Thursday, January 30, 2014

ಗೊಂಚಲು - ಒಂದು ಸೊನ್ನೆ ಆರು.....

ಹಾಗೀಗೆ.....
(ಆಗೀಗ ಕಾಡುವ ಭಾವಗಳು...)

ಕತ್ತಲೆಯ ತಬ್ಬಿ ನಾ ಕಿರುಬೆರಳಲಿ ಬರೆದ ಮಧುರ ಕಾವ್ಯ – ನಿನ್ನ ಬೆತ್ತಲೆ ಬೆನ್ನ ಹಾಳೆಯ ಮೇಲೆ ನನ್ನ ಹೆಸರು...

***

ಕನಸುಗಳು ಓಡಾಡದ ಕೇರಿಯಲ್ಲಿ ಬದುಕ ಕಾವ್ಯ ಕಟ್ಟ ಹೊರಟವನಿಗೆ ಕತ್ತಲೆಯೇ ಆತ್ಮ ಸಂಗಾತಿ...

***

ಮನಸಿಂದು ಕನಸುಗಳ ಹೆಣದ ಮನೆ...
ಅಲ್ಲಿ ಪ್ರಜ್ಞಾಪೂರ್ವಕವಾಗಿ ಹಚ್ಚಿಟ್ಟ ನಗೆಯ ಹಣತೆಯ ಸುತ್ತ ಕೂಡ ಹೆಣದ್ದೇ ವಾಸನೆ...

***

ಅಂಗಳದಲ್ಲಿ ನಗೆಯ ಹಣತೆ ಹಚ್ಚಿಟ್ಟಿದ್ದೇನೆ - ಹೊರಗೆಲ್ಲ ತಂಪು ಬೆಳಕು...
ಒಳಮನೆಯ ಕತ್ತಲಿಗೆ ಹೊರಗಣ ಬೆಳಕ ದರ್ದಿಲ್ಲ - ಅಲ್ಲಿ ನಿತ್ಯವೂ ನಿರಂತರ ಕನಸುಗಳ ಗರ್ಭಪಾತ...
ತಡೆಯೋಣವೆಂದರೆ ಕಾಲನಿಗೆ ನಮ್ಮ ಯಾವ ಕಾನೂನುಗಳ ಹಂಗೂ ಇಲ್ಲವಲ್ಲ...

*** 

ಖಾಲಿ ಖಾಲಿ ಕಾಗದದ ಹೂವು ನಾನು...
ನೋಟಕ್ಕೆ ಹೂವು ಚಂದವೇ – ಬಣ್ಣ, ಗಂಧಗಳಿಲ್ಲ ಅಷ್ಟೇ – ಅರಳಿ ನಗುವ ಜೀವಂತಿಕೆ ಕೂಡ...
ಹಾಂ, ಸಹಜವಾದುದಲ್ಲವಾದರೂ ಬಣ್ಣವ ಬಳಿಯಹುದೇನೋ ಅಷ್ಟಿಷ್ಟು – ಆದರೆ, ಉಸಿರನೆಲ್ಲಿಂದ ತುಂಬಲಿ...

***

ಅವತ್ತೊಂದಿನ ಪುಟ್ಟ ಗೆಳತಿ ಹೇಳಿದ್ದಳು “ಏನಕ್ಕೋ ಅಷ್ಟೊಂದು ನಕ್ಕಿದ್ದು – ಯಾಕೋ ಭಯವಾಯಿತು...”
ಮತ್ತೊಬ್ಬ ಗೆಳತಿಯಿಂದ ಮೊನ್ನೆ ಮತ್ತದೇ ಮಾತು “ತುಂಬಾನೇ ನಗ್ತೀಯಪ್ಪ – ನೀ ಖುಷಿಯಾಗಿಲ್ಲ ಅನ್ನಿಸುತ್ತೆ...”
ಅರೇ ತುಂಬು ನಗೆಯೂ ಅಳುವಿನಂತೆ ಕೇಳಿಸುತ್ತಾ...!!!!
ಚಿಕ್ಕವರಿದ್ದಾಗ ಅಮ್ಮ ಅಂತಿದ್ದ ಮಾತು ನೆನಪಾಯ್ತು – ತುಂಬ ನಗಬೇಡ್ರೋ ಆಮೇಲೆ ಅಳಬೇಕಾಗುತ್ತೆ...
ಅಳುವ ಮುಚ್ಚೋದಕ್ಕಾಗಿ ನಗುವುದಾ...?
ಮತ್ತೆ ಅಳಬೇಕಾಗುತ್ತೆಂದು ನಗದೇ ಇರುವುದಾ...??
ಅಳು ಮತ್ತು ನಗು ಎರಡೂ ಉಳಿಸಿ ಹೋಗುವುದು ಒಂದು ಹನಿ ಕಣ್ಣೀರು, ಒಂದು ಸಣ್ಣ ಮೌನ ಅಷ್ಟೇ ಅಲ್ಲವಾ...
ಆದರೂ ನಗೆಯ ಮೌನಕೆ, ಅದರ ಕಣ್ಣೀರಿಗೆ ಬೇರೆಯೇ ಶಕ್ತಿ ಇದೆಯೇನೋ ಬಿಡಿ...
ಹಾಗೆಂದೇ ನನ್ನ ನಗು ಸುತ್ತಣವರಲ್ಲಿ ಒಂದು ಸಣ್ಣ ನಗು ಮೂಡಿಸಿದರೂ, ಅಳು ನುಂಗಿ ನಕ್ಕದ್ದಾದರೂ ಆ ನಗುವಿಗೆ ಸಾರ್ಥಕ್ಯವೇ ಅಲ್ಲವಾ...
ಆದರೂ, ನಗು ಉಕ್ಕಿ ನಗಬೇಕು ಆಗೀಗಲಾದರೂ...

