Saturday, October 4, 2025

ಗೊಂಚಲು - ನಾಕ್ನೂರಾ ಎಪ್ಪತ್ತು ಮತ್ನಾಕು.....

ಕಣ್ಣಗೋಳದಲಿ ರಾಗವಾಗುವ ಹಸಿರು ಬಂಗಾರ ಬೆಳಗು..... 

ಇರುಳಲ್ಲಿ ಎದೆ ಕೊರೆದು ಕಣ್ಣಿಂದ ಇಳಿದು ಕೆನ್ನೆ ತೊಳೆದ ಭಾವಗಳನು ತೋಳಿಗೊರೆಸಿಕೊಂಡು ಬದಿ ಸರಿಸಿ, ಒಡೆದ ಯೆದೆ ಕಮರಿಯಲೇ ಹೊಸ ಭರವಸೆಯ ಹಸಿರಂಗಿಯ ಗಿಡ ನೆಟ್ಟು, ನೆಟಿಗೆ ಮುರಿದು ಮುಗುಳ್ನಗುವ ಜೀವ(ಯಾ)ಜಾತ್ರೆ ಬೆಳಗು...
ನಗುತಲಿರು ಬೆಳಕೇ...
ಶುಭದಿನ... 🤝🫂

ಯಾವ ಮೊಗ್ಗೂ ನೋಯದಂತೆ ಬೆಳಕು ಪ್ರೀತಿ ಹರಿಸುವುದು...
ಇಳಿದು ಬಂದ ಬೆಳಕನೂ ಹೂವು ಅರಳಿ ಅಲಂಕರಿಸುವುದು...
ಬಾಗಿದಷ್ಟೂ ತುಂಬಿ ಬರುವುದು, ತುಂಬಿದಷ್ಟೂ ಮಾಗಿ ಬಾಗುವುದು - ಬೆಳಕು, ಪ್ರೀತಿ...
ತುಂಬು ಪ್ರೀತಿಯ ಶುಭ ಬೆಳಗು... 🤝🫂

ಶುಭಕಾಗಿ ತುಡಿಯುವುದು
ಶುಭವನೇ ನುಡಿಯುವುದು 
ಶುಭವನಲ್ಲದೇ ಬೇರೇನನೂ ಬಯಸದಿರುವುದು -
ಬೆಳಕಾಗುವುದು...
ಬೆಳಗೆಂದರೆ -
ಶುಭದ ಸೆಲೆಯೊಂದನು ಯೆದೆಯಿಂದ ಯೆದೆಗೆ ಹರಿಸಲೆಳಸುವುದು / ಪ್ರೀತಿಯ ಕಣ್ಣರಳುವುದು...
ಶುಭದಿನವು... 🤝🫂

ಎಲ್ಲಾ ಅರಿವಿದ್ದೂ ಏನೂ ಗೊತ್ತಿಲ್ಲದಂತೆ
ಸಂತೆಯ ನಡುವೆ ಮೌನದ ಮಡಿಲು ತುಂಬುವ ಹಠದಿಂದ
ತಣ್ಣಗೆ ಮುಗುಳ್ನಗುತ ಕುಂತ ಬುದ್ಧನ ವಿಗ್ರಹದಂತೆ
ಸುಮ್ಮನಿರಬೇಕು; ಸುಮ್ಮನಿದ್ದೇ
ಎಲ್ಲ ಅರುಹಬೇಕು - ಪ್ರೀತಿ ಹರವಬೇಕು
ಬೆಳಕಿನಂತೆ - ಬೆಳಗಿನಂತೆ...
ಶುಭದಿನ... 🤝🫂

ನಿನ್ನ ಚೆಲುವಿನ ತಿರುವುಗಳಲಿ ನಗೆಯು ಮೈಮುರಿದೇಳುವಾಗ, 
ನಿದ್ದೆ ಮರೆತ, ಎವೆ ಬಡಿಯದ ಕಂಗಳಿಂದ ಈ ಯೆದೆಗೆ ಬೆಳಕ ಕಾವ್ಯ ದರ್ಶನ...
ನನ್ನ ಬೆಳಗಾಗುವುದೆಂದರೆ ಅದೇ - ನಿನ್ನ ತಲುಪಲು ನಿನ್ನ ನಗೆ ಪ್ರೀತಿಯ ಕುಡಿದೇ ಹೊಸದಾಗಿ ಅಣಿಯಾಗುವುದು...
ಬೆಳಗಾಯಿತು... 🫂🫂

ಬೆಳಕಿನಿಂದ ಪ್ರೀತಿ ಪಡೆದು
ಪ್ರೀತಿಯನು ಬೆಳಕಿನಂಗೆ ಹಂಚಿ ನಲಿದು
ಬೆಳಕಿನ ಜೊತೆ ನಡೆವುದು
ಪ್ರೀತಿಯೇ ಆಗಿ ನಲಿವುದು...
ಶುಭವೆಂದರೆ ಪ್ರೀತಿ ಬೆಳಕಲ್ಲಿ ಶುಭವ ಬಿತ್ತಿ ಬೆಳೆವುದು...
ಬೆಳಗಾಗಿದೆ - ಶುಭವಾಗತೈತೆ... 🤝🫂

ಪರಿಚಯಿಸಿಕೊಳ್ಳುವ, ಹೆಸರಿಡುವ, ಹೆಸರಾಗುವ ಹಂಗಿಲ್ಲ ಗುಂಗಿಲ್ಲ - ಸುಮ್ಮನೆ ಸುರಿಸುರಿದು ಪ್ರೀತಿಯಾಗಿ ಹರಿಯುವುದು ಬೆಳಕು...
ಖಾತೆ ಕಿರ್ದಿ ಪುಸ್ತಕವಿಲ್ಲದ ಪ್ರೀತಿ ಭಂಡಾರ ಬೆಳಗು - ಬೆಳಕದು ಯೆದೆತೆರೆದು ತುಂಬಿಕೊಂಡಷ್ಟೂ ಸ್ವಂತ ನನಗೂ ನಿನಗೂ...
ಶುಭದಿನ... 🤝🫂

ಶುಭ್ರ ಶುಭವ ಸಂಚಯಿಸುವ ಇರಾದೆಯಿದ್ದಲ್ಲಿ ಅಕಾರಣ ಪ್ರೀತಿಯ ಬಿತ್ತಿ ಕಾಯಬೇಕು...
ಯೆದೆನೆಲವನುತ್ತಿ ಬೆಳಕಲಿ ನೆನೆದ ಅಂತಃಕರಣವ ಅಗೆಮಾಡಿ ನೆಮ್ಮದಿಯಲಿ ನಗಬಲ್ಲ ದಿನವೆಲ್ಲಾ ಶುಭದಿನವೇ...
ಶುಭದಿನ - ಶುಭವಾಗಲಿ ನನಗೂ, ನಿನಗೂ...🤝🫂

ಮತ್ತೆ ಕನಸಿನ ಕಾಲಿಗೆ ಬೆಳಕಿನ ಕೋಲಿನ ಪ್ರೀತಿಯ ಉರಿ ತಾಕಿತು - ಮತ್ತೊಂದು ಬೆಳಗಾಯಿತು... 
ಮತ್ತೆ ಭರವಸೆಯ ಗಟ್ಟಿ ಉಸಿರೆಳೆದುಕೊಂಡ ಬಡ ಬದುಕು ಒಂದು ಹೆಜ್ಜೆ ಮುನ್ಸಾಗಲಣಿಯಾಯಿತು - ರುದಯವು ಮತ್ತೊಮ್ಮೆ ಶುಭ ನುಡಿಯಿತು... 
ಶುಭದಿನ... 🤝🫂

ತನ್ನ ಪ್ರೇಮವ ತಾನೆ ಅಲಂಕರಿಸಿ ಆ ಚಲುವ ಸಿಂಗಾರವ ತಾನೇ ನೋಡಿ ನಲಿದು ದೃಷ್ಟಿ ನಿವಾಳಿಸಿ ಮುದ್ದೀಯುವಂತೆ ಇರುಳೆಲ್ಲ ಮಳೆಯಲಿ ಮಿಂದು ಬಂದ ವಸುಧೆಯನು ಹಗಲ ಬೆಳಕ ತೋಳು ಬಳಸಿತು - ಮಳೆ ಮಿಂದ ಹಸಿ ಮೈಯ್ಯ ಭುವಿ ತಾ ಬೆಳಗ ಬೆಳಕ ಪ್ರೀತಿಯ ಕುಡಿದು ಹಸಿರಾಗಿ ಉಸಿರಾಡಿತು / ಉಸಿರೂಡಿತು... 
ಶುಭದಿನ... 🤝🫂

ಬೆಳಕಾಗಿ ಹರಿಯುವುದಾದರೂ, 
ಬೆಳಕಿನೆಡೆಗೆ ಸರಿಯುವುದಾದರೂ, 
ಒಳಗು ಉರಿದುರಿದು ಕರಗಬೇಕು - ಪ್ರೀತಿಯಲಿ, ಪ್ರೀತಿಯಿಂದ... 
ಉರಿದು ಕಾಯುವ ಅಕ್ಷಯ ಪಾತ್ರೆ, ಪಾತ್ರ ಹಗಲು... 
ಶುಭದಿನ... 🤝🫂

ಎಲ್ಲ ಎಲ್ಲಾ ಭಾವಾನುಭಾವಗಳ ಉಪಾಸನೆ, ಧ್ಯಾನ, ಪ್ರಾರ್ಥನೆಗಳಲೂ ಶುಭವನಷ್ಟನೇ ಹಂಬಲಿಸಿ ಹಂಬಲಿಸಿ ಬೆಳಗಿಗೆ ಕಣ್ತೆರೆದರೆ ಕಣ್ಬೆಳಕು ತಾಕಿದುದೆಲ್ಲಾ ಶುಭವೇ ಆಗಿ ನಕ್ಕಂತಾಗಿ ಯೆದೆ ಬಳ್ಳದ ತುಂಬಾ ಶುಭದ ಸಂಕ್ರಮಣ ಭಾವ ಪ್ರಸಾದ...
ಕಾಕೆಯ ಕೂಗಿನಲ್ಲೂ ಪ್ರೀತಿಯ ಕರೆಯ ಬೆಳಕು... 
ಶುಭದಿನ... 🤝🫂

ಬೆಳಗಾಗುವುದು ಜಗದ ನಿಯಮ... 
ಆದರೋ,
ಯೆದೆಗಣ್ಣ ತೆರೆದು ಬೆಳಕಿನೊಲವ ತುಂಬಿಕೊಂಬುದು ಎನ್ನದೇ ಕರ್ಮ... 
ನಾ ಬಯಸಿದ ಮಾತ್ರಕೆ ನನ್ನದಲ್ಲ, ನಾ ತುಂಬಿಕೊಂಡಷ್ಟೂ ನನ್ನದು - ಬೆಳಕಾಗಲೀ, ಪ್ರೀತಿಯಾಗಲೀ...
ತುಂಬಿ ಬರವ ಸೌಂದರ್ಯವ ಕಾಣಲಿಕ್ಕೂ ಕೆಲವನೆಲ್ಲ ಸುಮ್ಮನೆ ಹಂಚಿ ಹಂಚಿ ಖಾಲಿಯಾಗಬೇಕು - ಬೆಳಕಾದರೂ, ಪ್ರೀತಿಯಾದರೂ... 
ಹಂಚುವ ಚಂದದಲಿ ನಗುವ ಚೆಂದವಾಗಲಿ ದಿನ...
ಶುಭದಿನ... 🤝🫂

ಹೊಂಬಣ್ಣದಲಿ ಮಿಂದ ಬಳುಕು ಮೈಯ್ಯ ಕಡುಗಪ್ಪು ಥಾರು ರಸ್ತೆ...
ನಿನ್ನೂರಿಗಿನ್ನೂ ಇಂತಿಷ್ಟು ದೂರ ಎಂದು ತೋರುವ ಹರಿದ ಅಕ್ಷರಗಳ  ಮೈಲುಗಂಬ...
ಯಮವೇಗವೂ ನಿಧಾನವೇ ಅನ್ನಿಸುವ ನಿನ್ನ ಕೂಡುವ ಎನ್ನ ಆತುರ...
ಮೋಹದ ಬಣ್ಣವೂ, ಘಮವೂ ಮಿಲನದ ನಗು ಹಾಗೂ ಬೆವರೇ ಇರಬಹುದೂ ಅಂತನ್ನಿಸುವಂತೆ ನಿನ್ನ ಕನಸುವ ಉಸಿರ ಆವೇಗದಾಲಾಪ...
ಉಫ್ -
ಬೆಳಗೆಂಬ ಬಣ್ಣಾ ಬೆಡಗಿನ
ಭಾವ ಭ್ರಮರಿ... 
ಶುಭದಿನ... 🫂🤝

ಬೆಳಗೆಂದರೆ ಪ್ರಿಯ ಕನಸಿನ ಶುಭ ಮುಹೂರ್ತ... 
ಪ್ರೀತಿ ಮಾಯದ ಹೂಬೆಳಗು...
ಶುಭದಿನ... 🤝🫂

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

ಗೊಂಚಲು - ನಾಕ್ನೂರಾ ಎಪ್ಪತ್ತು ಮತ್ಮೂರು.....

ಕಾದರೆ ಬೆಳಕಿಗೇ ಕಾಯಬೇಕು..... 

ಬೆಳಕಿಗಿಂತ ಚಂದ ಕವಿ, ಚಿತ್ರಕಾರ, ಅಷ್ಟೇ ಏನು ಸಕಲ ಕಲಾ ವಲ್ಲಭ ಬೇರೆ ಯಾರಿಹರು ಜಗದಿ...!
ಎದೆಗಣ್ಣು ಬೆಳಕ ಮಿಂದರೆ ಚಿತ್ತದಲಿ ನೂರು ನಗೆಯ ಚಿತ್ತಾರ...
ಪ್ರೀತಿ ಕುಂಜ ಬೆಳಗು...
ಶುಭದಿನ... 🤝🫂

ಬೆಳಕಿನ ಪ್ರೀತಿಗೆ ಬೆಳಕೇ ಹೋಲಿಕೆ...
ಪಡೆದ ಪ್ರೀತಿಗೆ ಪ್ರೀತಿಯೇ ಕಾಣಿಕೆ... 
ಎದೆಯ ಪ್ರೀತಿ ಜಗದ ಬೆಳಕು...
ಬಿಡಿ ಹೂವು ದಾರವನಪ್ಪಿ ಮಾಲೆಯಾಗುವ ಭಾವ ಬೆಳಗು...
ಶುಭದಿನ... 🤝🫂

ಅಪ್ಪನ ಹೆಗಲೇರಿ ಜಗವ ಕಂಡು ಕೇಕೆ ಹಾಕುವ ಕೂಸುಮರಿಯಂತೆ,
ಅಂಬೆಗಾಲಲಿ ಕತ್ತಲ ಎದೆಯನು ಹಿತವಾಗಿ ತುಳಿಯುತ್ತ ಗಲಗಲ ನಕ್ಕಿತು ಬೆಳಕು...
ಬೆಳಗಾಯಿತು...🤝🫂

ಬೆಳಕೆಂದರೆ ಪ್ರೀತಿ... 
ಮಳೆಯೆಂದರೆ ಪ್ರೀತಿ...
ಬೆಳಕು ಮಳೆಯ ಕುಡಿದು ಅರಳುವ ಹಸಿರೆಂದರೆ ಪ್ರೀತಿ ಪ್ರೀತಿ...
ಈ ಉಸಿರಿಗೆ ನೀರು, ನಿಡಿ ಆ ಬೆಳಕು, ಮಳೆಯ ಬಸಿರ ನಿರಾಮಯ ಪ್ರೀತಿ...
ಮಳೆ ಬೆಳಗು... 🤝🫂

ಬೆಳಕಿನ ಮುದ್ದಿಗೆ ಗಿಡಗಂಟಿ ಮೈನೆರೆದು, ಪ್ರೀತಿಸುಮವರಳಿ ಬಾನದೀಪದ ಕಣ್ಣಲ್ಲಿ ನೂರು ನೂರಾರು ಬಣ್ಣ ಬಣ್ಣಗಳ ನಗೆ ಮೇಳ...
ಅಲ್ಲಿಂದ ಸುರಿವ ಬೆಳಕಿನ ಪ್ರೀತಿಗೆ ಇಲ್ಲಿ ಅರಳುವ ಪ್ರೀತಿಯ ಬೆಳಕೇ ಉಡುಗೊರೆ...
ಶುಭದಿನ... 🤝🫂

