Saturday, August 2, 2014

ಗೊಂಚಲು - ನೂರಿಪ್ಪತ್ತೊಂಬತ್ತು.....

ಭಯ.....
(ಇವೆಲ್ಲ ಕೇವಲ ನನ್ನ ಭಾವಗಳಷ್ಟೇ... ನಿಮಗುಪಯೋಗವಾಗುವಂತೆನಿಸಿದರೆ ಎತ್ತಿಕೊಳ್ಳಿ...)

ನಂಗೆ ನೀರೆಂದರೆ ಬಹಳವೇ ಭಯ...
ಈಜು ಕಲಿಯಲಾಗದೇ ಹೋದ, ಮುಳುಗಿ ಉಸಿರುಗಟ್ಟುವ ಭಯ...
ಅದಕೇ ಮತ್ತೆ ಮತ್ತೆ ಅಲೆಗಳೊಂದಿಗೆ ಸರಸಕ್ಕೆಂದು ಶರಧಿಯ ಮಡಿಲಿಗೆ ಹೋಗುತ್ತೇನೆ...

ನಂಗೆ ಗಾಳಿಯೆಂದರೆ ಒಂದಷ್ಟು ಭಯ...
ಅದರ ಓಘಕ್ಕೆ ಸಿಕ್ಕಿ ಅರಿವಿಲ್ಲದೂರಿಗೆ ತೂರಿ ಹೋಗುವ ಭಯ...
ಅದಕೇ ಗಿರಿಗಳ ನೆತ್ತಿಯನರಸಿ ಹೋಗಿ ತೋಳ್ದೆರೆದು ನಿಲ್ಲುತ್ತೇನೆ ಪವನಚುಂಬನಕಭಿಮುಖವಾಗಿ...

ನಂಗೆ ಬೆಂಕಿಯೆಂದರೆ ತುಂಬಾನೇ ಭಯ...
ಅದರ ಉರಿಯಲ್ಲಿ ಬದುಕೇ ಬೆಂದು ಹೋಗುವ ಭಯ...
ಅದಕೇ ನೆತ್ತಿಯ ಕಾಯಿಸುತ್ತಾ ಉರಿಬಿಸಿಲ ಬೀದಿಗಳಲಿ ಅಂಡಲೆಯುತ್ತಿರುತ್ತೇನೆ, ಅಂತೆಯೇ ಎದೆಯೊಳಗೂ ಒಂದಷ್ಟು ದ್ವಂದ್ವಗಳ ಬೆಂಕಿಯನಿಟ್ಟುಕೊಂಡು ಕೂತಿದ್ದೇನೆ...

ಆಗೀಗ ಮಾತೆಂದರೆ ವಿಪರೀತ ಭಯ...
ಎಲ್ಲ ಹಲುಬಿ ಬೆತ್ತಲಾಗುವ, ಮೌನದ ವಿರೋಧ ಕಟ್ಟಿಕೊಳ್ಳುವ ಭಯ...
ಅದಕೇ ಯಾರೋ ಅಪರಿಚಿತ ದಾರಿ ಬದಿಯಲ್ಲಿ ಹಾಯ್ ಅಂದರೂ ನಾಲಗೆ ತುರಿತದ ರೋಗ ಇರುವವನಂತೆ ವಾಚಾಳಿಯಾಗುತ್ತೇನೆ...

ನಂಗೀಗ ಸ್ನೇಹವೆಂದರೂ ಭಯವೇ...
ಸ್ನೇಹಿಗಳ ಭಾವಗಳಲ್ಲಿ ಏಕೀಭವಿಸಲಾಗದ, ಭಿನ್ನಾಭಿಪ್ರಾಯಗಳನೆಲ್ಲ ನಿಷ್ಠುರವಿಲ್ಲದೆ ಹಿತವಾಗುವಂತೆ ಹೇಳಿ ಅಥವಾ ನಿಷ್ಠುರವಾಗುವ ಹೊತ್ತಲ್ಲಿ ಮೌನವಹಿಸಿ ಸ್ನೇಹವ ದೀರ್ಘಕಾಲ ಸಲಹಿಕೊಳ್ಳಲಾಗದ ಭಯ...
ಅದಕೇ ಹೊಸ ಹೊಸ ಸ್ನೇಹಗಳಿಗೆ ಕೈಚಾಚಿ ಗೆಳೆತನದ ಶ್ರೇಷ್ಠತೆಯ ಸವಿಯಲು, ಮಧುರ ಸ್ನೇಹಗಳ ಮಡಿಲ ಕೈಗೂಸಾಗಲು ಹೆಣಗುತ್ತಿರುತ್ತೇನೆ...

ನಂಗೀಗ ಪ್ರೇಮವೆಂದರೆ ಭಯವೋ ಭಯ...
ನಿಭಾಯಿಸುವ ಅರ್ಹತೆಯಿಲ್ಲದ, ಆ ತೀರದವರೆಗೂ ಭದ್ರತೆಯ ನೀಡಿ ಕೈಹಿಡಿದು ನಡೆಸಲಾಗದ ಅಸಹಾಯಕತೆಯ ಭಯ...
ಅದಕೇ ಎದೆಗುಡಿಯಲಿ “ಕಪ್ಪು ಹುಡುಗಿಯ” ಕಲ್ಪನಾ ಮೂರ್ತಿಯನಿಟ್ಟುಕೊಂಡು ಆರಾಧಿಸುತಾ ನಗುತಿರುತ್ತೇನೆ...

ಈಗೀಗ ಕಾಮವೆಂದರೆ ತೀವ್ರ ಭಯ...
ಗೆಲ್ಲಲಾಗದ, ಸೃಷ್ಟಿಸಲಾಗದ ನಿರ್ವೀರ್ಯತೆಯ ಭಯ...
ಅದಕೇ ಕಂಡರಿಯದ ಹೆಣ್ಣುಗಳ ಎದೆಗೊಂಚಲ ಕಣಿವೆಯ ಕತ್ತಲಲ್ಲಿ ಕೂಡ ಮುಖ ಹುದುಗಿಸಿ ಉಸಿರುಗಟ್ಟುವ ಭಾವದಲ್ಲಿ ಇರುಳೆಲ್ಲ ಬೆವರುತ್ತಿರುತ್ತೇನೆ...

ನಂಗೀಗ್ಯಾಕೋ ಬದುಕೆಂದರೇ ದೊಡ್ಡ ಭಯ...
ಘನತೆಯಿಂದ ಬದುಕಲಾಗದ, ಹೂವ ನಗೆಯ ಸದ್ದನಾಲಿಸುವ ತನ್ಮಯತೆಯಿಂದ ಒಂದರೆಘಳಿಗೆಯೂ ಮನಸಾರೆ ಜೀವಿಸಲಾಗದ ಭಯ...
ಅದಕೇ ಹುಚ್ಚಾಗಿ ಪರಿತಪಿಸಿ ಪ್ರೇಮಿಸಿದವಳೊಡನೆಯ ಮೊದಲ ಮಿಲನೋತ್ಸವದುತ್ತುಂಗದ ಸುಸ್ತಲ್ಲಿ ಕಣ್ಮುಚ್ಚಿ ಅವಳ ಹಣೆಯ ಚುಂಬಿಸಿ ಮತ್ತೆ ತಬ್ಬಿ ಮಲಗಿದಂತೆ ಬದುಕ ತಬ್ಬಿದ್ದೇನೆ...

ನಂಗೋ ಸಾವೆಂದರೆ ಇನ್ನಿಲ್ಲದ ಭಯ...
ಈಗಿದ್ದು ಇನ್ನಿಲ್ಲದಂತಾಗುವ, ನೆರಳೇ ಉರುಳಾಗುವ, ಅದರ ವಿರೋಧಿಸಿ ಒಂದು ಮಾತಾಡಲೂ ಆಗದ, ಶಾಶ್ವತ ಮೌನದ ಭಯ...
ಅದಕೇ ಅವಳ ಹೊಕ್ಕುಳಿನಾಳವ ಅಳೆಯುತ್ತಾ ಒಳಗೊಳಗೇ ನಗುತ್ತಾ ಮೈಮರೆತು ತಬ್ಬಿ ಮಲಗಿದಂತೆ ಸಾವನ್ನು ಎದೆಯ ಬಿತ್ತಿಯಲ್ಲಿ ಬಚ್ಚಿಟ್ಟುಕೊಂಡು ಬದುಕಿದ್ದೇನೆ...

ಮನಸೆಂಬುದೊಂದು ಭಯಗಳ ಮೂಟೆ... ಬದುಕನ್ನ ಅದರ ಮರ್ಜಿಗೇ ಬಿಟ್ಟು ಬಿಟ್ಟರೆ ಅದು ಮತ್ತಷ್ಟು ಹೊಸ ಭಯಗಳನನ್ನೇ ಸೃಜಿಸುತ್ತಾ ಬದುಕನ್ನೇ ಬಡಿದು ಮೂಲೆಗೆ ಕೂರಿಸಿಬಿಡುತ್ತೆ... ಅದಾಗಬಾರದೆಂದರೆ ಮನಸಿನೊಂದಿಗೆ ಪ್ರಜ್ಞೆಯ ಪ್ರಿಯ ಸಾಂಗತ್ಯವನೇರ್ಪಡಿಸಬೇಕಷ್ಟೇ... ಮನದ ಭಾವಗಳಿಗೆ ಪ್ರಜ್ಞೆಯ ಮೇಲುಸ್ತುವಾರಿ ಒದಗಿಸಿ ಯಾವುದು ಭಯ ಮೂಡಿಸುತ್ತೋ ಅದರೊಂದಿಗೇ ಆಡುತ್ತಿರು – ಹೋಗಬೇಡ ಅಂದಲ್ಲಿ ಮಗು ಮುದ್ದಾಂ ಹೋಗುವಂತೆ... ಭಯವೇ ನಿನ್ನಿಂದ ಓಡಿಹೋಗುತ್ತೆ... ಓಡಿ ಗೆಲ್ಲುವ ಬದಲು ಕಾದಾಡಿ ಮತ್ತೆ ಸೋಲುವುದು ಮೇಲಲ್ಲವಾ... ಸೋಲಿಗೆ, ನೋವಿಗೆ, ಭಯಗಳಿಗೆ ಬೆನ್ನಾಗಿ ಓಡುವ ಬದಲು ಅವುಗಳ ಜತೆ ಜತೆಗೇ ಆಡುತ್ತ, ಕುಣಿಯುತ್ತ, ಮಲಗುತ್ತ, ಏಳುತ್ತ, ಬೀಳುತ್ತ, ಅಳುತ್ತ, ನಗುನಗುತ್ತ ನಾಳೆಗಳೆಡೆಗೆ ಹೆಜ್ಜೆ ಎತ್ತಿಡುವುದು ಒಳಿತಲ್ಲವಾ... 

ನೋವುಗಳ ಜತೆಗೇ ಸಾಗುವುದೆಂದರೆ ಅವುಗಳಿಗೆ ಶರಣಾಗುವುದೆಂದಲ್ಲ ಅರ್ಥ... ನೋವುಗಳನು ಅವುಗಳಿರುವಂತೆಯೇ ವಾಸ್ತವಿಕ ನೆಲೆಯಲ್ಲಿ ಒಪ್ಪಿಕೊಳ್ಳುವುದು  – ಒಪ್ಪಿಕೊಳ್ಳುತ್ತಲೇ ನಮ್ಮದೇ ಆದ ನೆಲೆಯಲ್ಲಿ ಅವುಗಳ ಮೀರುವುದು - ನೋವ ಸುಳಿಯ ಸುತ್ತ ಸುತ್ತುತ್ತಲೇ ನಗೆಯ ಮೀನಿನೊಂದಿಗೆ ಚಿನ್ನಾಟವಾಡುವುದು – ಆ ಮೂಲಕ ಬದುಕ ಪೂರ್ತಿ ಜತೆ ಬರುವ, ಅಪರಿಹಾರ್ಯವಾದ ನೋವು ಕೂಡ ನಮ್ಮ ಮೂಲ ನಗೆಯ ಚಿಲುಮೆಯನ್ನು ಬತ್ತಿಸದಂತೆ ನಮ್ಮನ್ನು ನಾವು ಕಾಯ್ದುಕೊಳ್ಳುವುದು... 

