Saturday, January 25, 2020

ಗೊಂಚಲು - ಮುನ್ನೂರಿಪ್ಪತ್ತೆರ್ಡು.....

ಆಯುಷ್ಯರೇಖೆ..... 
(ಒಂಭತ್ತು ದಾಟಿ ಹತ್ತರ ಬಾಗಿಲಿಗೆ...)  

ಈ ಬಕ್ಕಬಾರಲು ಬಿದ್ದ ಬರಡು ಎದೆ ನೆಲದ ಮೇಲೆ ನಿನ್ನ ಪ್ರೀತಿ ಪಾದಪಲ್ಲವವನೂರು - ಉತ್ತರಾಯಣ ಪುಣ್ಯ ಕಾಲವಂತೆ...
ನೆತ್ತಿಗೇರಿದ ಖೂಳ ಮದಗಳೆಲ್ಲ ಮಣ್ಣು ಸೇರಲಿ - ಅಕ್ಷಯವಾಗಲಿ ನಗೆಯ ಹುಗ್ಗಿ ಎದೆಯ ಭಾಂಡದಲಿ.‌‌..
"ಬಿತ್ತಿದ ಪ್ರೀತಿ ಕಾಳು - ತೆನೆ ತೆನೆ ತೊನೆವ ಪ್ರೀತಿ - ಬಳ್ಳ ಬಳ್ಳ ನಗೆಯ ಕೌಸ್ತುಭ..."
ಸುಗ್ಗಿಯ ಶುಭಾಶಯ... 
     ___15.01.2020
↜↯↹↯↝

ಬಡಿದು ಉಂಬಲೆ ಬಾಳೆ ತುಂಬಾ ನೋವು - ಬಾಳೆ ತುದಿಯಲಿ ನಾಲಿಗೆಗೆ ನೆಂಚಿಕೊಳ್ಳಲು ಚಿಟಿಕೆ ನಗು - ನಿತ್ಯ ಸಮೃದ್ಧ ಭೋಜನ...
ಬದುಕೇ -
ನೀ ಸೆರೆ ಬಿಡಿಸಿ ಕೊಡುವ ಅತಿ ಸಣ್ಣ ಖುಷಿಯನೂ ದೊಡ್ಡದಾಗಿ ಸಂಭ್ರಮಿಸುತ್ತಾ, ಅದೇ ನೀನು ಎತ್ತಿ ಕೊಡುವ ಸಣ್ಣ ನೋವಿಗೂ ಬಹುವಾಗಿ ನರಳುತ್ತಾ; ಹೀಗೆ ಸಾಗುವ ಹಾದಿಯಲ್ಲೀಗ ಉಸಿರನೇ ಸೀಳುವ ದೊಡ್ಡ, ಅಡ್ಡ ನೋವೂ ಅಷ್ಟೇ ಹರಹಿನ ನಗುವಾಗಿ ತುಟಿ ಬಿರಿಯುತ್ತದೆ...
#ಕಣ್ಣ_ಹನಿಯೂ_ಉಸಿರಿನಷ್ಟೇ_ಬಿಸಿ...
↜↯↹↯↝

ನನ್ನ ಹೆಣದ ಕಣ್ಣಲ್ಲಿ ಹಾಗೇ ಉಳಿದ ನಗು - ನಿನ್ನ ಕುಂಚದ ಕವಿತೆ...
#ಬದುಕ_ಮೇಜವಾನಿ...
↜↯↹↯↝

ಇಂತಿಪ್ಪಂತೆ ಮಾಯದ ನಿದ್ದೆ ಕವಿದರೆ ನಿನ್ನನ್ನೂ ಮರೆಯಬಹುದು...
#ನೀನೆಂದರೆ_ನಾನೂ...
↜↯↹↯↝

ನನ್ನೊಳಗೆ 'ನಾನು' ಸತ್ತು 'ನೀನು' ಹುಟ್ಟುವ ಹಾದಿ...
#ಧ್ಯಾನ...
↜↯↹↯↝

ದಡಕಪ್ಪಳಿಸೋ ನೀರಿನ ಹೋರು - ಬಕ ಧ್ಯಾನ - ಮೀನಿನ ಜಾತಕದಲ್ಲಿ ಮರಣ ಮುಹೂರ್ತ.‌‌..
#ನಾನೆಂಬ_ವಿಕ್ಷಿಪ್ತ...
↜↯↹↯↝

ಚಿತೆಯೊಂದಿಗೆ ಮಾತಿಗಿಳಿದೆ - ಬದುಕಿನ ಅಡುಗೆಗೀಗ ಹಳಸದ ಹದ...
#ನಿರ್ಮೋಹ...
↜↯↹↯↝

"ಬಡವ ನಾನು ಬದುಕು ಶ್ರೀಮಂತ ನಂದು - ನಿನ್ನಿಂದ..."
ಉಹೂಂ...
ನೀನೆಂದೂ ಸಿಗಲೇಬಾರದು...
ಸಿಕ್ಕು ಬಿಟ್ಟರೆ ಸಿಕ್ಕ ಆ ತಿರುವಿನಾಚೆ ನಿನ್ನ ಹುಡುಕುವ ತಲ್ಲಣಗಳೊಂದಿಗೆ ಬೆಸೆದುಕೊಂಡ ಜೀವೋನ್ಮಾದ ಸತ್ತು ಹೋದೀತೆಂಬ ಭಯವಿದೆ...
ಹರಿಯುತ್ತಲೇ ಇರಬೇಕು - ನಿಲ್ದಾಣದ ಕನಸು, ಖಬರು ಒಂದೂ ಇಲ್ಲದೆ...
ಹರಿವಿನ ಹಾದಿಯಲಿ ಒಂದೋ ಸಾಗರ ಸಂಗಮ, ಇಲ್ಲಾಂದ್ರೆ ಭುಜಗಳಲಿ ಹಸಿರ ಸಿರಿ ವಿಹಂಗಮ - ಎರಡೂ ನನ್ನ ಪ್ರೀತಿಯನುಂಡೇ ಅರಳಿದ ಆಲಾಪಗಳು...
#ವಿಹ್ವಲವಿಸ್ತಾರ...
↜↯↹↯↝

ನೀರಂತೆ ನಾನು...
ಬಿಟ್ಟು ಚೆಲ್ಲಿದರೆ ಹೊರಗೆ, ಬೊಗಸೆ ತುಂಬಿ ಹೀರಿದರೆ ಒಳಗೆ - ಒಟ್ನಲ್ಲಿ ಹರಿವೊಂದೇ ನನ್ನ ಅನವರತ ಅಸ್ತಿತ್ವ...
#ಗೆಳೆತನ...
↜↯↹↯↝

"ಮಸಣವೇ ಮನೆಯಾದರೂ ಮೌನದ ಭಯ ಜೀವಕೆ..."
ಯಾವ ಹಾಡ ಹಾಡಲಿ - ಉಸಿರು ಸತ್ತ ದನಿಯಲಿ...
#ನೀರವ_ಕುಲುಮೆ...
↜↯↹↯↝

