Tuesday, March 14, 2023

ಗೊಂಚಲು - ನಾಕು ನೂರಾ ಎಂಟು.....

ನಾಯಿ ಕಾಲಿನ ಹುಡುಗ.....

ಮಗುವಾಗಬೇಕೆಂದರೆ ಮೊದಲು ಬೆತ್ತಲಾಗಬೇಕು...
____ 'ಮನದ' ಬೊಮ್ಮಟೆ ನಗ್ನತೆ - ಮಗುತನದ ನಿಜ ಬೆಳಕು...
␥␦␥

ಪ್ರತಿ ಜೀವಕ್ಕೂ ಒಂದು ಚೆಲುವಿದೆ, 
ಹೌದು ಕಣೇ, 
ಜೀವಂತ ಅನ್ನಿಸೋ ಪ್ರತೀ ಜೀವಕ್ಕೂ ಒಂದು ಘನ ಚೆಲುವಿದೆ...
ಅಂತೆಯೇ,
ಚೆಲುವನ್ನು ಚೆಲುವಾಗಿ ತೋರುವುದೂ ಒಂದು ಚಂದ ಕಲೆ - ನಿನ್ನಾ ಆ ಜೀವ/ಜೀವನ ಪ್ರೀತಿಗೆ ನನ್ನೀ ರಸಿಕ ಜೀವ ಮನಸಾ ಸೋತಿದೆ... 
_____ ಜೀವದ ಚೆಲುವು ಶುದ್ಧ ಪ್ರಾಕೃತಿಕ - ಅದೇ ಜೀವದ ಚೆಲುವಿಗೆ ಭಾವದ ಬೆಳಕ ನೇಯ್ದು ಒಪ್ಪವಾಗಿ ತೋರುವುದು ವ್ಯಕ್ತಿತ್ವದ ಎರಕ...
␥␦␥

ಪ್ರಜ್ಞೆ ಕೆಲಸ ನಿಲ್ಲಿಸಿರುವಲ್ಲಿ ಸತ್ಯ ಹೇಳುವುದು ಹುಚ್ಚುತನವೇ ಇರಬೇಕು...
___ ಜಗದ ಅಮಲುಗಳೆದುರು ಮೂಕನಾಗಿರುವುದೇ ಲೇಸು...
␥␦␥

ನಾನೆಂಬ ಸಜೀವ ಸೋಲನೂ ನಿರಂತರ ಹೊತ್ತು ಮೆರೆದ ತೇರು...
ಮರುಳನ ಹೆತ್ತು ರಾಯನಂತಾಡಿಸಿದ ಮಡಿಲು...
____ ಆಯಿ ಅಂಬೋ ಎಂದೂ ಸೋಲದ ಪ್ರೀತಿ ಗದ್ದುಗೆ...
␥␦␥

ಸಾವಿತ್ರೀ -
ಊಟ ಮಾಡಿದ್ಯಾ ಅಂತ ಕೇಳಿ, ಹೊಟ್ಟೆ ಕಾಯ್ಸಡಾ ಅಂತ ಬೈದು ಎಷ್ಟ್ ದಿನ ಆತು ಹೇಳಿ ನೆನ್ಪಿದ್ದಾ ನಿನ್ಗೆ...
........ಭರ್ತಿ ಒಂಭತ್ತು ಮಾಸಗಳು...
____ ಸಾವು ಮೌನವಾಗಿ ಕೊಲ್ಲುತ್ತದೆ...


ಬದುಕು ಅರ್ಥವಾಗದಿದ್ದರೆ ಹೋಗಲಿ, ನಿದ್ದೆ ಕೊಲ್ಲುವ ಈ ನೋವಾದರೂ ಅರ್ಥವಾಗಬೇಕಲ್ಲ...
ಇಡಿಯಾಗಿ ಸಿಗದ ವಿಚ್ಛಿದ್ರ ಭಾವವೊಂದು ಧುತ್ತನೆ ಮಾತನೆಲ್ಲ ನಿವಾಳಿಸಿ ಹಾಕುವಲ್ಲಿ ಕಡು ಮೌನವೊಂದು ಗಂಟಲ ಮುಳ್ಳಾಗಿ ಚುಚ್ಚುತ್ತದೆ...
ಮೂಲ ಹುಡುಕಿದರೆ ಮಸಣದ ಮೂಲೇಲಿ ಚಂದ್ರನ ಹೆಣ ಕಾಯುತ್ತಾ ಕೂತ ನಾನೇ ಕಾಣುತ್ತೇನೆ...
ನನಗೇ ನಾನು ಸಿಗದ ಹಾದಿಯಲ್ಲಿ ಇರುಳ ಹಾಯುವುದು ಕಡು ಕಷ್ಟ...
____ ಮಾತನು ಕಸಿದುಕೊಂಡ ಬೆಳಕು, ಮೌನವ ಹುಟ್ಟಿಸದ ಸಾವು - ನಾನಿಲ್ಲಿ ಮುಖಬೆಲೆಯೇ ಅಳಿಸಿಹೋದ ಸವಕಲು ಪಾವಲಿ...
␥␦␥

ಹಿಂತಿರುಗಿ ನೋಡಲು ಭಯ - ನೀ ಕಾಣದೇ ಹೋದರೆ...
ಮುಂದೋಡಲೂ ಭಯವೇ - ನೀ ಸಿಕ್ಕಿಬಿಟ್ಟರೆ...
ನಿಂತಲ್ಲೇ ನಿಂತಿದ್ದೇನೆ ಕಾಲು ಕಟ್ಟಿದಂತೆ ಕೈಕಟ್ಟಿಕೊಂಡು...
___ ಪ್ರೀತಿ.‌‌..
␥␦␥

ನಾನೆಂದರಿಲ್ಲಿ ಇಕ್ಕಟ್ಟು ಬೀದಿಗಳ ಪರಿಶೆಗಳ ಜಂಗುಳಿಯಲಿ ಕಳೆದು ಹೋದವನು...
ಎದೆಗೇರಿದ ನಂಜನು ಜಾತ್ರೆ ಬೀದಿಯ ನಶೆಯ ಉಬ್ಬಸದಲಿ ಕಳೆದೇನೆಂಬ ಕುರುಡು ಹಂಬಲದ ಮಹಾ ಮರುಳನು...
ಎದುರು ಬಂದ ಅಪರಿಚಿತ ಕಂಗಳಿಗೆ ಹುಡುಕದೆಯೇ ಸಿಕ್ಕಿ ಪರಿಚಯಕೆ ಮರೆಯಾದ ‌ಗಾಂಪನು...
___ ಕನಸಿನ ಯೌವನವ ಯಾವುದೋ ಗಲ್ಲಿ ದೀಪದ ಬೆನ್ನಿಗಂಟಿಸಿ ಮರೆತು ಓಣಿ ಓಣಿ ಅಲೆಯುವ ನಾಯಿ ಕಾಲಿನ ಹುಡುಗ...
␥␦␥