ಹೌದು ಬದುಕೇ ಬರೀ ನೋವುಗಳ ಸಂತೆ ಅಂತನ್ನಿಸುವ ಹೊತ್ತಿಗೆ ಎಲ್ಲ ಸಾಕು, ಯಾರೂ - ಯಾವುದೂ ಬೇಡ ಅನ್ನಿಸುವುದು ಸತ್ಯ... ಆಗೆಲ್ಲ ಅಳಬೇಕೆನಿಸಿದರೆ ಅತ್ತುಬಿಡಿ ಒಮ್ಮೆ... ಅಳುವ ಹಿಡಿದಿಟ್ಟು ಒಳಗೇ ಒಡೆದು ಹೋಗುವ ಬದಲು ಬಿಕ್ಕಿ ಬಿಕ್ಕಿ ಅತ್ತು ಹರಿವ ಕಣ್ಣೀರಲ್ಲಿ ಕಾಗದದ ದೋಣಿ ಬಿಟ್ಟು ಮಗುವಂತೆ ನಕ್ಕುಬಿಡುವುದು ಲೇಸೆನಿಸುತ್ತೆ... ನಮ್ಮಳುವ ನೋಡಿ ನಗುವವರೆದುರಿಗಲ್ಲದೇ ಅಳುವ ನಗುವಾಗಿಸಬಲ್ಲ ಅಮ್ಮನಂಥವರ ಮಡಿಲನ್ನ ಅಥವಾ ನಿಮಗೆ ನೀವೂ ಕಾಣದಂತ ನಿಚ್ಚಳ ಇರುಳನ್ನ ಆಯ್ಕೆ ಮಾಡಿಕೊಳ್ಳಬೇಕಷ್ಟೇ ಅಳುವುದಕ್ಕೆ... ಮೌನವಾಗಿ ಎಲ್ಲವನೂ ಒಳಗೇ ಇಟ್ಟುಕೊಂಡು ನಗುವುದು ಹಿತವೇ ಆ ಮೌನದಲಿ ಮಾಧುರ್ಯವಿದ್ದಾಗ... ಆದರೆ ನೋವ ಹಿಡಿದಿಟ್ಟ ಮೌನ ಮತ್ತೆ ನೋವನೇ ಹಿಗ್ಗಿಸುತ್ತೆ ಅಂತನ್ನಿಸುತ್ತೆ ನಂಗೆ... ಪ್ರಶಾಂತವಾಗಿ ಕೂತು ಮಾತಾಡಿ - ಸೋಲುಗಳೊಂದಿಗೆ, ನೋವುಗಳೊಂದಿಗೆ, ಭಯಗಳೊಂದಿಗೆ... ಅರ್ಧ ನೋವಿಗೆ ಅಲ್ಲೇ ಮೋಕ್ಷ...

ಸೋತು ಸುಸ್ತಾದ ಕನಸುಗಳೆಲ್ಲವನ್ನೂ ಎದುರಿಗೆ ಕೂರಿಸಿಕೊಂಡು ಗೆಲುವಿನ ಪರ್ಯಾಯ ಮಾರ್ಗಗಳ ಪಾಠ ಮಾಡಿಕೊಳ್ಳೋಣ ನಮ್ಮೊಳಗೆ ನಾವು... 
ಓಡುವ ಓಘದಲ್ಲಿ ಗೆದ್ದವನಿಗೂ ಸೋತವನಿಗೂ ತುಂಬ ದೂರದ ವ್ಯತ್ಯಾಸವೇನಿಲ್ಲ - ಗೆರೆಯ ಆಚೆ ಅವನು, ಗೆರೆಯ ಈಚೆ ಇವನು ಅಷ್ಟೇ...
ಇನ್ನೊಂದೇ ಒಂದು ಹೆಜ್ಜೆ ಮುಂಚಿತವಾಗಿ ಎತ್ತಿಟ್ಟಿದ್ದಿದ್ದರೆ ಗೆಲುವು ನನ್ನದೂ ಆಗಬಹುದಿತ್ತಲ್ಲವಾ... ಮತ್ತೆ ಪ್ರಯತ್ನಿಸೋಣ - ಹೊಸ ದಾರಿಯಲ್ಲಿ - ಹೊಸ ಶಕ್ತಿಯೊಂದಿಗೆ... ಓಡುವುದರಲ್ಲಿ ಸೋತವನು ನಡೆಯುವುದರಲ್ಲೂ ಸೋಲಬೇಕೆಂದಿಲ್ಲವಲ್ಲ... ಬದುಕು ನಮ್ಮನ್ನು ಪ್ರೀತಿಸದೇ ಹೋದರೇನಂತೆ ಬದುಕನ್ನು ನಾವು ಇನ್ನಿಲ್ಲದಂತೆ ಪ್ರೀತಿಸಬಹುದಲ್ಲವಾ... ಮನಸಿಗೆ ಪ್ರಜ್ಞೆ ತುಂಬಬಹುದಾದ ಶಕ್ತಿ ಅದೇ ಆ ಭರವಸೆ... 

ಪ್ರಜ್ಞೆಯ ತೋಳಿಂದ ಸೋಲನ್ನು ಅದೇ ಉಸಿರುಗಟ್ಟಿ ಬೆವರಾಗುವಂತೆ ತಬ್ಬಿ ಮಲಗಲಾರದವನು ಗೆಲುವನ್ನು ಸೃಷ್ಟಿಸಲಾರನೆನಿಸುತ್ತದೆ... 

ನೋವಿನ ಮೈದಡವಿ ನಗುವ ಮೂಡಿಸಲಾದರೆ ಆಗ ಕಾಲನ ಕುಣಿಕೆಗೂ ನಗುತ್ತಲೇ ಕತ್ತನೊಡ್ಡಬಹುದೇನೋ... ನಾವೆಲ್ಲ ಸಾಮಾನ್ಯರು ನಿಜ... ಆದರೆ ಸಾವಿನಂಥ ಸಾವೂ ನಾಚುವಂತೆ ಸಾವಲ್ಲೂ ನಗುತಿರಬಲ್ಲ ಆತ್ಮಶಕ್ತಿಯ ಸಾಧಿಸುವುದೇನು ಸಣ್ಣ ಸಾಧನೆಯಾ....???

ಈಗ ಗೊತ್ತಾಯ್ತಲ್ಲಾ ನಾನ್ಯಾಕೆ ಭಯವಿರುವಲ್ಲೇ ಮತ್ತೆ ಮತ್ತೆ ಹೋಗುತ್ತೇನಂತ....:)

Friday, August 1, 2014

ಗೊಂಚಲು - ನೂರು + ಇಪ್ಪತ್ತು + ಎಂಟು.....

ಚಿತೆಯೂರಿನ ದೂರ ನೆನಪಿಸುವ ದಿನಕ್ಕೊಂದಿಷ್ಟು.....
(ಎಂಥ ಮಳೆಯಲಿ ನೆನೆದರೂ ಆರದ ಮನದ ಬೆಂಕಿ...)

ಆದರೂ - ಜನ್ಮ ದಿನವೇನೂ ಮೊದಲಿನಂತೆ ತೀವ್ರತರ ಖುಷಿಯ ಕೊಡುತ್ತಿಲ್ಲ ಈಗೀಗ...
ಕಳೆದದ್ದೇ ಚಂದವಿತ್ತು ಮತ್ತು ನಾಳೆಗಳೆಲ್ಲವೂ ನನ್ನನ್ನ ಈ ಬದುಕಿನಿಂದ ಇಷ್ಟಿಷ್ಟೇ ದೂರ ಒಯ್ಯುವ ಸಾಧನಗಳು ಅನ್ನಿಸುವಾಗ - ಖಾಲಿಯೂ ಆಗದೇ, ಹೊಸ ನಗುವಾಗಿಯೂ ಹೊಮ್ಮದೇ ಅದದೇ ಕಂಗಾಲುಗಳಲ್ಲಿ ಕೊಳೆಯುತ್ತಿದೆ ಆಯಸ್ಸು ಅನ್ನಿಸುವ ಹೊತ್ತಿಗೆ ಜನ್ಮದಿನಗಳ ನೆನಹು ಖುಷಿತರಲಾರದಲ್ಲವಾ...
ದಿನಾಂಕವ ಮರೆತು ಬಿಡಬಹುದು – ವರ್ಷವೊಂದು ಹೆಚ್ಚಾದದ್ದು ಗೊತ್ತಾಗದಿರಲಿ ಅಂತ...
ಆದರೆ ಬೆಳೆಯುತಿರೋ ಹೊಟ್ಟೆ, ಕಡಿಮೆಯಾದ ತಲೆಗೂದಲು, ಇದ್ದವುಗಳಲ್ಲಿ ಅಲ್ಲಲ್ಲಿ ಇಣುಕೋ ಬೆಳ್ಳಿಗೂದಲು, ಇಷ್ಟಿಷ್ಟೇ ಜೀವ ಕಳಕೊಳ್ತಾ ಇರೋ ಚರ್ಮ, ಕಳೆದು ಹೋಯ್ತಾ ಅನ್ನಿಸಿ ಭಯ ಮೂಡಿಸೋ ಕಿಬ್ಬೊಟ್ಟೆಯಾಳದ ಉನ್ಮಾದ ಎಲ್ಲ ಸೇರಿ ಬೇಡ ಬೇಡ ಅಂದರೂ ವಯಸು ಏರುತಿರುವದನ್ನ ನೆನಪಿಸಿ ಕಂಗಾಲಾಗಿಸುತ್ತವೆ – ಮತ್ತೆ ಶುರು ಸಂದ ವರ್ಷಗಳ ಲೆಕ್ಕಾಚಾರ ಮನದಲ್ಲೇ...
ನಿನ್ನೆಯ ನೆನಪುಗಳ ಮತ್ತು ಇಂದಿನ ವಾಸ್ತವತೆಯ ಬೆಂಕಿಯಲಿ ನಾಳೆಯ ಕನಸುಗಳು ಬೇಯುತಿವೆ...
ನಿನ್ನೆಗಳ ದಾರಿಯಲೂ ಕಲ್ಲು ಮುಳ್ಳುಗಳಿದ್ದವು...
ಆದರೆ ನಡೆವ ಕಾಲುಗಳಿಗೆ ಕನಸುಗಳ ಚಪ್ಪಲಿಯ ರಕ್ಷಣೆಯಿತ್ತು...
ಇಂದೀಗ ಹರಿದ ಚಪ್ಪಲಿ ಕಾಲನು ಅಣಕಿಸುತಿದೆ...
ನಾನಿನ್ನೂ ಸಾಗಬೇಕಿರುವ ಆ ದುರ್ಗದ ದಾರಿ ಬಲು ದುರ್ಗಮ...
ಚಪ್ಪಲಿಯಿಲ್ಲದ ಅನಾಥ ಕಾಲಲ್ಲಿ ನಡೆವುದೇನೂ ಸುಲಭವಲ್ಲ...
ಹಾಗಂತ ಕಾಲನ ಅನುಮತಿ ಇಲ್ಲದೇ ನಡಿಗೆ ನಿಲ್ಲಿಸುವಂತಿಲ್ಲ...
ಕನಸುಗಳಿಗೆ ಕಾವು ನೀಡಿ ಉಸಿರ ತುಂಬಲು ನಿಚ್ಚಳ ಹಗಲ ಆಸರೆ ಇಲ್ಲದವನು ಇರುಳಿಗೆ ಕಣ್ಣು ಹೊಂದಿಸಿಕೊಳ್ಳಬೇಕಷ್ಟೇ...
ಹೊಯ್ದಾಡುವ ಆತ್ಮದೀಪ ಆರುವಷ್ಟರವರೆಗೆ ಅದು ತೋರಿದಷ್ಟು ದೂರ ತೆವಳುತಿರುವುದು...
ಅದಷ್ಟು ಬೇಗ ಆರಲಾರದು – ಅದಕೆ ನಿಮ್ಮಗಳ ವಿನಾಕಾರಣದ ಪ್ರೀತಿಯ ಹರಕೆ, ಹಾರೈಕೆಗಳ ಕೈಬೊಗಸೆಯ ಮರೆಯ ಆಸರೆಯಿದೆ...
ಅದಕೇ –
ನೆನಪ ಜೋಳಿಗೆಯ ಬಿಚ್ಚಿಟ್ಟುಕೊಂಡು ಅದರೊಳಗಣ ಖುಷಿಯ ಕ್ಷಣಗಳನು ಹುಡುಕಿ ಹುಡುಕಿ ಮೆಲ್ಲುತ್ತಾ ಈ ಕ್ಷಣ ನಗಬೇಕಿದೆ – ಅದೇ ಖುಷಿಗಳ ಕಣ್ಣಲ್ಲೇ ನಾಳೆಗಳ ಕನಸನೂ ಹೊಸೆಯಬೇಕಿದೆ; ನಿನ್ನೆ ಮರಳಿ ಬಂದು ನಾಳೆಯಾಗದು ಎಂಬ ಸ್ಪಷ್ಟ ಅರಿವಿದ್ದೂ...

