Friday, February 27, 2015

ಗೊಂಚಲು - ನೂರೈವತ್ತಕ್ಕೆ ಒಂದು ಕಮ್ಮಿ.....

ಮಾತು ಮೌನಗಳಲಿ ನಾನು ನೀನು.....
(ಅಂತಿಮ ಮೌನಕು ಮುಂಚೆ...)

ಸ್ನೇಹವೇ –
ಮೌನ ನನ್ನೊಳಗನ್ನು ನಂಗೆ ತೋರುವುದು – ಅದು ಎದೆಯಾಳದ ನಿಶ್ಚಲ ತಿಳಿನೀರ ಕನ್ನಡಿ...
ಮಾತು ನನ್ನೊಳಗನ್ನು ನಿಂಗೂ ತೋರುವುದು – ಅಂದರೆ ಬಯಲ ಬೆಳಕಲ್ಲಿ ನಗುತ ನಿಲ್ಲುವುದು...
ಏಕಾಂತದಲ್ಲಿ ಮೌನಿಯಾಗುವುದೊಳಿತು – ಸಂಗಾತದಲ್ಲಿ ಮಾತಾಗು ಕಲೆತು...
ಸಂತೆಯ ನಡುವೆಯೂ ಮೌನದ ಕೋಟೆ ಕಟ್ಟಿಕೊಂಡವ ದೇವರಾದಾನು...
ಆದರೆ ಅದೇ ಉರಿ ಬಿಸಿಲ ಸಂತೆಯ ನಡುವೆ ನಗೆಯ ಐಸ್‌ಕ್ಯಾಂಡಿ ಮಾರಬಲ್ಲವ ಅಪ್ಪಟ ‘ಮನುಷ್ಯ...’
ಅಳುವ, ನಲಿವ ಭಾವಗಳೆಲ್ಲವಕ್ಕೂ ಅತೀತನಂತೆ ಬಿಂಬಿಸಿಕೊಳ್ಳೋ ದೇವನಾಗುವುದಕಿಂತ ಅಳುವನ್ನೂ, ನಗುವನ್ನೂ ಅವಿರುವಂತೆಯೇ ಒಂದೇ ತಕ್ಕಡಿಯಲ್ಲಿ ತೂಗಿ ಮಳ್ಳ ನಗೆ ನಗುವ ಮನುಷ್ಯನಾಗುವುದೇ ಹಿತ ನನಗೆ...
ತಲೆ ಬಾಗಿ ವ್ಯಕ್ತವಾಗದೇ ಹೋದ ಪ್ರೀತಿ ಸ್ವಾಭಿಮಾನವೇ ಆದರೂ ಸ್ವಾರ್ಥದಂತೆ ಕಾಣುತ್ತೆ – ಹಸಿವಾದಾಗ ಮಾತ್ರ ಒಡೆಯನಿಗೆ ಮೈಯುಜ್ಜೋ ಬೆಕ್ಕಿನಂತೆ...
ಎಲ್ಲ ವಿರೋಧಗಳಾಚೆಯೂ ವ್ಯಕ್ತವಾದ ಪ್ರೀತಿಯಲಿ ಮುನಿಸೂ ಮಳೆಯ ಮುಂಚಿನ ಗುಡುಗಿನಂತೆ, ಕಾಡಿ ಕಾದಾಡಿ ಕೂಡುವ ಆರಾಧನೆಯಂತೆ ತೋರುತ್ತೆ  - ಸೀಳುವ ಸಾಮರ್ಥ್ಯವಿದ್ದರೂ ಕಾಲು ನೆಕ್ಕುವ ಸಾಕು ನಾಯಿಯಂತೆ...
ನಾನತ್ವ ಕಳೆದು ಹೋಗಿ, ‘ನಾ’ನಿಲ್ಲದ ನಾನು ಮೌನದಲ್ಲಿ ನನ್ನನೂ – ಮಾತಿನಲಿ ನಿನ್ನನೂ ಮುದ್ದಿಸಬೇಕು ಹುಚ್ಚು ಕರಡಿಯಂತೆ...
ಬದುಕ ಪ್ರೀತಿಸುವುದೆಂದರೆ ಅದೇ ಅಂತಂದುಕೊಳ್ಳುತ್ತೇನೆ – ಆತ್ಮದ ಬೆಂಕಿಯಲಿ (ಮೌನ) ನನ್ನ ನಾ ಬೆಳಗಿಸಿಕೊಳ್ಳುತಾ, ಆತ್ಮೀಯತೆಯ ತೋಳಲ್ಲಿ (ಮಾತು) ನಿನ್ನ ತಬ್ಬುವುದು...
ಮಾತು – ಮಾತಿನೊಳಗಣ ಮೌನ – ಮೌನದೊಳಗಣ ಗದ್ದಲ,
ಸಂತೆ – ಸಂತೆಯೊಳಗಿನ ನಗೆಯಂಗಡಿ – ನಗೆಯ ಕೊಂಬವರಿಲ್ಲದ ಬೇಸರ,
ಏಕಾಂತ – ಸಂತೆಯಲಿ ಯಾರೋ ಬೆನ್ನಿಗೆ ಚುಚ್ಚಿದ ನೋವಿಗೆ ಅಳು – ಹೊಸ ಅನುಭವದಿಂದ ನನ್ನೊಳಗು ಬೆಳೆದದ್ದಕ್ಕೆ ಹೆಮ್ಮೆ...
ಸಂತೆಯಲಿ ಹೆಗಲು ತಬ್ಬಿದ್ದ ನೀನು ಏಕಾಂತದಲಿ ದೂರ ನಿಲ್ಲುವುದು, ನಿನ್ನೆದೆಯ ಮೌನವನು ನಿನ್ನದೇ ಕಂಗಳು ಮಾತಾಗಿ ಭಾಷಾಂತರಿಸಿ ಎನ್ನೆದೆಗೆ ರವಾನಿಸಿ ಎನ್ನೊಳಗಿನ ತುಂಟ ಥಟ್ಟನೆ ಕಣ್ಮಿಟುಕಿಸಿ ನಿನ್ನ ಕೆನ್ನೆಯ ರಂಗಾಗುವುದು...
ಅರರೇ ಈ ಬದುಕೆಂಬೋ ಬದುಕನ್ನು ಉನ್ಮಾದಿಯಂತೆ ಪ್ರೀತಿಸಲು ಎಷ್ಟೆಲ್ಲ ಕಾರಣಗಳು ಅಲ್ಲವಾ...

