Thursday, June 14, 2012

ಗೊಂಚಲು - ಮೂವತ್ತೆರಡು.....

ದೇವರ ನೋಡುವ ಕಣ್ಣು.....

ಸಕಲ ಜೀವ ಜಂತುಗಳಲ್ಲಿ ಮನುಷ್ಯ ಪ್ರಾಣಿಯೊಂದೇ ಇರಬೇಕು...
ಮನದಲ್ಲಿರಬೇಕಾದ ದೇವರನ್ನು ಒಯ್ದು ಗುಡಿಯ ಗೋಡೆಗಳ ಮಧ್ಯೆ ಇಟ್ಟು...
ದಿನಕ್ಕೆರಡು ಬಾರಿ ಊಟವಿಕ್ಕಿ ಬಿದ್ದಿರು ಸುಮ್ಮನೇ ಅಂತಂದು ಬಾಗಿಲು ಹಾಕಿ ತನ್ನ ಕರ್ಮ ಕೂಪಕ್ಕೆ ಧೈರ್ಯದಿಂದ ಸಾಗಬಲ್ಲವನು...
ಗುಡಿಯ ಹುಂಡಿಗೆ ನಾಕು ಕಾಸು ಹಾಕಿ ಕೆನ್ನೆ ತಟ್ಟಿಕೊಳ್ಳುತ್ತಾ ಪಾಪ ಪರಿಹಾರವಾಯಿತೆಂದುಕೊಂಡು ಹೊಸ ಪಾಪಕ್ಕೆ ಅಣಿಯಾಗಬಲ್ಲವನು...
ಎಂಥ ದುರಂತ...

ದೇವರಿದ್ದಾನಾ..? 
ಗೊತ್ತಿಲ್ಲ.
ಆದ್ರೆ ಈ ದೇವರ ಕುರಿತು ಎಷ್ಟೊಂದು ನಂಬಿಕೆಗಳು, ಮೂಢನಂಬಿಕೆಗಳು ತುಂಬಿ ತುಳುಕುತ್ತಿವೆ. ಆತನನ್ನು ಸಂಪ್ರೀತಗೊಳಿಸಲೋಸುಗ ಏನೆಲ್ಲ ಪಾಡು ಪಡ್ತಾರೆ ಈ ಮಂದಿ. 
ಎಲ್ಲೋ ಗುಡಿಯಲ್ಲಿನ ಕಲ್ಲ ಶಿಲೆಯಲ್ಲಿ, ಎಂತೆಂಥದೋ ಅರ್ಥ ಕಾಣದ ಆಚರಣೆಗಳಲ್ಲಿ, ಉರುಹೊಡೆದ ಮಂತ್ರಗಳಲ್ಲಿ, ಎರಗುವ ಸಾಷ್ಟಾಂಗಗಳಲ್ಲಿ, ಪ್ರದರ್ಶನದ ಭಕ್ತಿಯಲ್ಲಿ, ಸಂಖ್ಯೆಗಳ ಜಾಲಕ್ಕೆ ಸಿಕ್ಕ ಭಕ್ತಿಯಿರದ ಪ್ರದಕ್ಷಿಣೆಗಳಲ್ಲಿ ಅಲ್ಲೆಲ್ಲ ಭಗವಂತನ ಹುಡುಕುವ ಉಹುಂ ಹೊಂದಬಯಸುವ ಭ್ರಮೆ ತುಂಬಿದ ವ್ಯರ್ಥಾಲಾಪ. 
ಇಷ್ಟರ ನಡುವೆ ಯಾವ ದೇವರು ಶ್ರೇಷ್ಠ ಎನ್ನುವ ದ್ವಂದ್ವ ಬೇರೆ.
ಕಾಣದಿರುವ ದೇವನಿಗೂ ಜಾತಿ ಮತಗಳ ಸೋಂಕು.

ಇಷ್ಟಕ್ಕೂ ನಾನು ದೇವರ ಅಸ್ತಿತ್ವವನ್ನು ವಿಮರ್ಷಿಸ್ತಿರೋದು ನಾಸ್ತಿಕನೆನಿಸಿಕೊಳ್ಳಬೇಕೆಂಬ ಹಮ್ಮಿನಿಂದಲ್ಲ. 
ಒಪ್ಪುತ್ತೇನೆ ದೇವರೆಡೆಗಿನ ನಂಬಿಕೆಯಲ್ಲೂ ಒಂದಿಷ್ಟು ಧನಾತ್ಮಕ ಅಂಶಗಳಿವೆ.
ಆದರೆ ದೇವರೆಡೆಗಿನ ಭಕ್ತಿ ಹಾಗೂ ಆಚರಣೆಗಳ ಹೆಸರಲ್ಲಿ ನಡೆಯುವ ಆಡಂಬರ, ಅನಾಚಾರಗಳು ಮತ್ತು ಕಳೆಯಂತೆ ಬೆಳೆಯುವ ಮೌಢ್ಯದೆಡೆಗೆ ನನಗೆ ತೀವ್ರ ಅಸಮಾಧಾನವಿದೆ.
ದಾನ ಧರ್ಮದ ಹೆಸರಲ್ಲಿ ಭಗವಂತನಿಗೇ ಕೊಡಮಾಡುವ ಲಂಚ, ಒಳಿತನ್ನು ಮಾತ್ರ ಮಾಡಬೇಕಾದವನ ಹೆಸರು ಬಳಸಿಕೊಂಡು ನಡೆಸುವ ಕೆಡುಕುಗಳನೆಲ್ಲ ಕಂಡಾಗ ಮನ ಹೇಸುತ್ತದೆ.
100/-ರೂ ಕೊಡಬಲ್ಲವನಿಗೆ ದೇವರ ನೇರ ಹಾಗೂ ಶೀಘ್ರ ದರ್ಶನ ಮತ್ತು ಕಿಸೆಯಲ್ಲಿ 20/-ರೂ ಮಾತ್ರ ಇರುವವನಿಗೆ ಸರತಿಯಲ್ಲಿ ನಿಂತದ್ದೇ ಭಾಗ್ಯ ಅಂತನ್ನುವ ದೊಡ್ಡ ದೊಡ್ಡ ದೇಗುಲಗಳಲ್ಲಿ ಖಂಡಿತಾ ದೇವನಿರಲು ಸಾಧ್ಯವಿಲ್ಲ.