ಮತ್ತೀಗ ನನಗೆ ನಾನೇ ಹಾರೈಸಿಕೊಳ್ಳುತ್ತೇನೆ:
“ನನಗಾಗಿ ನನ್ನ ಕಣ್ಣು ತುಳುಕುವ ಕ್ಷಣಕೂ ಒಂದು ಕ್ಷಣ ಮುಂಚೆಯೇ ಉಸಿರ ದೀಪ ಆರಿ ಹೋಗಲಿ - ನಗುವೇ ಬದುಕಾಗಲಿ ಮತ್ತು ಮೃತ್ಯುವಿಗೂ ನಗುವೇ ನನ್ನ ಉತ್ತರವಾಗಲಿ – ಜನುಮ ದಿನದ ಶುಭಾಶಯಗಳು..........” 

Thursday, July 24, 2014

ಗೊಂಚಲು - ನೂರಾ ಇಪ್ಪತ್ತೇಳು.....

ಸುಮ್ಮನೇ ಒಂದಿಷ್ಟು.....

ನೋವುಗಳೇ ಜಾಸ್ತಿ ನೆನಪಲ್ಲಿ ಉಳಿಯುತ್ತವೆ ಮತ್ತು ನೋವುಗಳು ಕಳೆದ ಮೇಲೆ ನಾಳೆಗಳಲ್ಲಿ ಅವು ನಿಟ್ಟುಸಿರ ನಗುವಾಗಿ ಬದಲಾಗುತ್ತವೆ...
ಅಲ್ಲದೇ ಆತ್ಮೀಕವಾದ ಪ್ರೀತಿ ಜತೆಯಿದ್ದಾಗ ನೋವು ಕೂಡ ಹಿತವೇ ಅನ್ನಿಸುತ್ತಂತೆ...
ಯಾಕೋ ಎದೆಯ ಗೂಡಲ್ಲಿ ಉಸಿರು ಖಾಲಿಯಾಗುವ ಮುನ್ನ ಎಲ್ಲರನ್ನೂ ಒಂದಿಷ್ಟು ನೋಯಿಸಿ ಶಾಶ್ವತ ನೆನಪಾಗಿ ಹೋಗಲಾ ಎಂಬ ಕೆಟ್ಟ ಬಯಕೆ ಮೂಡುತ್ತೆ ಆಗೀಗ...
(ಕ್ಷಮಿಸಿ ಈಗೇನು ಕಡಿಮೆ ನೋಯಿಸಿದ್ದೀಯಾ ಅಂತ ಕೇಳುವವರಿಗೆ ಉತ್ತರ ಇಲ್ಲ ನನ್ನಲ್ಲಿ...)


ಕಪ್ಪು ಬಿಳುಪಿನ ಬದುಕಿಗೆ ಬಣ್ಣದ ಕನಸುಗಳ ಮದರಂಗಿ ಮೆರಗಿನ ಕೈಯ ಆಸರೆ ನೀಡಿ - ನನ್ನಲ್ಲಿ ಸಾವಿನಂಥ ಸಾವಿನೆದುರೂ ನಗೆಯ ತಂಬಿಟ್ಟಿನ ಬುತ್ತಿ ಬಿಚ್ಚಿ ಕೂರಬಲ್ಲ ಶಕ್ತಿ ತುಂಬಿ - ತಾನೇನೂ ಮಾಡಿಲ್ಲ, ತನಗೇನೂ ಗೊತ್ತಿಲ್ಲ, ನಿನ್ನ ಗೆಲುವೆಲ್ಲ ಕೇವಲ ನಿನ್ನ ಬದುಕ ಪ್ರೀತಿಯ ಫಲ ಅಂತಂದು ಅಲ್ಲೆಲ್ಲೋ ಮೂಲೆಯಲಿ, ಮೌನ ಮುಸ್ಸಂಜೆಯಲಿ ಖುಷಿಯ ಕಣ್ಣ ಹನಿ ಜಾರಿಸುವ ನನ್ನಾತ್ಮ ದೀಪಕ್ಕೆ ನಾನಿಟ್ಟ ಪ್ರೀತಿ ಹೆಸರು "ನನ್ನ ಕಪ್ಪು ಹುಡುಗಿ..."


ಅಲ್ಯಾವುದೋ ದೂರದ ಊರಿನ ಕಾಡ ದಾರೀಲಿ ಓಡಾಡುತಿರುವ ಗೆಳೆಯ ಸಂದೇಶ ಕಳಿಸ್ತಾನೆ: ನವಿಲೊಂದು ಹಾರುವುದ ಕಂಡು ಮುದಗೊಂಡೆ ಅಂತಂದು...
ನಿದ್ದೆ ಮರುಳಲ್ಲಿ ನಗುತಿದ್ದ ಅವಳ ನೆನಪ ಖುಷಿಯ ಕಚಗುಳಿಯಿಂದ ನಾನಿಲ್ಲಿ ಮುಗುಳ್ನಗುತ್ತೇನೆ ನನ್ನರಿವನ್ನು ಮೀರಿ...
ಈ ಬದುಕೆಂಬ ಬದುಕೇ ಸುಸ್ತಾಗಿ ದಕ್ಷಿಣಕೆ ತಲೆಯಿಟ್ಟು ಅಡ್ಡಡ್ಡ ಮಲಗೋಕೆ ಹವಣಿಸುತಿರೋ ಹೊತ್ತಲ್ಲಿ ಗೆಳೆಯನದೊಂದು ಸಂದೇಶ, ಗೆಳತಿಯ ಗುಳಿ ಕೆನ್ನೆ ನೆನಪು ಜೊತೆಯಾದ ಆ ಕ್ಷಣ ಮನದ ಅದ್ಯಾವುದೋ ಮೂಲೆಯಿಂದ ಪುಟ್ಟ ಕನಸೊಂದು ಸೂರ್ಯ ಮುಖಿಯಾಗಿ ಗರಿಬಿಚ್ಚಲು ಹೆಣಗಾಡುತ್ತೆ...!!
ಅಚ್ಚರಿಯ ಆ ಕನಸಿಗೆ ನಾ "ನನ್ನ ಕಪ್ಪು ಹುಡುಗಿ" ಎಂದು ಹೆಸರಿಟ್ಟು ನಗುತ್ತೇನೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Wednesday, July 16, 2014

ಗೊಂಚಲು - ನೂರಿಪ್ಪತ್ತಾರು.....

ಹೀಗೆಲ್ಲ ಅನ್ನಿಸಿದರೆ ತಪ್ಪಾ.....

ಹೊಸ ನೀರು ಬಂದಾಗ ಹಳೆ ನೀರು ಕೊಚ್ಚಿ ಹೋಗುತ್ತೆ ಅಂತಾರೆ...
ಮಧುರ ಬಂಧಗಳ ನಡುವೆ ಈ ಮಾತು ಹೆಚ್ಚಾಗಿ ನೋವನೇ ಧ್ವನಿಸುತ್ತೆ...
ತುಂಬ ಸಲ ಗೆಳೆತನಗಳ ನಡುವೆ ಈ ಮಾತು ಬಂದು ಹೋಗುತ್ತಿರುತ್ತೆ - ಒಮ್ಮೊಮ್ಮೆ ಸುಮ್ಮನೇ ತಮಾಷೆಯಾಗಿ, ಇನ್ನೊಮ್ಮೆ ಮನದ ವೇದನೆಯ ಕುರುಹಾಗಿ...
ನನ್ನೆದುರು ಈ ಮಾತು ಬಂದಾಗ ನನ್ನ ನಾನು ಹೀಗೆ ಸಮರ್ಥಿಸಿಕೊಳ್ಳ ಹೊರಡುತ್ತೇನೆ:

ನೀರ ಪ್ರತಿ ಹನಿಯ ಪರಮೋಚ್ಛ ಗುರಿ ಸಾಗರ ಸಂಗಮ...

ಹನಿ ನಿಂತಲ್ಲೇ ಸಾಗರ ತಾನು ಬರಲಾರದಲ್ಲ...
ಹೊಸ ನೀರ ಹನಿ ಬಂದು ಈ ನೀರ ಹನಿಯ ಮುಂದೆ ತಳ್ಳಿದಾಗ ಈ ಹನಿ ತಾನೇ ತಾನಾಗಿ ಒಂದು ಹೆಜ್ಜೆ ಸಾಗರದೆಡೆಗೆ ಸಾಗುವುದು ದಿಟ ತಾನೆ...

ನೀರ ಪ್ರತಿ ಬಿಂದುವಿನ ನೈಜ ಸಾರ್ಥಕ್ಯ ಹಸಿರ ವಿಹಂಗಮಕೆ ಉಸಿರಾಗಿ ನಕ್ಕದ್ದು...
ಬಿಂದು ತಾನು ಭುವಿಯಾಳದ ನಿಧಿಯಾಗಿ ಶೇಖರವಾಗದೆ ಹೋದಲ್ಲಿ ಹಸಿರ ಬೇರು ಆಳಕಿಳಿದು ಬಲವಂತವಾಗದಲ್ಲ...

ಹೊಸ ಹನಿಯೊಂದಿಗೆ ಬೆರೆತು ಹೊಸ ಹುರುಪು ಹೊಂದಿ ಹರಿವನು ಮೈಗೂಡಿಸಿಕೊಳ್ಳಲಾರೆನೆಂಬ ಅಥವಾ ಭುವಿಯೆದೆಯಲಿ ಇಂಗಿ ಹೊಸ ಝರಿಯಾಗಿ ಚಿಮ್ಮಲಾರೆನೆಂಬ ಹನಿ ಸಾಗರದ ಅಗಾಧತೆಯ ಕಾಣುವ ಇಲ್ಲವೇ ಭುವಿಯೊಡಲ ಒಲವ ಹೀರಿ ಹಸಿರ ಉಸಿರಲ್ಲಿ ನಗುವ ಸೊಬಗಿಂದ ವಂಚಿತವಾಗದಾ...

ಹೊಸದರೊಂದಿಗೆ ಬೆರೆತು ಸ್ಫುಟಗೊಂಡು ಹೊಸದಕೂ ಆಸರೆಯಾಗಿ ಹರಿದಾಗಲೇ ಅಲ್ಲವಾ ಹಳೆಯದರ ಹಿರಿತನಕೆ ಹೊಸ ಬೆಲೆ ಮತ್ತು ಅಸ್ತಿತ್ವಕ್ಕೆ ಹೊಸ ಚೈತನ್ಯ ದಕ್ಕುವುದು...

ಇಷ್ಟಕ್ಕೂ ಈ ಹನಿ ಕೂಡ ಹಳೆಯದಾಗುವ ಮುನ್ನ ಹೊಸದಾಗಿಯೇ ಇತ್ತಲ್ಲವಾ...

ಇನ್ಯಾವುದೋ ಹನಿಯ ಮುಂದೆ ತಳ್ಳಿಯೇ ಅಲ್ಲವಾ ಇದಿಲ್ಲಿ ಅಸ್ತಿತ್ವ ಸ್ಥಾಪಿಸಿದ್ದು...

ಹೊಸ ನೀರು ನನ್ನ ದಾರೀಲಿ ಮಾತ್ರವೇ ಹರಿಯುವುದಿಲ್ಲ ಅಲ್ಲವಾ – ಎದುರಿನ ದಾರೀಲೂ ಭರದಿಂದಲೇ ಹರಿದೀತು ತಾನೆ...

