Tuesday, November 20, 2018

ಗೊಂಚಲು - ಎರಡ್ನೂರೆಂಬತ್ತರಮೇಲೆರಡು.....

ಮಾಗಿಯ ಬಾಗಿಲು.....

ಭಾಮೆ, ರುಕ್ಮಿಣಿಯರಲೂ ಕೃಷ್ಣನಿಗೆ ರಾಧೆಯ ನೆರಳೇ ಕಂಡಿರಬಹುದು...
ಬೃಂದಾವನದ ಬಿದಿರ ಮೆಳೆಯ ಹೊಕ್ಕ ತಿಳಿಗಾಳಿ ಸುಯ್ದಾಟವೂ ರಾಧೆಯೆದೆಗೆ ಕೊಳಲ ದನಿಯನೇ ಸುರಿದಿರಬಹುದು...
ಗೋಕುಲದ ಯಮುನೆಯ ಹರಿವಿನಲಿ ಮಥುರೆಯ ಕಡಲ ಕನಸು - ಮಥುರೆಯ ಶರಧಿಯ ಹೊಯ್ದಾಟದಲಿ ಯಮುನೆಯ ಹಾದಿಯ ಬೆಳಕು...
ಪ್ರೇಮವೆಂದರೆ ಅದೇ ತಾನೇ - ಎದೆಯ ಧ್ಯಾನವೇ ಕಣ್ಣ ತುಂಬುವುದು...
ಪ್ರೇಮದ ಭಾಷೆ ಪ್ರೇಮವೇ - ಭಾಷ್ಯ ಅವರವರು ಬರಕೊಂಡಂತೆ...
#ಕಾರ್ತೀಕ_ಹುಣ್ಣಿಮೆ...
⇚⇖⇗⇘⇙⇛

ಕಪ್ಪು ಹುಡುಗೀ -
ಮುಂದಿನೆಲ್ಲ ಮಿಡಿತಕೂ ನಿನ್ನ ಹಸಿ ಮೈಯ ಪ್ರತಿ ಹಿರಿಕಿರಿ ಬಾಗು ಬಳುಕಿನಲೂ ನನ್ನುಸಿರ ಬಿಸಿ ಬಿಸಿ ರೋಮಾಂಚದ ನವಿರು ನೆನಪುಳಿಯಬೇಕು...
ಬಿಸಿಲು ಮಚ್ಚಿನ ನಟ್ಟ ನಡುವೆಯ ಸ್ವಂತ ಸ್ವಂತ ಏಕಾಂತ, ಹೊದ್ದ ಬಾನ್ಬೆಳಕ ಕೌದಿಯೊಳಗೆ ಹುಟ್ಟುಡುಗೆಯ ಹದುಳದಲ್ಲಿ ನೆಣೆಬಿದ್ದ ನಮ್ಮೀರ್ವರ ಬಿಗಿದ ಮೈಯ ಬೆಂಕಿಯಿಡೋ ಉರುಳುರುಳು ಕಚಗುಳಿಗೆ ಹಾಸಿಗೆ ನಾಚುವಾಗ ಮಂಚ ಕಿರು ದನಿಯಲಿ ಭಣಿತ ಸುಸ್ತಿನ ಮಾತಾಡಬೇಕು...
ಜೀವಭಾವದೆಲ್ಲ ಬಿಳಲುಗಳ ನುರಿನುರಿದು, ನೆತ್ತಿ ಸಿಡಿದು, ನಡು ಸುರಿದ ಆತ್ಯಂತಿಕ ರಮಣೀಯತೆಯಲಿ ಇಡಿ ಇಡಿಯಾಗಿ ಸಡಿಲವಾದ ನರಮಂಡಲದ ಉದ್ದಕೂ ಬಸಿದ ಬೆವರ ಹನಿ ಹನಿಯೂ ಬಯಸಿ ಉಂಡ ಸುಖದ ವೈಭೋಗದ ಕಥೆ ಹೇಳಬೇಕು...
ನನ್ನ ತುಂಬಿಕೊಂಡ ನಿನ್ನ ತೃಪ್ತ ಗೆಲುವಿನ ನಗೆಗೆ ಇರುಳ ಕಾವಳದ ಕಣ್ಣಲಿಷ್ಟು ಅಸೂಯೆ ಮೂಡಬೇಕು - ಗಾಳಿಗೂ ಉಸಿರುಗಟ್ಟಬೇಕು...
ಬೆನ್ನಿಗಂಟಿದ ಸಾವೂ, ಕಣ್ಣಿಗೊತ್ತಿಕೊಂಡ ಬದುಕೂ ಒಟ್ಟೊಟ್ಟಿಗೆ ನಿನ್ನ ಎದೆ ಗಿರಿಯ ತಪ್ಪಲಲ್ಲಿ ತಲೆಯಿಟ್ಟು ಆಪ್ಯಾಯನ ಸಂಭ್ರಾಂತ ನಶೆಯಲಿ ನಿದ್ದೆಹೋಗಬೇಕು...
ಬಾ ಇಲ್ಲಿ ಸಂಭವಿಸಲಿ ಸುರತ ಸಂಲಗ್ನ - ಮತ್ತೆ ಮತ್ತೆ...

ಹೇ ಇವಳೇ -
ನಿನ್ನ ಮೋಹದಲೆಯ ತೆಕ್ಕೆಯಲ್ಲಿ ಮನ್ಮಥನ ಹೂ ಬಿಲ್ಲಿಗೆ ಅನುಕ್ಷಣವೂ ಹೊಸ ಯೌವನ - ಈ ಪುಂಡ ಹೈದನ ಮೈಮನದ ನಿತ್ಯ ಸಂತುಷ್ಟ ನಿದ್ದೆಗೂ ನಿನ್ನದೇ ತೋಳು ಹೆಣೆದ ಅನುಭೋಗದ ನೆರಳಿನಾಲಿಂಗನ...
#ಪ್ರಣಯ_ರಸಗವಳ_ಕಿರುಪಯಣ...
⇚⇖⇗⇘⇙⇛

ಮೈಯ್ಯಾರೆ ಹೊದ್ದು ಮಲಗೋ ರತಿ ರಂಗಿನ ಪುಂಡು ಕನಸಿಗೂ ಒಂದು ಹೆಣ್ಣಾಸರೆ ಇರದ ಮುರುಟು ಮುರುಕು ಛಳಿಯ ರಾತ್ರಿಗಳು - ಪೋಲಿ ಹುಡುಗನ ದುರ್ಭಿಕ್ಷ ಕಾಲ...🤐
#ಮಾಗಿಯ_ಬಾಗಿಲು...
⇚⇖⇗⇘⇙⇛