ಕಾಲ ಚಲಿಸುತ್ತಲೇ ಇರುತ್ತದೆ...
ಕಾಲು ಸೋತವನ ಕಣ್ಣಲ್ಲಿನ ಕನಸೂ, ಶಲ್ಲಿಲ್ಲದ ಗಡಿಯಾರದ ಮುಳ್ಳೂ ಕಾಲ ಓಡುವುದಕ್ಕೆ ನಿಂತಲ್ಲೇ ನಿಂತ ಕರುಳಿನ ಸಾಕ್ಷಿಯಾಗುತ್ತವೆ...
ಯಾರೋ ನೊಂದು ಇಟ್ಟ ಶಾಪಗಳ ಮೂಟೆ ಬಿಚ್ಚಿಕೊಂಡ ಹಾಗೆ, ಹಸಿವಿಗೆಂದು ಅದೇ ಹೆಣೆದುಕೊಂಡ ಬಲೆ ಉರುಳಾಗಿ ಸುತ್ತಿ ಉಸಿರುಗಟ್ಟಿದ ಜೇಡನ ಹೆಣಗಾಟದ ಹಾಗೆ ಕಾಲು ನಿಂತ ಮರುಳನೊಬ್ಬ ನರಳಿದರೆ ಕಾಲ ಕತ್ತಲ ಕಣ್ಣಲ್ಲಿ ನೋಡುತ್ತಾ ಮುನ್ನಡೆಯುತ್ತದೆ...
ಕಾಲ ಚಲಿಸುತ್ತಲೇ ಇರುತ್ತದೆ; ಚಲಿಸುತ್ತಲೇ ಅಳಿಸುತ್ತದೆ ಮತ್ತು ಚಲನೆಯಿಂದಲೇ ಸಮಾಧಾನಿಸುತ್ತದೆ ಕೂಡಾ...
___ 'ನಾನು' ಉರುಳುವುದಕ್ಕೆ ಇಮಾರತ್ತುಗಳೂ ಪುರಾವೆಯೇ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

ಗೊಂಚಲು - ನಾಕು ನೂರಾ ಏಳು.....

ನಾನೇನು ನಿನ್ನಲ್ಲಿ.....

ಸುಡು ಸುಡು ಮಧ್ಯಾಹ್ನದ ಆಲಸ್ಯದಲಿ ಅವಳ ತಬ್ಬಬೇಕು - ಕಣ್ಣ ದೀಪವು...
ನನ್ನೇ ನಾನು ಹುಡುಕಹೊರಡುವ ನಿರಾಮಯ ಸಂಜೆಗಳಿಗೆಲ್ಲ ಅವಳದೇ ಹೆಸರಿಡಬೇಕು - ಎದೆಯ ಕಾವ್ಯವು...
ಕೆನೆಗಟ್ಟಿದ ಹಗಲು - ನನ್ನ ಕಪ್ಪು ಹುಡುಗಿ...
____"ಆ ಕಪ್ಪು ಮೋಡದಂತವಳ ಕಣ್ಣಲ್ಲಿನ ಕಾಮನ ಬಿಲ್ಲು ನನ್ನ ನಿತ್ಯದ ಹೋಳಿ..."
            __ 07.03.2023
&&&

ಪ್ರೇಮದ ಬೆಳಕೇ -
ಕಡಲುಕ್ಕಿ ಬಂದಂತೆ ಮೈಮನ ಕೆರಳಿ ಅರಳುವುದು ಕೊಳಲ ಖಾಲಿಯ ತುಂಬಿ ಹರಿಯುವ ನಿನ್ನುಸಿರ ರಾಗಕೆ ಗೆಳೆಯಾ...
ನಿನ್ನಷ್ಟು ಪ್ರೀತಿಯಿಂದ ಕೂಡುವ, ಕೂಡಲೆಂದೇ ಕಾಡುವ ಗಂಡು ಗೊಲ್ಲ ಜಗದೆಲ್ಲ ಗೋಪಿಯರ ಎದೆಯಾಳದ ಕಳ್ಳ ಕನಸು ಕಣೋ ಕರಿಯಾ...
___ ಗೋಪಿ ಹಕ್ಕಿಗಳ ಅನುಕ್ಷಣದ ಅನುಲಾಪ...
&&&

ನಿನ್ನ ಅರಳು ಕಂಗಳಲಿ ತುಂಬಿ ತೊನೆಯುವ ಆಸೆ ಹುಯಿಲಿನ ಕಂಗಾಲು...
ನನ್ನ ನೋಟಕೆ ಸಿಕ್ಕಿ ಸಿಡಿದು ಸಣ್ಣ ಸೆಳಕಿನ ಮಿಂಚಿನಂದದಿ ನಿನ್ನ ಮೈಯ್ಯ ಯೌವನದ ನಾಡಿಗಳ ತುಳಿಯುವ ಸಿಹಿ ಕಂಪನ...
ಅಲ್ಯಾರೋ ಕರೆದಂತೆ, ಇಲ್ಯಾರೋ ಬಂದಂತೆ, ಬೆರಳ ಬೆಸೆದು ಕೊರಳ ಕುಣಿಸುವ ನಿನ್ನೊಳಗಣ ಎಳೆಗರುವಿನಂತ ಹುಸಿ ನಾಚಿಕೆ...
ಜನ ಜಾತ್ರೆಯ ಸೆರಗಿನ ಆಚೆ ಈಚೆ ಕಳ್ಳ ಕಿಂಡಿಗಳಲಿ ಬೆರಗಿನಲೇ ಆತುಕೊಳ್ಳುವ, ಹುಡುಹುಡುಕಿ ಹೂತು ಸೋಲುವ ನಿನ್ನಾ ಕಣ್ ಕಣ್ಣ ಸಲಿಗೆ...
ಹೇ ಮೋಹವೇ, 
ಕಳ್ಳು ಕುಡಿದಂತ ಈ ಹರೆಯದ ಹಳ್ಳ ಹರಿವಿಗೆ ನಿನಗಿಂತ ಅನ್ಯರಿಲ್ಲ ಎಂಬುವಂತೆ ಕಾಡುವ ಕಪ್ಪು ಕಡಲು ನೀನು....
ಜಾತ್ರೆಯಲಿ ಇಂದ್ರಚಾಪದಂದದಿ ಕಂಡ ನಿನ್ನ ಯೌವನವ ಇರುಳ ಕನಸಲಿ ಕೆಣಕಿ ಕಾಡಿ 'ಕಾಯುವ' ಪರಮ ಪೋಲಿ ಹರೆಯ ನಾನು...
___ ಬಲು ಚಂದ ಕಾಡುವ ಕಾಡು ಮೌನ - ಕಪ್ಪು ಹುಡುಗಿ...
&&&