ಇಂಗಿ ಒಳಹರಿವಾಗಿ ಅನುಗಾಲವೂ ಉಳಿವ ಅಥವಾ ಹರಿದು ಶರಧಿ ಸೇರಿ ಮೆರೆವ ಜೀವನ ಪ್ರೀತಿಯ ಹನಿ ತಾನು ಹೊಸದರೊಂದಿಗೆ ಎಂದಿಗೂ ಜಿದ್ದಿಗೆ ಬೀಳದೇನೋ - ಹೊಸದನ್ನು ತನ್ನ ಸ್ಥಾನ ಕದ್ದ ಕಳ್ಳನೆಂಬಂತೆ ಕಾಣದೇನೋ – ಜಿದ್ದಿಗೆ ಬದಲಾಗಿ ಹೊಸದರೊಂದಿಗೆ ಪ್ರೀತಿಗೆ ಬಿದ್ದೀತು – ಹೊಸ ಹನಿಯನು ಪ್ರೀತಿಯಿಂದ ತಬ್ಬಿ ತನ್ನ ಕಕ್ಷೆಯ ನಕ್ಷೆಯ ಹಿಗ್ಗಿಸಿಕೊಂಡೀತು...

ಬಂಧವೊಂದು ಸಾಯುವುದಕೆ ಹೊಸ ಬಂಧ ಕಾರಣವಾಗುವುದೆಂಬ ಮಾತು ಪೂರ್ತಿ ಸತ್ಯವೆನಿಸಲ್ಲ ನನಗೆ – ಹೊಸದನ್ನು ಅದಿರುವಂತೆ ಹೀರಿ ತನ್ನಂತಾಗಿಸಿಕೊಂಡು ನಗಬಲ್ಲ ಮಾತೃ ಮನದ ಹಿರಿತನವಿದ್ದಲ್ಲಿ (ನನಗಿದೆಯಾ ಆ ಹಿರಿತನ ಎಂದು ಕೇಳಬೇಡಿ)...

ಒಂಟಿಯಾಗಿಯೇ ಉಳಿದು ಒಂಟಿಯಾಗೇ ಅಳಿವೆನೆಂದು ಪಣ ತೊಟ್ಟು ಎಲ್ಲೂ ಬೆರೆಯದೇ ಬಿಸಿಲಿಗೆ ಮೈಯ್ಯೊಡ್ಡಿದ ಹನಿ ತಾನು ಒಂಟಿಯಾಗಿಯೇ ಆವಿಯಾಗಿ ಅಳಿದರೂ; ಮೋಡವಾಗಿ, ಮಳೆಯಾಗಿ ಮತ್ತೆ ಭುವಿಯೆದೆಯ ಮುತ್ತಾಗಲೇಬೇಕಲ್ಲವಾ...

ಅದರ ಬದಲು ಹೊಸದರೊಡನೆ ಕಲೆತು, ಹೊಸದಾಗಿ ಹೊಳೆದು, ಹೊಸತಕೂ ಮೆರಗು ತುಂಬಿ ಇನ್ನಷ್ಟು ಕಾಲ ನಗುವುದು ಮೇಲಲ್ಲವಾ...

ಅದಕೇ ಯಾರದೇ ಹೊಸ ಬಂಧವನೂ ಮನಸಿಂದ ಶಂಕಿಸಲಾರೆ...
ಅಲ್ಲಿ ಬಂಧಗಳು ಸಾವಿರ ಸಾವಿರವಾದರೂ ನನ್ನ ಸ್ಥಾನ ನನಗಿದ್ದೇ ಇದೆ ಅಂದುಕೊಳ್ತೇನೆ - ಸಾಗರಕೆ ಒಂದು ಹನಿ ಏನೂ ಅಲ್ಲದಿರಬಹುದು ಆದರೆ ಹನಿ ಹನಿ ಸೇರಿಯೇ ಸಾಗರ ಆದದ್ದು - ಹಸಿರು ನಗಲು ಪ್ರತಿ ಬಿಂದುವೂ ಊಟವೇ - ಉಬ್ಬರದ ಒಂದು ಹನಿ, ಹಸಿರಿನೂಟದ ಒಂದು ಬಿಂದು ನಾನೆಂಬ ಖುಷಿಯೇ ಆ ಬಂಧದೊಂದಿಗೆ ನಾ ನಗುತಿರಲು ಪ್ರೇರೇಪಿಸುತ್ತೆ ನನ್ನ...

ನನ್ನೊಡನೆಯ ಬಂಧಗಳು ನನ್ನ ತೊರೆಯಲು ನನ್ನ ಸ್ವಭಾವಜನ್ಯ ತಪ್ಪುಗಳು ಮತ್ತು ನನಗಿಲ್ಲದ ಯೋಗ್ಯತೆ ಕಾರಣವೇ ಹೊರತು ಅಲ್ಲೆಲ್ಲೋ ಹೊಸ ನೀರು ಹರಿದದ್ದಲ್ಲ ಎಂಬುದು ನನ್ನ ನಂಬಿಕೆ ಮತ್ತು ನನ್ನ ಪಾಲಿನ ಸತ್ಯ ಕೂಡ...

ಇವೆಲ್ಲ ಕೇವಲ ನನ್ನ ಪಾಲಿನ ಸತ್ಯಗಳು - ನಿಮ್ಮ ಸತ್ಯಗಳೇನಿವೆಯೋ....

Tuesday, July 8, 2014

ಗೊಂಚಲು - ನೂರು + ಇಪ್ಪತ್ತೈದು.....

ಅರ್ಧ ಬರೆದ ಸಾಲುಗಳು...
ಅರ್ಥ - ಅವರವರ ಭಾವಕ್ಕೆ.....

ಮಳೆ ಹನಿದ ನಂತರದ ಸಾವಿರ ಕವಲುಗಳ ಒದ್ದೆ ಒದ್ದೆ ದಾರಿ - ಇರುಳ ಮೊದಲ ಜಾವದಲ್ಲಿನ ಒಂಟಿ ಒಂಟಿ ಅಲೆದಾಟ – ನೆನಪುಗಳ ಚರಮಗೀತೆ – ಕನಸುಗಳ ಸೋಬಾನೆ ಹಾಡು – ಹುಟ್ಟು ಸಾವಿನ ನಡುವೆ ಬದುಕೆಂಬ ಹೆಳವನ ಕುಂಟು ಮೆರವಣಿಗೆ...
ಆ ಮೆರವಣಿಗೆಯ ನಡುವೆಯೇ ಈಗೊಂದಿಷ್ಟು ಕಾಲದಿಂದ ಸವಿ ಸ್ನೇಹಗಳ ಮಡಿಲ ತಂಪಲ್ಲಿ ನಾ ಎಂದಿನಿಂದಲೋ ಪ್ರೀತಿಯಿಂದ ಸಾಕಿಕೊಂಡು ಬಂದಿದ್ದನ್ನ ನಾನೇ ಮರೆತು ಹೋಗಿದ್ದ, ನಾ ಮರೆಯಬಾರದಾಗಿದ್ದ ನನ್ನ ಒಂಟಿ ಒಂಟಿ ಏಕಾಂತವ ನಾಳೆಗಳಿಗಾಗಿ ಮತ್ತೆ ದಕ್ಕಿಸಿಕೊಂಡೇನಾ...


ಅವಳೆಡೆಗಿನ ನನ್ನ ಒಲವು ನನ್ನ ಬದುಕಿನ ಮೂಲಾಧಾರ ಶಕ್ತಿಯಾಗಿ ನನ್ನೊಳಗೇ ಉಳಿದು ನನ್ನೊಂದಿಗೇ ಸಮಾಧಿ ಸೇರಲಿ...
ಕಾರಣ -
ಪ್ರೇಮವೆಂದರೆ ಬದುಕನ್ನೂ ಹಂಚಿ ತಿನ್ನುವುದಲ್ಲವಾ..?
ಹಳಸಿದ್ದನ್ನ ಹಂಚಿ ತಿನ್ನುವ ಬಾ ಅಂತ ಯಾರನ್ನಾದರೂ ಕೇಳಲಾದೀತಾ..?
ಹಸಿವಿದೆ ಅಂತ ಹೇಸಿಗೆಯ ತಿನ್ನಲಾರೆವಲ್ಲಾ...
ಅಲ್ಲಿಗೆ ಬರಡು ಬದುಕಿಗೆ ಪ್ರೇಮ ನಿಶಿದ್ಧ ಅಲ್ವಾ...
ದೂರವಿರಿ ಮಧುರ ಭಾವಗಳೇ ನನ್ನಿಂದ ದಯವಿಟ್ಟು...
ನಾನು ಸಲಹಲು ಅಶಕ್ತನಿದ್ದೇನೆ ನಿಮ್ಮನ್ನು ನಿಮ್ಮಂತೆ...


ಕೇಳು ಹುಡುಗೀ -
ಅವ ನಕ್ಕುಬಿಟ್ಟ – ಭುವಿಯೆಲ್ಲ ಬೆಳಕಾಯಿತು...
ಅವನೂ ನಿದ್ದೆಗೆ ಜಾರುವನಂತೆ – ಆಗ ಇರುಳೆಂದರು...
ಆಗಸದೆಡೆಗೆ ಕಣ್ಣಿಟ್ಟು ನೋಡು ಒಮ್ಮೆ ಚಂದಿರನೊಳಗಿಂದ ನಗುತಿದ್ದಾನೆ ಅದೇ ಅವನು – ಕುರುಡು ಬದುಕುಗಳಲೂ ಬಣ್ಣ ಬಣ್ಣದ ಕನಸ ತುಂಬುತ್ತಾ...
ನಿದ್ದೆ ಮರುಳಲ್ಲಿರಬೇಕು ನಕ್ಕಿದ್ದು ಅದಕೇ ಚಂದಿರ ಅಷ್ಟು ತಂಪು ತಂಪು...
ಅವರಿಬ್ಬರೂ ಅವಳ ಆತ್ಮ ಸಂಗಾತಿಗಳು...
ಅವರಿಲ್ಲದೇ ಅವಳಲ್ಲಿ ಉಸಿರ ಸಂಚಾರವಿಲ್ಲ...
ಉರಿಯುತ್ತಲೇ ಅವಳ ತಾಕಿ ಅವಳಲ್ಲಿ ಜೀವ ಸಂಚಾರದ ಶಕ್ತಿಯಾದವನು ಅವನು ಹಗಲ ಮಣಿ – ಬೆಳಕ ಗಣಿ...
ಅವನ ಬೆಳಕಿಂದಲೇ ಒಂದಿನಿತು ಕಿರಣಗಳ ಬಸಿದುಕೊಂಡು ಚಂದಗೆ ತಂಪಾಗಿ ನಗುತ ಅವಳಲ್ಲಿನ ಒಲವಿನುಬ್ಬರಕೆ ಸಾಕ್ಷಿಯಾಗುವವನು ಇವನು ಇರುಳ ದೀಪ...
ಇರುಳಾಯಿತೆಂದು ಮರುಗದಿರು ಚಂದಿರ ನಗುತಾನೆ ಅಂತಂದೆಯಲ್ಲ ಅಮಾವಾಸ್ಯೆಯ ಇರುಳಲೇನ ಮಾಡಲಿ ಅಂತ ಕೇಳದಿರು; ಬಾನ ಬಯಲಲ್ಲಿ ತಾರೆಗಳೂ ಇವೆ ನಿನ್ನ ನಗಿಸಲು ಗೆಳತೀ... 
ಚಂದಿರನೂ ಇಲ್ಲ ಬಾನೆಲ್ಲ ತಮ್ಮದೇ ಎಂಬ ಹುರುಪಲ್ಲಿ ಮಿನುಗೋ ಆ ಚುಕ್ಕಿಗಳ ಸಂಭ್ರಮದ ಗಡಿಬಿಡಿಯ ನೋಡಬೇಕು ನೀನು ನಿನ್ನ ಕನಸ ಕಂಗಳಲಿ...
ಕಾಣುವ ಒಳಗಣ್ಣ ತೆರೆದು ನೋಡಿದರೆ ಭುವಿಯ ಹಸಿರಲ್ಲಿ, ಚಂದಮನ ತಂಪಲ್ಲಿ, ತಾರೆಗಳ ಮಿನುಗಲ್ಲಿ ಎಲ್ಲೆಲ್ಲೂ ಅವನೇ ಕಾಣುತ್ತಾನೆ... 
ಬೆಳಕ ಪ್ರತಿನಿಧಿ – ಶಕ್ತಿ ಸಂಜೀವಿನಿ... 
ಹೊರಗೆಲ್ಲ ಬೆಳಗುವ ಆ ಸೂರ್ಯ ಚಂದ್ರ ಒಂದಿಷ್ಟು ನಮ್ಮ ಒಳಗನ್ನೂ ಬೆಳಗಲಿ - ಎಡಬಿಡದ, ಸೋತು ಸುಸ್ತಾಗದ ತಮ್ಮ ನಿತ್ಯ ಕೈಂಕರ್ಯದಿಂದ; ಅರಿವಿನ ಬೆಳಕಿಂದ... 
ಬದುಕೆಲ್ಲ ಬೆಳಕೇ ತುಂಬಲಿ - ಅವಳ ಮಡಿಲಲ್ಲಿ ಜೀವ ಜಾಲ ತುಂಬಿ ನಕ್ಕಂತೆ...