ಮಳೆಬಿಲ್ಲ ಮುಖಕಂಟಿದ ಒದ್ದೆ ಬೆಳಕು...
ಸೂಜಿ ಮಲ್ಲಿಗೆ ಘಮಕೆ ಮೂಗರಳಿಸೋ ಸಂಜೆ ಗಾಳಿ...
ಅವಳ ಕಿವಿ ತಿರುವಿನಿಂದಿಳಿದು ಕೊರಳ ಶಂಖವ ಹಾಯ್ವ ಸ್ವೇದಬಿಂದು...
ಮೊದಲ ಮೋಡಕೂ ಮುನ್ನ ಹುತ್ತದೊಳಗಣ ಶಾಖಕೆ ಗೆದ್ದಲು ರೆಕ್ಕೆ ಕಟ್ಟಿಕೊಂಡು ಹಾತೆಯಾಗುವ ಪರಿ...
ನಾನಿರುವ ಕೊನೆಯ ಬೆಂಚಿನ ಕಡೆಗೆ ತಿರುಗಿ ನೋಡಿದವಳೇ ಜಗದೇಕ ಚೆಲುವೆ - ಮುಗ್ಧತೆಯ ಬೇರಿನ ಬೆವರಿಳಿಸಿದ ಮೊದಮೊದಲ ಸ್ವಪ್ನಸ್ಖಲನ, ಎಲ್ಲೆಂದರಲ್ಲಿಯ ಯಾವಾಗಂದರಾವಾಗಿನ ಅನಪೇಕ್ಷಿತ ನಿಮಿರು...
ಆಲೆಮನೆಯ ದಿನದ ಮೊದಲ ಹಾಲು ಬೆಲ್ಲ ಹೀರುವ ಒಳ್ತೋಡಿನ ಮುಖದ ಕರಿವದನ ರಣ ಬೆಂಕಿ ಶಾಖಕ್ಕೆ ಸುಟ್ಟು ಕಂದುಗಪ್ಪು ಮೋರೆಯಾಗುವ ಚಂದ...
ಬೆಳದಿಂಗಳ ಬೆನ್ನಿಗಂಟಿಕೊಂಡು ನಡು ಬಳಸಿ ನಡೆವ ಜೋಡಿ ಕನಸುಗಳು...
ಹಗಲ ಬಾಗಿಲಿಗೆ ಅಮ್ಮನಿಡೋ ಭರವಸೆಯ ಚುಕ್ಕಿ ರಂಗೋಲಿ - ಮುಂಗಾರಿಗೂ ಮುಂಚೆಯೇ ನೆಲವ ಬಗೆದು ಬೀಜವ ಉಪಚರಿಸಿಟ್ಟು ಬದುಕಿಂಗೆ ಅಪ್ಪ ಕೊಡೋ ರಟ್ಟೆ ಬೆವರ ಬಾಗಿನ...
ಜೇನ್ಗೂಡ ಮರಿ ರಟ್ಟಿನ ಹಾಲಿನ ರುಚಿ - ಗಾಣಮನೆ ಛಳಿ ಇರುಳು, ಹಾಲೆಬೆಲ್ಲ, ಇಸ್ಪೀಟು ಪಾರಾಯಣ ಮತ್ತು ಊರ ಪೋಲಿ ಕಥೆಗಳು...
ಮೊದಲಿರುಳ ಮಂಚದ ಗಿಜಿಗುಡುವ ಮೌನ - ಉಸಿರುಸಿರ ಉಗ್ಗಿನ ಮಾತು...
ವರ್ಷೊಪ್ಪತ್ತಿನ ಹೊತ್ತಿಗೆ ಭುಜದ ಒರಟಿಗೆ ಮೂಗುತಿಯ ಗೀರು, ಬೆನ್ನ ಬಯಲ ತುಂಬಾ ಪ್ರೇಮದೊಡೆತನದ ಹೆಸರು - ಹೆಗಲೇರಿದ ಮಗಳ ಕಾಲಂದುಗೆಯ ಘಲಿರು...
ಎಲ್ಲಿಂದೆಲ್ಲಿಗೋ ಬೆಸೆವ ಇಂದು ನಾಳೆಗಳ ನಗೆಯ ಬಿಳಲಿನ ನಂಟು - ಎದೆ ಗೂಡಿನ ಉಡಿ ತುಂಬಿದ ಖುಷಿ ಖುಷಿಯ ಬೇರಿನ ಗಂಟು...
#ಬಿದಿರು...
⇚⇖⇗⇘⇙⇛

ಕರಡಿ ಪ್ರೇಮವೇ -
ಕೂಡು ಹಾದಿಯ ನೆನಪ ಹಾಸಿ ಹೊದ್ದು ಬೆಚ್ಚಗಾದ ಮಾಗಿ ಮುಖಕೆ ವಿರಹದುರಿಯ ಪರಿಮಳ...
ತುಟಿಯು ತುಟಿಯ ತೀಡುವಾಗಿನ ನಿನ್ನ ಉಸಿರಿನ ಹಸಿ ಪರಿಮಳ....
ಹೆಗಲ ಮೇಲೆ ಹಚ್ಚೆಯಾದ ಮಡಿ ಮಿಂದ ಒದ್ದೆ ಹೆರಳ ಪರಿಮಳ...
ಕದ್ದು ಕೊಂಡ ಏಕಾಂತದ ಅಮಾಯಕ ಘಳಿಗೆಯಲಿ ನಾಕು ಕಾಲು ಬಳ್ಳಿ ಬೆಸೆದು ಒಡಲು ತುಂಬಿದ ಪರಿಮಳ...
ಹೊತ್ತು ಮೀರಿ ಅಲೆದಲೆದು ನಡು ಬಳಸಿದ ಸುಸ್ತಿನ ನಿದಿರೆಗೆ ನಾಭಿ ಪಾರಿಜಾತದ ಲಾಲಿಯ ಪರಿಮಳ...
ಮೊನ್ನೆ ನೀ ಬಂದಾಗ ಬಳಸಿದ ನನ್ನಂಗಿಯ ತೊಳೆಯದೇ ಹಾಗೇ ಮಡಚಿಟ್ಟಿದ್ದೇನೆ - ಈಗ ಬೆಳದಿಂಗಳ ಮುಂಗೈಗೆ ನಿನ್ನದೇ ಪರಿಮಳ...
ಕಾರ್ತೀಕ ಹುಣ್ಣಿಮೆಯ ಮಗ್ಗಲು - ಊರ ತೋಟದ ಮಲ್ಲಿಗೆಗೂ ಹರೆಯದ ಬೆನ್ನಿನ ಬೆವರ ಅಂಟಿನ ಪರಿಮಳ...
ಮುಂಬೆಳಗಿನ ಕನಸಿಗೆ ಅಂಗಳಕಿಟ್ಟ ಅಮ್ಮನ ರಂಗೋಲಿಯ ತುಳಿಯುವ ತೆಂಗಿನ ಹೂವಿನ ಪರಿಮಳ...
ಕೇಳಿಲ್ಲಿ - ಕಣ್ಣ ದೀಪದಲಿ ಕಾರ್ತೀಕದ ಬೆಳಕು; ಈ ಬದುಕಿಗೆ ನೀನೆಂದರೆ ಹೊಸ ಹುಟ್ಟಿನ ಗಾಢ ಪರಿಮಳ...
#ಮಾಗಿ_ಬಾಗಿಲು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Wednesday, November 14, 2018

ಗೊಂಚಲು - ಎರಡ್ನೂರೆಂಬತ್ತು ಮೇಲೊಂದು.....