***

ಸಂತೆಯ ನಡುವೆ ಕಳಕೊಂಡ ಶಾಂತಿ ಅಲ್ಲೇಲ್ಲೋ ಖಾಲಿ ಖಾಲಿ ದಾರಿಯ ಕತ್ತಲ ತಿರುವಲ್ಲಿ ದಕ್ಕಿಬಿಟ್ಟೀತು...
ಆದರೆ ಖಾಲಿ ಖಾಲಿ ಒಂಟಿ ದಾರೀಲಿ ಕಾಡುವ ಒಂಟಿತನ ಸಂತೆ ಮಡಿಲಲ್ಲೂ ಕಳೆದು ಹೋಗದೇ ಕೊಲ್ಲುವ ಪರಿಗೆ ಏನೆನ್ನಲಿ...
ಸುತ್ತೆಲ್ಲ ಮಾತು – ನಗುವಿನ ಘಂಟೆ ಜಾಗಟೆ...
ಎದೆಯ ಗರ್ಭಗುಡಿಯ ತುಂಬೆಲ್ಲ ಶಾಶ್ವತ ಸ್ಮಶಾನ ಮೌನ...
ಅಲ್ಲೂ ದೀಪವೇನೋ ಉರಿಯುತ್ತಿದೆ – ಆದರೆ ಸಾವಿನ ಮನೆಯ ದೀಪ  ಕೂಡ ನೋವನ್ನೇ ಪಸರಿಸುತ್ತಲ್ಲವಾ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Saturday, January 25, 2014

ಗೊಂಚಲು - ಒಂದು ಸೊನ್ನೆ ಐದು.....

ಮೊದಲ ಬೆತ್ತಲೆ ಇರುಳು.....
(ಪೋಲಿ ಪೋಲಿ ಪ್ರಲಾಪ...)

ಮಾಗಿಯ ಛಳಿಯ ಇರುಳೊಂದು ಮಗುವ ನಗುವಂತೆ ಮಧುರವಾಗಿ ಬಿಚ್ಚಿಕೊಳ್ಳುತ್ತಿದೆ...

ನಾವಿಬ್ಬರೂ ಇಷ್ಟಿಷ್ಟಾಗಿ ಹತ್ತಿರಾಗುತ್ತ, ಹಸಿಯಾಗುತ್ತ, ಬಿಸಿಯಾಗುತ್ತ – ಹಿತವಾದ ನಡುಕಕ್ಕೆ ಪಕ್ಕಾಗುತ್ತ – ನಾಚಿಕೆ, ದುಗುಡಗಳ ತೆರೆಗಳ ಜತೆ ಜತೆಗೆ ದೇಹವ ತಬ್ಬಿದ ತೆರೆಗಳನೂ ಕಳಚಿಕೊಳ್ಳುತ್ತ, ಬಯಲಾಗುತ್ತ – ಕೆರಳಿ, ಅರಳುವ - ತೋಳ ಬಂಧ, ಕಾಲ ಇಕ್ಕಳಗಳಲಿ ಕಾಲನ ಮರೆಯುವ ಮಧುರ ಘಳಿಗೆಗೆ ಓಂಕಾರ...

ನಿನ್ನ ಏರಿಳಿಯುವ ಬಿಸಿಯುಸಿರ ಚಂಡಮಾರುತಕೆ ಸಿಕ್ಕಿ ನನ್ನೆದೆಯ ರೋಮಗಳೆಲ್ಲ ಕಕ್ಕಾಬಿಕ್ಕಿ...

