ನನ್ನ ಬೊಗಸೆಯಷ್ಟೇ ನನ್ನ ಸಮುದ್ರ.....
ಮರೆತ ಹಾಗೆ ನಟಿಸಬೇಡ, ಮರೆತೆನೆಂದು ಬೀಗಬೇಡ, ನೆನಪು ಬಿಡದು ಸುಮ್ಮನೆ...
ಉಸಿರಿಗಂಟಿದಳುವ ಮುಂದೆ ಮರೆವ ಮಾತು ಬರೀ ಸುಮ್ಮನೆ...
___ ನೆನಪ ಕತ್ತಿಗೆ ಸಾಣೆ ಹಿಡಿಯಲು ದಿನಾ ಸಂಜೆ ನಾಕು ಹನಿ ಮಳೆಯಾಗುತ್ತದೆ...
![]() |
ಕಳೆದೋಗಬೇಕು ಹಂಗೇ ಸುಮ್ನೆ - ನದಿ ಮೆರೆವ ಅಪರಿಚಿತ ಹಾದಿಯಲ್ಲಿ... |
ನಮ್ಮಷ್ಟಕ್ಕೆ ನಾವೇ ಜಗತ್ತಿಗೆಲ್ಲ ಉತ್ತರದಾಯಿತ್ವವನ್ನು ಆರೋಪಿಸಿಕೊಂಡು
ಅವರಿವರು ಕೇಳಿಯಾರೆಂಬ ಪ್ರಶ್ನೆಗಳನು ನಮ್ಮೊಳಗೇ ಕೇಳಿಕೊಂಡು
ಪ್ರಶ್ನೋತ್ತರಗಳ ಕಿರಿಕಿರಿಯೇ ಬೇಡವೆಂದು ಎಷ್ಟೆಲ್ಲ ಸಣ್ಣ ಸಣ್ಣ ಆಸೆಗಳಿಗೂ ಮುಸುಕೆಳೆದುಕೊಳ್ಳುತ್ತೇವಲ್ಲ...
ಬೇಕಾ
ನಮ್ಮ ಖುಷಿಗಳಿಗೆ ನಾವೇ ಎರವಾಗುವ ಈ ದೊಂಬರಾಟ...
ಕೇಳಲಿ ಬಿಡೂ ಅವರವರ ಬುದ್ಧಿ ಭಾವ ಮಟ್ಟಕ್ಕೆ ತಕ್ಕಷ್ಟು,
ಅವರಿಗೂ ಇಷ್ಟು ಮನೋರಂಜನೆಗೆ ಅವಕಾಶ ಕೊಟ್ಟಂಗಾಗುತ್ತಷ್ಟೇ - ಕಿಂಚಿತ್ ಸಮಾಜ ಸೇವೆ...
ಆದ್ರೆ,
ಅನಗತ್ಯ ಕುಹಕ, ಕುತೂಹಲಗಳಿಗೆಲ್ಲ ಉತ್ತರ ಹೇಳದೇ ಇರಬಹುದಾದ ಸ್ವಾತಂತ್ರ್ಯವ ನಮ್ಮಲ್ಲೇ ಉಳಸ್ಕೊಂಡ್ರಾಯ್ತು - ಆತ್ಮ ವಂಚನೆಯಿಲ್ಲದಲ್ಲಿ ನಕ್ಕು ಮುನ್ಸಾಗುವ ದಾರ್ಷ್ಟವ ಬೆಳಸ್ಕೊಂಡ್ರಾಯ್ತು ಅಷ್ಟೇ...
ತುಂಬಾ ಒಳ್ಳೇತನದ ಮಳ್ಳು ಬೇಕಿಲ್ಲ ಅಲ್ವಾ - ಯಾರದ್ದೇ ಆತ್ಮ ಸಮ್ಮಾನವ ಹೀಗಳೆಯದಿರುವಷ್ಟು ಸಭ್ಯತೆಯ ಸಲಹಿಕೊಂಡರೆ ಸಾಕೇ ಸಾಕು...