ಚಂದಿರನಿಗೆ ಕಡ ಕೊಡುವಾಗ ಬೆಳ್ಳಂಬೆಳಗಿನಲಿ ಅರಳಿದ ತಂಪು ಬೆಳಕಿನ ಕುಡಿಗಳನಷ್ಟೇ ಆಯ್ದು ಎತ್ತಿಟ್ಟುಕೊಂಡು ಕೊಡುವನೇನೋ ರವಿರಾಯ...
ಅದಕೇ ಚಂದಮ ಸೋಸಿ ಸುರಿವ ಬೆಳುದಿಂಗಳು ಅಷ್ಟು ತಣ್ಣಗೆ ತಬ್ಬುತ್ತದೇನೋ...
ಹುಣ್ಣಿಮೆ ಬೆಳ್ದಿಂಗಳಂಥಾ ಚಂದ ಸೊಬಗಿನ ಶೀತಲ ಬೆಳಗು...
ಶುಭದಿನ... 🤝🫂

ನಿನ್ನಾ ಕಣ್ಣ ಚುಂಬಿಸಿದ ಬೆಳಕಿನೊಂದು ಕಿರಣವು ಮೈಮುರಿದೆದ್ದ ನಿನ್ನ ನಗೆಯಿಂದ ನೂರು ಕವಲಾಗಿ ಹರಡಿ, ಆ ಹಾದಿಯಲಿ ಎನ್ನ ಶುಭದ ತೇರು ದಿನದ ಯಾನಕೆ ಹೊರಟಾಯಿತು...
ಯೆದೆಯಿಂದ ಯೆದೆಗೆ ನಾಟಿದ ನಗೆ ಶರಕೆ ಬೆಳಕೆಂದು ಹೆಸರಾಯಿತು...
ಬೆಳಗಾಯಿತು... 🤝🫂

ಎದೆಯ ನಗುವನಾಳಲಿ ಪ್ರೀತಿ ಸ್ವಾತಂತ್ರ್ಯದ ಬೆಳಕು...
ನಗುವ ಪ್ರೀತಿ ಸ್ವಾತಂತ್ರ್ಯವೇ ಜಗದ ಯೆದೆಯ ಬೆಳಕು...
ಶುಭಾಶಯ - ಶುಭದಿನ...🪔

'ಇನ್ನೆಂತಾ ಕಾದಿತ್ತೋ, ನಮ್ ಪುಣ್ಯ, ಇಷ್ಟ್ರಲ್ಲೇ ಹೋತು' - ಹಿಂಗಂದು, ಅಶುಭ ಎದೆ ಇರಿದಾಗಲೂ ಶುಭದ ಹಿರಿಮೆಯನೇ ಹಾಡಿ ಮುಂದಿನ ಯುದ್ಧಕೆ ನಮ್ಮ ನಾವು ಅಣಿಮಾಡಿಕೊಂಡುಬಿಡುತ್ತೀವಲ್ಲ; ತುಂಡಿರದ ಬೆಳಕಿನ ಭರವಸೆ ಅಂದರೆ ಅದೇ...
ಕಾದರೆ ಬೆಳಕಿಗೇ ಕಾಯಬೇಕು - ಕತ್ತಲ ಯುದ್ಧವ ಬೆಳಕಾಗಿ ಕಾದಬೇಕು...
ಶುಭದಿನ... 🤝🫂

ಇರುಳ ತೆಕ್ಕೆಯ ಸುಖಾಲಸ್ಯವ ಬಿಡಿಸಿ ಬೆಳಕು ಮೈಮುರಿಯುವಾಗ ಕಣ್ಣ ಗೋಳದ ತುಂಬಾ ನಿನ್ನ ನಗೆ ಬಿಂಬ ಅರಳುತ್ತದೆ...
ಮತ್ತು 
ಎನ್ನೆದೆಯ ಬೆಳಗುವ ಎಣೆಯಿಲ್ಲದ ಭಾವ ಬಣ್ಣ ಬೆಡಗಿನ ಈ ಬೆಳಗಿಗೆ ನಿನ್ನ ಹೆಸರು...
ಶುಭದಿನ... 🤝🫂

ಜಗದ ಇರುಳನು ತೊಳೆವ ಬೆಳಗು ಎನ್ನೆದೆಯ ಕತ್ತಲನೂ ಬಳಿವ ಬೆಳಕಾಗಲೆಂಬ ಕಿರು ಪ್ರಾರ್ಥನೆ...
ಶುಭವನರಸುವ ನಾನು ನೀ ಸುರಿದಂತೇ ಶುಭವ ಸ್ವೀಕರಿಸಲು ಅನುವಾಗುವಂತೆ ಹರಸು ಬೆಳಗೇ...
ಶುಭದಿನ... 🤝🫂

ಶುಭ ನುಡಿಯಲು ಬೆಳಕು ಮತ್ತೊಂದು ಹಗಲಾಗಿ ಬಂತು...
ಮುಗಿಯದಿರಲಿ ನಮ್ಮ ನಿಮ್ಮ ಯೆದೆಯ ಶುಭದ ಪ್ರೀತಿ ಕಂತು...
ಶುಭದಿನ... 🤝🫂

ಎಂದಿನಂತದ್ದೇ ಇನ್ನೊಂದು ಹಗಲಿಗೆ ಇನ್ನೊಂಚೂರು ಪ್ರೀತಿ ಬಣ್ಣವ ಬಳಿದು, ಹಬ್ಬಾ ಎಂದು ಕೂಗಿ, ಊರೆಲ್ಲಾ ಕೂಡಿ ಆಡಿ ಹಾಡಿ ನಗುವ ಹಂಚಿಕೊಳುವ / ನೆಂಚಿಕೊಳುವ ಸರಬರ ಸಡಗರ ಸಂಭ್ರಮದ ಬೆಳಗು...
ಅಂಗಳದಲಾಡುವ ಬೆಳಕನು ಎದೆಗೆ ಕರೆಯುವ ಹಂಬಲಕೆ ಹಬ್ಬಗಳ ಹೆಸರು...
ಶುಭದಿನ - ಶುಭಾಶಯ... 🫂🍫

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

ಗೊಂಚಲು - ನಾಕ್ನೂರಾ ಎಪ್ಪತ್ತು ಮತ್ತೂ ಎರಡು.....

ಪ್ರೇಮ ಶರಧಿ / ಶರಣ ಬೆಳಗು..... 

ಇರುಳ ಕನಸಲ್ಲಿ ಬೆವರೂಡಿ ಕಾಡಿದ ವಿಗ್ರಹವೇ 
ಹಗಲ ಕನ್ನಡಿಯಲಿ ನಗುವಾಗಿ ನಾಚುವ ಕನಸಾದರೆ;
ಹಾಗೆ ಪ್ರೇಮವೂ ಪ್ರಣಯವೂ ಒಂದಾಗಿ ಫಲಿಸಿ ಅರಳುವ, ಆ ಶುಭ ಸಂಧಿಕಾಲದ ಮುನ್ನುಡಿಯಾಗಲಿ ಈ ಕನಸಿನ ಬೆಳಗು...
ಮತ್ತೂ
ಬೆನ್ನುಡಿಯಲಿ ಶುಭದ ಸಂಸಾರದ ಕನಸಿದೆ...
ಶುಭದಿನ... 🤝🫂

ಕೋಗಿಲೆ ಕೊರಳ ಹಾಡಿನ ಇಂಪು 
ಕಿವಿ ತುಂಬುವಾಗಲೆಲ್ಲ
ಕಾಗೆ ಒಡಲ ಗೂಡಿನ ಪ್ರೀತಿ ತಂಪು/ಕಂಪು
ಯೆದೆಗಿಳಿದರೆ
ರುದಯದ ಗುಡಿಯಲಿ ಬೆಳಕು ಮೈದುಂಬಿ 
ಬಾಳ ಬಂಡಿ ನೆಮ್ಮದಿಯಲಿ ತೇಗೀತು...
ಬೆಳಗಾಗುವ ಹೊತ್ತಿಗೆ... 🤝🫂

ಅವಳ/ನ ಒಡಲ ಕಾಳಜಿಯ ಬೆಳಕು,
ಬೆಳಕಿನ ಕಿಡಿಗಳ ಕಾಳಜಿಯ ಒಡಲು,
ಎರಡೂ
ಬದುಕು ಸುಡದಂತೆ ಕಾಯುವ 
ಭೂಮಿ ತೂಕದ ಪ್ರೀತಿ ಪ್ರೀತಿ ಮಡಿಲು...
ಶುಭವು(ವೇ) ಸುರಿಯಲಿ ನೆತ್ತಿಗೆ - ಬೆಳಕಿಳಿವ ಹೊತ್ತಿಗೆ...
ಶುಭದಿನ - ಶುಭದ ರೂಪವೇ... 🤝🫂

ಬೆಳಕಿನ ಭಾವ, ಭಾಷೆ, ಭಾಷ್ಯ ಎಲ್ಲಕೂ ಪ್ರೀತೀ ಎನ್ನಬಹುದು, ಎಲ್ಲವೂ ಪ್ರೀತಿಯೇ ಅಹುದು...
ನಿಜ ಪ್ರೀತಿಯ ಅರ್ಥ, ಆಶೆ, ಪರಮಾರ್ಥ ಎಲ್ಲವನೂ ಬೆಳಕೂ ಅನ್ನಬಹುದು, ಎಲ್ಲವೂ ಬೆಳಕೇ ಹವುದು...
ಮತ್ತೊಂದು ಬೆಳಗು - ಮತ್ತೆ ಮತ್ತೆ ಪ್ರೀತಿಯ ಹಾದಿ/ಸನ್ನಿಧಿ... 
ಶುಭದಿನ... 🤝🫂

ಹಿತ್ತಲ ಹೂ ತುಟಿಗೆ ಬಯಲ ದುಂಬಿ ತುಟಿ ಒತ್ತುವಾಗ ಲಾಸ್ಯದಿ ಮೈದೋರುವ ತುಂಟ ಕವಿತೆಯೀ ಬೆಳಗು...
ಬೆಳಗೆಂದರೆ, ಬೆಳಕೆಂದರೆ ಮನಸು ಮೈದುಂಬಿ ಅರಳುವುದು...
ಶುಭದಿನ... 🤝🫂

ಬೆಳಗಪ್ಪಾಗ -
ಸಾವಧಾನದಲಿ ಯೆದೆಯ ಗೂಡಿನ ಬಾಗಿಲಿಂದ ಇಣುಕಿ, ಕಣ್ಣ ಗೋಳದಿ ಮಿನುಗಿ, ಬಯಲ ತುಂಬಿಕೊಳುವ ಪ್ರೀತಿ ನಗೆಯ ಲಾಸ್ಯದಂದದಂತೇ ಬೆಳಕು ಬಿಚ್ಚಿಕೊಳ್ಳುತ್ತದೆ ಧರೆಯ ವಕ್ಷೋಜಗಳ ಮರೆಯಿಂದ...
ಕಾರುಣ್ಯಸಿಂಧು ಬೆಳಗು...
ಶುಭದಿನ...  🤝🫂

ಇಂಥ ಪರಿ ಮೋಡ, ಛಳಿ ಗಾಳಿ ಇದ್ರೂ ಇನ್ನೊಂಚೂರು ಮಲಗ್ವಾ, ಇನ್ನೊಂದೈದ್ ನಿಮ್ಶಾ ಬಿಟ್ ಎದ್ಕಂಬಾ ಅಂತ ಅಲಾರಾಂನ ನೆತ್ತಿಮೇಲೊಂದು ಕುಟ್ಟಿ ಹೊದ್ದು ಮಲಗ್ದೇನೇ, ವಂದಿನಾನೂ ಬಿಡದ್ದೇ, ಸರೀ ಹೊತ್ಗೆ, ಕುಂಡೆಗೆ ಬೆಂಕಿ ಬಿದ್ದಂಗೆ ಯೆದ್ದು ಕುಂತು ಬೆಳಕಿನ ಕಿಡಿಗೆ ತಿದಿ ಒತ್ತತಾನಲ್ಲ, ಮೆಚ್ಲೇಬೇಕು ಈ ಸೂರಿಮಾಮನ ಕೆಲಸದ ಪ್ರೀತಿಯ ಪರಾಕ್ರಮಾನ...
ಅವ್ನಂಗೆ ಕೆಲ್ಸಾ ಕಲೀಲಾಗ್ದೇ ಹೋದ್ರೂ ಅವ್ನ ಕೆಲ್ಸದ್ ಬಗ್ಗೆ ಎರ್ಡ್ ಒಳ್ಳೆ ಮಾತಾಡ್ಲಾದ್ರೂ ಕಲಿಯವು ನಾನು...
ಶುಭದಿನ... 🌦️🫂

ಬೆಳಕನು ಮಾತಾಡಿಸು ಬದುಕನು ಪರಿಚಯಿಸುತ್ತದೆ...
ಪ್ರೀತಿಯ ಆವಾಹಿಸು ಬೆಳಕು ಮಾತಿಗೆ ಕೂರುತ್ತದೆ...
ಬೆಳಗು - ಪ್ರೀತಿ ಮತ್ತು ಬದುಕಿನ ಸಂಗೀತ ಸಂಯೋಜನೆ...
ಶುಭದಿನ... 🤝🫂

ಕಣ್ಣ ತುಂಬಾ ಕತ್ತಲ ಕಳ್ಳು ಕುಡಿದು, ಮೈತುಂಬಾ ಮುಸುಕು ಹೊದ್ದು ಮಲಗಿದ್ದವರ ಸಣ್ಣ ಕರುಳಲ್ಲಿ ಕಚಗುಳಿಯಾಡಿಸಿ ಎಬ್ಬಿಸಿ, ಬೆಳಕ ಮೀಯಿಸಿ, ಒಪ್ಪವಾಗಿ ನಿತ್ಯ ನೈಮಿತ್ಯಕೆ ಅಣಿಗೊಳಿಸುವ ಅನುಭಾವ ಬೆಳಗು...
ಬೆಳಗೆಂದರೊಂಥರಾ ದೊಡ್ಡಮ್ಮ/ಚಿಕ್ಕಮ್ಮನಂಥ ಪ್ರೀತಿ ಮಡಿಲು...
ಶುಭ ಸುಪ್ರಭಾತ... 🤝🫂

ಯೆದೆಯ ಕಣ್ಣ ತೆರೆದು ಬೆಳಕಿನ ಕಣ್ಣಿಗೆ ಬಿದ್ದರೆ ಒಳಮನೆಯ ತುಂಬಾ ಪ್ರೀತಿ ಪ್ರೀತಿ ಬೆಳಕೇ ಬೆಳಕು...
ಉರಿದಲ್ಲದೆ ಬೆಳಕೆಲ್ಲಿಯದು...
ಶುಭದಿನ... 🤝🫂

ನೇಹೀ -
ಇನ್ನೊಂದಿಲ್ಲ ಬೆಳಕಿನಂಥ ಚಂದ ಬಣ್ಣದ ಸಾರ...
ಬೆಳಕು ಬಣ್ಣಗಳ ಸಾವ್ಕಾರ / ಮಾಯ್ಕಾರ...
ಬೆಳಕೆಂದರೇ ನೂರು ಬಣ್ಣಗಳ ಅಲಂಕಾರ...
ಬೆಳಗು ಬೆಳಕು ಬೆಳಗಿ ಬಣ್ಣಗೂಡಲಿ ನನ್ನ ನಿನ್ನ ರುದಯ ಬಿಡಾರ...
ನವಿಲ್ಗರಿಯ ಕಣ್ಣಂತ ನವಿರು ಬೆಳಗು...
ಶುಭದಿನ... 😍

ಯಾವ ಬಣ್ಣನೆ ಸಾಟಿ ಕಣ್ಣಲ್ಲೂ, ಕನಸಿಗೂ, ಪ್ರೀತಿ, ಭರವಸೆಯ ಮೊಗೆ ಮೊಗೆದು ಕೊಡುವ ಬೆಳಗಿನ / ಬೆಳಕಿನ ಬಣ್ಣದ ಸೊಬಗಿಗೆ...
ಎಂಥ ಚಂದ ಬೆರಗಿದು - ಬೆಳಕಿನೆದುರು ಭಾಷೆ ಸೋಲುವುದು...
ಪ್ರೇಮ ಶರಧಿ / ಶರಣ ಬೆಳಗು... 🤝🫂

ಕತ್ತಲನ್ನೂ ಪ್ರೀತಿಸಿಯೂ ಬೆಳಕಿಗಾಗಿ ಕಾಯುತ್ತೇವೆ...
ಕತ್ತಲಿಗೆ ಅರಳುವ ಪಾರಿಜಾತವೂ ಹಸಿರ ಬೇರಿಗೆ ಪ್ರೀತಿಯ ಕಸುವೂಡಲು ಬೆಳಕನ್ನೇ ಆಶ್ರಯಿಸುತ್ತದೆ...
ಅಲ್ಲಿಗೆ,
ಬೆಳಕನ್ನು ಪ್ರೀತಿಸುವುದು ಎಂಬುದೇನಿಲ್ಲ; ಬೆಳಕೇ ಪ್ರೀತಿ ಅಥವಾ ಪ್ರೀತಿಯೇ ಬೆಳಕು...
ಹೊಸ ಬೆಳಗು - ಬೆಳಕು ಪ್ರೀತಿಯಿಂದ ತೊಳೆದಿಟ್ಟ ಫಳ ಫಳ ಯೆದೆಯ ಹಳೆಯದಾಗದ ಪ್ರೀತಿ ಪ್ರೀತಿ...
ಶುಭದಿನ... 🤝🫂

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

ಗೊಂಚಲು - ನಾಕ್ನೂರಾ ಎಪ್ಪತ್ತು ಮತ್ತೊಂದು.....

