Monday, October 15, 2012

ಗೊಂಚಲು - ನಲವತ್ತು ಮೇಲೇಳು.....

ಪ್ರಕೃತಿ ಮಡಿಲಲ್ಲಿ ಮಗುವಾಗಿ.....





ಕೆಲವು ಕ್ಷಣಗಳ ಹಿಂದೆ ತಂಗಿ ದನಿತುಂಬಿ ಹಾಡುತ್ತಿದ್ದ ನನ್ನ ಪ್ರೀತಿಯ ಹಾಡು ಮನದಲಿನ್ನೂ ರಿಂಗಣಿಸುತಿತ್ತು...
"ಮಾನವನೆದೆಯಲಿ ಆರದೆ ಉರಿಯಲಿ
ದೇವರು ಹಚ್ಚಿದ ದೀಪ..
ರೇಗುವ ದನಿಗೂ ರಾಗವು ಒಲಿಯಲಿ
ಮೂಡಲಿ ಮಧುರಾಲಾಪ..."
ಆ ಹಾಡಿನ ಗುಂಗು,
ಅಮಾವಾಸ್ಯೆಯ ಹಿಂದಿನ ಕಪ್ಪು ಸುರಿಯುವ ಇರುಳು,
ಕತ್ತಲೆಯ ಚಾದರ ಹೊದ್ದ ಹಸಿರು ವನರಾಜಿ,
ಕಿವಿಯ ತುಂಬ ಪ್ರಕೃತಿ ನುಡಿಸುವ ಜಲತರಂಗಿಣಿ,
ಬಾನಿಂದ ನೇರ ಪಾತಾಳಕ್ಕೆ ಧುಮುಕುತಿರುವ ಹಾಲಹೊಳೆಯಂಥ ಜಲಧಾರೆ,
ಜಲಪಾತದೆಡೆಯಿಂದ ಬೀಸಿಬಹ ಗಾಳಿ ಹೊತ್ತು ತರುವ ತುಂತುರುವಿಗೆ ಮೈಯೊಡ್ಡಿ ನಿಂತಿದ್ದೆ ಕೆಲವು ಕ್ಷಣ ಒಬ್ಬಂಟಿಯಾಗಿ,
ಕಾಲ ಬುಡದಲ್ಲಿ ಸತ್ತುಬಿದ್ದ ಹಾವಿನಂಥ ರೈಲುಕಂಬಿ,
ಮನದಲ್ಲಿ ಹೆಪ್ಪುಗಟ್ಟಿದ್ದ 'ನಾನೆಂಬ' ನನ್ನಹಂಮ್ಮಿನ ಭಾವಗಳೆಲ್ಲ ಆಚೆಬಂದು ಇಂಚಿಂಚಾಗಿ ಬೆತ್ತಲಾಗುತ್ತ - ಇಷ್ಟಿಷ್ಟಾಗಿ ಮೌನದಲ್ಲಿ ಲೀನವಾಗುತ್ತ ಹೋಗಿ ನನ್ನ ನಾ ಕಳೆದುಕೊಂಡು ಎಲ್ಲಾ ಇರುವಲ್ಲೇ ಎಲ್ಲವನೂ ಮರೆತ ಆ ಘಳಿಗೆ ನಾನು ಧ್ಯಾನಸ್ತ...
ಕೆಲವು ಅನುಭೂತಿಗಳಿಗೆ ವ್ಯಕ್ತರೂಪ ಕೊಡಲು ಶಬ್ದಗಳಿಲ್ಲ ನನ್ನಲ್ಲಿ.
ಒಂದಂತೂ ಸತ್ಯ -
ಒಂದು ಕ್ಷಣ ನಿರ್ಭಾವ, ಮರುಕ್ಷಣ ಭಾವಾವೇಶ,
ನಿನ್ನೆ ನಾಳೆಗಳೆಲ್ಲ ಮರೆತು ಹೋಗಿ, ಜೀವಭಾವಗಳೆಲ್ಲ ಅನುಭಾವದ ಭಾವಶೂನ್ಯತೆಯಲಿ ತೇಲಿ ಹೋಗಿದ್ದ ಆ ಕ್ಷಣ ಹೀಗೇ ಇದ್ದು ಬಿಡಲಿ ಅನ್ನಿಸಿತ್ತು.
ಇರಲಾರದು ಎಂಬುದೂ ಗೊತ್ತಿದ್ದ ಕಾರಣ ಆ ಭಾವಗಳನೆಲ್ಲ ನೆನಪಾಗಿ ಕಾದಿಟ್ಟುಕೊಂಡು ಬಂದಿದ್ದೇನೆ. ಮೆಲ್ಲುತಿರಲು ಸವಿಬೆಲ್ಲದಂತೆ ಬದುಕ ಕೊನೆವರೆಗೆ...

*****

ಬೆಳಿಗ್ಗೆಯಿಂದ ಕ್ಯೂ ನಿಂತದ್ದೆ ಬಂತು ಕೊನೆಗೂ ರೈಲು ಟಿಕೇಟ್ ಸಿಕ್ಕಿದ್ಲೆ.
ಇರ್ಲಿ ಬಿಡು ಹುಬ್ಳಿತಂಕಾ ಬಸ್ಸಿಗೆ ಹೋದರೆ ಆತು.
ಸರಿ ರಾತ್ರಿ ಹುಬ್ಳಿ ಕಡೆ ಪಯಣ. ದಂಡು ದೊಡ್ಡದೇ ಇತ್ತು. ಗಲಾಟೆ ಇರಲೇ ಬೇಕುತಾನೆ. ಇದು ಸರ್ಕಾರಿ ಬಸ್ಸು ಸುಮ್ನೆ ಕೂತ್ಕೋಳ್ರೋ ಅಂತ ಹಿರಿಯರಾರೋ ರೇಗಿದ ಮೇಲೇನೇ ನಮ್ಮ ಗಲಾಟೆ ಚಿಕ್ಕದಾಗಿದ್ದು. 
ಬೆಳಿಗ್ಗೆ ಟೈಮ್ ಆಗ್ತಾ ಬಂತು ಹುಬ್ಳಿ ಇನ್ನೂ ಬಂದಿಲ್ಲ ರೈಲು ಸಿಗುತ್ತೋ ಇಲ್ವೋ ಅಂತ ಗಡಿಬಿಡಿ ಶುರು. ಹುಬ್ಬಳ್ಳಿಯಲ್ಲಿ ನಮ್ಮ ಗುಂಪಿಗೆ ಸೇರೋರ ಹತ್ರ ಟಿಕೇಟ್ ತಕೋ ಬರ್ತಾ ಇದೀವಿ ಅಂದ್ರೆ, ನಿಧಾನ ಬನ್ನಿ ಟ್ರೈನು ಲೇಟಂತೆ ಅಂದ್ಲು. ಅಂತೂ ಇಂತೂ ಹುಬ್ಳಿ ತಲುಪಿದ್ರೆ 6.45ಕ್ಕೆ ಬರೋ ರೈಲು ಬರೋಬ್ಬರಿ 4 ತಾಸು ಕಾಯಿಸಿ ಆಮೇಲೆ ಬಂತು. ಅಂತ ಬೇಸರವೇನೂ ಆಗಿಲ್ಲ. ಯಾಕೇಂದ್ರೆ ನಮ್ಮಲ್ಲಿ ಮಾತಿಗೆ ಮತ್ತು ನಗುವಿಗೆ ಬರವಿಲ್ಲ. ಅವು ಭರಪೂರ.
ಶ್ರೀಕಾಂತನ ಮಾತು ಅರ್ಧದಲ್ಲೇ ತಡೆದು ಭಾಸ್ಕರ ಪೂರ್ಣ ಮಾಡ್ತಾನೆ. ಅದಕ್ಕಿನ್ನೊಂದಿಷ್ಟು ಸ್ವಾನಂದನ ಒಗ್ಗರಣೆ. ತಂಗ್ಯಮ್ಮಗಳ ಸ್ವಚ್ಛ ನಗು.  ಯಾವುದೇ ನಿರ್ಣಯ ಪೆಂಡಿಂಗ್ ಆದ್ರೆ ರಘು ಫೈಸಲು ಮಾಡ್ತಾನೆ. ಅದಕ್ಕೆ ನನ್ನ ಕೊನೆಯ ಅಂಕಿತ. ಮೂರು ತಿಂಗಳ ಹಿರಿಯ ನಾನು ಗುಂಪಿನಲ್ಲಿ ಹಿರಿಯ ನಾಗರಿಕ (ರಾಷ್ಟ್ರಪತಿ ಹುದ್ದೆ)...

ಅಂತೂ ಇಂತೂ ರೈಲು ಬಂತು. ಜನರಲ್ ಬೋಗಿಯ ಟಿಕೇಟ್ ತಕೊಂಡು ಅಲ್ಲಿ ಹತ್ತಲು ಜಾಗವಿಲ್ಲದೇ ಶಯನಯಾನದಲ್ಲಿ ನಾವು ಆಸೀನ. ಅರೆ ಬರಲ್ಲ ಅಂದ್ಕೊಂಡ ಟಿಟಿ ಬಂದೇ ಬಿಟ್ಟ. ದಂಡಾನೇ ಕಟ್ಟೋಹಂಗಿದ್ರೆ ಎಲ್ಲಾರ ಕಿಸೇನೂ ಖಾಲಿಯಾಗ್ಬಿಡುತ್ತೆ. ಟಿಟಿಯ ಹೊಟ್ಟೆಗೊಂದಿಷ್ಟು ಕೊಟ್ಟು ಅಬ್ಬ ಬಚಾವು ಅಂದ್ಕೋತಾ, ದೇಶದಲ್ಲಿರೋ ಲಂಚಗುಳಿತನದ ಬಗ್ಗೆ ವಿಶಾದ ವ್ಯಕ್ತಪಡಿಸಿ ನಿಸೂರಾದದ್ದು..:):)

ಹೋಓಓಓಓಓಓ...
ಸೇರಿಕೊಂಡ ಹೊಸಬರಿಗೆ ಭವ್ಯ ಸ್ವಾಗತ. ಕ್ಯಾಸಲ್ ರಾಕ್ ನಲ್ಲಿ ಸೇರಿಕೊಂಡ ನಾಲ್ವರನ್ನೂ ಸೇರಿ ನಮ್ಮ ಟೀಮಿನ ಸಂಖ್ಯೆ ಹದಿನಾಲ್ಕರಲ್ಲಿ ಸಮಾಪ್ತಿ...

ರೈಲು ಸುರಂಗದಲ್ಲಿ ಹೊಕ್ಕ ತಕ್ಷಣ ಒಂದೇ ಸಮನೆ ಶೀಟಿ ಬಜಾನಾ...
ಕೊನೆಗೂ ಇಳಿಯೋಕಾಯ್ತು. ಆಗ ಮಟಮಟ ಮಧ್ಯಾಹ್ನದ 2 ಘಂಟೆ.
ಗೂಡಂಗಡಿಯಂಥ ಕಛೇರೀಲಿ ಕೂತಿದ್ದ ರೈಲ್ವೆ ಅಧಿಕಾರೀನ ಮಾತಾಡ್ಸಿ ಒಂದು ಕಿ.ಮೀ. ನಡೆದು ನಮ್ಮ ಗಮ್ಯ ತಲುಪಿದ್ದಾಯ್ತು.
ಅಬ್ಬಾ ತೆರೆದ ಬಾಯಿ ಮುಚ್ಚಲು ಒಂದರೆ ಕ್ಷಣ ಬೇಕಾಯ್ತು. ಒಂದು ಸುತ್ತು ಅಲ್ಲಿ ಹಾರಿ - ಇಲ್ಲಿ ನೋಡಿ, ಅವನ್ಜೊತೆ - ಇವನ್ಜೊತೆ ಒಂದೊಂದು, ಎಲ್ರೂ ಸೇರಿರೋದು ಇನ್ನೊಂದು ಅಂತ ಹೇಳ್ತಾ ಪೋಟೋ ಕ್ಲಿಕ್ಕಿಸಿದ್ದಾಯ್ತು.