ಬಾಲಂಗೋಚಿ ಬೆಳಕು ಹಾಗೂ ಬಿಟ್ಟಿ ಉಪದೇಶಗಳು.....  

ತಮ್ಮ ಹೀಚು ಬೆರಳಿಗಂಟಿರೋ ಖುಷಿ ಖುಷಿಯ ನಗೆ ಬೆಲ್ಲದಂಟನು ನನ್ನೆದೆಯ ಗೋಡೆಗೆ ಮೆತ್ತಿ ಇಲ್ಲಿಷ್ಟು ಮೃದು ಚಿತ್ತಾರ ಕೆತ್ತಿ ಚಪ್ಪಾಳೆ ತಟ್ಟಿ ಕಿಲಕಿಲ ಕಿರುಚಿ ಕೇಕೆ ಹಾಕೋ ಕೂಸು ಕಂದಮ್ಮಗಳ ಕರುಳ ಪ್ರೀತಿ ಅದು ಯಾವ ಪದಕೂ ನಿಲುಕದ ಶುದ್ಧ ದೈವತ್ವ...
"ಪ್ರೀತಿ ಹಂಚುವ ಕಲೆಯ ನಿರ್ವ್ಯಾಜ್ಯ ಪ್ರೀತಿಯಿಂದಲೇ ಕಲಿಯಬೇಕು - ಮತ್ತದಕ್ಕೆ ಮತ್ತೆ ಮತ್ತೆ ಮಗುವೇ ಆಗಬೇಕು..."
ಕೊರಳನಾತುಕೊಳ್ಳುವಲ್ಲಿ ಕರುಳ ಗೀತಿಕೆ; ಅದ್ಯಾವ ಹೋಲಿಕೆ ಆ ಮುದ್ದಿನ ಸೌಗಂಧಕೆ...
ಈ ಎದೆಯ ಗೂಡಿನಲಿ ಅನುಕ್ಷಣವೂ ಮುಗ್ಧ, ತುಂಟ ಮಗುವೊಂದು ಆಡುತಿರಲಿ...
#ಬಾಲಂಗೋಚಿ_ಬೆಳಕು...
⇛↺⇜⇝↻⇚

ಮನೋವಿಕಾಸ ಅಂದ್ರೆ ಮಗು ಮುಗ್ಧತೆಯ ಬೆರಗನ್ನು ಕಳಕೊಳ್ಳೋದಾಗ್ಲೀ, ಘನ ಗಾಂಭೀರ್ಯದ ಕಿರೀಟ ತೊಡಿಸಿ ಮುಗುಳ್ನಗುವ ಸೊಗವ ಕೊಂದುಕೊಳ್ಳೋದಾಗ್ಲೀ ಖಂಡಿತಾ ಅಲ್ಲ...
ಬದಲಿಗೆ,
ಮುಗ್ಧತೆಗೂ ಮೂರ್ಖತೆಗೂ, ಭಾವೋದ್ವೇಗಗಳಿಗೂ ಭಾವುಕತೆಗೂ ಇರುವ ಸೂಕ್ಷ್ಮ ವ್ಯತ್ಯಾಸವ ಅರಿಯಬಲ್ಲವರಾಗುವುದು...
ಆಕರ್ಷಣೆಯ ಹಿಗ್ಗನ್ನು ಆಕರ್ಷಣೆಯಾಗಿಯೇ ಗುರುತಿಸಿ ಒಪ್ಪಿಕೊಂಡು, ಭಾವವನ್ನು ಜೀವಿಯಿಂದ ಆಚೆ ನಿಂತೂ ಜೀವಿಸಲು ಕಲಿಯುವುದು...
ಮಳೆಬಿಲ್ಲ ಸೊಬಗಿಗೆ ಬೆರಗುಗಣ್ಣಾಗುತ್ತಲೇ ಕೈಯ ಕುಂಚದ ಅಗಾಧ ಸಾಧ್ಯತೆಗಳಿಗೆ ಬಿಳಿ ಹಾಳೆಯ ಅವಕಾಶದ ಬಯಲಾಗುವುದು...
ಒಪ್ಪವಾದ ಕಲ್ಪನಾ ಲೋಕವ ಸಾಕಿಕೊಂಡೇ ಕಲ್ಪನೆಗಳಿಂದ ಕನಸನ್ನು ಬೇರ್ಪಡಿಸಿಕೊಳ್ಳಬಲ್ಲವರಾಗುವುದು ಅಥವಾ ಹುಚ್ಚೆದ್ದ ಕಲ್ಪನೆಗಳಿಂದಲೇ ಕನಸೊಂದ ಹೆಕ್ಕಿ ಕಾವುಕೊಡಬಲ್ಲವರಾಗುವುದು...
ಯುದ್ಧದ ಹೊತ್ತಲ್ಲಿ ಹಿತವಾದ ಸುಖವೀವ ಭ್ರಮೆಗಳ ಹೆಡೆ ಮೆಟ್ಟಿ ಕಟು ವಾಸ್ತವವ ತುಂಟ ನಗುವಿನೊಡಗೂಡಿ ಎದುರ್ಗೊಳ್ಳುಲು ಮನವ ಅಣಿಗೊಳಿಸುವುದು...
ಕೋಟಿ ತಾರೆ, ಮಿಂಚು ಹುಳ, ಕರಿಕಾನ ಕತ್ತಲ ಕಾಲ್ದಾರಿಯ ಬೆಡಗು ಬಿನ್ನಾಣಗಳಿಗೆ ಮುಕ್ತವಾಗಿ ಎದೆ ತೆರೆದೇ ಸಾವನ್ನು ಸಾಯಬಡಿಯಲು ಬದುಕಿಂಗೆ ತುಸು ಪ್ರೀತಿಯ ಧೈರ್ಯ ಕಲಿಸುವುದು...
ಮನೋವಿಕಾಸ ಅಂತಂತಂದ್ರೆ ಮತ್ತೇನಲ್ಲ; ಮಗುವ ಮನದ ಬೆಳವಣಿಗೆಯೆಡೆಗಿನ (ದೊಡ್ಡವನಾಗುವ) ತೀವ್ರ ತುಡಿತದ 'ಮುಗ್ಧ ಒಲವ'ನ್ನು ಹಂಗಂಗೇ ನಡೆವ ಹಾದಿಯುದ್ದಕ್ಕೂ ನಗುವಾಗಿ ಸಲಹಿಕೊಂಬುವುದು... ಅಷ್ಟೇ...
#ಬಿಟ್ಟಿ_ಒಣ_ಉಪದೇಶ...
⇛↺⇜⇝↻⇚