ಪ್ರೀತಿಯ ರೀತಿಯೇ ಬೆಳಗು..... 

ಯಾವ ವಾಗ್ದಾನ, ವಾಗ್ದಾಳಿ ಇಲ್ಲ, ನೂರು ಹೇಳಿಕೆ, ಕೇಳಿಕೆಗಳಿಲ್ಲ - ಸುಮ್ಮನೇ 'ಪ್ರೀತಿ ಕೊಡುವುದು' ಕೊಟ್ಟು ಕೊಟ್ಟು ತುಂಬಿ ತೊನೆಯುವುದು ನಿಯತಿಯ ತೀರಾ ಸರಳ, ಸಹಜ ನೀತಿ - ಹೂ ಚಿಟ್ಟೆ ಚಿತ್ತಾರ ಬೆಳಕು...
'ಪ್ರೀತಿ ಪಡೆವ' ಆಶೆಯ ಆನು, ನೀನು - ಕೊನೆತನಕ ಹುಡುಕಿ ಹುಡುಕಿ, ಖಾಲಿಯುಳಿದೇ ಸಾಯುತ್ತೇವೆ ಸಿಗದೇನೇ ಪ್ರೀತಿ ದುಕಾನು...
ಭಾಷೆ, ಭಾಷ್ಯಗಳಲಿಲ್ಲ ಪ್ರೀತಿ ಬೆಳಕು - ಅರಿವ ಸುರಿಯಲಿ ಬೆಳಗು...
ಶುಭದಿನ... 🤝🫂

ಆಲಸ್ಯದ ಸುಖ, ಸುಖದ ಆಲಸ್ಯ ಯಾವುದು ಮೇಲೆಂಬುದನು ತೂಗಲಾಗದ ರಜೆಯ ಮುಂಜಾವು ಮತ್ತು ರಜೆಯೇ ಸುಖ ಅಂತ ಷರಾ ಬರೆದು ಮುಸುಕೆಳೆದುಕೊಳ್ಳುವ ನಾನು... 
ಹೊಟ್ಟೇಲಿ ಲವಲವ ಶುರುವಾಗಿ ಬೆಳಕಿಗೆ ಹಾಯ್ ಅನ್ನುವ ಹೊತ್ತಿಗೆ ಹೊತ್ತು ನೆತ್ತಿಗೇರಿ ನಡು ಮಧ್ಯಾಹ್ನ ಬಾಗಿಲಲ್ಲಿರುತ್ತೆ... 🤪
ಶುಭದಿನ... 🙈

ಪ್ರೇಮ ಬೆಳಕನ್ನು ಮಿಂದಲ್ಲಿ ಬನಕೆಲ್ಲ ವಸಂತೋತ್ಸವ - ಬಯಲ ಮೂಲೆಯ ಒಂಟಿ ಹೂವಿಗೂ ಹರೆಯ...
ಆ ಸಂಭ್ರಮಕೆ ಕುಣಿವ ಗಾಳಿಯ ಮೈನವಿರಿಂದ ಊರ ಉಸಿರಲೆಲ್ಲ ಪ್ರೇಮದ ಘಮ...
ಪ್ರೇಮಿಯ ಕುರುಡನ್ನು ಪ್ರೇಮಕಂಟಿಸದೇ ನೋಡುವಲ್ಲಿ ಪ್ರೇಮ ಬೆಳಕು...
ಶುಭದಿನ... 🤝🫂

ಮಳೆಯ ಮಿಂದ ಹೊಳೆಯಲಿ ತುಂಬಿ ಹರಿವ ಬೆಳಕು...
ಬಯಲೇನು ಬೇಲಿ ಗೂಟದಲೂ ಹಸಿರ ಹೊನ್ನ ಬಸಿರು...
ಮಳೆಕಾಡಿನ ಊರು ನನ್ನದು, ಹಸಿ ಮಣ್ಣ ಘಮ ಮೆತ್ತಿದ ಉಸಿರು...
ಬಾನು ಭುವಿ ಪ್ರೇಮ ಪಾಕ - ಅರಳಿದ ಹಸಿ ಹಸಿರ ಬೃಂದಾವನ - ಬೆಳಕಿನುತ್ಸವ...
ಬೆಳಗಾಯಿತು... 🫂🤝

ಹೂವೆದೆಯ ಪಾಡನು ಕೊರಳೆತ್ತಿ ಹಾಡುವ ಹಕ್ಕಿಗೊರಳಿನ ಇಂಚರ...
ಚಿಟ್ಟೆ ಪಾದಕಂಟಿದ ಹೂವ ಘಮಲಿಂದ ಬಯಲಿನೊಡಲ ತುಂಬಿ ಬೆವರುವ ಯೌವನ...
ಯೆದೆ ಕದವ ತೆರೆದು ಮೌನವನಾಲಿಸೆ ಮಧುರ ಸಂಭಾಷಣೆಯ ಪ್ರೀತಿ ಸಂಯೋಜನೆ ಈ ಬೆಳಗು...
ಧ್ಯಾನವೆಂದರೂ ಇಷ್ಟೇ, ಬೆವರುವ ಯೆದೆಯ ಹಾಡು ಕೇಳುವುದು - ಎನ್ನದು, ನಿನ್ನದೂ...
ಶುಭದಿನ... 🫂🤝

ಬೆಳಕಿನ ಸ್ಪರ್ಷಕೆ ಅರಳಿದ ಹೂವಿನ ಮೈ ಗಂಧವನ್ನು ಗಾಳಿಯೂ, ಪರಾಗವನ್ನು ಚಿಟ್ಟೆ ಪಾದವೂ ಊರಿಗೆಲ್ಲಾ ಹಂಚಿ ಸಂಭ್ರಮಿಸುವುದ ಕಾಂಬಾಗ, ಮಗುವಿನೆದೆಯ ಶುದ್ಧ ಬೆರಗಿನಂಥಾ ಪ್ರೇಮಕ್ಕೆ ನಿಷ್ಠೆಯ, ಪಾವಿತ್ರ್ಯದ ಪರಿಭಾಷೆಯ ವ್ಯಾಖ್ಯಾನ ಮಾಡಲು ನನ್ನಲ್ಲಿ ಸಣ್ಣಗಾದರೂ ಮುಜುಗರವಾಗಬೇಕೇನೋ...
ಶುಭದಿನ... 🫂🤝

ಬೆಳಕು ಚೂರು ಮುಖ ತಿರುವಿದರೂ ಕತ್ತಲು ಕದ ಹಾಕಿಕೊಳ್ಳುತ್ತದೆ...
ಎಲ್ಲ ಒಡೆದು ತೋರುವ ಬೆಳಕೂ ತನ್ನ ಬೆನ್ನ ಮೇಲೆ ಕತ್ತಲು ಬರೆದಿಟ್ಟ ಗುಟ್ಟನು ಅರಿಯಲಾಗದೇ ಅದನು ತನ್ನದೇ ನೆರಳು ಅಂತ ಕರೆದು ಸುಮ್ಮನಾಗುತ್ತದೆ...
ನಾನು ಇರುಳ ಎದೆಯ ಮೇಲೆ ಬರೆದ ನಮ್ಮ ಜೋಡಿ ಹೆಸರನು ಓದಲು ಬೆಳಗಿಗಾಗಿ ಕಾಯುತ್ತೇನೆ...
ಪ್ರೀತಿಯಿಂದ ಕಾದಿಡುವ ಕೆಲವು ಗಪ್‌ಚುಪ್ (ಮಾತು)ಘಳಿಗೆಗಳಿಗೂ ಪ್ರೀತಿ ಎಂದೇ ಹೆಸರು...
ಶುಭದಿನ... 🫂🤝

ಕೋಳಿ ಕೂಗಿ ಬೆಳಗಾಗುವುದಿಲ್ಲ...
ಆದರೆ,
ಅರುಣೋದಯದ ಮೊದಲ ಕಿರಣಕ್ಕೆ ಸರಿಯಾಗಿ ಎದ್ದು ಕೂರುವ ಕೋಳಿ ಯೆದೆಯಲ್ಲಿ ಬೆಳಕಿನ ಅಲಾರಾಂ ಇರಬಹುದು ನೋಡು...
ಇರುವೆಗಳ ಕೇಳಿ ಋತುಮಾನ ಬದಲಾಗುವುದಿಲ್ಲ...
ಆದರೂ,
ಸದಾ ಗಡಿಬಿಡಿಯಲೇ ಓಡಾಡೋ ಇರುವೆಗಳ ಕೊರಳಲ್ಲಿ ಋತುಗಳ ದಿನದರ್ಷಿಕೆ ಇರಲಿಕ್ಕೆ ಸಾಕು...
ಕಾಣುವ ಮನಸಿದ್ದರೆ ಇಂಥದು ಪ್ರತಿ ಹೆಜ್ಜೆಗೂ ನೂರಾರಿದೆ ನೋಡು...
ಅದಕೇ,
ನನ್ನ ದೊಡ್ಡಸ್ತಿಕೆ ಕಳೆಯಲು ಸುತ್ತಣ ಸೃಷ್ಟಿಯ ಬೆಳಕಿಗಿಷ್ಟು ಬೆರಗಿನ ಕಣ್ಬಿಟ್ಟು ಕೂರಬೇಕು...
ಅರಿವು - ಬೆಳಗು... 🤝🫂

ಪ್ರೀತಿಯಲ್ಲಿ ಸೋಲೇ ಇರಲಿ;
ಆದರೆ,
ಪ್ರೀತಿ ಸೋಲದಿರಲಿ...
'ನಾನು' ಎಂಬ ಧಾಡಸಿ ಭಾವ ನನಗೆ ನನ್ನ ಕಾಯ್ದುಕೊಡುವಷ್ಟಿರಲಿ; 
ಆದರದು
ನಿನ್ನ ಕಳೆದುಕೊಳ್ಳುವಷ್ಟು ಅಹಂಭಾವವಾಗಿ ಬೆಳೆಯದಿರಲಿ...
ನೋಡಲ್ಲಿ,
ಗಗನದ ತಾರೆಯ ಬೆಳಕು ಭುವಿಯ ಹುಳವ ತಾಕಿ ಉಸಿರು ಹರಿದಲ್ಲೆಲ್ಲ ಪ್ರೀತಿ ಸಂಚಾ(ಸಾ)ರ...
ಪ್ರೀತಿ ಪ್ರೀತಿ ಬೆಳಗು - ಪ್ರೀತಿಯ ರೀತಿಯೇ ಬೆಳಗು...
ಶುಭದಿನ... 🫂🤝

ನೇಹವೇ -
ನನ್ನೆದೆಯಲಿ ನಾ ಹಡೆದು ನಿನ್ನುಡಿಯಲಿಟ್ಟ ಶುಭ ನುಡಿಯೊಂದ ನೀ ಮೆಚ್ಚಿ ಧರಿಸಿ ನಿನ್ನ ತುಟಿಯಂಚಲಿ ಸಣ್ಣ ನಗೆ ಮುಗುಳು ಅರಳಿದರೆ ಶುಭವು ಪಡಿನುಡಿದು ನನ್ನಾ ದಿನವೆಲ್ಲಾ ಶುಭವೇ ಶುಭ...
ನಿನ್ನ ತಾಗಿ ಮರುನುಡಿದು ನನ್ನ ತೂಗುವ ಶುಭದ ಸಂಗೀತ - ಶುಭದಿನ... 🤝🫂

ನಮ್ಮ ಬಾಳ ಯಜ್ಞದ ಕೊಟ್ಟ ಕೊನೆಯ ಹವಿಸ್ಸಾಗಿ ನಮ್ಮದೇ ಉಸಿರನು ಪಡೆವ ಕಾಲ...
ಅದೇ ಕಾಲವು ಅದಕೂ ಮೊದಲು ಉದ್ದಕೂ ರಾತ್ರಿಯೆದುರು ಹಗಲು, ಬೆಳಗಿನಾಚೆ ಇರಳನು ವಿಚಿತ್ರ ಸಚಿತ್ರ ಭರವಸೆಯಾಗಿ ನಮ್ಮೆದುರು ಸಮಾಽಽ ಹಂಚುತ್ತದೆ...
ಹಳೆಯದನು ತೊಳೆದು ಹೊಸದನಾಗಿಸಿ ಕೊಡುವ ಪ್ರತಿ ದಿನವೂ ಕಾಲ ನಮಗೆಂದೇ ಎತ್ತಿಕೊಟ್ಟ ಪ್ರೀತಿಯ ಹೊಸ ದಿನವೇ ಅನಿಸುತ್ತದೆ...
ಇಂತಿಪ್ಪಲ್ಲಿ -
ಮುಗಿದುಹೋಗುವುದು ಕೂಡಾ ಒಂಥರಾ ನೆಮ್ಮದಿಯೆನಿಸಿ...
ಶುಭದಿನ... 🤝🫂

ಬೆಳಕಿನ ಕಿಡಿಯೊಂದಿಗೆ ಶುಭದ ಹುಡಿಯೊಂದು ನಿನ್ನ ಒಳಮನೆಯ ಸೇರಲಿ...
ನಿತ್ಯಾಲಾಪಕೆ ಲಾಸ್ಯದಲಿ ಮೈಮುರಿವ ನಿನ್ನ ಕಂಣ್ಣಂಚಲಿ ನಗುವೊಂದು ಅರಳಲಿ...
ಪ್ರೀತಿ ದುಂಬಿಗೆ ನಗೆಯ ಔತಣ ಸಿಕ್ಕರೆ ದಿನವೆಲ್ಲ ಹಾಡು ಹಬ್ಬ...
ಶುಭದಿನ... 🤝🫂

ನೂರು ಮಾತಿಗೆ ಬರಾಬರಿ ಒಂದು ಸ್ಪರ್ಶ ಅಂತಾರೆ ಅಥವಾ ಮಿಗಿಲೇ ಇರಬಹುದು...
ಹಾಗಿದ್ದರೆ,
ನಿತ್ಯ ನಿರಂತರ ಅನಂತವ ತಬ್ಬುವ, ಹಬ್ಬುವ ಬೆಳಕಿನೊಡಲಿನ ಪ್ರೀತಿಯ ತೂಕವೆಷ್ಟಿರಬಹುದು...!!
ಬೆಳಕು ಹಬ್ಬಿ ಪ್ರೀತಿಯಾ...? ಪ್ರೀತಿ ತಬ್ಬಿ ಬೆಳಕಾ...? ಚರ್ಚೆಯೇ ಬೇಡ ಬಿಡು - ಒಂದರೊಳಗೊಂದು ತಳಕಂಬಳಕ...
ತಬ್ಬಿದರೆ ಬೆಳಕನೇ ತಬ್ಬು - ಹಬ್ಬಿದರೆ ಪ್ರೀತಿಯಾಗಿ ಹಬ್ಬು...
ತನ್ನೊಂದು ಕಿರುಬೆರಳ ಸ್ಪರ್ಶದಲಿ ಜಡವನೆಲ್ಲ ತೊಳೆದು, ಜಗವನೆಲ್ಲ ಅರಳಿಸುವ ಹಂಚಿ ಖಾಲಿಯಾಗದ ರಾಶಿ ರಾಶಿ ಪ್ರೀತಿ ಪ್ರೀತಿ ಬಣ್ಣಾ ಬಣ್ಣ ಬೆಳಗು...
ಶುಭದಿನ... 🤝🫂

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

Saturday, September 20, 2025

ಗೊಂಚಲು - ನಾಕ್ನೂರೆಪ್ಪತ್ತು.....

ಒಡಕು ಯೆದೆಯವನ ಹರಕು ಪ್ರಾರ್ಥನೆ.....

ಚಂದಿರನ ಕೂಡಲು ಓಡುವ ಬೆಳಕಿಗೆ ನೀ ನಿನ್ನ ನಗೆಯ ರಂಗು ಬಳಿದಾಗ - ಆ ಸೊಬಗಿಗೆ ಸಂಜೆಯಾಯಿತೂ ಅನ್ನುವುದು ಮರುಳ ಜಗ...
____ ಪ್ರೀತಿ ಯೆದೆತೆರೆದು ಮೈಮರೆಯುವ ಹೊತ್ತು/ಗತ್ತು...