ಅರೇ ಇಷ್ಟೊತ್ತೂ ಹೊರಟದ್ದೆಲ್ಲಿಗೆ ಅಂತಾನೇ ಹೇಳಿಲ್ಲ ಅಲ್ವಾ. ನಾವುಗಳು ನೋಡೋಕೆ ಹೋಗಿದ್ದು ಗೋವಾದ ಗಡೀಲಿರೋ "ದೂದ್ ಸಾಗರ" ಎಂಬ ಜಲಪಾತಕ್ಕೆ. ಅದೊಂದು ಪ್ರಕೃತಿ ನಿರ್ಮಿತ ಅದ್ಭುತ ವೈಭವ.

ಯಾರೋ ಕೂಗಿದ್ರು ಹೊಟ್ಟೆ ತಾಳ ಹಾಕ್ತಾ ಇದೆ ಅಂತ. ಆಗ ಎಲ್ರಿಗೂ ಊಟದ ನೆನಪಾಯ್ತು. ಇನ್ನೊಂದು ಸುತ್ತು ಆಮೇಲೆ ನೋಡೋಣ. ಸಂಜೆತನಕ ಸಮಯ ಇದೆ ಅಂತ ಎಲ್ರೂ ಕಟ್ಟಿಕೊಂಡು ಹೋದ ಬುತ್ತಿ ಬಿಚ್ಚಿ ಕೂತ್ವಿ. ಹೊಟ್ಟೆಪರಮಾತ್ಮ ತಣ್ಣಗಾದ ಮೇಲೆ ಮತ್ತೆ ಶುರು. ಸಣ್ಣ ಪುಟ್ಟ ಸಾಹಸಗಳು, ನೀರಿನ ಚೆಲ್ಲಾಟ...ಬೇಡದ ಸಾಹಸಕ್ಕೆ ಹೋಗ್ಬೇಡ್ರೋ ಅನ್ನೋ ತಂಗಿಯರು, ಅಲ್ಲಿಗೆ ಹೇಗೆ ಹೋಗೋದು ನೋಡೋ ಅನ್ನೋ ಗೆಳೆಯ...
ರೈಲುಹಳಿಯ ಮೇಲೆ ಅಷ್ಟುದೂರದ ವಾಕಿಂಗು..ಸಂಜೆಗೆ ಒಂದೇ ಇರೋ ಪ್ಯಾಸೆಂಜರ್ ರೈಲಿನ ಪ್ರಯಾಣಿಕರಿಗೊಂದು ಟಾಟಾ...ಮಾತು, ನಗು, ಕಾಡಿನ ಸಂಗೀತ...ಅರೇ ಸಂಜೆ ಇಳಿದದ್ದೇ ಗೊತ್ತಾಗಿಲ್ಲ. ಆಗಲೇ ಸಣ್ಣ ಕತ್ತಲು...


ಚುಕುಬುಕು ರೈಲು...

ನೀರ ಓಕುಳಿಯಾಟ...
ಬಿದ್ದೀರಿ ಜೋಕೆ...

ರಾತ್ರಿ ಕೂತಿರೋಕೆ ಇರುವ ಎರಡು ಅರಣ್ಯಇಲಾಖೆ ಕುಟೀರಗಳಲ್ಲಿ ಒಂದನ್ನು ಚೊಕ್ಕ ಮಾಡ್ಕೊಂಡು, ಮತ್ತೊಂದು ಸುತ್ತು ಜಲಪಾತದೆದುರು ಹೋಗಿ ಕೂತು ಸಂಜೆಯ ಸೊಬಗನ್ನು ಸವಿದು ಬರುವುದರೊಳಗೆ ನಾವಿರಬೇಕೆಂದುಕೊಂಡ ಸ್ಥಳ ಮತ್ತೊಂದು ಪ್ರವಾಸೀ ತಂಡದ ಪಾಲಾಗಿತ್ತು. ಇರ್ಲಿ ಬಿಡಿ ಅಲ್ಲೇ ಕೆಳಗಡೆ ಇದ್ರಾಯ್ತು ಅಂತ ನಮ್ಮ ಲಗೇಜನ್ನೆಲ್ಲ ಇಳುಕಿ ಒಂದು ಚಾದರಾನ ಹಾಸಿಕೊಂಡು ಕೂತದ್ದು. ಕುಟೀರದಿಂದಾಚೆ ಸಣ್ಣ ಹೊಡತ್ಲು (ಬೆಂಕಿ) ಹಾಕ್ಕೊಂಡು ಕೂತು ರಾತ್ರಿಯ ಊಟದ ಶಾಸ್ತ್ರ ಮುಗಿಸಿದೆವು. ಎಲ್ಲರ ನೆನಪು, ಕನಸುಗಳ ಬುತ್ತೀನ ಹರವಿಕೊಂಡು ಕೂತರೆ ರಾತ್ರಿ ಚಿಕ್ಕದಾಯ್ತು ಅಂತನ್ನಿಸ್ತು.
ಮಧ್ಯೆ ಮಧ್ಯೆ ಕೆಲವರು ಅಲ್ಲೇ ಮಲಗಿ, ಇನ್ಕೆಲವರು ಕೂತಲ್ಲೇ ತೂಕಡಿಸಿ ನಿದ್ದೇನ ತಣಿಸಿಕೊಂಡರು. ನಾನೊಂದಷ್ಟು ಹೊತ್ತು ಒಂಟಿಯಾಗಿ ಜಲಧಾರೆಯೆದುರು ನಿಂತು ಬಂದೆ. ಆಮೇಲೊಂದಷ್ಟು ಹೊತ್ತು ನಾನು, ಶ್ರೀಕಾಂತ, ರಘು, ಸ್ವಾನಂದ ಜಲಧಾರೆಯೆದುರು ಭಾವಗಳ ವಿನಿಮಯ ಮಾಡಿಕೊಂಡ್ವಿ.


ಮತ್ತೆ ಬೆಂಕಿಯೆದುರು ಎಲ್ಲ ಸೇರಿ ದೊಂಬರಾಟ...
ಯಾರದು ಸಿಗರೇಟು ಹಚ್ಚಿದ್ದು..?
ನಾನಂತೂ ಒಳ್ಳೇ ಹುಡ್ಗ ಹಾಗೆ ಎಲ್ಲಾರೆದ್ರೂ ಸೇದಲ್ಲಾ ಎಂಬ ಉತ್ತರ...

ಅರೇ ಆಗಲೇ ನಾಲ್ಕು ಘಂಟೆ. ಎದ್ದೇಳಿ ಹೊರಡಬೇಕು ಅಂತ ಎಲ್ರನ್ನೂ ಎಬ್ಬಿಸ್ಕೊಂಡು ಹೊರಟದ್ದು ರೈಲು ಹಳಿಯಗುಂಟ ಕ್ಯಾಸಲ್ ರಾಕ್ ಕಡೆಗೆ...
14 ಕಿಲೋಮೀಟರುಗಳ ನಿರಂತರ ನಡಿಗೆಗೆ ನಾಂದಿ...ಒಂದಷ್ಟು ದೂರ ಬ್ಯಾಟರಿ ಬೆಳಕಲ್ಲಿ ಬಂದರೆ ಮಧ್ಯ ಮಧ್ಯ ಗೂಡ್ಸ್ ರೈಲಿನ ಬೆಳಕು.. ಸುರಂಗ ಮುಗಿದಿಲ್ಲ ಆಗಲೇ ರೈಲು ಬಂತು. ತುಂಬ ಜಾಗವಿಲ್ಲ. ಎಲ್ಲಾ ಕಿವಿಮುಚ್ಕೊಂಡು  ಸುರಂಗದ ಗೋಡೆಗೆ ಹಲ್ಲಿಗಳಂತೆ...


ಈ ಸೇತುವೆ ಹತ್ತಿರ ಸೂರ್ಯನುದಯ...
ನಡಿಗೆಗೆ ಸಣ್ಣ ವಿಶ್ರಾಂತಿ...
ಅದ್ಯಾವುದೋ ಕಣಿವೆಯ ನಡುವಿನ ಸೇತುವೆಯೆದುರು ಸೂರ್ಯೋದಯವಾಯ್ತು.
ಇನ್ಯಾವುದೋ ಪುಟ್ಟ ತೊರೆಯ ದಡದಲ್ಲಿ ಕೆಲವರ ನಿತ್ಯವಿಧಿ..
ದಾರಿ ನಡುವಿನ ಸಣ್ಣ ಬಳುಕು ಜಲಧಾರೆಯ ಸಮ್ಮುಖದಲ್ಲಿ ಬಿಸ್ಕತ್ತು, ಬ್ರೆಡ್ಡು, ಜಾಮು...ಸ್ವಲ್ಪ ಎನರ್ಜಿ...
















ಆಗಲೇ ಸಮಯ ಆಯ್ತು. ಇನ್ನೂ ಅರ್ಧದಾರಿ 
ಬಾಕಿ ಇದೆ. ಸಣ್ಣ ವೇಗ. ಸ್ವಲ್ಪ ಸಮಯ ಮಾತ್ರ. ಮತ್ತೇನೋ ಹೊಸತು ಕಂಡ ತಕ್ಷಣ ಎಲ್ಲರ ನಡಿಗೆಯೂ ನಿಂತೇ ಹೋಗುತ್ತೆ. ನಮ್ಮ ಮಾತು, ಮೌನಗಳಿಂದ ನಿರ್ಜೀವ ರೈಲು ಕಂಬಿಗಳಿಗೂ ಮುಂಜಾನೆಯಲಿ ಜೀವ ಬಂದಂತೆ ಭಾಸ...
ಮುಕ್ತಾಯದ ಹಂತದಲ್ಲಿ ನಮ್ಮ ಪ್ರವಾಸ...


ರೈಲು ದಾರಿಯ ಗುಂಟ...
ಅದೋ ಕ್ಯಾಸಲ್ ರಾಕ್ ಸ್ಟೇಷನ್ ಯಾರೋ ಕಿರುಚಿದ್ರು..
ಎಲ್ಲರ ಮೊಗದಲ್ಲೂ ಬಂದೇ ಹೋಯ್ತಾ ಎಂಬ ಬೇಸರ ಮತ್ತು ರೈಲು ಹೋಗುವ ಮುಂಚೆಯೇ ತಲುಪಿದೆವಲ್ಲಾ ಎಂಬ ಖುಷಿ ಎರಡೂ ಮನೆ ಮಾಡಿತ್ತು...
ಒಬ್ಬೊಬ್ಬರಾಗಿ ವಿದಾಯ ಹೇಳ್ತಾ ಹೇಳ್ತಾ ಕೊನೇಲಿ ಎಲ್ಲರ ಮನಗಳಲ್ಲೂ ನೆನಪುಗಳು ಮನೆಮಾಡಿಕೊಂಡವು...
ನನ್ನವರು
ವಿದ್ಯಾ, ರಘು, ವಿನಾಯಕ, ಶ್ರೀಕಾಂತ, ರಾಘು, ಸ್ವಾನು, ವಿಶು, ರಂಜನ್, ಶಕು, ಪವಿ, ರಾಜಮಾತಾ, ಬಾಚು, ಸತೀಶ
ಒಂದಷ್ಟು ಛಾಯಾ ಚಿತ್ರಗಳು - ನನ್ನ ಕ್ಯಾಮರಾ ಕಣ್ಣಲ್ಲಿ...