ಉಸಿರೇ -
"ಬಂಧಿಸಿಟ್ಟರೂ ಬಯಲನಾಳುವ ಬೆಳಕು: ಪ್ರೀತಿ ಲಾಲಿ..."
ದಿನದ ಯಾಪಾರ ಮುಗಿಸಿ ಹಾಸಿಗೆಯ ಸುರುಳಿ ಬಿಚ್ಚೋ ಹೊತ್ತಿಗೆ ಎದೆ ಸಂದೂಕದಲಿ ನಾಕಾಣಿಯಷ್ಟಾದರೂ ಪ್ರೀತಿ ಪ್ರಾಪ್ತಿ ಉಳಿಯಲಿ...
ಇರುಳ ತಬ್ಬೋ ದಿಂಬಿಗೂ ನಗೆಯ ಬಿಂದಿ ಅಂಟಲಿ...
ನಾಳೆ ಅಂಬೋ ಕನಸಿಗೂ ಹುಡಿ ಅಣುಗು ಸೋಂಕು ದಾಂಟಲಿ...
#ಅನುರಾಗದಂಬುಧಿ...
↜↯↹↯↝

ಸೂರ್ಯ ತುಳಿದಾಳುವ ಹಾದಿಯ ಇಬ್ಬನಿಯ ಹನಿ ನಾನು - ಮಾತುಮೌನಗಳನೂಳಿ ದಿವ್ಯವ ಬೆಳೆದು ರಸಿಕರಾತ್ಮವ ಕಡೆವ ಕಬ್ಬಿಗರ ಸಭೆಯ ಧೂಳು...
#ನಾನೆಂದರಿಲ್ಲಿ_ಬರಿ_ಮೂಕಧಾತು...
↜↯↹↯↝

ತಾನೆಲ್ಲಿದೀನಿ ಅಂತ ತನಗೇ ತಿಳಿಯದಷ್ಟು ಬಣ್ಣ ಮಾಸಿದ, ಅಂಚುಗಳೆಲ್ಲ ಹರಿದ್ಹೋದ ಆ ಹಪ್ಪು ಹಳೇ ಫೋಟೋದ ಇಪ್ಪತ್ತೋ ಮೂವತ್ತೋ ಚಿಗುರು ಹರೆಯದ ಕಂಪನದ ಮುಖಗಳಲ್ಲಿ ತನ್ನ ಮೊದಮೊದಲ ಎಳಸು ಪ್ರೇಮವೋ, ಬಣ್ಣದ ಕಣ್ಹನಿಯ ನೆನಪೋ ಏನೋ ಒಂದು, ಎಂದೋ ತಾಕಿ ಹೋದ ಅಲೆಯ ಒಂದೊಂದೇ ಹನಿ ಹನಿ ತಿಳಿನಗುವನ್ನು ತಿಣುಕಾಡಿ ಹುಡುಕೋ ನಡು ಮುರಿದ ವಯಸಿನ ಚಶ್‌ಮಿಶ್ ಕಣ್ಣುಗಳು - ಮನಸಿನ ಬೆನ್ನ ಮೇಲೆ ಹಿನ್ನೋಟದ ಚಿನ್ನಾಟದ ಕೂಸುಮರಿ...

ಭಯಭಯದ ಬೆವೆತ ಮುಟ್ಟಿಯಿಂದ ಹಾದಿ ತುಂಬಾ ಬಿತ್ತುತ್ತಾ ಬಂದ ಬೆಲ್ಲದ ಭಾವದ ಕನಸ ಬೀಜಗಳಲ್ಲಿ ಮಣ್ಣ ತಿಂದು ಮರವಾದದ್ದೆಷ್ಟೋ, ಮಣ್ಣೇ ತಿಂದವುಗಳೆಷ್ಟೋ - ಬಿದ್ದ ಗಾಯದ ಗುರುತು ಗೆದ್ದ ಹೆಗಲಿಗೂ ಪದಕ...

ಹಲ್ಲು ಹುಟ್ಟದ ಹಾಲುಗಲ್ಲದಿಂದ ಹಲ್ಲೆಲ್ಲ ಉದುರಿದ ಬೊಚ್ಚುಗೆನ್ನೆಯವರೆಗೆ "ಹಾಯ್ದು ಬಂದ ನಿನ್ನೆಗೆ ಕಾಲವೇ ಬೇಲಿ..."
#ಕಾಲನುಕ್ಕಡದಿ_ಕಳೆದೇ_ಹೋದವರು... 


ನಾನೆಲ್ಲಿದೀನಿ...?

↜↯↹↯↝

"...... ಮತ್ತೆ ಎಲ್ಲಾ ಅಲ್ಲಿಂದಲೇ ಶುರುವಾಗುವಂತಿದ್ದಿದ್ದರೆ ಅಂತನ್ನಿಸೋ ಹೊತ್ತಿಗೇ; ಬೀಳು ಬೀಳಲು ಬಿಡದೇ ಬಿತ್ತುತಿರು ಎದೆ ಗದ್ದೆಯಲಿ ಮುಟಿಗೆ ಪ್ರೀತಿ ಬೀಜವ ಈ ಮುಂದೆಯೂ ಎಲ್ಲ ಚೆಂದವೇ ಇದೆ ಮರುಳೇ ಅಂತಂದು ಹೆಗಲ ತಬ್ಬುತ್ತದೆ ಬದುಕು..."

ಒಂದು ಸಣ್ಣ ಸಂತಸ:
ಬ್ಲಾಗ್ ಎಂಬೋ ನಂದ್‌ನಂದೇ ಅನ್ನುವ ನನ್ನ ಈ ಹುಚ್ಚುಚ್ಚು ಅಕ್ಷರ ಜಾಲ ತೇಕುತ್ತಾ, ತೆವಳುತ್ತಾ, ತಡವರಿಸುತ್ತಾ ಅದು ಹೇಗೋ ಒಂಭತ್ತು ವರುಷಗಳ ದಾಟಿ ಹತ್ತನೇ ವಸಂತಕ್ಕೆ ಹಾಯುತ್ತಿದೆ - ನಾನೇ ಬೆಚ್ಚುವ ಹಾಗೆ...
ಮುರಿದ ಸಂಸಾರದ ವಾರಸುದಾರನ ಬಾಯಲ್ಲಿ ಪ್ರೇಮಮಯೀ ಲೋಕದ ಭಾಷಣ ಓತಪ್ರೋತ...

ಗಹನ ಓದಾಗಲೀ, ಸಾಹಿತ್ಯದ ಗಂಧ ಸಾಂಗತ್ಯದ ಕಸುವಾಗಲೀ, ಗಟ್ಟಿ ನಡೆಯುವ ಯಾವ ತಯಾರಿಯಾಗಲೀ ಇಲ್ಲದ - ವ್ಯಾಕರಣದ ಗುಣ, ಮಾತ್ರೆ, ಪ್ರಾಸ, ತ್ರಾಸಗಳ ಒಡ್ಡೋಲಗದ ಕಿಂಚಿದ್ ಅರಿವೂ ಇಲ್ಲದೇ ಕೇವಲ ಭಾವಾನುಭಾವದ ಸ್ಪಂದನೆಯನಷ್ಟೇ ನಂಬಿ ಅಕ್ಷರಗಳ ಹೆಣೆಯುತ್ತ ಬಂದವನ ಬಡಬಡಿಕೆಗಳನೂ ಅರ್ಹತೆಗೆ ಮೀರಿದ ಪ್ರೀತಿ ತೋರಿ ಓದಿಕೊಂಡವರು ನೀವುಗಳು...