ದೇವರೆಂದರೆ ನನ್ನ ಕಣ್ಣಲ್ಲಿ ಒಂದು ಅದೃಶ್ಯ ಶಕ್ತಿಯ (ವ್ಯಕ್ತಿ ಎಂದರೂ ಆದೀತು) ಕಲ್ಪನೆ. 
ನಾವು ಮಾಡಬಯಸುವ ಆದರೆ ಮಾಡಲಾಗದ ಕಾರ್ಯಗಳನ್ನು ಮಾಡಬಲ್ಲ,  ನಮ್ಮ ಅಸಹಾಯಕತೆಯನ್ನು ಆರೋಪಿಸಬಹುದಾದ, ನಾವೇ ನಮಗಾಗಿ ಸೃಷ್ಟಿಸಿಕೊಂಡ ಒಂದು ಅಸೀಮ ಸಾಮರ್ಥ್ಯದ ಕಲ್ಪಿತ ಶಕ್ತಿ. 
ನಮ್ಮ ಮನಸಿನ ಎಲ್ಲ ತುಮುಲಗಳನ್ನು, ಕಂಗಾಲುಗಳನ್ನು, ಕೊನೆಗೆ ವಿಕಾರಗಳನ್ನೂ ಕೂಡ ನಿರ್ಭಯವಾಗಿ, ನಿಸ್ಸಂಕೋಚವಾಗಿ ಪೂರಾ ಪೂರಾ ಹೇಳಿಕೊಂಡು ಮನಸನ್ನು ನಿರಾಳಗೊಳಿಸಿಕೊಳ್ಳಬಲ್ಲ ಸುಲಭ (?) ಸಾಧನವಷ್ಟೇ. 

ಆತ ನಮಗೆ ಕಾಣಲಾರ ಮತ್ತು ನಾವು ಹೇಳಿದ್ದನ್ನು ಇನ್ನೊಬ್ಬರ ಹತ್ತಿರ ಹೇಳಲಾರ. ಹಾಗಾಗಿ ಅವನೆಡೆಗೆ ನಿರ್ಭಯತೆ.

ಆತ ನಮ್ಮ ಮನದಾಳದ ನೋವು, ವೇದನೆ, ವಿಕಾರ, ಒಳಿತು, ಕೊಳಕುಗಳೆಲ್ಲವನ್ನು ಕಂಡೂ, ಕೇಳಿಯೂ ನೀನಿಷ್ಟೇ ಅಂತ ಲೇವಡಿ ಮಾಡಿ ನಗಲಾರ ಮತ್ತು ಬಿಟ್ಟಿ ಸಲಹೆಗಳನ್ನು ನೀಡಿ ನಮ್ಮ ತಲೆ ತಿನ್ನಲಾರ. 
ಆ ಕಾರಣ ಅವನೆಂದರೆ ನಿಸ್ಸಂಕೋಚ.

ಆತ ಅಗೋಚರಿ. 
ಅಂತಲೇ ಅವನಿಗೆ ಸಾಷ್ಟಾಂಗವೆರಗಿದರೂ ನಮ್ಮಲ್ಲಿ ಕೀಳರಿಮೆ ಮೂಡಲಾರದು - ನಮ್ಮ ಅಹಂಕಾರ ಕೆಣಕಲಾರದು. 
ಹಾಗಾಗಿ ದೇವರು ಅಷ್ಟೆಲ್ಲ ಆಕರ್ಷಕ...
ಅವನೆಂದರೆ ಆ ಪರಿ ಪ್ರೀತಿ.

ಭಗವಂತ ಎಲ್ಲೋ ಇರುವನೆಂದು ಸುಳ್ಳೇ ಕಲ್ಪಿಸಿಕೊಂಡು ನಂಬುತ್ತೇವೆ. 
ಆತ ಇಲ್ಲೇ ನಮ್ಮಲ್ಲೇ ಇದ್ದಾನೆಂದುಕೊಂಡರೆ ಅಲ್ಲಿಗೆ ಮುಗೀತು - ಮರ್ಕಟ ಮನಸಿನ ಸ್ವೇಚ್ಛೆಗೆ ಲಗಾಮು ಬಿದ್ದಂತೆಯೇ ಸರಿ. 
ಅದಕ್ಕೇ ಅವನು ಅಲ್ಲೆಲ್ಲೋ ಗುಡಿಯ ಬಂಧನದಲ್ಲಿದ್ದರೇನೇ ನಮಗೆ ಖುಷಿ.