ಯೆದೆ ಹಿಗ್ಗಿ ಹೊಮ್ಮುವ ನಗುವಿಗಿಂತಾ ಕರುಳಿಂಗೆ ಇಂಪಾದ ಹಾಡು, ಕಣ್ಣಿಂಗೆ ತಂ(ಸೊಂ)ಪಾದ ಚಿತ್ರ ಬೇರೇನಿದೆಯೋ ವತ್ಸಾ...
___ ಪ್ರೀತಿಯ ನೆಲೆ, ನೆರಳು... 

ಮಳೆಯ ಮಿಂದ ಹಸಿರ ಹಾದಿ - ಹುಚ್ಚು ನಗೆಯ ಪುಣ್ಯ ಪಯಣ... 🚂
____ ಸಂಜೆಗಳು ಹೀಗೆ ನಗೆಯ ಮೆಲ್ಲಬೇಕು... 
&&&

ಹೇಳು ಶ್ರೀ -
ಜಗದ ಮೈಮನದ ಕೊಳೆಯನೆಲ್ಲ ತೊಳೆದು ತಂಪಾಗಿಸುವಂಥಾ ಅನಂತ ವಿಸ್ತಾರದ ಬೆಳದಿಂಗಳಿದ್ದರೂ ನೋಡುವ ಹುಳು(ಕು) ಕಣ್ಣಿಗೆ ಕಲೆಯಷ್ಟೇ ಕಂಡರೆ ಅದು ಚಂದ್ರಮನ ತೂಕವಾ...!?

____ ಬರ್ಕತ್ತಾಗದ ಪ್ರೀತಿ...
&&&

ನನ್ನ(ನ್ನೆ)ದೇ ಸಾಲುಗಳ ನನಗೆ ಕೇಳಿಸೀ ಅಳಿಸಿಬಿಟ್ಟಳು - ನೋವನೇ ಹಾಡಿಯೂ ನೋವೆದೆಗೆ ನಗೆಯ ಹೆಗಲಾದಳೂ...
ಈ ಕಣ್ಣಲೀ ಕದಲುವಾ ಕಾವ್ಯಕೇ ಉಸಿರಿತ್ತಳೂ - ನೆನಪಿನಾ ಅಂಗಳದಾ ಪಾತಿಯಾ ಹಸಿರಾದಳೂ...
ನನ್ನದೀ ಬದುಕನೂ ತನ್ನದಾಗಿಸೀ ಬದುಕಿಸಿಬಿಟ್ಟಳು - ಭಾವದಾ ಬಯಲಿನಾ ಬೆಳಕಾದಳೂ...
ಹೆಸರೇ ಇಲ್ಲದಾ/ಹೆಸರಿಗೆ ಕಾಡದಾ ಕಾಡ ಕನಸಾದಳೂ - ಕಡಲಿನಾ ದಂಡೆಯಾ ಕಡು ಮೌನದಂತವಳೂ...
ಸೋತ ಹುಡುಗನಾ ನೀಲಿ ಕನಸಿಗೇ ಮಳೆಯಾ ಪರಿಚಯಿಸಿದಳೂ - ಪ್ರೀತಿಯಲೀ ಮೈದುಂಬಿ ಕೋಡಿ ಹರಿದು ಹೊಳೆಯಾದಳೂ...
___ ಎನ್ನ ಕಪ್ಪು ಹುಡುಗೀ - ಶಬ್ದ ಸೋಲುವ ಒಲುಮೆ, ಯೆನ್ನೆದೆಯ ಕಾರ ಹುಣ್ಣಿಮೆ...
&&&

ಕೇಳೇ -
ಬಿಮ್ಮಗೆ ಸೋನೆ ಸುರಿವ ಮಳೆ
ಬರಿ ಮೈಯಲಿ ಸುಳಿವ ಛಳಿ ಗಾಳಿ 
ತೊಯ್ದ ಎದೆಗಂಟಿದ ಕರಿ ಪತ್ತಲದ ಒದ್ದೆ ಒದ್ದೆ ಕತ್ತಲು...
ಈ ನಿಶೆಯ ಬಾಗಿಲ ತಂಬೆಲರ ಬಾಗಿನಕೆ ನಿನ್ನ ಹರೆಯದ ಬೆತ್ತಲು ನನ್ನ ತೋಳಿನಾಳ್ಕೆಯ ಸಹಚಾರಿಯಾದರೆ; ಇರುಳು ಆರುವ ಮುನ್ನ ಕಾಲನೋಲಗಕೆ ಹಿಡಿ ಹಿಡಿ ಪ್ರೀತಿ ಕಪ್ಪ ಕಾಣಿಕೆ - ಬೆನ್ನ ಹಾಳೆಯ ಮೇಲೆ ಬೆರಳು ಗೀಚಿದ ಗೀರುಗಳಲಿ ಉಪ್ಪು ಬೆವರ ಉರಿ ಉರಿ ಉರವಣಿಗೆ... 
ಹಸಿ ತುಟಿಗಳ ಘಮವಂಟಿದ ಬಿಸಿ ಉಸಿರಿನ ಮೊದಲ ಕಂತಿನ ಪ್ರೀತಿಗೂ, ಹೊರಳಿ ಹೊರಳಿ ಅರಳುವಾಟದಿ ಸಜ್ಜೆಮನೆಯ ಗಾಳಿಗೇ ಅಂಟಿದಂತಿರುವ ಅದಲು ಬದಲಾದ ಮೈಗಂಪಿನ ಕೊನೆಯ (?) ಕಂತಿನ ಪ್ರೀತಿಗೂ ನಡುವೆ ಕೋಳಿ ನಿದ್ದೆಯ ಅಂತರ... 
___ ಛಳಿಯ ಛವಿಯಿಳಿಸುವ ಸಾಲು ಸಾಲು ಕಂತುಕೇಳಿಯ ಕಂಪು (ಚಂಪೂ) ಕಾವ್ಯ... 
&&&

ಅವಳ ಕೈತುಂಬಾ ಹೊಸ ಬಳೆಗಳ‌ ಖಣ ಖಣ - ಹೌದು, ಹಬ್ಬವಂತೆ...
ನನ್ನ ಬೆನ್ಬಯಲ ತುಂಬಾ ಹೊಸ ಗೀರುಗಳ ನರಕ ಸುಖದ ಕಳ್ಳ ಕನಸು - ಹಬ್ಬವೇ ಹೌದು...
___ ರಸಿಕನೆದೆಯ ಪುಳಕದ ಪಟಾಕಿ ಸದ್ದು ಊರ ಕಿವಿಗಳಿಗೆ ಕೇಳದಿರಲಿ...

ಕಾಡುವ ನಿನ್ನ ಕೂಡದೇ
ಕೊರೆಯುವ ಈ ಇರುಳ ದಾಟುವುದು ಹೇಗೆ...
___ ಮಳೆ(ಯಲ್ಲೂ)ಯಾಗಿ ಬೆವರುವ ಬಯಕೆ...

ಯಾವುದೂ ಮೊದಲಿನಂತಿಲ್ಲ ಎನ್ನುತ್ತಾ ಎಲ್ಲಾ ಮಧುರ ಪಾಪಗಳ ಮತ್ತೆ ಮೊದಲಾಗಿ ಶುರು ಮಾಡಲು ಹವಣಿಸುವ 'ನಡು ವಯಸ್ಸ'ನು ಹಾಯುತಿರುವ ಪರಮ ಪೋಲಿ ಪ್ರಾಣಿ ನಾನು...
___ ಹರೆಯದ ಸಂಜೆಗಳ ಬೆನ್ನಮೇಲಿನ ಪಾಪದ ಮಧುರ ಗೀರುಗಳಿಗೆಲ್ಲ ಎದೆಗೆ ಛಳಿ ಗಾಳಿಯ ಬೀಸುವ ಕಾಲನೇ ಹೊಣೆ...
&&&

ಕಪ್ಪು ಹುಡುಗೀ -
ನಾ ನನ್ನ ನೋವುಗಳಲಿ ಕಳೆದೋಗಿ ಕೊರಡಾದ ಇಳಿಗತ್ತಲ ಹಾಡಿಯಲಿ ಇನ್ನೇನೂ ಆಗದ, ಬೇರೇನನೂ ಬೇಡದ ಒಂದು ಹೊಚ್ಚಹೊಸಾ ಅಪ್ಪಟ ಮೋಹವಾಗಿ ನೀ ನನ್ನ  ತಾಕಿ ಬಲವಾಗಿ ತಬ್ಬಬೇಕು; ಆ ಬೆಚ್ಚಾನೆ ಬಿರುಸಿಗೆ ನನ್ನೊಳಗೆಲ್ಲ ಬರಿದಾಗಿ, ಬಯಲಾಗಿ ಮತ್ತಲ್ಲಿಗೆಲ್ಲ ಮುಗಿದೇ ಹೋದಂತಿರಬೇಕು... 
ಭಾವದ ಉರಿ ಉಸಿರಲಿ ಮೈಕಡೆದು ಹರಿದ ಹಸಿ ಬೆವರಲೀ ಮನಸ ಮೀಯಿಸಿ ಮಡಿ ಮಾಡಿ ನನ್ನೆಲ್ಲಾ ಹೊಸ ಹುಡುಕಾಟವನ್ನು ನೀನೇ ಜೀವಂತ ಇಡಬೇಕು ಮತ್ತು ಏನೆಂದು ಅರಿವಿರದ ಏನನ್ನೋ ಹುಡುಕಿ ಹೊರಟ ನನ್ನ ಹಾದಿಯಲೆಲ್ಲ ನೀನೇ ಹೊಸದಾಗಿ ಸಿಗಬೇಕು...
____ ಒಡಕು ಯೆದೆಯವನ ಹರಕು ಪ್ರಾರ್ಥನೆ...

ವತ್ಸಾ - 
ಹೂವಂತೆ ಆರೈದು ಯೆದೆಗೂಡಲಿ ಕಾದುಕೊಳ್ತೇನೆ ನಿನ್ನ ಅಂದ್ಲು...
ನವಿಲ್ಗರಿಯ ಮಗ್ಗುಲಲಿ ಒಣ ಹೂವನಿಟ್ಟರೆ ಹೂವಿಗೂ ಗರಿ ಮೂಡಿ ಮರಿ ಹಾಕೀತು ಅನ್ನೋದು ಮುಗ್ಧತೆಯಾ ಇಲ್ಲಾ ಭ್ರಮೆಯಾ ಅಂದೆ...
ಮುನಿಸಿಕೊಂಡು ಹೆಗಲು ಕಚ್ಚಿ ಕಣ್ಮುಚ್ಚಿದವಳಿನ್ನೂ ಮಾತಿಗೆ ಕೂತಿಲ್ಲ - ಎದೆರೋಮಗಳ ಬುಡದಲ್ಲಿ ಇಂಗಿ ಮರೆಯಾಗಲು ಆ ಅವಳ ಕಣ್ಣಹನಿಗಳು ಜಾಗ ಹುಡುಕುತ್ತಿವೆ...
___ ಜಗವೆಲ್ಲಾ ಸೂರ್ಯನ ಹಂಬಲಿಸುವಾಗ ಚಂದರನ ಕಲೆಯನೂ ಪ್ರೀತಿಸಿ ಇರುಳಿಗೆ ಅರಳೋ ಪಾರಿಜಾತದ ಕರುಳ ಕಡು ಘಮದ ಪ್ರಾರ್ಥನೆ ಏನಿದ್ದೀತು...!!
&&&

ಅವಳ ಶಾಪವೋ, ವರವೋ ಅವಳೇ ಮತ್ತೆ ಸಿಕ್ಕಂತೆ ಮತ್ತೆ ಮತ್ತೆ ಕನಸಾಗುತ್ತದೆ...
ಚಿರ ವಿರಹಿಯೆದೆಯಲಿನ ಅನುಗಾಲದ ಸ್ವಪ್ನ ಸ್ಖಲನ ಅವಳು...
___ ಮೋಹಾಮಾಯೆಯ ಸುಖ ಸಖ್ಯ...
&&&

ನಿನ್ನೆಗಳ ಮರೆತುಬಿಡು
ಇವತ್ತೊಂದಿನ ಕ್ಷಮಿಸಿಬಿಡು 
ನಾಳೆಯಿಂದ ನಾನು ದೇವರಂತವನು/ಳು...
ನಂಬಿದರೆ ಹಿಂಗಂದು ದೇವರನೂ ನಂಬಿಸಿಬಿಡ್ತೀವಿ - ನಶೆ ಮತ್ತು ಪ್ರೇಮದ ತಲೆಮೇಲೆ ಆಣೆ ಇಟ್ಟು/ಆಣಿ ಹೊಡೆದು...
ಮತ್ತೆ ನಿನ್ನೆಯಂತೆಯೇ...
___ ಕಥೆಯಲ್ಲದ ಕಥೆ ಹೇಳುವ ಪಾತ್ರ...
&&&

ವತ್ಸಾ -
ಅನುರಾಗವೇ ಆಗಲೀ, ಮೋಹವೇ ಆಗಲೀ ರುಚಿ ಇರುವುದು ಅನ್ಯೋನ್ಯರಲಿ ಮನಸಾರೆ, ಮೈಯ್ಯಾರೆ, ಒಡನಾಡಿ, ಒಳನಾಡಿ ಒದಗಿಬರುವುದರಲ್ಲಿಯೇ ಅಲ್ಲವಾ...!!
ಎಂಥದ್ದೇ ಒಡನಾಟದಲ್ಲೇ ಆದರೂ ಅದಾಗೇ ಅದು ಒದಗಿ ಬರುವುದು ನೋವೊಂದೇ ಅನ್ಸುತ್ತೆ ನೋಡು - ನಗುವಾಗಲೀ, ನಲಿವಾಗಲೀ, ಸುಖವೇ ಆಗಲೀ ಒಮ್ಮತದಲಿ ಒದಗಿ ಬರಬೇಕೆಂದರೆ ಪರಸ್ಪರ ಒಂದಿಷ್ಟಾದರೂ ಜೀವಾಭಾವದ ಮುಂಕೇಳಿ ಬೇಕೇ ಬೇಕನ್ನಿಸತ್ತಲ್ವಾ...!!
___ ಮಾತು, ಮಾನ, ಮುತ್ತು, ಮೌನ, ಪ್ರಣಯ, ಪ್ರೇಮ, ನೇಹ, ಪ್ರೀತಿ, ಇತ್ಯಾದಿ ಇತ್ಯಾದಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

Friday, September 19, 2025

ಗೊಂಚಲು - ನಾಕ್ನೂರರ್ವತ್ತೊಂಭತ್ತು.....

ಬದು(ಕಿನ)ಕೆಂಬ ಸರಳ ಆಧ್ಯಾತ್ಮ.....

ಕೊಟ್ಟದ್ದು ನೆನಪಾಗುವಂಥ ಅಥವಾ ನೆನಪು ಮಾಡುವಂಥ ಸ್ಥಿತಿ ಮತ್ತು ಪಡೆದದ್ದು ಮರೆತು ಹೋಗುವಂಥಾ ರೋಗ ಎರಡೂ ಬರಬಾರದು ಶ್ರೀ...
ಅದು ಪ್ರೀತಿಯಾದರೂ ಸರಿ, ನಗದಾದರೂ ಅಷ್ಟೇ...
___ ರುದಯದ ಮುಟ್ಟಿಯಲ್ಲಿನ ಮಾನ...
&&&

ಇಲ್ಕೇಳೋ -
ರೋಗದ್ದಷ್ಟು, ಮದ್ದಿಂದಿಷ್ಟು ಅಡ್ಡ ಪರಿಣಾಮಗಳ ಹೊಡೆತಕ್ಕೆ ಸಿಕ್ಕರೆ ಯೆದೆ ನಲುಗಿ, ಕಾಲು ಸೋತು ಹೆಣ ಹೊತ್ತು ತಿರುಗುತಿರುವ ಭಾರ / ಭಾವ ಬದುಕ ಹೆಗಲಿಗೆ...
___ ರೋಗಕ್ಕೆ ನಮ್ಮ ಮೇಲೆ ಪ್ರೀತಿಯಾಗಬಾರದು - ನಮಗೆ ಪ್ರೀತಿ ರೋಗ ಆಗಲೂಬಾರದು...