ಇಷ್ಟಕ್ಕೂ ನಾವು ಅರಳಬೇಕಾದದ್ದು ನಮಗೋಸ್ಕರ ಅಲ್ದಾ...
___ ಕಾಡೇ ಊರಾದಾಗ ಆನೆ ನಡೆದದ್ದೇ ದಾರಿ ಮತ್ತು ಅದೇ ಸರಿ...
&&&
ಅಲ್ವಾ -
ವ್ಯಥೆಗಳನೆಲ್ಲ ಕಥೆಯಾಗಿಸಿ ಪಾತ್ರಗಳಲ್ಲಿ ಕಳೆದೋಗಿ ಓದಿ ಓದಿಸಿ ನಕ್ಕು ನಗಿಸಿ ಅಂಟಿಸಿದ ತಲೆ ಬರಹವನೇ ಬರೆದವನೇ ಮರೆತು ಮುನ್ಸಾಗಲು ಹಲವಿಧ ವಾಚ್ಯಾರ್ಥ ಭಾವಾರ್ಥಗಳ ಅತ್ತರು ಮೆತ್ತಿಕೊಂಡ ಪರಿ ಪರಿ ಪದಗಳ ಸಾಂಗತ್ಯವೊಂದಿಲ್ಲದಿದ್ದಿದ್ದರೆ ಈ ಭಂಡ ಬಾಳು ಇನ್ನಷ್ಟು ಬಡವಾಗಿರುತ್ತಿತ್ತು ನೋಡು...
____ ನನ್ನೇ ನಾನು ನಿನಗೊಡ್ಡಿಕೊಳ್ಳುವ ನೂರು ನಖರೆಗಳು...
&&&
ವತ್ಸಾ -
ಈ ಬದುಕು ಸ್ವಭಾವತಃ ಸುಂದರ ಸಲ್ಲಾಪ...
ಯೆದೆಯಾರೆ ಗುರುತಿಸಿ ಪ್ರೀತಿಸಬೇಕಷ್ಟೇ - ಇದ್ದದ್ದು ಇದ್ದಂತೆ...
ಅನುಕ್ಷಣವ ಮನಸಾರೆ ಹೀರಬೇಕಷ್ಟೇ - ಸಿಕ್ಕಿದ್ದು ಸಿಕ್ಕಂತೆ...
___ ಬದುಕಿನ ಸೌಂದರ್ಯ ಮೀಮಾಂಸೆ...
&&&
ಅಂತಶ್ಚಕ್ಷುವೇ -
ಯಾರು ತಬ್ಬಿದರೆ ಎನ್ನೆದೆಯ ತಬ್ಬಲಿತನವೆಲ್ಲ ಎಬ್ಬಿ ಹೋಗುವುದೋ,
ಯಾರೆಡೆಯಲ್ಲಿ ನಾನು ನಾನಾಗಿ ನಕ್ಕು ನಗಿಸಿ ಅತ್ತು ಆಡಿ ಒಡನಾಡಬಲ್ಲೆನೋ,
ಅಂಥವರಿಂದ ಎನ್ನನು ದೂರ ನಿಲ್ಲಿಸುವ 'ನಾನು' ನನ್ನಲ್ಲಿ ಬೆಳೆಯದಂತೆ ಕಾಲಕೂ ಕಾಯ್ದು ಕೊಡು ಸಾಕು...
____ ಪ್ರಾರ್ಥನೆ...
&&&
ನಂಗೆ ಯಾರದೇ ಜವಾಬ್ದಾರಿ ಇಲ್ಲ ಎಂಬ ಸುಳ್ಳು ನಿರಾಳತೆ;
ನಾನು ಯಾರದ್ದೇ ಜವಾಬ್ದಾರಿ ಅಲ್ಲ ಎಂಬ ಸಂಕಟ ಸತ್ಯದ ಕರಾಳತೆ...
ಖಾಲಿ ಖಾಲಿ ಹೆಗಲಿನ ಹಗುರತೆ;
ಖಾಲಿತನದ ಎದೆ ಭಾರ...
