Thursday, January 29, 2015

ಗೊಂಚಲು - ಒಂದುನೂರಾ ನಲವತ್ತು.....

ಈ ಹಗಲಿದು ಮುಗಿಯಲೇಬಾರದು.....
(ಮಲೆನಾಡ ಮನದ ಒಂದು ಒಲವ ಬೆಳಗು...)
ಹೀಗಿತ್ತು ಅಲ್ಲಿಯ ಒಡೆತನ...
ದಿನಮಣಿಯ ಮೊದಲ ಸ್ಪರ್ಶಕೆ ಕಂಪಿಸಿ ಇಬ್ಬನಿ ಹನಿಯೊಂದು ಅಡಿಕೆ ಹೆಡೆಯ ತುದಿಯಿಂದ ಕೆಳಜಾರುವ ಘಳಿಗೆಗೆ ಸರಿಯಾಗಿ ನಿದಿರೆಯ ತೋಳಿಂದ ಕೊಸರಿಕೊಂಡು ಮೆಲ್ಲಗೆ ಕಣ್ದೆರೆದೆ...

ಮುಂಬೆಳಗಿನ ಬಂಗಾರದೋಕುಳಿಯ ಹೊತ್ತಲ್ಲಿ ಗೋಪಿ ಹಕ್ಕಿಯೊಂದು ಕಳೆದಿರುಳಲಿ ನನ್ನ ಕನಸಿನೂರ ರಾಜಬೀದಿಯ ತುಂಬ ನಿನ್ನ ಹೆಜ್ಜೆ ಗುರುತು ಮೂಡಿ ನಗೆಯ ಗಂಧವೊಂದು ಸುರುಳಿ ಸುತ್ತಿದ ಸುದ್ದಿಯ ಊರಿಗೆಲ್ಲ ಸಾರುತ್ತಿತ್ತು...

ಆ ಹಕ್ಕಿಗೊರಳನು ಹಿತ ಮುನಿಸಿಂದ ಶಪಿಸುತ್ತ ಮಂಚ ಬಿಟ್ಟಿಳಿದರೆ ಅಂಗಳದ ತುಂಬಾ ಚೆಲ್ಲಿ ರಂಗವಲ್ಲಿಯಂತಾಗಿರುವ ಪಾರಿಜಾತದ ಕುಸುಮ ವಿದಾಯದ ಘಳಿಗೆಯಲೂ ನನ್ನ ನೋಡಿ ಎಲ್ಲ ಅರಿವಾದಂತೆ ನವಿರಾಗಿ ತುಂಟ ನಗೆಯ ಬೀರಿತು...

ಹಲಸಿನ ಮರದ ಕೊಂಬೆಯ ತುದಿಯಲಿ ಅತ್ತಿಂದಿತ್ತ ಬಾಲವನೆತ್ತಿಕೊಂಡು ಸುಳಿದಾಡುತಿದ್ದ ಅಳಿಲಮರಿಯೊಂದರ ಗಡಿಬಿಡಿಯಲೂ ಎಂಥದೋ ಅವ್ಯಕ್ತ ಸಂಭ್ರಮವಿದ್ದಂತಿದೆ...

ಕರುಳಿಗೆ ಕಚಗುಳಿಯಿಡುವ ಹಿತವಾದ ಚಳಿಯೊಂದಿಗೆ ಬೆರೆತ ನಿನ್ನ ಒನಪಿನ ನೆನಪಿನ ಕಾವು ಹಬ್ಬಿ ತಬ್ಬಿ ಮನಸಿದು ಮೈನೆರೆದು ಹೋಯ್ತು...

ನಿದ್ದೆ ಮರುಳಲೇ ಆಯಿಯ ಹೂ ಹಿತ್ತಲಿಗೆ ಹೋದರೆ ಮುತ್ಮಲ್ಲಿಗೆ ಹೂವಿಗೆ ಮುತ್ತಿಟ್ಟು ಅದರೊಡಲ ಜೇನ ಹೀರುತಲಿದ್ದ ದುಂಬಿಯ ಕಂಡು ಕಾಲ ಬೆರಳ ತುದಿಯಿಂದ ನಾಚಿಕೆಯಂಥ ಒಲವ ಸೆಳಕೊಂದು ನೆತ್ತಿಗೇರಿದ ಮೃದುಕಂಪನದನುಭಾವ...