ಶ್ರೀ,
...... ಸಾವಿನ ನೋವಿಗಿಂತ ದಿನಾ ನೋವಿನಲಿ ಸಾಯುವುದು ಅಸಹನೀಯವೆನಿಸುತ್ತಲ್ಲವಾ...
ಹೆಣದ ವಜ್ಜೆಯಾದರೋ ಅವರಿವರ ನಾಕು ಹೆಗಲಿಗೆ ಹಂಚಿಹೋಗತ್ತೆ - ನೋವಿನ ಹೊರೆಗೆ ಮಾತ್ರ ನಮ್ಮದೇ ಬದುಕಿನ ಹೆಗಲು ಹರಿಯಬೇಕು...
____ ನುಂಗಲಾರದ ಉಗುಳಲಾರದ ಭಾರ ಭಾರ ಕಟ್ಟುಸಿರು...
&&&

ಶ್ರೀ, ಕೇಳೋ ಇಲ್ಲೀ - 
ಬರೀ ಇಪ್ಪತ್ತು ಮತ್ತೊಂದು ದಿನದ ನಿರಂತರತೆ ಸಾಕಂತೆ ನಾವು ಮಾಡೋ ಕ್ರಿಯೆಯೊಂದು ನಮ್ಮ ನಿತ್ಯವಿಧಿಯಾಗಿ ರೂಢಿಗತಗೊಳ್ಳೋಕೆ...
ನಿಶ್ಯಬ್ದದಲಿ ತಣ್ಣಗೆ ಬಂಧವೊಂದನು ಕೊಲ್ಲೋದೂ ಅಷ್ಟು ಸುಲಭವಾ ಹಂಗಾರೆ...
ಮಾರನೇದಿನವೇನು ಕರೆದು ಮಾತಾಡಬಾರದು ಅಂತೇನಿಲ್ಲ, ಆದ್ರೆ ಮಾತು ಅಷ್ಟು ಸರಾಗ ಹುಟ್ಟಲಿಕ್ಕಿಲ್ಲ ಅಲ್ವಾ...
ಎಳೆದು ಜೋಡಿಸಿದ ದಾರದಲ್ಲಿ ಗಂಟೊಂದು ಹಂಗೇ ಉಳೀತದಲ್ಲ...
___ ಬಲು ಕಠಿಣ ಕಣೋ ನಿರ್ವಾತದ ಶಾಸನ...
&&&

ಏನೋ -
ಯಾಕೆ ಯಾರೂ ನಿನ್ನೊಡನೆ ಹೆಚ್ಚು ದಿನ ಜೊತೆಗಿರಲಾರರು...?
ನನ್ನ ಹೊರತು ನಂಗೆ ಅಷ್ಟಾಗಿ ಬೇರ್ಯಾರೂ ಕಾಣರು - ಬದಲಾಯಿಸಲು ಹೊರಡುವವಗೆ ಅಲ್ಲಲ್ಲಿ ಅಷ್ಟಿಷ್ಟಾದರೂ ಬದಲಾಗಲೂ ಗೊತ್ತಿರಬೇಕಿತ್ತು...
ಹಂಗಂತ ನೀನು ಅಷ್ಟೊಂದು ಕೆಟ್ಟವನೆಂದೇನೂ ಅನ್ನಿಸಲ್ವಲ್ಲ - ಒಂದು ಚಂದ ಒಡನಾಟವೇ...!
ಕೆಟ್ಟವನಲ್ಲ ಅಂದರೆ ಒಳ್ಳೆಯವನೂ ಅಂದಂಗಲ್ವಲ್ಲ ಮತ್ತು ಕೆಟ್ಟವನಲ್ಲ ಎಂಬುದು ಒಳ್ಳೆಯದಕ್ಕೆ ಸಮಾನಾರ್ಥಕ ಪ್ರಮಾಣ ಪತ್ರವೂ ಅಲ್ಲ; (ಅಷ್ಟೇನೂ) ಕೆಟ್ಟವನಲ್ಲ ಅಷ್ಟೇ - ಅಲ್ಲೆಲ್ಲಾ ನಾನು ಒಂಥರಾ ಬದುಕಿನೊಂದು ಹಾದಿಯ ಮಧುರ(?) ಅವಘಡ...
ಏನೋಪಾ, ನಿನ್ನ ಭಾಷೆಯೇ ತಿಳಿಯಲ್ಲ...
ಹೂಂ, ಅದೇ ಸಮಸ್ಯೆ; 'ಭಾಷೆ'ಯಿಲ್ಲದವನು - ಅವರಿವರು ಕೇಳಲು ಬಯಸುವ ಮಾತನು ನಂಗೆ ಹೇಳೋಕೇ ಬರಲ್ಲ, ಯೆದೆಯಲಿಲ್ಲದ ಮಾತು ನಾಲಿಗೆಗೆ ಹೊಳೆಯೋದೇ / ಹೊರಳೋದೇ ಇಲ್ಲ; ಮತ್ತೆ ಅವರೆದೆಗಿಳಿವ ಪದಗಳಲಿ ಬದುಕ ಭಾವಗಳ ಬಿಡಿಸಿ ಅವರೆದುರು ಹರವಲು ನಂಗೆ ತಿಳಿಯೋದೇ ಇಲ್ಲ...
ಅಯ್ಯೋ ಸುಮ್ನಿರು ಮಾರಾಯ...
...........................
___ ಎನ್ನ ಹೊರತು ಅನ್ಯರ(ರಿ)ಲ್ಲ - ನನ್ನ ಕೊಲ್ವವರು, ಹಾಂಗೇ ಯೆನ್ನ ಕಾಯ್ವವರೂ...
&&&

ಕೇಳಿಲ್ಲಿ -
"ಸಾವಿನಂಥಾ ಗಾಢ ನಿದ್ದೆ
ಮತ್ತು 
ನಿದ್ದೆಯಲ್ಲೇ ಸಮಾಧಾನದ ಸಾವು..."
ಆಹಾ...!! 
ಎರಡೂ ಎಂಥ ಚಂದ ಕನವರಿಕೆಗಳು...
___ ಪಡೆದು ಬಂದಿರಬೇಕು ಬಿಡು...
&&&

ನಗುತಿರು ವತ್ಸಾ -
ಅಪ್ರತಿಮ ಸೌಂದರ್ಯ ಅಂದರೆ ಕಾದಿಟ್ಟುಕೊಂಡ ಗಟ್ಟಿ ಎದೆಯ ಯೌವನ ಅಲ್ವೇನೋ...
ಜಗಜಟ್ಟಿ ಯೌವನವೆಂದರೆ ಸಾವು ನೋವಿನಲೂ ಸೋಲರಿಯದ ಮುಕ್ತ ನಗು ಕಣೋ...
ಗಟ್ಟಿ ನಗು, ಜಟ್ಟಿ ಗುಂಡಿಗೆ ಪರಸ್ಪರ ಸಲಹಿಕೊಳ್ಳುವಾಗ ಬದುಕಿನ ಕ್ಷಣ ಕ್ಷಣದ ಕಣ ಕಣವನೂ ಆಸೆಯಿಂದ ಅದಿದ್ದಂಗೇ ಅರ್ದು ಕುಡಿಯೋ ಅಮಲಿಗೆ ಬೇರೆಯದೇ ಎತ್ತರ ನೋಡು ಮರೀ...
____ ಬದು(ಕಿನ)ಕೆಂಬ ಸರಳ ಆಧ್ಯಾತ್ಮ...
&&&


ವತ್ಸಾ -
ಏನ್ಗೊತ್ತಾ, ಸಂಪರ್ಕದ ದಾರಿಗಳೇ ಇಲ್ಲದ ಊರಿಗೆ ಮೇಘವೂ ದೂತನಾಗಿ, ಹಕ್ಕಿಯೂ ಅಂಚೆಕಾರನಾಗಿ ಪ್ರೀತಿ ಮಾತು ಮನಸುಗಳ ಸೇರುತ್ತಿತ್ತಂತೆ ಆಗ; ಸುಳ್ಳಲ್ಲ, ಕಾಡುವ ಕಾಡು ಕೀಟಗಳೂ ಕಾಲನ ಗತಿ ಸೂಚಕಗಳಾಗುವಲ್ಲಿ ಸಂವಹನಕ್ಕೆ ನೂರು ಹಾದಿ - ಚಂದಕೆ ಒಡನಾಡುವ ಒಲವಿತ್ತು ಅಲ್ಲಿ ಅಷ್ಟೇ...
ಕೂತಲ್ಲೇ ಕೂತು ಕೈಯ್ಯಲ್ಲೇ ಜಗದ ಆಳ ಅಗಲ ಅಳೆವ ಸಾಧನವಿದ್ದೇನು ಸಾಧನೆ - ಸಣ್ಣ ಕಾಳಜಿ, ಹಿಡಿಯಷ್ಟು ಪ್ರೀತಿ, ಹೋಗಲಿ ಒಂದು ಮಾತು ಶುಭದ 'ಪ್ರತಿಸ್ಪಂದನೆ'ಗೆ ಪುರುಸೊತ್ತಿಲ್ಲದಂತೆ ಭಾವಗಳ ಬರಡು ಮಾಡಿಕೊಂಡು ಬರೀ 'ಪ್ರತಿಕ್ರಿಯೆ'ಗಳಲ್ಲೇ ಮನಸನ್ನು ಒಣ ಹಾಕುವಲ್ಲಿ ಓಡುವ ಸಮಯ ಒಂದು ಸುಳ್ಳಲ್ಲ ಖರೆಯಲ್ಲ ಎಂಬಂತಾ ಸುಲಭ ಸಬೂಬು ಇಲ್ಲೀಗ - ಬಿಡು, ಒಪ್ಪವಾಗಿ ಒಡನಾಡಲು ಒಲವಿರಬೇಕಷ್ಟೇ...
___ ಪ್ರೀತಿಸುವುದನು ಪ್ರೀತಿಯಿಂದ ಕಾಯ್ದುಕೊಳ್ಳಲರಿಯದವರ ಕಾಲ...!!
&&&

ಕೇಳಿಲ್ಲಿ -
ಇಲ್ಲೆಲ್ಲೋ ನೆರೆದ ನನ್ನವರ ಸಂತೆಯಲ್ಲೂ "ಗೆಳೆತನ" ಎಂಬುವ ಸಾದಾ ಶಬ್ದವೊಂದು ಕಿವಿಗೆ ಬಿದ್ದರೂ ನಿನ್ನ ಮೊಗವೇ ಕಣ್ಣ ತುಂಬುವಾಗ ಇಲ್ಲಿಯದೆಲ್ಲಾ, ಈ ಬಂಧ ಬಾಂಧವ್ಯವೆಲ್ಲಾ ನಶ್ವರ ಎಂಬೋ ಮಾತಿಗ್ಯಾವ ಕಾರಣವೂ ಇಲ್ಲ...
'ಸಾವೊಂದೇ ನಿತ್ಯ ಸತ್ಯ' ಎಂದು ಹಲುಬುತ್ತಾ ನಿರಾಶನಾಗಿ ನಿಂತವನಿಗೆ 'ಬದುಕೂ ಮಿಥ್ಯಾ ನಗೆಯೇನಲ್ಲ' ಎಂಬುವುದನು ನಗುತ್ತಾ ಹೆಗಲು ತಬ್ಬಿ ದರ್ಶನ ಮಾಡಿಸಿದ ಗಟ್ಟಿ ಹೆಗಲಿಗೆ "ಗೆಣೆತನ" ಯೆಂದಲ್ಲದೇ ಬೇರೇನೂ ಹೆಸರಿಲ್ಲ...
____ ಈ ಬದುಕೆಷ್ಟು ಚಂದ ಚಂದ - ನಿನ್ನ ಮಡಿಲ ಸಾಂಗತ್ಯದಿಂದ; ಕುಚೇಲನೆದೆಯ ಶ್ರೀಮಂತಿಕೆ - ಕೃಷ್ಣನೊಡಲ‌ ಸಖ್ಯ...
&&&

ವತ್ಸಾ -
ಆರೆಂಟು ನೂರು ಸುಧೀರ್ಘ ವರ್ಷಗಳ ಕಾಲ ಭರತ ಭೂಖಂಡವನ್ನು ಆಳಿದ್ದಲ್ಲ ಮಹಮ್ಮದೀಯರ ಗೆಲುವು - ಧರ್ಮ, ದೇವಾಲಯಗಳ ಭಗ್ನ ಮಾಡುವ ನೆವದಲ್ಲಿ ಇಲ್ಲಿನ ಜ್ಞಾನ ಶಾಖೆಗಳ ಮೂಲವನ್ನು ಸುಟ್ಟುರಿಸಿದ್ದು...
ಇನ್ನೂರು ವರ್ಷಗಳು ದೇಶವ ಶಾಸಿಸಿದ್ದಲ್ಲ ಬ್ರಿಟೀಷರ ಸಾಧನೆ - ಆಧುನಿಕ ಶಿಕ್ಷಣದ ಹೆಸರಲ್ಲಿ ಎರಡು ಸಾವಿರ ವರ್ಷಗಳಿಗಾಗಿಯೂ ಮಿಗುವಷ್ಟು ಗುಲಾಮಿತನವ ನಮ್ಮ ತಲೆಗೆ ತುಂಬಿ ಹೋದದ್ದು...
ನಿನ್ನೊಳಗೆ ನೀನು ಲಘುವಾಗದ ಹಾಂಗೆ ನಿನಗೆ ನಿನ್ನ ಪರಿಚಯಿಸುವ/ಕಾಯ್ದುಕೊಡುವ ಆತ್ಮ ಸಾನ್ನಿಧ್ಯದ ಗುರುವಿನ ಗುಲಾಮನಾಗು ಅಂದರು ದಾಸರು - ನಾವಿಲ್ಲಿ ನನ್ನತನದ 'ಗುರು'ವೊಂದನುಳಿದು ಉಳಿದೆಲ್ಲಕೂ ಗುಲಾಮರಾದಂತೆ ಅಂಡಲೆಯುತಿದ್ದೇವೆ ಅನ್ಸತ್ತೆ - ಅನುಶಾಸನವಿಲ್ಲದ ಶಾಸನ, ಶಿಕ್ಷಣ...
ಗುರುವು ಪೂರ್ಣಿಮೆಯಂಥ ಬೆಳಕಿನ ಭಾವವಾಗಬೇಕಿತ್ತಲ್ಲವಾ - ಗುರುಪೂರ್ಣಿಮೆ ದಿನಾಚರಣೆಯಷ್ಟೇ ಆಗಿದೆ ಅನ್ಸಲ್ವಾ...!!
___ ಶುಭಾಶಯವು ನಿನಗೆ...
೧೦-೦೭-೨೦೨೫
&&&

ಹೇಳೋ -
ಮೊದಲ ಭೇಟಿಯ ಸಂಭ್ರಮ ಮತ್ತು ಕೊನೇಯ ಮಿಲನದ ತೀವ್ರತೆ ಅಥವಾ ವಿಷಾದ - ಎರಡರಲ್ಲಿ ಯಾವುದರ ಘಮ ಹೆಚ್ಚು ಗಾಢ ಅಂಟುತ್ತದೆ ನೆನಪ ಕೋಶಕ್ಕೆ / ಬದುಕ ಪಾಶಕ್ಕೆ...!?
ಹುಟ್ಟು/ಬದುಕು ಮತ್ತು ಸಾವು ಸೇರುವ ಅತಿಸೂಕ್ಷ್ಮ ಬಿಂದು ಯಾವುದು...!??
___ ಕೇಳಬಾರದ ಪ್ರಶ್ನೆಗೆ ಉತ್ತರ ಸಿಕ್ಕರೆ ಉಳಿಗಾಲವಿಲ್ಲ ನಗೆಯ ಕಂದೀಲಿಗೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

ಗೊಂಚಲು - ನಾಕ್ನೂರರ್ವತ್ತೆಂಟು.....

ಕಾಡು ಹೂವಿನಂಥ ಕಪ್ಪು ಹುಡುಗಿ.....

ಜಗವನೆಲ್ಲ ಗೆದ್ದೇನು ಸಾಧನೆ
ಅವನ ಅಹಂಕಾರವ ಗೆಲ್ಲದ ಮೇಲೆ...
ತಾನೆಂಬುದೇ ಪ್ರೀತಿ ಅಂತಂದು ಸಾಧಿಸುವವನ ಅಹಂಭಾವವ ಪ್ರೀತಿಯಿಂದಲೇ ಕಾದು ಕೊಲ್ಲದ ಮೇಲೆ...
___ ನನ್ನ ನಾನು ಗೆಲ್ಲಬೇಕು...