ಗಮ್ಯದ ಜಲಪಾತವ ಸೇರುವ ದಾರೀಲಿ ಸಿಗುವ ಸಣ್ಣ ಪುಟ್ಟ ಝರಿ, ತೊರೆಗಳ ಚೆಲುವನ್ನೂ ಸವಿದರೆ ಪ್ರಯಾಣ ಎಷ್ಟು ಸೊಬಗೇರುತ್ತೆ ಅಲ್ಲವಾ...
ಪ್ರವಾಸದ್ದೂ ಮತ್ತು ಬದುಕಿನದ್ದೂ.....

Monday, October 8, 2012

ಗೊಂಚಲು - ನಲವತ್ತಾರು.....

ನನ್ನ ಸ್ವಾರ್ಥ.....

ಎಂಥ ದುರಾಸೆ
ಬಯಸುತ್ತೇನೆ -
ಎನ್ನೆಲ್ಲ ದೌರ್ಬಲ್ಯಗಳ ಸಹಿಸಿ
ಎನ್ನ ನೋವುಗಳನೆಲ್ಲ ಹೀರಿ
ಎನ್ನ ಹಿಂದೆ ನೆರಳಂತೆ ಉಳಿದು
ಖುಷಿಯ ಮೇರೆ ಮೀರುವಂತೆ ಮಾಡಿ
ಜೀವಿಸಲು ಸ್ಫೂರ್ತಿ ಮೂಡುವಂತೆ
ಅವಳೆನ್ನ ಪ್ರೀತಿಸಲೆಂದು...

ಆದರೆ 
ಒಂದು ಕ್ಷಣ ಕೂಡ ಯೋಚಿಸಲೊಲ್ಲೆ
ಹಾಗೆಲ್ಲ ನಾನೂ ಅವಳ ಪ್ರೀತಿಸಬಹುದೆಂದು...

ಪ್ರೀತಿಸಬಲ್ಲ ಮನಸಿಲ್ಲ
ಪ್ರೀತಿಸಲ್ಪಡುವ ಬಯಕೆ ಬೆಟ್ಟದಷ್ಟು...

ಎಂಥ ಕ್ರೌರ್ಯ
ಬಯಕೆ ದೇಹಕೆ -
ಬಿಗಿದ ತೆಕ್ಕೆ ಸಡಿಲದಂತೆ
ಅವಳಂಗಾಂಗಗಳ ಅಂದವನೆಲ್ಲ ಒಂದೇಟಿಗೇ ಹೀರಬೇಕೆಂದು
ಹೀರುತ್ತಲೇ ಇರಬೇಕೆಂದು...

ಆದರೆ
ಚಿಂತಿಸಲೊಲ್ಲೆ ಒಮ್ಮೆಯೂ
ಅವಳ ಕಣ್ತಣಿಸಲು ನನ್ನಲೇನಿದೆ ಅಂದವೆಂದು...
ಕೇಳಲೊಲ್ಲೆ
ಅವಳ ಸುಖದ ಕಲ್ಪನೆ ಏನೆಂದು...

ಸುಖ ಕೊಡುವ ತೋಳ ಬಲ
ವೀರ್ಯವಂತ ಸ್ಖಲನ ಶಕ್ತಿ
ಮೈಯಲ್ಲಿದೆಯಾ ಎಂಬ ಅರಿವಿಲ್ಲ...
ನಾಭಿಯಾಳದಲ್ಲಿ ಮಾತ್ರ
ಎಂದೂ ಹಿಂಗದ ಸದಾ ವ್ಯಗ್ರ ನಿರ್ಲಜ್ಜ ಕಾಮ...

Monday, October 1, 2012

ಗೊಂಚಲು - ನಲವತ್ತು ಮತ್ತೈದು.....

ಸಮಾಧಾನ.....

ಅಂದು -
ಆಗಷ್ಟೇ ರುದ್ರಭೂಮಿಯಿಂದ ಹಿಂತಿರುಗಿದ್ದೆ. ನನ್ನ ಮಗ ಅಳುತ್ತಳುತ್ತಲೇ ಕೇಳಿದ್ದ, ಅಮ್ಮಾ ತಾತ ಎಲ್ಲಿ ಹೋದ್ರು.?
ಆಗಿನ್ನೂ ಮಗನಿಗೆ ನಾಲ್ಕು ವರ್ಷ. 
ದೇವರ ಹತ್ರ ಪುಟ್ಟಾ ಅಂದಿದ್ದೆ. 
ಮತ್ತೆ ಪ್ರಶ್ನೆ - ಯಾಕೆ.?
ದೇವರಿಗೆ ತಾತ ಅಂದ್ರೆ ತುಂಬಾ ಪ್ರೀತಿಯಂತೆ. ಅದಕ್ಕೇ ತಾತನ್ನ ತನ್ನಹತ್ರ ಕರೆಸಿಕೊಂಡಿದಾನೆ, ಇನ್ನು ಮೇಲೆ ತಾತ ಆಕಾಶದಲ್ಲಿನ ನಕ್ಷತ್ರವಾಗಿ ನಮ್ಮ ನೋಡ್ತಿರ್ತಾರೆ ಅಂತೆಲ್ಲ ಏನೇನೋ ಹೇಳಿ ಸಮಾಧಾನಿಸಿದ್ದೆ. ಅಂದಿನಿಂದ ನನ್ನಷ್ಟೇ ತಾರೆಗಳನ್ನೂ ಪ್ರೀತಿಸಹತ್ತಿದ್ದ.

ಈಗ ಅದೇ ಮಗನಿಗೆ ಕನಸು ಬಿಚ್ಚಿಕೊಳ್ಳುವ ಹದಿನಾರರ ವಯಸು.
ನನ್ನನ್ನೇ ಸಮಾಧಾನಿಸುತ್ತಿದ್ದಾನೆ.
ಅಮ್ಮಾ - ಉಹುಂ ಅಮ್ಮ ಅಲ್ಲ ನೀನು. ಈ ಬದುಕು ನೀಡಿದ ಮೊದಲ ಜೀವದ ಗೆಳತಿ. ನೀ ನೊಂದು ಕಣ್ಣೀರಾದರೆ ನಾ ಕಂಗೆಡುತ್ತೇನೆ. ಮತ್ತೇನಿಲ್ಲ ಆ ನಿನ್ನ ದೇವರಿಗೆ ನಾನೆಂದರೆ ತುಸು ಹೆಚ್ಚೇ ಪ್ರೀತಿಯಂತೆ. ಅದಕೇ ಸ್ವಲ್ಪ ಮುಂಚಿತವಾಗಿ ಬಾ ಅಂತಿದಾನೆ. ನಂಗೊತ್ತು - ನಿನ್ನ ಮಡಿಲ ಬಿಸುಪು ಮತ್ತು ಕಂಪು ಅಲ್ಲೆಲ್ಲೂ ಇಲ್ಲ. ಆದರೂ ನೀನಿಲ್ಲಿ ನಗುತಿದ್ದರೆ ಅಲ್ಲೂ ನಾನು ನಚ್ಚಗಿದ್ದೇನು. ನಿನ್ನ ಈ ಪುಟ್ಟ ತಾರೆ ಮನೆಯಂಗಳದಿಂದ ಆಗಸಕೆ ಹಾರಿ ಕೋಟಿತಾರೆಗಳ ನಡುವೆ ಮಿನುಗುವದಂತೆ. ಇಲ್ಲಿ ಜಿನುಗುವ ನಿನ್ನ ಪ್ರೀತಿಯ ಅಲ್ಲಿಂದಲೇ ಸವಿದೇನು...

ಆದರೂ ಅಮ್ಮಾ -
ಎಲ್ಲ ನೀಡುವವ ಅವನೇ ಆದರೆ, ನೋವ ನುಂಗಿ ನಗೆಯ ಹಂಚು ಎಂಬ ನಿನ್ನ ಎಂದಿನ ಮಾತು ಅವನಿಗೇಕೆ ಅನ್ವಯಿಸುವುದಿಲ್ಲ.?
ಈ ಜಗದಿ ಯಾಕಿಷ್ಟು ನೋವಿದೆ.??
ಅವನೇ ಬಿಡಿಸಿದ ಅವನದೇ ಚಿತ್ರಕೆ ಬಣ್ಣ ತುಂಬುವ ವೇಳೆ ಹರಿದೆಸೆವ ಹಂಬಲವೇಕೆ.???
ತಾನೇ ಬಿಡಿಸಿದ್ದು ಎಂಬ ಅಹಮಿಕೆಯಾ...????


ನಗೆಯ ಹರಡಬೇಕಿದ್ದವನು ನಿನ್ನ ಕಣ್ಣಲ್ಲಿ ಹನಿಯನಿಳಿಸಿ ಹೋಗುತಿರುವ ನನ್ನ ಕ್ರೌರ್ಯವ ಕ್ಷಮಿಸಿಬಿಡಮ್ಮಾ....


ಇಂದು - 
ವೈದ್ಯರುಗಳೆಲ್ಲ ಸೋಲೊಪ್ಪಿಕೊಂಡು ನನ್ನ ಕರುಳಿನ ಸಾವಿಗೆ ಮಾರುದ್ದದ ಖಾಯಿಲೆಯ ಹೆಸರಿಟ್ಟು ಬದುಕಿಗೆ ಗಡುವು ನೀಡಿದ ದಿನ...

Thursday, September 20, 2012

ಗೊಂಚಲು - ನಲವತ್ನಾಕು.....

ಸಾಗರದ ಸಾವಿರ ಪ್ರಶ್ನೆಗಳಿಗೆ
ದಂಡೆಯ ನಸುನಗೆಯ
ಮೌನವೇ ಉತ್ತರ.....

ಆಯೀ -
ಇದೊಂದು ಪ್ರಶ್ನೆ ಕೇಳಬೇಡ. 
ಉತ್ತರ ಖಂಡಿತಾ ಗೊತ್ತಿಲ್ಲ. 
ಉತ್ತರ ಹುಡುಕುವ ಮನಸೂ ಈಗ ನಂಗಿಲ್ಲ. 
ಅವನನ್ನು ಯಾಕೆ ಪ್ರೀತಿಸಿದೆ.? 
ಅವನನ್ನೇ ಯಾಕೆ ಪ್ರೀತಿಸಿದೆ.??
ಈವರೆಗೆ ನನ್ನನ್ನೇ ನಾನು ಕೇಳೀಕೊಂಡದ್ದು ಅದೆಷ್ಟು ಬಾರಿಯೋ...
ಉತ್ತರ ದಕ್ಕಿಲ್ಲವಾಗಲೀ ಪ್ರೀತಿಸದೇ ಇರಲು ಸಾಧ್ಯವೇ ಇಲ್ಲ ಎನ್ನುವುದು ಮಾತ್ರ ಮತ್ತೆ ಮತ್ತೆ ಋಜುವಾಗಿದೆ.

ಸಾಗರದಲೆಗಳ ಕೇಳಿದೆ ಒಮ್ಮೆ - ಒಂದಿನಿತೂ ಪ್ರತಿಸ್ಪಂದಿಸದಿರುವ ದಂಡೆಯನೇಕೆ ಅಷ್ಟೊಂದು ಪ್ರೀತಿಸುವಿರಿ.?
ದಂಡೆಯನು ಪ್ರೀತಿಸಲು ಒಲ್ಲೆನೆನುವ ಅಲೆ ಮರಳ ಒರಟನ್ನು ತಾಕುವ, ದಡದಲಾಡುವ ಕಂದನ ಅಂಬೆಗಾಲ ಮುದ್ದಿಸುವ ಸುಖಗಳ ಕಳಕೊಂಡು ಮಧ್ಯದಲೇ ಆತ್ಮಹತ್ಯೆ ಮಾಡಿಕೊಂಡಂತೆ ಎಂದು ನಕ್ಕಿತು ಸಾಗರ.
ಅವನ ಎದೆ ರೋಮಕೆ ಮೂಗನುಜ್ಜುವ ಸುಖವ, ಅವನ ಮಗುವಿಗೆ ಒಡಲಾಗುವ ತಾಯ ಸುಖವ ನಾ ಕಳೆದುಕೊಳ್ಳಲಾರೆ ಅಮ್ಮ...