ನನ್ನ ಒರಟು ಹಸ್ತಗಳ ರುದ್ರ ನರ್ತನಕೆ ಮೃದುವಾಗಿ ದಕ್ಕಿದ ನಿನ್ನೆದೆ ಗೊಂಚಲ ಯೌವನದ ಮಧುರ ಚೀತ್ಕಾರ...

ಉಸಿರುಗಳ ರಣ ಕಹಳೆ – ತುಟಿ, ಕಟಿಗಳ ಯುದ್ಧೋನ್ಮಾದ...

ನಮ್ಮೀರ್ವರ ಮೈಯ ಮೈದಾನವೇ ಮಧುರವಾಗಿ ನಲಿದು ನಲುಗುವ ಯುದ್ಧಭೂಮಿ...

ಸೊಕ್ಕಿದ ಯೌವನದ ಬೆತ್ತಲೆ ರಣೋತ್ಸಾಹದ ಬಿಸಿಯ ಕಂಡು ಮಂದ ಬೆಳಕಿನ ತಂಪು ಕತ್ತಲಿಗೂ ಹಸಿ ಬಿಸಿ ರೋಮಾಂಚನ...

ತೆಕ್ಕೆಗಳ ನೇರ ಬಿಗಿ ಬಂಧಕೆ ಸಿಕ್ಕ ಮೈಯ ಕಣ ಕಣವೂ ಒದ್ದೆ ಮುದ್ದೆ - ಬೆವರ ಹನಿ ಹನಿಯಲ್ಲೂ ಬೆರೆತ ಹೊಸಕಿ ಹೋದ ಮಲ್ಲಿಗೆಯ ಕಂಪು...

ಕಿಬ್ಬೊಟ್ಟೆಯಾಳದಲೆಲ್ಲೋ ಮೇಘಸ್ಪೋಟ...

ನಿನ್ನೊಡಲೊಳಗೆ ನಾ ಮೊದಲ ಮಳೆಯಾಗಿ ಧುಮ್ಮಿಕ್ಕೋ ಮತ್ತು ನೀ ನನ್ನ ಹೀರಿ ಜೀವದಾಯಿಯಾಗೋ ದಿವ್ಯ ಘಳಿಗೆಯ ಸಂಭ್ರಮದ ತೀವ್ರತೆ ಎಷ್ಟೆಂಬುದನು ನಿನ್ನ ಕಂಕುಳ ಏರಿಯಲಿನ ನನ್ನ ಹಲ್ಲಿನ ಗುರುತು ಮತ್ತು ನನ್ನ ಬೆನ್ನ ಬಯಲಲ್ಲಿ ನಿನ್ನುಗುರುಗಳು ಬಿಡಿಸಿದ ಚಿತ್ರ ವಿಚಿತ್ರ ಚಿತ್ತಾರಗಳೇ ಹೇಳುವುದಲ್ಲವೇನೇ ಸಖೀ...

ಹೊರಳಿ ಅರಳಿದ ಈ ಉತ್ತುಂಗದಲ್ಲಿ ಎಷ್ಟೆಲ್ಲ ದಕ್ಕಿಸಿಕೊಂಡೂ ಏನೊಂದೂ ಅರಿವಿಗೆ ಬಾರದಂಥ ಉನ್ಮತ್ತ ಸ್ಥಿತಿ – ಆಡಿದ್ದು, ಉಸುರಿದ್ದು, ಕೊಟ್ಟ, ಪಡೆದ ಲೆಕ್ಕವೆಲ್ಲ ಮರೆತು ಹೋದಂಥ ಹಗುರ ಹಗುರ ಭಾವ...

ಮುತ್ತಿಗೆ, ಮತ್ತಿಗೆ ಮಾತಿನ ಹಂಗಿಲ್ಲ – ಸುಖದ ಸುಸ್ತಿಗೆ ಮದ್ದು ಬೇಕಿಲ್ಲ – ನಾಳೆ ಈ ಅನುಭವವ ವಿವರಿಸಲಾಗದಿದ್ದರೂ ಈ ಕ್ಷಣದ ಅನುಭಾವದ ಗುಂಗು ಎಂದೂ ಮಾಯಲ್ಲ...

ಮೊದಲ ಮಳೆಯ ಆರ್ಭಟಕೆ ಸಿಕ್ಕಿ ಸುಖದ ಸುಸ್ತಲ್ಲಿ ಮತ್ತಷ್ಟು ಮೆದುವಾದ ನೀನೀಗ ಗಂಧವತೀ ವಸುಧೆ...

