Monday, February 2, 2015

ಗೊಂಚಲು - ನೂರು + ನಲವತ್ತು + ಒಂದು.....

ಖಾಲಿ ಖಾಲಿ ಭಾವಗಳು.....

ಅದೇ ಬೀದಿ, ಅದೇ ಹಾದಿ, ಅದದೇ ತಿರುವುಗಳಲಿ ಎಂದಿನಂತೆ ಒಂಟೊಂಟಿ ನಡಿಗೆ...
ನೆರಳು ಕೂಡ ದೂರ ಸರಿಯೋ ಕಾರಿರುಳಲ್ಲೂ ಜೊತೆ ಬಿಡದೆ ನಡೆವ ತುಸು ಜಾಸ್ತಿಯೇ ಉಪ್ಪುಪ್ಪು ನೆನಪುಗಳು...
ಒಪ್ಪವಾಗಿ ತಾವು ನೀಡಿ ಸಲಹುತಿರುವುದೂ - ಹೂಳಬೇಕಿತ್ತು ಈ ಹಾಳು ನೆನಪುಗಳ ಹೊಯ್ದಾಡಿ ಕಾಡದಂತೆ ಎಂದಳುವುದೂ ಎರಡೂ ಎನ್ನೆದೆಯೇ ಆಗಿರುವುದು ಬದುಕಿನ ದುರಂತವಾ...?
ಅಥವಾ ಬದುಕಿರುವುದೇ ಹಾಗಾ...??
ಎರಡು ತಲೆಯ ಹಾವಿನ ಹಾಗೆ... 

!!!

ಸ್ನೇಹವೇ -
ಎಲ್ಲಾ ಶಬ್ದಗಳೂ ಅದಿರುವಂತೆಯೇ ಅರಿವಿಗೆ ಬಾರದೇ ಹೋದರೂ ಭಾವ ಉಕ್ಕಿ ಹರಿವ ಮೌನದೊಳಗಣ ಮಾತು ಬಲು ಚಂದ...
ಎಲ್ಲಾ ಅರ್ಥವಾಗುವ ಭಾವನೆಗಳ ಶವದ ವರ್ಣನೆಯಂಥ ಮಾತಿನೊಳಗಣ ಮೌನ ಮಹಾ ಹಿಂಸೆ...
ಕಿಂಚಿತ್ತಾದರೂ ಒಲುಮೆ ಬಾಕಿ ಇದ್ದುದಾದರೆ ಎದೆಯಲ್ಲಿ, ಮೌನದ ನಡುವೆ ಒಂದು ಜಗಳವಾದರೂ ಹುಟ್ಟಲಿ...
ಒಲುಮೆಯನುಳಿಸುವ, ಉಳಿಸಿ ಬೆಳೆಸುವ ಹಠಕ್ಕೆ ಬಿದ್ದ ಜಗಳವೂ ಚಂದವೇ ಅಲ್ಲವಾ...

!!!

ಒಂದಷ್ಟು  ಬಣ್ಣ  ಬಣ್ಣದ ಖುಷಿಯ ನೆನಪುಗಳ ಬುಗ್ಗೆಗಳ ಹೆಗಲಿಗೇರಿಸಿಕೊಂಡು, ಇನ್ನಷ್ಟು ಸುಖದ ಕನಸುಗಳ ಅಂತರಂಗದ ಪೆಟ್ಟಿಗೆಯಲಿ ಬಚ್ಚಿಟ್ಟುಕೊಂಡು, ಬೆಳಕಿನುತ್ಸವದ ಕಡೆಗೆ ಒಂಟಿ ಹೆಜ್ಜೆಗಳನಿಡುತಿರುವ ಹುಚ್ಚು ಫಕೀರ ನಾನು...
ಈ ಘಳಿಗೆ ನನ್ನದೇ ಹೆಜ್ಜೆಯಡಿಯ ಧೂಳ ಹುಡಿಯನೂ ಕಣ್ಣಿಗೊಂತ್ತಿಕೊಂಬ, ಮರುಘಳಿಗೆ ದೇವಮುಡಿಯ ಪ್ರಸಾದವನೂ ತುಳಿದು ಗಹಗಹಿಸುವ ವಿಕ್ಷಿಪ್ತ ಮನದೊಡೆಯ...
ಈ ಘಳಿಗೆಯ ಖುಷಿಯೊಂದೇ ನನ್ನ ನೆಚ್ಚಿಗೆ...
ಕ್ಷಣ ಕ್ಷಣಗಳ ಖುಷಿಗಳಿಗಾಗಿ ಎಂಥ ಬೇಲಿಗಳನೂ ಮುರಿದು ಮುನ್ನುಗ್ಗುವ ಹರ ಹುಂಬ ದಾರಿ ನನ್ನದು...
ಸುಖದ ಸುಸ್ತಿನಮಲಿಗೆ ಒಗ್ಗಿಹೋದ ಈ ಮರುಳನ ಹಿಂದೆ ಬಿದ್ದವರೆಲ್ಲ ತಮ್ಮ ಸುಖಗಳ ಕಳೆದುಕೊಂಡು ಹಿಂದೆಯೇ ಉಳಿದು ಹೋದದ್ದು ನಂಬಲೇಬೇಕಾದ ಸತ್ಯ...