ಗಂಗೆ ಕರುವಿನ ಘಂಟೆ ದನಿಗೆ ಕನಸಲ್ಲಿ ಪಿಸುನುಡಿದ ಮಾತೊಂದು ಮತ್ತೆ ಹೊರಳಿದಂತಾಗಿ ಒಡಲಿನಾಳದಲೇನೋ ಹೊಸದಾದ ಉದ್ವೇಗದುದ್ಗಾರ...

ಹಿಂದಿರುಗಿ ನೋಡಿದರೆ ಪಾಲಿ ಬೆಕ್ಕನು ಗದರುತಿದ್ದ ಪಾಂಡು ಕುನ್ನಿಯ ಕಣ್ಣಲ್ಲೂ ಅಚ್ಚರಿ ಬೆರೆತ ಅಕ್ಕರೆ ನನ್ನೆಡೆಗೆ...

ಅಮ್ಮನ ಕೈಬಳೆಗಳ ಕಣ ಕಣದೊಂದಿಗೆ ಕಲೆತ ನೊರೆ ನೊರೆ ಹಾಲು ಬಿಂದಿಗೆ ತುಂಬೋ ಸದ್ದಿಗೆ ಕಿವಿಗಳನೊಪ್ಪಿಸಿ, ಹಂಡೆಯೊಲೆಯ ಬೆಂಕಿ ನರ್ತನದೆಡೆ ಕಣ್ಣ ನೆಟ್ಟು ಕೂತ ಈ ಬೆಳ್ಳಂಬೆಳಗಲೇ ಹುಚ್ಚೆದ್ದ  ಭಾವಗಳ ಸಂತೆ ನೆರೆದ ಮನದ ಮುಗಿಲು...

ಆಹಾ ಮುಗಿಯಲೇ ಬಾರದು ಈ ಹಗಲು...

*** ಎಂದಾದರೂ ಮತ್ತೆ ಮರಳಿ ಹೊರಳೀತು.... 

Sunday, January 25, 2015

ಗೊಂಚಲು - ಒಂದು ನೂರಾ ಮೂವತ್ತೊಂಬತ್ತು.....

ಭಾವ ನಮನ.....

ಬದುಕ ಜೀವನ್ಮುಖೀ ಭಾವಗಳೆಲ್ಲ ಸದಾ ಹೊತ್ತಿ ಉರಿಯುತಲಿದ್ದು; ಆತ್ಮದ ಬೆಂಕಿ ಆರುವ ಮುನ್ನ ನನ್ನೀ ಬಂಡೆಯೆದೆಯ ಸಿಬಿರಿನೊಳಗೂ ಬೇರನಿಳಿಸಿ ಭಾವದ ಹಸಿರು ಚಿಗುರಲೆಂಬ ಹಾರೈಕೆಯಿರಲಿ...

::::::

ಸಾಹಿತ್ಯದ ಗಂಧವಿಲ್ಲದೇ, ಬರೆದದ್ದರ ಪರಿಣಾಮ ಮತ್ತು ಓದುಗನ ಮನಸಿನ ಕಳಕಳಿಯ ಹಂಗಿಲ್ಲದೇ, ನಾ ಕಂಡಂತೆ, ನಂಗೆ ತೋಚಿದಂತೆ, ನನ್ನೊಳಗೆ ಮೂಡಿದ ಭಾವಗಳಿಗೆ ಪದಗಳ ರೂಪ ಕೊಡುತ್ತಾ ಹೋದೆ... 
ಪದಗಳಿಗೆ ದಕ್ಕಿದ ಭಾವಗಳನೇ ನಂಬಿ, ಅವು ನನ್ನಲ್ಲಿ ಮೂಡಿದ್ದು ಮೂಡಿದಂತೆ ಗೀಚುತ್ತಾ ಹೋದೆ... 
ಹಾಗೆ ತೋಚಿದ್ದು ಗೀಚಿದ್ದನ್ನೆಲ್ಲ ಕೂಡಿಡುತ್ತ ಹೋದ ಸಾರ್ವಜನಿಕ ಡೈರಿಯಂಥ “ಭಾವಗಳ ಗೊಂಚಲು” ಎಂಬ ನನ್ನೀ ಬ್ಲಾಗಿಗೆ ಅದಾಗಲೇ ನಾಲ್ಕು ವರ್ಷಗಳು ಸಂದು ಹೋದವು...!!!