ಮನಸು: ಒಂದೊಮ್ಮೆ ಸೋಲಬೇಕು - ಪ್ರೀತಿಯಲಿ ಕರಗಿ...
ದೇಹ: ಒಮ್ಮೆ ಗೆಲ್ಲಲೇಬೇಕು - ಮೋಹಾಮದದಲಿ ಬೆವರಿ...
ಪ್ರಜ್ಞೆ: 'ನಾನು' ಸೋತಲ್ಲದೇ ಮನಸು ಪ್ರೀತಿಯ ಹೆಗಲಿಗೊರಗುವುದಿಲ್ಲ, 'ನಾನು' ಸೋತು ಒಲುಮೆಯಲಿ ನನ್ನ ನಾನು ಗೆದ್ದಲ್ಲದೇ ಜೀವದ ಬಲ ಗೆಲುವಾಗಿ ಹೊಮ್ಮುವುದಿಲ್ಲ...
___ ನಾನಳಿದು ನಾನುಳಿಯಬೇಕು...
&&&

ರಾಧೆ ತೋರಿದ ಒಲವು 
ಕರಿಯನ ಹಾದಿಯ ಬೆಳಕಾಗಿ 
ಜಗವ ಪೊರೆದ ಕಾರುಣ್ಯ ಗಾಥೆಯ
ಪ್ರೀತಿ ಅಂತ ಕೂಗಲಾ...? 
ಬೆಳಕೂ ಯೆಂದು ಸಾರಲಾ...??

ಗೋಕುಲದ 
ಗೋಪಿಯರ
ಜಗದ 
ಗೋವೆದೆಯ
ಗುಟ್ಟುಗಳ ಭಾರ ಇಳುಕಿದ ಪ್ರೇಮ 
ಮಡಿಲು ತುಂಬಿದ ದಿನವಂತೆ...
___ ಅವರ ನೆಪದಲ್ಲಿ ನಿನ್ನ ನೆನಪು...
೧೫.೦೮.೨೦೨೫
&&&

ಕಪ್ಪು ಶರಧೀ -
ನಾ ತಬ್ಬುವ ನೂರು ನೂರಾರು ಅನುಭವ, ಅನುಭಾವಗಳಲೂ ರೋಮಾಂಚವನೇ ಸುರಿವ ನವಿರು ಭಾವ ವಲ್ಲರಿ ನೀನು...
ನನ್ನ ಪರಮ ಪೋಲಿ ಕವಿತೆಯೊಳಗಣ ಒಂದೆಳೆ ಆಧ್ಯಾತ್ಮವೂ ನೀನೇ...
ನಗ್ನತೆಯ ದಿವ್ಯತೆಯಲಿ ಇರುಳ ಮೂರು ಪಾದಗಳ ಒಂದಾಗಿ ಅರ್ಚಿಸಲು ಎನ್ನೆದೆಯು ಹಪಹಪಿಸೋ ಮೋಹದ ಸಿರಿ ಸೊಬಗಿನ ಶೃಂಗಾರ ಶರ ಮಂಜರಿ ನೀನೂ...
___ ಇರುಳು ಕನಸ ಕೂಡುವ ಹೊತ್ತಲ್ಲಿ ಕನಸು ಜೋಡಿಯಾಗು(ಡು)ವ ಕನಸಿಗೆ ಮೈಮನವ ಕೂಡಿ ಬೆವರ ಹನಿ(ರಿ)ಸುವ ಬಾ...
&&&

ಮೌನವ ಮುದ್ದಾಡುವ ಹೂವಂದ ಗಂಧ, ಕರಿಮೋಡ ಮಳೆ, ಕಗ್ಗಾಡು ಕವಲು, ಅಲೆಅಲೆ ಅಗಾಧ ಶರಧಿ - ಯೆನ್ನೆದೆಯ ಕೊರಳನು ಸವರಿ ಪ್ರೀತಿ ಹೇಳಿದ ಯಲ್ಲಯೆಲ್ಲಾ ಪ್ರಿಯ ಮಾತಿನ ಸನ್ನಿಧಿಯಲೂ ಈ ಭಾವಕೋಶದಲಿ ಸದಾ ಕನಲುವ ಅಸ್ಪಷ್ಟ ಚಿತ್ರ ಅವಳೇನೇ / ಅವಳದೇನೆ...
ಯೆನ್ನೊಳಗೆ ಹಾಡು ಹುಟ್ಟುವ ಸಮಯಕ್ಕೆ ಸರಿಯಾಗಿ ಹುಟ್ಟಿದವಳು - ದೇವರಿಗೂ ಕೇಳದಂತೆ ನಾ ಗುನುಗುವ ಹಾಡವಳು (ದೃಷ್ಟಿಯಾಗಬಾರದು ನೋಡಿ)...
___ ಕಪ್ಪು ಹುಡುಗಿ...
&&&

ಮಿಲನದ ಬೆವರಿಗಂಟಿ ಪ್ರೀತಿ ಗಂಧ ಯೆದೆಯಿಂದ ಎದೆಗೆ ದಾಟುವುದು, ಇರುಳು ತಾನಳಿಯದಲೇ ಬೆಳಕಿನ ಬೆರಗ ಕಾಣುವುದು - ನಿನ್ನ ಬೆತ್ತಲೆ ಬೇಗೆಯಲಿ...
___ ನೆನಪುಗಳ ಸೃಜಿಸಿ ಪ್ರಣಯ ಕಾವ್ಯ ಚಿಗುರುವ ಹಾದಿ...
&&&

ಕೇಳೇ -
ಊರ ಗದ್ದಲವೆಲ್ಲ ಕಳೆದು 
ನೀರವ ಇರುಳು ಆಕಳಿಸುವಾಗ,
ಹಾಸಿಗೆ ಕಾಲ್ಚಾಚಿ ಮಲಗಿ,
ತೇಲುಗಣ್ಣಿನೆಚ್ಚರಕೆ
ದಿಂಬಿನೆದೆಯಲಿ ಹೆರಳ ಘಮ ಹೊಯ್ದಾಡುವಾಗ,
ಉಸಿರ ಬಿರುಸಿಗೆ ರಕುತ ದಿಕ್ಕು ತಪ್ಪಿ ಬಿಸಿಯೇರುವಲ್ಲಿ,
ದಿಗ್ಗನೆದ್ದು ಮಂಡಿಯೂರಿ ಕೂತು
ಮೈಯ್ಯೆಲ್ಲಾ ವ್ಯಾಪಿಸಿ, ಆಲಾಪಿಸುವ,
ನಿನ್ನೊಡನಾ(ಗೂ)ಡಿ ತೋಳ್ಗಳ ಕಡಗೋಲಾಗಿಸಿ ಮೈಮನವ ಕಡೆಯುವ 
ಕಡು ಮೋಹೀ ನಿತ್ಯ ಬಯಕೆಗೆ,
ಮಾರ ಮದ ಬಾಗಿಸುವ ರತಿ ರಾಗ ಬೆತ್ತಲೆ ಆಸೆಗೆ
ನಿನ್ನ(ದೇ) ಹೆಸರು...
____ ಕಾಡು ಹೂವಿನಂಥ ಕಪ್ಪು ಹುಡುಗಿ...
&&&

ಕತ್ತಲಲ್ಲಿ ಬೆಳಕಾಗಿ ಅರಳುವ ಕಪ್ಪು ಹುಡುಗೀ -
ಕೇಳೇ,
ಇದು ಒತ್ತಾಯ ಮಾಡುವ ವಿಷಯವಂತೂ ಅಲ್ಲ...
ಅದು ಒತ್ತಾಯದಿಂದ ಮೂಡುವ ಭಾವವೂ ಅಲ್ಲ...
ಹಂಗಾಗಿಯೇ
ಎಂದೂ ನೀನೆಂಬ ನನ್ನ ಮೋಹದೆದೆ ಮಂಜರಿಯ ಒತ್ತಾಯ ಮಾಡಿ ಕರೆ(ಡೆ)ದು ಕೆಡುವುದಿಲ್ಲ...
ಆದರೂ,
ಒಪ್ಪಿಗೆಯಿಂದ ಕಾಡುವ, ಕೂಡುವ ಕೊಂಡಾಟದ ಚಂದ ಬೇರಿನ್ನಿಲ್ಲ...
ಅದಕೆಂದೇ
ಮತ್ತೆ ಮತ್ತೆ ನಿನ್ನ ಹೆಸರ ಕೂಗುವುದು, ಬೆತ್ತಲ ಬಳಸಿದ ಉಸಿರು ಕಾದುಕ್ಕುವ ಆ ಮಿಲನ ಮಹಾಪೂಜೆಯ ಇರುಳಿಗಾಗಿ ಕಾದು ಕಾದು ಕಾಯುವುದು...
ಓಯ್,
ಒಂದೊಮ್ಮೆ ಬಂದು ಹೋಗಬಾರದೇ ಮೆಲ್ಲಗೆ - ಈ ಬಡ ಜೋಗಿಯ ಜೋಪಡಿಗೆ - ಧುಮುಧುಮು ಸುರಿ ಮಳೆಯ ಆಷಾಢದ ಛಳಿ ಛವಿಯ ಕತ್ತಲ ಹೊತ್ತಿಗೆ...
___ ಮೋಹಾ ಮದ್ಯದ ಮತ್ತಿನಿರುಳಾಸೆಯ ಮರುಳು...
&&&

ಮುಡಿದ ಮಲ್ಲಿಗೆ ಮುಡಿದಂತೇ ಮುಡಿಯಲ್ಲೇ ಬಾಡುವಾಗ ಉಸಿರಿಗೆ ತಾಕಿದಂತಾಗುವ ಹೊತ್ತುಗೊತ್ತಿಲ್ಲದೇ ಶ್ವಾಸೋಚ್ಛ್ವಾಸವ ಅವುಚಿ ಹಿಡಿವ ನಿನ್ನ ತೋಳಂಚಿನ ಘಮ - ನೆನಪಾಗಿ (ಕ)ತುಟಿಯ ತೇವವನು ಕಾಡುವ 'ಪ್ರಣಯದೆಂಜಲಿಗೆ ಮಡಿಯ ಹಂಗಿಲ್ಲ ಕಣೇ' ಎನ್ನುತಾ ಮುದ್ದಿಗಿಳಿಯುವ ನಿನ್ನಾ ನಾಲಿಗೆಯ ದರಕು ದರಕಿನ ರಣ ರುಚಿ  - ಮತ್ತೀ ಆಷಾಢದ ಒಂಟಿ ಸಂಜೆ...
ಏ ಇವನೇ -
ಮೋಹಕ್ಕೆ ಇಟ್ಟ ಹೆಸರೇ ವಿರಹಕ್ಕೂ ಲಾಗೂ ಮಾರಾಯಾ...
___ ಕನಸಲ್ಲಿ ಕಾಡು ಮಲ್ಲಿಗೆಯಂತರಳುವ ಮೈಯ್ಯಿ ಎಚ್ಚರವನು ಮಧುರವಾಗಿ ಶಪಿಸುತ್ತದೆ - ಆಷಾಢವೆಂದರಿಲ್ಲಿ ಮಾಸವಲ್ಲ ನಮ್ಮ 'ನಡು'ವಿನ ತಿಂಗಳ ಮಾಪು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

Friday, August 1, 2025

ಗೊಂಚಲು - ನಾಕ್ನೂರರ್ವತ್ಯೋಳು.....

ತೇದಿ - ಒಂದನೇ ಅಗಸ್ಟು ಹತ್ತೊಂಬತ್ನೂರಾ ಎಂಬತ್ತೆರಡರಿಂದ ಈವೊತ್ತಿನವರೆಗೆ..... ಆಯಿ - ಬದುಕಿದ್ದಷ್ಟು ಕಾಲದಲ್ಲಿ ಯಾವುದೇ ತಿರುವಲ್ಲಾದರೂ ಅಂದು ಅವಳೇನಾದರೂ ಒಂದೇ ಒಂದು ಸಲ ಇನ್ನಾಗದು ಸೋತೆ ಅಂತ ಮುಖ ತಿರುವಿದ್ದರೂ ಮುಗಿದಿತ್ತು ನಂಗೆ ಇಂದು ಬದುಕುವ ಚೈತನ್ಯವೇ ಸತ್ತಿರುತ್ತಿತ್ತು... ಹೆತ್ತಿದ್ದಷ್ಟೇ ಅಲ್ಲ ಅವಳು, ಇಂದೀಗ ದೇವರೂ ಬೇಕಿಲ್ಲದಂತ ಗಟ್ಟಿ ಬದುಕ ಕಟ್ಟಿ ಕೊಟ್ಟಿದ್ದೂ ಅವಳದೇ ಋಣ... ___ ಬಯಲ ಬೆಳಕಲ್ಲಿ ನನಗೆ ನಾನು ಸಿಕ್ಕ, ನನಗೂ, ಜಗಕೂ ಅವಳು ನನ್ನ ಪರಿಚಯಿಸಿದ ಇಂಥದ್ದೇ ಒಂದು ಮುಂಜಾವಿಗೆ ಅವಳ ಹೆಸರು, ಅವಳೇ ಉಸಿರು...

ಕಾಲನ ಪಿರೂತಿ ಬಲು ದೊಡ್ಡದು...

ಇನ್ನೊಂದು ಮತ್ತೊಂದು ಬೆಳಗಿನೆದುರು ಈ ಕಣ್ಬೆಳಕಿನ್ನೂ ಉರಿಯುತಲೇ ಇದೆ...

ಇನ್ನೂ ಏನ್ ಬೇಕು - ನನ್ನ ನಾನು ಪ್ರೀತಿಸಿಕೊಳ್ಳಲು, ನನ್ನೊಂದಿಗಿನೆಲ್ಲದಕ್ಕೂ ಕೃತಜ್ಞನಾಗಿರಲು...

ಪುಕಾರುಗಳೇನಿಲ್ಲ ನಿನ್ನೊಂದಿಗೆ - ತಕರಾರೇನಿದ್ದರೂ ನಂದು ನನ್ನೊಂದಿಗೇ...

ಧನ್ಯತೆಯ ಧನ್ಯವಾದವು ನಿನಗೆ ಬದುಕೇ...

ಶ್ರೀ -

ಸಕಲ ನೋವಿಗೂ ನಗುವೇ ಮದ್ದು...

ನಕ್ಕುಬಿಡಬೇಕು, 

ಒದ್ದು ಬರುವ ನೋವ ನವೆಯನು ಝಾಡಿಸಿ ಒದ್ದು...

ಕೇಳಿಲ್ಲಿ,

ನಗೆಯ ಹುಡುಕುವುದಲ್ಲ - ಪ್ರೀತಿ ಹಡೆಯಬೇಕು...

ಪ್ರೀತಿಯ ಅರಸುವುದಲ್ಲ - ನಕ್ಕು ಹರಿಯಬೇಕು...

ಅಂದ್ಯಾವುದೋ ಇಂಥದ್ದೇ ರಣ ಕರೆವ ಮುಂಜಾವಿನಲಿ ಈ ಹುಟ್ಟು ಗುರುತಾಗಿದೆ...

ಇಂದ್ಯಾವುದಾದರೂ ತಿರುವಿನಲಿ ನೀ ಸಿಕ್ಕುಬಿಟ್ಟರೆ ಆ ಹುಟ್ಟು ಹಬ್ಬ(ವೂ) ಆಗಬಹುದು...

ಪಕ್ಕಾ ಪ್ರೀತಿಯ ಅರಿವಿಲ್ಲದವನು - ಪ್ರಾಯದ ಖಾತೆ ಕಿರ್ದಿಯ ಯಾರಿಗೆ ಒಪ್ಪಿಸುವುದು...

____ "ಪಾಪಿ ಚಿರಾಯು ಮತ್ತಾ ಲೆಕ್ಕದಲ್ಲಿ ನಾನು ಚಿರಂಜೀವಿ..."

ವತ್ಸಾ, ಕೇಳೋ ಇಲ್ಲೀ -

ಬೆನ್ತಟ್ಟುವ ಕೈಗಳ ಹುಡುಕಾಡಿ ಕೊರಗದೇ

ಎದೆ ತಟ್ಟಿಕೊಂಡು ಮಂದಹಾಸವ ಸುರಿದುಕೋ...

ಕನ್ನಡಿಯೂ ಮೆಚ್ಚುವಂತೆ ಕಣ್ಣ ಕುಸುಮ ನಗುತಲಿರಲಿ...

ಏಕಾಂತದ ಜೋಳಿಗೆಯಲಿ ಕಂತೆ ಕಂತೆ ನಗೆ ಬಿಲ್ಲೆಗಳಿರಲಿ...

ಹೌದೂ -

"ನಗುವ ವಿಲಾಸಕೆ ನನಗೆ ನಾನೇ ನೆಪವಾಗಬೇಕು - ನೆನಪಾಗಬೇಕು..."

ವತ್ಸಾ ಅನ್ನುವಾಗ ಅವರಿವರಿಗೂ ಎದೆಯಲೊಂದು ನಗೆಯ ಕಿಡಿಯೇ ಮಿಸುಗಬೇಕು...

