Saturday, June 20, 2015

ಗೊಂಚಲು - ನೂರರ ಮೇಲರವತ್ತು.....

ಮಳೆಯ ಮರಿ ಸಾಲುಗಳು.....
(ಮುಂಗಾರಿನಲಿ ನೆನೆವಾಗ ಚಿಗುರಿದ ಭಾವಗಳು...)

ಭ್ರಮೆಗಳ ಗೂಡಿಂದಾಚೆ ಬಂದು ಅರಿವಿನ ಹಾದಿಯ ಏರನೇರಬೇಕಿದೆ...
ಮೌನವೇ ಕಿರು ಬೆರಳ ಭರವಸೆಯಾದರೂ ಆಗು ಬಾ...
ತುಸು ದೂರ ನಗುವಿನಾಸೆಯಿದೆ...
@@@
ಗವ್ವೆನ್ನೋ ವಾಸ್ತವದ ಕ್ರುದ್ಧ ಕತ್ತಲು - ಕಂಗೆಡಿಸೋ ಚಿತ್ರ ವಿಚಿತ್ರ ತಿರುವುಗಳ ಹಾದಿ - ಎಲ್ಲಾ ಜಗಳ, ಜಂಜಡಗಳ ಆಚೆಯೂ ಬೆಸೆದ ಬೆರಳುಗಳ ಸಡಿಲಿಸದ ಸ್ನೇಹಗಳು - ಬದುಕಿದು ಎನ್ನದು ಸ್ನೇಹಾನುಬಂಧಗಳ ಕರುಣೆಯ ಕೈತುತ್ತು...❤ ❤
@@@
ನಿತ್ಯವೂ ಹೊಸ ಭಾವದಿ ಕಾಡುವ ಕನಸವಳು - ಕಪ್ಪು ಹುಡುಗಿ...
ನನ್ನ ಘೋರಿಯ ಮೇಲರಳೋ ನಿಂಬೆ ಹೂವಿಗೂ ಅವಳದೇ ಘಮವಿದ್ದೀತು...
@@@
ಮಳೆಯ ನಾಕು ಹನಿಗೆ ನೆತ್ತಿ ತೋಯಿಸಿಕೊಂಡೆ - ಎಷ್ಟೆಲ್ಲಾ ನೆನಪಿನ ಮರಿಗಳು ಚಿಂವ್ ಚಿಂವ್ ಅನ್ನುತಿವೆ ಎದೆಯಲ್ಲಿ...
ಆ ಕಾಡು - ಮುಗಿಯದ ಕರುಳ ತಿರುವಿನಂಥ ಹಾದಿಗಳು - ಅಲ್ಲಿನ ನಿರ್ಭೀತ ಮೌನ - ನನ್ನೊಳಗಿನ ಸಾವಿರ ಗದ್ದಲ - ಕೈ ಹಿಡಿದು ಜೊತೆ ಬರುತಿದ್ದ ಹುಚ್ಚು ಕನಸುಗಳು...
ಇಲ್ಲಿ, ಈ ಮಹಾ ನಗರದ ಇಕ್ಕಟ್ಟು ಬೀದಿಗಳಲ್ಲಿ ಮಳೆಯೂ ಬಂಜೆಯೇ ಅನ್ನಿಸುತ್ತದೆ...
@@@
ಆಯೀ -
ಬದುಕಿಗೊಂದು ಕಾರಣ ಬೇಕೆಂಬುದಾದರೆ ಮಮತೆಯ ನಿನ್ನೊಲವೇ ನನ್ನೀ ಬದುಕಿಗಿರೋ ಕೊನೆಯ ಉದ್ದೇಶ...
@@@
ಪ್ರಶ್ನೆಯಾಗುಳಿಯದ ಅಥವಾ ಪ್ರಶ್ನೆಯೇ ಹುಟ್ಟದ - ಎದುರಾದದ್ದನ್ನು ಎದುರಾದ ಹಾಗೆಯೇ ಎದೆ ತೆರೆದು ಅನುಭವಿಸಿ ಹಿತವಾಗಿ ನಕ್ಕು ಮುನ್ನಡೆಯಬಹುದಾದ ಕೆಲವಾದರೂ ಘಳಿಗೆಗಳು ದಕ್ಕಲಿ ಎಂಬಾಸೆ ಬದುಕಿಗೆ...
@@@
ನಿತ್ಯ ದಿಂಬಿನಂಚನು ತೋಯಿಸೋ ಕಣ್ಣ ಹನಿಗಳು ಈ ಬದುಕನು ನೀ ಆಳಿದ ಪಳೆಯುಳಿಕೆಯ ಕಥೆ ಹೇಳುತ್ತವೆ...
ಈ ಮಳೆಯ ರಾತ್ರಿಗಳಲ್ಲಿ ನಿದ್ದೆಯ ಕಾಡುವ ಹಾಸಿಗೆಯ ಹಸಿವಿನ ಉರಿಗೆ ನಿನ್ನ ನೆನಪು ತುಪ್ಪವ ಸುರಿಯುತ್ತದೆ...
ಹಗಲಿಗೆ ಆಗೀಗ ನಿನ್ನ ಮುಗುಳ್ನಗು ಜೊತೆಯಾದರೆ ಅಂದಿನ ಸಂಜೆಯ ತಂಪಿಗೆ ಸಾವಿರ ಬಣ್ಣ...
ಈ ಬದುಕಿಗೆ ಇದೀಗ ನೀನೆಂಬ ನೀನು ಮುಗಿದ ಮಹಾ ಸಂಭ್ರಮ ಮತ್ತು ಉಳಿದು ಹೋದ ವಿಚಿತ್ರ ತಳಮಳದ ಪ್ರಶ್ನೆ...