ಸಭ್ಯತೆ ಅನ್ನೋದು ಮಾನಸಿಕ ಅನುಸರಣೆಯ ಪರಿಭಾಷೆಯೇ ಹೊರತು ಬರೀ ದೈಹಿಕ ಮಡಿಯ ಸ್ಥಿತಿ ಖಂಡಿತಾ ಅಲ್ಲ...
#ಕಸದ_ಬುಟ್ಟಿ...
⇛↺⇜⇝↻⇚

ಬೆಳಕೇ -
ತನ್ನೊಳಗೆ ತಾನು ನಿನ್ನನ್ನು ತಣ್ಣಗೆ ಪ್ರೀತಿಸಿಕೊಂಡು ಜತನದಿಂದ ಕಾಯ್ದಿಟ್ಟುಕೊಳ್ಳೋ ಹಠಕ್ಕೆ ಬಿದ್ದವನ ಎದೆ ಮಿಡಿತಕ್ಕೆ ನೀ ನೀಡುವ ನೋವಿನ ಎಡೆ ಕೂಡ ಅಪ್ಯಾಯಮಾನವೇ...

ಹಾಗೆಂದೇ, ಗೋರಿಯ ಮೇಲೆ ಹಸಿ ಹುಲ್ಲು ಚಿಗುರಿದಂಗೆ ಇಲ್ಲೊಂದು ಹೊಸ ಕನಸ ಮರಿ ನಗಲಾರದೇ - ನೀ ತುಳಿದ ಎದೆ ಹಾದಿಗೆ ಮತ್ತೊಮ್ಮೆ ಅರೆಘಳಿಗೆ ಜೀವ ಬರಲಾರದೇ...

ಕಾರಣ, ಪ್ರೀತಿ ಕೊಡೋದು ನನ್ನೆದೆಯ ತುಡಿತ ಮಿಡಿತದ ಭಾವತೀವ್ರತೆಯ ಒಸಗೆಯಲ್ಲಿದೆ - ಅದೇ ಪ್ರೀತಿ ಪಡೆಯೋದು ಪಡಿ ಕೊಡುವ ನಿನ್ನ ಮಡಿಲ ನಾಜೂಕು ಚೌಕಾಶಿಯ ಮರ್ಜಿಯಲ್ಲಿದೆ...

ಕೊಟ್ಟಲ್ಲದೆ ಪಡೆಯಲು ಪ್ರೀತಿ ಭಿಕ್ಷೆಯೇ...?
ಕೊಡದೇ ಪಡೆವ ಹುಕಿಯಲ್ಲಿ ಪ್ರೀತಿ ಭಿಕ್ಷೆಯೇ...

ನಾನಿಲ್ಲಿ ಬೆಳಕಿನ ಮನೆ ಬಾಗಿಲಲ್ಲಿ ನಿತ್ಯ ಭಿಕ್ಷುಕ...
ಬದುಕಿಲ್ಲಿ ಕನಸು - ಸಾವೀಗ ಬೆಳಕು...
#ವಿಕ್ಷಿಪ್ತ...#ಜಡ್ಡು...#ಬದುಕು_ಸಾವು...#ಕನಸು_ನೆನಹು...#ಪ್ರೀತಿ_ಗೀತಿ...#ಇತ್ಯಾದಿ....

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Tuesday, November 6, 2018

ಗೊಂಚಲು - ಎರಡ್ನೂರೆಂಬತ್ತು.....

ಅರೆಪಾವು ಬೆಳಕ ಕುಡಿ.....   

ಬಯಸಿದ್ದು, ಕನಸಿದ್ದು ಕೈಗೂಡಿದರಷ್ಟೇ ನಗುವುದೆಂದಾದರೆ ಅಬಲಾಶೆಯ ಮನದ ತೂತು ಕಣಜ ತುಂಬಿದ ದಾಖಲೆ ಇದೆಯಾ...
ಬಯಸುವ, ಕನಸುವ ಆ ಹಾದಿಯ ಹಸಿರಿಗೆ ಬೆರಗಿನ ಕಣ್ಕೀಲಿಸುವ, ದಕ್ಕಿದ್ದನ್ನು ಹೆಕ್ಕಿಕೊಂಡು ಕಸರಿಲ್ಲದೆ ಕಣ್ಣಿಗೊತ್ತಿಕೊಂಬ ನಿಸೂರು ಕಾಣ್ಕೆಯಲಿ ನಗೆಯ ಸಲಹಿಕೊಂಡ ಬಯಲ ಜಂಗಮನ ಜೋಳಿಗೆ ತುಂಬಾ ಪುಟ್ಟ ಪುಟ್ಟ ಕಂತೆ ಕಂತೆ ಬೆಳಕ ಕುಡಿಗಳು...
ನಗೆಯ ಹಬ್ಬವಾಗಲಿ ನಡಿಗೆ - ಒಳಗೊಂಡು ನಿನ್ನನು, ನನ್ನನು, ಅವರಿವರೆಲ್ಲರನು...😊🤗
#ನಗೆ_ಮುಗುಳ_ದೀಪೋತ್ಸವ... 
⇄⇅⇆⇂⇃⇄⇅⇆

ಸಾಂತ್ವನವೆಂದರೆ ಅಳುವಾತನ ಹೆಗಲಿಗೊರಗಿ ನಿನ್ನ ನೋವೇ ದೊಡ್ಡದೆಂದು ನಾವೂ ಕಣ್ಣೀರ ತೊಡೆಯುವುದಲ್ಲ; ಬದಲಾಗಿ ದೃಢ ನೋಟದಿ ಕೆನ್ನೆ ತಟ್ಟಿ ಅಳುವಿನಾಳದ ನಗೆಯ ಹನುಮ ಬಲವ ಎಚ್ಚರಿಸುವುದು - ಅವನಿಗೆ ಅವನ ಪರಿಚಯಿಸುವುದು...
ಜಾಂಬವಂತರ ನೇಹ ಬೇಕು ನೋವಿನ ಜಂಬರು ಕಳೆಯಲು...
#ದ್ಯುತಿ...
⇄⇅⇆⇂⇃⇄⇅⇆

ಬಾಗಿಲು ತೆರೆದು ಕತ್ತಲನು ತುಂಬಿಕೊಂಡೆ - ಮೌನ ಮೈಮುರಿದು ತುಂಟ ನಗೆ ನಕ್ಕಿತು - ನರ ನಾಡಿಗಳಲೆಲ್ಲ ಅಮಲೇರಿದಂಗೆ ತೊನೆದು ತೊದಲಿ ಮಾತೇ ಮಾತು... ಯಾರೋ ಸ್ವೇಚ್ಛೆ ಅಂದದ್ದನ್ನು ನಾನು ಸೌಂದರ್ಯ ಎಂದೆ... ನೀನು ಶೃಂಗಾರ ಅಂದದ್ದನ್ನು ನಾನು ಬದುಕ ತೆಕ್ಕೆಗೊದಗಿದ ಸಿರಿ ಸೌಗಂಧ ಅಂಬೆ...
ಕತ್ತಲ ಗರ್ಭದಲ್ಲಿ ಬೆಳಕ ಕುಡಿ ಮಿಡಿಯುತ್ತದೆ - ಮನೆ ದಾರಿಯ ಕಾಲು ಸಂಕ...
ಎಷ್ಟು ಚಂದ ಈ ಇರುಳ ಹಾದಿ - ಕಣ್ಮುಚ್ಚಿ ನೋಡಬೇಕಷ್ಟೇ...
#ಬೆಳಕ_ನಶೆ...
⇄⇅⇆⇂⇃⇄⇅⇆