____ ೧೯೮೨ರ ಆ ಸುದಿನದಲಿ ಹುಟ್ಟಿದ ನಗೆಮುಗುಳೊಂದಕೆ ಇಟ್ಟ ಹೆಸರು - "ಶ್ರೀವತ್ಸ..." 😜 ಓಯ್, ಹೇಳದೇ ಸರಕ್ಕನೆ ಸತ್ತು ಬಿಡಬಹುದಾದ ಜೀವವೇ, ಕೇಳದೇ ಸುಮ್ಮನೇ ಕೊಟ್ಟುಬಿಡು ಒಳಗುಡಿಯ (ಒಳಗಡಗಿದ) ಒಂಚೂರು ಪ್ರೀತಿಯ - ಅಲ್ಲಿಂದ ಭರಪೂರ ಕನಸುಗಳಾ... ಇಲ್ಕೇಳು, ನಾನು ನನ್ನನು ಬೇಷರತ್ ಸಂಭ್ರಮಿಸುವ ಹುಕಿಯಲ್ಲಿದ್ದೇನೆ... ನಿನ್ನೆ ಅದು ಸಿಕ್ಕಿದ್ದು, ನಾಳೆ ಇನ್ನೇನೋ ಸಿಗುವುದು ಎಲ್ಲಾ ಭ್ರಮೆಯೇ ಆದರೂ, ಆ ನೋವನೂ ನಾನೀಗ ಪ್ರೀತಿಯಲೇ ಸ್ವಾಗತಿಸುತ್ತೇನೆ - ಸುಳ್ಳು(ಳ್ಳೇ) ಸಡಗರವನೂ ನಗೆಯಾಗಿ ಮೇಯುತ್ತೇನೆ... ಕಾರಣ, ನನ್ನ ನಾನು ಬೇಹದ್ ಪ್ರೀತಿಸುವ ಸಂಭ್ರಮದಲ್ಲಿದ್ದೇನೆ... ಅದಕೇ, ಕೇಳದೇ ಸುಖಾಸುಮ್ಮನೆ ಕೊಟ್ಟು ಪಡೆವ ವಿದ್ಯೆಯ ಕಲಿಸೆಂದು ಕೇಳುತ್ತಿದ್ದೇನೆ... ___ ಪಾತ್ರದಲಿ ಹಿರಿಯ ರುದಯಕ್ಕೆ ಗಾತ್ರದಲಿ ಹಿರಿದು ಹೃದಯದ ಮೌನ ಪ್ರಾರ್ಥನೆ... ಪ್ರತಿ ಬೆಳಗೂ ಆಲಸ್ಯದಿ ಕಳೆದ ಆಯಸ್ಸಿನ ಲೆಕ್ಕ ಹೇಳಿ ಹೇಳಿ, ಬೆಳಕಿನ ಕೋಲಲಿ ಕಣ್ಣ ತಿವಿದು, ಒಮ್ಮೆಲೆ ಮೈಮನದ ತುಂಬಾ ಏನೋ ವಿಚಿತ್ರ ಗಡಿಬಿಡಿಯ ಕನವರಿಕೆ... ಹೊಸ ಹಗಲು ಕೈನೀಡಿದಾಗಲೆಲ್ಲಾ ಹಳೆಯ ವರಾತಗಳನೆಲ್ಲಾ ಹಾಸಿಗೆಯಂತೆಯೇ ಮಡಚಿ ಮೂಲೆಗಿಟ್ಟು ಎದ್ದು ಹೊಸತೇ ಮನುಷ್ಯನಾಗುವ ಕಳ್ಳ ಹುರುಪು... ಕಾಲನ ಕಡಲ ಹಾಯುವ ದೋಣಿಯ ಪಯಣಿಗರ ಪಟ್ಟಿಯಲಿ ಇನ್ನೂ ನನ್ನ ಹೆಸರು ಉಸಿರಾಡುತಿದೆ - ಯಾರ ಆಶೀರ್ವಾದವೋ... ಹೌದು, ಹುಟ್ಟಿನ ಆ ದಿನ / ಈ ತೇದಿ ಶುಭದಿನವೇ ಸೈ... 🫂 ಯೇ,

ಇಲ್ನೋಡೋ - ಈ ಘಳಿಗೆ ಎಷ್ಟು ಚಂದ ಅಲ್ವಾ...

ಇದರ ಬಗ್ಗೆ ಏನಾದ್ರೂ ಬರಿಯೋ... 

ಈಗ ಏನನ್ನಿಸ್ತಿದೆ ಅನ್ನೋದ್ನ ಈಗ್ಲೇ, ಇಲ್ಲೇ ಬರ್ದು ಕೊಡು, ನಾನು ಓದ್ಬೇಕು, ಹಂಗೇ ಕಾದಿಟ್ಕೋಬೇಕು ಈ ಕ್ಷಣವ...

ಇಲ್ಲ,

ಎಷ್ಟೇ ಗುದ್ದಾಡಿದರೂ 'ಈ ಕ್ಷಣ'ವ ಬರೆಯಲಾಗುವುದೇ ಇಲ್ಲ - ಉಹೂಂ, ಈ ಕ್ಷಣವ ಹಿಡಿದು ನಿಲ್ಲಿಸಿ ಸುಖ ದುಖಃ ಮಾತಾಡಿಸಲು ನಿನ್ನ ದೇವರಿಗೂ ಆಗಲ್ವಂತೆ, ಇನ್ನು ನಾನ್ಯಾವ ಗಿಡದ ತೊಪ್ಪಲು...

ಎರಡು ಸಾಲು ಗೀಚಬೇಕೆನ್ನುವ ಹೊತ್ತಿಗೆ ಕ್ಷಣ ಕ್ಷಣಗಳಲಿ ತುಂಡು ತುಂಡಾಗಿ ಹಂಚಿ ಹರಿದು ಹೋಗುವ ಕಾಲನ ಓಘದಲಿ 'ಈ ಕ್ಷಣ' ಕನಸಿನಂತೆ ನೆನಪಿನ ಪೆಟ್ಟಿಗೆ ಸೇರಿರುತ್ತದೆ...

ಜಾಣ ನಾನು...(!!) 

ಇಂತಿಪ್ಪ ಈ ಕ್ಷಣಗಳ ಸುಮ್ಮನೆ ಜೀವಿಸಲೆಳಸುತ್ತೇನೆ - ನಿನ್ನೊಂದಿಗೆ, ನಿನ್ನೊಡನಾಡಿದ ನೆನಪುಗಳೊಂದಿಗೆ, ನಿನ್ನದೇ ಕನಸುಗಳೊಂದಿಗೆ, ನಿನ್ನವನಾಗಿ(ಯೂ) ನನಗೇ ನಾ ಸಿಗುತ್ತಾ...

ದಾಖಲಿಸುವುದೇ ಆದರೆ ನೆನಕೆಗಳ, ಕನವರಿಕೆಗಳ ಬರೆದಿಡಬೇಕಷ್ಟೇ - ಈ ಕ್ಷಣವ ಉತ್ಕಟವಾಗಿ ಜೀವಿಸಿದರೆ ನಿನ್ನೆ ನಾಳೆಗಳ ಕಡೆಯಬಹುದಷ್ಟೇ ಕವಿ - ಎದೆಗಣ್ಣ ಪಟದೊಳಗಿನ ಸ್ಥಬ್ದಚಿತ್ರಕ್ಕೆ ಅಕ್ಷರಗಳ ಜೀವ ತುಂಬುವ ಸಣ್ಣ ಸಣ್ಣ ಕಟಪಟಿಯಷ್ಟೇ ಸಾಧ್ಯ...

ಹೊರಗಿನ ಗದ್ದಲ, ಒಳಗಣ ಮೌನ ಅಥವಾ ಅದಲೀಬದಲೀ ಮತ್ತು ನಾನು, ನೀನು - ನಿನ್ನೆಗಳಲಿದ್ದಂತೆ ನಾಳೆಗಳಿಗೂ(ಗಳಲೂ) ಸಿಗಬಹುದೇ - ಆ ಧ್ಯಾನದಲಿದ್ದಂತೇ ದಾಟಿ ಹೋಯಿತು 'ಈ ಕ್ಷಣ'...

___ 'ಈ ಕ್ಷಣ'ದ 'ಈಕ್ಷಣ'... *** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

Monday, July 7, 2025

ಗೊಂಚಲು - ನಾಕ್ನೂರರ್ವತ್ತಾರು.....

ಇರಬೇಕಿತ್ತಿನ್ನೂ ನೀನು.....
ಪ್ರೀತಿಯ ನೆನಪಾದರೂ,
ನೆನಹುಗಳನೇ ಪ್ರೀತಿಸಬೇಕಾಗಿ ಬಂದರೂ,
ಅವಳ ಮಡಿಲ ಧ್ಯಾನವೆಂಬುದು ರುದಯ ಮಿಡಿತದ ನಿತ್ಯಾಗ್ನಿ...
ಒಳಿತನೇ ನುಡಿವ, ಮಿಡಿವ, ಪ್ರೀತಿ ಹರಸಿ, ಹಂಚುವ ಒಡಲ ನಗೆಯ ಶಕ್ತಿಸುಧೆಯ ನೆನಪಿನಾಲಾಪವೇ/ನೆನಹಿನಾರಾಧನೆಯೇ ಅಲ್ಲವೆ ಶುಭವೆಂದರೆ...
ನೆನಪು ಅಮ್ಮನಂತೆ - ಅಮ್ಮ ನೆನಪುಗಳ ಸಂತೆ...
ಅಮ್ಮ ಅಮ್ಮ ಬೆಳಗು - ಶುಭದಿನ... 🤱🫂
&&&

ನೂರು ನೂರಾರು ನಗು, ಮಾತು ಕಥೆಗಳ ಈಗಿದ್ದು ಈಗಿಲ್ಲ ಎಂಬಂತೆ ಕೊಂದು, ಎದೆಯ ಕಾವಿಗೆ ಶವದ ಶೀತಲವ ಶಾಶ್ವತವಾಗಿ ಸುರಿದು, ಒಂದು ಕ್ರುದ್ಧ ಮೌನವ ಸ್ಥಾಪಿಸಿ ಅಟ್ಟಹಾಸವ ಮೆರೆವ ಸಾವು...
ಆ ಮರಣ ವಾರ್ತೆಯ ಅನುಗಾಲವೂ ಮಣಮಣಿಸುವ ನೆನಪಿನ ಕೋಶ...
ಕಣ್ಣೆಷ್ಟು ಮಂಜಾದರೂ ಮಸುಕಾಗದ ಮನೆಯ ಮೂಲೆಯಲಿ ತಣ್ಣಗೆ ಮಲಗಿದ್ದವಳ ಸ್ಥಬ್ದ ಚಿತ್ರ...
ಬಯಲಲ್ಲೇ ನಿಂತರೂ ಬೆಳಕೂ ತೊಳೆಯಲಾರದ ಉಸಿರಿಗಂಟಿದ ಮುಟ್ಟುಚಟ್ಟಿನ ಕತ್ತಲು...
ನನ್ನೆದೆಯಲೂ ಉಳಿದದ್ದೀಗ ಚಿತ್ರದ ನಗುವೇ...
ಲೆಕ್ಕ ಮರೆಯಲು ಹೆಣಗುತ್ತಾ, ದಿನಗಳನೆಣಿಸುತ್ತಾ, ದಿನದೂಡುವ ಕರ್ಮ...
___ ದಿನವಿದು ಸೂತಕದ ತೇದಿ (೦೭-೦೭)...

ಹಲುಬಿ ಹಲುಬಿ ಬರೆದು ತೋರಿಕೊಂಡಷ್ಟು ನೋವು ಒಳಗಿದೆಯಾ ಎಂಬುದಲ್ಲ ಪ್ರಶ್ನೆ, ತೋಡಿಕೊಂಡಷ್ಟೂ ಆಯಾ ಕ್ಷಣಕ್ಕಾದರೂ ಬಾಧೆ ತಿಳಿಯಾಗಬಹುದಾ ಎಂಬ ಹಂಬಲ ಅಷ್ಟೇ...
ಹೆಣ ‌ಹೊತ್ತ ಹೆಗಲು ಹಗುರಾದೀತು ಅಂತಲ್ಲ ಖಾಲಿತನದ ಭಾರಕ್ಕೆ ಬಾಳ ಬೆನ್ನು ಮುರಿಯದಿರಲೆಂಬ ಹಳವಂಡವಷ್ಟೇ...
___ ಎಲ್ಲ ಹೋಗುವವರೇ ಒಂದು ದಿನ ಎಂಬ ಅಪ್ರಿಯ ಸತ್ಯದೊಟ್ಟಿಗೇ ನೀನಿರಬೇಕಿತ್ತು ಇನ್ನಷ್ಟು ದಿನವಾದರೂ ಎಂಬ ಪ್ರೀತಿಯ ಆಶೆಯೂ ಸತ್ಯವೇ...
&&&

ತುಂಬಾ ಸುಖದಲಿರುವಾಗ ಧುತ್ತನೆ ಬಂದೆರಗುವ ಅನಾಥ ಭಾವದಲೆಯ ಹೊಡೆತಕ್ಕೆ ಕಗ್ಗಲ್ಲಿನೆದೆಯೂ ತಣ್ಣಗೆ ಕೊರೆಯುತ್ತದೆ...
ನೂರು ಪ್ರೀತಿಯ ನಗೆಯ ಸಂತೆಯ ನಡುವೆಯೂ ಅವಳ ಮಡಿಲ ಬಿಸುಪಿನ ಕೊರತೆ ಕರುಳ ಹಿಂಡುತ್ತದೆ...
ಮುಕ್ತ ಜಗಳವೊಂದಕ್ಕೆ ನಾಲಿಗೆ ಕಡಿಯುವಾಗ ಅವಳು ಇಲ್ಲಿಯದೆಲ್ಲದರಿಂದ ಮುಕ್ತವಾದದ್ದು ಕಡು ಸ್ವಾರ್ಥದಂತೆ ಕಂಡು ಕಾಡುತ್ತದೆ...
ಕಾರ್ಯ ಕಾರಣಗಳ ಉಗೋಡಾದ ವಿವರವಿಲ್ಲದ ಕರುಳ ಕಲಮಲದ ವಿಕ್ಷಿಪ್ತ ಸಂಜೆಗಳಲಿ ಜೋರು ಅವಳ ನೆನಪಾಗುತ್ತದೆ - ಒಳಗೇ ಕುದಿಯುವ ಕಣ್ಣ ಹನಿಗೆ ಕೊರಳು ಕಟ್ಟಿ ಕಡೆಯುತ್ತದೆ...
____ ಇದ್ದು ಕಾಯಬೇಕಾದವಳು, ಹೊರಟೂ ಪೊರೆಯುತಿರುವವಳು ನೆನಪಾಗಿ ಕಾಡುವಳು...


*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

Thursday, June 26, 2025

ಗೊಂಚಲು - ನಾಕ್ನೂರರ್ವತ್ತೈದು.....

ಈಗಲೂ ಒಬ್ಬನೇ ನಗುತ್ತೇನೆ.....

ನಿನಗಾಗಿ ಕಾಯುತ್ತಾ ಬಾಗಿಲಲೇ ನಿಂತಿದ್ದೆ ಅನಾದಿಕಾಲದಿಂದಲೂ - ಎದುರಿನ ಅಗಾಧ ಬಯಲು, ನಿಶಾಂತ ಆಗಸ ಅನಾಯಾಸ ನನ್ನದಾದವು...