!!!

ಗುಲಾಬಿ ಗಿಡದಲ್ಲಿ ಮುಳ್ಳಿರುತ್ತೆ, ಮತ್ತಾಮುಳ್ಳು ನನ್ನ ಚುಚ್ಚುತ್ತೆ, ಅದಕೇ ನಾನೆಂದೂ ಗುಲಾಬಿ ಗಿಡವ ನೆಡಲಾರೆ - ನೆಟ್ಟು ನೀರು ಗೊಬ್ಬರ ಉಣಿಸಲಾರೆ ಎಂಬುವವನಿಗೆ ಗುಲಾಬಿ ಹೂವಿನ ಅಂದ ಗಂಧಗಳ ಸವಿಯುವ ಹಿತಾನುಭೂತಿಯೂ ದಕ್ಕದಲ್ಲವಾ...
ಅಂತೆಯೇ ಭಾವ ಬಂಧಗಳು ಕೂಡಾ - ನೋವ ನೀಡುತ್ತವೆಂದು ಬೆಸೆದುಕೊಳ್ಳದೇ ದೂರ ನಿಂತರೆ ಹತ್ತಿರ ಇರಬಹುದಾಗಿದ್ದಷ್ಟು ಕಾಲದ ಖುಷಿಗಳಿಂದಲೂ ವಂಚಿತರಾಗುತ್ತೇವೆ...
ಇಷ್ಟಕ್ಕೂ ಹೂವು ಬಾಡಿ ಹೋದರೂ, ಬಂಧ ಒಡನಾಟದಿಂದಾಚೆ ನಿಂತರೂ ಅವು ಅರಳಿಕೊಂಡಿರುವಾಗ ಇತ್ತ ಖುಷಿಗಿಂತ ಹೆಚ್ಚೇನಲ್ಲ ಅನ್ನಿಸುತ್ತೆ ಆ ಮೇಲಿನ ನೋವು...
ಬದುಕೆಂದರೆ ಕ್ಷಣ ಕ್ಷಣಗಳ ಖುಷಿ...
ಎಷ್ಟು ಹೆಚ್ಚು ಕ್ಷಣಗಳ ಖುಷಿಯಿಂದ ಕಳೆದೆವು ಎಂಬುದರ ಮೇಲೆ ಬದುಕಿನ ಶ್ರೀಮಂತಿಕೆಯ ಅಳೆಯೋಣ ಅಲ್ಲವಾ...
ಬೆಸೆದುಕೊಳ್ಳೋಣ ಇನ್ನಷ್ಟು ಮತ್ತಷ್ಟು ಪ್ರೀತಿಯ...
ಪ್ರೀತಿಯೆಂದರೆ ಮುಳ್ಳಿನ ನಡುವೆಯೂ ಅರಳುವ ನಗೆಗುಲಾಬಿ...

!!!