ದೇವರು -
ನಮಗಿರುವ ಮಿತಿಗಳನ್ನು ಮೀರಬಲ್ಲ ನಾವೇ ರೂಪಿಸಿಕೊಂಡ ನಮ್ಮದೇ ಕಲ್ಪನೆಯ ಕೂಸು. 
ಕಲ್ಪನೆ ಯಾವತ್ತಿಗೂ ವಾಸ್ತವಕ್ಕಿಂತ ಸುಂದರ. 
ವಾಸ್ತವವನ್ನು ಎದುರಿಸಲಾಗದ ಹೇಡಿಗಳಾದ ನಾವು, ತಪ್ಪೆಂದು ಗೊತ್ತಿದ್ದೂ ಮಾಡದೇ ಇರಲಾರದ ನಾವು, ಬಲಹೀನತೆಗಳನ್ನು ಮೀರಲಾರದೇ ಹೋಗುವ ನಾವು, ನಮ್ಮೊಳಗೇ ಎದ್ದು ನಿಲ್ಲುವ ಅಪರಾಧೀ ಭಾವದಿಂದ ಹೊರ ಬರುವ ಸುಳ್ಳೇ ಸಮಾಧಾನಕ್ಕಾಗಿ ದೇವರನ್ನು ಗಾಢವಾಗಿ ನಂಬಬಯಸುತ್ತೇವೆ. 
ಆ ಮೂಲಕ ಹೆಚ್ಚಾಗಿ ನಮ್ಮಂಥವರೇ ತುಂಬಿರುವ ಸಮಾಜದೆದುರು ನಾವು ಅವರಿಗಿಂತ ಸಾತ್ವಿಕರಂತೆ ತೋರಿಸಿಕೊಳ್ಳಲು ಹೆಣಗುತ್ತೇವೆ. 
ದೈವ ಭಕ್ತಿಯ ಹೆಸರಲ್ಲಿ ಮುಖವಾಡಗಳನ್ನು ಧರಿಸಿಕೊಂಡು ಬದುಕುತ್ತೇವೆ. 
ತಪ್ಪೆಂದು ಗೊತ್ತಾಗಿದ್ದನ್ನು ಮಾಡದೇ ಇರುವ ಬದಲು ತಪ್ಪು ಮಾಡಿ, ಮಾಡಿದ ತಪ್ಪಿಂದ ಹುಟ್ಟಿದ ಅಪರಾಧೀ ಭಾವವ ಮರೆಯಲು ದೇವರ ಮೊರೆ ಹೋಗ್ತೇವೆ.
ಹರಕೆಗಳ ಮೊರೆ ಹೋಗ್ತೇವೆ. 
ತಪ್ಪಿನ ಒಂದಂಶವನ್ನು ಹರಕೆ ಸಲ್ಲಿಸಿ ಪ್ರಾಯಶ್ಚಿತ್ತವಾಯ್ತೆಂದು ಹೊಸ ತಪ್ಪು ಮಾಡಲು ಆಸೆಯಿಂದ ಹೊರಡ್ತೇವೆ. 
ಕದ್ದ  ಚಿನ್ನದಲ್ಲಿ ಗುಡಿಗೆ ಹೊನ್ನ ಕಳಶವಿಟ್ಟು ದಾನಶೂರನೆನಿಸಿಕೊಂಡು ಬೀಗಿದರೆ ಕದ್ದ ಪಾಪ ಪರಿಹಾರವಾಗುತ್ತಾ..???

ಪಾಪ ಪ್ರಾಯಶ್ಚಿತ್ತಾಂಗವಾಗಿ ಹರಕೆ ಸಲ್ಲಿಸುವ ದಾನ ಭೀರುಗಳ ಗುಂಪು ಒಂದಾದರೆ - 
ಪಾಪದ ಅರ್ಥ ಗೊತ್ತಿಲ್ಲದಿದ್ದರೂ ಜನ್ಮಾಂತರಗಳ ಪಾಪ ಪುಣ್ಯಗಳ ಭ್ರಮೆಯ ಭಯದಲ್ಲಿ ಮೌಢ್ಯದಿಂದ ಹರಕೆ ಹೊರುವವರದ್ದು ಇನ್ನೊಂದು ದೊಡ್ಡ ಗುಂಪು.
ಇವರಿಬ್ಬರನ್ನೂ ತಮ್ಮ ಅಡ್ಡಗೋಡೆಯ ಮೇಲೆ ದೀಪವಿಟ್ಟಂತಿರುವ ಅರ್ಥವಾಗಲಾರದ ಶಬ್ದಾಡಂಬರಗಳ ವಾಗ್ಝರಿಯಿಂದ ಸೆಳೆದುಕೊಂಡು ಹೊಟ್ಟೆ ತುಂಬಿಕೊಳ್ಳುವವರದ್ದೇ ಮತ್ತೊಂದು ಸಮೂಹ.
ಇವರೆಲ್ಲರ ದೊಂಬರಾಟಗಳ ನಡುವೆ ದೇವರು ಇದ್ದುದೇ ಆದರೂ ಕಂಗಾಲಾಗಿರುತ್ತಾನೆ - ಗುಡಿಯಿಂದೆದ್ದು ಓಡಿ ತಲೆಮರೆಸಿಕೊಂಡಿರುತ್ತಾನೆ...:):):)

ದೇವರೇ ಇಲ್ಲ ಎನ್ನುವ ನಾಸ್ತಿಕನಿಗೆ ಮಾಡಿದ ತಪ್ಪಿಗೆ ಸುಲಭ ಪ್ರಾಯಶ್ಚಿತ್ತಗಳಿಲ್ಲ. 
ಹರಕೆಯ ಸವಲತ್ತುಗಳಿಲ್ಲ. 
ತಪ್ಪೇ ಮಾಡದಿರಲಂತೂ ಸಾಧ್ಯವಿಲ್ಲ. 
ಹಾಗೆಂದೇ ಜಗದಲ್ಲಿ ನಾಸ್ತಿಕರ ಸಂಖ್ಯೆ ವಿರಳ. 
ತತ್ಪರಿಣಾಮ ಎಲ್ಲ ದೇಗುಲಗಳ ಸುತ್ತ ಜನ ಜಂಗುಳಿ. 
ಒಮ್ಮೊಮ್ಮೆ ಕಾಲ್ತುಳಿತಕ್ಕೆ ಸಿಕ್ಕಿ ಕೆಲವರಿಗೆ ಅಲ್ಲೇ ಮುಕ್ತಿ ಸಿಗುವುದೂ ಉಂಟು. 
ಕೂತಲ್ಲೇ ತಿಮ್ಮಪ್ಪ ಕೋಟ್ಯಾಧಿಪತಿ...
ಮಲಗಿಯೂ ಶ್ರೀಮಂತ ಪಧ್ಮನಾಭ...

ನಮಗೆ ಇನ್ನೊಬ್ಬರೆದುರು ಅಳಲಿಕ್ಕೆ ಅಹಂ ಅಡ್ಡಿ ಬರುತ್ತೆ. 
ಆದರೆ ಅಳಲು ಒಂದು  ಹೆಗಲು ಬೇಕು. 
ಆ ಹೆಗಲು ದೇವರು. 
ಅದಕ್ಕೇ ದೇವನೆದುರು ನಿಂತು ಕೈಮುಗಿದು ಮನದಲ್ಲೇ ಅತ್ತು ಮನಸು ಹಗುರಾಯ್ತೆಂದುಕೊಂಡು ನಗಲು ಪ್ರಯತ್ನಿಸುತ್ತಾ ಗುಡಿಯಿಂದ ಹೊರ ಬೀಳ್ತೇವೆ. 