ಸುರಿದು ಬರಿದಾಗಿ ಹಗುರಾಗಿ ತೃಪ್ತವಾಗಿ ಮೈಚಾಚಿದ ನಿರರ್ಭರ ಬಾನು ನಾನೀಗ...

ಕಪ್ಪು ಹುಡುಗೀ ನಿನ್ನ ಹೊಳೆವ ವಿಗ್ರಹದಂಥ ಕಪ್ಪು ಮೈಮೇಲೆಲ್ಲೆ ನಾ ಮೂಡಿಸಿದ ಚಂದ್ರನ ಗುರುತು...

ನಂಗೊತ್ತು ನಿನ್ನ ಮುಚ್ಚಿದ ಕಣ್ಣುಗಳಲ್ಲೀಗ ಕುಲಾವಿ ಹೊಲಿಯುವ ಕನಸುಗಳ ತಾರಾಲೋಕ...

ಇಬ್ಬರ ಕನಸೊಂದು ಕವನವಾದ ಘಳಿಗೆ - ಇದು ನಮ್ಮೀರ್ವರ ಮೊದಲಿರುಳು...

***

ಸಸ್ನೇಹಿಗಳೇ -
ನನ್ನೀ “ಭಾವಗಳ ಗೊಂಚಲು” ಎಂಬ ಭಾವಗಳ ಮಿನಿಮಯ ತಾಣಕ್ಕಿಂದು ಮೂರು ವಸಂತ ಭರ್ತಿಯಾದ ಸಂಭ್ರಮ...

ಭಾವಗಳ ಹರಿಬಿಡುವ, ಬರೆದು ಹಗುರಾಗುವ, ಬರೆಯುತ್ತಲೇ ನಿಮ್ಮ ಭಾವಲೋಕವ ಸೇರುವ, ನಿಮ್ಮಗಳ ಸ್ನೇಹಲೋಕದಲಿ ಜೀಕುವ ನನ್ನಲಿನ್ನೂ ಆ ಮೊದಲ ದಿನದಲ್ಲಿದ್ದಂತದ್ದೇ ಭಾವೋನ್ಮಾದ...

ಭಾವ ಬಾಂದಳದಲ್ಲಿ ಬಾನಾಡಿಯಾಗುವಾಸೆ – ನಾಡಿ ಮಿಡಿತದ ಹಾಗೆ ಜೊತೆಗಿರುವಿರಲ್ಲ...

ವಿಶ್ವಾಸ ವೃದ್ಧಿಸಲಿ – ಶ್ರೀವತ್ಸ ಕಂಚೀಮನೆ.

Tuesday, January 14, 2014

ಗೊಂಚಲು - ಒಂದು ಸೊನ್ನೆ ನಾಕು.....

ಅದೇ ಹಾಳೆಯ ಬಿಡಿ ಬಿಡಿ ಸಾಲುಗಳು.....
(ಮನಸಿದು ನಿಜಕೂ ಕಲ್ಲಾಗಿರಬಾರದಿತ್ತೇ...)

ಸಂದೇಶವೊಂದು ನನ್ನ ತಲುಪಿತ್ತು - ಗೆಳೆಯಾ, ನೀ ಮನಸಿಗೆಷ್ಟೊಂದು ಆಪ್ತ ಆಪ್ತ... 
ಬದುಕಿಗೇನೋ ಸಾರ್ಥಕ್ಯ ಭಾವ - ಆಹಾ ಸ್ನೇಹ ಬಂಧ ಎಷ್ಟು ಚಂದ ಚಂದ...

ಕನ್ನಡಿಯೆದುರು ನಿಂತೆ - ಭ್ರಮೆಗಳೆಲ್ಲದರ ಪೊರೆ ಕಳಚಿ ಮನಸು ಕಂಗಾಲು ಕಂಗಾಲು...

ಮಾತಲ್ಲಿ ನಾನು ಸದಾ ಮನಸಿನ ಒಳಮನೆಯ ಅತಿ ಮುಖ್ಯ ಅತಿಥಿ - ಒಡನಾಟಕೆ ಹಂಬಲಿಸಿದರೆ ಮನದ ಹೊರಮನೆಯ ಅಂಗಳವೇ ನನ್ನ ಮಿತಿ...