ಮರೀ -
ನಿನ್ನ ಗೆಲುವು ನನ್ನ ಸೋಲೇ ಆದರೂ ಆ ಸೋಲಲ್ಲೂ ನಂಗೆ ಸಂಭ್ರಮವಿದೆ...
ನಿನ್ನ ಸೋಲು ನನ್ನ ಗೆಲುವೆಂಬುದಾದರೆ ಆ ಗೆಲುವಲ್ಲೂ ನನ್ನ ಮನದ ನೋವ ಕಣ್ಣೀರಿದೆ...
ಈ ಮಧುರ ಭಾವಕ್ಕೆ ನಾ ಯಾವ ಹೊಸ ಹೆಸರನೂ ಕೊಡಲಾರೆ – ಸವಿ ಸ್ನೇಹವನ್ನುಳಿದು...
ನಿನ್ನಾಯ್ಕೆ ಗೆಲುವೋ, ಸೋಲೋ...?
ಉಳಿದದ್ದು ನಿನ್ನ ಚಿತ್ತ...


ಹಾಳಾದ ಈ ಕಹಿ ನೆನಪುಗಳೆಂಬ ಪಾರ್ಥೇನಿಯಂ ಕಳೆಯಂಥ ಭಾವಗಳು ಅದೆಷ್ಟು ಹುಲುಸಾಗಿ ಬೆಳೆಯುತ್ತವೆ ಗೊತ್ತಾ...
ಬೆಳೆಯದಿರಲೆಂದು ಎಷ್ಟೇ ಚಿವುಟಿದರೂ ಮತ್ತೆ ಮತ್ತೆ ಚಿಗುರಿ ಕನಸುಗಳ ಬೆಳೆಯ ಬೆಳವಣಿಗೆಯ ಕತ್ತು ಹಿಸುಕಿ ಮೆರೆದಾಡುತ್ತವೆ...
ಬೇರು ಸಹಿತ ಕಿತ್ತೆಸೆಯೋಣ ಅಂದುಕೊಂಡರೆ ನನ್ನೀ ಮನಸೆಂಬುದು ಕನಸುಗಳಿಗಿಂತ ಮುಂಚೆ ನೆನಪುಗಳ ತಾಯಿ...
ನೆನಪುಗಳನೂ ಪ್ರೀತಿಸಲು ಸಾವಿರ ಕಾರಣಗಳಿವೆ ಆ ತಾಯಿ ಮಡಿಲಲ್ಲಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Wednesday, July 2, 2014

ಗೊಂಚಲು - ನೂರಿಪ್ಪತ್ನಾಕು.....

ಈ ನಡುವೆ ಒಲವ ಮೆರವಣಿಗೆ.....
(ನೆನಪು, ಕನಸುಗಳ ಗುಂಗಲ್ಲಿ ಅವಳ ಒಲವ ಬಗೆಗೆ ಒಂದಷ್ಟು ಬಿಡಿ ಬಿಡಿ ಸಾಲುಗಳು...)

ನೋವ ಹೂಳು ತುಂಬಿ ಬಗ್ಗಡವಾಗಲಿದ್ದ ಕಣ್ಣ ಕೊಳದಲ್ಲಿ ಗೆಜ್ಜೆ ಕಾಲ್ಗಳನಾಡಿಸಿ ನಗೆಯಲೆಯನೆಬ್ಬಿಸಿದವಳು... 
ಕತ್ತಲಾಗಿದ್ದ ಎದೆಯ ಗರ್ಭಗುಡಿಯ ಬಾಗಿಲಲಿ ಒಲವ ಪ್ರಣತಿಯ ಹಚ್ಚಿಟ್ಟು ಕಣ್ಣ ಮಿಟುಕಿಸಿದವಳು...
ಅವಳೆದೆಯ ಬಟ್ಟಲ ಒಲವ ಅಕ್ಷಯ ಪಾತ್ರೆಯ ಬಲದಿಂದ ನಿತ್ಯ ದಾಸೋಹವ ನಡೆಸಿ ಎನ್ನೆದೆಯ ಹಸಿವ ನೀಗುತಿರುವಳು...

ತನ್ನ ಮುಗುಳ್ನಗುವಿಂದಲೇ ಶಕ್ತಿ ತುಂಬಿದಳಾಕೆ ನನ್ನಾಳದ ಕನಸ ಹಕ್ಕಿಯ ರೆಕ್ಕೆಗೆ...
ಇನ್ನೀಗ ಅವಳ ಮಡಿಲ ಅಕ್ಕರೆಯ ಜೇನೊಂದೆ ಸಾಕು ಈ ಬದುಕಿಗೆ...

ಅವಳ ಬದುಕ ಸಂತೆಯ ನಡುವೆ ನಕ್ಕ ಯಾವುದೋ ಮುಖ ನಾನು...
ನನಗಾದರೋ ಅವಳು ನನ್ನ ಕನಸ ನಕ್ಷತ್ರಗಳ ಸಂತೆ ಮಾಳಕೆ ತಾವು ನೀಡಿದ ಬಾನು...

ತನ್ನ ಸ್ನೇಹದ ತೊಟ್ಟಿಲಲೆನ್ನ ಕಂದನಾಗಿಸುವಳು...
ನನ್ನ ಖುಷಿಗಳಿಗೆಲ್ಲ ಅಮ್ಮನೆನಿಸುವಳು...

ತನ್ನ ಎದೆ ಕಣಿವೆಯ ಕತ್ತಲ ಸೊಬಗಿಂದ ನನ್ನ ದೇಹದ ಬಯಕೆ ಬೆಂಕಿಯ ಮಣಿಸಿ ತಣಿಸಿದಾಕೆ...
ಅದೇ ಹೊತ್ತಿಗೆ - 
ತನ್ನೊಳಗೆ ತಾ ಸದಾ ಹಚ್ಚಿಟ್ಟುಕೊಂಡ ಒಲವ ಹಣತೆಯ ಜ್ಯೋತಿಯಿಂದ ಎನ್ನ ಆತ್ಮದ ದೊಂದಿಗೆ ಕಿಡಿಯ ಹೊತ್ತಿಸಿದಾಕೆ...

ಅವಳ ಸ್ನೇಹದ ಮಡಿಲ ಘಮದ ನೆನಪ ಮಾಲೆಯ ಧರಿಸಿದ ನನ್ನೀ ಮನದ ಮನೆಯಂಗಳದಲ್ಲಿನ್ನು ಸದಾ ನಗುವಿನುತ್ಸವ...
ಎಷ್ಟೆಲ್ಲ ಸವಿಗನಸುಗಳು ಕುಂಟೆಬಿಲ್ಲೆಯಾಡುತ್ತಿವೆ ಅವಳು ಕಣ್ಣಲ್ಲಿ ಕಣ್ಣಿಟ್ಟ ಮೇಲೆ ನನ್ನ ಕಣ್ಣ ಬಯಲಲ್ಲಿ....
ಇದೀಗ ನನ್ನೆಲ್ಲ ಕ್ಷಣಗಳೂ ಸುಂದರ ಮತ್ತು ಬರೀ ಸುಂದರ...

ನನ್ನೀ ಬದುಕ ಕೊಳಲಿಗೆ ಉಸಿರ ತುಂಬಿ ಮಧುರ ನಾದ ಹೊಮ್ಮಿಸಿದಾಕೆ... 
ತಿಳಿ ಮನದ ನಗೆಯ ಬದುಕಿದು ಅವಳದೇ  ಕರುಣೆಯ ಕಾಣಿಕೆ...

ಅವಳು ಏನೂ ಆಗದೆಯೇ ಎಲ್ಲವೂ ಆಗಬಲ್ಲವಳು...
ಸ್ನೇಹದ ಕಿರುಗೆಜ್ಜೆ ನಾದದಲೇ ಎನ್ನ ಬದುಕನಾಳುವಳು...

ಹೆಸರೇನೆಂದು ಕೇಳದಿರಿ...
ಕಣ್ಣ ಬಿಂಬದ ಬೆಳಕಿಗೆ ಏನೆಂದು ಹೆಸರಿಡಲಿ...
ನನ್ನ ಹೆಸರನೂ ತನ್ನದಾಗಿಸಿಕೊಂಡ ಎನ್ನ ಮನ ಮನೆಯ ಮಾರಾಣಿ – ಅವಳೆನ್ನ ಕಪ್ಪು ಹುಡುಗಿ...

Wednesday, June 25, 2014

ಗೊಂಚಲು - ನೂರಾ ಇಪ್ಪತ್ಮೂರು.....

ಅರ್ಧ ಬರೆದ ಸಾಲುಗಳು - ಅರ್ಥವಿದೆಯೋ ಇಲ್ಲವೋ ಗೊತ್ತಿಲ್ಲ.....

ಪ್ರತೀ ಇರುಳು ಹೊರಳುವ ಹೊತ್ತಲ್ಲಿ ಮನದ ನೋವ ನೆನಪ ಬಾಧೆಗಳೆಲ್ಲ ಕಣ್ಣಿಂದ ಸ್ಖಲಿಸುತ್ತವೆ - ಮುಂಬೆಳಗಿಗೆ ಕಣ್ತೆರೆವ ಹೊತ್ತಿಗೆ ನಗೆಯ ಕೂಸಿನ ಗರ್ಭ ಕಟ್ಟೀತೆಂಬ ಭರವಸೆಯಲ್ಲಿ...
ತುಂಬ ಪ್ರೀತಿಸುವಲ್ಲಿ ತುಂಬ ನೋವಿರುತ್ತೆ ಕಣೋ...
ಹಾಗಂತಾರೆ ಪ್ರೀತಿಸಿದವರು...
ಇರಬಹುದು...
ಈ ಬದುಕನ್ನು ತುಂಬಾ ಅಂದ್ರೆ ತುಂಬಾನೇ ಪ್ರೀತಿಸಿದೆ...
ಬದುಕಿನೊಂದಿಗೆ ನೋವೂ ತುಂಬಾನೇ ಸಿಕ್ಕಿದ್ದೂ ನಿಜವೇ, ನಾಳೆಯೂ ಸಿಕ್ಕೀತು ಮತ್ತೆ – ಮಾವನ ಮನೆಯ ಬಳುವಳಿಯೇನೋ ಎಂಬಂತೆ...
ಆದರೆ ಬದುಕನ್ನು ಕರಡಿಯ ಕಾಮದ ಹಾಗೆ ಇನ್ನಿಲ್ಲದಂತೆ ಪ್ರೀತಿಸಿದ್ದರಿಂದ ಸಿಕ್ಕ ಸುಖಕ್ಕೆ ಹೋಲಿಸಿದರೆ ನೋವುಗಳದ್ಯಾವ ಲೆಕ್ಕ ಅಂತೇನೆ...
ತೆರೆಗಳಿಲ್ಲದೆ ಹೋದಲ್ಲಿ ಸಾಗರಕೇನು ಚಂದವಿದೆ..?
ನಿನ್ನೆ ಉಂಡ ನೋವುಗಳಿಗಾಗಿ - ನಾಳೆ ಬರುವ ಸಾವಿಗಾಗಿ ಇಂದಿನ ಈ ಕ್ಷಣದ ಉಸಿರ ಸ್ವಾದವ ಹೀರದಿರಲಾರೆ...