ಪ್ರಸಿದ್ಧನಲ್ಲದ ದೇವನ ಊರಾಚೆಯ ಗುಡಿಯಾದರೆ ಅಲ್ಲೊಂದು ಪ್ರಶಾಂತತೆ ಇರುತ್ತೆ. 
ಘಂಟೆಯ ನಿನಾದ, ಕಲ್ಯಾಣಿಯ ತಂಪು, ಕಲ್ಯಾಣಿಯೊಳಗಿನ ನೈದಿಲೆಯ ಮೇಲಿಂದ ಸುಳಿದಿರುಗಿ ಬರುವ ತಂಗಾಳಿಯಲ್ಲಿನ ನೈದಿಲೆಯ ಕಂಪು. 
ಎಲ್ಲ ಸೇರಿ ಒಂದು ಅನಿರ್ವಚನೀಯ ಆನಂದ ಭಾವ ಸಮ್ಮಿಲನ. 
ಅದಕ್ಕೆ ಪೂರಕವಾಗಿ ಅರ್ಚಕರ ಮಂತ್ರ ಘೋಷ ಜೋಗುಳದಂತೆ ಕೇಳಿಸಿ ಏನೋ ಮಂಪರು ಮಂಪರು.
ಯಾವುದೋ ಭಾವ ಧ್ಯಾನ.
ಜೊತೆಗೆ ದೇವಸ್ಥಾನದ ಮುಂದಿನ ಧ್ವಜಗಂಭಕ್ಕೋ, ಅರಳೀಕಟ್ಟೆಗೋ ಪ್ರದಕ್ಷಿಣೆ ಹಾಕುವ ಹರೆಯದ ಚೆಲುವಿನ ಗೆಜ್ಜೆನಾದವಿದ್ದರೆ ದೇವಸ್ಥಾನ ಒಂದು ಸುಂದರ ತಾಣವೇ ಸರಿ...
ಅಂತಲ್ಲಿ ದೇವರಿಲ್ಲದಿದ್ದರೂ ಒಂದು ಸ್ವಚ್ಛ ಮೌನವಿದೆ...
ಪ್ರಕೃತಿಯ ನಿನಾದವಿದೆ...
ಆದರೆ ಪ್ರಸಿದ್ಧ ದೇವಾಲಯಗಳಲ್ಲೆಲ್ಲ ಬರೀ ಗದ್ದಲ ಮತ್ತು ದಕ್ಷಿಣೆಯದ್ದೇ ಕಾರುಬಾರು.

ಎಲ್ಲ ಕಡೆ ಸೋತು ಸುಣ್ಣವಾಗಿದ್ದ ದುರ್ಬಲ ಮನಸಿಗೆ ಯಾವುದೋ ಒಂದು ದೇವರ ಕಾರ್ಯ (ಜಪ, ತಪ, ಹೋಮ, ಹವನ ಇತ್ಯಾದಿ) ಮಾಡುವುದರಿಂದ ನಾಳೆಯಿಂದ ಒಳ್ಳೆಯದಾಗುತ್ತೆ ಬಿಡು, ಗೆಲುವು ದಕ್ಕತ್ತೆ ಬಿಡು ಎಂಬಂತಹ ತಾತ್ಕಾಲಿಕ ಭರವಸೆ ಸಿಕ್ಕಿ ಮನಸು ಉತ್ಸಾಹಿತವಾಗಿ, ಒಂದಿಷ್ಟು ಆತ್ಮವಿಶ್ವಾಸ ಚಿಗುರಿಬಿಡಬಹುದು. 
ಹೆಚ್ಚಿನ ಸಲ ಈ ಆತ್ಮವಿಶ್ವಾಸವೇ ಚೈತನ್ಯದಾಯಿಯಾಗಿ ಗೆಲುವನ್ನು ದಕ್ಕಿಸಿಕೊಟ್ಟುಬಿಡುತ್ತದೆ. 
ಮನಸು ಸೋತಾಗ ಮನಸಿನೆಲ್ಲ ಭಾರವನ್ನೂ ಯಾರೋ ದೇವರಿಗೊಪ್ಪಿಸಿ ಆತ ಕಾಯ್ತಾನೆ ಬಿಡು ಎಂಬ ಸಮಾಧಾನವನ್ನು  ನಮ್ಮ ಮನಸಿಗೆ ನಾವೇ ನೀಡಿಕೊಂಡು ನಿಸೂರಾಗುತ್ತೇವೆ. 
ಅಷ್ಟರ ಮಟ್ಟಿಗೆ ಸಮಸ್ಯೆ ಬಗೆಹರಿದಂತೆಯೇ. 
ಏಕೆಂದರೆ ಒತ್ತಡ ಮುಕ್ತವಾದ ಮನಸಿಗೆ ಸಮಸ್ಯೆಯಿಂದ ಹೊರಬರಲು ಸಾವಿರ ದಾರಿಗಳು ಗೋಚರಿಸುತ್ತವೆ. 
ಅಷ್ಟರ ಮಟ್ಟಿಗೆ ದೇವರ ಅಸ್ತಿತ್ವದ ಕಲ್ಪನೆ ಸಾರ್ಥಕ.

ಇನ್ನು ದೇವರ ಪೂಜೆ, ಆಚರಣೆಗಳ ಹೆಸರಲ್ಲಿ ಬಂಧು ಬಾಂಧವರು, ಆತ್ಮೀಯರು, ಇನ್ನೇನು ಸಂಬಂಧದ ಕೊಂಡಿ ಕಳಚಿ ಹೋಗೇ ಬಿಡಬಹುದು ಎಂಬಂತಾದ ನೆಂಟರು ಎಲ್ಲ ಒಂದೆಡೆ ಸೇರುತ್ತೇವೆ. 
ಕಷ್ಟ ಸುಖ ಹಂಚಿಕೊಂಡು ಹಗುರಾಗ್ತೇವೆ. 
ನಕ್ಕು ಬಾಂಧವ್ಯ ವೃದ್ಧಿಸಿಕೊಳ್ತೇವೆ. 
ಮರೆತ ಮುಖವನ್ನು ನೆನಪಿಸಿಕೊಳ್ತೇವೆ. 
ಇವೆಲ್ಲ ಚೆಂದ ಚೆಂದ.  