ಛೆಛೆ..!! 
ಅವರ ಆರೋಪಿಸುವುದಾ - ತಪ್ಪು ಅವರದೇನಲ್ಲ - ಊನಗಳೇ ಮೈವೆತ್ತ ವ್ಯಕ್ತಿತ್ವ ಪಕ್ಕ ಹೆಜ್ಜೆ ಹಾಕ ಬಂದರೆ ಭಯವಾಗದಿದ್ದೀತಾ - ಎಷ್ಟೆಲ್ಲ ಜನ ನಡೆವ ಹಾದಿ - ನೋಡಿದವರಾದರೂ ಏನೆಂದುಕೊಂಡಾರು - ಕಳಿಸಿದ ಸಂದೇಶವೇನೂ ಪೂರ್ತಿ ಸುಳ್ಳು ಅಂತನ್ನಿಸಲ್ಲ... (ಸುಳ್ಳು ಅಂತ ಮನಸು ಒಪ್ಪಲು ತಯಾರಿಲ್ಲ...) - ಹಾಗಂತ ನೋಡುಗರ ಕಣ್ಣ ಸಂದೇಹವ ಇವರಿಂದ ಸಹಿಸಲಾಗುವುದೂ ಇಲ್ಲ... (ಆದರೂ ಈ ನೋಡುಗರು ನನ್ನನ್ನು ಮಾತ್ರ ಸಂದೇಹಿಸುವುದರ ಗುಟ್ಟೇನೋ ಎಂಬುದು ಅರಿವಾಗುತ್ತಿಲ್ಲ... ಅವರೆದುರು ನಾ ಅಷ್ಟೊಂದು ಕೆಟ್ಟದಾಗಿ ವರ್ತಿಸುತ್ತೇನಾ..??) - ಹೆಳವ ಕನ್ನಡಿಯೆದುರು ನಿಂತಾಕ್ಷಣ ಸುಂದರಾಂಗನಾದಾನಾ - ಯೋಗ್ಯತೆ ಇಲ್ಲದೇ ನಿರೀಕ್ಷೆಗಳ ಬೆಳೆಸಿಕೊಂಡದ್ದು ನನ್ನದೇ ಮನದ ತಪ್ಪು ಬಿಡಿ...

ಅವರ ಮನದ ಭಾವ ಪ್ರಾಮಾಣಿಕವಾಗಿ ನನ್ನೆದುರು ಮಾತಾಗಿದ್ದರೆ ನಾನೇ ಒಂಚೂರು ಅವರಂತಾಗಿ ಅಂಗಳಕೂ, ಒಳಮನೆಗೂ ನಡುವಿನ ಗೋಡೆ ಒಡೆದು ಕಿಂಡಿಯನಾದರೂ ಕೊರೆಯಬಹುದಿತ್ತು - ಆದರೆ ಮೌನ ಅವರ ಮೂಲ ಸ್ವಭಾವ...

ನಾನೇ ಒತ್ತಾಯದಿಂದಾದರೂ ಮಾತಾಗೋಣವೆಂದರೆ ನನ್ನ ಬುದುಕು ನಂಗೆ ಕರುಣಿಸಿದ ಅಸಹಾಯ ಪರಿಸ್ಥಿತಿಗಳ ಒತ್ತಡ ಅದಕೂ ಎಡೆಕೊಡುತಿಲ್ಲ - ಬಿಡಿ ಭರವಸೆ ಮೂಡಿಸಲಾರದ ನನ್ನದೇ ಅಯೋಗ್ಯತೆಗೆ ಯಾರನ್ನ ಹೊಣೆ ಮಾಡಲಿ...

ಗಾವುದ ಗಾವುದ ದೂರ ನಿಂತು ಹತ್ತಿರ ಅನ್ನುವ 'ಮಾತು' ಕೇಳಿ ಅದೇ ಭ್ರಮೆಯಲ್ಲಿ ಬದುಕುವುದರಲ್ಲೇ ಸುಖವಿದೆಯೆನ್ನಿಸುತ್ತೆ - ಹತ್ತಿರ ಹೋಗಿ ಮಿತಿಯ ಸ್ಪಷ್ಟಪಡಿಸಿಕೊಂಬುದಕಿಂತ - ಮಿತಿಗಳ ಒಪ್ಪದ ನನ್ನ ಮನಸಿಗೆ - ಜತೆಗೇ ಮಿತಿಯ ಅರಿವಾದದ್ದೂ ನಿರಾಳ ಅಂತಲೂ ಅನ್ನಿಸುತ್ತೆ ಇನ್ನೊಮ್ಮೆ...