ನನ್ನ ಯೊಚನೆಗಳು ನನ್ನೊಳಗನ್ನು ಆವರಿಸಿ ನನ್ನೊಡನೆಯ ನನ್ನ ಬಂಧವನ್ನು ರೂಪಿಸಿಕೊಡುತ್ತವೆ – ಹೊಳೆಯಬಹುದು ಇಲ್ಲಾ ಕೊಳೆಯಬಹುದು...
ನನ್ನ ಅಭಿವ್ಯಕ್ತಿ ನನ್ನ ಹೊರಗನ್ನು ಆವರಿಸಿ ನನ್ನ ಸುತ್ತಲಿನ ಬಂಧಗಳ ಬೆಸೆದುಕೊಡುತ್ತದೆ – ಇಲ್ಲೂ ಹೊಳೆಯಬಹುದು ಇಲ್ಲಾ ಕೊಳೆಯಬಹುದು...
ಒಳಗೊಂದ ಯೋಚಿಸಿ, ಹೊರಗೊಂದ ತೋರಿದರೆ ತೋರಿದ್ದು ಮಾತ್ರ ಸತ್ಯವೆನಿಸುವ ಹೊತ್ತಿಗೆ ನನ್ನ ಸುತ್ತ ನನ್ನಂಥಹುದೇ ಬಂಧಗಳ ಸಂತೆಯೇ ನೆರೆದೀತು ನಿಜ...
ಆದರೆ ಬದುಕ ಕೊನೆಯ ಸ್ತರದಲ್ಲಿ ನನ್ನ ನಾ ನೋಡುವಾಗ ನನ್ನೆಡೆಗೆ ನಂಗೆ ಪ್ರಾಮಾಣಿಕ ಗೌರವ ಮೂಡಬೇಕೆಂದರೆ ನಾ ನನ್ನ ಒಳ ಹೊರಗುಗಳ ನಡುವೆ ಸಮನ್ವಯ ಸಾಧಿಸಬೇಕಲ್ವಾ...
ಒಳಗೆ ಹೊಳೆಯುವುದಾದಲ್ಲಿ ಹೊರಗೊಂದಿಷ್ಟು ಕೊಳೆವುದೂ ಸಮ್ಮತವಾಗಬೇಕಿತ್ತೇನೋ...
ಆದರೆ ಒಳಗಿರುವುದನ್ನೇ ಅಲ್ಲಿದ್ದ ಹಾಗೆಯೇ ಹೊರಗೂ ತೋರುವುದೆನ್ನುವುದು ವಿಶೇಷ ಧೈರ್ಯ ಮತ್ತು ಮನೋಸಾಮರ್ಥ್ಯ ಬೇಡುತ್ತದೆ...
ಎಂದಿಗಾದರೂ ನನ್ನಲ್ಲಿ ನಾ ಸಾಕ್ಷಿಯಾದೇನಾ ಆ ಸಮನ್ವಯದ ಸಾಧನೆಗೆ – ಅದೇ ಹಾದಿಯಲ್ಲಿದ್ದರೂ ಕೊನೆಮುಟ್ಟುವ ಧೈರ್ಯ..?
ಉಹುಂ ಇದ್ದಂತಿಲ್ಲ...


ಆ ದಾರಿಯ ತೀರದಲಿ ನೊಂದ ಜೀವವೊಂದು ಇನ್ನೊಂದು ನೊಂದ ಜೀವವ ಸಂಧಿಸಿತು – ಅಷ್ಟಿಷ್ಟು ಮಾತುಕತೆಗೆ ನಿಟ್ಟುಸಿರ ನಗೆಯೊಂದು ಹುಟ್ಟಿತು – ಪುಟ್ಟ ಸಮಾಧಾನ – ನೋವ ಬಣ್ಣ ಬೇರೆ ಬೇರೆ – ಹಂಚಿಕೊಂಡು ಹಗುರಾದಾಗ ಮೂಡಿದ ಸಮಾಧಾನದ ಬಣ್ಣ ಬಿಳಿಯೇ ಇರಬೇಕು...
ಬದುಕ ಸಾಗರದ ನಟ್ಟನಡುವಲೆಲ್ಲೋ ಕನಸ ದೋಣಿಯ ಕಳಕೊಂಡ ಒಬ್ಬ ಇನ್ನೊಬ್ಬನ ಸಂಧಿಸಿ – ಓಹ್ ನೀನೊಬ್ಬನೇ ಅಲ್ಲ ಕನಸಿಲ್ಲದೆ ಈಜುತಿರುವವನು ಅಂತಂದು ಅಲ್ಲಿ ತೇಲುತಿರುವ ಇನ್ನೊಬ್ಬನ ಕೈಹಿಡಿದು ನಾನೂ ಇದ್ದೇನೆ ಜತೆ ಈಜುವ ಬಾ ತೀರದೆಡೆಗೆ ಅಂದು ಆ ಅವನಲ್ಲಿ ಸಣ್ಣ ಭರವಸೆಯನೊಂದ ಮೂಡಿಸಿದರೆ ಇವ ನೀಡಿದ ಆಸರೆಯ ಅವ ಒಪ್ಪದಿರಲಾದೀತಾ...
ಒಪ್ಪಿದರೆ ಅದು ತಪ್ಪು ಹೇಗಾದೀತು...
ಕ್ಷಮಿಸಿ -
ನನ್ನಂತ ಕುಂಟರು ಕುರುಡರೇ ತುಂಬಿರುವ ಈ ಬೀದಿಯಲಿ ದಾರಿ ಸವೆಸಬೇಕಾದಾಗ ನಿನ್ನ ನೋವು ನಿಂಗಿರಲಿ ನನ್ನದು ನಂಗೆ ಮಾತ್ರವಿರಲಿ ನನ್ನ ನೋಡಿ ನೀನು ನಿನ್ನ ನೋಡಿ ನಾನು ಸಮಾಧಾನ ಹೊಂದಿ ಜತೆ ನಡೆಯೋದು ತಪ್ಪು ಅಂತ ಹೇಗೆನ್ನಲಿ...
ನೋವ ನೋಡಿದ ನೋಟ, ಎದುರಿಸಿದ ರೀತಿ, ಗೆಲ್ಲಲು ಕಂಡುಕೊಂಡ ಮಾರ್ಗ ಎಲ್ಲ ಬೇರೆ ಬೇರೆಯೇ ಇದ್ದೀತು ಆದರೆ ಇನ್ನೊಂದು ಅಂಥದೇ ನೋವ ಕಂಡಾಗ ಅರೇ ನೋವಿದು ಕೇವಲ ನನ್ನೊಬ್ಬನದೇ ಅಲ್ಲ ನನ್ನಂಥದ್ದೇ ನೋವಿದ್ದೂ ನಗುತ ಜೀವಿಸುತಿರುವವರಿದ್ದಾರೆ ಅಂದಮೇಲೆ ನಾನು ಕೂಡ ನಗುತಲೇ ಜೀವಿಸಬಹುದು ಅಂತನ್ನಿಸಿ ಒಂದಿಷ್ಟು ನನ್ನ ಅಸಹಾಯ ಭಾವವ ಕಳಕೊಂಡು ಬದುಕಿನೆಡೆಗೆ ಸ್ಫೂರ್ತಗೊಂಡುದಾದರೆ ಅದನ್ನು ನೋವ ನೋಡಿ ನಗುವ ಪಡೆವ ನನ್ನ ಕೆಟ್ಟ ಮನೋಭಾವ ಅಂತ ಹೇಳಲಾರದಾಗುತ್ತೇನೆ...  

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Monday, June 23, 2014

ಗೊಂಚಲು - ನೂರಾ ಇಪ್ಪತ್ತೆರಡು.....

ಮನಸು ನೊಂದ ಮಾತ್ರಕ್ಕೆ ಬದುಕು ನೋಯದಿರಲಿ.....
(ಅರ್ಧ ಬರೆದ ಸಾಲುಗಳು - ಅರ್ಥವಿದೆಯೋ ಇಲ್ಲವೋ ಗೊತ್ತಿಲ್ಲ.....)

ಹಗಲ ದಾರಿಯ ತುಂಬಾ ಕನಸೆಂಬೋ ಬಿಡಿ ಬಿಡಿ ಮಲ್ಲಿಗೆ...
ಯಾವುದ ಮುಡಿಯಲಿ – ಇನ್ಯಾವುದ ತುಳಿಯಲಿ – ಉಸಿರ ತೇಕುತ್ತ ನಡೆವ ಗಡಿಬಿಡಿಯಲಿ...


ಮನಸು ಕನಸ ಕಾಣುತ್ತೆ... 
ಬರೀ ಕಾಣುತ್ತೆ... 
ನನಸಾಗಿಸಿಕೊಳ್ಳೋ ಹೊಣೆ ಮತ್ತು ನನಸಾಗಿಸುವಾಗಿನ ಕಷ್ಟ ಸುಖಗಳು ಪ್ರಜ್ಞೆಯದ್ದು... 
ಮತ್ತೆ ಮನಸು ಗೆದ್ದರೆ ಅರಳುತ್ತೆ – ಸೋತರೆ ಮರುಗುತ್ತೆ...
ಮನಸಿನದೇನಿದ್ದರೂ ಭಾವ ಸಂಚಲನ – ಪ್ರಜ್ಞೆಯದ್ದು ನಿರ್ಭಾವದ ಸಂಘಟನ...
ಪ್ರಜ್ಞೆಗೆ ಶಕ್ತಿ ತುಂಬು ಬದುಕು ನಿನ್ನ ಕಾಲಾಳು...


ಬದುಕ ಬಿರುಗಾಳಿಗೆ ಸಿಕ್ಕ ಹಲವಾರು ತಾಕತ್ತಿಲ್ಲದ ಕನಸುಗಳು ಸತ್ತಂತನಿಸೀತು ಆದರೆ ಕನಸು ಗಟ್ಟಿ ಇದ್ದದ್ದಾದರೆ ಸಾಯಲಾರದು ಬದಲಿಗೆ ತನ್ನ ಪಥ ಬದಲಿಸೀತು ಅಷ್ಟೇ...
ಪ್ರಜ್ಞೆ ತಾನು ಪ್ರಯತ್ನಪಟ್ಟರೆ ತಾಕತ್ತಿಲ್ಲದ ಕನಸುಗಳಿಗೂ ಅಷ್ಟಿಷ್ಟು ಜೀವ ತುಂಬಬಹುದು...
ಇಂದು ಈ ನೋವ ತೀವ್ರತೆಯಲ್ಲಿ ಅದೆಲ್ಲ ನಿನ್ನ ಕನಸುಗಳು ನಿರ್ಜೀವ ಅನ್ನಿಸಿಯಾವು – ಪ್ರಜ್ಞೆಯ ಬಲದಿಂದ ಬರುವ ಸಮಯಕ್ಕಾಗಿ ಪ್ರೀತಿಯಿಂದ ಕಾದಿಟ್ಟುಕೊಂಡರೆ ಖಂಡಿತಾ ಅವನೆಲ್ಲ ಮತ್ತೆ ಸಾಧಿಸಬಲ್ಲೆ...
ಹೌದು ಒಪ್ಪುತ್ತೇನೆ ಒಂದಿಷ್ಟು ಬದಲಾವಣೆ ಇದ್ದೇ ಇರುತ್ತೆ ಇಂದು ಸಿಗಬೇಕಿದ್ದ ಗೆಲುವು ನಾಳೆ ಸಿಕ್ಕಲ್ಲಿ...
ಆದರೆ ಮೂಲದಲ್ಲಿ ನಗುವಿದ್ದೇ ಇರುತ್ತೆ ಅನ್ನೋದು ನನ್ನ ನಂಬಿಕೆ ಮತ್ತು ಅನುಭವ... ಅಷ್ಟೇ...