ಆಚರಣೆಗಳ ಗೆಲುವಿದ್ದರೆ ಅದು ಬಾಂಧವ್ಯ ಬೆಸೆವ ನಗುವಿನಲ್ಲಿ ಮಾತ್ರ.
ಇವಿಷ್ಟೇ ದೇವರ ಹಾಗೂ ಪೂಜೆ ಪುನಸ್ಕಾರಗಳ ಕಲ್ಪನೆಯೆಡೆಗಿನ ಸಾರ್ಥಕತೆ ಮತ್ತು ಧನಾತ್ಮಕ ಅಂಶಗಳೇನೋ....

ನನಗನ್ನಿಸಿದಂತೆ -

ದೇವರೆಂದರೆ ನಂಬಿಕೆ : 
ತನ್ನ ಮೇಲೆ ತನಗಿರುವ ನಂಬಿಕೆ (ತನ್ನ ಮೇಲೆ, ತನ್ನ ಕಾರ್ಯಗಳ ಮೇಲೆಯೇ ನಂಬಿಕೆಯಿರದವನನ್ನು ದೇವರು ಕೂಡ ಸಲಹಲಾರನೇನೋ) ಮತ್ತು ತನ್ನ ಸುತ್ತಲಿನ ಜೀವಿಗಳ ಮೇಲಿನ ನಂಬಿಕೆ.

ದೇವರೆಂದರೆ ಪ್ರೀತಿ : 
ತನ್ನ ಮೇಲೆ ತಾನಿಟ್ಟುಕೊಂಡ ಪ್ರೀತಿ ( ತನ್ನನ್ನ ತಾನು ಪ್ರೀತಿಸಿಕೊಳ್ಳಲಾರದವನು ಇನ್ನೊಬ್ಬರನ್ನು ಅಥವಾ ದೇವರನ್ನು ಹೇಗೆ ಪ್ರೀತಿಸಿಯಾನು) ಮತ್ತು ತನ್ನ ಸುತ್ತಲಿನ ಜೀವ ಜಂತುಗಳೊಂದಿಗೆ ಬೆಸೆದುಕೊಳ್ಳುವ ಬೇಷರತ್ತಾದ ಪ್ರೀತಿ.

ದೇವರೆಂದರೆ ವಾತ್ಸಲ್ಯ : 
ಒಬ್ಬ ತಾಯಿಗೆ ತನ್ನ ಮಗುವಿನ ಮೇಲಿರುವಂಥ ನಿಷ್ಕಲ್ಮಶವಾದ ವಾತ್ಸಲ್ಯ. ಆ ನಿಷ್ಕಪಟ ವಾತ್ಸಲ್ಯವನ್ನು ಪರರ ಮಗುವಿನ ಮೇಲೆಯೂ ತೋರಿಸಬಲ್ಲ ಹೆಣ್ಣು ಜೀವದಲ್ಲಿ ಖಂಡಿತಾ ದೇವರಿದ್ದಾನೆ.

ದೇವರೆಂದರೆ ವಿಶ್ವಾಸ : 
ತಾನು ಮಾಡ ಹೊರಟ ಕಾರ್ಯದ ಉದ್ದೇಶ ಉತ್ತಮವಿರುವಾಗ, ಕಾರ್ಯ ಸಾಧಿಸುವ ವಿಧಾನ - ಮಾರ್ಗ ನ್ಯಾಯಯುತವಾದುದು ಎಂಬ ದೃಢವಾದ ನಂಬಿಕೆ ಇದ್ದಾಗ, ಆದ್ದರಿಂದ ತಾನು ಗೆದ್ದೇ ಗೆಲ್ತೇನೆಂಬ ವಿಶ್ವಾಸ ಮೊಗದಲ್ಲಿ ನಗುವಾಗಿ ಮೂಡಿ ನಿಲ್ಲುತ್ತಲ್ಲ ಅಲ್ಲಿ ದೇವರಿದ್ದಾನು.

ದೇವರೆಂದರೆ ಆದರ್ಶ : 
ಮಾತನಾಡದೇ ಸ್ವಚ್ಛ ಮೌನದಲ್ಲೇ ಸ್ವರ್ಗವಿದೆ ಎನ್ನುವಂಥ ಆತನ ಪ್ರಶಾಂತತೆ, ಎಲ್ಲ ಕೇಳಿಸಿಕೊಂಡೂ ಏನೂ ಕೇಳದಂತಿರುವ ಆತನ ಒಳ್ಳೆಯತನ, ಎಲ್ಲರಿಂದ ಸಾಷ್ಟಾಂಗವೆರಗಿಸಿಕೊಂಡೂ ಅಹಂಕಾರಿಯಾಗದ ಅವನ ವಿನಯ, ನಮ್ಮೆಲ್ಲ ದೊಂಬರಾಟಗಳ ಕಂಡೂ ವ್ಯಘ್ರನಾಗದ ಆತನ ವಿನೋದ, ತನ್ನನ್ನ ನಂಬಿದವರನ್ನೂ ನಂಬದವರನ್ನೂ ಒಂದೇ ತೆರನಾಗಿ ನೋಡಬಲ್ಲ ಆತನ ಸ್ಥಿತಪ್ರಜ್ಞತೆ - ಈ ಎಲ್ಲ ಆದರ್ಶ ಗುಣಗಳಲ್ಲಿ ದೇವರಿದ್ದಾನೆ.

ದೇವರೆಂದರೆ ಕರುಣೆ : 
ಪರರ ನೋವಿಗೆ ತಾನೂ ನೊಂದು - ತನ್ನ ನೋವ ಮರೆತು - ಅವರಿವರ ಮೊಗದ ಕಿರುನಗೆಗಾಗಿ ಮಿಡಿದು ಶ್ರಮಿಸುವ ನಿಸ್ವಾರ್ಥ ಹೃದಯದ ಕರುಣೆ.

ದೇವರೆಂದರೆ ಧೈರ್ಯ :

ಎದುರು ಬರುವ ಸಾವಿರ ಕಷ್ಟಗಳ ಸಾಗರವ ಈಜಿ ನೋವ ಪಂಜರದಲ್ಲಿ ಬಂಧಿಯಾಗಿರುವ ನಗುವ ಗಿಣಿಯನು ಬಿಡಿಸಿ ತಂದು ಬದುಕ ರಾಜಕುಮಾರಿಯ ಗೆಲ್ಲುತ್ತೇನೆಂಬ ಧೈರ್ಯ.