ದಂಡೆಯನೂ ಕೇಳಿ ನೋಡಿದೆ.
ಪ್ರೀತಿಗೆ ನೀನೇಕೆ ಮೌನಿ ಎಂದು.
ನನ್ನ ಮೌನ ಸಮ್ಮತಿಯೇ ಸಾಗರದ ಪ್ರೀತಿಗೆ ಪ್ರೇರಣೆ.
ಸ್ವಚ್ಛ ಮೌನವೂ ಪ್ರೇಮವೇ ಕಣೇ ಎಂದಿತು ದಂಡೆ.
ಅಂದಿನಿಂದ ಅವನ ಮೌನವನೂ ಅದಮ್ಯವಾಗಿ ಪ್ರೀತಿಸಲಾರಂಭಿಸಿಬಿಟ್ಟೆ.

ಒಮ್ಮೆ ಅವನನ್ನೇ ಕೇಳಿಬಿಟ್ಟೆ.
ಯಾಕೆ ನಾನಿನ್ನ ಇಷ್ಟೊಂದು ಪ್ರೀತಿಸ್ತೇನೆ.??
ಒಂದು ಕ್ಷಣ ಭಯದಿಂದ ನನ್ನ ನೋಡಿ, ಅದೇ ಭಯದ ದನಿಯಲ್ಲಿ ಹೇಳಿದ್ದ -
ಪ್ರೀತಿಗೆ ಕಾರಣವ ಹುಡುಕ ಹೋಗ್ಬೇಡ.
ಹುಡುಕ ಹೊರಟರೂ ಉತ್ತರ ಸಿಗದಂತೆ ನೋಡಿಕೋ.
ಯಾಕೇಂದ್ರೆ ಉತ್ತರ ಸಿಕ್ಕ ದಿನ ಪ್ರೀತಿ ಸತ್ತಂತೆಯೇ ಸರಿ.
ಬದುಕನೇ ಕಳಕೊಂಡು ಬದುಕಿರುವ ಶಕ್ತಿ ನಂಗಿಲ್ಲಾ ಕಣೇ.
ಅಲ್ಲಿಂದ ಮುಂದೆ ಆ ಪ್ರಶ್ನೇನ ನನ್ನಲ್ಲಿ ನಾನೂ ಕನಸಲ್ಲಿ ಕೂಡಾ ಕೇಳಿಕೊಂಡಿಲ್ಲ.

ಆಯೀ -
ಅಷ್ಟಕ್ಕೂ ಯಾರನ್ನಾದ್ರೂ ಯಾಕಾದ್ರೂ ಪ್ರೀತಿಸ್ತೇವೆ ಅನ್ನೋದಕ್ಕೆ ನಿಂಗಾದ್ರೂ ಉತ್ತರ ಗೊತ್ತಾ.?
ಅಪ್ಪ ಅಮ್ಮ ತೋರಿಸಿದ, ಆವರೆಗೆ ಸರಿಯಾಗಿ ನೋಡಿಯೂ ಇರದವನೊಂದಿಗೆ ಇಷ್ಟೆಲ್ಲ ವರ್ಷ ಬದುಕ ಹರವಿಕೊಂಡೆಯಲ್ಲ...
ನಿನ್ನದೆಂಬುದೆಲ್ಲವನೂ ನೀಡಿ ಪ್ರೀತಿಸಿದೆಯಲ್ಲ ಯಾಕೆ.??
ಅಂಥ ಸಿಡುಕಿನ ಅಪ್ಪ (ಅಪ್ಪ ನಿನ್ನೊಂದಿಗೆ ಸರಸವಾಗಿದ್ದದ್ದನ್ನ ನಾನಂತೂ ನೋಡಿಲ್ಲ) ಕೂಡ ಪ್ರತಿ ಬಾರಿ ಪೇಟೆಗೆ ಹೋದಾಗಲೂ ಎರಡಾದರೂ ಉತ್ತಪ್ಪವನ್ನು ನಿನಗಿಷ್ಟ ಅಂತ ತರ್ತಾರಲ್ಲ ಯಾಕೆ.?
ಹೂವೆಂದರೆ ನಂಗೆ ಎಷ್ಟಿಷ್ಟ ಎಂದು ನಿಂಗೊತ್ತು. ಚಿನ್ನು ಬೆಕ್ಕು, ಜೂಲಿ ನಾಯಿ, ಕೊಟ್ಟಿಗೆಯ ಚಂದ್ರಿ ಕರು, ರಾಡಿ ಗದ್ದೆ, ಗುಡಿಯ ಗಣಪನೆದುರಿನ ದೊಡ್ಡ ಘಂಟೆಯ ಸದ್ದು ಎಲ್ಲ ನಂಗಿಷ್ಟ. ಅವೆಲ್ಲಕ್ಕಿಂತ ಈಗಲೂ ನಂಗಿಂತ ಸುಂದರಿ ಆಗಿರೋ ನೀನಂದ್ರೆ ಎಷ್ಟೊಂದು ಪ್ರೀತಿ. ಆಗೆಲ್ಲ ಯಾಕೇಂತ ಕೇಳದೇ ನನ್ನ ಇಷ್ಟಗಳಲ್ಲಿ ಖುಷಿಪಟ್ಟ ನೀನು ಈಗ ಮಾತ್ರ ಕಾರಣ ಕೇಳುವ ಹಂಗೇಕೆ.?
ನಂಗರ್ಥವಾಗುತ್ತೆ ಅಮ್ಮಾ ನಿನ್ನ ಧಾವಂತ. ಆದರೆ ನಾನು ನಿನ್ನ ಮಗಳು. ಹಾಗೆಲ್ಲ ಸುಲಭಕ್ಕೆ ಎಡವುವಳಲ್ಲ ಭಯಬೀಳದಿರು.
ನನ್ನ ಹುಡುಗ ನನಗಿಂತ ನನ್ನ ಜಾಸ್ತಿ ಪ್ರೀತಿಸ್ತಾನೆ ಎಂಬ ಖಾತ್ರಿ ನಂಗಿದೆ.
ಅವನದು ಮರಳ ದಂಡೆಯ ಸಹನೆಯಂಥ ಪ್ರೀತಿ...
ಒಂದೇ ಬೇಸರ ಕೆಲವೊಮ್ಮೆ ಸಾಗರದ ಸಾವಿರ ಪ್ರಶ್ನೆಗಳಿಗೆ ದಂಡೆಯ ನಸುನಗೆಯ ಮೌನವೇ ಉತ್ತರ ಅಷ್ಟೇ.
ಆ ಮೌನವೇ ಕಾಯ್ದೀತು ನಮ್ಮಿಬ್ಬರ ಬದುಕುಗಳ.

ಆಯೀ ಯಾಕೆ ಪ್ರೀತಿಸಿದೆ ಅಂತ ಹೇಳಲಾರೆನಾದರೂ ನಮ್ಮಿಬ್ಬರ ನಡುವಿನ ಒಂದಷ್ಟು ಭಾವಗಳ ನಿಂಗೆ ಹೇಳ್ಬೇಕು.
ನನ್ನ ಬಿಟ್ಟೂ ಬಿಡದ ಬಡಬಡಿಕೆಗಳನ್ನೆಲ್ಲ ಮೌನವಾಗಿ ಆಲಿಸುವ ಅವನ ಸಹನೆ ಮುದ್ದು ಬರಿಸುತ್ತೆ ಒಮ್ಮೊಮ್ಮೆ. 
ಅವನ ಕೈಹಿಡಿದು ಬೀದಿಯಲಿ ನಡೆವಾಗ ದಾರಿಯಲ್ಲಿನ ಹುಡುಗೀರೆಲ್ಲಾ ಆಸೆ ಕಣ್ಣಿಂದ ಅವನ ನೋಡುವಾಗ ಹೆಮ್ಮೆ ಅನ್ನಿಸುತ್ತೆ ನಂಗೆ.
ಏಕಾಂತದಲಿ ಅವನ ಮಡಿಲ ಸೇರುವ ನನ್ನ ಮಗುವಂತೆ ದಿಟ್ಟಿಸುವ ಅವನ ಕಂಗಳು ನಂಗೆ ಆಯೀ ನಿನ್ನನ್ನೇ ನೆನಪಿಸುತ್ತೆ.
ಒಮ್ಮೊಮ್ಮೆ - ನಿನ್ನೆ  ಮೊನ್ನೆ ಸತ್ತ, ಇಂದೂ ಸಾಯುತಿರುವ, ಅರ್ಧಕ್ಕೇ ಆತ್ಮಹತ್ಯೆ ಮಾಡ್ಕೊಂಡ, ನಾಳೆಗಳಲ್ಲೂ ಸಾಯಲಿರುವ ಕನಸುಗಳ ಬಗ್ಗೆ ಮಾತಾಡ್ತಾ ಅವನು ಭಾವುಕನಾದಾಗ ನನ್ನಂತೇ ಅವನೂ ಅತ್ತು ಬಿಡಲಿ ಎದೆಗವುಚಿಕೊಂಡು ಸಂತೈಸಿಯೇನು ಅಂತನಿಸುತ್ತೆ.
ಆದರವನು ಮಹಾ ಸ್ವಾಭಿಮಾನಿ ಪ್ರಾಣಿ.
ಎದೆಯ ನೋವನೆಂದೂ ಕಣ್ಣ ಹನಿಯಾಗಲು ಬಿಡಲೊಲ್ಲ.
ಅತ್ತು ಬಿಡು ಮನಸು ಹಗುರಾದೀತು ಅಂದರೆ ಗಂಡಸು ಕಣೇ ಎಂಬ ಉತ್ತರ.
ಆಗೆಲ್ಲ ನಂಗೆ ನಾನು ಹೆಣ್ಣಾಗಿದ್ದರ ಬಗ್ಗೆ ಖುಷಿಯಾಗುತ್ತೆ.
ಯಾಕಮ್ಮ ಗಂಡಸು ಅಳಲೇ ಬಾರದಾ...??
ತನ್ನ ಪ್ರೀತಿಯ ಮುಂದೆಯೂ...???

ಅರಳಿದ ಹುಣ್ಣಿಮೆಯಂದು ಉಕ್ಕುವ ಕಡಲನ್ನು ನೋಡಿ ಮುದಗೊಳ್ಳುತ್ತಿದ್ದರೆ ನಾನು - ನನ್ನನೇ ನೋಡುತ್ತಾ ಮೈಮರೆಯುತ್ತಾನೆ ಅವನು...
ಮಲ್ಲಿಗೆ ಬಿಳುಪಿನ ಹತ್ತಾರು ಚೆಲುವೆಯರ ನಡುವೆಯೂ ಈ ಕಪ್ಪು ಹುಡುಗಿಯನೇ ಹುಡುಕಾಡಿ, ಸುಳ್ಳೇ ನಗುವಾಗ ನಾನು  ಚಡಪಡಿಸುತ್ತಾನೆ ಅವನು...
ಬಚ್ಚಲ ಏಕಾಂತದಲಿ ನನ್ನ ನಾ ಕಾಣುವಾಗ - ಅವನ ನೋಟದ ನೆನಪಾಗಿ ಸಣ್ಣಗೆ ಕಂಪಿಸಿ ನಾಚುತ್ತೇನೆ ನಾನು...