ಕರುಳು ಕಲಮಲಿಸಿ ಕಣ್ಣು ತೋಯ್ದಾಗಲೆಲ್ಲ ಕೈನೀಡಿದ್ದು ನೇಹಗಳು - ಎದೆಯ ಕಿಬ್ಬಿಯ ಬೇಗೆಯ ಹೆಣಭಾರವ ಇಳುಕಿ ಹಗುರಾಗಿಸುತಿರುವುದು ಅಕ್ಷರ... 
#ಸೋಲಗೊಡದ_ಬೆನ್ನಿನಾಸರೆ...   

ಈ ಪಯಣವ ನಚ್ಚಗಿಟ್ಟ ನಗುವೇನಿದ್ದರೂ ಅದು ನೀವುಗಳಿಟ್ಟ ಪ್ರೀತಿ ತುತ್ತು...
ದೈವ ಮುನಿದಾಗಲೂ ಕಾಯ್ದ ಪ್ರತಿ ಜೀವಾಭಾವಗಳ ಮುಚ್ಚಟೆಯ ಅಕ್ಕರೆಗೂ ಆಭಾರಿ...
ಪ್ರೀತಿ ಕಾಯುತ್ತದೆ, ಕಾಯಲಿ ಸದಾ...
ಧನ್ಯವಾದ... ಲವ್ಯೂ ಆಲ್... 💞💞

Sunday, January 12, 2020

ಗೊಂಚಲು - ಮುನ್ನೂರಿಪ್ಪತ್ತೊಂದು.....

ನಿಧುವನ ಇಂದ್ರಜಾಲ.....

ಎದೆಯ ಮೇಲೆ ನಿನ್ನುಸಿರ ಘಮವಂಟಿ ಅರಳಿದ ರೋಮಕುಲ...
ಎಡ ಮಗ್ಗುಲಲಿ ತಣ್ಣಗೆ ಹರಳುಗಟ್ಟಿದ ವಿರಹ...
ಬೋರಲಾಗಿ ಸುಖಾಸುಮ್ಮನೆ ಕೆರಳಿ ಕನಲುವ ಪುರುಷ ಪೌರುಷ...
ನರಕವೆಂದರಿಲ್ಲಿ ಒಂಟೊಂಟಿ ಇರುಳು ಮತ್ತು ಮಾಗಿ ಬೇಗೆ...
#ಉಫ್...
⇴↜↯↝⇴

ಅಲ್ಲಲ್ಲಿ ತಿರುವುಗಳಲಿ ಕೆಣಕೋ ತಿಳಿಗತ್ತಲ, ಬೆತ್ತಲೆ ಬೆಳಕಲ್ಲಿ ಹೊಳೆಹೊಳೆವ ಏರಿಳಿವಿನ, ಕತ್ತಲು ಬೆಳಕಿನ ಹೊಕ್ಕುಬಳಕೆಯ ಊರ ನಡು ಕಿರು ಓಣಿಯ ಅವಳ ಮೈ ಚೆಲುವ ಸಿರಿ ಸೀಮೆಯಲಿ ಹಾದಿ ತಪ್ಪಿ ಅಂಡಲೆವ ಬಿಸಿ ಉಸಿರ ಹೋರು ನಾನು...
ಮಾಗಿಯೆಂದರೆ -
ಕಾಮನ ಉಸಿರಿಗಂಟಿದ ರತಿಗೊರಳ ಹೊರತಿರುವಿನ ಘಮಲು - ರತಿಯೆದೆಯೇರಿಯ ದೃಷ್ಟಿ ಮಚ್ಚೆ...
#ಸುರತ_ಸಂಗ್ರಾಮ...
⇴↜↯↝⇴

ಗಾಳಿಯ ಹುಯಿಲಿಗೆ ಅವಳ ಹೆಗಲಿಂದ ಸೆರಗು ಎಗರೆಗರಿ ನಲಿವಾಗ ಬಯಲಲ್ಲೂ ಉಸಿರಿಗೆ ಹೆಣಗುತ್ತೇನೆ...
ಅದೇ ಗಾಳಿ ಸೆಳೆದು ತರುವ ಅವಳ ಭುಜದ ತಿರುವಿನ ಘಮಕೆ ಕರುಳಾಳದಲ್ಲಿ ಜ್ವಲಿಸುವ ಪ್ರಣಯಾಗ್ನಿ ಅಲೆಗಳ ಸಂಭಾಳಿಸಲಾಗದೆ ಕನಲುತ್ತೇನೆ...
ನಾಚಿಕೆಯ ಕಣ್ಣಿ ಕಳಚಿ, ಮುಸ್ಸಂಜೆ ಛಳಿಯ ಮದವಿಳಿಸಿ, ಮತ್ತ ಮೈಮನಕೆ ಸಂಭ್ರಾಂತ ಬೆವರ ಹೊದೆಸೋ ಆಟಕೆ ಅವಳನು ಕೂಗುವುದಕೆ ಹವಣಿಸುತ್ತೇನೆ...
ಉಫ್!!!
ಸಖಿಯ ಅಂದದೆದುರು ಹೋರಿ ಹರೆಯಕ್ಕೆ ಮಾಗಿ ಕೈನೀಡಬಾರದು - ಪೋಲಿ ಜೀವದ ಬೆರಕಿ ಭಾವಗಳನು ಮಾದಕ ಚೆಲುವು ತಾ ಬೆದಕದೇ ಹೋಗದು...
#ನಾಭಿನಾಳದಹುಚ್ಚು...
⇴↜↯↝⇴

ಅಲ್ಲಿನಿತು ಸಂಪದ ಬೆಳಕ ಮೀವಂತೆ ನೀ ಸೆರಗು ಹೊದೆಯೋ ಮಾಟವು, ಅಲೆಯಂತೆ ಅಲ್ಲಲ್ಲೆ ಅಲೆವ ಆ ಕಣ್ಣ ಗೋಳದ ಜೂಟಾಟವು, ಸಣ್ಣ ನಡು ತಿರುವಿನ ಕಿರು ಸುಳಿ ಸೆಳವು, ಅಡಿಯಿಂದ ಮುಡಿತಂಕಾ ಆಸ್ಥೆಯಲಿ ಅಲಂಕರಿಸಿದ ಎಲ್ಲ ಅಂದ ಚಂದ ಮೇಳೈಸಿ ಎನ್ನೆದೆಗಿಳಿಸೋ ಪ್ರಣಯ ಪೇಯವು ಹುಟ್ಟು ಹಾಕೋ ನಶೆಗೆ ನೀ ನೀನಾಗಿ ಸಿಗದೇ ಬೇರೆ ಮದ್ದಿಲ್ಲವೇ ಓ ಮೋಹವೇ...
ಕಾಡುವ, ಕಾಡಿ ಕಾಡಿ ಕೂಡುವ, ಕೂಡಿ ಮತ್ತೆ ಕಾಡುವ ನಿನ್ನ ಕಳ್ಳ ಕಾದಾಟದ ಮಧುರ ಯಾತನೆಯ ಸೆರಗಿನ ಗಂಟಲಿ ಸ್ವಯಂ ಬಂಧಿ ಪರಮ ಸ್ವಾರ್ಥಿ ಪ್ರಣಯಿ ನಾನು...
#ಪ್ರಣಯಾಗ್ನಿರಾಗ...
⇴↜↯↝⇴