 *** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Monday, June 8, 2015

ಗೊಂಚಲು - ನೂರಾ ಐವತ್ತೊಂಬತ್ತು.....

ಹೀಗೆಲ್ಲ ಅನ್ನಿಸುವಾಗ.....
(ನನ್ನ ನೆನಪೇ ನನ್ನ ಕನಸ ಕೊಲ್ಲುವಾಗ...)

ಖುಷಿಗಳೆಲ್ಲಾ ಅಲ್ಪಾಯುಷಿಗಳೇ...!!!
ಯಾರೋ ಹರಸಿಬಿಟ್ಟಂತಿದೆ ನೋವಿಗೆ : ದೀರ್ಘಾಯುಷ್ಮಾನ್ ಭವ...!!!
***
ಹೇ ಸಂಜೆ ಮಳೆಯೇ -
ಭೋರ್ಗರೆದುಬಿಡು ಒಮ್ಮೆ ; ಸಾವಿಲ್ಲದ ನೆನಪುಗಳು, ಎಂದೂ ತೀರದ ಸಾವಿರ ಬಣ್ಣದ ಆಸೆಗಳು, ಬದ್ಧತೆ ಇಲ್ಲದ ಮನಸು ಹುಟ್ಟು ಹಾಕೋ ತೆವಲುಗಳೆಲ್ಲ ಕೊಚ್ಚಿ ಹೋಗಬೇಕಿದೆ ನಿನ್ನೊಡನೆ...
ಜನ್ಮದೊಡನೆ ನಂಟು ಬೆಸೆಯೋ ವಿಕಾರಗಳ ವೀರ್ಯಕ್ಕೆ ಹುಟ್ಟೋ ಒಂದಿಷ್ಟು ಕನಸುಗಳನೂ ಸಾಯಿಸಬೇಕಿದೆ ನಿನ್ನ ಸಾಂಗತ್ಯದಲ್ಲಿ...
ಹಳೆಯ ದಾರಿಗಳನೆಲ್ಲ ಅಳಿಸಿ ಬದುಕ ಸಾರೋಟಿಗೆ ಹೊಸ ಹಾದಿಯ ತೋರಬೇಕಿದೆ...
***
ಹೇ ಸಾವೆಂಬೋ ಮಹಾ ಗುರುವೇ -
ನಿನ್ನಷ್ಟು ಪರಮ ಶ್ರದ್ಧೆಯಿಂದ ಬದುಕಿನ ಪಾಠ ಹೇಳುವ ಮತ್ತೊಬ್ಬನಿಲ್ಲ ಕಣೋ...
ಗುರು ದಕ್ಷಿಣೆಯ ಹರಿವಾಣದಲ್ಲಿ ಉಸಿರಿನೊಂದಿಗೆ ನನ್ನ ಗಳಿಕೆಯ ಒಂದಿಷ್ಟು ನಗೆಯನೂ ಇಟ್ಟು ಕೊಡುವಾಗ ಸುಳ್ಳೇ ಆದರೂ ಕಂಪಿಸದಿರು - ಮತ್ತೆ ಬದುಕಿಗಾಗಿ ನಿನ್ನೊಡನೆ ಕುಸ್ತಿಗಿಳಿದುಬಿಟ್ಟೇನು...
ಮೊದಲೇ ಮಹಾ ವ್ಯಾಮೋಹೀ ಹುಂಬ ಹುಡುಗ ನಾನು...
***
ನನ್ನೀ ಮನಕೆ ಸ್ನೇಹ, ಪ್ರೀತಿಯ ಒಡನಾಟದ ಭಾವ ಬಂಧಗಳಾಚೆ ನಗುವಿದ್ದರೆ ಅದು ಮಸಣದ ಮನೆಯಲ್ಲೇ ಇದ್ದೀತು...
***
ಹೇ ಅಲೆಗಳೇ -
ಬರಸೆಳೆದು ಒಳತಳ್ಳಿ ಬಿಡಿ ಎನ್ನ ನಿಮ್ಮ ಗರ್ಭದ ಮೌನದಾಳಕೆ...
ಜಗದೆಲ್ಲ ತಂತುಗಳಾಚೆಯ ನಿಶ್ಚಿಂತ ನಿದ್ದೆಯಲಿ ಹಗುರಾಗುವ ಬಯಕೆ ಮನಕೆ...
***
ಒಲವು ಒಲವನ್ನ ಹೆರಬೇಕು...
ಕನಸೊಂದು ಹೊಸದಿನ್ನೊಂದಾದರೂ ಕನಸ ಹೊತ್ತು ತರಬೇಕು...
ಆದರೆ -
ನೆನಹುಗಳ ರಕ್ಕಸ ಸಂತತಿಗಳು ಮತ್ತು ವಾಸ್ತವದ ಒಡೆದ ಕನ್ನಡಿ ಚೂರುಗಳು ಸೇರಿ ಮನದ ಗರ್ಭಕೋಶವನೇ ಬಗೆಯುವಾಗ ಬದುಕಿದು ನಗೆಯ ಬೆಳಕ ಹಡೆದೀತಾದರೂ ಹೇಗೆ...!!!
***
ಮತ್ತೆ ಮತ್ತೆ ಅನ್ನಿಸುತ್ತೆ ಪ್ರೇಮದ ಸೌಂದರ್ಯ ಮತ್ತು ವೈಫಲ್ಯ ಎರಡೂ ತನ್ನದು ಅಲ್ಲಲ್ಲ ಕೇವಲ ತನ್ನದು ಎಂಬುವ ಭಾವದ ತೀವ್ರತೆಯಲ್ಲೇ ಇದೆಯೇನೋ...
***
ಈ ನೆನಪುಗಳೊಂದಿಷ್ಟು ರಜೆ ತೆಗೆದುಕೊಂಡರೆಷ್ಟು ಚಂದವಿತ್ತು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Friday, June 5, 2015

ಗೊಂಚಲು - ನೂರು + ಐವತ್ತು + ಎಂಟು.....

ಸುಮ್ಮನೇ ಒಂದಿಷ್ಟು.....
(ಮನದ ಸುಸ್ತು ಅಕ್ಷರವಾಗಿ ಕರಗಿ...)

