Thursday, December 11, 2025

ಗೊಂಚಲು - ನಾಕ್ನೂರಾ ಎಪ್ಪತ್ತು ಮತ್ತೆಂಟು.....

ನಡು ರಾತ್ರಿಯ ಎಚ್ಚರಗಳನು ತಬ್ಬುವ ಸತ್ಯಗಳು.....

ನನ್ನ ನಟನೆಗೆ ನಾನೇ ಬೇಸತ್ತು ವೇಷ ಕಳಚಿಟ್ಟು ಹೊರಟ ಹಾಗೆ ಕನಸಾಯಿತು... 
ಸಾವಿನ ಕನಸಾಗುವುದು ಶುಭವೆಂದರು... 
ನಾಟಕ ಮುಂದುವರೆದಿದೆ... 
____ ಯಮನ ಬಂಟರಿಗೂ ನೀರು ಮಜ್ಜಿಗೆ ಉಪಚಾರ... 
&&&

ಗುಡಿಯ ದೇವರ ನೋಡಬೇಕೆಂದರೆ ದುಡ್ಡು ಮಾಡು - ಸರ್ವಾಲಂಕಾರಭೂಷಿತ ಮೂರ್ತಿ ಕಾಣುವುದು... 
ಯೆದೆಯಲಿನ ದೇವರ ಕಾಣುವುದಾದರೆ ಪ್ರೀತಿ ಮಾಡು - ಜೀವ ವಿಗ್ರಹದೊಳಗೆ ನಿಷ್ಪತ್ತಿಯಾದ ಜೀವಂತ ಶಕ್ತಿ ತಾಕುವುದು... 
___ ನನ್ನ ಆಧ್ಯಾತ್ಮ... 

ಸಾವ ಬಯಸುವುದಲ್ಲ -
ಇರಬಹುದು,
ಮಸಣ ವೈರಾಗ್ಯ ಅಂದ್ರೆ ಮಸಣ ಕಾಯುವವನ ಮೇಲೆ ಪ್ರೀತಿಯಾಗುವುದೂ... 
ಗೊತ್ತಲ್ಲ,
"ಫಕೀರನ ದೇವರು ಸಂಸಾರಿ..." 
___ ನನ್ನ ಆಧ್ಯಾತ್ಮ... 

ಧುಮುಗುಡುವ ಜಲಪಾತ, ಭೋರ್ಗರೆವ ಕಡಲ ಒಡಲು, ತುಂಬಾ ಮಾತಾಗುವ ಕರಡಿ ಅಪ್ಪಿನ ಕಾಡು ಮೌನ, ಉಸಿರ ಹೋರಿನ ಕಾಮನ ಹಬ್ಬ - ಇದೇ ಇಂಥವೇ ನನ್ನೀ ಯೆದೆಯ ಕೂಡುವ, ಭಾವಕೋಶವ ಕಾಡುವ ಹೆಜ್ಜೆಗೊಂದು ನಗೆಯ ಕಾವ್ಯ...
ಹರಿವು ಯೆದೆಯಲರಳಿಸುವ ಮಳೆಬಿಲ್ಲು - ನನ್ನ ಆಧ್ಯಾತ್ಮ... 
&&&

ಬ್ರಹ್ಮ ಮಾಡಿದ ಹಾದಿಯಲ್ಲೇ ಯಮನೂ ನಡೆದು ಬರುತ್ತಾನೆ... 
ಅಲ್ಲಿಗೆ, 
ಎಲ್ಲಾ ರಸ್ತೆಗಳೂ ಅಲ್ಲಿಗೇ ತಲುಪುತ್ತವೆ... 
ಆದರೆ, 
"ನಗೆ/ಪ್ರೀತಿ ಹೊನಲ ಹಂಚುವ ದಾರಿಯಲಿ ಪ್ರೀತಿ/ನಗೆ ಹೂಗಳು ಅರಳಿ ಬಣ್ಣಗಳ ಸೊಬಗು ಚೆಲ್ಲಿರುತ್ತದೆ..."
ನಾವಲ್ಲಿ 
ಕಪ್ಪು ಕನ್ನಡಕದಲಿ ಕಣ್ಣ ಹುಗಿದಿದ್ದರೂ ತುಟಿಯಂಚಿಗೆ ಕರಗಿದೆದೆಯ ಬೆಳಕು ಮೆತ್ತಿಕೊಳ್ಳುತ್ತದೆ...
___ ಯೆನ್ನೆದೆಗೂಡಿನ ಬಾಗಿಲಲಿ ಒಲುಮೆ ಮಂದಹಾಸವ ಚೆಲ್ಲುವ ಎಲ್ಲವರಿಗೂ ನನ್ನಿ ನನ್ನಿ... 💞
&&&