ಎದೆಯಂಗಳವಿದು ನೈತಿಕ ಅನೈತಿಕತೆಗಳ ಬೇಲಿಯಿಲ್ಲದೆ, ಅಸ್ಪ್ರಶ್ಯತೆಯ ಹಂಗಿಲ್ಲದೆ, ಏನೇನೆಲ್ಲ ಭಾವಗಳು ಹುಟ್ಟುವ ಪ್ರಸೂತಿ ತಾಣ – ಅದೇ ಹೊತ್ತಿಗೆ ಅವೆಲ್ಲ ಭಾವಗಳನೂ ಹೂಳುವ ಸುವಿಶಾಲ ಸ್ಮಶಾನ ಕೂಡ... 
ಅಲ್ಲಿ ಭಾಷೆಗೆ ದಕ್ಕದ ಭಾವಗಳ ನಗೆಯ ಕೇಕೆ ಮತ್ತು ನೋವ ಆರ್ತನಾದ ಎರಡೂ ಒಟ್ಟೊಟ್ಟಿಗೇ ಕಿವಿಗೆ ಬೀಳುತ್ತಿರುತ್ತವೆ... 
ಹೆಚ್ಚಿನ ಬಾರಿ ಹೂತ ಭಾವಗಳ ನಾತವೇ ರಮ್ಯ ಭಾವದಂತೆ ಪದಗಳ ಗುಚ್ಛವಾಗಿ ಆಚೆ ಬಂದದ್ದಿದೆ...

ಹುಟ್ಟು - ಸಾವು, ನಕ್ಕಿದ್ದು - ಅತ್ತಿದ್ದು, ಕಿತ್ತಾಡಿದ್ದು, ಹುಡುಕಾಡಿದ್ದು, ಕಾಡಿದ್ದು - ಹಾಡಿದ್ದು, ನಿರಾಭರಣ ಪ್ರೇಮ, ಕರಡಿಯ ಉನ್ಮಾದದ ಕಾಮ, ಮಲೆನಾಡು - ಮಳೆ - ಬೆಳದಿಂಗಳು, ಅಮ್ಮ ಮತ್ತು ಅವಳು, ಸಂಬಂಧಗಳು - ಒಳ ಒಪ್ಪಂದಗಳು, ನೋವಿನ - ಕಣ್ಣೀರಿನ ವಿಜೃಂಭಣೆ, ಬದುಕ ಕರುಣೆಯಿಂದ ಕಂಡದ್ದು - ಕಾಣಲು ಬಯಸಿದ್ದು... 
ಓಹ್ !!!
ಏನೇನೆಲ್ಲ ಬರೆದು ತುಂಬಿದೆ ನಾನಿಲ್ಲಿ...
ನನ್ನೊಳಗಿಳಿದ, ಉಳಿದ, ಅಳಿದ, ನನ್ನದೆನಿಸಿದ ಎಲ್ಲಾ ಭಾವಗಳನೂ ಬರೆದೇ ಬರೆದೆ... 
ಓದಿದ ನಿಮ್ಮಗಳ ಸಹನೆ ನಿಜಕ್ಕೂ ದೊಡ್ಡದು... 
ಮೆಚ್ಚುಗೆಯ ಮಾತುಗಳನೂ ಆಡಿ ಪ್ರೋತ್ಸಾಹಿಸಿದ ನಿಮಗಿದೋ ಋಣದ ನಮನ...

ಬರೆಯುತ್ತ ಬರೆಯುತ್ತ ಕಳಕೊಂಡವುಗಳೆಂದರೆ ಎದೆಯಾಳದ ಒಂದಷ್ಟು ದುಗುಡ, ದುಮ್ಮಾನ, ಭಾರ, ನೋವುಗಳು...
ಪಡಕೊಂಡದ್ದು ಒಂದಿಷ್ಟು ಹಗುರತೆ ಮತ್ತು ಎಲ್ಲಕಿಂತ ಮಿಗಿಲಾದ ನಿಮ್ಮಗಳ ಸ್ನೇಹ...