ಈ ಬದುಕ ಕೊರಳ ಬಳಸಿದ ದಿವ್ಯಾನುಭೂತಿಯೇ -
ಕೇಳು,
ನಾನು ನಿನ್ನ ಬಲಹೀನತೆ ಆಗಿರುವಾಗ ನಿಂಗೆ ನನ್ನಿಂದ ಸಿಗಬಹುದಾದದ್ದು ಎದೆಯ ತುಂಬಾ ಗೊಂದಲಗಳ ಕಲೆಸಿದ ನೋವಿನದೇ ಕಸರು ಅಷ್ಟೇ...
ಅದೇ, 
ನಾನು ನೀನು ಎಂಬುದು ನನ್ನಲ್ಲೂ ನಿನ್ನಲ್ಲೂ ಈ ಹಾದಿಯ ಹಲ ಕ್ಷಣಗಳ ಮಧುರ ಸಂಭ್ರಮದ ಸಂಗಮವೆನಿಸುವಾಗ ಕಾಲ ಕವಿತೆಯಾಗಿ ಉಸಿರೊಳಗರಳುವ ನೆನಹು ಕನಸುಗಳ ಹಾಸು ಹಸಿರು ಇಷ್ಟಿಷ್ಟೇ...
____ ಈಗಿಲ್ಲಿ ನಾನೇನು ನಿನ್ನಲ್ಲಿ...
&&&

ಅವಳು - 
ಈ ದೇಹದ ಬೆತ್ತಲು ನಿನಗಲ್ಲ, ಆಸೆ ಬಿಡು; ಆದರೋ, ಭಾವದಲಿ ನಿನ್ನೆದುರು ಕತ್ತಲೆಯೇ ಇಲ್ಲ ನೋಡು...
ಇವಳು -
ನನ್ನೀ ಜೀವ ಭಾವಗಳೆಲ್ಲ ನಿನ್ನೆದೆಯ ಬಿಸುಪನು ಹೊಕ್ಕು ಬಳಸಿ ನೀರಾಗಿ ನಿಸೂರು ನಿರಾಳ ಹಾಡು...
___ ನೇಹಾಮೋಹದ ಬಿಗಿಯಲ್ಲಿ ಕರಗಿ ಹಗುರಾಗುವ ನಾನಾ ಬಗೆ‌.‌..
&&&

ಹೇ ಹತ್ತಿರದವಳೇ -
ನಿನ್ನ ನಡು ಯೌವನವು ಕಣ್ಣ ಕುಡಿಯ ಬಾಣವಾಗಿ,
ತುಟಿಗಳ ತೇವದ ಆಸೆ ಹಸಿಯಾಗಿ,
ಮೂಗು ಮೊನೆಯ ಬಿಗುಮಾನದ ಕಾವಾಗಿ,
ಎದೆ ಮಿದುವು ಬಿಗಿದ ಬಿಲ್ಲಾಗಿ ಎನ್ನ ತೋಳ ಹಸಿವ ಕೆಣಕಿ ಕರೆವಾಗ ಬಾಚಿ ತಬ್ಬದೇ ದೂರ ನಿಲ್ಲುವುದು ಎಷ್ಟು ಕಷ್ಟ‌ವೇ ಮಾರಾಯ್ತೀ...!!
____ಬಾ, ಮಾಗಿಯ ಬೇಗೆಗೆ ಮೋಹದ ತುಟಿಯ ಗಾಯ ಮಾಯಗೊಡಬಾರದು...
&&&

ಒಲವೇ -
ಅಲೆಗಳ ನಿರಂತರ ಪೆಟ್ಟು ತಿಂದೂ ಶಿಲ್ಪವಾಗದೇ ಉಳಿದ ಒರಟು ಶಿಲೆ ನಾನು...
ಜಲಗರ್ಭದ ಮೊರೆತವ ನೋಡುವ ನಿನ್ನ ಬೆರಗಿನ ಪಾದ ನೆತ್ತಿ ತುಳಿದದ್ದರಲ್ಲೇ ನನ್ನ ಪುನೀತ ಭಾವ...
ಮತ್ತೆ ಮತ್ತೆ ಬರುತಲಿರು ಕನಸೇ ನನ್ನ ತೀರಕೆ...
____ ಕಪ್ಪು ಹುಡುಗೀ...
&&&

ಕಡು ನೀಲ ಮುಗಿಲಿಗೆ ಮಲ್ಲಿಗೆಯೊಡನೆ ಕೆಂಡ ಹಬ್ಬಲಿಗೆಯ ಸೇರಿಸಿ ಹೆಣೆದ ದಂಡೆಯ ಅಂಟಿಸಿದಂಗೆ ಸಂಜೆಯ ಬಾಗಿಲು ತೆರೆವಾಗ ಅಧರದ ಸವಿ ಮುತ್ತಾಗಿ ಮೋಹದಾ ಹೆಣ್ಣೇ ನೀನು ಸಿಗಬೇಕು...
ವಸಂತ ಬಯಲಿಗೆ ಬಂದಾಗ ಎದೆಗೆ ಬಾಗ್ಲಾಕ್ಕೊಳ್ಳೋದು ಯಾವ ನ್ಯಾಯಾ ಹೇಳು...
ಉತ್ಕಟ‌ತೆಯಲ್ಲೇ ಅಲ್ಲವಾ ಜೀವಾಭಾವದ ಜೀವಂತಿಕೆ...
ಶಿಲೆ ಶಿಲ್ಪವಾಗಿ, ಶಿಲ್ಪ ಕಲ್ಪದ ಮೂರ್ತಿಯಾಗಿ, ಹೃದಯ‌ಕ್ಕದು ಪವಿತ್ರ ಅನ್ನಿಸೋದು ಭಾವದ ಉತ್ಕಂಠ ಮಂತ್ರ‌ದಲ್ಲಲ್ಲವಾ...
ಹಾಗೆಂದೇ,
ನಿನ್ನ ಕೂಡುವಾಗಲೇ ನನ್ನ ಪ್ರೇಮ ಜೀವಂತ ಅನ್ನಿಸಿದ್ದು...
____ತುಟಿಯಂಚಿನ ಮಚ್ಚೆ, ಕೊರಳ ಶಂಖ ಇತ್ಯಾದಿ - ಭಾವಕ್ಕೆ ಜೀವ ಚಿತ್ರದ ಚಿತ್ತಾರ... 

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

ಗೊಂಚಲು - ನಾಕು ನೂರಾ ಆರು.....

ವಿಧವಿಧ ಮುತ್ತಿನಾ ಕಥೆ.....

