನಾ ಜಗವ ಮರೆವಲ್ಲಿ, ಯಾವ ಸೋಲಿಗೂ, ಗೆಲುವಿಗೂ ಹೆಸರಿಲ್ಲ, ಕಸರಿಲ್ಲ... ___ ನೀನೆಂದರೇ ಈ ಉಸಿರ ತೀಡುವ ಮೋಹಾಲಾಪದ ಓಂಕಾರ ಝೇಂಕಾರ... ಮೊಗದ ಮಚ್ಚೆಯಲಿ ಲಜ್ಜೆ ಸರಸಿಜವನರಳಿಸಿ ನಗುವವಳೇ - ಯೆದೆಯು ಯೆದೆಯ ಮೀಟಿ ಬೆರೆ(ವೆ)ತು ಬರೆವ ನೂರು ನವಿರು ಹಾಡುಗಳ ಚೆಂದ ಭಾವಾನುವಾದ - ನಿನ್ನ ಮೋಹದ ನೆನಪಲರಳುವ ನನ್ನ ತುಂಡು ತುಂಟ ನಗು... ,,,,, ಕನಸು ಕಲ್ಪನೆಗಳ ಬೇಗುದಿಯಲಿ ಕಂಡು ಉಕ್ಕಿದ್ದು "ನಿನ್ನೊಡನಾಡುವುದು" ತುಂಬಾನೇ ಬಾಕಿ ಇತ್ತು - ನಿನ್ನ ನಾಚಿಕೆಯ ಎದೆ ಸುಳಿಗೆ ಉಸಿರು ಸಿಕ್ಕಿ ಎಲ್ಲಾ ಮರೆತುಹೋಯಿತು... ____ ಯಮುನೆಯಲಿ ಈಸುಬಿದ್ದ ಗೋಪಿಯರ ಹರೆಯ ಮತ್ತು ಹುಣ್ಣಿಮೆಯ ಗಾಳಿ ಬೃಂದಾವನದ ಬಿದಿರ ತೀಡಿ ಹಾಡುವ ಕೃಷ್ಣ ಕಾವ್ಯ ಸಂಕಲನ... 💞💞💞
ನೆನಪಿನ ಮತ್ತಾಗಿ ಮುದ್ದುಕ್ಕಿಸುವವನೇ - 'ಎಂಥ ಮುದ್ದು ನೋಡವನು' ನಾಕು ಹೆಜ್ಜೆ ಬಯಲಿಗೆ ಹೋಗಿ ಚಂದಮನ ಕಂಡು ಬಾ ಅಂದ್ಲು... ನೀನಿಲ್ಲದೂರಲ್ಲಿ ಅವನೇ ನನ್ನ ಸಂಕಟ ಹಾಗೂ ಸಾಂತ್ವನ ಅಂದೆ...  ___ ವಿರಹದುರಿಗೆ ಮದ್ದು ಮತ್ತು ಆಜ್ಯ ಎರಡೂ ಹೊಯ್ಯುವ ಬೆಳುದಿಂಗಳು... 💞💞💞
ಯೆದೆಯ ಕೌಮಾರ್ಯಕೆ ನಗೆಯ ಸಂಜೀವಿನಿಯನುಣಿಸಿದವಳೇ - ನಿನ್ನಿಂದ ಪಡೆದುದನು ನಿನಗೊಪ್ಪಿಸುವಾಗ, ಒಪ್ಪವಾಗಿ ನಿನಗೊಪ್ಪಿಸಿ ನಿನ್ನ ಮೆಚ್ಚುಗೆಯ ನೋಟದಲಿ ಮಿಂದು ಬೀಗುವಾಗ ನಾನು ನೀನೇ ಆದಂತೆ ಭಾವ ಭಾಸ - ಪ್ರೀತಿಯಾದರೂ, ಜೀವವೇ ಆದರೂ...  ___ ನೀನೆಂಬ ಸುನೀತ ಸಂಗಾತ... ಹಿಂದಿನಿಂದ ಏನೋ ಜಗ್ಗಿದಂಗೆ ಮುಂದೆ ಮುಂದೆ ಯಾರೋ ಕರೆದಂಗೆ ನೆನಪೂ ಕನಸೂ  ಕಾಡುವಾಗ ಹಾಡುವಾಗ... ಅದಾವ ನಡು ಬಿಂದುವಲಿ  ಮಧುರ ಪಾಪದ ಸಿಂಧುವಲಿ ನಿನ್ನ ಕೂಡಿಯಾಡುವುದು ಕೊಂಡಾಟದಲಿ ಮೀಯುವುದು...  ___ ಬಾ ಸೇರಿಕೋ - ಕಾರುಣ್ಯದಲಿ ತಾಳಿಕೋ...
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

No comments:

Post a Comment