ಪಾರಿಜಾತ -
ಎಂಥ ಮೃದುವಾದ ಪಕಳೆಗಳು...
ಗಾಳಿಗೂ ಸಂಭ್ರಮವನೀವಂಥ ನವಿರು ಗಂಧ...
ಸಂಜೆ ಸಾಯುವ ಹೊತ್ತಲ್ಲಿ ಅಂಗಳದ ಏರಿಯಲಿ ಅರಳಿ ಒಂದಿಡೀ ಇರುಳನು ಉಲ್ಲಾಸದ ವಿಲಾಸದಲಿ ಲಾಲೈಸುವ ಉನ್ಮತ್ತ ಜವನಿಕೆ...
ನನ್ನ ಕನಸುಗಳೆಂದರೆ ಪಾರಿಜಾತ -
ಇರುಳ ತುಂಬ ಕನಸ ಕಾವ್ಯದ್ದೇ ಆಲಾಪ ಕಲಾಪ...
ಎದೆಯಿಂದ ಕಣ್ಣಿಗೇರಿದವೋ ಕಣ್ಣಿಂದ ಎದೆಗಿಳಿದವೋ ಒಟ್ನಲ್ಲಿ ಮೈಮನದ ಮೈದಾನವೆಲ್ಲ ಖುಷಿಯ ಕನಸುಗಳದೇ ಚಕ್ರಾಧಿಪತ್ಯ...
ಕತ್ತಲ ಕಾವಳದಲ್ಲಿ ವೈಭವದ ಒಡ್ಡೋಲಗ ನಡೆಸಿ ಬೆಳಗ ಮೊದಲ ಕಿರಣ ನೆಲ ಸೋಕುವ ಹೊತ್ತಿಗಾಗಲೇ ಅಂಗಳದಲ್ಲಿ ಪಾರಿಜಾತದ ಶವಯಾತ್ರೆ...
ನನ್ನ ಕನಸುಗಳೆಂದರೆ ಪಾರಿಜಾತ...

!!!

ಮುಖವಾಡ ತೊಡುವುದೆಂದರೆ ಆತ್ಮದ ಸಾವು ಎಂಬ ಭಾವ...
ತೊಡಲಾರೆನೆಂದರೆ ಯಾರೂ ಸುಳಿಯದ ದ್ವೀಪವಾಗುವ ಭಯ...
ಪ್ರೀತಿ ಕೊಡುವುದೆಂದರೇನೆಂಬ ಅರಿವಿನ ಗಂಧ ಗಾಳಿಯಿಲ್ಲ...
ಪ್ರೀತಿಯುಂಬುವುದರಲ್ಲಿ ಬಕಾಸುರನ ಹಸಿವು...
ಬಡಿಸುವವರಾದರೂ ಎಷ್ಟು ಕಾಲ ಬಡಿಸಿಯಾರು ಲಜ್ಜೆ ಇಲ್ಲದ ಲಂಪಟ ಮನಸಿಗೆ...
ಎತ್ತಿಡುವ ಪ್ರತೀ ಹೆಜ್ಜೆಯಡಿಯಲೂ ಬೊಗಸೆ ಒಡ್ಡುವುದೊಂದೇ ಬದುಕಾಗಿ ಹೋದಂತ ಪಾಪ ಪ್ರಜ್ಞೆಯ ಕಲೆ ಉಳಿದು ಕಾಡುತಿದೆ ಈಗೀಗ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

3 comments:

 1. 'ಮುಖವಾಡ ತೊಡುವುದೆಂದರೆ ಆತ್ಮದ ಸಾವು ಎಂಬ ಭಾವ...
  ತೊಡಲಾರೆನೆಂದರೆ ಯಾರೂ ಸುಳಿಯದ ದ್ವೀಪವಾಗುವ ಭಯ...' ಕ್ಯಾಬಾತ್ ಹೈ...

  ReplyDelete
 2. This comment has been removed by the author.

  ReplyDelete
  Replies
  1. "ಕಿಂಚಿತ್ತಾದರೂ ಒಲುಮೆ ಬಾಕಿ ಇದ್ದುದಾದರೆ ಎದೆಯಲ್ಲಿ, ಮೌನದ ನಡುವೆ ಒಂದು ಜಗಳವಾದರೂ ಹುಟ್ಟಲಿ... “ ಹೆಕ್ಕಿ ಬರೆದರೆ ಇಂತದ್ದೇ ಅದೆಷ್ಟೋ ಸಾಲುಗಳು ಸಿಕ್ಕೀತು ಮನದೊಳಗೆ ಇಳಿವಂತದ್ದು...ಇಳಿದಂತದ್ದು..

   ನಿನ್ನ ಭಾವನೆಗಳೆಡೆ, ವಾಸ್ತಗಳೆಡೆ ನನ್ನದು ಸದಾ ಬೆರಗು ನೋಟವಷ್ಟೇ..
   <3

   Delete