ಚಂದಿರ ಅರಳೋ ದಾರಿಯಲಿ ಅಲ್ಲೆಲ್ಲೋ ಉಕ್ಕುವ ಕಡಲು - ಭಗ್ಗೆನ್ನುವ ನದಿಯ ಒಡಲು...
ಕಣ್ಣಲ್ಲಿ ಕನಸಾಗಿ ಕದಲುವಾಗ ನೀನು - ಮುಲುಗುವ ಇರುಳ ಕಾವಲ್ಲಿ ಇಷ್ಟಿಷ್ಟೇ ಬೂದಿಯಾಗುವ ಚಿರ ವಿರಹಿ ನಾನು...
ಒಂಟಿ ಹರೆಯದ ಹದತಪ್ಪುವ ನಶೆಯ ಭಾರಕ್ಕೆ ಹೆಸರು ನೀನು, ನಾನು...
#ನಾಭಿನಡುಕ...
⇴↜↯↝⇴

ಕುಪ್ಪಸ ಕಳಚಿಟ್ಟು ಬೆಳಕ ಹುಡಿ ಹಚ್ಚಿ ತೊಳೆದ ಪೂರ್ಣ ಕುಂಭದ ಆವೇಶದ ಕರೆ, ಹೆಣ್ಣಾಗುವ ಆಸೆ ಮತ್ತು ಹಣ್ಣಾಗುವ ಭಯದಿ ಪಟಪಟಿಸೋ ಕಣ್ಣ ಕವಣೆಯ ಆವೇಗದ ಕೋರಿಕೆ ನನ್ನಲ್ಲಿ ಅಪರಂಪಾರ ಉನ್ಮಾದದಲೆಯೆಬ್ಬಿಸಿ ಸೆಳೆಯುತ್ತದೆ ಅವಳ ಶಯನ ಸಜ್ಜಿಕೆಗೆ...
ರಕ್ಕಸ ಹಸಿವಿನ ಮಾಯದ ತೋಳ್ಗಳ ತೆಕ್ಕೆಯಲಿ ರಕ್ತ ಕುದ್ದು ರೋಮ ರೋಮಗಳೂ ಬೆವರ ಚೆಲ್ಲುವಲ್ಲಿ ಸ್ವರ್ಗ ಹಾಸಿಗೆಯ ಕಾಲಾಳು...
ಕತ್ತಲ ಹಸಿವಿಗೆ ಸ್ವಪ್ನದ ಊಟ - ಬಿಸಿಯೇರಿದ ಅವಳ ಮೈಬೆಳಕು.‌‌...
#ಸುರತ_ಮಧುಪಾನ
⇴↜↯↝⇴

ಮುದ್ದಾಗಿ ಕಾಡಬೇಡ ಹೀಗೆ
ಒಳಮಾತು ಕವಿತೆ ಆಗೋ ಹಾಗೆ...
ಖುದ್ದಾಗಿ ಬಂದು ಹೋಗೆ ಹಿತ್ಲೀಗೆ
ಕನಸು ಕಣ್ಣಿಂದ ಇಳಿದು ಹೋಗದ್ಹಾಂಗೆ...
#ಕಪ್ಪು_ಹುಡುಗೀ...
⇴↜↯↝⇴

ಬೆನ್ನು ಬಿಲ್ಲಾಗಿಸಿ ನೀ ಬಿಟ್ಟ ಹೂ ಬಾಣ ನನ್ನೆಲ್ಲ ಅರಿವೆ ಪರಿವೆಗಳ ಸೀಳಿ ಜೀವರಾಗಗಳ ಚೆಂಡಾಡುವ ಪರಿಗೆ ಮಾಗಿಯ ರಕ್ಕಸ ಛಳಿ ನಿಂತಲ್ಲೆ ಸಳಸಳ ಬೆವರಿ ಇರುಳ ಬಾಗಿಲಲ್ಲೇ ಎದೆ ಬಿಗಿದುಕೊಂಡು ತುಟಿಕಚ್ಚಿ ನಗುತಿತ್ತು - ಪ್ರತಿ ಸಾರ್ತಿಯೂ ಹೊಸ ಹೊಸತೇ ಆಗಿ ಅಪ್ಪಳಿಸುವ ಶೃಂಗಾರದಲೆಯ ಹೋರು ಸುಳಿ ಗಾಳಿ ಗುಂಜನವ ಸೀಳುತಿತ್ತು...
#ಊರು_ಸಂಗಾತ...
⇴↜↯↝⇴

ಕಣ್ಣು ಸೋಲುವೊಲು ಹುಡುಕುತ್ತೇನೆ - ಬೆಳಕ ಕೋಲನೂರುತ ಹರಿದು ಬಂದೀಯೆಂದು...
ಕೊರಳ ಕೊಂಕಿಸಿ ಸೆಳೆಯಲೆಳಸುತ್ತೇನೆ - ಬಿಗಿದ ಸೆರಗ ಗೂಡಿನ ಸಂಪದದ ಹಚ್ಚೆಯಾದೀಯೆಂದು...
ಜೋಗೀ -
ಮಾಗಿಯಿದು ಹರೆಯ 'ಕಾಯುವ' ಕಾಲ - ಕಾಡಿಸದೇ ಕೂಡ ಬಾ, ಸಿದ್ಧಿಸಲಿ ಪ್ರಣಯ ಇಂದ್ರಜಾಲ...
#ನಿಧುವನ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮೂರು ಎರ್ಡು ಸೊನ್ನೆ.....

ಮುರಿದ ಫಲಕಗಳು.....

ನಂಗೆ ನಾನು ಇಷ್ಟು ಚಂದ ಸಿಗುವಾಗ ಪ್ರೀತಿಸೋಕೆ ಇನ್ಯಾವುದೋ ಅಪರಿಚಿತತೆಯನ್ನ ಯಾಕೆ ಹುಡುಕ್ಬೇಕು...?
ಯಾಕೇಂತ ಅಷ್ಟು ಹಪಹಪಿಸಿ ಹುಡುಕ್ತೀನಿ...??
ಅಶ್ರುತವಾದಲ್ಲಿ ಆನೆಂಬ ಗುರುತುಳಿಸುವ ಹುಂಬ ಹಂಬಲವೇ ಪ್ರೀತಿಯ ಮೂಲವಾ...???
ಬಯಲ ಬೆಳಕಿಗೆ ಬೇಲಿ ಝಡಿಯುವ ಪರಮ ಬೋಳೆತನಕೆ ಪ್ರೀತಿ ಪಟ್ಟ ಕಟ್ಟಿ ಮೆರೆವ ಭಂಡತನವ್ಯಾತಕೋ...????
#ಅರ್ಥಾರ್ಥವರಿಯದ_ಮರುಳ_ನಾನು...
↺⇄⇆↻