ನಿನ್ನ ತೋಳಲ್ಲಿನಾ ಸ್ವರ್ಗ ನನ್ನ ಅನುದಿನದಾ ಹಂಬಲ...
ಇರುಳ ಹಬ್ಬದ ಹಾದಿ ನೀನು...
ಎದೆಯಿಂದ ಎದೆಗೆ ಹಸಿಬಿಸಿಯು ಹಂಚಿ ಹರಡಿ ಪ್ರಾಯವ ಸಲಹುವ ಮಧುರ ಪಾಪದ ಕನಸುಗಳೆಲ್ಲ ಸರಾಗ ಬಿಚ್ಚಿಕೊಳ್ಳುವ ಕತ್ತಲನು ಅಂಧಕಾರ ಕೂಪ ಅಂದವರ್ಯಾರೇ...
ಎದೆಯ ಭಾರವೆಲ್ಲ ಮೈಯ್ಯ ಬೆವರಾಗಿ ಇಳಿದಿಳಿದು ಹೋಪಾಗ ಅರಸಿಕರ ಬುಧ್ವಾದದ ಮಾತೆಲ್ಲ ಯಾವ ಲೆಕ್ಕ ಬಿಡು ನನಗೂ, ನಿನಗೂ...
___ ಇರುಳ ನಡು ಸುಡುವ ಸಖಜ್ವಾಲೆ...

ಎದೆಯ ಹಸಿಬಿಸಿಯ ಮಾತು ಮಾತು ಮಥಿಸಿ ಸಲಿಗೆಯಲಿ ಕೊಟ್ಟ, ಪಡೆದ ಸವಿ ಮುತ್ತುಗಳ ಲೆಕ್ಕ ಇಟ್ಟಾನೆಯೇ ರಸಿಕ...
ಅಷ್ಟಕ್ಕೂ
ಸಮ್ಮೋಹದಲಿ ಕೊಟ್ಟದ್ಯಾರು, ಪಡೆದದ್ಯಾರು ಎಂಬೆಲ್ಲಾ ಪರಿವೆಲ್ಲಿ ಉಳಿದೀತು ತಳಿಬಿದ್ದು ತುಟಿಗೆ ತುಟಿ ಇತ್ತ ಪುಳಕ...
__ಮತ್ತೆ ಮತ್ತದೇ ರುಚಿಯ ಹಂಬಲದ ಮತ್ತನೇರಿಸೋ ವಿಧವಿಧ ಮುತ್ತಿನಾ ಕಥೆ...

ಕೊಟ್ಟದ್ಯಾರೋ ಪಡೆದದ್ಯಾರೋ ತೇವ ತುಟಿಗಳ ಸವಿರಾಗ ನಶೆ ಮಾತ್ರ ಎರಡೂ ಎದೆಯಲಿ ಬಿಸಿ ಉಸಿರ ತಿಲ್ಲಾನದ ಝೇಂಕಾರ‌ವೇಳುತ್ತದೆ...
ಕುದಿ ಉಸಿರನು ಕಿವಿಯಲೂದಿ ಆ ಕಚಗುಳಿ‌ಯಲಿ ತನ್ನಾಸೆಯ ಉಡಿಸುತ್ತಾಳೆ...
ಆ ಅವಳ 'ಮೇಲೆ' ಶೃಂಗಾರ‌ದ ಸಿಂಗಾರ‌ದ ಖಂಡಕಾವ್ಯ ಬರೆವ ಎನ್ನ ಪೋಲಿ ಕಣ್ಣ ಕಂದೀಲಿನಲಗಲಿ ಇರುಳೇ ನಾಚಿಕೆಯ ವಸನವ ಬಿಡಿಸಿಕೊಳ್ಳುತ್ತಾಳೆ...
ಜೀವಕಾಯಕೆ ಹಲ್ಲೂಡುವ ಅವಳದ್ದೂ ನನ್ನಂತೆಯೇ ಸಮೃದ್ಧ ಪೋಲಿತನ...
ಮೈತೀರಗಳಲಿ ಅಲೆವ ಕಲೆಯಲ್ಲಿ ಈರ್ವರದೂ ಸರಿಸಮಾನ ಚಲನೆ ಮತ್ತು ಕೈಗುಣ... 
____ರಸಿಕ ರಸ ಸಂಗಮ...

ಇನ್ನೆಷ್ಟು ರಾತ್ರಿ ಹರೆಯದುರಿಯಲಿ ಉಕ್ಕುವ ಈ ಆಸೆಬಿಸಿಯ ರಕ್ತ ದಿಕ್ಕುಗಾಣದೆ ಮಣಿಯಬೇಕು...
ಎದುರು ದಿಕ್ಕಿಂದ ಅಸುವ ದಿಕ್ಕಾಗಿ ಬಳಸು ಬಾ - ಸೊಗದಿ ಸೊಕ್ಕಳಿದು ಪವಡಿಸುವಾ...
___ನಿದ್ದೆಗೂ ಮುನ್ನ...

ನಿನ್ನ ಮೆಲ್ಲುವ ಸವಿಗನಸಲೀ ನಿನ್ನ ನಗುವಿನ ಸಂತೆ... 
ನಿದ್ದೆ ಕಂಗಳಿಗೂ ನಿನ್ನ ಉಲುಹಿನ ಚಲುವಂತೆ...

ಹೆಗಲಿಗಾತು ಕಣ್ಣಲ್ಲಿ ಆಗಸವ ಕುಡಿಯುವ ಮತ್ತು ಒಡಲ ತುಂಬಾ ಕನಸುಗಳ ಬಸಿದುಕೊಳ್ಳೋ ಈ ಕನಸನು ಕೂಡಾ ನಿನ್ನ ಹೆಸರಿಗೆ ಬರೆದೆ ನಾನು...
___ ಒಂದು ಒಂದು ಸೇರಿ ಒಂದೇ ಆಗಿ ಮತ್ತೆ ಮೂರಾದ ಕಥೆ...

ನಂಗೆ ಎಂಜಲೆಂದರೆ ಅಲರ್ಜಿ ಅಂದವಳೇ ಸಹಚಾರಿ ಬಯಲಾಗು ಮೈಯ್ಯ ತೀರಗಳುದ್ದಕೂ ನಾಲಿಗೆ ಮೊನೆಯಲಿ ಹಚ್ಚೆ ಹಾಕುತೇನೆಂದಾಗ ಕಾಮನ ಬಿಲ್ಲಾಗಿ ಎ(ಹೆ)ದೆಯೇರುತಾಳೆ...
ಮತ್ತಾಗ ಕಳ್ಳ ನಾಚಿಕೆ‌ಯ ನೂರು ನಖರೆಗಳು ಮತ್ತೇರಿದ ಸಜ್ಜೆಮನೆ ತುಂಬಾ ಚೆಲ್ಲಾಡುತಾವೆ...
____ಪ್ರಣಯಾಘಾತದೆಂಜಲಿಗೆ ಮುಸರೆ, ಮಡಿ, ಮೈಲಿಗೆ, ನಂಜೆಲ್ಲ ಲೆಕ್ಕಕ್ಕಿಲ್ಲವಂತೆ...
&&&

ಇಲ್ಲಿ ಈಗಷ್ಟೇ ನನ್ನ ಸಾವಾಯಿತು - ಸಮಾಧಿಯ ಮೇಲೆ ಬರೆದ ಹೆಸರು ನಿನ್ನದು...
____ ಬದುಕೆಂಬೋ ಒಂದು ಅಪೂರ್ಣ ಕಥೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

ಗೊಂಚಲು - ನಾಕು ನೂರಾ ಐದು.....