ಕಳೆಯಬೇಕಿದೆ ಸುಸ್ತು - ಇಳಿಸಿ ಮನದ ಭಾರ...
ನಿನ್ನೆ ಯಾವ ಯಾವುದೋ ಕಾರಣಗಳಿಂದಾಗಿ ಹುಟ್ಟಿಕೊಂಡ ಪ್ರೀತಿ ಇಂದು ಅವವೇ ಕಾರಣಗಳಿಗಾಗಿ ಹೆಳವಾಗಿ ಕೂತಾಗ ಮನಸು ಸೂತಕದ ಬಡ ಜೋಪಡಿ...
ತುಂಬಾನೇ ಭಾರ ಪ್ರೀತಿಯ ಹೆಣ - ಒಂಟಿಯಾಗಿ ಹೊತ್ತು ತಿರುಗಲು ಶಿವನೇ ಆಗಬೇಕೇನೋ...
ನಿಷ್ಕಾರಣ ಪ್ರೀತಿಯ ಮೂಲವ್ಯಾವುದು..??
ಹುಡುಕಿಕೊಳ್ಳಬೇಕಿದೆ ನನ್ನೊಳಗೆ - ಬಂಡೆ ಶಿಲ್ಪವಾಗೋದಷ್ಟು ಸುಲಭವಿಲ್ಲ...
ಆದರೂ....
***
ಈ ಸಂಜೆ ಮಳೆಯೇ ಹೀಗೆ - ಅರ್ಥವೇ ಆಗದ ಹೆಣ್ಣಿನ ಮೌನದ ಹಾಗೆ...
ಗೆಜ್ಜೆ ದನಿಯಲ್ಲಿನ ಒಲವು ಸೆಳೆಯುವ ಹೊತ್ತಲ್ಲೇ ಮಂದಹಾಸದ ಹಿಂದಿನ ನಿಶ್ಯಬ್ದ ಭಿಮ್ಮನೆ ಕಾಡುತ್ತದೆ...
ಕರುಳ ಕೊರೆಯುವ ನೆನಪೂ, ಅವಳೆಡೆಗಿನ ಬೆಚ್ಚನೆ ಕನಸೂ ಒಟ್ಟಿಗೇ ಬೇಯುತ್ತಾ ಎದೆಯ ಕುಲುಮೆಯಲಿ ದಟ್ಟ ಹೊಗೆಯಾಡುತ್ತದೆ...
ಕನಸಿನೋಲಗದ ಸದ್ದು, ಕರುಳಿನಳುವಿನ ನಿಶ್ಯಬ್ದ ಎರಡರ ಮೇಲಾಟದಲ್ಲಿ ಕಣ್ಣ ಕೊಳದ ಕಟ್ಟೆ ಒಡೆಯುತ್ತದೆ...
ಈ ಸಂಜೆ ಮಳೆಯೇ ಹೀಗೆ - ಮಸಣ ಕಟ್ಟೆಯೊಂದಿಗಿನ ಮರುಳನ ಬಡಬಡಿಕೆಯ ಹಾಗೆ.........
***
ಹೇಗೆಲ್ಲ ಅರಳಿ, ಊರೆಲ್ಲ ಸುತ್ತಿ ಸುಳಿದು, ದಕ್ಷಿಣ ಮೂಲೆಯ ಮೂರು ಮತ್ತಾರಡಿಯ ಗೂಡಲ್ಲಿ ಮುಗುಮ್ಮಾಗಿ ಮಲಗಿ ಸ್ಥಾವರವೆನಿಸೋ ಬದುಕು ಜಂಗಮ ಪಾತಳಿ - ನಾ ಹರಿದ ಜೋಳಿಗೆಯ ಜೋಗಿ - ನಡೆವುದೊಂದೆ ಕಾಯಕ - ದಾರಿ ಕರೆದಲ್ಲಿಗೆ, ಕರೆದಾಗ, ಕರೆದಂತೆ...