ಆದರೂ ಒಳಮನೇಲಿ ನನಗೆ ಮಾತ್ರ ಜಾಗ ಕೊಡಿ ಅಂದಿರಲಿಲ್ಲ ನಾನು – ನನಗೂ ಚೂರು ಜಾಗ ಇದ್ದಿದ್ದರೆ ಚೆನ್ನ ಅಂತಷ್ಟೇ ಅಂದುಕೊಂಡೆ – ಆತ್ಮೀಯ ಅಂದರಲ್ಲ, ಅಂದಂತೆ ನಡೆವ ಸ್ನೇಹಬಂಧವನಷ್ಟೇ ನಾ ಬಯಸಿದ್ದು ಅಲ್ಲಿ – ಆ ನನ್ನ ಬಯಕೆ ಇನ್ಯಾರದೋ ಕಣ್ಣಿಗೆ ಹೇಗೆ ಹೇಗೋ ಕಂಡರೆ ಬೇಸರವೇನಿಲ್ಲ ನಂಗೆ ಅದು ಅವರ ದೃಷ್ಟಿ ದೋಷ ಅಷ್ಟೇ – ಆದರೆ ಅಷ್ಟೆಲ್ಲ ಕಾಲ ಒಡನಾಡಿದ ಮೇಲೂ ಇವರಿಗೂ ನನ್ನೀ ಬಂಧದಲ್ಲಿ ಕಸರು ಕಂಡಿತಾದರೆ ನನ್ನನೇ ಅನುಮಾನಿಸಿಕೊಳ್ಳಬೇಕಲ್ಲವಾ ನಾನು...

ಒಳಮನೆಯ ನೋವು ನಲಿವುಗಳಲೆಲ್ಲ ನಿನ್ನದೇ ನೆನಪು, ಅಲ್ಲಿ ನೀ ಶಾಶ್ವತ ಭರವಸೆಯ ಆಪ್ತ ಸ್ನೇಹಿತ ಅಂದದ್ದು ನಾ ದೂರವಿದ್ದಾಗ – ಅಂಗಳಕೆ ಕಾಲಿಟ್ಟರೆ ಒಳಮನೆಯ ಮುಂಬಾಗಿಲಿಗೇ ಭದ್ರ ಬೀಗ – ಹೊಸ ಬಂಧಗಳೆಡೆಗೆ ಕೈಚಾಚಲೂ ಸಣ್ಣ ಭಯ ಈಗ...

ಆದರೂ ನಾ ಬದುಕಿದ ರೀತಿಗೆ, ನನಗಿರುವ ಯೋಗ್ಯತೆಗೆ, ಈ ಅಸಹಾಯ ಒಂಟಿ ಒಂಟಿ ದಾರಿಗೆ ಅಂಗಳದ ಆಥಿತ್ಯ ಮತ್ತು ಸಂದೇಶದ ಶಬ್ದಗಳ ಪ್ರೀತಿ ನೀಡಿದ್ದು ಕೂಡ ಅವರ ಹಿರಿತನವೇ – ನನ್ನ ವ್ಯಕ್ತಿತ್ವದಲ್ಲಿ ಅಷ್ಟೆಲ್ಲ ಊನಗಳಿದ್ದೂ, ನಿರ್ಭೀತ ನಂಬಿಕೆ ತುಂಬಲಾರದವನಾಗಿದ್ದರೂ ನನ್ನಂಥವನ ಜತೆಗೂ ಒಂದಿಷ್ಟು ನಕ್ಕರಲ್ಲ ಅದು ಆಶ್ಚರ್ಯ ಮತ್ತು ಅಧಿಕವೇ ನನ್ನ ಪಾಲಿಗೆ...

ಎಲ್ಲೋ ಏನೋ ಅಪಸ್ವರಗಳು ಮಿಡಿದಾಗ, ನಿರೀಕ್ಷೆ ಹುಸಿಯಾದಾಗ, ಇಟ್ಟ ನಂಬಿಕೆ ಸಣ್ಣಗೆ ಅಲುಗಾಡಿದಾಗ, ನನ್ನಂತರಂಗದ ಅರಿವಿದ್ದೂ (?) ಅರಿವೇ ಆಗದವರಂತೆ ಒಡನಾಡಿದಾಗ - ಆಗೆಲ್ಲ ಮನಸು ಕಂಗಾಲಾಗುವುದು ಸತ್ಯವೇ ಆದರೂ ಎಲ್ಲ ವೈರುಧ್ಯಗಳಾಚೆ ಈ ಸ್ನೇಹ ಎಷ್ಟು ಚಂದ...

ಬದುಕು ಇಷ್ಟಾದರೂ ನಗಲು ಕಾರಣರಾದ ಅಂತೆಲ್ಲ ಸ್ನೇಹಗಳಿಗೆ ಸಲಾಮ್...