ಹರಿವೇ ಹೊಳೆಯ ಧ್ಯಾನ.....

ಪ್ರೀತಿ ಅಂದರೆ ಹೂ ಅರಳುವ ಸದ್ದು; ಹಂಗೇ ಅವಳ ಹೂವಾಗಿಸುವ ನನ್ನ ಮುದ್ದು...
ಅವಳೋ ಮಹಾ ಮೌನದ ಗರ್ಭವ ಕಡೆಕಡೆದು ಉದಿಸಿದ ಒಂದು ತುಂಟ ನಗು...
___ ಪ್ರೀತಿಯೋ ತುಂಬಿ ಹರಿವ ಹೊಳೆ ಮತ್ತು ಹರಿವೇ ಹೊಳೆಯ ಧ್ಯಾನ...
␢␢␢

ಬಯಸೀ ಬಯಸೀ ಪ್ರೇಮದಲ್ಲಿ(?) ಕೊಚ್ಕೊಂಡೋಗಿ ಸಮಾಧಾನದಲ್ಲೂ ಇರಲ್ಲ - ಪ್ರೇಮ ಸುಖವಲ್ಲ ಸಾಯದಿರಿ ಅಂದ್ರೆ ಹಲಹಲಾ ಅಂದು ಏರಿ ಬಂದು ಮಾತಲ್ಲೇ ಕೊಂದಾಕೋರೇ ಇಲ್ಲೆಲ್ಲಾ...
____ ಪ್ರೇಮ ಕುರುಡು ಅಂತಂದು ಪ್ರೇಮಿಸಲು ಕತ್ತಲನ್ನು (ಗೌಪ್ಯತೆಯ) ಆಯ್ದುಕೊಂಡ ಪರಮ ಸಭ್ಯರು...
␢␢␢

ಇಲ್ಕೇಳೇ -
ಇಲ್ಲಿ ನಾ ಹೇಗಿದ್ದೇನೆ ಎಂಬುದು ನನ್ನ ಸಹಜ ಇರುವಿಕೆಯ ಬಿತ್ತರ...
ಜಗತ್ತಿಗೆ ನೀ ನನ್ನ ಹೇಗೆ ತೋರಿದೆ ಎಂಬುದು ನಿನ್ನ ನಿಜ ಪ್ರೇಮದ ಎತ್ತರ...
___ ರಾಧೆಯ ಕಣ್ಣಲ್ಲಿನ ಯಮುನೆಯ ಹರಹು ಕೃಷ್ಣನ ಪ್ರೇಮ...
␢␢␢

ಅಲ್ಲಾ,
ಈ ಪ್ರೇಮಿಗಳಿಗೆ ಮತ್ತು ಪ್ರೇಮಿ/ಕೆಯೊಡನೆ ಜೀವಾಭಾವದ ಒಡನಾಟ ಚಂದ ತೀವ್ರತೆಯಲಿರುವಾಗ ಮತ್ತು ಪ್ರೇಮಿ/ಕೆ ಮುಖ ತಿರುವಿದ ಭಾವ ಖಡಕ್ಕಾಗಿ ಕಾಡುತಿರುವ ಎಡಹೊತ್ತಿನಲ್ಲಿ ಸುತ್ತಲಿನ ಜಗದ ಸಂವಾದಗಳೆಲ್ಲ ಬರೀ ನೀರಸ ವ್ಯವಹಾರ ಅನ್ನಿಸುವುದೇಕೋ ಕಾಣೆ...
ಪ್ರೇಮಿಯನ್ನು ಅವಲಂಭಿಸಿ ಪ್ರೇಮವನ್ನು ಜೀವಿಸುತ್ತೇನೆ ಎಂಬುದು ಕಳ್ಳ ಮನಸಿನ ಮರುಳಲ್ಲದೇ ಇನ್ನೇನು...
____ ಪ್ರೇಮ(?)ವೆಂಬೋ ವಿಚಿತ್ರ ವ್ಯವಹಾರ/ಆಚರಣೆ...
␢␢␢

ಪ್ರೇಮವಾಗಲೀ, ಆಧ್ಯಾತ್ಮ‌ವಾಗಲೀ ಎದೆ ಹೊಕ್ಕ ಮಧುರ ಬೆರಗಾಗಿರುವವರೆಗೂ ಚಂದ ಚಂದ - ಅದೇ, ವಾಸ್ತವಿಕ ಪ್ರಜ್ಞೆ‌ಯನೇ ಕೊಲ್ಲುವ ತುಡುಗು ಆಡಂಬರದ ನಶೆಯಾದರೆ ಮಾತ್ರ ಕಷ್ಟ ಕಷ್ಟ...
____ ಮೋಹಾ - ಮಾಯೆ - ಸುಭಗತನ - ಧಾರ್ಮಿಕತೆ...
␢␢␢

ಇಷ್ಟು ಕೊಡುವಾಗ ಅಷ್ಟಾದರೂ ಪಡೆಯುವ ನಿರೀಕ್ಷೆ ಇಲ್ಲದೇ ಹೋದರೆ ಪ್ರೇಮ ರಸಹೀನವಲ್ಲವಾ...?
ಕೇವಲ ನಂದ್‌ನಂದೇ ಅಂತ ಅಲ್ಲದೇ ಹೋದರೆ ಅದು ನನ್ನ ಪ್ರೇಮ ಹೇಗಾದೀತು...??
ನಾ ಹೀಗೆ ನಂಬಿರುವವರೆಗೂ ನನ್ನ ಪ್ರೇಮದ(?) ಫಲ ನೀನೆಂಬ ನೋವು ಮಾತ್ರ...
ಕಾರಣ - ಕೊಡುವ ಪಡೆವ ಲೇವಾದೇವಿ‌ಯಲ್ಲಿ ಯಾವತ್ತೂ ನೀನು ಕಂಜೂಸು ಪ್ರೇಮಿ, ನಾನು ಅತಿ ಆಸೆಯ ಕಾಮಿ...
ನಿಜದಲ್ಲಿ,
ಪ್ರೇಮವೆಂದರೆ ನಿನ್ನ ಹಬ್ಬಿ ನನ್ನ ತುಂಬಿಕೊಂಡ ನನ್ನೊಳಗಿನ ನಾನು...
ನಿನ್ನ ಸನ್ನಿಧಿಯಲ್ಲಿ ಸುಟ್ಟು ಹೋಗಬೇಕು ನನ್ನೊಳಗೆ "ನಾನು..."
____ "ರಾಧಾಕೃಷ್ಣ..."
␢␢␢

ಒಂದೊಂದೇ ದಳ ದಳವ ಬಿಡಿಸಿಕೊಳ್ಳುತ್ತಾ ಬೆಳದಿಂಗಳ ತಬ್ಬುವ ಕನ್ನೈದಿಲೆಯಂತೆ ನನ್ನ ಕನಸುಗಳ ಹಬ್ಬುತ್ತಾಳೆ ಅವಳು...
_____ ಕಾಡು‌ಗಪ್ಪು ಕಣ್ಣಲ್ಲಿ ನೀಲಿ ನೀಲ ಕನಸು...