ನೀ ಬಾರದೇ ಹೋದದ್ದು ಎಂಥ ಮಧುರ ಶಾಪ - ಯೆದೆಯ ಗದ್ದಲಕೆ ಕರುಳ ಮೌನ ಸಂವಾದಿಯಾಗಿ ಉಳಿದದ್ದು ನಿನ್ನದೇ ಅಮೂರ್ತ ಕಲಾಪ...
ಎದೆಗೆ ಸಿಕ್ಕಿದ್ದನ್ನು ಕೈಗೆ ಸಿಗದಂತೆ ಎತ್ತರದಲಿ ಎತ್ತಿಟ್ಟು, ಸಿಗಬೇಕಾದ್ದು ಇನ್ನೇನೋ ಇದೆ ಎಂದು ಸಿಗಲಾರದ್ದನ್ನು ಹುಡುಕುವ ಸಿಕ್ಕು ಬದುಕಾಯಿತು...
ಪ್ರೇಮ ಕನಸಿಗೆ ಸಲೀಸು - ನೆನಪುಗಳಲ್ಲಿ ಪ್ರೇಮಿಯಷ್ಟೇ ಉಳಿಯುವುದು; ಪ್ರೇಮದ ಬೂದಿಗೆ ಕಣ್ಣು ತುರಿಸುತ್ತಲೇ ಇರುತ್ತದೆ ಕಾಲಕೂ...
ನೋಡು, ಮಹಾಕಾವ್ಯಗಳ ತುಂಬಾ ವಿರಹದ್ದೇ ಪಾರುಪತ್ಯ...
ಕಾಲನ ತುರಿಕೆಗೆ ಪ್ರೇಮದೌಷಧಿ ಕುಡೀ ಅಂದರು - ಪ್ರೇಮದ ಗಾಯಕ್ಕೀಗ ಕಾಲನಲ್ಲಿ ಮದ್ದು ಹುಡುಕುತ್ತಿದ್ದೇನೆ...
___ ಎಲ್ಲರೊಳಗೂ ಯಾರೋ ಬಂದು ತುಂಬಿಕೊಡುತ್ತಾರೆಂದು ಕಾಯುವ ಮತ್ತು ಎಂದಿಗೂ, ಯಾರೂ ಬಂದು ಭರ್ತಿ ಮಾಡದಿರುವ / ತುಂಬಲಾಗದ ಒಂದು ಖಾಲಿ ಜಾಗ ಅಥವಾ ಖಾಸಗೀ ಮೌನವೊಂದು ಉಳಿದೇ ಇರುತ್ತದೇನೋ...
&&&

ನಮ್ಮವರು ನಮಗೆ ಬೇಕಾದಂತೆ ನಡ್ಕೋತಿಲ್ಲ ಅಥವಾ ನಾವು ಹೇಳಿದ್ದನ್ನ ಕೇಳ್ತಿಲ್ಲ ಅನ್ನೋ ಅನಗತ್ಯ ಹತಾಶೆಗೂ;
ಮತ್ತು ನಮ್ಮವರೇ, ಅವರೇ ಕೊಟ್ಟ ಮಾತಿನಂತೆ, ಅವರೇ ರೂಪಿಸಿದ ದಾರಿಯಲ್ಲವರೇ ನಡೆಯದೇ ಹೋದಾಗ ಅಥವಾ ಅವರೇ ಖುದ್ದು ನಮಗೆ ಅನುಸರಿಸಲು ಹೇಳಿದ ಚಿಂತನೆಯನು ಅವರೇ ಪಾಲಿಸಿಲ್ಲ ಅನ್ನಿಸಿದಾಗ ಒಡಮೂಡುವ ಅಸಹನೆಯ ಸಾತ್ವಿಕ ಕೋಪಕ್ಕೂ ತುಂಬಾನೇ ವ್ಯತ್ಯಾಸ ಇದೆ...
ಕೃಷ್ಣ ತತ್ವವನೂ ಚಾಣಕ್ಯ ನೀತಿಯ ಗರಡಿಯಲಿ ಬಲಗೊಳಿಸಿ ಅನುಷ್ಠಾನಗೊಳಿಸಬೇಕಿದೆ ಈಗ; ಕಾರಣ, ಇದು ದ್ವಾಪರವಲ್ಲ, ಕಲಿಗಾಲ...
___ ನಂಬಿಕೆ ಮೂಡಿಸೋದೇನೂ ಕಷ್ಟವಲ್ಲ, ಕಟ್ಟಿಕೊಟ್ಟ ನಂಬಿಕೆಯ ಕಾಲವೂ ಉಳಿಸಿಕೊಳ್ಳೋ ಕ್ಷಾತ್ರವ ಕಾಯ್ದುಕೊಳ್ಳೋದು ಕಷ್ಟ...
&&&

ಸಾವಿನೆದುರು ಮಾತ್ರವೇ ಮೌನ ಸಂವಾದ ನನ್ನದು - ಅದಕೆಂದೇ ಮೌನವೆಂದರೆ ಶ್ರದ್ಧಾಂಜಲಿ ಅನ್ನುತ್ತೇನೆ...

ಬದುಕಿನೊಡನೇನಿದ್ದರೂ ಮಾತೇ ಮಾತು ಎನ್ನದು - ಅದಕೇ ನೋವ ಬಡಿಯಲೂ ತರ್ಕಶಾಸ್ತ್ರದ ಬಡಿಗೆ ಹಿಡಿದು ನಿಲ್ಲುತ್ತೇನೆ...
ನಿನ್ನದೊಂದು ಕಿವಿ ಸಾಕಿತ್ತು ಕಣೋ ನನ್ನ ನೂರು ದುಗುಡಗಳು ಹರಿದೋಗಿ ನಾ ಹಗುರಾಗಲು ಅನ್ನುತ್ತಿರುತ್ತಾರೆ, ನೀನು ಈ ಬದುಕಿನ ಪರಮಾಪ್ತ ಜೀವ ಅಂದವರೇ - ವಿಪರ್ಯಾಸ ಅಂದರೆ ಅವರು ಹಾಗನ್ನುವ ಧೈರ್ಯ ಮಾಡುವ ಹೊತ್ತಿಗೆ ನನ್ನ ಮಾತು, ತರ್ಕಗಳ ಇರಿತಕ್ಕವರು ರೋಸಿ ಹೋಗಿ ಬಂಧದೊಳಗಿನ ಭಾವತೀವ್ರತೆ ಇಷ್ಟಿಷ್ಟೇ ಸಾಯುತ್ತಾ ಸಾಗಿ ಬಂಧ ತೀವ್ರ ನಿಗಾ ಘಟಕದಲ್ಲಿ ಉಸಿರು ತೇಕುತ್ತಿರುತ್ತದೆ...
ಗೆಳೆತನವೆಂದರೆ, ಹೆಗಲಾಗುವುದೆಂದರೆ ಅಳುವವನಿಗೆ ನಮ್ಮ ಹೆಗಲು ಕೊಟ್ಟು ಕೂರುವುದಲ್ಲ, ಅಳು ರೂಢಿಗತವಾಗದಂತೆ ಕಾಯುವುದು, ಕಹಿಯಾದರೂ ಸತ್ಯವನೇ ಕುಡಿಸುವುದು, ಪ್ರತ್ಯಕ್ಷವೋ ಪರೋಕ್ಷವೋ ನನ್ನ ನಿಲುಕಿನಷ್ಟಾದರೂ ನೋವಿನಿಂದಾಚೆ ಬಂದು ನಗುವ ಹುಡುಕಿಕೊಳ್ಳೋ ದಾರಿಯ ಮತ್ತೆ ಮತ್ತೆ ಹೇಳುವುದು, ಸಾಧ್ಯವಾದಷ್ಟು ಮಟ್ಟಿಗೆ ಅವರ ಆ ಹಾದಿಯಲ್ಲಿ ಜೊತೆಗಿದ್ದು ಸಲಹಿಕೊಳ್ಳುವುದು ಮತ್ತು ಬರೀ ಕಿವಿಯಾಗುವುದು ಅಥವಾ ವಿಷಯ ಸಂದರ್ಭ ಕಳೆದ ಮೇಲೆ ಇನ್ಯಾವಾಗಲೋ ಹೀಗಲ್ಲ ಹಾಗೆ ಮಾಡಬಹುದಿತ್ತು, ನಾನಾದರೆ ಹಿಂಗೆ ಮಾಡ್ತಿದ್ದೆ ಅನ್ನೋದೆಲ್ಲಾ ಆಯಾ ಕ್ಷಣದ ನನ್ನ ಜವಾಬ್ದಾರಿಯಿಂದ ನುಣುಚಿಕೊಂಡೂ ಸುಭಗನಾಗುಳಿವ ಮುಷಂಢಿತನವಲ್ಲವಾ? ಆ ಚಂದಕ್ಕೆ ಆಪ್ತ ಗೆಳೆತನವೇ ಬೇಕಾ? ಅಂತೆಲ್ಲಾ ಒಣ ವೇದಾಂತವ ನಂಬಿ, ನಂಬಿಸಲು ಹೆಣಗುವ ನನ್ನ ಬುದ್ಧಿಯ ಮಾತಿನಾರ್ಭಟಕ್ಕೆ; ಅತ್ತು ಹಗುರಾಗಿ ಎದ್ದ ಜೀವದಲ್ಲಿ ನನ್ನ ಯಾವ ತರ್ಕಗಳ ಹಂಗೂ ಇಲ್ಲದೇ ಹೊಸ ಕನಸು, ಚೈತನ್ಯ ಚಿಗುರಬಲ್ಲದು ಮತ್ತು ಹೆಚ್ಚಿನ ಸಲ ನನ್ನ ಬಿಟ್ಟಿ ಭಾಷಣಕ್ಕಿಂತ ಗಟ್ಟಿ ಭರವಸೆಯನು ಸುಮ್ಮನೇ ಹರಡಿಕೊಟ್ಟ ಮಡಿಲು ತುಂಬಿ ಕೊಡಬಹುದೂ ಅನ್ನೋ ಮನಸಿನ ಮೃದುತ್ವದಾಳದಾಳದಲ್ಲಿನ ಆತ್ಮಾಭಿಮಾನದ ಸೂಕ್ಷ್ಮ ಅರ್ಥವೇ ಆಗಿರದೇ ಪೆಕರನಂತೆ ನಗುತ್ತಿರುತ್ತೇನೆ...
ಬಿಡಿ ಹುಟ್ಟಾ ಬರಡು ಮಡಿಲು, ಒರಟು ಹೆಗಲುಗಳ ಪ್ರಾಣಿಯಿಂದ ಏನು ಕಾಳಜಿ, ಏನಂಥ ಆರೈಕೆ ಕಂಡೀರಿ...
___ ಹೃದಯ ಸ್ಥಂಭನ ದೇಹಕ್ಕಾದರೆ ಫಕ್ಕನೆ ಸತ್ತು ಹೋಗುತ್ತೇವೆ - ಬಂಧದ್ದಾದರೆ ಹೃದಯಸ್ಪರ್ಶಿ ಭಾವಗಳು ದಿನೇ ದಿನೇ ಚೂರು ಚೂರೇ ಸಾಯುತ್ತಿರುತ್ತವೆ; ಉಳಿದುಕೊಂಡವರಲ್ಲಿ ಕೊನೆಗುಳಿವುದು ಖಾಲಿತನದ ನರಕಕ್ಕೆ ಗುರುತುಗಳಷ್ಟೇ...
&&&

ವತ್ಸಾ -
ಕೇಳು...
ಕೇಳಿದ್ದು ಅರ್ಥವಾದರೆ ಹೇಳು...
ಮೌನ ಶ್ರೇಷ್ಠ ಅಂದವರ ಮಾತು ಇಷ್ಟೇ ಇಷ್ಟಾದರೂ ಅರ್ಥವಾದೀತು...
ಮೌನ ಶ್ರದ್ಧಾಂಜಲಿ ಅಂದ ನಿನಗೂ ಇಷ್ಟೇ ಇಷ್ಟು ಮಾತು ಸಿದ್ದಿಸೀತು...
ಹೃದಯದಿಂದ ಕೇಳು...
ಕೇಳಿದ್ದು ಹೃದ್ಗತವಾದರಷ್ಟೇ ಹೇಳು...
&&&

ಮಳೆಯ ಮುಸ್ಸಂಜೆಗೆ ನೆನಪುಗಳು ತೋರಣ ಕಟ್ಟುತ್ತವೆ...

ಮತ್ತೆ ನಗೆಯ ಮಡಿಲಾಗಿ ನೀನು ನಡೆದು ಬಂದೀಯಾ ಎಂದು ಗುಮಿಗೂಡಿದ ಮೋಡಗಳೊಡನೆ ಮಾತಿಗೆ ನಿಲ್ಲುತ್ತೇನೆ...
'ಆಡ್ಮಳೆ ಶುರು ಆತು, ಮಳೆಗಾಲಕ್ಕಿನ್ನೂ ಬಾಳ್ ದಿನ ಇಲ್ಲೆ, ಗೆಡಿದಿನದ ಕೆಲ್ಸ ಶುರು ಇಲ್ಲೆ ನಿಂದಿನ್ನೂವಾ, ಹಿಂಗ್ ಮೋಡ ನೋಡ್ತಾ ಒಬ್ನೇ ನೆಗಿ ಹೋಡೀತಿದ್ರೆ ಅವ್ತ್ಲೆ, ಬದ್ಕ್ ಪೂರಾ ಹಾಳವ್ತು ಕಡೀಗೆ ಒಂದೇ ಸತಿ ಮಳೆ ಹಿಡ್ದೋದ್ರೆ, ಹೊಳೆ ಮ್ಯಾಲ್ ಹೊಳೆ ಹೋದ್ರೂ ಏನೂ ಖಬರಿಲ್ಲೆ ಅಲ್ದಾ ನಿನ್ಗೊಬ್ಬಂಗೆ' ಹಂಗಂತ ಗೊಣ ಗೊಣ ಬೈತಾ ಒದ್ದೆ ಸೌದೀನ ಕೊಟ್ಗೆ ಕಿಬ್ಳಿಗೆ ಜೋಡಿಸ್ತಿದ್ದ ನಿನ್ನ ಮುಖ ನೆನಪಾಗಿ ಕಣ್ಮುಂದೆ ಬಂದೀಗ ಸಣ್ಣಗೆ ನಗುತ್ತೇನೆ - ಈಗಲೂ ಒಬ್ಬನೇ ನಗುತ್ತೇನೆ...
ಮಳೆಯ ತಂಗಾಳಿಯೊಂದಿಗೆ ತೇಲಿ ಬಂದು ಕೂಡಲು ಕನಸುಗಳೇನಿಲ್ಲ ಇಲ್ಲೀಗ - ಮೋಡಗಳೂ ನೆನಪುಗಳನೇ ಬಿತ್ತಿ ಓಡುತ್ತವೆ ನನ್ನಂಗಳಕೀಗ...
ಹುಚ್ಚುಗಳಿಲ್ಲದೆ ತೀವ್ರವಾಗಿ ಬದುಕಲಾಗದು ಅಂತಿದ್ದವನು ಹುಚ್ಚುಚ್ಚಾಗಿ ಬದುಕಿಯೇ ಇದ್ದೇನೆ ಇನ್ನೂ...
___ ಈಗಲೂ ಒಬ್ಬನೇ ನಗುತ್ತೇನೆ...
&&&

ಕೇಳೋ ಇಲ್ಲೀ -

'ಬಿಡುವಾದಾಗ' ಮಾತಾಡಿಸೋಣ ಬಿಡು ಅಂದ್ಕೋಬೇಡ್ವೋ ನೀನು, ನಿನ್ನವರನ್ನೂ...
'ಬಿಡುವು ಮಾಡ್ಕೊಂಡು' ಬಂದು ಒಕ್ಕರಿಸುತ್ತೆ ಕಣೋ ಸಾವು, ಅವರನ್ನೂ ಇಲ್ಲಾ ನಿನ್ನನ್ನೂ...
ತುಂಡಿಲ್ಲದೇ ಲೆಕ್ಕ ಬರೆಯೋ ಚಿತ್ರಗುಪ್ತನೂ ನಿನ್ನ ಬಿಡುವಿನ ಕ್ಷಣಗಳ ಲೆಕ್ಕವನ್ನು ಲೆಕ್ಕಕ್ಕೆ ತೆಗೆದ್ಕೊಳ್ಳೋದಿಲ್ಲ ಆಯ್ತಾ...
ಒಡನಾಡಿ ಒಡಗೂಡಿ ಒಂದಿಷ್ಟು ನಿನ್ನನ್ನ ನೀನು ಜೀವಿಸುವುದಕ್ಕೇಂತ - ಇನ್ನಾದ್ರೂ ಒಂಚೂರೇಚೂರಾದ್ರೂ ಬಿಡುವು ಮಾಡ್ಕೊಳ್ಳೋದ್ನ ಕಲೀ ತೆಳತ್ತಾ...
ಸಾವು, ನೋವನ್ನು ಸಮಾ ಮಾತಾಡಿಸದೇ ನಿನ್ನಲ್ಲಿ ನಿನ್ನ ಬದುಕು ಮಾಗುವ ಮಾತದೆಂತೋ...!!
___ ಉಫ್!!! ಅವಳ ಚಿತ್ರದಲ್ಲಿನ ನಗು ಎಷ್ಟೆಲ್ಲಾ ಮಾತಾಡತ್ತೆ...

ನನ್ನೆದೆಯಲೂ ಉಳಿದದ್ದು ಚಿತ್ರದ ನಗುವೇ...
ಇಂಥದ್ದೇ ಮಳೆ ಮಾಸದ ಒಂದು ಸಂಜೆ, ಧೋಮಳೆಯನೂ ಲೆಕ್ಕಿಸದೇ ಅವಳ‌ ಚಿತೆ ಧಗಧಗಿಸಿ ಉರಿದುಹೋಯ್ತು - ನನ್ನೊಳಗಿನ ಬೆಳಕು ಇಷ್ಟಿಷ್ಟೇ ಸತ್ತುಹೋಯ್ತು...
___ ನೆನಪೀಗ ಮಳೆಗೂ ಆರದ ಉರಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)