ಸಂತೆಯಲ್ಲೂ ಸಾವಿನದ್ದು ಒಂಟಿ ಸಂಚಾರವೆಂಬ ನಿಜದ ಅರಿವಿದ್ದರೂ,
ಒಂಟಿ ಕೋಣೆಯಲಿನ ಬದುಕು ಸಾವಿನ ಸಂವಾದದ ಬಗ್ಗೆ ಹೇಳಲಾರದ ಭಯ...
ಭಾವಗಳು ತುಳಿತುಳಿದು ಯೆದೆಯ ತೀರ ತೀರಾss ರಾಡಿಯೆದ್ದರೂ,
ತಿಳಿಯಾಗಿ ನಗಬೇಕು ಕಣೋ ಶ್ರೀ ಕಣ್ಣ ಕೊಳ...
___ ಹೊಸತರ ಹಬ್ಬವಂತೆ...
ಬದುಕುವುದಕ್ಕೆ ಒಂದಾದರೂ ಉದ್ದೇಶ ಬೇಡವಾ ವತ್ಸಾ ಎಂಬ ಪ್ರಶ್ನೆ ಬಂದಾಗಲೆಲ್ಲ ಒಮ್ಮೆ ಗಟ್ಟಿಯಾಗಿ ಉಸಿರಾಡುತ್ತೇನೆ - ಉಸಿರಿದೆ, ಉದ್ದೇಶವೂ ಅದೇ...
ಉಸಿರ ಗತಿಯನ್ನು ತದೇಕ ಗಮನಿಸುವುದು ಧ್ಯಾನದ ಹಾದಿಯಂತೆ - ಬದುಕೂ ನಂಗೀಗ ಧ್ಯಾನದಂತೆ...
___ ಬೇಸಿಗೆಯ ಮಗ್ಗುಲಲ್ಲೇ ವಸಂತೋತ್ಸವ...
&&&
ವತ್ಸಾ -
ಒಂದಾನ್ವೇಳೆ ಬದುಕನ್ನೂ ನಿರ್ಲಕ್ಷ ಮಾಡ್ ಬಿಡ್ಲಕ್ಕು;
ಹಂಗೇಳಿ, ಹೆಣದ್ ವಿಲೇವಾರಿ ಮಾತ್ರ ತಡಾ ಅಪ್ಪಂಗಿಲ್ಲೆ ನೋಡು...
ಹುಳ್ಕ್ ಹಲ್ಲಾದರೂ ಅಷ್ಟೇಯಾ, ಹುಳ್ಕುಟ್ಟೆ ಪ್ರೀತಿ ಆದ್ರೂ ಹಂಗೇಯಾ...
___ ಹಾಳಾದದ್ ಒಂದು ಜ್ಞಾನ ದಂತದ ಉಪದೇಶ...
&&&
ಏನ್ಗೊತ್ತಾ -
ಉಳಿದೇ ಇರುತ್ತೆ ಒಂಚೂರು ಕಸರು, ಎಷ್ಟು ಗಾಢವಾಗಿ ಓದಿದರೂ - ಯಾವ 'ಕವಿತೆ'ಯೂ ಪೂರಾ ಪೂರಾ ಅರ್ಥವಾಗುವುದಿಲ್ಲ ನಂಗೆ...
ಈ ಬದುಕೂ ಹಂಗೇ...
ಕೊನೇಯ ನಿಟ್ಟುಸಿರು ಮತ್ತು ಶ್ರದ್ಧಾಂಜಲಿಯ ಕಣ್ಣ ಹನಿ ಎಷ್ಟು ಕಾಲಕೂ ಬದುಕು ಅಪೂರ್ಣ ಅಂತಲೇ ಗೊಣಗುತ್ತವೆ - ಅಂತೇ, 'ಕವಿತೆ' ಮುಗಿದಂತೆನಿಸುವುದಿಲ್ಲ...
___ ನನ್ನ ಬೊಗಸೆಯಷ್ಟೇ ನನ್ನ ಸಮುದ್ರ - ಬದುಕೂ, ಕವಿತೆ...
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)