ಕೇಳಿಸ್ತಾ -
ನೋವನ್ನ ಅರಗಿಸ್ಕೊಂಡು ನಗೋದಕ್ಕೂ, ನೋವನ್ನೇ ಆಸ್ವಾಧಿಸಿ ಪ್ರೀತ್ಸೋದಕ್ಕೂ ತುಂಬಾ ತುಂಬಾನೇ ವ್ಯತ್ಯಾಸ ಇದೆ...
ನೋವಿಗೆ ಎದುರು ನಿಂತರೆ ಗೆದ್ದಾಗ ಬೊಗಸೇಲಿ ನಗು ಅರಳುತ್ತೆ - ಸೋತರೂ ಮರು ಯುದ್ಧಕ್ಕೆ ಅನುಭವದ ನಗು ಜೊತೆಯಾಗುತ್ತೆ - ಒಟ್ನಲ್ಲಿ ನಗುವಿನದೇ ಆವರ್ತನ...
ನೋವಿನ ಆಸ್ವಾಧನೆ ಆಯ್ಕೆ ಆದಾಗ ಅದರ ಉಪ ಬೆಳೆ ಅಳು - ಅಳುವಿಗೆ ಗೊಬ್ಬರವಾಗಿ ಸ್ವಾನುಕಂಪ - ಅದರ ಫಲ ಹೇತ್ಲಾಂಡಿತನ - ಅಲ್ಲಿಂದ ಕೈ ಇಟ್ಟಲ್ಲೆಲ್ಲ ಸೋಲು - ಅದರಿಂದ ಮತ್ತೆ ಅಳು - ಮತ್ತೆ ಮತ್ತೆ ಅದೇ ಸುಳಿಚಕ್ರ...
ನಗೆಯು ಆಯ್ಕೆ, ಆದ್ಯತೆಯಾದಲ್ಲಿ ಕ್ರಿಯೆಯ ರೂಪ ಸಹಜ ಭಾವುಕತೆ...
ಅಳು ಅನಿಯಂತ್ರಿತ ಅಭ್ಯಾಸವಾದರೆ ಅದು ಭಾವ ವಿಪ್ಲವ...
#ಬದುಕಿದು_ಬಡಿದು_ಹೇಳಿದ_ಪಾಠ...
⇄⇅⇆⇂⇃⇄⇅⇆

ವಿಸ್ತಾರ ಮೌನ ನೀಲಿಯೇ -
ಪೂರಾ ಪೂರಾ ದಡ್ಡನಾಗಿಸು ಇಲ್ಲಾ ನಾಲಿಗೆ ಸೀಳಿ ಚೂರು ಮೂಗನಾಗಿಸು ಎನ್ನ - ಅರಿತೆನೆಂಬ ಮತ್ತು ಅರಿತೇನೆಂಬ ಹುಸಿ ಹಮ್ಮಿನ ಶಬ್ದ ಸಂಭೋಗದ ಗೀಳು ಸಹಜ ಪ್ರೀತಿಯ ಹರಿವನೇ ಕೊಲ್ಲುವ ಮುನ್ನ...
#ಅರೆಪಾವು_ಬೆಳಕ_ಅರಿಕೆ...
⇄⇅⇆⇂⇃⇄⇅⇆

ಮೌನ ಶ್ರೇಷ್ಠ ಅಂದದ್ದು ಮಾತಿನ ಹಿರಿಮೆ...
ಮಾತು ಮಲಿನ ಅಂದಲ್ಲಿ ಮೌನ ಸಾವು...
ಒಳಗಿಳಿದ ಮಾತು - ಮೌನ, ಸಾವು...
ಹೊರ ಹರಿದು ಮೌನ - ಬೆಳಕು, ಹುಳುಕು...
ನಾನು ಜ್ಞಾನ, ನಾನೇ ಅಜ್ಞಾನ; ಯಾನ ಅಯೋಮಯ...
#ವಿಕ್ಷಿಪ್ತ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Saturday, November 3, 2018

ಗೊಂಚಲು - ಎರಡ್ನೂರಾ ಎಪ್ಪತ್ತೊಂಭತ್ತು.....

ಅಳಿವಿಲ್ಲದ ಆತ್ಮದುಲಿಗಳು..... 

ಬುದ್ಧನ ಯರ್ರಾಬಿರ್ರಿ ಹಾಡಿ ಹೊಗಳುವ ನಾನು ಸಣ್ಣದೊಂದು ನೋವನ್ನೂ ಸ್ವಂತವಾಗಿ ಮೀರಿದ್ದಿಲ್ಲ...
ನಿತ್ಯವೂ ಹೊಸ ಹೊಸ ಮುಖದಲ್ಲಿ ತುಳಿಯ ಬರೋ ಎಲ್ಲ ಬೇಗುದಿಗಳಿಗೂ ಒಂಟಿಯಾಗಿಯೇ ಎದೆಕೊಟ್ಟು ನಿಡಿದಾಗಿ ನಗಬಲ್ಲ ಆಯಿಗೆ ಬುದ್ಧನ ಹೆಸರೂ ಗೊತ್ತಿಲ್ಲ...
ಭಗವದ್ಗೀತೆಯನೇ ವಿಮರ್ಶೆ ಮಾಡೋ ದೊಡ್ಡಸ್ತಿಕೆ ನಂದು - ಚಿತ್ತ ಭ್ರಾಂತಿಯ ತೊಳೆದುಕೊಂಡು ಯಾವ ಪ್ರೀತಿಯನೂ ಗೆದ್ದದ್ದಿಲ್ಲ...
ತನ್ನಿಷ್ಟ ದೈವ ಕೃಷ್ಣನ ಕಾಡುವ ಅಪವಾದಗಳಿಗೂ ಕಣ್ಣಹನಿಯಾಗುವ ಆಯಿ ಅವಳ ಹಾದಿಯ ತಡೆಯುವ ಎಂಥದೇ ಯುದ್ಧಕ್ಕೂ ಬೆನ್ನು ತೋರಿದ್ದಿಲ್ಲ...
ಅವಳ ಬದುಕೇ ಭಗವದ್ಗೀತೆಯ ಭಾಷ್ಯ - ಸಾಸಿವೆಯ ತರಲಾರಳು ನಿಜ, ಆದರೆ ಜೀವಕ್ಕೆ ಮೊದಲ ನಗು ಕಲಿಸಿದವಳು ಅವಳೇ; ಬುದ್ಧರಿಗೂ, ಕೃಷ್ಣರಿಗೂ...
#ಆಯೀ_ಅಂದರೆ_ಆಳ...😍#ಆಯಿ_ಅಂದರೆ_ಬೇರು...😘
^^^^