ಈ ರಣ ಅಮಾಸೆಯ ಕತ್ತಲ ಮಗ್ಗುಲಲ್ಲಿ ನೆಟಿಗೆ ಮುರಿಯುತಿರೋ ಬೆರಳ ಸಂಧಿಗಳಲಿ ಬೆತ್ತಲಾಗಿ ಮುಟ್ಟಾಟ ಆಡುತ್ತಿವೆ - ನಾ 'ನಿನಗಾಗಿ' ಬರೆದ ಕವಿತೆ ಮತ್ತು ನಿನ್ನ 'ಮೇಲೆ' ಬರೆದ ಕವಿತೆ...
______ ನಿನ್ನೊಳಗೆ ಮೈಮರೆತ ನನ್ನ ಉಸಿರು...

ಬಿಸಿ ಉಸಿರ ಕಾವ್ಯ - ನಿನ್ನಾ ನೆನಪು...
ಮೋಹಾಗ್ನಿ ಪಾದದ ಸೋಬಾನೆ ಪದ - ಇರುಳ ಬೆಮರು...
____ ಮಧುರ ಪಾಪದ ಸಾರಥಿ...

ನನ್ನ ಕಪ್ಪು ಹುಡುಗಿ ಮತ್ತು ನಮ್ಮ ಕತ್ತಲ ಏಕಾಂತ - ಎಂಥಾ ಸುಂದರ ಸಂಯೋಜನೆ... 
____ ನಾವೇ ಅಲ್ಲಿ ಉರಿಯುತಿರೋ ದೀಪ/ಧೂಪ...

ಕೊರಳ ಬಳಸಿ ತುಟಿ ಕಚ್ಚಿ ನಾಭಿ ಮೂಲವ ಗಾಯಗೊಳಿಸಿ ಸಿಕ್ಕೂ ಸಿಗದಂಗೆ ಸಂಜೆಯಲಿ ಜಾರಿ ಇರುಳ ಮಂಚವ ಏಕಾಂಗಿಯಾಗಿ‌ಸಿದವಳೇ -
"ವಿರಹದ ದೀಪ ಜ್ವಾಲೆಗೆ ಸಿಕ್ಕಿ ರೆಕ್ಕೆ ಸುಟ್ಟುಕೊಂಡಿದೆ ಪೋಲಿ ಪೋರನ ಮೋಹದ ಹಾತೆ..."
____ ಎದೆಯ ಸುಡುವ ಮಧುರ ಜ್ವಾಲೆ...

ರಕ್ತ ತಣ್ಣಗಾದರೆ ಜೀವ ಸತ್ತಂತೆ ಲೆಕ್ಕ...
ಚೂರು ಬೆಂಕಿ ಹಚ್ಚು ನಾಭಿಗೆ...
ದಯಪಾಲಿಸೂ ಈ ಸಂಜೆಗೊಂದು ಕರಡಿ ತಬ್ಬುಗೆ...
______ ತುಟಿಯಂಚಿನ ಜೇನು, ಕಟಿಯಂಚಿನ ಸುಖ ಸೋಮ ದುಕಾನು, ಬೆನ್ನ ಬಯಲಿನ ಮಚ್ಚೆ, ನೀನೆಂಬ ಅಗ್ಗಿಷ್ಟಿಕೆ...

ಆ ಕಡು ಸಂಜೆ ಅಂಚಿನ ಅಪರಿಚಿತ, ಅಯಾಚಿತ ಮಂದಹಾಸ‌ದಲಿ ಸಿಕ್ಕ ಕನಸಿನ ಚಿಲ್ಟಾರಿ ಮರಿಯೊಂದು ಇರುಳ ಗೂಡಲ್ಲಿ ಒಂದೇ ಸಮ ಚೀಂವ್ಗುಡುತಿದೆ - ಎಂಥ ಚಂದವೇ ಮೋಹದ ಕಲರವ...
ನೀ ಮತ್ತೆ ಸಿಗಬಹುದೇ - ನಾ ಮತ್ತೆ ಮತ್ತದೇ ನಗೆ ಮುಗುಳ ಹೆಕ್ಕಬಹುದೇ...
____ಕಾಯುವಿಕೆ ಮತ್ತು ಹುಡುಕಾಟ‌ಗಳಲಿ ಕರುಳು ಜೀವಂತ...

ನನ್ನ ತೋಳಲ್ಲಿನ ಕರಿ ಮೋಡದ ಬಿಳಲು - ನೀನು...
ನಾ ಉಟ್ಟು ಮೆರೆವ ಚಂದದ ಉತ್ತುಂಗ ನಿನ್ನ ಬಿಡುಗಣ್ಣ ಬಿಚ್ಚು ತೋಳಲ್ಲಿ... 
_____ಎದೆ ಬಿರಿವ 'ನಾಚಿಕೆ' ಮುಳ್ಳು... 

ಕರಿ ಮುಗಿಲಿಗೆ ಮಲ್ಲಿಗೆಯೊಡನೆ ಕೆಂಡ ಹಬ್ಬಲಿಗೆಯ ಸೇರಿಸಿ ಹೆಣೆದ ದಂಡೆಯನು ಅಂಟಿಸಿದಂಗೆ - ನಸು ನಾಚಿಕೆಯ ಹೊದ್ದ ನಿನ್ನ ನಗು...
___ ನನ್ನ ಹುಡುಕುವ ಕನಸು ಕಂಪನ...

ನನ್ನ ಕಪ್ಪು ಹುಡುಗಿಯ ಕಾಡುಗಪ್ಪು ಕಂಗಳೇ ಹುಣ್ಣಿಮೆ ಚಂದಿರನ ಅಂತಃಪುರದ ಕನ್ನಡಿ...
ಅವು ನಾ ಬಯಸಿ ಬಯಸಿ ಮುಳುಗಿದ ಅಂತಃಕರುಣೀ ಸರೋವರ...
________ ಮಡಿಲು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

ಗೊಂಚಲು - ನಾಕು ನೂರಾ ನಾಕು.....

ಮಳೆಯೊಂದಿಗೆ.....

