------ ತುಂಬಾ ಸುಖವೂ ಸುಸ್ತಾಗಿಸುತ್ತೆ.....
ವತ್ಸಾ -
ಒಂದು ಒಡನಾಟದಲ್ಲಿ ಯಾವುದೋ ಒಂದು ಬದಿಯಿಂದ ಮಾತು ಮೊದಲಾಗುವುದು ನಿಂತು ಬರೀ ಪ್ರತಿಕ್ರಿಯೆಗಳಷ್ಟೇ ವಿಕ್ರಯವಾಗೋದು ಶುರುವಾದರೆ ಅಲ್ಲಿಗೆ ಅಲ್ಲಿ ನೇಹ ನೇಪಥ್ಯಕೆ ಸೇರುತಿರುವ, ಮತ್ತದು ಆಪ್ತತೆಯ ವಿನಿಮಯ ಮಡಿದು ನಡುವೆ ನಿರ್ವಾತವೊಂದು ಹುಟ್ಟಿಕೊಳ್ಳುವ ದಾರಿಯ ಆರಂಭದಂತೆನಿಸುತ್ತೆ...
ಕಾರಣ,
ನೂರು ಸಬೂಬುಗಳ ನೀಡಿದರೂ / ನೀವಿಕೊಂಡರೂ ನಿರ್ಲಕ್ಷ್ಯವೆಂಬೋದು ಮಂಜುಗತ್ತಿಯಾಗಿ ನೇರ ಯೆದೆಯನೇ ಇರಿಯುತ್ತದೆ...
___ ಇನ್ನು ಸುಮ್ಮನಿದ್ದುಬಿಡಲಾ ಅನ್ನಿಸಿದ ನಂತರ ಸುಮ್ಮನಾದರೂ ಒಂದು ಮಾತು ಹುಟ್ಟುವುದು ಕಸಿವಿಸಿಯ ಕಂದರದಿಂದಲೇ.........
&&&
ಪ್ರೀತಿ ಸಿಹಿ ಅಂದರು...
ಅಖಂಡ ಪ್ರೇಮದ ನೂರು ನದಿಗಳ ನೀರು ಕುಡಿದೂ ಸಾಗರನ ಯೆದೆ ಹಸಿವು ಇಂಗಿದಂತಿಲ್ಲ - ಉಪ್ಪು ಸಿಹಿಯಾಗಲಿಲ್ಲ...
ಅಲ್ಲಾ, ಈ
ಪ್ರೀತಿಯ ರುಚಿ ಸಿಹಿಯಾ...? ಉಪ್ಪುಪ್ಪಾ...??
ಹಂಗೇ,
ಈ ಪ್ರೀತಿ ಅಂಬೋದು ಚೂರೂ ಸಿಗ್ದಿದ್ರೆ ಸಪ್ಪೆ ಸಪ್ಪೆ - ಅತಿಯಾದ್ರೆ ಉರಿ ದಾಹ...
____ ಬದುಕಿನ ಪ್ರೀತಿ ಪಾರಾಯಣ...
&&&
ಏನಿಲ್ಲಾಽಽಽ -
ಪೂರಾ ಪೂರಾ ಅಪರಿಚಿತತೆಯೇ ಒಳ್ಳೆಯದಿತ್ತಾ ಅಂತ...
ಒಂದೊಮ್ಮೆ ಯೆದೆಬಾಗಿಲ ತೋರಣದಂತಿದ್ದು, ತೀರಾ ತೀರಾ ಆಪ್ತ ಆಲಿಂಗನದ ಆನಂದ ಧಾಮಕೆ ಬಂದು, ಇನ್ನೀಗ ಕಣ್ಣ ಕಕ್ಷೆಯಲೇ ಇದ್ದೂ ಯೆದೆಯ ಭಾವಾನುಭಾವಗೊಳದಲ್ಲಿ ಮಿಂದು ಹೋದ ಕುರುಹೊಂದೂ ಇಲ್ಲವೇನೋ ಎಂಬಂತೆ ಕಿಟಕಿಯಾಚೆಯ ಬಯಲಲ್ಲಿ ಮುಖ ತಿರುವಿ ನಿಂತು, ಗಂಟಲಿಗಿಳಿದ ಬಿಸಿ ತುಪ್ಪದಂತೆ ಕಣ್ಣ ಮಳೆಯಾಗಿ ಕಾಡುವುದಕಿಂತ; ಎಲ್ಲೋ ತಿರುವಲ್ಲಿ ಹಾಗೇ ಎದುರಾಗಿ ಕಣ್ಣ ಸಂಧಿಸಿ ಸಣ್ಣದೊಂದು ಪುಳಕವಾಗಿ ತುಸು ಕಾಲ ಕಾಡಿ ಮರೆಯಾಗೋ ಚಂದ ಅಪರಿಚಿತತೆಯೇ ಒಳ್ಳೆಯದಿತ್ತಾ ಅಂತ........
___ ನೆನಪು - ಜ್ವರ ಇಳಿದ ಮೇಲೂ ನಾಲಿಗೆಯಲುಳಿದ ಕಹಿ ಉಗುಳಿನಂಗೆ...
&&&
ಮಲಗುವುದಷ್ಟೇ ಆದರೆ ಮೈಯ್ಯಲಿಷ್ಟು ಆಸೆಯ ಬಿಸಿ ಗುಮಿಗೂಡಿದರೆ ಸಾಕು...