ತನ್ನ ಕಂದನ ಅಸಾಧ್ಯ ತುಂಟತನದೆಡೆಗಿನ ಆಕ್ಷೇಪಣೆಯ ಹೊತ್ತಲ್ಲೂ ಆ ಅಮ್ಮನ ಕಂಗಳಾಳದಿ ಮೆರೆವ ಗರ್ಭಸ್ಥ ಖುಷಿಯ ಪ್ರೀತಿ ದೀಪ; ಅದು ವ್ಯಾಸರ ಅಕ್ಷರ ಅಧ್ವರ್ಯಕ್ಕೂ ನಿಲುಕದ ಜಗದ ಅಮೂರ್ತ ಜೀವ ಕಾವ್ಯ...
ಯಾವ ಮಂತ್ರ, ಯಾವ ಶಬ್ದ, ಯಾವ ಮಾಂತ್ರಿಕ ಬಿಡಿಸಬಹುದು; ಬೈಗುಳಕ್ಕೂ ಕಣ್ಣ ಹನಿಯ ಭಾವ ಸ್ಪರ್ಶದ ಆ ಕರುಳ ಕರುಣೆಯ ಒಗಟನು...
#ಆಯಿಯೆಂಬೋ_ಹುಚ್ಚು_ಹುಡುಗಿ...
^^^^

.....ನಿಲ್ಲಿಸುವುದು ಎಲ್ಲಿಗೆ...??
.....ಹೊರಟದ್ದೆಲ್ಲಿಗೆ...??  ಯಾಕಂತ...!??
.....ನೆನಪು ಉಳಿದೇ ಹೋಗುತ್ತದೆ..‌‌... ಮತ್ತು ನೆನಪಷ್ಟೇ ಉಳಿಯುತ್ತದೆ.....
.....ಸವೆಸಿದ ಹಾದೀಲಿಷ್ಟು ಕಲ್ಲು ಮುಳ್ಳಿಲ್ಲದಿದ್ದರೆ, ಮೌನ ಚುಚ್ಚಿರದಿದ್ದರೆ ಗೆಲುವಿನ ವೇದಿಕೆಯಲ್ಲಿ ಮಾತು ಹುಟ್ಟುವುದು ಹೇಗೆ...
.....ಅವೆಲ್ಲದರಾಚೆಯೂ ಚಂದದೊಂದು ಬೆಳಗಿದೆ; ಬೇಲಿಸಾಲಿನ ಹೂವಿಗೂ ವಿಶೇಷ ಅಂದ ಗಂಧವಿದೆ... ಕಣ್ಣು ಮೀಯಲು - ಉಸಿರ ತುಂಬಿಕೊಳ್ಳಲು...
#ಮತ್ತೊಂದು_ದಿನ...
^^^^

ನೇಹವೇ -
ನಿನ್ನ ಕೊಟ್ಟ ಬದುಕಿಗೆ ಕೃತಜ್ಞ - ನೀ ಬಯಸದೇ ನಿನಗೆ ಕೊಟ್ಟ ಎಲ್ಲದಕ್ಕೂ ಕ್ಷಮೆಯಿರಲಿ...
ಸಾವು ಸಾರ್ವತ್ರಿಕ ಸತ್ಯವೆಂಬುದು ಸಾಮಾನ್ಯ ತಿಳುವಳಿಕೆ; ಆದರೆ ನನಗಿನ್ನೂ ದೂರವಿದೆ ಎಂಬುದು ಬದುಕಿನ ಪ್ರೇರಣೆ...
ಬದಲಾವಣೆ ಎಲ್ಲರ, ಎಲ್ಲದರ ಸಹಜ ನಿಯಮ ಎಂಬ ಸ್ಪಷ್ಟ ಅರಿವಿದೆ; ಆದರೂ ಎದುರುಗೊಳ್ಳುವಾಗ ಯಾಕಿಂತ ಯಾತನೆ...?
ವಿದಾಯದ ಘಳಿಗೆಯಲೊಮ್ಮೆ ತಿರುಗಿ ನೋಡುವಷ್ಟೂ ಸಣ್ಣ ತಳಮಳವೂ ಕರುಳ ಸೋಕದಿದ್ದರೆ ಅದು ಬದಲಾವಣೆಯ ಹಚ್ಚೆ ಗುರುತಾ...? ಭಾವದ ಸಾವಿನ ನೆರಳಲ್ಲವಾ...??
ಪ್ರತಿ ತಿರುವಲ್ಲೂ ನನ್ನದೇ ಹೆಸರಿನ ಘೋರಿಯೊಂದು ಎದ್ದು ನಿಲ್ಲುತ್ತದೆ - ಹೊಸ ಹೊಸ ಸಮರ್ಥನೆ, ಸಮಜಾಯಿಷಿ, ಸಬೂಬುಗಳ ಸಹಯೋಗದಲ್ಲಿ...
ಬದುಕನ್ನೇ ಕಳೆದುಕೊಂಡ ದಿಗಿಲಿಗಿಂತ ಆಪ್ತ ಜೀವದ ಪುಟ್ಟ ಪುಟ್ಟ ಕಕ್ಕುಲಾತಿಯ ಭಾವ ವಿನಿಮಯಗಳಿಂದ ದೂರಾದ ನೋವು ಹೆಚ್ಚು ಪ್ರಖರ ಎಂಬುದು ಈ ಹಾದೀಲಿ ಮತ್ತೆ ಮತ್ತೆ ಸಾಬೀತಾದ ಅನುಭವ...
ಬೆನ್ನಿನ ಚಿತ್ರವಷ್ಟೇ ಕಣ್ಣಿನ ದುಡಿಮೆಯಾದ ಕುರೂಪಿ ಹಾದಿ - ಖಾಲಿತನದ ಖಜಾನೆ...
#ಮತ್ತೆ_ಮತ್ತದೇ_ಮರಣ...
^^^^