ನನಗೆಂದಿಗೂ ಇಷ್ಟವಾಗದ ಆದರೆ ಹೆಜ್ಜೆ ಹೆಜ್ಜೆಗೂ ಎಡತಾಕುವ ವಿಶಾದದ ಭಾವ ಸ್ಪರ್ಶವಿಲ್ಲದ ಒಣ ಒಣ ಸಾರಿಗಳು - ಕಣ್ಣಂಚಲ್ಲಿ ನಗು ಮೂಡದೇ ನಾಲಿಗೆ ತೊದಲುವ ಥ್ಯಾಂಕ್ಸ್‌ಗಳೂ (ಬಂಧದಲ್ಲಿ ಭಾವ ಇಲ್ಲದಿದ್ದುದು ಅಥವಾ ಇದ್ದ ಭಾವ ಸತ್ತದ್ದು  ಈ ಒಣ ಥ್ಯಾಂಕ್ಸ್ ಮತ್ತು ಸಾರಿಗಳಿಂದಲೇ ಅರಿವಿಗೆ ಬರುತ್ತೆ ಹೆಚ್ಚಿನ ಸಲ... ಭಾವಪೂರ್ಣವಾಗಿ ನುಡಿದ ಒಂದು ಥ್ಯಾಂಕ್ಸ್ ಅಥವಾ ಸಾರಿ ಬಂಧವೊಂದರ ಉಳಿವಿಗೆ ಕಾರಣವಾಗೋದು ಎಷ್ಟು ಸತ್ಯವೋ ಭಾವದ ಹಂಗಿಲ್ಲದಿರುವಾಗ ಇಷ್ಟಿಷ್ಟಾಗಿ ಬಂಧವ ಕೊಲ್ಲುವುದೂ ಅಷ್ಟೇ ದೊಡ್ಡ ಸತ್ಯ...) - ಮಧುರ ಬಂಧವೊಂದು ಸ್ವತಂತ್ರವಾಗಿ ಒಡನಾಡಿಕೊಂಡು ಬೆಳೆಯಲು ಬಿಡದ ಪರಿಸರ ಇವುಗಳೆಲ್ಲದರ ನಡುವೆ ಒಂದಿಷ್ಟು ಆಪ್ತ ಅನ್ನಿಸೋ ಬಾಂಧವ್ಯಗಳ ಬೆಸೆದು ಕೊಟ್ಟದ್ದು ಈ ಬ್ಲಾಗ್ ಎಂಬೋ ಜಾಲ ತಾಣ...

ಇಲ್ಲೂ ಒಂದಷ್ಟು ವಿಪರ್ಯಾಸವಿದೆ... 
ಏನ್ಗೊತ್ತಾ – ಯಾವೆಲ್ಲ ಭಾವಗಳಿಂದಾಗಿ, ಯಾವುದೆಲ್ಲ ಕಾರಣಗಳಿಗಾಗಿ ಒಂದಷ್ಟು ಸ್ನೇಹಗಳ ಪಡೆದೆನೋ ಅದದೇ ಭಾವ, ಕಾರಣಗಳಿಗಾಗಿ ಅದೇ ಸ್ನೇಹಗಳ ಕಳಕೊಂಡದ್ದೂ ಇದೆ... 
ನನ್ನ ಭಾವ, ಅನುಭವ, ಅನುಭಾವಗಳ ಓದುವಾಗ ಅಥವಾ ದೂರದಿಂದ ಕಾಣುವಾಗ ತುಂಬಾ ತುಂಬಾ ಇಷ್ಟವಾಗಿ ನಂಗೆ ಹತ್ತಿರವಾದ - ಅವನ್ನೇ ಆದರಿಸಿ, ಅನುಸರಿಸಿ ಅಂತಂದಾಗ ಕಷ್ಟವಾಗಿ ನನ್ನಿಂದ ದೂರ ನಿಂತ – ಮತ್ತೆಷ್ಟೋ ಕಾಲದ ನಂತರ ಆ ಅವವೇ ಭಾವಗಳನು ಸದ್ದೇ ಇಲ್ಲದೆ, ನನಗಿಂತ ಚೊಕ್ಕವಾಗಿ ಜೀವಿಸತೊಡಗಿದ ಸ್ನೇಹಗಳ ಕಂಡು ದಂಗಾಗಿ ನಿಂತದ್ದಿದೆ... 
ಆಶ್ಚರ್ಯವಾಗುತ್ತೆ ನಂಗೆ ಯಾವ ಭಾವ ಇಷ್ಟವಾಗದೇ ಒಡನಾಟದಿಂದಾಚೆ ನಿಂತರೋ ಅದೇ ಭಾವವ ಇನ್ಯಾವುದೋ ತಿರುವಿನಲ್ಲಿ  ತಾವೇ ಜೀವಿಸತೊಡಗಿದಾಗ ಅಥವಾ ಆ ಭಾವದ ಸತ್ಯ ಅರಿವಿಗೆ ಬಂದಾಗ ಬಿಟ್ಟು ಬಂದವನೆಡೆಗೆ ತಿರುಗಿ ಬಂದು ಅದೇ ಹಳೆಯ ಪ್ರೀತಿಯಿಂದ ಮಾತಾಡಿಸುವವರೂ ಕಡಿಮೆಯೇ...
ಆಗೆಲ್ಲ ಪಡೆದ ಖುಷಿ, ಕಳಕೊಂಡ ಬೇಸರ ಎರಡನ್ನೂ ಮತ್ತೆ ಇಲ್ಲೇ ಬರೆದು ನಿಸೂರಾಗಿದ್ದೇನೆ... 
ಅದಕೇ ಅಂದದ್ದು ಈ ಬ್ಲಾಗ್ ಒಂಥರಾ ನನ್ನ ಸಾರ್ವಜನಿಕ ಡೈರಿ ಅಂತ...:)