***

ಬಾನ ಅಂಗಳದಿ ನನ್ನ ಪ್ರೀತಿಯ ಚಂದಿರನ ಹೆಣ ತೇಲೋ ರಣ ರಣ ಉರಿ ಹಗಲು – ಗುಡ್ಡದ ತುದಿಯ ಬೋಳು ಬಂಡೆ – ಕೂತು ಹಿಂದಿದ್ದ, ಇಂದು ತೊಟ್ಟು ಕಳಚಿಕೊಂಡ ಹಸಿರ ನೆನೆಸಿಕೊಳ್ಳೋ ನಾನು – ನಾಳೆಯೂ ಬರೋದು ಗ್ರೀಷ್ಮವೇ ಎಂಬ ಭಯ – ಯಾರೆಲ್ಲ ಜತೆಗಿದ್ದೂ ಮನಸನ್ನು ತಬ್ಬಿದ ಶಾಶ್ವತ ಒಂಟೊಂಟಿ ಭಾವ – ಪ್ರತಿಕ್ಷಣವೂ ಹಿಂಡುವ ಎಂದೂ ತುಂಬದ ಹಸಿದ ಮನಸಿನ ಭಾವಗಳನು ನಕ್ಕು ಅಣಕಿಸುವ ಅಸಂಬದ್ಧ ಉಸಿರ ಏರಿಳಿತ – ಮನದ ಅಂಗಳದ ತುಂಬಾ ರಾಶಿ ರಾಶಿ ಕನಸುಗಳ ಹೆಣಗಳ ಮೆರವಣಿಗೆ – ನಾನೊಬ್ಬ ಮೂಕ ಪ್ರೇಕ್ಷಕ...

***

ಮನಸಿದು ಮಲೆನಾಡು:
ಒಮ್ಮೆ ಬೋಳು ಬೋಳು – ಇನ್ನೊಮ್ಮೆ ಗಾಢ ಹಸಿರು – ಖಗ, ಮೃಗಗಳ ಘಲಘಲ – ನಡುವೆಯೇ ನೀರವ ಮೌನ – ಬೀಸು ಗಾಳಿ – ಸ್ಥಬ್ದ ಕಾಲ – ಅಲ್ಲಲ್ಲಿ ಬರಡು ಬಯಲು - ಒಳಗೆಲ್ಲೋ ಝರಿ ತೊರೆಗಳ ಜಲಲ ಧಾರೆ – ಉರಿವ ನಿಗಿ ನಿಗಿ ಹಗಲು – ಇರುಳ ಚಂಚಲ ಬೆಳದಿಂಗಳು –ಸೆಳೆವ ಮೋಡ, ಸುರಿವ ಮಳೆ – ಹಲ ಕನಸುಗಳ ಬೆಳೆ – ಜೀವ ರಕ್ಷಕ, ಜೀವ ಭಕ್ಷಕಗಳೆರಡೂ ಒಟ್ಟೊಟ್ಟಿಗೆ ಉಸಿರಾಡೋ ಜೀವದಾಯಿ – ತೊಟ್ಟು ಕಳಚಿದ ಹಳೆ ಎಲೆಯೇ ಗೊಬ್ಬರ ಹೊಸ ಚಿಗುರಿಗೆ – ನಿರ್ಮಲ – ನಿಗೂಢ – ಕೆಲವೊಮ್ಮೆ ನಿರ್ಭಾವದ ಠೇಂಕಾರ - ಕ್ಷಣ ಕ್ಷಣಕೂ ಹೊಸ ಹೊಸ ಜೀವ ಭಾವ ಸಂಚಾರ – ನೋವು, ನಗು, ಕನಸು, ಕನವರಿಕೆ... ಅದು ಮಲೆನಾಡ ಕಾಡು – ಅಂತೆಯೇ ನನ್ನ ಮನಸು ಕೂಡಾ...

Thursday, January 2, 2014

ಗೊಂಚಲು - ಒಂದು ಸೊನ್ನೆ ಮೂರು.....

ನಾ ಇತಿಹಾಸವಾಗುವ ಮುನ್ನ.....