ಮುದ್ದಿಸುವುದಾದರೋ ಎದೆಯ ಸುಳಿಗಳಲಿ ಇಷ್ಟೇ ಇಷ್ಟಾದರೂ ಪ್ರೀತಿಯ ತೇವವೂ ಬೇಕು...
___ ನಡು ರಾತ್ರಿಯ ಎಚ್ಚರಗಳನು ತಬ್ಬುವ ಸತ್ಯಗಳು...
&&&
ನೀನು ನಿನಗಾಗಿ ನನ್ನಿಂದ ದೂರ ದೂರ ಸರಿಯುತಿರುವ ಸತ್ಯದ ಅರಿವಿದ್ದೂ,
ನಾನು ನನಗಾಗಿ ನಿನ್ನ ಹುಡುಕಿ ಹುಡುಕಿ ಸೇರುವ ಹುಕಿಯಲಿದ್ದೇನೆ/ದುಡುಕಿನಲಿದ್ದೇನೆ...
ಒಲವಿಂದ ಗಳಿಸಿಕೊಳ್ಳುವ, ಉಳಿಸಿಕೊಳ್ಳುವ ಒಲವಿಲ್ಲದವನು, ಬಲದಿಂದ ಬೆಸೆದುಕೊಳ್ಳುವ, ಬಳಸಿಕೊಳ್ಳುವ, ಬಾಲಿಶ (ಕೊಂ)ಮೊಂಡಾಟಕೆ ಬಿದ್ದಿದ್ದೇನೆ...
ಪ್ರೀತಿಯ ಹಾಡಲರಿಯದಿದ್ದೊಡೇನು, ಪ್ರೀತಿಯ ಕಾಡಲು ಮರೆಯಲಾರೆನು...
____ "ನಾನು... "
&&&
ಶ್ರೀ -
ಉಳ್ಕಿ ಏನೂ ಬೇಡ ಕಣೋ,
ನಿನ್ನೊಳಗಿರೋ "ನಂಗೆ ಸಿಕ್ಕಿಲ್ಲ ಮತ್ತು ನಾನು ಕೊಟ್ಟೆ" ಅನ್ನೋ ಎರಡು ಹಡಾಹುಡಿ ಭಾವಗಳ ಮೇಲೆ ಒಂಚೂರು ಹಿಡಿತ ಸಾಧಿಸಿದರೂ ಸಾಕು ಎಷ್ಟೋ ಬಂಧ ಸಂಬಂಧಗಳು ಹಂಗೋಹಿಂಗೋ ದಡಸೇರಿ ಪ್ರೀತಿಯ ಉಸಿರ ಉಳಸ್ಕೊಂಬಿಡ್ತಾವೆ ನೋಡು...
___ ಹಂಚಿ ಹಿಗ್ಗುವ ಹರಿವಿನ ಹಾಡು...
&&&
------ ತುಂಬಾ ಸುಖವೂ ಸುಸ್ತಾಗಿಸುತ್ತೆ...
ಸುಖ ಅಭ್ಯಾಸವಾದಷ್ಟೂ ಅತೃಪ್ತಿಯ ತೂಕವೂ ಬೆಳೆಯುತ್ತೆ ನೋಡು...
ಹೇಯ್ -
ತುಂಬಾ ನಗಬೇಡ - ಅನುಮಾನವಾಗುತ್ತೆ...
ಅಳು ಹುಟ್ಟುತ್ತೆ, ನಗುವನ್ನು ಬೆಳೀಬೇಕಾಗತ್ತೆ ನೋಡು...
____ ತುಂಬಾ ಸಲ ಕಣ್ಣಂಚಿನ ಒದ್ದೆಯೂ ತುಂಬಾ ಮುಚ್ಚಿಡುತ್ತೆ...
&&&
ಏನ್ಗೊತ್ತಾ -
ಈ ನೋವು ಖಾಲಿತನಗಳಿಗೆ ನಾನೆಷ್ಟು ಒಗ್ಗಿ ಹೋಗಿದೀನಿ ಅಂದ್ರೆ ನಂಗೇ ಫಕ್ಕನೆ ಸಿಕ್ಕ ನಗುವೊಂದಕ್ಕೆ ಸ್ಪಂದಿಸಿ ಸಂಭ್ರಮಿಸೋದೂ ಅಪರಾಧ ಅಥವಾ ಕ್ರೌರ್ಯ ಅನ್ನಿಸ್ಬಿಡತ್ತೆ ಒಮ್ಮೊಮ್ಮೆ...
___ ಜಡ್ಡುಗಟ್ಟಿದ ಯೆದೆ, ತೇವವಾರಿದ ಕಣ್ಣು...
&&&
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)
ಜಗುಲಿಗೆ ಇಣುಕಿದ ಚಂದಿರ; ಮನಮಂದಿರದಿ ಮೂಡಿಸುವ ಭಾವಗಳೆ ಸುಂದರ... ಕ್ಷಣ ಕ್ಷಣಕೂ ಅದಲುಬದಲಾಗುವ ನನ್ನೊಳಗಿನ ನನ್ನದೇ ಭಾವಗಳು ನನ್ನನೇ ಬೆಚ್ಚಿಬೀಳಿಸುತ್ತವೆ ಹಲವೊಮ್ಮೆ...
Thursday, December 11, 2025
ಗೊಂಚಲು - ನಾಕ್ನೂರಾ ಎಪ್ಪತ್ತಾ ಏಳು.....
Subscribe to:
Post Comments (Atom)
No comments:
Post a Comment