ಕೇಳಿಲ್ಲಿ -
ನಿನ್ನ ನೆರಳಿದ್ದ ನಿನ್ನೆಗಳ ಎಳೆತಂದು ಎದೆಯ ಕಣ್ಣ ಸೀಳೋ ಮಳೆಯೆದುರು ಕಬೋಜಿಯಂತೆ ಪ್ರಕ್ಷುಬ್ಧನಾಗಿ ನಿಂತ ಸಂಜೆಗಳಲೆಲ್ಲ - "ಅಯ್ಯೋ ಶಿವನೇ, ಈ ರಣ ಮಳೆಗಾಲದಲ್ಲಿ ಸತ್ರೆ ಸುಡೋಕೆ ಸೌದೆ ಹೊಂದ್ಸೋದೂ ಕಷ್ಟ ಕಣೋ ನನ್ನಪ್ಪಾ; ಮುಂಗಾರೊಂದು ಕಳೆದರೆ ಸಾಕು" ಅಂತಿದ್ದ ಹಣ್ಣಣ್ಣು ಒಂಟೊಂಟಿ ಅಜ್ಜಿಯರ ಜೀವನಪ್ರೀತಿಯ ನೆನಪೊಂದು ವಿಚಿತ್ರ ಬೆರಗು...
#ಪಿಚಿಪಿಚಿ_ಅಂಗಳ...
^^^^
ಅನಂತ 💕 ಗೋದಾವರಿ 
ಕಳೆದುಕೊಂಡ ನೋವು - ಹಚ್ಚಿಟ್ಟು ಹೋದ ದೀಪ...
ನಿದ್ದೆ ಮಂಪಲ್ಲಿ ನಾನೇ ಬಿಟ್ಟದ್ದಾ ಅಥವಾ ಯಾವ ಮಾಯದಲ್ಲೋ ಬೆರಳ ಬಿಡಿಸಿಕೊಂಡು ಅವರೇ ಎದ್ದು ಹೋದದ್ದಾ - ನಡೆಸಿ ನುಡಿಸಿ ಕಾಯ್ದ, ಕನಸಿ ಹರಸಿ ಕಾಯ್ವ ಹಿರಿಯರೆಲ್ಲ ಉಳಿದದ್ದು ಇರುಳ ನೀಲಿ ಬಯಲ ನಕ್ಷತ್ರಗಳಂತೆ...
ಈಗಲೂ ಎದೆ ಕೂಗಿಗೆ ನಡಿಗೆ ನಡುಗಿದರೆ ಅವರ ಬೆನ್ಗಾವಲ ನೆರಳ ನೆನಪೊಂದು ಊರುಗೋಲು...
ನೆನಪು ಕಾಡಿದಷ್ಟೂ ಜೀವ ಜೀವಂತ...
ಈ ಬದುಕ 'ಅ ಆ ಇ ಈ'ಗಳ ಕೈ ಹಿಡಿದು ತಿದ್ದಿಸಿದ ಜೀವತಂತುಗಳು - ಅಳಿವಿಲ್ಲದ ಆತ್ಮದುಲಿಗಳು...
#ಅವಳು_ಗೋದಾವರಿ - #ಅವನು_ಅನಂತ...😍😘 

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಎರಡ್ನೂರಾ ಎಪ್ಪತ್ತು ಮತ್ತೆಂಟು.....

ಕಥೆಯಾಗದ ಪಾತ್ರ..... 

ಜವಾಬ್ದಾರಿಗಳ ಹೊರೆಯಿಲ್ಲ, ಭಾವಗಳ ನೆರೆ ಇಲ್ಲ, ನಡಿಗೆಗೊಂದು ಉದ್ದೇಶವಿಲ್ಲ, ಸ್ವಂತ ಕೃತಿ ಸ್ಮೃತಿಗಳಿಗೆ ಅರ್ಥ ಹುಡುಕಲಿಲ್ಲ - ನಡೆದದ್ದೇ ಹಾದಿ, ನುಡಿದದ್ದು ಮಂತ್ರ ಅಂತಂದು ಸ್ವಾರ್ಥಕ್ಕೆ ಸ್ವಂತಿಕೆಯ ಬಣ್ಣದ ಹೆಸರಿಟ್ಟು ಬದುಕಿದ್ದು ಕಾಲಕೂ; ಆದ್ರೂ ಆಖೈರು ಉಸಿರು ಯಾಕಿಷ್ಟು ಭಾರ ಭಾರ...
ಹೆಣ ಭಾರ ಅಂದರೆ ಇದೇನಾ...
ಹೆಣದ ಭಾರ ಬೂದಿಗಿಲ್ಲ - ಸುಟ್ಟು ಹೋಗಬೇಕು - ಸುಟ್ಟಲ್ಲದೆ ಸುಖವಿಲ್ಲ - ಆದರೆ ಸಲೀಸು ಸಾಯಲಾದೀತಾ...?
ಜವ ಕರೆಯದೇ ಯಾರು ಸಾಯುವುದು...??
#ಕಥೆಯಾಗದ_ಒಂದು_ಪಾತ್ರ...

ಭಾವ ಸತ್ತ ಮೇಲೂ ಬಾಯಿ ಹೊಲಿದುಕೊಳ್ಳದೇ ಬಡಬಡಿಸಿ ಬಂಧದ ಚಂದ ಕೆಡಿಸಿಕೊಳ್ಳೋ ಮನಸೇ ನೀ ಬಯಲ ದಾರಿಯಲ್ಲಿ ಮಾತು ಬಿದ್ದೋಗಿ ಬೆತ್ತಲೆ ಸಾಯಬೇಕು...
#ಕಥೆಯಾಗದ_ಒಂದು_ಪಾತ್ರ...

ಮುಸುಕಿದ ಕತ್ತಲ ಕರಿ ಪತ್ತಲದಡಿಯಲಿ ಅತ್ತದ್ದಕ್ಕೂ, ಅಳಿಸಿದ್ದಕ್ಕೂ, ನಗಿಸಿ ನಕ್ಕದ್ದಕ್ಕೂ, ಹಲಹಲಾ ಎಂದು ಸ್ವಚ್ಛಂದ ಕುಣಿವ ಎಲ್ಲ ಭಾವಕ್ಕೂ ಒಂದೇ ಗಾಢತೆ; ಕತ್ತಲೆಂದರೆ ಎಂಥ ಶುದ್ಧ ಬಣ್ಣ - ಅನಾಯಾಸದಿ ತಬ್ಬಿದ ಸಾವಿನಂತೆ...
#ಕಥೆಯಾಗದ_ಒಂದು_ಪಾತ್ರ...

....ಹಾಗೆಂದೇ ಮನಸಿನ ಮನೆಯ ಸೂತಕ ಕಳೆಯುವುದೇ ಇಲ್ಲ - ಅಂಗಳದಂಚಲ್ಲಿ ದಿನಕ್ಕಿಷ್ಟು ಕನಸುಗಳು ಅಡ್ಡಡ್ಡ ಮಲಗುತ್ತವೆ...
ಕಲ್ಪನೆಯ ಕಣ್ಣಿಗೂ ವಿಷದ ಹೂ ಬಿದ್ದಂತಿದೆ - ಇಲ್ಲೀಗ 'ನನಗೂ ಸೇರದ ನಾನು...'
ಬೊಜ್ಜದ ಮನೆಗೆ ಕರೆಯದೆಯೂ ಬಂದು ಸರತಿ ಊಟಕ್ಕೆ ಕೂರೋ ಮುದಿ ನೆನಪುಗಳ ಸಂಭಾಳಿಸಿಕೊಂಡು ಒಂಚೂರೂ ಕಸರುಳಿಯದಂತೆ ಬದುಕಿನೊಂದಿಗೆ ಕರಗುವುದು ಹೇಗೆಂದು ತಿಳಿಯದೆಯೇ ತಳಮಳಿಸುವ ಪಾಳುಬಿದ್ದ ಪಾಪದ ಮನಸಿನ ಉಸಿರೂ ಭಾರ - ಹಾಳಾದ್ದು ಈ ಬಡಪಾಯಿ ಭಾವಗಳ ಗೂಡಿನ ಸೂತಕ ಕಳೆಯುವುದೇ ಇಲ್ಲ...
#ಕಥೆಯಾಗದ_ಒಂದು_ಪಾತ್ರ...