ಎಳೆ ಕನಸಿನಂತಾ ಕೂಸೇ -
ಚಂದ್ರ ಮುಳ್ಗಿದ್ ಕೊಳದಲ್ಲಿ ಮಿಂದ್ಕಂಡ್ ಮೈಯ್ ಒರಸ್ಕ್ಯಳದ್ದೆ, ಮುಡಿಂದ ಇಳಿಯು ನೀರನ್ನ ಹಂಗೆ ಕೈಯ್ಯಲ್ಲಿ ತೀಡ್ಕ್ಯತ್ತಾ ಕಟ್ಟೆ ಮೇಲೆ ಕುಂತಂಗೆ ಕುಂತು ತೆರಗಣ್ಣಲ್ಲೇ ಎದೆಯ ತಿವಿದ್ರೆ ನೀನು,
ಹ್ಯಾಂಗ್ ತಡ್ಕಳವು ಮಧುರ ಪಾಪಕ್ಕೆ ಸದಾ ಹಾತ್ಬರಿಯೂ ಹುಟ್ಟಾ ಪೋಲೀ ಹೈದ ನಾನು... 😍🙈
___ ಸೂರ್ಯ ಎದ್ದ ಮೇಲೂ ಚಂದ್ರ ಮಲಗದಿದ್ದಾಗ ಸೂರ್ಯನ ಮರಿ ಕಿರಣಗಳು ಚಂದಮನ ಮೇಲೆ ಆಡಿದಂತಿದೆ ಇಲ್ಲೀಗ ದಿನ ಬೆಳಗು...
↟↜↺↻↝↟

ಕರಿ ಮೋಡದಾ ಸವತೀ -
ಸುರಿವ ಮಳೆಯ ಒಟ್ಟೊಟ್ಟಿಗಿಷ್ಟು ಬೆವರೂ ಸುರಿದು ಬೆರೆಯಲಿ....
ಬಾ 
ಬೆತ್ತಾಲೆ ತೋಳ ತೊಟ್ಟಿಲಲ್ಲಿ ಮಕ್ಳಾಟ ಆಡೋಣ...
ಪೋಲಿ ಪೋರನ ಕಣ್ಣ ತುಂಟ ಓಡಾಟಕ್ಕೆ ಸೋತು ಖಾಲಿ ಬೆನ್ನ ಮೇಲೆ ಪಾನ ಮತ್ತ ಚಿಟ್ಟೆ ಓಡಾಡಿದಂಗಾಗಿ ಉಸಿರಿಗೆ ಕಚಗುಳಿ‌ ಇಟ್ಟಂಗಾದರೆ ತಪ್ಪೇನಲ್ಲ ಬಿಡು... ಜೀವಂತಿಕೆ‌ಯ ಸಿಹಿ ಲಕ್ಷಣ ಅದು ಅಷ್ಟೇ...
ಸಂಜೆ ಮಳೆ ತೊಳೆದ ಹೊಸ್ತಿಲಿಗೆ ರಾತ್ರಿ ಬೆಳದಿಂಗಳು ರಂಗೋಲಿ ಇಟ್ಟಂಗೆ, ನನ್ನ ನೆನಪ ನವಿರು ರೋಮಾಂಚದಲಿ ನಿನ್ನಾ ಮೈಮನವು ಮೋಡಗಟ್ಟಿ ತೊನೆದು ಮೈನೆರೆದು, ನಿನ್ನನೇ ನೀನು ಹೊಸತೆಂಬಂತೆ ನೋಡಿಕೊಂಬಾಗ ಆ ಕನ್ನಡಕದೊಳಗಿನ ಅಬೋಧ ಕಂಗಳಲಿ ನಾ ಕೂತು ಜಗ ಮರೆಯಬೇಕು - ಕನ್ನಡಿ ತೋರುವ ಹಸಿ ಮೈಯ್ಯ ಹಸಿವನ್ನ ನಾ ನಿನ್ನ ಕಣ್ಣ ನಾಚಿಕೆಯಲೇ ಕುಡಿಯಬೇಕು...
"ನಶೆಯಲಿ ತೇಲುವವಳ ನಿಶೆಯ ಆಹಾರವಾಗಬೇಕು..."
ಹೊಕ್ಕುಳ ಸುಳಿ ಅಗ್ನಿಯೊಂದೇ ನನ್ನ ಜೀವಂತವಿಟ್ಟ ಮಂತ್ರ ತಂತ್ರ...
↟↜↺↻↝↟

ಮೋಹದ ಮೊಗ್ಗೊಡೆದು ಸಿಗ್ಗು ಹರಿದು ಸಗ್ಗವಾಗಬಹುದಿದ್ದ ಈ ಛಳಿ ಮಳೆಯ ರಾತ್ರಿಯಲ್ಲಿ ನೀನಿಲ್ಲ ಸಜ್ಜೆಮನೆಯಲ್ಲಿ...
___ ಬರಗಾಲದಲ್ಲಿ ಅಧಿಕ ಮಾಸ...
↟↜↺↻↝↟

ಎಂಥದ್ದೇ ಇರುಳನಾದರೂ ಹಾಯಬಹುದು - ತೋಳ ಆಳ್ಕೆಯಲಿ ನಿನ್ನ ಹೂ ಮೈಯ್ಯಿ ಆಸೆಯಾ ಬೆಳಕನುಟ್ಟು ಅರಳುತಿದ್ದರೆ...
____ ಚೆಲುವಿನುನ್ಮಾದವಿಲ್ಲದ ಇರುಳು ನನ್ನ ಕನಸಿಗೂ ಸುಳಿಯದಿರಲಿ...
↟↜↺↻↝↟

ಮಳೆಗೆ ನೆಂದು ಗಡಗುಡುವ ಮೈಯನ್ನು ನಿನ್ನಾ ಬೆತ್ತಾಲೆ ಬೆಂಕಿಗೆ ಒಡ್ಡಿ ಮಲಗುವ ಆಮೋದದಾಸೆಗೆ ಮತ್ತೆ ಮತ್ತೆ ಮಳೆಯ ನೆನೆಯುತ್ತೇನೆ / ಮಳೆಯಲ್ಲಿ ನೆನೆಯುತ್ತೇನೆ...
___ ಮಳೆಯೊಂದಿಗೆ...

ತಾರಕದಲಿ ಮಿಡಿವ ದುಂಬಿಗೆ ಮಂದ್ರದಲಿ ಜೇನುಣಿಸುವ ಹೂವಂತೆ ಅಂಗಳದ ಕೂಗಿಗೆ ಒಳ ಮನೆಯ ಗೊಣಗೊಣ ಮಾರುತ್ತರವಿಲ್ಲ...
ವಿರಹವೆಂದರೆ ಇಷ್ಟೇ - ಮೈದುಂಬಿ ಸುರಿವ ಮಳೆಯ ಧಾರೆ ಮತ್ತು ಮೈಯ್ಗಳರಳಿ ಬೆವರ ಮೀಯದ ಹಾಸಿಗೆ...
___ ರೆಕ್ಕೆ ನೆನೆದ ಒಂಟಿ ಕಾಡು ಹಕ್ಕಿ...