ಕೇಳಿಲ್ಲಿ -
ಕವಿತೆ ಕುಟ್ಟಿದಷ್ಟು ಸಲೀಸಲ್ಲ ಬದುಕು ಕಟ್ಟಿಕೊಂಬುದು - ಕಣ್ಣಳಿಳಿದರೆ ಮಾತೇ ಆಡದೇ ಮನಸಿಗೆ ಗೊತ್ತಾಗುತ್ತದೆ ಹಸಿವ ಹುಗಿದಿಡಲು ಕತ್ತಲೇ ಲೇಸೆಂಬುದು...
ಹನಿಗಡಲ ಇಂಗಿಸಿಕೊಂಡು, ಎದೆಗೆ ಬಿದ್ದ ಬೆಳಕ ಬೀಜವ ಜೋಪಾನ ಮಾಡಲು ಕತ್ತಲನರಸುವಂತೆ ಕಾಣುವ, ಬೀದಿ ದೀಪಗಳಂಥಾ ಆ ಅನಾಥ ಕಂಗಳು ಬಲು ಕಾಡುತ್ತವೆ...
ಕಟ್ಟಡಗಳ ಕಾಡಿನ ಎದೆ ಸೀಳಿ ಉಪ್ಪು ಖಾರ ಸವರಿದಂತೆನಿಸುವ ದಟ್ಟ ಜನಜಂಗುಳಿಯ ಬೀದಿ...
ಅದೇ ಬೀದಿಯ ಪಕ್ಕೆಗಳಲೇ ಅವರ ಬಾಲ್ಯ ತರಚಬೇಕು, ಯೌವನದ ರುಚಿಗಳ ಪರಿಚಯಿಸಿಕೋಬೇಕು, ಪ್ರೀತಿ ಅರಳಬೇಕು, ಮೋಹ ಕೆರಳಬೇಕು, ಸಂಸಾರದ ಕಣ್ಣ ಹನಿಗಳ ಕೊ‌ಸರಾಡದೆ ಕುಡಿಯಬೇಕು...
ಉಫ್ -
ದಾಕ್ಷಿಣ್ಯಗಳ ನೀಗುವ "ಇರುಳ ಕಾರುಣ್ಯ" ಎಷ್ಟು ಹಿರಿದು ಗೊತ್ತಾ ವತ್ಸಾ...!!
___ ಕತ್ತಲ ಉಡಿಯಲಿ ಕುದಿವ ಕಥೆಗಳು... 
&&&

ಕೇಳಿಲ್ಲಿ -
ಬದುಕಿದ್ದೇನೆ - ಬದುಕಿಯೇ ಇದ್ದೇನೆ... 
ಬಸವನಿಗೆ ಬಿಟ್ಟ ಗೂಳಿಯ ಥರ - ಯಾರೂ ಬಂಧಿಸುವವರಿಲ್ಲದ ಸ್ವಾತಂತ್ರ್ಯ ಮತ್ತು 'ಇಲ್ಲೊಂಚೂರು ನಿಲ್ಲೋ' ಅನ್ನುವವರಿಲ್ಲದ ನಿರ್ವಾತದ ಜೊತೆಗೆ... 
___ ನನ್ನದೇ ಸ್ವಭಾವ ವೈಕಲ್ಯ - ಬಲು ಸಸ್ತಾ ಬದುಕು... 

ವತ್ಸಾ -
ಬಿತ್ತಲಾರದವನು ಬೆಳೆಯ ಬಯಸಬಾರದು - ಪ್ರೀತಿಯಾದರೂ, ನಗುವನಾದರೂ... 
ಬಯಲಿನಾಸೆಯ ನೀನು ಬಿಸಿಲು, ಮಳೆಯ ಹಳಿಯಬಾರದು... 
___ ನಿನ್ನದೋ ಸ್ವಭಾವ ವೈಕಲ್ಯ - ಬಲು ಸಸ್ತಾ ಬದುಕು... 
&&&

ಕತ್ತಲೆ ಕಾನಿನ ಕಾಲು ದಾರಿಯ ಕವಲಿನಲಿ ಕಂಗಾಲಾಗಿ ನಿಂತವನಿಗೆ ಅಲ್ಲೆಲ್ಲೋ ಎಡಗುವ ಹರಿದು ಬಿದ್ದಿರೋ ಹರಕು ಚಪ್ಪಲಿಯೂ ಒಂದು ಗಟ್ಟಿ ನಿಟ್ಟುಸಿರಿನ ಭರವಸೆಯೇ - ಕಳೆದೋದದ್ದು ನಾನೊಬ್ಬನೇ ಅಲ್ಲ ಇಲ್ಲಿ ಅಥವಾ ಈ ಹಾದಿಯಲೂ ಅಲ್ಲೆಲ್ಲಾದರೂ ಜೊತೆಗ್ಯಾರೋ ಸಿಕ್ಕಾರು ಎಂಬ ಆಶಾಭಾವ... 
___ ಮಸಣ ಕಾಯುವವನಿಗೆ ಬೆವರ ವಾಸನೆಯೇ ಜೀವಶಕ್ತಿಯೇನೋ...
&&&

ಇಲ್ಕೇಳೇ -
ಪ್ರತಿಕೃತಿಗಳ ಮೂಲಕ ಜೀವಿಸುವ ಪ್ರಕೃತಿ ತನ್ನ ಉಳಿವಿಗೆ ಹೂಡುವ ಕೂಟದಲಿ ನಾನು ನೀನು ಒಪ್ಪವಾಗಿ ಒಪ್ಪಿ ನೇರ ಭಾಗಿಯಾದರೆ ಅದು ಶುದ್ಧ ಕಾಮ, ನಾವದನ್ನು ಸುತ್ತಿ ಬಳಸಿ ತಲುಪುವುದಕ್ಕೆ ಇಟ್ಟುಕೊಂಡ ಹೆಸರು ಪ್ರೇಮ ಅಂತನ್ನಿಸುತ್ತೆ ನೋಡು ನಂಗೆ...
............. ಪಾವಿತ್ರ್ಯದ ತಕ್ಕಡಿಯಲಿ ಆ ತೀರವ ಸುಖವಾಗಿ ತಲುಪುವುದು ಕ್ಷುದ್ರವಂತೆ, ಮಧುರ ಪಾಪಕ್ಕೆ ಪುಣ್ಯ ಲೇಪದ ಸೋಗಿಗೆ ಬಂಧನದ ಬೇಲಿ ಬೇಕಂತೆ... 
___ ನೀರು ಜೀವ ದ್ರವ್ಯ - ಶಂಖದಿಂದ ಬಂದ್ರೆ ತೀರ್ಥ... 

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

No comments:

Post a Comment