ಹೇಳಲೇ ಬೇಕಾದ ಕೊನೆ ಮಾತು:
ಅನುಭವಗಳ ಕೂಸಾದ ವೈಚಾರಿಕ ಭಿನ್ನತೆಯಲಿ ಮಾತಿಂದ ನಾ ನಿನ್ನ ಖಂಡಿಸಿದ್ದು ನನ್ನ ಅಹಂಕಾರ ಅಥವಾ ಮೇಲರಿಮೆಯಂತೆ ಕಂಡು ನೀ ಸೆಟೆದು ನಿಂತು ಮೌನಿಯಾದರೆ ಸಾಯುವುದು ವಿನಾಕಾರಣ ನಡುವೆ ಹಬ್ಬಿ ನಿಂತಿರುವ “ಸ್ನೇಹ...”
ನಾವೇ ಕೈಯಾರೆ ತೂಗಿದ್ದ ಸ್ನೇಹವೆಂಬ ಶಿಶುವ ನಮ್ಮದೇ ತಪ್ಪು ಗ್ರಹಿಕೆಗಳಿಂದ ನಾವೇ ಕೈಯಾರೆ ಕೊಲ್ಲುವುದು ಯಾವ ನ್ಯಾಯ...
ಮೌನ ಮಾತಿನ ಕೊರಳ ತಬ್ಬಿ – ಮಾತು ಮೌನದ ಹಣೆಯ ಚುಂಬಿಸಿ – ಮಾತು ಮೌನಗಳಾಚೆ ಒಲವು ನಗಲಿ...
ಕರುಳ ಬೆಸೆದ ಒಲವ ನಗೆಯ ಬೆಳಕಲ್ಲಿ ಬದುಕಿನಳುವೆಲ್ಲ ಜೀರ್ಣವಾಗಿ ಹೋಗಲಿ...
ನನ್ನ ಅಂತಿಮ ಮೌನಕು ಮುಂಚೆ ನಿನ್ನ ಸ್ನೇಹದ ಮೌನವೊಮ್ಮೆ ಮಾತಾಗಿ ನಗಲಿ...

6 comments:

  1. 'ನಾವೇ ಕೈಯಾರೆ ತೂಗಿದ್ದ ಸ್ನೇಹವೆಂಬ ಶಿಶುವ ನಮ್ಮದೇ ತಪ್ಪು ಗ್ರಹಿಕೆಗಳಿಂದ ನಾವೇ ಕೈಯಾರೆ ಕೊಲ್ಲುವುದು ಯಾವ ನ್ಯಾಯ' ಸರಿಯಾಗಿ ಹೇಳಿದಿರಿ.

    ReplyDelete
  2. ತುಂಬಾ ಆಪ್ತ ಭಾವ ಝರಿ
    ಮೌನದ ಕವಲೊಡೆದು ಮಾತು ಸರಾಗವಾಗವಾಗಲಿ ಎನ್ನುವ ಹಾರೈಕೆಯೊಂದೇ...

    ReplyDelete
  3. ಸ್ನೇಹ ಚಿರಾಯುವಾಗಿರಲಿ :)

    ಕಿವಿಮಾತಿನಂತಹ ರೀತಿ ಇಷ್ಟವಾಯಿತು :)

    ReplyDelete
  4. ahhh... awesome .... bekkinashte muddaagi... naayiyashte aaptavaagi.... karadi preetiyanthaha preeti huttutte ninna mele... ninna barahada mele ...

    ReplyDelete
  5. ಅಣ್ಣಾ......
    ನೀ ಸಹಜ ಆದರೂ.......

    ಬಲು ಸುಂದರ ಮಾತು ಮೌನದ ರಾಗ.....

    ReplyDelete