ನಗುವೇ –
ಎಲೆ ಉದುರಿದ ಮರ ನಾನು – ತುಸುವಾದರೂ ನೀ ದಕ್ಕಿದರೆ ಮತ್ತೆ ಚಿಗುರಿಯೇನು...
ಹೂ ಅರಳಿಸಿ ಫಲಕೊಡ ಬೇಕಿಲ್ಲ, ಒಂದಿನಿತು ಹಸಿರ ಸೂಸುವಷ್ಟಾದರೂ ಒಳಸೇರು ಒಮ್ಮೆ ಬೇರು ಕೂಡ ಒಣಗಿ ಕಾಷ್ಠವಾಗುವ ಮುನ್ನ...
ಆ ಹಸಿರ ಸೊಂಪಿಂದ ಇನ್ಯಾರೋ ದಾರಿಹೋಕನಿಗೆ ಒಂಚೂರು ನೆರಳಾದೇನು... 
***
ಬದುಕೇ –
ಬಡ ಜೋಗಿ ನಾನು - ಮನದ ಜೋಳಿಗೆಯಲಿ ನೀ ನಕ್ಕ ಘಳಿಗೆ ನಾ ಶ್ರೀಮಂತ... 
ಹುಸಿಯೇ ಆದರೂ, ನಸುನಗುವನಾದರೂ ಬೀರೊಮ್ಮೆ ಈ ದೇಹದ ಬಿಸಿ ಆರುವ ಮುನ್ನ...
ಕೆಲ ಘಳಿಯಲಾದರೂ ನಾನೇ ನಾನಾಗಿ ನಲಿದೇನು...
***
ಒಲವೇ –
ಪಾಳು ಮನೆ ನನ್ನದು - ಮನದ ಮಂಟಪಕೆ ನೀ ಹೆಜ್ಜೆ ಇಟ್ಟ ಕ್ಷಣ ಕನಸುಗಳ ಪಟ್ಟಾಭಿಷೇಕ... 
ಅಪರಿಚಿತ ನೆರಳಂತಾದರೂ ಸುಳಿದು ಹೋಗೊಮ್ಮೆ ಈ ಉಸಿರ ಹಣತೆ ಆರುವ ಮುನ್ನ...
ಸುಳಿದಾಡಿದ ನಿನ್ನ ನೆನಪಲ್ಲೇ ಒಂದಿಡೀ ಜನ್ಮ ನಲಿವಿಗರಸನಂತೆ ಜೀವಿಸಿಯೇನು...
***
ಗೆಳತೀ - 
ಭಾವವಿಲ್ಲದ ಒಣ ಕವಿತೆ ನಾನು – ನೀ ಬದುಕ ತಬ್ಬಿದರೆ ಭಾವಗೀತೆಯಾದೇನು...
ಕವಿತೆಯ ಕೊನೆಯ ಚುಕ್ಕಿಯಂತಾದರೂ ಬೆರಳ ಸೋಕು ಒಮ್ಮೆ  ಎದೆಯ ಶಾಯಿ ಖಾಲಿಯಾಗುವ ಮುನ್ನ...
ರೆಕ್ಕೆ ಮೂಡಿದ ಮರಿ ಹಕ್ಕಿಯಾಗಿ ಭಾವದ ಬಾನಗಲ ಹಾರಿ ಹಾರಿ ನಲಿದೇನು...
***
ಮೌನವೇ –
ಹಿತವಲ್ಲದ ಮಾತು ನಾನು – ನೀ ರೂಢಿಗತವಾದರೆ ಒಂದಷ್ಟು ಹಿತಮಿತವಾದೇನು...
ಕೊಟ್ಟ ಕೆಲ ಮಾತುಗಳ ಉಳಿಸಿಕೊಂಬುದಕಾದರೂ ಇಷ್ಟೇ ಇಷ್ಟಾದರೂ ಮನದೊಡಲ ಸೇರು ಒಮ್ಮೆ ಶಾಶ್ವತವಾಗಿ ಈ ಉಸಿರೇ ನಿನ್ನೊಡಲ ಸೇರುವ ಮುನ್ನ...
ಒಂದಷ್ಟು ಭಾವ ಬಂಧಗಳಲಿ ಒಂಚೂರು ನಗೆಯ ತುಂಬಿ ಉಳಿದೇನು...
***
ನೋವೇ –
ನನ್ನ ಕರುಳಿನ ಹುಣ್ಣು ನೀನು – ನಿನ್ನಿಂದ ಓಡಲು ಹವಣಿಸುವ ಅಸಹಾಯ ಹೆಳವ ನಾನು...
ನಿನ್ನ ಹಂಚಿಕೊಂಬುವರಿಲ್ಲ – ನಿನ್ನ ನೆನಪ ಹಂಚಿಕೊಂಬುವವರೇ ಎಲ್ಲ...
ನೀನವರ ಸೋಕಿದ ಕ್ಷಣದಲ್ಲೇ ನಿನ್ನ ನನ್ನೊಡನೆ ಹಂಚಿಕೊಳ್ಳಬಲ್ಲ ಮನಸುಗಳ ಒಡನಾಟವನಾದರೂ ಕೊಡು ಒಮ್ಮೆ ನೀ ನನ್ನ ಕೊಲ್ಲುವ ಮುನ್ನ... 
ಅವರ ಹಗುರತೆಗೆ ಕಾರಣನಾದ ಭ್ರಮೆಯಲಾದರೂ ನನ್ನೊಳಿರುವ ನಿನ್ನನು ತುಸುವಾದರೂ ಮರೆತು ನಕ್ಕೇನು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)