ನಾಲ್ಕು ವರ್ಷಗಳೆಂದರೆ ನನ್ನ ಮಟ್ಟಿಗೆ ಸುದೀರ್ಘ ನಡಿಗೆಯೇ... 
ಬರೆದ ಸಾಲುಗಳ ತೂಕ ಎಷ್ಟಿದೆಯೋ ಅರಿವಿಲ್ಲ ಎನಗೆ...
ಸಾಹಿತ್ಯದ ಪ್ರಕಾರಗಳ ತಿಳುವಳಿಕೆ, ಹಂಗು, ಗುಂಗು ಒಂದೂ ಇದ್ದವನಲ್ಲ... 
ಆದರೆ ಬರೆದಾದ ಮೇಲೆ ಮೂಡಿದ ಎದೆಯ ಹಗುರತೆಗೆ ಬೆಲೆ ಕಟ್ಟಲಾರೆ ನಾನು... 
ಆ ಕ್ಷಣದ ಎನ್ನೆದೆಯ ಸತ್ಯಗಳಿಗೆ, ಭಾವಗಳಿಗೆ ಪದಗಳ ಚೌಕಟ್ಟು ಕೊಟ್ಟ ಪ್ರತೀ ಬಾರಿಯೂ ನಿರಾಳವಾಗಿದ್ದೇನೆ...
ಅಲ್ಲದೇ ಹೊಸ ಭಾವಕ್ಕೆ, ಹೊಸ ಆತ್ಮಶಕ್ತಿಗೆ ಪಕ್ಕಾಗಿದ್ದೇನೆ...
ಅದೇನು ಅಂಥ ಸಣ್ಣ ಸಾರ್ಥಕ್ಯ ಅಂತನ್ನಿಸಲ್ಲ ನನಗೆ...

ಆ ಅಂತೆಲ್ಲ ನನ್ನೆದೆಯ ಭಾವಗಳು ನಿಮ್ಮದೂ ಅಂತನ್ನಿಸಿ, ಅಲ್ಲಿ ನಿಮ್ಮೆದೆಯಲ್ಲಿ ಇನ್ನಷ್ಟು ವಿಸ್ತಾರವಾಗಿ ಬೆಳೆದದ್ದಿದ್ದರೆ, ನೀವು ಓದಿದ ಆ ಕ್ಷಣ ನಿಮ್ಮೆದೆಯ ಭಾರ ಏರಿಳಿದಿದ್ದಿದ್ದರೆ ಇನ್ನೇನು ಬೇಕು ಬರೆದ ಜೀವಕ್ಕೆ...........