ದೂರ ನಿಂತೇ ನನ್ನಲೇನೋ ಹುಡುಕುವಂತಿರುವ ಆ ಅವನ ಶಾಂತ ಕಂಗಳಲ್ಲಿರುವುದು ಆಸೆಯಾ.? ಸ್ನೇಹಾಭಿಮಾನವಾ.?? ಪ್ರೀತಿಯಾ.??? ಆರಾಧನೆಯಾ.???? ಇವುಗಳೆಲ್ಲದರ ಮಿಶ್ರಣದ ಇನ್ಯಾವುದೋ ಭಾವವಾ.?????
ಏನೊಂದೂ ಅರ್ಥವಾಗದೇ ಒದ್ದಾಡುತ್ತೆ ನನ್ನ ಮನಸು ಒಮ್ಮೊಮ್ಮೆ...
ಆದರೆ ಈ ಕ್ಷಣ -
ಕನಸುಗಳ ಜೋಕಾಲಿಯಲಿ ಜೀಕುವ ರೋಮಾಂಚನವಷ್ಟೇ ನನ್ನದು...

ನನ್ನ ಪ್ರೀತಿ, ನನ್ನ ಭಾವ ನಿನಗರ್ಥವಾಗಲು ಇಷ್ಟು ಸಾಕೆಂದುಕೊಳ್ತೇನೆ.
ಬೇಡದೆಯೂ ಸಿಗುವ ನಿನ್ನ ಹಾರೈಕೆ ನನ್ನ ಕಾಯುತ್ತೆ ಅನವರತ...
ಅಪ್ಪನ್ನ ಒಪ್ಪಿಸುವ ಕೆಲಸವೂ ನಿಂದೇನೆ.
ಆಯೀ - ಪ್ಲೀಸ್ ಪ್ಲೀಸ್ ಪ್ಲೀಸ್...

Thursday, September 13, 2012

ಗೊಂಚಲು - ನಲವತ್ತರ ಮೇಲೆ ಮೂರು.....

ದಾರಿ.....




ಸಾವಿನ ಮನೆ ಕಡೆಗೆ ಮುಖ ಮಾಡಿ
ಉದ್ದಕ್ಕೂ ಬಿದ್ದುಕೊಂಡಿದೆ 
ಬದುಕ ದಾರಿ...

ಅದು ಒಮ್ಮುಖ ಪಥ...

ಒಂದು ಕ್ಷಣಕೂ ತಿರುಗಿ ಬರುವಂತಿಲ್ಲ
ಜೀವನ ರಥ...

ತೋಚಿದಂತೆ ಸಾಗುತಿರುವುದಷ್ಟೇ ಕೆಲಸ...

ಕಷ್ಟಗಳೆಂಬ ಕಲ್ಲು ಮುಳ್ಳುಗಳ
ಭರವಸೆಯ ಚಪ್ಪಲಿ ತೊಟ್ಟು ಹಾಯುತಿರಬೇಕಷ್ಟೇ...

ಅಲ್ಲಲ್ಲಿಯ ತಗ್ಗು - ದಿಣ್ಣೆಗಳ ಏರಿಳಿಯಲು
ಸಹನೆಯೇ ಶಕ್ತಿ ಕವಚ...

ದಾರಿಪಕ್ಕ ಸಿಗುವ ನೋವಿನ ಬಯಲುಸೀಮೆಯ ಬಿಸಿಲು,
ನಲಿವಿನ ಮಲೆನಾಡ ನೆರಳುಗಳ ಕಂಡು
ಮೈಮರೆಯುವಂತಿಲ್ಲ...
ಹಾಗಂತ 
ನೋವು - ನಲಿವುಗಳಿಗೆ ಸ್ಪಂದಿಸದಿದ್ದರೆ
ಬದುಕಿಗೆ ಸೊಬಗೂ ಇಲ್ಲ...

ನಮ್ಮ ದಾಟಿ ಹೋಗುವವರೆಡೆಗೆ ಮತ್ಸರ,
ನಾವು ದಾಟಿದವರೆಡೆಗೆ ಕರುಣೆ
ಉಹುಂ
ಅವಕೆಲ್ಲ ಸಮಯವಿಲ್ಲ...
ಆದರೆ
ಇವೆಲ್ಲ ಕಾಡದೇ ಹೋದರೆ
ನಡೆವ ತುಡಿತ ಮೂಡುವುದಿಲ್ಲ...

ನಾವು ನಿಲ್ಲಬಯಸಿದರೂ
ರಥ ನಿಲ್ಲುವುದಿಲ್ಲ...
ಚಲನೆಯೊಂದೇ ಅದರ ನಿಯಮ...

ಗೊತ್ತಿಲ್ಲ -
ಯಾವ ತಿರುವಿನಲ್ಲಿ
ಯಾರ ಮೈಲಿಗಲ್ಲು...

ತನ್ನ ಪಯಣ ಮುಗಿದ ಕ್ಷಣ
ಆಳಿದವನಿಗೂ - ಆಳಿಸಿಕೊಂಡವಗೂ
ಸಿಗುವುದು
ಮೂರು ಹಿಡಿ ಮಣ್ಣು 
ಮತ್ತು
ಮೂರು - ಆರು ಅಡಿಯ ಅದೇ ಮಸಣದ ಮನೆ...

ಉಳಿದವರ ಮನದಲ್ಲಿ ಉಳಿದದ್ದು ನೆನಪಾಗಿ -
ಮಂದಹಾಸದ ನವಿರು
ಅಥವಾ
ವಿಕಟಾಟ್ಟಹಾಸದ ಕಸರು...

ಹಿಮ್ಮುಖ ಚಲನೆಯಿಲ್ಲದ ಹಾದಿಯಲಿ ನಡಿಗೆ ಜೋಪಾನ...

***@@@***

ದಾರೀಲಿ ಒಂದು ಚಿಟ್ಟೇನ ಕಂಡೆ.
ನಾನಿನ್ನೂ ನೋಡದಿದ್ದಂತ ಚೆಂದದ ಚಿಟ್ಟೆ.
ದೊಡ್ಡ ದೊಡ್ಡ ರೆಕ್ಕೆಗಳ ಬೂದು ಬಣ್ಣದ ಚಿಟ್ಟೆ.
ಒಂದು ಕ್ಷಣ ಬಿಟ್ಟ ಕಂಗಳಿಂದ ನೋಡುತ್ತ ನಿಂತೆ.
ಒಮ್ಮೆ ಮೃದುವಾಗಿ ಮುಟ್ಟಿದೆ.
ಅದರ ರೆಕ್ಕೆಗಳ ಹುಡಿ ಬೆರಳಿಗೆ ಅಂಟಿತು.
ಖುಷಿಯಾಯ್ತು.
ತಕ್ಷಣ ಆ ಚಿಟ್ಟೆ ಉಚ್ಚೆ ಹೊಯ್ದಿತು.
ಎಷ್ಟು ಖುಷಿಯಾಯ್ತು ಗೊತ್ತಾ...
ಪ್ರಕೃತಿಯ ಮಡಿಲ ವೈವಿಧ್ಯವ ಆಸ್ವಾದಿಸ್ತಾ ಅಲೆಯುತಿದ್ದರೆ ಎಂತೆಂಥ ರೋಮಾಂಚನಗಳೋ...
ಬದುಕು ಕರುಣಿಸುವ ಇಂಥ ಪುಟ್ಟ ಪುಟ್ಟ ಖುಷಿಗಳ ಮನಸಾರೆ ಆಸ್ವಾದಿಸಿದಾಗಲೇ ದಾರಿ ಸುಗಮ ಮತ್ತು ಸಹನೀಯ ಅನ್ನಿಸೀತು...
ಕೊನೆಯ ಉಸಿರಲ್ಲಿ ಸಾರ್ಥಕ್ಯದ ನಗು ಅರಳೀತು...

ಚಿತ್ರ : ನನ್ನ ಕ್ಯಾಮರಾ ಕಣ್ಣಲ್ಲಿ ಯಾವುದೋ ದಾರಿಯ ತಿರುವು...

Wednesday, September 5, 2012

ಗೊಂಚಲು - ನಲವತ್ತೆರಡು.....


ಕೇಳಬಾರದ (?) ಕೆಲವು ಪ್ರಶ್ನೆಗಳು.....

ಬದುಕಿನ ಯಾವುದೋ ತಿರುವಿನಲ್ಲಿ ಫಕ್ಕನೆ ಎದುರಾಗಿ ಪಯಣಕ್ಕೆ ಜತೆಯಾದ ಗೆಳೆಯ ನಟರಾಜು (ನಟರಾಜು ಸೀಗೇಕೋಟೆ ಮರಿಯಪ್ಪ) ತಮ್ಮ ಫೇಸ್ ಬುಕ್ ಗೋಡೆ ಬರಹದಲ್ಲಿ ಹೀಗಂತ ನಾಲ್ಕು ಸಾಲು ಬರೆದಿದ್ದರು.
ನೀನು ನಿನ್ನ ಎಲ್ಲ ಭಾವನೆಗಳ
ನನ್ನೊಡನೆ ಹಂಚಿಕೊಳ್ಳುವೆಯಾ.?
ಹಾಗಾದರೆ ಬಾ ಮೊದಲು 
ಊಟವನ್ನು ಹಂಚಿ ತಿನ್ನೋಣ...

ಅವರ್ಯಾವ ಭಾವದಲ್ಲಿ ಬರೆದರೋ ನಾನ್ಯಾವರೀತಿ ಅರ್ಥೈಸಿಕೊಂಡೆನೋ ಒಟ್ಟಿನಲ್ಲಿ ಎಲ್ಲ ಹೇಳಿಕೊಳ್ಳುವುದು ಎಂಬ ಮಾತು ನನ್ನಲೇನೋ ಗೊಂದಲ ಸೃಷ್ಟಿಸಿಬಿಟ್ಟಿತು.
ಅವರನ್ನೇ ಕೇಳಿದೆ.
ಅಲ್ಲಾ ಕಣಣ್ಣೋ ಊಟವನ್ನು ಹಂಚಿಕೊಂಡಷ್ಟು ಸುಲಭವಾ ಮನದೆಲ್ಲ ಭಾವಗಳನು ಹಂಚಿಕೊಳ್ಳುವುದು.?
ನಮ್ಮೊಡನೆ ಅನ್ನವನ್ನು ಹಂಚಿಕೊಳ್ಳಲಾರದವರು ಭಾವನೆಗಳನ್ನು ಹಂಚಿಕೊಳ್ಳಲಾರರು ಗುರುಗಳೇ [:):):)] ಅಂತಂದರು.
ಉಹುಂ ನಂಗೆ ಸಮಾಧಾನವಾಗಲಿಲ್ಲ.

ಶತ್ರುವಿನೊಂದಿಗೂ ಒಂದೊಮ್ಮೆ ಊಟ ಹಂಚಿಕೊಳ್ಳಬೇಕಾದೀತು ಹಾಗೂ ಹಂಚಿಕೊಂಡೇವು...ಆದರೆ ನಮ್ಮೊಳಗಣ ಎಲ್ಲ ಭಾವಗಳನ್ನು...??
ನಮ್ಮೊಳಗಣ ಎಲ್ಲ ಭಾವಗಳನ್ನೂ ಇನ್ನೊಬ್ಬರೊಂದಿಗೆ ಪೂರಾ ಪೂರಾ ಹಂಚಿಕೊಳ್ಳುವುದು ಎಂಬ ಮಾತಲ್ಲೇ ನಂಗೇನೋ ಕಸರು ಕಾಣಿಸುತ್ತೆ.
ಅವರು ಎಷ್ಟೇ ಆಪ್ತರು ಎಂದಾದರೂ.
ನಮ್ಮ ಮನದ ಭಾವಗಳನ್ನು ನಮ್ಮದೇ ಬುದ್ಧಿಯೊಂದಿಗೆ ಹಂಚಿಕೊಳ್ಳುವುದೂ ಕಷ್ಟ ಎಂದೆನಿಸುವ ಹೊತ್ತಲ್ಲಿ...ಬೇರೊಬ್ಬರೊಂದಿಗೆ...!!!
ಹೆಚ್ಚಿನ ಸಲ ಆಗೋದು ಹಾಗೇ - ಆಡಬೇಕಿಲ್ಲದ ನೂರೆಂಟು ಮಾತುಗಳನ್ನು ಗಂಟೆಗಳ ಕಾಲ ಆಡುತ್ತಿರುತ್ತೇವೆ. ಆಡಲೇಬೇಕಿದ್ದ ಒಂದು ಮಾತು ಅಲ್ಲೆಲ್ಲೋ ಮನದ ಮೂಲೆಯಲ್ಲೇ ಕಚ್ಚಿಕೊಂಡುಬಿಟ್ಟಿರುತ್ತದೆ. ಆಡಲು ಶಬ್ದಗಳ ಕೊರತೆಯಿಂದೇನಲ್ಲ. ಹೆಚ್ಚಾದ ಶಬ್ದಗಳ ಆಡಂಬರದ ಕಾರಣ ಸತ್ತ ಮಧುರ ಮೌನದಿಂದ...(ಹೇಳದೆಯೂ ಎಲ್ಲ ಕೇಳಿಸುವ ಮೌನ ಸಾಧಿಸಲಾದೀತಾ..?)