ದೇವರೆಂದರೆ ವಿಜ್ಞಾನ :
ಸದಾ ಹೊಸದಕ್ಕಾಗಿ ತುಡಿಯುವ, ಹೊಸ ಏಳ್ಗೆಗಾಗಿ ದುಡಿಯುವ, ಕುತೂಹಲದ ಕೂಸಾದ ವಿಜ್ಞಾನ.

ನಗುವ ಹಸುಳೆಯ ಅಬೋಧ ಕಂಗಳಲ್ಲಿ....
ಮಗುವನ್ನು ತಬ್ಬಿ ವಿನಾಕಾರಣ ಖುಷಿಪಡುವ ತಾಯ ಮಮತೆಯ ಮಡಿಲಲ್ಲಿ...
ಸಾವನ್ನು ಎದುರು ನೋಡುತ್ತಿರುವ ವೃದ್ಧೆಯ ಒಳಿತನ್ನು ಹರಸುವ ನಡುಗುವ ಕೈಗಳಲ್ಲಿ...
ತನ್ನೆಲ್ಲ ಜ್ಞಾನವನ್ನೂ ಧಾರೆಯೆರೆದು ಶಿಷ್ಯನನ್ನು ತನಗಿಂತ ಜ್ಞಾನಿಯಾಗಿಸಲು ತುಡಿಯುವ ಗುರುವಿನ ಮನದ ವೈಶಾಲ್ಯದಲ್ಲಿ...
ಪ್ರತಿಫಲಾಪೇಕ್ಷೆಯಿಲ್ಲದೇ ನಿರಂತರ ಜಗವ ಬೆಳಗುವ ಸೂರ್ಯ ಚಂದ್ರರಲ್ಲಿ...
ಕಡಿವ ಕಟುಕನಿಗೂ ನೆರಳನೀವ ಮರಗಿಡಗಳ ನಿಸ್ವಾರ್ಥತೆಯಲ್ಲಿ...
ಅರಳುವ ಹೂವು ಚೆಲ್ಲುವ ಚೆಲುವು ಹಾಗೂ ಸುಗಂಧದಲ್ಲಿ...
ಬೀಸುವ ಗಾಳಿಯಲ್ಲಿ...
ಸುರಿವ ಜಲಧಾರೆಯಲ್ಲಿ...
ಹಸಿರುಣಿಸುವ ಭೂತಾಯ ಕರುಣೆ ಕಡಲಲ್ಲಿ...
ಅಲ್ಲೆಲ್ಲ ದೇವರಿದ್ದೇ ಇದ್ದಾನು...

ಯಾವುದೋ ಗುಡಿಯ ಶಿಲೆಯ ಪೂಜಿಸುವುದಕ್ಕಿಂತ...
ಇನ್ಯಾವುದೋ ಸ್ವಾಮಿಯ ಪಾದಪೂಜೆ ಮಾಡಿ ದಕ್ಷಿಣೆ ಬಟ್ಟಲ ತುಂಬುವುದಕ್ಕಿಂತ... 
ಪ್ರಕೃತಿಯ ಪ್ರೀತಿ ಮಡಿಲಲ್ಲಿ - ನಮ್ಮ ನಿಮ್ಮ ಮನ ಮಂದಿರಗಳಲ್ಲೇ ದೇವರ ಕಾಣುವುದು ಎಷ್ಟೊಂದು ಒಳಿತಲ್ಲವಾ...

***!!!!!***

ಭಾವ - ಭಕ್ತಿ.....

ಭಕ್ತಿ ಅಂದರೇನು..???
ಕಂಡ ಕಂಡ ಸಕಲ ದೇವರುಗಳಿಗೂ ಶಿರಬಾಗೋದಾ.?
ಪ್ರದಕ್ಷಿಣೆಯ ಹೆಸರಲ್ಲಿ ಎಲ್ಲ ದೇವಸ್ಥಾನಗಳಿಗೂ ನೂರಾರು ಸುತ್ತು ಹಾಕೋದಾ.??
ಬಹು ವಿಜೃಂಭಣೆಯಿಂದ ಯಜ್ಞ ಯಾಗಾದಿಗಳನ್ನು ನಡೆಸೋದಾ.??
ಮೂರು ಹೊತ್ತೂ ದೇವನಾಮ ಸ್ಮರಣೆಯ ಹೆಸರಲ್ಲಿ ಕಣ್ಣು ಮೂಗು ಮುಚ್ಚಿಕೊಂಡು ತುಟಿಯಲುಗಿಸುತ್ತಾ ಕೂತಿರೋದಾ.???
ಇವುಗಳಲ್ಲಿ ಯಾವುದು ಭಕ್ತಿ.?
ಯಾವ ಭಕ್ತಿಯಿಂದ ನಮಗೆ ಮುಕ್ತಿ.??
ಇವೆಲ್ಲ ಭಕ್ತಿ ಅಂತಾದ್ರೆ, ಇವೆಲ್ಲವುಗಳಿಂದ ದೇವನೊಲಿದು ನಮ್ಮ ಕಷ್ಟ ಕಾರ್ಪಣ್ಯಗಳೆಲ್ಲ ಕಳೆಯೋದೇ ಆಗಿದ್ರೆ ಜಗದಲ್ಲಿ ಇಷ್ಟೆಲ್ಲ ನೋವುಗಳು, ಬಡತನ, ಆಸ್ಪತ್ರೆಗಳು ಯಾಕಿರಬೇಕು.
ಪೂಜಾರಿಗೂ ಬವಣೆ ತಪ್ಪಿಲ್ಲ...
ಸ್ವಾಮಿಗೂ ಸಾವು ತಪ್ಪಿದ್ದಲ್ಲ...