ಉದ್ದುದ್ದ ಬಿದ್ದ ಬೆಳಕಿನ ಕೋಲು - ಮುರಿದ ಕತ್ತಲ ಚೂರು - ಅರ್ಥವಾಗದ ಮರಣರಿಂಗಣ ಹಾಡು...
ಹನಿದು ಹರಿವ ಮೋಡ - ಹರಿಗೋಲು ಮುಗುಳು - ಬೆಂಕಿಯನುಂಡು ತೇಗಬೇಕು ಉಸಿರ ದೀಪದ ಗೂಡು...
ಬದುಕೇ ಬೇಲಿ - ಬದುಕೇ ಬಯಲು - ಬದುಕೋ ಬಯಕೆಯೇ ಬದುಕಿನ ಜಾಡು...
#ನಾನೆಂದರಿಲ್ಲಿ_ಕಾಲ_ಕಡಿದ_ಮೂರ್ತ...
↺⇄⇆↻

ಹತ್ತಿರ ಸೆಳೆದು ಕೂರಿಸಿದ ಆಪ್ತತೆ ಹಾಗೂ ಸಲಿಗೆಯಂತೆಯೇ ದೂರ ತಳ್ಳಿ ನಿಲ್ಲಿಸಿದ ನಿರ್ಲಕ್ಷ್ಯ ಮತ್ತು ಉಡಾಫೆಯೂ ದಿನಕಳೆದಂತೆ ಅಭ್ಯಾಸವಾಗುತ್ತೆ...
ಸಾವೂ ನೆನಪಿನ ಪೆಟ್ಟಿಗೆ ಮೂಲೆಯ ಸವೆದ ನಾಣ್ಯದಂತಾಗುತ್ತೆ...
ರುದಯ ರಾಗವ ಕೊರಳಿಗಂಟಿಸಿಕೊಂಡು ಏಳು ಸಾಗರದಾಚೆಗೆ ಪಾರಿವಾಳ ಹಾರುತಿದ್ದ ಕಾಲವೊಂದಿತ್ತಂತೆ 'ತನ್ನವರ ಕೂಡಲು' - ಏಳು ಸೆಕೆಂಡುಗಳ ದೂರಕೊಂದು ಮುಗುಳ್ನಗೆಯ ದಾಟಿಸಲೂ ಪುರುಸೊತ್ತಿಲ್ಲದ ಜಾಲ ಈಗ 'ನಮ್ಮವರೇ ಎಲ್ಲರೂ...'
ನಾನು - ನೀನು - ಅಳಿದೇ ಹೋದ ನಾವು...
ಇನ್ನು ನಿಜ ಪ್ರೀತಿಗೆಲ್ಲಿಯ ತಾವು...
#ಹೊಕ್ಕುಬಳಕೆ...
↺⇄⇆↻

ಜಗದ ಸಂತೆಯಲಿ ಏನೆಲ್ಲ ಆಗಿಯೂ ನನ್ನಲ್ಲಿ ನೀ ನೀನಾಗಿಯೇ ಉಳಿದೆ...
ಕನಸ ಚಿತ್ರಗಳಿಗೆಲ್ಲ ಮೊಳೆ ಜಡಿದು ಹಾರವಿಟ್ಟ ಮೇಲೂ ಉಸಿರಲ್ಲಿ ನಿನ್ನದೇ ಗಂಧವಿದೆ...
ಮಧುಪಾತ್ರೆಯಲೂ ಕಣ್ಣ ಹನಿಯನೇ ತುಂಬಿ ತುಂಬಿ ಗುಟುಕರಿಸುತ್ತೇನೆ - ನೀ ಖಾಲಿಯಾಗಬಾರದು...
ಕಾಡುಮಲ್ಲಿಗೆಯ ಘಮಕೆ ಸೋತು ಕಾಡು ಪಾಲಾದ ಹುಡುಗನ ಕಥೆಗೆ ನನ್ನದೇ ಹೆಸರಿಟ್ಟುಕೊಂಡೆ - ಮತ್ತೆ ನೀ ಮರೆತು ಹೋಗಬಾರದಲ್ಲ...
ನಾಳೆ (?) ಸಮಾಧಿಯ ಮೇಲೂ ನಿನ್ನ ಹೆಸರೇ ಬಿದ್ದೀತು - ನಂಗೊಂದು ಹೆಸರೇ ಇಲ್ಲವಲ್ಲ...
ಈ ನಿರ್ವಾತ, ಆ ನಿರ್ವಾಣ - ಭಾರಾಭಾರ ನಗು...
#ಬದುಕೇ...
↺⇄⇆↻

ರಣ ಕಾಡಿನ ನಟ್ಟಿರುಳಲಿ ಹೆಣ ಕಾಯುವಾಗಲೂ ಹುಟ್ಟಿರದ ನಿತ್ರಾಣವೊಂದು ಕಳೇಬರವ ಕಾಯ್ದಿಟ್ಟುಕೊಂಡಂತ ಮೃತ ಶೀತಲ ಬದುಕಿನ ಪ್ರತಿ ಹೆಜ್ಜೆಯನೂ ಕಾಡುತ್ತದೆ...

ಖಾಲಿ ಖಾಲಿ ಮುಂಜಾನೆ - ಹಾಳುಸುರಿವ ಮುಸ್ಸಂಜೆ - ಉಸಿರಾಟವೂ ಏಕತಾನ ಆಗೀಗ...

ಒಳಗೇ ಕುದಿವ ಸುಳ್ಳು ಮತ್ತು ಸತ್ಯದ ನಡು ಮಧ್ಯೆ ತಡಬಡಿಸುತ್ತಾ ಕೂತ ಸುಕ್ಕುಗಟ್ಟಿದ ಸುಡುಗಾಡು ಮೌನ...

ಯಮ ಕಿಂಕರರು ತುಳಿದ ಹಾದಿಯಲ್ಲೂ ಹೊಸ ಗರಿಕೆ ಚಿಗುರುತ್ತೆ ಅಂತ ಸಾಂತ್ವನಿಸೋ ನನ್ನದೇ ಪ್ರಜ್ಞೆಯ ಮಾತನೂ ಎಡಗಾಲಲ್ಲೊದ್ದು, ತನ್ನ ತಾ ಸಂಭಾಳಿಸಿಕೊಳ್ಳಲೂ ಅರಿಯದೇ ಸುಖಾಸುಮ್ಮನೆ ಮಗುಚಿ ಬೀಳೋ ನನ್ನದೀ ಅಡಸಂಬಡಸಾ ಮನಸು...

....‌‌‌‌....ಕಾಯುವುದು.... ಕಾಯುವುದು...... ಮತ್ತು ಕಾಯುವುದಷ್ಟೇ..... ನಿಂತಲ್ಲೇ ನಿಂತು.... ಯಾವುದಕ್ಕೋ, ಎಷ್ಟು ಕಾಲವೋ..... ನಿರಂತರ ನಿಷ್ಫಲ ನಿರೀಕ್ಷೆ..........

...‌‌‌‌....ದೂರ .‌.......ದೂರ .........ಬಹುದೂರ ಹೋಗಬೇಕು...... ಏನಕ್ಕೂ, ಯಾರಿಗೂ ಕಾಯುವ ಬೇಯುವ ಗೋಜಿಲ್ಲದ, ಎಲ್ಲ ಮರೆಯುವ, ಇಲ್ಲಿನೆಲ್ಲವ ತೊರೆಯುವ ಆ ನಿಶ್ಚಲ ತೀರವ ಸೇರಬೇಕು......