***
ಮತ್ತೇನಿಲ್ಲ -
ಇದ್ದಿರಬಹುದಾದ ಮನಸಿನ ಕಿಂಚಿತ್ ಒಳ್ಳೇತನ ಕೂಡ ಇರುಳ ಸಾಂಗತ್ಯದಲ್ಲಿ ನಿರ್ಗಹಿಸಲಾಗದ ತೊಡೆ ನಡುವಿನ ಉನ್ಮಾದದಲ್ಲಿ ಸೋರಿ ಹೋಗುವಾಗ ಸೂಳೆ ಮನೆಯ ಪಾವಿತ್ರ್ಯದ ಅರಿವಾಗುತ್ತೆ...
ಅವಳ ಹಸಿ ದೇಹದ ಮೇಲಿನ ನೀಲಿ ನೀಲಿ  ಕಲೆಗಳೆಲ್ಲಾ ಅವಳ ತೊಡೆಗಳ ಬಿರುಸಲ್ಲಿ ತಮ್ಮ ಶೌರ್ಯದ ಅಸ್ತಿತ್ವ ಕಳಕೊಂಡವರು ಉಳಿಸಿ ಹೋದ ಕ್ರೌರ್ಯದ ಗುರುತುಗಳಂತೆ ಕಾಣಿಸಿದರೆ ನಾನು ಅರಸಿಕನೆನಿಸಿಕೊಂಡೇನಲ್ಲವಾ...
ಆ ಕಲೆಗಳಂತೆಯೇ ಅವಳ ಕಣ್ಣ ಹನಿಗಳು ಕೂಡಾ ನೀಲಿಯಾಗಿ ಹರಳುಗಟ್ಟಿದಂತಿದೆ...
ಅವಳ ಅವುಡುಗಚ್ಚಿದ ಸ್ಪರ್ಷದ ಬೆಂಕಿಯಲ್ಲಿ ಆ ಸನ್ಯಾಸಿ ಕೂಡಾ ಮುಕ್ತ ಮುಕ್ತ...
ಇಷ್ಟಾದರೂ ಅವಳ ಹೊಟ್ಟೆಯ ಹಸಿವು ಇಂಗೀತಾ...
ಅವಳಲ್ಲವೆ ನಿಜದ ವಿರಕ್ತ...
***
ಹೇ ಅಮ್ಮನಂಥ ಸ್ನೇಹವೇ -
ನೀ ಏಕಾಂಗಿಯಾಗಿ ಇರುಳ ಗರ್ಭದಲ್ಲಡಗಿ ಕೂತು ಕೆನ್ನೆ ತೋಯಿಸಿಕೊಂಡು ಕರುಳ ಸಂತೈಸಿಕೊಳ್ಳುವಾಗೊಮ್ಮೆಯೂ ಮಡಿಲಾಗದೆ ಹೋದ ನಾನೆಂಬೋ ನನಗೆ ನಿನ್ನ ಉಸಿರ ಮರೆತ ಜಡ ದೇಹದೆದುರಲ್ಲಿ ಬಿಕ್ಕಳಿಸುವ ಹಕ್ಕಾದರೂ ಎಲ್ಲಿಯದು.....