ನಂಗನಿಸಿದಂತೆ ಭಕ್ತಿ ಅಂದ್ರೆ -
ತನ್ನದೊಂದು ಗಮ್ಯವನ್ನು ಸೇರಲಿಕ್ಕಾಗಿ ತನ್ನೆಲ್ಲ ಶಕ್ತಿಯನ್ನೂ ಒಟ್ಟಾಗಿಸಿಕೊಂಡು, ಸರ್ವ ಪ್ರಯತ್ನ ಮಾಡಿ ಕೊನೆಗೆ ಗೆಲುವನ್ನು ತನ್ನದಾಗಿಸಿಕೊಂಡು, ಆಮೇಲೆ ತಾನೇ ತನ್ನ ಸಾಮರ್ಥ್ಯದಿಂದ ದಕ್ಕಿಸಿಕೊಂಡ ಗೆಲುವಿಗೆ ವಿನಯದಿಂದ ದೇವರ ಆಶೀರ್ವಾದವೇ ಕಾರಣ ಅಂತಾನ/ಳಲ್ಲ ಒಬ್ಬ ಯಶಸ್ವೀ ಸಾಧಕ/ಕಿ ಅವರದು ಭಕ್ತಿ ಅಂದರೆ.

ಇರುವ ಸಾವಿರದಲ್ಲಿ ಹತ್ತನ್ನು ದೇವರ ಹುಂಡಿಗೆ ಹಾಕಿ ಬೀಗೋದಲ್ಲ ಭಕ್ತಿ ಅಂದರೆ. 
ಇರೋ ಹತ್ತರಲ್ಲೇ ಒಂಭತ್ತನ್ನು ತನಗಿಂತ ದುಃಸ್ಥಿತಿಯಲ್ಲಿರುವವರಿಗೆ ಹಂಚಿ ತೃಪ್ತಿಯಿಂದ ನಗ್ತಾ  ಹಾಯಾಗಿ ನಿದ್ರಿಸ್ತಾನಲ್ಲ ಒಬ್ಬ ಆತನದು ನಿಜದ ಭಕ್ತಿ. 

ಮಳೆಯಾಗುತ್ತೋ - ಬೆಳೆ ಹಸನಾಗಿ ಲಾಭ ತರುತ್ತೋ ಒಂದೂ ಗೊತ್ತಿಲ್ಲದಿದ್ರೂ ಬೀಜ ಬಿತ್ತನೆ ಮಾಡಿ ತನ್ನ ಕೆಲಸವನ್ನು ತಾನು ನಿರ್ವಂಚನೆಯಿಂದ ಮುಗಿಸಿ ಆಗಸಕ್ಕೆ ಕೈಯೆತ್ತಿ ನಮಸ್ಕರಿಸುತ್ತಾನಲ್ಲ ಒಬ್ಬ ಬಡ ರೈತ ಅವನದು ಭಕ್ತಿ ಅಂದ್ರೆ.

ವರ್ಷವಿಡೀ ಬೆವರ ಹರಿಸಿ ಶ್ರಮಿಸಿ ಬೆಳೆದ ಫಸಲೆಲ್ಲ ಒಂದಿನಿತೂ ಉಳಿಯದೇ ತೊಳೆದು ಹೋದಾಗಲೂ ನೆಲವನ್ನಾದ್ರೂ ಉಳಿಸಿದೀಯಲ್ಲ ಭಗವಂತಾ ಅಂತ ದೇವರನ್ನ ಸ್ಮರಿಸ್ತಾನಲ್ಲ ಒಬ್ಬ ನೆರೆಪೀಡಿತ ನಿರಾಶ್ರಿತ ಆತನದು ಶ್ರೇಷ್ಠ ಭಕ್ತಿ.
ಆ ದೇವರು ಕೂಡ ಅಂಥ ಭಕ್ತನನ್ನೇ ಇಷ್ಟಪಟ್ಟಾನು...
ನಂಗೆ ಅಜ್ಜ ಹೇಳ್ತಿದ್ದ ಆ ಕಥೆ ನೆನಪಾಗುತ್ತೆ. 
ನಿಮಗೂ ಗೊತ್ತಿರೋದೇ.
ದಿನದ ಇಪ್ಪತ್ನಾಲ್ಕು ಘಂಟೆಯೂ ನಾರಾಯಣ ನಾರಾಯಣ ಎಂದು ಜಪಿಸ್ತಾ ಲೋಕ ತಿರುಗೋ ನಾರದನಿಗಿಂತಲೂ - ಹಗಲಿಡೀ ದುಡಿದು ದಣಿದು ರಾತ್ರಿ ಮಲಗೋ ಮುನ್ನ ಒಮ್ಮೆ ಮಾತ್ರ ಹೇ ನಾರಾಯಣಾ ಪಾಲಿಸು ಅಂತ ಬೇಡ್ಕೊಂಡು ಮಲಗ್ತಿದ್ದ ಬಡ ರೈತನೇ ಭಗವಂತನಿಗೆ ಪ್ರಿಯವಾಗಿದ್ನಂತೆ...

ನಾವೆಲ್ಲ ಪ್ರದರ್ಶನಪ್ರಿಯ ಧರ್ಮಭೀರುಗಳಾಗುವ ಬದಲು - ಕಾಯಕಪ್ರಿಯ ಭಕ್ತರಾಗೋದು ಒಳಿತಲ್ಲವಾ...


'ಗಲ್ಫ ಕನ್ನಡಿಗ' ಈ - ಪತ್ರಿಕೆಯಲ್ಲಿ 15-06-2012 ರಂದು ಪ್ರಕಟಿತ 

Tuesday, June 5, 2012

ಗೊಂಚಲು - ಮೂವತ್ತು + ಒಂದು.....

ಕತ್ತಲು.....