ನೀನು ಒಂದೊಳ್ಳೆಯ ಕವಿತೆ ಮತ್ತು ನಾನು ಅತಿ ದಡ್ಡ ಓದುಗ - ಎಂಥಾ ಚಂದ ಸಂಸಾರ...
ನಿನ್ನ ನಗು ಮತ್ತು ನನ್ನ ಬೆರಗು - ಈ ಬದುಕಿನ ಸಿರಿ ಸಾರ...
____ ಮಳೆಹನಿಯ ಕುಡಿಯುತ್ತಾ ಕರಿಕಾನು ಹಾಯುವ ಸಾಂಗತ್ಯ...

ದೂರವಿದ್ದಾಗ ನಿನ್ನ ಭಾರ ಉಸಿರಿನ ಮೌನ ಮತ್ತು ಮಗ್ಗುಲಲ್ಲಿ ನಿನ್ನ ಇನಿ ದನಿ ಸಮ್ಮತಿ ಸಂಚಲನ‌ದಂತೆ ಹಾಡಿ, ಕಾಡಿ ಅಪೂರ್ವ ಉನ್ಮತ್ತ ನಶೆ ತುಂಬುತ್ತದೆ ನನ್ನಲ್ಲಿ...
ನೀನೆಂಬ ನಲ್ಮೆ ಮೋಹದೆದುರು 'ನಾನು' ಸೋಲುವುದು ಎಂಥ ಚಂದ ಮಾಯಕ ಹದ ಗೊತ್ತಾ..‌.
____ ಮಳೆಯ ಮಗ್ಗುಲಿನ ಪ್ರಣಯ ಕುಶಲೋಪರಿ...

ಅವಳ ಮುಡಿಗೋ
ಅವಳಡಿಗೋ
ಘಮ ತುಂಬುವ ಅಂಗಳದಾ ಹಸೆ ಹಾಡು...
___ ಅಕಾಲ ಮಳೆಗೆ ಕೆನ್ನೆ ತೋಯಿಸಿಕೊಂಡ ಅರೆ ಬಿರಿದ ಪಾರಿಜಾತ...

ಪ್ರಾಣವಾಯು ಗಂಗೆಯೇ -
ನಿನ್ನ ಜಗದ ಸುಪ್ತ ಆಸೆಗಳೆಲ್ಲ ನನ್ನನ್ನೇ ಸೇರಬೇಕಿದೆ ಅನ್ನುವಂಗೆ ಅಮಲು ಅಮಲು ಅರೆಗಣ್ಣಾಗಿ, ತೋಳಲ್ಲಿ ಕೊರಳ ಬಳಸಿ, ತುಟಿಯಿಂದ ಎದೆಯ ಎಂಜಲಾಗಿಸುತ್ತೀಯಲ್ಲ, 
ನಿಗಿ ನಿಗಿ ಉರಿವ ಆ ಉತ್ಸವ ಕಾಲ; 
ನನ್ನಲ್ಲಿ ನಾನೂ ಸಹಾ ಜೀವಂತ ಅನ್ನಿಸೋ ಮಹಾ ಮಧುರ ಪ್ರಹರ ಅದೊಂದೇ ನೋಡು...
ಮತ್ತೆ ಮತ್ತೆ ಸಿಗುತಿರು, ಉಸಿರ ತುಂಬಿ ಕೊಡುತಿರು...
___ ಮಳೆಯಂಗೆ / ಮಳೆ ಗಂಗೆ...

ಮೋಹಗಳು ನಿಗಿ ನಿಗಿ ಸುಡುತ್ತವೆ, ಉಕ್ಕುಕ್ಕಿ ಬಡಿಯುತ್ತವೆ - ಅತೃಪ್ತ ಒಡಲನ್ನೂ, ನಾಭಿ ಕಡಲ ದಂಡೆಯನ್ನೂ...
____ ಮಳೆ ಇರುಳ ವೃತ್ತಾಂತ...

ಹೇ ಕಾಡಿಗೆ ಹೊಳಪಿನ ಕಾವ್ಯ ಕನ್ನಿಕೆಯೇ -
ಮನಸು ಹಾಗೂ ದೇಹ ಎರಡನೂ ಒಟ್ಟೊಟ್ಟಿಗೆ ದುಡಿಸಿಕೊಂಡು ಒಂದೇಸಮ ಬೆಚ್ಚಗಿಡುವ ಮಧುರ ಪಾಪದ ದಿವ್ಯ ಒಡಲಾಗ್ನಿಯ ಅಗ್ಗಿಷ್ಟಿಕೆ ನಿನ್ನ ಸಾಂಗತ್ಯ...
ನನ್ನ ಕನಸಿನ ರೂಹು ನಿನ್ನ ಗೆಲುವು...
___ ಮಳೆಗೊಡ್ಡಿಕೊಂಡ ಮೆದು ರುದಯ...

ನಿನ್ನೆಡೆಗಿನ ಸವಿಗನಸುಗಳ ಸವಿಸ್ತಾರ ಚಿತ್ರ ಚಿತ್ತಾರಗಳನು ನಿನ್ನ 'ಮೇಲೆಯೇ' ಬರೆಯಬೇಕೆಂಬುವುದು ಈವರೆಗಿನ ಎಲ್ಲಕಿಂತ ನವಿರಾದ ಸಿಹಿ ಪೋಲಿ ಕನಸು...
_____ ಮಳೆ ಇರುಳ ಬೆತ್ತಾಲೆ ಕಣ್ಣು...

ಆ ತೀರದ ಜಂಗಮ‌ಳು ನೀನು...
ಹಾದಿಗಿಂತ ಮೊದಲೇ ನಿನ್ನ ತಲುಪುವ ಹುಚ್ಚು ಕಣ್ಣ ಬೆಳಕಿನ ನಾನು...
ಮೋಹಾಂಬುಧಿಯ ಹನಿಯೇ -
ಮಾತಿಗೆ, ಮುತ್ತಿಗೆ, ತೋಳು ಕಡೆಯುವ ಮತ್ತಿಗೆ ಸಂಗಾತವೊಂದಿಲ್ಲದ ಛಳಿ ಛಳಿ ರಾತ್ರಿಗಳು ಕಡು ವಿರಹಿ ಹಾಸಿಗೆಯನ್ನೂ, ಸೃಷ್ಟಿ‌ಬೀಜದ ಕನಸುಗಳನೂ ತುಂಟು ನಗೆಯಲ್ಲೇ ಅಣಕಿಸುತ್ತವೆ...
_______ ನೀನಿರಬೇಕಿತ್ತು ಈ ಮಳೆಯೊಂದಿಗೆ...


*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)