ಒಂದಿಡೀ ಬದುಕು ಗಂಡನ ಎಂಜಲು ತಾಟಿನಲ್ಲೇ ಊಟ ಮಾಡುತ್ತಾ ಕಳೆದ ಹಳ್ಳಿ ಹೆಣ್ಣ ಮನದಲ್ಲೂ ಅದೆಷ್ಟು ಭಾವಗಳು ನರಳುತ್ತಲಿದ್ದಾವೋ ಗಂಡನೆದುರು ಅರುಹಲಾಗದೇ ಬಚ್ಚಿಟ್ಟುಕೊಂಡಂತವು...
ಯಾವುದೋ ಮುನಿಸು, ಸಣ್ಣ ಬೇಸರ, ತೋರಲಾಗದ ಅಸಮಾಧಾನ, ಅಷ್ಟೇಕೆ ಒಂದು ಪ್ರೀತಿ ಕೂಡ ಹೇಳದೇ ಒಳಗೇ ಉಳಿದಿದ್ದೀತು...

ಕಾಲು ಶತಮಾನ ಒಂದೇ ಹಾಸಿಗೆ ಹಂಚಿಕೊಂಡ ಹೆಂಡತಿಗೂ ಹೇಳದೇ ಉಳಿದ ಅದೆಷ್ಟು ಸತ್ಯಗಳಿದ್ದಾವೋ ಗಂಡನೆಂಬುವನ ಎದೆಯಾಳದಲ್ಲಿ...
ಸುಖ ಕಳೆದ ಮೇಲೆ ಈಗಲೂ ನಿತ್ಯ ನೆನಪಾಗುವ ಅದೇ ಹಳೆ ಗೆಳತಿಯ ಒನಪು...

ಹತ್ತಾರು ವರ್ಷ ಜೊತೆ ಬಾಳಿದ ಮೇಲೂ ಒಂದಷ್ಟು ಸತ್ಯಗಳು ಆಚೆಯೇ ಉಳಿಯುತ್ತವಲ್ಲವಾ..?
ನಾವದಕ್ಕಿಟ್ಟುಕೊಂಡ ಸುಂದರ ಹೆಸರು ಪ್ರೈವೇಟ್ ಲೈಫು, ಒಂಚೂರು ಪ್ರೈವೆಸಿ ಇತ್ಯಾದಿ ಇತ್ಯಾದಿ...

ಭಾವಗಳೆಂದರೆ ಅಂತರಂಗದ ಮಾತುಗಳಲ್ಲವಾ.?
ಎಲ್ಲ ಅರುಹುವುದೆಂದರೆ ಅಂತರಂಗದ ಬೆತ್ತಲೆಯಲ್ಲವಾ..??
ಅಂತರಂಗದಿಂದ ಬೆತ್ತಲಾಗುವುದೆಂದರೆ ಗಂಡ ಉಂಡ ಅದೇ ತಾಟಿನಲ್ಲಿ ಉಂಡು ಕೈತೊಳೆದಷ್ಟು ಅಥವಾ ಒಂದೇ ಹಾಸಿಗೆಯಲ್ಲಿ ಮಗ್ಗಲು ಬದಲಿಸಿದಷ್ಟು ಸುಲಭವಾ...???
ಪ್ರಾಮಾಣಿಕವಾಗಿ ಅಂತರಂಗದಿಂದಲೂ ಬೆತ್ತಲಾಗಬಲ್ಲವಳಾದರೆ ಸೂಳೆ ಕೂಡ ನಿಜದ ಸನ್ಯಾಸಿಯೆನಿಸಿ ಸ್ವರ್ಗ ಸೇರಿಯಾಳೇನೋ...
ಮನದ ಭಾವವೊಂದು ಮಾತಾಗಿ ಹೊರಬರುವ ಹೊತ್ತಿಗೆ ಅದು ಬರೀ ಅರ್ಧಸತ್ಯ ಮಾತ್ರವಾಗಿರುತ್ತೆ ಅಂತನಿಸುತ್ತೆ ನಂಗೆ.
ಕಾರಣ - ಮನಸು ಮತ್ತು ಮಾತುಗಳ ನಡುವೆ ಬುದ್ಧಿಯೆಂಬ ಅಗೋಚರ ಸೆನ್ಸಾರ್ ಮಂಡಳಿ ಕೆಲಸ ಮಾಡುತ್ತಿರುತ್ತೆ.
ಹಾಗಾಗಿ ಆಳದ ಸತ್ಯ ಅಲ್ಲೇ ಸಮಾಧಿಯಾಗಿರುತ್ತೆ ಮನದಾಳದಲ್ಲಿ...

ಕೊನೆ ಮಾತು: ಪ್ರೇಮದ (?) ವಂಚನೆಯಿಂದ ನೊಂದು ಬದುಕಿನಿಂದಲೇ ವಿಮುಖನಾಗಿ, ಹೆಣ್ಣು ಮಾಯೆ ಅವಳ ಪ್ರಭಾವಲಯದಲ್ಲಿರುವ ಈ ಲೌಕಿಕದಾಚೆಯ ಜ್ಞಾನವನರಸಲು ಹಿಮಾಲಯದೆಡೆಗೆ ಬರಿಗಾಲ ಪಯಣವನ್ನಾರಂಭಿಸಿದ ಯುವಕನೋರ್ವ ನಡಿಗೆಯ ಸುಸ್ತು ಕಳೆಯುವ ವಿಶ್ರಾಂತಿ ಕಾಲದಲ್ಲಿ ಸಿಕ್ಕ ಬೀದಿ ಬದಿಯ ವೇಶ್ಯೆಯ ಮಡಿಲಲ್ಲಿ ಜ್ಞಾನೋದಯವಾಗಿ ಮತ್ತೆ ಬದುಕಿಗೆ ಹಿಂದಿರುಗಿ ಸಂಭ್ರಮಿಸಿದನಂತೆ...

ಏನೋ ಬರೆದಿದ್ದೇನೆ. ಸ್ವಲ್ಪ ಗೊಂದಲವಿದೆ. (ಗೊಂದಲದ ಸತ್ಯಗಳು ಅನ್ನಬಹುದಾ..?) ತಪ್ಪೋ ಸರಿಯೋ ಗೊತ್ತಿಲ್ಲ. ನನ್ನಲ್ಲಿ ಹುಟ್ಟಿ ಕಾಡಿದ ಪ್ರಶ್ನೆಗಳ ಕೇಳದಿರಲಾಗದ ನನ್ನ ಚಪಲದಿಂದಾಗಿ ನಿಮ್ಮೆದುರಿಗಿಟ್ಟಿದ್ದೇನೆ. ನಿಮ್ಮೆಲ್ಲ ಅಭಿಪ್ರಾಯಗಳಿಗೂ, ವಿಚಾರ ಮಂಥನಗಳಿಗೂ ನನ್ನಲ್ಲಿ ಸದಾ ಸ್ವಾಗತವಿದೆ...

Wednesday, August 29, 2012

ಗೊಂಚಲು - ನಲವತ್ತು + ಒಂದು.....



ಅಸಂಬದ್ಧ ಆಲಾಪಗಳು.....

ಮರಣಕ್ಕೆ ಮುಹೂರ್ತ ಇಟ್ಟ ದಿನದಿಂದ ಬದುಕಿಗೆ ಹೊಸ ಬಣ್ಣ ಬಂದಿದೆ - ಮದುಮಗನ ಸಂಭ್ರಮ ಮತ್ತು ತಲ್ಲಣದಂತದ್ದು...

ಆಸೆಯೇ ದುಃಖಕ್ಕೆ ಮೂಲವೆಂದಾದರೆ - ನಾನು ದುಃಖವನ್ನೂ ಪ್ರೀತಿಸುತ್ತೇನೆ.
ಕಾರಣ ಆಸೆ ಕನಸುಗಳೆಲ್ಲ ಮುಗಿದ ದಿನ ಬದುಕು ಜಡವೆನ್ನಿಸುತ್ತೆ ನನಗೆ.
ಮನದಲ್ಲಿ ಈಡೇರದ ಆಸೆಗಳು, ಕಣ್ಣ ಮುಂದೆ ನನಸಾಗದ ಕನಸುಗಳು ಒಂದಷ್ಟಾದರೂ ಇಲ್ಲದೇ ಹೋದರೆ ಬದುಕು ಶಲ್ಲಿಲ್ಲದ ಗಡಿಯಾರದಂತೆನಿಸುತ್ತೆ.

ಸನ್ಯಾಸಿಯ ಪಾರಮಾರ್ಥಿಕ ಚಿಂತನೆ ಕೂಡಾ ಒಂದು ಆಸೆಯೇ ಅಲ್ಲವಾ..?
ಸಾವಿನಾಚೆಯ ಸುಖದ ಭ್ರಮೆಯ ಬಯಕೆ ಅಂತನ್ನಿಸುತ್ತೆ ನನಗೆ.
ಸರ್ವಸಂಗ ಪರಿತ್ಯಾಗಿಯೊಬ್ಬ (?) ತನಗಾದ ಜ್ಞಾನೋದಯವನ್ನು ಹಂಚಹೊರಟದ್ದು ತಾನು ಇತರರಲ್ಲಿ ತನ್ನ ನಂತರವೂ ಬದುಕಿರಬೇಕೆಂಬ ಆಳದ ಆಸೆಯಿಂದಲೇ ಇರಬಹುದಾ...??

ಒಂದಿಷ್ಟು ಒಳ್ಳೇತನ, ಮನಸಿನ ಕಳ್ಳತನ, ಒಂಚೂರು ನಗು, ಎರಡು ಹನಿ ಕಣ್ಣೀರು, ಸಣ್ಣ ಈರ್ಷ್ಯೆ, ಇಷ್ಟೇ ಇಷ್ಟು ಉದಾರತೆ, ಸೋಲುವ ಭಯ, ಗೆಲ್ಲುವ ಖುಷಿ, ಎದೆ ಉಬ್ಬಿಸೋ ವಿಶ್ವಾಸ, ತಲೆ ತಗ್ಗಿಸೋ ವಿನಯ, ಆಗೀಗ ಅವರಿವರಿಗೆ ಹಂಚೋ ವಿನಾಕಾರಣದ ಪ್ರೀತಿ ಎಲ್ಲವನ್ನೂ ಒಳಗೊಳ್ಳೋ ಮನುಷ್ಯರೆಂದರೇ ನಂಗಿಷ್ಟ.

ಮನುಷ್ಯ ದೇವರೋ ಇಲ್ಲಾ ದಾನವರೋ ಆಗಲು ಹೋಗಿ ಎರಡನ್ನೂ ಒಳಗೊಂಡ ತನ್ನತನದ ಖುಷಿಗಳ ಕಳೆದುಕೊಳ್ಳುವುದು ಎಷ್ಟು ಸರಿ.?