ಅಂದೂ -
ಮನೆಯ ತಾರಸಿಯ ಮೇಲೆ ಹೀಗೆಯೇ ಅಲೆಯುತ್ತಿದ್ದೆ...
ಆಗೆಲ್ಲ -
ನಿಶೆ ಬೆಳಕ ನುಂಗುವ ಮುನ್ನಿನ ಸಂಜೆಗತ್ತಲ ನನ್ನ ಮೌನಕ್ಕೆ ಎಂಥದೋ ಸೊಗಸಿತ್ತು...
ಬಾನಾಡಿಗಳ ಬಳಗ ಸೇರಿ ಬಾನೆತ್ತರ ಹಾರುತಿತ್ತು ಬಯಕೆ ತುಂಬಿದ ಮನ...
ಗೂಡು ಸೇರುವ ಮುನ್ನ ಕಿರುಚಾಡುತಿದ್ದ ಕಾಗೆ ಕೂಡ ನನ್ನ ಮೌನ ಮುರಿಯುವ ಕೀಟಲೆಯ ಮಿತ್ರನಂತೆ ಕಾಣುತಿತ್ತು...
ಪಿಳಿ ಪಿಳಿ ಬೆಳಕು ಚೆಲ್ಲುತ್ತಾ ನೂರಾರು ಬದುಕುಗಳ ಒಡಲಲ್ಲಿ ತುಂಬಿಕೊಂಡು ದೂರ ತೀರ ಯಾನ ಹೊರಟ ಲೋಹದ ಹಕ್ಕಿ ಬೆರಗು ಮೂಡಿಸ್ತಿತ್ತು...
ನಿದ್ದೆ ಬರಿಸುವ ಕತ್ತಲಿಗೂ ಯಾವುದೋ ಅಪರಿಚಿತತೆಯ ಸೊಗಡಿನ ಸೊಬಗಿತ್ತು...


ಕಾರಣ -
ಅಂದು ಮೊದಲಾಗಿ ನಕ್ಕಿದ್ದಳು
ನೋಡಿ ನನ್ನೆಡೆಗೆ...
ಎನ್ನ ಮನದಿ ಒಲವ ನವಿಲು ಗರಿಬಿಚ್ಚಿತ್ತು...
ಆ ನಗೆ ಬೆಳದಿಂಗಳಲಿ ನನ್ನ ಬದುಕ ಕತ್ತಲೆಲ್ಲ ಕರಗಿ ಹೋದೀತು,
ಆ ಕಣ್ಣ ನಗೆಯ ಪನ್ನೀರಲಿ ಬರಡಾದ ಎನ್ನ ಎದೆಯ ನೆಲ ತುಸು ನೆಂದು ಮಿದುವಾದೀತು,
ಮಿದುವಾದ ಎದೆ ನೆಲದಿಂದ ಹೊಸ ಜೀವೋನ್ಮಾದದ ಸ್ಫೂರ್ತಿ ಗಂಧ ಹೊಮ್ಮೀತು,
ಬದುಕ ಬಳ್ಳಿಯಲಿ ಹೊಸ ಮೊಗ್ಗು ಅರಳೀತು...
ಹೀಗೇ ಎಷ್ಟೆಷ್ಟೋ, ಇನ್ನೂ ಏನೇನೋ ಆಸೆ ತುಂಬಿದ ಭಾವೋನ್ಮಾದ...
ಏಕಾಂತ ಸೀಮೆಯನೇರಿ ಮೌನ ಗಾನ...
ಹಾರು ಹಕ್ಕಿಯ ರೆಕ್ಕೆಯಲಿ, 
ಜೀವ ಸೆಲೆ ಬತ್ತಿದ ಮೇಲೂ ಹಕ್ಕಿಗೆ ತಾವು ಕೊಡುವ ಬೋಳು ಮರದ ಪ್ರೀತಿಯಲಿ, 
ಹಸಿರ ಸಿರಿಯಲಿ, 
ಖಾಲಿ ಬಾನ ಬಯಲಲ್ಲಿ,  
ಕೊನೆಗೆ ನಿರ್ಜೀವ ಕಟ್ಟಡದಲಿ ಕೂಡ,  
ಒಟ್ಟಿನಲ್ಲಿ ನೋಟ ಹರಿದಲ್ಲೆಲ್ಲ ಖುಷಿಯ ಒಲವಿನ ಬಣ್ಣ...


           ~ * ~ & ~ * ~

ಇಂದೂ -
ಅದೇ ಮನೆಯ ಅದೇ ತಾರಸಿಯ ಮೇಲೆ ಅಂದಿನಂತೆಯೇ ಅಲೆಯುತ್ತಿದ್ದೇನೆ...
ಎದುರಿನ ಇಪ್ಪತ್ತಂತಸ್ತಿನ ಕಟ್ಟಡದಾಚೆ ಸೂರ್ಯ ಮೆಲ್ಲಗೆ ತಲೆ ಮರೆಸಿಕೊಳ್ಳುತ್ತಿದ್ದಾನೆ...
ಸುತ್ತಲೂ ನಿಧಾನವಾಗಿ ಜೀವ ತಳೆಯುತಿರುವ ಕತ್ತಲು..
ಇಷ್ಟಿಷ್ಟಾಗಿ ಸಂಜೆಯೊಂದು ಸಾಯುತ್ತಿದೆ...
ನನ್ನೊಳಗೆ ಸಾವಿನಂಥ ಮೌನ...
ಹಾಡುವ ಕೋಗಿಲೆ ದನಿಯೂ ಕರ್ಕಶ...
ಸುಡುವ ಬೆಳದಿಂಗಳು...

ಕಾರಣ -
ನನ್ನ ನಾಳೆಗಳಿಗಾಗಿ ಕಾಯದೇ ಕಳೆದು ಹೋದ ಅವಳು
ಮತ್ತು
ಕಳೆದು ಹೋಗದೇ ಕಾಡುವ ಅವಳ ನೆನಪುಗಳು...


 ~ * ~ & ~ * ~


ಮೊನ್ನೆ ಅಲ್ಲೆಲ್ಲೋ ಮತ್ತೆ ಸಿಕ್ಕಳು...
ಕಣ್ಣಲ್ಲಿ ಸಣ್ಣ ನೀರ ಅಲೆ...
ಕಾರಣ ಗೊತ್ತಾಗಿಲ್ಲ...
ಮತ್ತೆ ನೋಡಿದ ಖುಷಿಗಾ..?
ತನ್ನ ಕಳಕೊಂಡ ಮೇಲೂ ಬದುಕಿರುವನಲ್ಲಾ ಎಂಬ ನೋವಿಗಾ..??

ಹಾಂ -

ಅವಳೆಂದರೆ - 
"ನಿನ್ನೆ ನಾನು ಕಂಡಿದ್ದ ನಾಳೆಗಳೆಡೆಗಿನ ಕನಸುಗಳು....."

^### %%% ###^

'ಗಲ್ಫ ಕನ್ನಡಿಗ' ಈ - ಪತ್ರಿಕೆಯಲ್ಲಿ 08-06-2012 ರಂದು ಪ್ರಕಟಿತ