ಪ್ರತಿ ನೋವಿಗೂ ಒಂದು ಪರ್ಯಾಯ ಇದ್ದೇ ಇದೆ ಎಂಬುದು ನನ್ನ ಬಲವಾದ ನಂಬಿಕೆ... 
ಬದುಕು ಮುಗಿದೇ ಹೋಯಿತು ಅಂದುಕೊಂಡಲ್ಲಿಂದಲೇ ಬದುಕು ಮತ್ತೆ ಹೊಸದಾಗಿ ನಗುತ್ತೆ ಕಣೋ... 
ಹೌದು ಹೇಳಬೇಕಾದದ್ದನ್ನು ಪ್ರೀತಿಯಿಂದ ಹೇಳಲು ಬಾರದ ಒರಟ ನಾನು – ಆದ್ರೆ ಬದುಕೂ ಒರಟು ಒರಟೇ ಅಲ್ವಾ... 
ಉಸಿರುಗಟ್ಟುವಂತೆ ಗಟ್ಟಿಯಾಗಿ ತಬ್ಬದೇ ಹೋದರೆ ಅದು ಅರಳೋದು ಕಷ್ಟ ಅಂತನ್ನಿಸುತ್ತೆ ನಂಗೆ... 
ಆತ್ಮದೊಳಗಿಂದ ಹೊಮ್ಮುವ ಭರವಸೆಯೊಂದೇ ಬದುಕ ಮುನ್ನಡೆಸುವ ಕೀಲಿಕೈ – ಕನಸುಗಳೆಡೆಗಿನ ಮತ್ತು ನಿನ್ನೆಡೆಗಿನ ನಿನ್ನ ಅಚಲ ಪ್ರೀತಿಯೊಂದೇ ಅದನ್ನ ಕಾಯಬಲ್ಲುದು... 
ಪ್ರೀತಿಸಿಕೋ ಇನ್ನಷ್ಟು ನಿನ್ನ ನೀನು... 
ತಪ್ಪಿಲ್ಲ ಅತ್ತುಬಿಡು ಒಮ್ಮೆ ಒಳಗೆ ಹೆಪ್ಪಾದ ನೋವೆಲ್ಲ ಕರಗಿ ಹೋಪಂತೆ ನಿನ್ನೆದುರು ನೀನು - ಹೊಸ ದೃಷ್ಟಿಕೋನವೊಂದು ಹುಟ್ಟಲಿ ಕಣ್ಣಹನಿಯೊಳಗಿಂದ... 
ನೋವ ಗೆದ್ದು ನಲಿವ ಹೊದ್ದು ಮುದ್ದಿಸು ಕನಸುಗಳನ್ನ ಮತ್ತೇನೂ ಕಾಣದಂತೆ...
ನೋವು ನಲಿವಿನ ಮಿಲನದುತ್ತುಂಗದಲ್ಲಿ ಜಿನುಗೋ ಕಣ್ಣೀರೇ ಅಲ್ಲವಾ ಬದುಕಿನೊಳಮನೆಗೆ ಶೃಂಗಾರ...


ಮನದ ಕಣ್ಣಲ್ಲಿ ಭಾವಗಳು ಮಿನುಗಲಿ – ಹಾಗಂತ ಭಾವಗಳ ಬಾಹುಗಳಲಿ ಬದುಕು ಬಳಲದಿರಲಿ...
ಭಾವಗಳು ಮನದ ಕಂದಮ್ಮಗಳು – ಪ್ರಜ್ಞೆ ಅವಕೆ ಲಾಲಿ ಹಾಡಿ ದಿಕ್ಕು ತೋರಲಿ...
ಮನಸು ಒಲವಿನೆದೆಹಾಲನುಣಿಸೋ ತಾಯಿ – ಪ್ರಜ್ಞೆ ಆತ್ಮಾಭಿಮಾನವ ಕಾಯ್ದು ಕೊಡೋ ತಂದೆ...
ಬದುಕಿದು ಮನಸು ಮತ್ತು ಪ್ರಜ್ಞೆಗಳ ಸಮರಸ ಪ್ರೇಮದ ಕೈಗೂಸಾಗಲಿ...
ನಿನ್ನೆಗೂ – ನಾಳೆಗೂ ಸ್ನೇಹವಾಗಿ ಈ ಕ್ಷಣ ಬದುಕಿನೊಡನೊಂದು ಆತ್ಮಾನುಸಂಧಾನ ಏರ್ಪಡಲಿ...


ನೋವೊಂದಕೆ ನೀ ಹೇಗೆ ಪ್ರತಿಕ್ರಿಯಿಸುತ್ತೀಯಾ ಎಂಬುದರ ಮೇಲಲ್ಲವಾ ಆ ನೋವಿನ ಆಯಸ್ಸಿನ ನಿರ್ಧಾರ...
ಯಾವುದಕ್ಕೆ ಎಷ್ಟು ನೋಯಬೇಕು ಮತ್ತು ಯಾರಿಗಾಗಿ ಎಷ್ಟು ಮರುಗಬೇಕು ಎಂಬುದು ನಮ್ಮ ಮನದ ಅಲ್ಲಲ್ಲ ಪ್ರಜ್ಞೆಯ ನಿರ್ಧಾರವಾಗಬೇಕಲ್ವಾ...
ನಗೆಯ ಪ್ರೀತಿಸು ನೋವೇ ನೋಯುವ ಹಾಗೆ - ಹೀನಾಯವಾಗಿ ಸೋತ ಭಾವದಲ್ಲಿ...
ಆತ್ಮ ಶಕ್ತಿಯನೆತ್ತಿ ನಿಲ್ಲಿಸು - ಯಾವ ಸೋಲೂ ಬದುಕ ಸೋಲಿಸದ ಹಾಗೆ -ಗೆಲುವೊಂದೇ ಬದುಕನಾಳುವ ಹಾಗೆ... 
ಬದುಕನಾವರಿಸಿ ಅಪ್ಪಿಕೋ - ಸಾವು ಕೂಡ ತನ್ನಿರುವಿಕೆಯ ಬಗೆಗೆ ತಾನೇ ನಾಚುವ ಹಾಗೆ...
ಬದುಕೊಂದು ಯುದ್ಧರಂಗವಾದರೆ ನಿನ್ನಾತ್ಮಬಲವೇ ನಿನ್ನಡಿಗೆ ಗೆಲುವ ತಂದಿಡುವ ದಂಡನಾಯಕ - ನಗೆಯು ಪಾರಿತೋಷಕ...
ನೋವ ಕಡೆದು - ನಲಿವ ಹಡೆದು - ಬದುಕನಾಳುವ ಕನಸು ಮೂಡಲಿ ಮನದ ಗರ್ಭದಲ್ಲಿ...
ಅಂತಿಮವಾಗಿ ನೀ ಮಾತ್ರ ಗೆಲ್ಲಬೇಕು - ನಿನ್ನ ಕನಸುಗಳ ಆಳುತ್ತ ಆಳುತ್ತ ನಿನ್ನ ಬದುಕನೂ ನೀ ಮಾತ್ರ ಆಳಬೇಕು - ಅದೂ ನಗೆಯ ಝೇಂಕಾರದೊಂದಿಗೆ...
ಪ್ರೀತಿಯಾಗಲಿ ಹೊಸದಾಗಿ - ಈ ನಂತರದ ಕ್ಷಣಗಳ ಮೇಲೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Thursday, June 12, 2014

ಗೊಂಚಲು - ನೂರು + ಇಪ್ಪತ್ತು + ಮತ್ತೊಂದು.....

ಸುಮ್ ಸುಮ್ನೇ.....

‘ನಾನು’ ಸಾಯಬೇಕು...
‘ನಾ’ ಇಲ್ಲದ ನಾನು ಮರುಹುಟ್ಟು ಪಡೆಯಬೇಕು...
‘ನಾನು ನೀನು ಅಂತ ಬೇರೆ ಬೇರೆ ಇಲ್ಲ’ ಅಂತಂದು ನೀನು ನೀನಾಗಿಯೇ ಜಗಕೆಲ್ಲ ಕೂಗಿ ಹೇಳುವಂತೆ ನಾ ನಿನ್ನ ಪ್ರೀತಿಸಬೇಕು...
‘ನಾನು’ ಎಂಬ ಗುಂಗಿಲ್ಲದ ‘ನಮ್ಮ’ ಸ್ನೇಹ ನಾಳೆಗಳಲಿ ನಗೆಯ ಶರಧಿಯಾಗಿ ತೊನೆಯಬೇಕು...
ಹೀಗೆಲ್ಲ ಅನ್ನಿಸುತ್ತಿರುತ್ತದೆ ಬಲವಾಗಿಯೇ...
ಆದ್ರೆ ಸತ್ಯ ಗೊತ್ತಾ –
ನನ್ನಲ್ಲಿನ ‘ನಾನು’ ಸತ್ತು ನಿನ್ನನ್ನು ‘ನೀನಾಗಿಯೇ’ ಮನದ ಪ್ರಾಮಾಣಿಕತೆಯಿಂದ ಪ್ರೀತಿಸಲು ನಾನು ಇನ್ನೆಷ್ಟು ಸಾವಿರ ಜನ್ಮಗಳನೆತ್ತಿ ಬರಬೇಕೋ...
‘ನಾನಿ’ರುವ ನಾನು ಅಳಿವುದಾದರೆ ಆ ಅಳಿವಿಗಾಗಿ ನಾನಂಬದಾತನೆದುರೂ ಮಂಡಿಯೂರಿ ಪ್ರಾರ್ಥಿಸಿಯೇನು...

***

ಕಪ್ಪು ಹುಡುಗೀ –
ಕಪ್ಪಂತೆ ಕಾಡಿಗೆ – ಆದರೇನು ಚೆಲುವೆಯರ ಹೊಳೆವ ಕಂಗಳಿಗೆ ಕಾಡಿಗೆಯೇ ಅಲಂಕಾರವಂತೆ....
ನನ್ನೊಲವ ಕಂದೀಲೇ -
ನನ್ನ ಬೆಳಗೆಂದರೆ ನಿನ್ನ ಕಣ್ಣಂಚಿನ ಮುಗುಳ್ನಗು – ನೀ ಮೈಮುರಿಯುವ ಸದ್ದು – ನಾ ಕಂಡದ್ದನ್ನು ಸೂರ್ಯನೂ ಕಂಡುಬಿಟ್ಟನಾ ಎಂಬ ಧಾವಂತದಲಿ ನೀ ಹೊದಿಕೆ ಹುಡುಕುವಾಗ ನಿನ್ನ ಮೈಲೆಲ್ಲ ಹರಿದಾಡುವ ಮೆಲು ನಾಚಿಕೆ........;)
ನನ್ನ ಮುಸ್ಸಂಜೆಯೆಂದರೆ ಬಿಡಲಾರದಂತೆ ಬೆರೆತ ಹಸ್ತ ರೇಖೆಗಳ ಮಾತುಕತೆ – ಕಣ್ಣ ಬೆಳಕಲ್ಲಿ ಮನದ ಕನಸುಗಳ ವಿನಿಮಯ – ಎಂಜಲು ತುಟಿಗಳು ಮತ್ತು ನಡುಗೋ ತೊಡೆಗಳಲಿ ಗರ್ಭಾದಾನದ ಹಸಿವು... :p
ನನ್ನ ಇರುಳೆಂದರೆ ನಿನ್ನ ಕಣ್ಣೆವೆಗಳಲಿನ ಅಮಲು – ನಿನ್ನ ಮೈಯ ಹೊಳಪಲ್ಲಿ ಮಿಂದು ಆ ಬಿಸುಪಲ್ಲಿ ನಾ ಹಸಿಯಾಗುವ ಹೊತ್ತು – ನೀ ನನ್ನ ಬಳ್ಳಿಯಾಗಿ ತಬ್ಬಿ, ಹೂವಾಗಿ ಅರಳಿ, ‘ಫಲವಂತ’ ಕನಸಲ್ಲಿ ಕಣ್ಣು ಹನಿಯುವ ಘಳಿಗೆ... ;)
ಕಪ್ಪು ಮಣ್ಣಿನ ಹಣತೆ ನೀನು – ನಿನ್ಮನದ ಒಲವಿನೆಣ್ಣೆಯ ಉರಿಸಿ ನೀ ಸುರಿವ ಬೇಳಕಲ್ಲಿ ನನ್ನೀ ಕ್ಷಣಗಳು ಹೊಳೆಯುತಿವೆ ಕಣೇ ಗೆಳತೀ...