ಎದೆಯ ಭಾವಗಳ ಒರತೆಗೂ ವಸಂತ, ಗ್ರೀಷ್ಮಗಳ ಒಡನಾಟವಿದೆ...
ನನ್ನೆದೆಯ ಹೆಚ್ಚಿನ ಒಡನಾಟ ಗ್ರೀಷ್ಮದೊಂದಿಗೇ...
ಅದಕೇ ನೋವನೇ ಹೆಚ್ಚು ಬರೆದಿದ್ದರೆ ತಪ್ಪು ನನ್ನದಲ್ಲ...
ಅದು ಬದುಕಿನ ಕರುಣೆಯ ಪ್ರಸಾದ...
ನೋವನೇ ಹೆಚ್ಚು ಬರೆದಿದ್ದರೂ ಜೀವಿಸಿದ್ದು ನೋವ ಕೊಂದು ಮೆರೆದ ನಗುವನ್ನ ಎನ್ನುವುದು ನನ್ನೆಡೆಗೆ ನನಗಿರೋ ಅಭಿಮಾನ...
ನೋವು ಮೌನವಾಗಿ ಹೆಪ್ಪುಗಟ್ಟಿ ಹಿಮವಾಗಿ ದೂರನಿಲ್ಲುವ ಬದಲು ಮಾತಾಗಿ ನದಿಯಾಗಿ ಹರಿದು ಇಕ್ಕೆಲಗಳಲಿ ನಗೆಯ ಹಸಿರ ಚಿಮ್ಮಿಸಲಿ ಅಂದುಕೊಳ್ತೇನೆ...
ಈ ನಾಲಕ್ಕು ವರ್ಷಗಳನು ಅದನೇ ನಂಬಿ ಅದನೇ ಬರೆದು ಹಗುರಾಗುತ್ತ ಬಂದೆ...
ನನ್ನೊಳಗಿಂದು ಒಂದಿಷ್ಟು ನಗುವಿದೆ...
ಓದಿದ ನಿಮ್ಮೊಳಗೇನು ಮೂಡಿತೋ ಅಷ್ಟಾಗಿ ಅರಿವಿಲ್ಲ...
ನಿಮ್ಮ ಓದಿನ ಪ್ರೋತ್ಸಾಹ ಹಾಗೇ ಇರುವುದ ಕಂಡು ನಿಮ್ಮಲೂ ನಗುವೇ ಮೂಡಿದೆ ಎಂಬ ನಂಬಿಕೆಯಲಿದ್ದೇನೆ...

ಇನ್ನೆಷ್ಟು ಕಾಲ ಬರೆದೇನೋ ಗೊತ್ತಿಲ್ಲ...
ಗೊತ್ತಿರುವುದು, ಹೇಳಬೇಕಿರೋದು ಇಷ್ಟೇ - 
ಭಾವ ಪದವಾಗಿ ಆಚೆ ಬಂದ ಮರು ಘಳಿಗೆ ಅದು ಕೇವಲ ನನ್ನದು ಮಾತ್ರವಾಗಿರುವುದಿಲ್ಲ...
ಅದಿಲ್ಲಿ ಭಾವಗಳ ಗೊಂಚಲಿನ ಒಂದು ಗೊಂಚಲಾಗಿ ನಿಮ್ಮ ಸೇರುತ್ತಲಿರುತ್ತದೆ...
ನಿಮ್ಮ ಪ್ರೀತಿಯ ಮಡಿಲ ಬಗ್ಗೆ ಪೂರ್ಣ ನಂಬಿಕೆ ನನ್ನಲ್ಲಿ...
ಆ ನಿಮ್ಮಗಳ ಮಡಿಲ ತಂಪು ನನ್ನ ಸದಾ ಕಾಯುತ್ತಲೇ ಇರುತ್ತೆ... 
ಭಾವ ತೀರದ ಪಯಣ...
                                                        ವಿಶ್ವಾಸ ವೃದ್ಧಿಸಲಿ – ಶ್ರೀವತ್ಸ ಕಂಚೀಮನೆ.

Thursday, January 15, 2015

ಗೊಂಚಲು - ನೂರಾ ಮೂವತ್ತು ಮತ್ತೆಂಟು.....

ಜಂಗಮ ಭಾವಗಳು.....