ಬಿರಿದ ಎದೆಯ ಬಿರುಕಿನೇ ಕುಂಡವಾಗಿಸಿ - ತುಂಡು ಕನಸ ಕಿಡಿ ನೆಟ್ಟು - ಮರಳಿ ಬರಬೇಕಿದೆ - ಮತ್ತೆ ನಗಬೇಕಿದೆ - ನನ್ನೊಳು ನಾ ಹುಟ್ಟಿ...
ಬೀಜದ ಓಟೆ ಒಡೆದಾಗಲೇ ಅಲ್ಲವಾ ಚಿಗುರಿಗೆ ಹಾದಿ...
#ಕಥೆಯಾಗದ_ಒಂದು_ಪಾತ್ರ...

ಅರ್ರೇ!!! ನಾನಿನ್ನೂ ನೆನಪಲ್ಲಿದೀನಾ...??
ಹ್ಯಾಂಗ್ ಮರೀಲೀ - ಭಾವ ಸತ್ತದ್ದು ನಂದಲ್ವಲ್ಲಾ...
ಕಟುವಾಗಬೇಡ, ನನ್ನಲ್ಲೂ ಸತ್ತದ್ದಲ್ಲ - 'ನಿನ್ನಂತೆ' ಹರಿಯಲಾರದೇ ಹೋದದ್ದಷ್ಟೇ...
ಇದ್ದು 'ನಮ್ಮಂತೆ' ಬೆರೆಯಬಹುದಿತ್ತೇನೋ - ದುಡುಕಿದೆವಾ...??
ಸಿಹಿಯಾಗಿ ಹರಿದು ಸೇರಿದ್ದೂ, ಉಪ್ಪಾಗಿ ತೊನೆದು ಹೀರಿದ್ದೂ ಸೇರಿ ಮಳೆಯಾಗಿ ಮತ್ತೆ ಸಿಹಿಯೇ ಅಲ್ಲವಾ - ಕಾಯಬೇಕಿತ್ತಾ...??
ಎಷ್ಟು ಕಾಯುವುದು...? ಎಲ್ಲಿಯವರೆಗೆ...?? ಇಷ್ಟಕ್ಕೂ ಇಲ್ಲಿ ಆವಿಯಾದ ಹನಿ ಇಲ್ಲೇ ಮಳೆಯಾಗಿ ಸುರಿಯುತ್ತೆ ಅನ್ನೋ ಭರವಸೆ ಏನೂ...???
ಮಾತು, ಮೌನದ ಮಥನದಲ್ಲಿ ಬೆಂಕಿಯೇ ಹುಟ್ಟಬೇಕಾ - ಬೆಣ್ಣೆಯೂ ತೇಲಬಹುದಿತ್ತೇನೋ...
ಒಡೆದ ಕೊಳಲಲ್ಲಿ ಗಾಳಿ ಅಪಸ್ವರವೇ ಅಲ್ಲವಾ...?
ಕೃಷ್ಣ ಕಣ್ಣು ಬಿಚ್ಚಿದ - ರಾಧೆ ಚಿತ್ರವಾದಳು, ರಾಧೆ ನಿಡುಸುಯ್ದಲ್ಲಿ ಕೊಳಲು ಉಸಿರ ಮರೆಯಿತು; ದೂರವೇ ಕಾಯ್ದದ್ದಾss ಬಂಧವ...!?
ಉಪಸಂಹಾರವನ್ನು ಹೇಗೆ ಬರೆದರೆ ಚೆಂದವಿತ್ತು...? ಯಾರು ಬರೆಯಬೇಕಿತ್ತು...?? ಹೌದು, ಇಷ್ಟಾಗಿಯೂ ಉಪಸಂಹಾರ ಬರೆಯುವ ಅವಕಾಶ ಇದ್ಯಾ ಬದುಕಿಗೆ...???
ಪ್ರಶ್ನೆ ಪ್ರಶ್ನೆ ಬರೀ ಪ್ರಶ್ನೆಗಳೇ - ಉತ್ತರದಾಯಿತ್ವವನ್ನೂ ಪ್ರಶ್ನಿಸುವ ಪ್ರಶ್ನೆಗಳು...
ಕೊನೆಗೂ ಎಲ್ಲಿಗೂ ಮುಗಿಯದ ಸಂಭಾಷಣೆ - ಅದು ಆಳಕಿಳಿದಷ್ಟೂ ಸಂವೇದನೆ; ಅದಕೇ ಮುಗಿಯದಿರಲಿ ನನ್ನೊಳಗಣ ಸಂಭಾಷಣೆ - ಅದಷ್ಟೇ ಬದುಕಿನ ಆವೇದನೆ...
#ಕಥೆಯಾಗದ_ಒಂದು_ಪಾತ್ರ...

ನಾನಿನ್ನೂ ಹುಟ್ಟಿಯೇ ಇರಲಿಲ್ಲ, ಆಗಲೇ ಎದೆ ಗೂಡಿನ ಕನಸ ಕಣ್ಣೊಂದು ಊದಿಕೊಂಡು ಊನವಾಗಿತ್ತು; ಮೊದಲಾಗಿ ತಬ್ಬಿದ ಕೊನೆಯ ಸೋಲು - ಉಳಿದೆಲ್ಲ ಸರಣಿ ಅದರ ಬಣ್ಣ ಬಣ್ಣದ ಕವಲುಗಳಷ್ಟೇ...‌‌
ಅಥವಾsss
ನಾ ಹುಟ್ಟಿದ್ದು ನನ್ನ ಮೊದಲ ವೀರೋಚಿತ ಗೆಲುವು - ಬಹುಶಃ ಹೇಳಿಕೊಳ್ಳಬಹುದಾದ ಕೊನೆಯದೂ ಕೂಡಾ; ಉಳಿದಂತೆ ಅಲ್ಲಿಷ್ಟು ಇಲ್ಲಿಷ್ಟು ಕತ್ತಲ ಮಿಂದ ನೆರಳಿನಂಥವು ಸಿಕ್ಕಾವು...
#ನಾನೆಂಬ_ಕಥೆಯೊಂದು_ಹೀಗಿರಬಹುದು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)