***

ಜೊತೆಯಿದ್ದು ಕೆಲವು - ಜೊತೆ ನಿಲ್ಲದ ಹಲವು ಉಪದ್ವ್ಯಾಪಿ ಭಾವಗಳು ಮನದ ಅಂಗಳವ ಇನ್ನಿಲ್ಲದಂತೆ ರಾಡಿಯೆಬ್ಬಿಸುತ್ತಿವೆ...
ಅಲ್ಲಿಯ ಗದ್ದಲಗಳಿಂದಾಚೆ ಬಂದು ಒಂದಷ್ಟನ್ನು ಕಳಕೊಳ್ಳಬೇಕಿದೆ – ಹೊಸದೊಂದಿಷ್ಟನ್ನು ತುಂಬಿಕೊಳ್ಳಬೇಕಿದೆ...
ಹೊಸದು ಸಿಗದೇ ಹೋದರೂ ಪರವಾಗಿಲ್ಲ ತುಕ್ಕು ಹಿಡಿದ ಹಳೆಯವುಗಳನ್ನು ಒಂದಿಷ್ಟು ತಿಕ್ಕಿ ತೊಳೆದು ಬೆಳಗಿಸಿಕೊಳ್ಳಬೇಕಿದೆ...
ಅದಕೆಂದೇ –
ಭೋರಿಡುವ ಶರಧಿಯ ಸನ್ನಿಧಿಯಲಿ ತೆರೆಗಳಿಗಭಿಮುಖವಾಗಿ ಒಂದಿಷ್ಟು ಹೊತ್ತು ಮೌನವಾಗಿ ಕೂತಿರಬೇಕು....
ಗಂವ್ವೆನ್ನೋ ಕಾಡಿನ ಮಡಿಲ ಗಾಢ ಮೌನದ ನಡುವೆ ನಡೆದಾಡುತ್ತಾ ತುಂಬ ತುಂಬ ಮಾತಾಗಬೇಕು – ನನ್ನೊಳಗೆ ನಾನು...
ಬಿಡದೆ ಬೋರೆಂದು ಸುರಿವ ಮಲೆನಾಡ ಮಳೆಯಲ್ಲಿ ಮೈ ಮುದುಡುವಂತೆ ನೆನೆದು ತಂಪಾಗುತ್ತಾ ಗಂಟಲು ಹರಿಯುವಂತೆ ಕಿರುಚಬೇಕು....
ಈ ಮೂರರಲ್ಲಿ ಒಂದರೊಂದಿಗಾದರೂ ಬೆರೆತು – ನನ್ನ ನಾನೊಂದಿಷ್ಟು ಅರಿತು – ಮನಸಿಗೊಂದು ಹೊಸ ನಗೆಯ ಕೊಡಬೇಕು...
ಅದಕೇ -
ಶರಧಿಯ ದಡದಲ್ಲಿ ನಿಮ್ಮ ಗೂಡಿದೆಯಾ ನಂಗೊಂದು ಆಥಿತ್ಯ ನೀಡಿ...:)
ನಿಮ್ಮೂರಲ್ಲಿ ಕಾಡಿದೆಯಾ ನಂಗೆ ದಾರಿ ತೋರಿಸಿ....
ಮಳೆಯಾಗುತ್ತಿದೆಯಾ ಅಲ್ಲಿ ನನ್ನನೊಮ್ಮೆ ನೆನೆಸಿಕೊಳ್ಳಿ...
ಇಷ್ಟೇ ಇಷ್ಟಾದರೂ ಖುಷಿಯಾದೇನು...

Tuesday, June 3, 2014

ಗೊಂಚಲು - ನೂರಿಪ್ಪತ್ತು.....

ಹಲ ಭಾವ ಮಿಶ್ರಣ.....

ನೆನಪು ನಿನ್ನೆಗಳನ್ನ ಹಸಿರಾಗಿಡುತ್ತೆ...
ಕನಸು ನಾಳೆಗಳ ನಿರ್ದೇಶಿಸುತ್ತೆ...
ಯಾರದೇ ಬದುಕ ಕನಸಾಗೋ ಹಂಬಲವಿಲ್ಲ...
ಯಾರಲ್ಲಾದರೂ ಖುಷಿಯ ನೆನಪಾಗಿ ಉಳಿದೇನಾ...???
ಖಂಡಿತ ಆ ನಂಬಿಕೆಯಿಲ್ಲ...
ನಿನ್ನೆ ನಾಳೆಗಳಲ್ಲಿ ಉಳಿಯದೇ ಇಂದೆಂಬ ಈ ಕ್ಷಣದೊಂದಿಗೆ ಅದಿದ್ದಂತೆ ಕಳೆದು ಹೋಗುವುದಷ್ಟೇ ಉಳಿದಿರುವ ಹಂಬಲ...

ಇಳಿ ಸಂಜೆಯೆಂದರೂ, ಕಾರಿರುಳೆಂದರೂ ಅದೇ ತಾನೆ -
ಬಂಧಿಸಿಟ್ಟ ಕಣ್ಣ ಹನಿಗಳಿಗೆಲ್ಲ ಸ್ವಾತಂತ್ರ‍್ಯ ಸಿಗುವ ಕಾಲ...
ಮನಸು ಹಗುರಾಗಿ, ಹೊಸದಾಗಿ ನಗುವ ಹುಡುಕುವ ಕಾಲ...
ಹಗಲಲ್ಲಿ ಕಳಕೊಂಡದ್ದು ಇರುಳಲ್ಲಿ ಸಿಕ್ಕೀತಾ......???

ಪ್ರೀತಿ ಕೊಡುವುದೆಂದರೆ ಸ್ವಾತಂತ್ರ‍್ಯ ಕೊಡುವುದಲ್ವಾ...
ನಿನ್ನಿಷ್ಟದಂತೆ ನೀ ಬದುಕು ಅಂತಂದು ಹಾರಾಡಲು ಬಿಟ್ಟೆ...
ಎನ್ನೆದೆಯ ಗೂಡಿನಲಿ ನಿನ್ನ ಬಂಧಿಸುವುದೆ ನನ್ನಿಷ್ಟವೆಂದು ಬದುಕ ತಬ್ಬಿಬಿಟ್ಟಳು...
ನಾನಿಂದು ಅವಳ ಒಲವ ಗೃಹಬಂಧಿ...

ಪ್ರೀತಿಗೇನು ಕಾರಣ ಎಂದು ಕೇಳಲಾರೆ...
ಗೊತ್ತೆನಗೆ -
ಮುಂಬೆಳಗಿನ ಕನಸಿನಂಥ ಕವಿತೆ ನಿನ್ನ ಪ್ರೀತಿ...

ಕಪ್ಪು ಹುಡುಗೀ -
ನೀನು ಕತ್ತಲು ಮತ್ತು ಮಳೆ ಜತೆಯಾಗಿ ಸೇರಿದಂಥವಳು...
ನನ್ನ ಕಣ್ಣ ಹನಿಯ ನಾನೂ ಕಾಣದಂತೆ ನಿನ್ನುಡಿಯಲಿ ಹುದುಗಿಸಿಕೊಂಡು, ಕರೆಯೂ ಉಳಿಯದಂತೆ ತೊಳೆದು ಬೆಳಗಿನೆದುರು ಶುಭ್ರ ನಗೆಯೊಂದನೇ ಉಳಿಸುವವಳು...
ನಿನ್ನ ಹಗಲಿಗೆ ನಗೆಯ ನಂಜೇರಲಿ - ದಿನಕೆ ರಂಗೇರಲಿ...

ಕಂದನ ತುಟಿಯಂಚಿಂದ ಜಾರಲಾರೆನೆಂಬ ಹಸಿ ಹಾಲಿನ ಹನಿ ಮುತ್ತು ಮತ್ತು ನಿನ್ನ ನಗೆಯ ಸಿಹಿ ತುತ್ತು - ಈ ಬೆಳಗು...

ಗೆಳತೀ -
ಬದುಕಿನೊಂದಿಗೆ ಮುಗಿಯದ ಸಾವಿರ ಪ್ರಶ್ನೆಗಳಿತ್ತು - ನಿನ್ನ ಮುಗುಳ್ನಗುವ ಹೀರಿ ನನ್ನೆಲ್ಲ ಪ್ರಶ್ನೆಗಳ ಮರೆತೆ...
ಉತ್ತರಗಳ ಮೀರಿದ ಭಾವಗಳ ಸನ್ನಿಧಿಯಲಿ ನಗುವೊಂದೆ ಉತ್ತರ ಅನ್ನಿಸಿ - ನಿನ್ನೆಲ್ಲ ಪ್ರಶ್ನೆಗಳೆದುರು ನಗುತ್ತ ನಿಂತೆ...
ಬದುಕೀಗ ಅಷ್ಟಿಷ್ಟು ನಗುತ್ತಿರುವಂತಿದೆ...

ನಂಗಾದರೋ ನನ್ನ ಸಣ್ಣ ಬೇಸರದ ಎದುರೂ ಸದಾ ಗುರಾಣಿ ಹಿಡಿದು ಯುದ್ಧ ಸನ್ನದ್ಧರಾಗಿ ನಿಲ್ಲಲು ತಾವೇ ತಾವಾಗಿ ದಕ್ಕಿದ ಸ್ನೇಹಗಳ ಜೊತೆಯಿದೆ...
ಅವಳಿಗೋ ಅವಳ ಕಣ್ಣ ಹನಿಯೊಂದೆ ಆಸರೆ...
ಆದರೂ ಮಾತಿಗೆ ಮುನ್ನ ನೀ ಚೆನ್ನಾಗಿದ್ದೀಯೇನೋ ಅಂತಾಳೆ - ನಾನು ‘ಹಾಂ’ ಅನ್ನುವುದಕ್ಕಾಗಿ ಕಾಯುತ್ತಾಳೆ; ‘ಹಾಂ’ ಅಂದಾಗ ಸಮಾಧಾನದ ಉಸಿರ ಚೆಲ್ಲುತ್ತಾಳೆ... 
ಅವಳು ಅಮ್ಮ - ನಾನು ಸ್ವಾನುಕಂಪದಲ್ಲಿ ತೇಲೋ ಸ್ವಾರ್ಥಿ ಮಗರಾಯ...
ನೆನಪಾದರೆ ಮುಸ್ಸಂಜೆ ಮುಳ್ಳಾಗಿ ಎದೆಯ ಚುಚ್ಚುತ್ತದೆ...  

ಇರುಳು ಅರಳುವ ಹೊತ್ತು, ಅದೇ ತಾರಸಿ, ಅಲ್ಲಿರೋ ಬಟ್ಟೆ ಒಗೆಯೋ ಎರಡೂವರೆ ಅಡಿಯ ಹಾಸುಗಲ್ಲು, ಮೇಲೆ ಮುದುಡಿ ಮಲಗಿರೋ ಹೆಣದಂಥ ನಾನು ಮತ್ತು ನನ್ನ ಮನಸು, ಸುತ್ತ ಬಣ್ಣದ ಬಲ್ಬುಗಳ ಬೆಳಕಲ್ಲಿ ಲಕಲಕ ಅನ್ನೋ ಕಟ್ಟಡಗಳು, ಅಲ್ಯಾವುದೋ ಕಟ್ಟಡದ ಬಾಗಿಲಲ್ಲಿ ಯಾವುದಕ್ಕೋ ಕಾಯುವ ಒಂಟಿ ಹೆಣ್ಣು, ಮನಸಿನ ಬೆವರ ಒಣಗಿಸುವಲ್ಲಿ ಸೋತ ತಂಗಾಳಿ, ಮನದ ಮೂಗ ಹಿಂಡುವ ಕೊಳಕು ವಾಸನೆ ಚರಂಡಿಯದ್ದಲ್ಲ ನನ್ನದೇ ಬದುಕಿನದ್ದು...

 *** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)