ಸುಳ್ಳು ನಗೆಯ ಬದುಕಿ ಸುಸ್ತಾದ ಕಾಲಕ್ಕೆ ಮಹಾಮೌನ ತಾ ಕರುಣೆದೋರಿ ಉಸಿರ ತಬ್ಬಿ ನಿಸೂರಾಗಿಸಬೇಕು...
#ನಿರ್ವಾಣ...
↺⇄⇆↻

ಅಕರಾಳ ವಿಕರಾಳವಾಗಿ ಹರಡಿಕೊಂಡ ಈ ಬದುಕಿನ ವಿಚಿತ್ರ ಕತ್ತಲು ನೀನು - ಉಂಡಷ್ಟೂ ಉಳಿಯುವ ರಣ ಹಸಿವು...

ಸ್ವರ್ಗ ಸೀಮೆಯಲಿ ಓಲಾಡಿದ ಹೆಜ್ಜೆ ಗುರುತುಗಳು ಮೈಯ್ಯ ತಿರುವುಗಳಲೆಲ್ಲ - ನೀ ಬಂದು ಹೋದ ಮೇಲೆ...

ತುಟಿಗೆ ತುಟಿ ಸೋಕಿಸಿ ಆತ್ಮಕ್ಕೆ ಮುತ್ತಿಟ್ಟು ಕಾರಿರುಳಲ್ಲೂ ನಂಗೆ ನನ್ನ ಬಿಚ್ಚಿ ತೋರುವ ಸಾಕ್ಷೀಪ್ರಜ್ಞೆ ನೀನು - ತುಂಬಿ ಮೇಳನ ಸಾವಿಗೂ ಬದುಕಿನದೇ ಹೆಸರು...

ನನ್ನ ನಾ ಹುಡುಕುವಾಗ ಸಿಕ್ಕಿದ್ದು ನೀನು... ಅದಕೇ ನೀನು ಅರ್ಥವೇ ಆಗುವುದಿಲ್ಲ ಮತ್ತು ಅರ್ಥವಾಗಲೇ ಬೇಕಿಲ್ಲ ಕೂಡ - ಈ ಅನರ್ಥದೊಳಗೂ ಒಂದು ರುಚಿ ರುಚಿ ಪದಾರ್ಥವಿದ್ದಂತಿದೆ...

ಜೀವ ಹಿಂಡುವಾ ಈ ಛಳಿಯೇ ಜೀವವ ಒಯ್ಯಬಾರದೇ ನೀನಿರುವಲ್ಲಿಗೆ - ನಾನೂ ನಕ್ಷತ್ರವಾಗಬೇಕು - 'ಸ್ವರ್ಗ' ಸೀಮೆ...
↺⇄⇆↻

***ನಿಬಂಧನೆಗಳಿಗೊಳಪಟ್ಟಿದೆ...
***ಅತಿಕ್ರಮ ಪ್ರವೇಶ ನಿಶೇಧಿಸಲಾಗಿದೆ...
***ಷರತ್ತುಗಳು ಅನ್ವಯಿಸುತ್ತವೆ...
***ಕನಸುಗಳು ಮಾರಾಟಕ್ಕಿಲ್ಲ...
***ಹಕ್ಕುಗಳನ್ನು ಕಾಯ್ದಿರಿಸಲಾಗಿದೆ...
***ಕಣ್ಣೀರು ಬತ್ತಿದೆ ಎಚ್ಚರಿಕೆ...
#ಪ್ರೀತಿ_ತುಳಿದು_ಒಡೆದ_ಎದೆ_ಗೋಡೆಗೆ_ಅಂಟಿಸಿದ_ಮುರಿದ_ಫಲಕಗಳು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮೂರು ನೂರಾ ಹತ್ತೊಂಭತ್ತು.....

ಮಾಗಿ ಮತ್ತೇರಿದಾಗ.....

ಎದೆಯ ಪಲ್ಲಂಗಕೆ ಮೆಲ್ಲನೊಲಿದು ಬರಬಾರದೇ...
ಸೆಜ್ಜೆವನೆಯಲಿ ಗೆಜ್ಜೆ ಮೆಲ್ಲನುಲಿಯಬಾರದೇ...
ತಳುಕು ತೋಳ ಅಂಬಾರಿಯಲಿ ನಗ್ನಾಂಗ ಮೆರವಣಿಗೆಗೆ ಒಂಚೂರು ಸಹಕರಿಸಬಾರದೇ...
ಮಾಗಿಯಿದು ಮೈಯ್ಯಾರೆ ಮದವಳಿದು ಮೈಮರೆಯಬಾರದೇ...
#ಮತ್ತೆ_ಮತ್ತ_ಸಮಾಗಮ...
⇴⇱⇲⇴

ಮೊಲೆಹೂ ಅರಳಿ ಮೈಮುರಿವ ಕನಸಿಗೆ ಹೊದ್ದ ದುಪ್ಪಟಿಯ ನೂಲು ನಲುಗುತಲಿ ನನ್ನಾಸೆ ಅಂಗನೆ ಮೈಛಳಿಯ ಕಳೆವ ಹೊತ್ತು...
ಇರುಳೆಂದರೆ ಶೃಂಗಾರದಲೆಯ ಅಬ್ಬರದ ಸ್ವತ್ತು...
#ಮಾಗಿ_ಮತ್ತೇರಿದಾಗ...
⇴⇱⇲⇴

ನೀ ಎದ್ದು ಹೋದ ದಶಕಗಳ ನಂತರವೂ ನಿನ್ನ ತೋಳಿಂದ ಕಳಚಿಕೊಳ್ಳಲಾಗದ ನನ್ನೀ ಪರವಶತೆಗೆ ಏನೆಂದು ಹೆಸರಿಡಲಿ...?!
ಅದ್ಯಾವ ಬೇಹದ್ ಸೆಳೆತ ಈ ಮೈಮನವ ನಿನ್ನ ಸುಪರ್ದಿಗೆ ಬೇಶರತ್ ಅಡವಿಟ್ಟದ್ದು...??!!
ನಾ ಹಾಯುವ ಕಾಲನ ಬೆನ್ನಿಗಂಟಿದ ರತಿ ಹೋಮದ ಬೆಮರು ನೀನು...
#ಮೋಹ...
⇴⇱⇲⇴

ನಾನೆಂಬೋ ನನ್ನ ಜೀವಾಭಾವಗಳೆಲ್ಲ ಮತ್ತೆ ಮತ್ತೆ ಸೋತುಹೋಗಿ, ಎದೆಯಾಗ್ನಿ ಕಿಡಿ ಹೊತ್ತಿ ಕೊಲ್ಲುವಂಥ ಅದೋ ಆ ಮಾಟಗಣ್ಣು...
ಇವಳೇ -
ಬ್ರಹ್ಮ ರಂದ್ರದಲಿ ಹುತ್ತಗಟ್ಟಿದ ಮೋಹ ನೀನು...
#ರಜನಿಗಂಧ...
⇴⇱⇲⇴