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Monday, June 1, 2015

ಗೊಂಚಲು - ನೂರೈವತ್ತೇಳು.....

ಹಗಲೂ, ಇರುಳೂ ಮತ್ತು ಅವಳು.....
(ಹೆಸರಿಡದ ನನ್ನಾಸೆ ಬಳ್ಳಿ - ಅವಳು...)

ಇರುಳೆಂದರೆ ನನ್ನ ಕಣ್ಣ ಕುಂಡದಲ್ಲಿ ಅವಳು ಹೂವಂತೆ ಅರಳುವ ಹೊತ್ತು...
ಕನಸಿನೂರಲ್ಲಿ ಚಿಣ್ಣರ ಸಂತೆ... 
ಶುಭರಾತ್ರಿ...
❤ ❤ ❤
ಬೆಳಗೆಂದರೆ ಅವಳೆದ್ದು ಮೈಮುರಿದು ನನ್ನ ನೆನಪಲ್ಲಿ ನಾಚಿ ಬೀರಿದ ಮುಗುಳ್ನಗುವಲ್ಲಿ ಕತ್ತಲು ಇಚ್ಛಾ ಮರಣಿಯಾದ ಘಳಿಗೆ...
ಶುಭದಿನ...
❤ ❤ ❤
ಇರುಳೆಂದರೆ -
ಮಂಚದ ಮನೆಯೆಂಬ ಪ್ರೇಮ ಯಾಗಶಾಲೆಯಲ್ಲಿ ಕಿಟಕಿಯಲ್ಲಿಣುಕೋ ಚಂದಿರನೆದೆಯಲೂ ಬಿಸಿಯುಸಿರು ಹೊರಳುವಂತೆ ನನ್ನವಳ ಪ್ರೇಮ ತಾರಕದಲ್ಲಿ ಮಿಡಿದು, ಉನ್ಮತ್ತ ಬೆತ್ತಲೆ ಯಜ್ಞದಲಿ ನಮ್ಮೀರ್ವರ ಮೈ ಮನಗಳೆರಡೂ ಬೆಂದು ಸ್ಪುಟಗೊಂಡು ನಾಳೆಯ ಹಗಲಿಗೆ ಪ್ರೇಮದ ಹೊಸ ಆಭರಣ ಸಿದ್ಧಗೊಳ್ಳೋ ಪರ್ವ ಕಾಲ...
ಶುಭರಾತ್ರಿ...
❤ ❤ ❤
ಬೆಳಗೆಂದರೆ -
ತನ್ನ ಮೈ ತಿರುವು ಏರುಗಳಲಿ ತನ್ನವ ಬಿಡಿಸಿಟ್ಟ ಹುಚ್ಚು ಚಿತ್ತಾರಗಳ ಒಂದೊಂದಾಗಿ ಕಂಡುಕೊಳ್ಳುತ್ತಾ ಇರುಳ ನೆನಹಲ್ಲಿ ಅವಳು ಮತ್ತೆ ಮತ್ತೆ ಕಂಪಿಸಿ ತುಟಿಕಚ್ಚೋ ಕಾಲ...
ರೋಮಾಂಚಿತ ಕನ್ನಡಿ ಕಣ್ ಮಿಟುಕಿಸುತ್ತಿದೆ...
ಶುಭದಿನ...
❤ ❤ ❤