ಸತ್ತ ಮೇಲೆ ಸ್ವರ್ಗ - ನರಕಗಳ ಆಯ್ಕೆ ನನಗೇ ಕೊಟ್ಟರೆ ನಾನು ನರಕವನ್ನೇ ಆಯ್ದುಕೊಂಡೇನು.
ವೈರುಧ್ಯಗಳಿಲ್ಲದ ಬರೀ ಸುಖಗಳೇ ತುಂಬಿರುವ, ನಿನ್ನೆ ನಾಳೆಗಳ ಹಂಗಿಲ್ಲದ ಸ್ವರ್ಗಕ್ಕಿಂತ - ಕಾವಲಿ ಎಣ್ಣೆಯ ಬಿಸಿ, ಮಂಜುಗಡ್ಡೆಯ ತಂಪು, ಶಿಕ್ಷೆಯ ವೈರುಧ್ಯದಲ್ಲಿನ ಕೊರಗು ಮತ್ತು ಖುಷಿ ಎರಡೂ ಇರುವ ನರಕವೇ ಚಂದವೆನಿಸುತ್ತೆ ನನಗೆ.
ಪ್ರಶ್ನಿಸಲಾಗದ ಇಂದ್ರನ ದೊಡ್ಡಸ್ತಿಕೆ, ಮೇನಕೆಯ ಅದೇ ನೃತ್ಯ, ಊರ್ವಶಿಯ ಸಖ್ಯಗಳಲ್ಲಿ ಎಷ್ಟೆಂದು ಸುಖ ಕಾಣುವುದು.
ವೈವಿಧ್ಯವಿಲ್ಲದ ಸುಖವೂ ಬೇಸರ ತಂದೀತು...

ನಗುವಿಗೆ ಭಾವುಕ ಶಕ್ತಿ ತುಂಬುವುದು ನೋವಿನ ಅರಿವೇ ಅಲ್ಲವೇ..?
ಹತ್ತು ಸೋಲುಗಳ ನಂತರದ ಒಂದು ಪುಟ್ಟ ಗೆಲುವು ಎಷ್ಟೆಲ್ಲ ಖುಷಿ ತಂದೀತು.
ಸಾವಿನ ಭಯವಿಲ್ಲದ ಬದುಕಿಗೆ ಥ್ರಿಲ್ ಎಲ್ಲಿಯದು...!!!
:::
ಯಾರೂ ಕೆಟ್ಟವರಲ್ಲ.
ಅವರವರ ಭಾವದಲ್ಲಿ ಎಲ್ಲರೂ ಸಂಭಾವಿತರೇ.
ನನ್ನ ಕಣ್ಣಲ್ಲೇ ಏನೋ ಐಬಿದೆ.
ನನ್ನ ಕಣ್ಣ ಹರಿವಿನಾಚೆಯೂ ಒಂದು ಬದುಕಿರಬಹುದೇ...
ಅದೂ ಸೊಗಸಾಗಿಯೇ ಇರಬಹುದೇ...
ಉಹುಂ ನಂಗೆ ನಂಬೋಕಾಗ್ತಿಲ್ಲ. ಅಲ್ಲಲ್ಲ ನಂಗೆ ನಂಬೋ ಮನಸಿಲ್ಲ.
ಸಾಗರವನ್ನು ಕಲ್ಪಿಸಿಕೊಳ್ಳಲೂ ನಂಗೆ ಇಷ್ಟವಿಲ್ಲ.
ನನ್ನ ಮನಸೊಂದು ಬಾವಿ.
ಸಾಗರ ವಿಶಾಲವಂತೆ, ಅಗಾಧವಂತೆ, ಆದರೆ ಉಪ್ಪಂತೆ...
ಅಲ್ಲಿಗೆ ದೊಡ್ಡವರ ಬಣ್ಣ ಬಯಲಾಯ್ತಲ್ಲ.
ಹಿಡಿದಾಹ ತಣಿಸದ ಅಗಾಧತೆಯಿದ್ದೇನು - ನೈದಿಲೆ ತಾ ನಗುವ ಕಲ್ಯಾಣಿಯು ನಾನು...
ಆದರೂ ಸಾಗರವನ್ನೊಮ್ಮೆ ನೋಡಬೇಕಿತ್ತು.

ದೊಡ್ಡವನಾಗಬೇಕೆಂದರೆ ಬೆಳೆಯಬೇಕು.
ಅಮ್ಮಮ್ಮಾ ಬೆಳೆಯೋದೆಂದರೇನು ಸುಲಭವಾ...
ಭೂಗರ್ಭ ಸೀಳಿ, ಆಳಕ್ಕೆ ಬೇರು ಬಿಟ್ಟು, ನೀರು ಗೊಬ್ಬರ ಹೀರಿ, ಕಾಂಡವ ಗಟ್ಟಿಗೊಳಿಸಿ, ಚಿಗುರನು ಆಗಸದೆಡೆಗೆ ಅರಳಿಸಬೇಕು.
ಬಿಸಿಲ ಬೇಗೆಗೆ ಸುಡದೆ, ಮಳೆಯ ತಂಪಿಗೆ ನಡುಗದೆ, ಗಾಳಿಗೆ ಬಾಗಿ ಹೇಗೆ ಹೇಗೋ ಉಸಿರ ಹಿಡಿದಿಡಬೇಕು.
ಬಿಸಿಲು, ಮಳೆ, ಗಾಳಿ ಎಲ್ಲ ಬೇಕು - ಯಾವುದೂ ಹೆಚ್ಚಾಗಬಾರದು.
ಹೌದು ಇಷ್ಟೆಲ್ಲ ಮಾಡಿ ಬೆಳೆದು ಸಾಧಿಸೋದೇನು..??
ಚಂದಿರನನ್ನು ಇನ್ನಷ್ಟು ಹತ್ತಿರದಿಂದ ನೋಡಬಹುದೇನೋ...
ಚಂದ್ರನ ಮೇಲೇ ನಡೆದಾಡಿದ ಸಮರ್ಥನೂ ಮೊನ್ನೆ ಇಹವ ತೊರೆದು ನಡೆದನಂತೆ.
ಆದರೂ ಚಂದಿರನ ಮೇಲೆ ಮೊದಲ ಹೆಜ್ಜೆ ಇಟ್ಟಾಗ ಅದ್ಭುತ ರೋಮಾಂಚಕ ಅನುಭೂತಿ ಆಗಿರುತ್ತಲ್ವಾ...!!!
ಅಲ್ಲೆಲ್ಲೋ ಬೆಟ್ಟದ ಮೇಲೆ ಮೋಡ ಕೈಗೇ ಸಿಗುತ್ತಂತೆ ನಾಳೆ ಹೋಗ್ಬೇಕು...
:::

ಪಡೆದುಕೊಂಡೆನೆಂಬ ಹೊತ್ತಿಗೇ ಕಳೆದುಕೊಂಡೇನೆಂಬ ಭಯ...
ಇಲ್ಲಿ ಚಿಗುರಿ ಇನ್ನೆಲ್ಲೋ ಕಮರುವ ಮಧುರ ಭಾವ ಬಂಧಗಳು...
ಕಂಗೆಡಿಸುತ್ತೆ -
ಬೆಳೆಸಿಕೊಳ್ಳಲೂ, ಉಳಿಸಿಕೊಳ್ಳಲೂ ಆಗದ ನನ್ನೊಳಗಿನ ನನ್ನದೇ ಅಸಮರ್ಥ ಮಾನಸಿಕತೆ...
:::
***ಇದು ಸಾಹಿತ್ಯವಲ್ಲ - 
ಕ್ಷಣ ಕ್ಷಣಕೂ ಅದಲುಬದಲಾಗುವ ಆಸೆ ನಿರಾಸೆಗಳ ಆಗರವಾದ ಮನದ ವೈರುಧ್ಯಭಾವಗಳ (ಸಂಚಾರಿ ಭಾವಗಳ) ಆಲಾಪವಷ್ಟೇ...

ಯಾರೋ ಅಂದರು ನಿನ್ನದೂ ಒಂಥರಾ ಸಾಹಿತ್ಯ ಸೇವೆಯೆಂದು. ಆಶ್ಚರ್ಯವಾಯಿತು. ನನ್ನ ಬರಹ ಸಾಹಿತ್ಯದ ಯಾವ ಪ್ರಕಾರದ್ದೆಂಬುದೂ ಗೊತ್ತಿಲ್ಲದ ನಾನು ನನ್ನ ತೆವಲಿಗೆ ಅಕ್ಷರಗಳನು ಸಾಲುಗಳಲಿ  ಗೀಚಿಕೊಂಡರೆ  ಅದು ಸಾಹಿತ್ಯ ಸೇವೆ ಹೇಗಾದೀತೆಂದು...



Monday, August 20, 2012

ಗೊಂಚಲು - ಹತ್ತು ಗುಣಿಸು ನಾಲ್ಕು.....


ಹತ್ತಿರವೋ..?
ದೂರವೋ..??


ಮನಸು ಮಾತಾಡುವುದ ನಿಲ್ಲಿಸಿಬಿಟ್ಟಿದೆ...

ಉಸಿರಾಟದಲ್ಲೂ ಜಾಗತೀಕರಣದ ಗಾಳಿ...

ಮನೆ ಬಾಗಿಲಲ್ಲೇ ಸಿಗುತ್ತವೆ
ವಿಶ್ವದರ್ಜೆಯ ಮುಖವಾಡಗಳು...

'ಅಮ್ಮ' - 'ಮಮ್ಮಿ'ಯಾಗಿ ಹೆಣವೆನಿಸಿಕೊಂಡಳು
ತೊದಲು ನುಡಿಯಲ್ಲೂ ಮಣ್ಣಗಂಧವಿಲ್ಲ...

ತುಟಿ - ನಾಲಿಗೆಗಳಿಗೆ ದಿನವಿಡೀ ಬಿಡುವಿಲ್ಲ 
ಕಿವಿ ಬಿಸಿಯಾಗಿ ಹೋಗಿದೆ 
ಕುಣಿಯುತ್ತಿವೆ
ಭಾವಸೆಲೆಯಿಲ್ಲದ ಸಾವಿರಾರು ಒಣ ಶಬ್ದಗಳು...

ಹಸುಳೆಯ ಕೈಯಲ್ಲೂ ಗಣಕಯಂತ್ರ 
ಬೆರಳುಗಳು ಮಾತಾಡುತ್ತವೆ ಅಜೀರ್ಣವಾಗುವಷ್ಟು
ಅಲ್ಲೂ ಕಡ ತಂದ ಸಂದೇಶಗಳದ್ದೇ ಮೇಲುಗೈ...

ಎಲ್ಲೋ ಯಾರೋ ಮಡಿದ ಸುದ್ದಿಗೆ
ಸಾಮಾಜಿಕ ಜಾಲತಾಣದಲ್ಲೊಂದು ತುಂಬ ನೋವಿನ (?)
ಗೋಡೆ ಬರಹ...
ವೃದ್ಧಾಶೃಮದಲ್ಲಿ ತನ್ನಮ್ಮ ನಿತ್ಯವೂ ಸಾಯುತಿರುವುದರೆಡೆಗೆ
ಜಾಣ ಮರೆವು...