ಗದ್ದಕಂಟಿದ ಬಿಂದಿಯ ತೆಗೆದು ಹಣೆಗಿಟ್ಟುಕೊಂಡಂತೆ ಭುಜದ ಅಂಚಲಿ ಕೆತ್ತಿದ ಕಿವಿಯೋಲೆಯ ಅಚ್ಚನು ಅಳಿಸಲಾದೀತೇನೇ - ಇರುಳ ಉತ್ಸವದ ಚಂದ ಚಂದ ಕುರುಹುಗಳು ಹಗಲ ಕಾಡುವ ಚಂದದ ಪರಿಯ ಕನ್ನಡಿಯ ಕಣ್ಣಿಂದ ಕೀಳಲಾದೀತೇನೇ...
#ಮೂಗನ_ಎದೆ_ರೋಮದ_ಬುಡದಲ್ಲಿ_ಹಾಗೇ_ಉಳಿದ_ನಿನ್ನಯ_ಉಸಿರ_ಬೆಂಕಿ...
⇴⇱⇲⇴

ಮಡಿಯ ಬೇಲಿಯ ಮುರಿದು - ದುರದುಂಡಗಿನ ತಿಳಿ ಬೆಳಕನು ಹೊದೆದು - ಛಳಿಯ ತುಪ್ಪಳ ಸುಲಿದು - ರತಿಯ ಊರು ಕೇರಿಯ ನಡುವೆ ಮದನ ಮೆರೆಯಬೇಕು...
ಋತು ಮಾಗಿ ಮಧು ಈಯ್ದು ಈ ಗಂಧರ್ವರೀರ್ವರ ಬೆದೆಗೆ ಮೈಯ್ಯ ಮರೆಯಬೇಕು...
#ನಾನು_ನೀನು...
⇴⇱⇲⇴

ನೀನಿರದ ರಾತ್ರಿಗಳಲಿ ಕಣ್ಣಪಾಪೆಯ ಕಾಡೋ ಕನಸು ನಿನ್ನ ಬೆನ್ನ ಹುರಿಯ ಬುಡದಿ ನನ್ನುಗುರ ಬಳಪ ಬರೆದ ನಿನ್ನದೇ ಹೆಸರ ಗುರುತನು ಹುಡುಕುತ್ತದೆ - ಹೆಗಲ ಮೇಲೆ ನೀನುಳಿಸಿ ಹೋದ ಉನ್ಮಾದದ ಗುರುತು ಸುಳ್ಳೇ ತುರಿಸುತ್ತದೆ - ಬಿಸಿ ರಕ್ತದ ಧಾಳಿಗೆ ತೊಡೆಯ ತಿರುವಿನ ತಾಳ ತಪ್ಪುತ್ತದೆ - ಮೋಹದ ರುಚಿ ವಿರಹದಲ್ಲಿ ಹೀಗೆ ಹಾಯುತ್ತದೆ...
#ಪೋಲಿಯಂತೆ_ನಾನು...
⇴⇱⇲⇴

ತೋಳ ಬಳ್ಳಿ ಕೊರಳ ಬಳಸಿ, ಹೆರಳ ಹೂವು ಹರಡಿ ಘಮಿಸಿ, ಬಿಸಿ ಬಿಸಿ ಉಸಿರ ಸುಳಿಗೆ, ಮೈಯ್ಗೆ ಮೈ ಹೊಸೆವ ಉರವಣಿಗೆಗೆ, ಬೆರಳ ಸಲಿಗೆ, ಮುತ್ತು ಸುಲಿಗೆ, ರತಿ ರಂಗಿಗೆ ರೋಮ ರೋಮ ಅರಳೋ ಪರಿಗೆ - ನೀನಿದ್ದರೆ ಛಳಿಯೊಂದಿಗೆ ನಿದ್ದೆಯೂ ಸನಿಹ ಸುಳಿಯುವುದಿಲ್ಲ...
ಕಾಯ್ದು ಕಾಯಿಸಿ ಕಡೆದು ಕರಗಿ ಕರಗಿಸಿ ಕಣ್ಣಿಗೆ ಝೋಮು ಹತ್ತಿಸಿ ಕಾಯುತಿದ್ದ ನಿನ್ನ ಕಾಯ ಜೊತೆಗಿರದ ರಾತ್ರಿಗಳಲಿ ಈ ಕಂಗಳು ನಿದ್ದೆ ಕೂಡದೇ ನಿನ್ನ ಒದ್ದೆ ತುಟಿಯ ಕರಡಿ ಮುದ್ದಿಗೆ ಸುಖಾಸುಮ್ಮನೆ ಕಾದು ಕಾದು ತಳಮಳಿಸುತ್ತವೆ...
#ನೀನಿರದೇ_ನಿದ್ದೆಯಿಲ್ಲ_ನೀನಿದ್ದರೆ_ನಿದ್ದೆ_ಬೇಕಿಲ್ಲ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮೂರು ನೂರಾ ಹದ್ನೆಂಟು.....

ಹನಿಯಾಗು ಸಾಕು - ಕಡಲು ಹನಿಹನಿಯ ಕೂಸು..... 

ಕಾರಣ ಹೇಳಿ ಕಳಚಿಕೊಳ್ಳಬೇಕೆನ್ನುವುದು ಎದೆಯ ಅಲಿಖಿತ ಒಪ್ಪಂದ...
ನಿರ್ಲಕ್ಷ್ಯ ಅನ್ನೋ ಹಿಮ ಖಡ್ಗ...
#ನೇಹ_ಪ್ರೀತಿ_ಇತ್ಯಾದಿ...
**ಬೇರೆ ಬೇರೆ ಅನ್ನಿಸೋ ಒಂದೇ ಮಾತು...
↜⇂⇃↝

"ಕಣ್ಬಿಟ್ಟರೆ ಸುಡು ಬೆಳಕ ಗಜಿಬಿಜಿಯಲ್ಲಿ ನೀ ಕಳೆದೇ ಹೋಗ್ತೀಯ...
ನಿದ್ದೆ ಮರುಳಿನ ಈ ಕಣ್ರೆಪ್ಪೆಯಡಿಯ ತಾಯಿ ಕತ್ತಲೆ ಮತ್ತು ಅಲ್ಲರಳುವ ನಿನ್ನ ಪಾರಿಜಾತದಷ್ಟು ಮೃದು ನಗು ಮಾತ್ರ ನಂದ್‌‌ನಂದೇ ಯಾವಾಗ್ಲೂ..."
ಚೂರೂ ನಸನಸೆಯಿಲ್ಲದ ನಿನ್ನ ಸ್ವಪ್ನದ ಅಫೀಮು ತುಂಬಿ ಕೊಡುವ ನಿಷಾದ ನಶೆಯೊಂದೇ ನನ್ನ ಜೀವಂತ ಕಾಯುವ ಕಾವು ಇಲ್ಲಿ...
ನಗೆಯ ನೂರಾರು ಬಣ್ಣಗಳಷ್ಟೇ ನಿರಂತರ ಹೋಳಿಯಾಡುವ ಬಯಲದು ನಿನ್ನ ಸಂಧಿಸುವ ಮಹಾ ಮೋಹದ ಸವಿನಿದ್ದೆ - ಅಲ್ಲಿ ನಿನ್ನೆ ನಾಳೆಗಳೆಲ್ಲ ನರಳುವುದಿಲ್ಲ...
ಸೋಂಬೇರಿ, ಹುಚ್ಚ ಅಂತೆಲ್ಲ ಈ ಜಗತ್ತು ಸೋತವರಿಗೆ (?) ಕಟ್ಟುವ ಪಟ್ಟಗಳೆಲ್ಲ ನಿನ್ನ ಕಾಲ್ಬೆರಳ ತುಂಟಾಟದ ಗೀರುಗಳಲಿ ಬಣ್ಣ ಕಳಕೊಂಡು ಕಳಚಿ ಬೀಳುತ್ತವೆ ನನ್ನೊಳಗೆ...
ಅನುಗಾಲದ ತೂಕಡಿಕೆಯಲಿ ಲೋಕದ ಜಾಣರ ಕಣ್ಣ ಬೇಲಿಯ ಮುರಿದು ನಿನ್ನ ತಬ್ಬಿಕೊಂಡ ಕುರುಡ ನಾನು...
#ನೀನೆಂಬ_ಹೊಳೆಯ_ಬೆನ್ನಿಗಾತು_ಬೆಳೆದ_ಒಡ್ಡೊಡ್ಡು_ಕಾಡು_ನಾನು...
↜⇂⇃↝