ಸಾವನ್ನು ಮತ್ತೆ ಮತ್ತೆ ಖಚಿತ ಪಡಿಸಿಕೊಳ್ಳೋ ನರಕ ಸುಖಕ್ಕೆ ನಿತ್ಯ  ಸಾಕ್ಷಿಯಂತೆ ಕಾಣೋ ಉದ್ದುದ್ದ ಕಾರಿಡಾರು...
ಬಾಗಿಲಾಚೆ ಕಾಯುತ್ತ ಕುಂತ ಆತಂಕದ ಬೆಂಕಿ ಉರಿವ ಹತ್ತಾರು ಕಂಗಳು...
ಒಳ ಕೋಣೆಯಿಂದ ಭರವಸೆಯ ಮಾತೊಂದು ತೂರಿ ಬರಲೆಂದು ಕಾತರಿಸೋ ಹಸಿದ ಎಷ್ಟೆಲ್ಲ ಕಿವಿಗಳು...
ಅದು ವೈದ್ಯ ನಾರಾಯಣರ ಭವನ...
ವೈದ್ಯ ರಾಜ ನಮಸ್ತುಭ್ಯಂ...

###

ಬದುಕ ಪಾತಳಿಯಲ್ಲಿ ಎಡವಿಬಿದ್ದ, ಎದ್ದು ನಿಂತ ಹಸಿ ಬಿಸಿ ಅನುಭವಗಳೆಲ್ಲವ ಸೋಸುತ್ತ ನಡೆದೆ – ಅಲ್ಲೆಲ್ಲೋ ಮಸ್ತಕದಾಳದಲ್ಲಿ ಒಂಚೂರು ತಿಳುವಳಿಕೆಯ ಕಿಟಕಿ ತೆರಕೊಂಡಿತು...
ಕಿಟಕಿಯಿಂದ ಬರೋ ವಿಚಾರಗಳ ಕಿರು ಬೆಳಕ ಪ್ರಖರತೆಗೇ ಕಣ್ಣು ಕುಕ್ಕುವಾಗ ಅನ್ನಿಸುತ್ತಿದೆ ಈಗ – ಮುಗ್ಧತೆಯ ಹೆಸರು ಹೊದ್ದ ಅಜ್ಞಾನದ ಸೆಳವಿನಲ್ಲಿ ತೇಲಿದಷ್ಟು ಸುಲಭವಿಲ್ಲ ಜ್ಞಾನದ ಕಿರುದಾರಿಯಲಿ ತೆವಳುವುದು...!!!

###

- ಜಂಗಮನ ಜೋಳಿಗೆಯ ತುಂಬಾ ಹಾದಿ ತಪ್ಪಿದ ಕಥೆಗಳು...
- ಮತಿಹೀನ ಅಲೆಮಾರಿಯ ಕೈಯಲ್ಲಿ ಸ್ನೇಹದ ಭಿಕ್ಷಾಪಾತ್ರೆ...
- ಕರುಣೆಯ ಹಂಗಿಲ್ಲದ ಪ್ರೀತಿಯ ಒಡನಾಟದ ನಿರಂತರ ಹುಡುಕಾಟ...
- ಬದುಕಿದು ಬರೀ ವೈರುಧ್ಯಗಳನೇ ಮಾರುವ ವಿಚಿತ್ರ ತೆವಲಿನ ವ್ಯಾಪಾರೀ ಮಳಿಗೆ...


###

ಮನದ ಜಗುಲಿಯ ತುಂಬೆಲ್ಲಾ ಸೂತಕದ ಮುನ್ಸೂಚನೆಯ ಗಾಢ ವಾಸನೆ...
ಸಾವು ದೇಹದ್ದೇ ಆಗಬೇಕಿಲ್ಲ, ಭಾವದ್ದೂ ಆಗಬಹುದು...
ನೋವಿನ ತೀವ್ರತೆಯಲ್ಲಿ ಎರಡೂ ಸಮಾನ ಸ್ಥಾಯಿಯಲ್ಲಿ ನಿಲ್ಲುತ್ತವೆ - ಎದುರಲ್ಲೇ ನಿಂತು ಸಾವ ನೋಡುತ್ತಲಿರಬೇಕಾದವರ ಕಣ್ಣಲ್ಲಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)