ಕಾರು ಬಂಗಲೆಗಳೆಲ್ಲ ಸಾಧನೆಯ ಅಳತೆಗೋಲುಗಳಾಗಿ,
ಗಳಿಕೆ - ಹೂಡಿಕೆಗಳೇ ಬದುಕಾಗಿ ಹೋಗಿ,
ಜೀವಿಸುವ ಖುಷಿಯ ಕಳೆದುಕೊಂಡ 
ವಿಶ್ವ ಮಾರುಕಟ್ಟೆಯಲ್ಲಿ
ಭಾವ - ಬಂಧಗಳೆಲ್ಲ
ಅನಾಥ ಶವಗಳು...:::(((

ಚಿತ್ರ ಕೃಪೆ : ಅಂತರ್ಜಾಲದಿಂದ...
ಸೂಚನೆ: ಈ ಬರಹದ ಇನ್ನಷ್ಟು ವಿಸ್ತಾರವಾದ ಓದಿಗೆ ಗೆಳೆಯ ಹುಸೇನ್ ರ ಈ ಬ್ಲಾಗ್ ನೋಡಿ:
http://nenapinasanchi.wordpress.com/2012/09/21/%E0%B2%85%E0%B2%A8%E0%B2%BE%E0%B2%A5-%E0%B2%B6%E0%B2%B5%E0%B2%97%E0%B2%B3%E0%B3%81/

Thursday, August 16, 2012

ಗೊಂಚಲು - ಮೂವತ್ತ ಒಂಭತ್ತು.....

ಪ್ರೀತಿ ಮಳೆ -
ಮೈದುಂಬಿ ನಗುವ ಇಳೆ.....

ಅಲ್ಲಿ ನನ್ನೂರು -
ಆಕಾಶರಾಜನ ಪ್ರೇಮಧಾರೆಯಲಿ ಮಿಂದು -
ಹಸಿರು ಸೀರೆಯನುಟ್ಟು ಸರ್ವಾಲಂಕೃತ ಭೂಷಿತೆಯಾಗಿ ಕಂಗೊಳಿಸುತ್ತಿದೆ
ಸೀಮಂತದ ಸಂಭ್ರಮದಲ್ಲಿನ ತುಂಬು ಬಸುರಿಯಂತೆ...

ನಮ್ಮ ಮನೆಯ ಎಮ್ಮೆ ಚಂದ್ರಿಯೂ ಮತ್ತೊಮ್ಮೆ ಅಮ್ಮನಾಗುತ್ತಿದ್ದಾಳಂತೆ...

ದುಡಿವ ರೈತನ ಕಣ್ಣಲ್ಲಿ ಆನಂದ -
ಮೈಯ ಬೆವರಲ್ಲೂ ಮಣ್ಣ ಗಂಧ...

ಅಲ್ಲೀಗ
ಸಕಲ ಜೀವಗಳ ಸೃಷ್ಟಿ ವೈಭವ...
ನನ್ನಮ್ಮ ನಗುತಿದ್ದಾಳೆ...

:::

ಮಳೆ ಮತ್ತು ಪ್ರೀತಿ
ಚಿತ್ರಗಳಲ್ಲಿ...

ಸಂಕ...


ಹೆಜ್ಜೆ ಗುರುತು...


ಯಾರದೋ ಗೂಡು...


ಕಾಡಿನೆಡೆಗೆ ಪಯಣ...


ಮಳೆಯಲಿ ಮಿಂದ ಹಸಿರ ವೈಭವ...





ಅರಣ್ಯ ಇಲಾಖೆ ನಿರ್ಮಿಸಿದ ಕಾಡ ನಡುವಿನ ಸೂರು...

ಕಲ್ಲು ಬಾಳೆ...


ಎಲೆಗಳ ರಂಗೋಲಿ...


ಮಳೆಯು ತಬ್ಬಿದ ಇಳೆ...
ಕಂಚಿಕಲ್ಲು ಗುಡ್ಡದಿಂದ ಕಾಣುವ ಕಾಳಿ ನದಿ ಪಾತ್ರ...




ಕಾಡು ಮರಕೂ ಕಟ್ಟೆ...


ಕಾಡು ದಾರಿ...


ವಚನ ವನ...(ಉಳವಿ)


ಗದ್ದೆ ನೆಟ್ಟಿ...


ದೂರದ ಬೆಟ್ಟ...


ಯಾವುದೋ ತೊರೆ...


ಜೀವ ಧಾತೆ -ಕಾಳಿ ಮಾತೆ...(ಕಾಳಿ ಹಿನ್ನೀರು)


ತೆಪ್ಪ ತೇಲುತಿದೆ ಬಂಧ ಬೆಸೆಯಲು...(ಶಿವಪುರ - ಕುಂಬ್ರಾಳ)

ದೋಸೆಗೆ ಹಿಟ್ಟು ರೆಡಿ...

ಕರೆಂಟಿಲ್ಲೆ ಗ್ಯಾಸ್ ಹಚ್ತೆ ತಡೀರಿ...


ಮೀನುಗಾರನೊಬ್ಬನ ಗಾಡಿ ಶೆಡ್...

ಕಾಡ ಕುಸುಮ...

ದಾಸವಾಳದ ಅಂದ...

ಚಂದ್ರಿ...


ದಟ್ಟ ಕಾನನ, ಮುಗಿಲ ಚುಂಬಿಸೋ ಮರಗಳು, ಜಿಟಿ ಜಿಟಿ ಹನಿವ ಮಳೆ, ಜೀವ ಪಡೆದ ಝರಿ - ತೊರೆಗಳು, ಪಿಚಿ ಪಿಚಿ ರಾಡಿಯ ರಸ್ತೆಗಳು, ಹೆಜ್ಜೆ ಇಟ್ಟಲ್ಲೆಲ್ಲ ರಕ್ತ ಹೀರಲು ಸದಾ ಸನ್ನದ್ಧ ಉಂಬಳಗಳು, ಅಲ್ಲೆಲ್ಲೋ ಕಾಡ ನಡುವೆ ಅರಣ್ಯ ಇಲಾಖೆಯ ಸೂರು, ತುಂಬಿ ನಿಂತ ಕಾಳಿನದಿಯ ಹಿನ್ನೀರು, ನದಿಯಾಚೆಯ ಊರುಗಳ ಬೆಸೆಯಲು ತೇಲುವ ತೆಪ್ಪ, ದಾರಿಹೋಕರನೂ ಕರೆದು ಅನ್ನವಿಕ್ಕುವ ಆ ಜನರ ಪ್ರೀತಿ...

ಓಹ್....
ನಾಕು ದಿನ ದಾಂಡೇಲಿಯ ಗುಂದಾ ಎಂಬ ಊರಿನ ಕಾಡುಗಳಲ್ಲಿ ಅಲೆದಾಡಿ (ಸುಮಾರು 25 ಮೈಲುಗಳಿಗೂ ಹೆಚ್ಚು) ಪ್ರಕೃತಿಯ ಮತ್ತು ನನ್ನ ಬಂಧುಗಳ ಪ್ರೀತಿಯ ಮಳೆಯಲ್ಲಿ ಮಿಂದೆದ್ದ ಆ ಅನುಭವ ನೆನಪಾಗಿ ಕಾಡೀತು ಕೊನೆತನಕ...

Monday, August 6, 2012

ಗೊಂಚಲು - ಮೂವತ್ತೆಂಟು.....


ಕವಿಯಾಗುವ ಬಯಕೆಯಿಂದ.....

ನೂರಾರು ಕವನ ಸಂಕಲಗಳ ತಿರುವಿ ಹಾಕಿದೆ...

ಸಾವಿರಾರು ಹಾಡ ಕೇಳಿದೆ...

ಗಗನದ ವಿಶಾಲತೆಗೆ ಬೆರಗಾದೆ...
ಬೆಳದಿಂಗಳ ಸ್ನಾನ ಮಾಡಿದೆ...
ಚುಕ್ಕಿಗಳ ಚಿತ್ತಾರಕೆ ಚಕಿತನಾದೆ...

ಕಡಲ ಅಲೆಗಳ ಜೊತೆಗೆ ಸರಸವಾಡಿದೆ...

ಮಲೆನಾಡ ಧೋ ಮಳೆಯ ನೋಡುತ್ತಾ ಧ್ಯಾನಸ್ತನಾದೆ...

ಹೂವು ಅರಳುವ ಚಂದ ಸವಿದೆ...
ಅದರ ಗಂಧ ಹೀರಿದೆ...

ದುಂಬಿಯ ನಾದಕೆ ಕಿವಿಯಾದೆ...

ನಿದ್ದೆ ತೊರೆದು ಸೂರ್ಯೋದಯದೆದುರು ಹೃದಯ ತೆರೆದು ಕೂತೆ...
ಸೂರ್ಯಾಸ್ತದ ಕೆಂಪಿಗೆ ಕಣ್ಣಾದೆ...

ಮಗುವ ನಗುವಿಗೆ ಕಾರಣನಾಗಿ ನಲಿದಾಡಿದೆ...

ಹೆಣ್ಣ ಅಂದವ ಆರಾಧಿಸಿದೆ...
ಆಕೆಯ ಕಣ್ಣ ಕೊಳದಲಿ ಮಿಂದೆದ್ದೆ...

ದಟ್ಟಡವಿಯ ಹಸಿರ ಸಿರಿಯ ನಡುವೆ ಕಳೆದುಹೋದೆ...
ನವಿಲ ನಾಟ್ಯವ ಕಂಡೆ -
ಜಿಂಕೆ ಸಖ್ಯವನುಂಡೆ...

ಎಳೆಗರುವ ತುಂಟಾಟಕೆ ಸಾಕ್ಷಿಯಾದೆ...

ಜಲಪಾತದ ಧಾರೆಯೆದುರು ಮೌನಿಯಾದೆ...

ಚಿನ್ನಾರಿ ಮೀನ ಬಾಯಲ್ಲಿ ಕಾಲ್ಬೆರಳ ಕಚ್ಚಿಸಿಕೊಂಡೆ...

ತೆಂಗು ನೆಟ್ಟು - ನೀರನೆರೆದು - ಅದು ಬೆಳೆದು ಫಲವಂತವಾಗುವುದಕ್ಕೆ ಕಾಯುತ್ತಾ ಸಹನೆ ಕಲಿತೆ...

ಬದುಕ ಅಗಾಧತೆಗೆ ಬೆರಗಾದೆ...

ಕತ್ತಲ ಏಕಾಂತದಲಿ - ಬೆತ್ತಲ ಸುಖಾಂತದಲಿ...

ಕ್ಷಣ ಕ್ಷಣವನೂ ಅನುಭಾವಿಸಿ ಪದಗಳಾಗಿಸಲು ಎಷ್ಟೆಲ್ಲ ತಿಣುಕಾಡಿದೆ...
ಉಹುಂ...
ಒಂದಕ್ಷರವೂ ಪದವಾಗಿ ಹೊರಬರಲಿಲ್ಲ...

ಬೇಸತ್ತು - ಬಳಲಿ ಕಾಲೆಳೆಯುತ್ತ ಸಾಗಿದ್ದೆ - ಸೋತ ದ್ಯಾಸದಲಿ ಯಾವುದೋ ದೂರದೆಡೆಗೆ - ಅರಿವಿಲ್ಲದೇ...

ಇನ್ನೇನು ಒಂದು ಹೆಜ್ಜೆ ಆಚೆ...
ಸಾವಿನ ಮನೆಯ ಮುಂಬಾಗಿಲು...
ನಿನ್ನೆಗಳಿಗೆ ಜೀವ ಬಂದು -
ನಾಳೆಗಳ ಆಸೆ ಚಿಗುರಿ -
ಮನದಿ ಹೊಸ ಭಾವಗಳ ಸಂತೆ ನೆರೆದು -
ನೆನಪು, ಕನಸುಗಳೆಲ್ಲ ಪದಪುಂಜಗಳಾಗಿ -
ಇಳಿಗಾಲದಲಿ ಜ್ಞಾನದಂತ ಮೂಡಿದಂತೆ -
ಕವಿತೆಯೊಂದು ಜನ್ಮ ತಳೆಯಿತು.....

'ಗಲ್ಫ ಕನ್ನಡಿಗ' ಈ - ಪತ್ರಿಕೆಯಲ್ಲಿ  ಪ್ರಕಟಿತ 
http://gulfkannadiga.com/news/culture/13334.html