ಅವಳ ತೋಳ್ಗಳು ಬೆಸೆದು ಎನ್ನ ಕೊರಳ ಹಾರವಾಗಿ, ಅವಳ ಬೆನ್ನ ಬಯಲು ಎನ್ನ ಕೈಯ ಕುಂಚದ ಚಮತ್ಕಾರಕೆ ಸಿಕ್ಕ ಖಾಲಿ ಹಾಳೆಯಾಗಿ, ಈ ಇರುಳೆಂದರೆ ಈಗ ಅಡಿಯಿಂದ ಮುಡಿವರೆಗೂ ಶೃಂಗಾರ ಯಾತ್ರೆ... 
ಇರುಳು ಇನ್ನಷ್ಟು ದೀರ್ಘವಾಗಲಿ - ಮುಗಿಯದಿರಲಿ ಎದೆ ಎದೆಗಳ ಕನಸುಗಳ ಪಿಸುಮಾತು...  
ಶುಭರಾತ್ರಿ...
❤ ❤ ❤
ತೋಳ ಬಂಧದಿಂದ ಹಿತವಾಗಿ ಕೊಸರಿ ಕಳಚಿಕೊಂಡು ಚಾದರದೊಳಗಿಂದಲೇ ಅವಳ ಕೈಗಳು ವಸನಗಳನರಸುತ್ತವೆ...
ಇರುಳ ಹಸಿ ಬಿಸಿ ಉತ್ಸವದಲ್ಲಿ ನಾ ತೊಡಿಸಿದ ಮುತ್ತಿನುಂಗುರಗಳ ಬೆಳಕಲ್ಲಿ ಮತ್ತೆ ನೋಡಿ ಮತ್ತೇರುವಾಸೆಯಲಿ ಕಣ್ದೆರೆಯುತ್ತೇನೆ...
ನನ್ನ ತೀರದ ಪೋಲಿತನ ಮತ್ತು ಅವಳ ನಾಚಿಕೆಗಳ ನಡುವೆ ಚಡಪಡಿಕೆಯ ಕದನ...
ಹೊದ್ದ ಚಾದರವನೇ ಸೀರೆಯಾಗಿಸಿಕೊಂಡ ಅವಳು ಗೆದ್ದ ಖುಷಿಯಲ್ಲಿ ಮೈಮುರಿಯುತ್ತಾಳೆ...
ಬೆಳಗಾಯಿತು...
ಅವಳ ತಬ್ಬಿದ ಚಾದರದೆಡೆಗೆ ಅಸೂಯೆಯಿಂದ ನೋಡುತ್ತಾ ಮತ್ತೊಂದು ವಸ್ತ್ರ ಸನ್ಯಾಸದ ರೋಮಾಂಚ ರಾತ್ರಿಗೆ ಕಾಯುತ್ತೇನೆ...
❤ ❤ ❤
ಕಣ್ಣ ಕಕ್ಷೆಯ ತುಂಬಾ ಅವಳ ತುಂಟ ನಗೆಯ ಕಂದೀಲು ಉರಿವಾಗ ಎದೆಯ ಗುಡಿಯಲೀಗ ಪ್ರತಿ ಘಳಿಗೆಯೂ ಪ್ರೇಮ ಪಾರಾಯಣ...
ಇರುಳು ಹೊರಳುತ್ತಿದೆ - ಕನಸಿನೂರಲ್ಲಿ ಮನ್ಮಥನ ಮೆರವಣಿಗೆ ಹೊರಡೋ ಹೊತ್ತು...
ಪ್ರಣಯ ಫಲಿಸಿದರೆ ಹೊಸ ಕನಸಿಗೆ ಜನ್ಮೋತ್ಸವ...