ಆಕಾಶಮಲ್ಲಿಗೆ ಹೂ ಚಪ್ಪರದಡಿಗೆ ಛಳಿಯ ಮೀಯುತ್ತ ಬದುಕಿಂದ ಬೆನ್ನು ತೋರಿದ ನಿನ್ನ ಧೇನಿಸೋ ನಾನೆಂಬೋ ಹುಟ್ಟು ಮೂಗ ಬೋಳೆ ಹೈದ 'ದಾರಿಗಾಗಿ ಧ್ವನಿ ಮಾಡಿ' ಎಂಬ ಗೂಡ್ಸಿನ ಬೆನ್ನು ಬರಹವ ಮನದಲ್ಲೇ ಓದಿಕೊಂಡು ಹಳಹಳಿಸುತ್ತೇನೆ...
ಹೇಳಿ, ಕೇಳಿ, ಕೊಡುಕೊಳ್ಳದೇ, ಒಳನಾಡಿಗಳಲಿ ಒಡನಾಡಿ ಒಡಮೂಡದೇ ಎಲ್ಲಾ ಅರಿಯುವ ಮೃತ ಮೌನವೇ ಆಪ್ತತೆಯ ನಿಜ ಭಾಷೆ ಎಂಬುದೇ ಸತ್ಯವಾಗಿದ್ದರೆ ಈ ಇರುಳು, ಈ ದಾರಿ ಇಷ್ಟುದ್ದಕೆ ಕರುಳ ಹಿಂಡಿಕೊಂಡು ಒಂಟೊಂಟಿ ಅಂಡಲೆದು ಪರಿತಪಿಸಬೇಕಿತ್ತಾ...?
ನಿನ್ನ ಕಾಡುವ, ನಿನ್ನ ಕೂಡುವ, ನಿನ್ನದೆಂಬ ಆಡು ಭಾಷೆ ಯಾವುದು...??
ನನ್ನ ಹುಡುಕುತ್ತಾ ನಿನ್ನ ಸೇರುವ ಹುಕಿಯಲ್ಲಿ ನಿನ್ನನೇ ಕನವರಿಸುತ್ತಾ ನಾ ಹಾಯೋ ಹಾದೀಲೆಲ್ಲ ಅಳಿದುಳಿದ ಕಣ್ಣ ಹೆಜ್ಜೆ ಅಚ್ಚು ನಿನ್ನ ಹಿಮ್ಮಡದಡಿಯನಾದರೂ ಸೋಕೀತಾ...???
ಇರದ ನಿನ್ನ ಹುಡುಕಾಟಕ್ಕೆ ಇನ್ನೇಸು ವರುಷ ಆಯುಷ್ಯ...????
#ಜೀವಿತದ_ಸ್ವಾಪನ...
↜⇂⇃↝

ಸತ್ಯ ಹೇಳಿ ನೋಯಿಸಲಾರದೇ - ಸುಳ್ಳಾಡಿ ವಂಚಿಸಲೊಪ್ಪದೇ - ಸುಳ್ಳಲ್ಲ  ಖರೆಯಲ್ಲ ಎಂಬಂತೆ ಮಾತು ಬೆಸೆಯಬೇಕಾದ ಮೌನವರಿಯದ ವೇದನೆ...
ಮನವು ಬೆಚ್ಚುತ್ತದೆ ನೀನು ಕನಸಾಗುವಲ್ಲಿ ಕನಸೇ...
#ಅನುದಿನದ_ಸಾವು_ನಾನು...
↜⇂⇃↝

ಆತ್ಮೀಕ 'ಪರಿಮಳ'ದ ಭಾಷೆ ಮಣ್ಣು, ಸೌಂದರ್ಯ ಹೆಣ್ಣು, ಭಾಷ್ಯ ಬೆವರು...
#ನನ್ನ_ವ್ಯಾಖ್ಯಾನ...
↜⇂⇃↝

ಅವನ ಅಳಲು:
ಸ್ವರ್ಗವೇ ಬೇಕೆಂದರೆ ಸಾಯಲೇಬೇಕು - ನರಕ ಬಿಡಿ ಬೇವರ್ಸಿಯ ಬೆನ್ನಿಗೇ ಅಂಟಿಕೊಂಡಿದೆ...

ಅವಳಂದದ್ದು:
ಸಜೀವ ಸ್ವರ್ಗ ಬೇಕೆಂದರೆ ಹೆಣ್ಣು ನಿನಗಾಗಿ ತಾನಾಗಿ ತೋಳಲ್ಲಿ ಅರಳಬೇಕು; ಅಂಗಳದ ಸಂಜೆ ಮಲ್ಲಿಗೆಯಂತೆ ಘಮ್ಮೆಂದು - ನಾಚಿಕೆಯ ಛಳಿ ಕಳಚಿ, ಉನ್ಮಾದದ ಹೊಳೆ ಹರಿಸಬೇಕು; ಸುಗ್ಗಿ ಹುಣ್ಣಿಮೆಯ ಬೆಳುದಿಂಗಳ ಹೊನಲಂತೆ...
ಒಲಿಸಿಕೋ, ಒಪ್ಪಿಸಿಕೋ ಅಷ್ಟೇ...

ಬೆಳಕು:
ಇಲ್ಲಿ ಕಾಣದ್ದು ಅಲ್ಲೇನಿದ್ದೀತು...
ಹುರಿದು ಮುಕ್ಕಿದ್ದೇ ಕರಗಿ ರಕ್ತವಾಗಿ ಶಕ್ತಿಯಾಗೋದು...
#ನಾಕ_ನರಕ...
↜⇂⇃↝

ಅಲ್ಯಾರೋ ಆ ದೂರ ತೀರದಲಿ ಕಾಯುತ್ತಾ ಕೂತು ಕರೆಯುತ್ತಿರುವ ಭಾವ - ಇಲ್ಲಿನ ಹರಿವಿಗೆ ಕರಡಿ ಪ್ರೀತಿಯ ರುದ್ರಾವೇಗ...
ಹಾದಿಯಲೆಲ್ಲೋ ಈ ಬನಿಯ ಕನಸು ಆವಿಯಾದರೂ ಅಲ್ಯಾವುದೋ ತಿರುವಲ್ಲಿ ಮತ್ತೆ ಮಳೆಯಾಗೋ ನಚ್ಚಿಕೆಯ ಸೊಗಸು...
ನನ್ನಿಂದ ಕಳಚಿಕೊಂಡ ನನ್ನೊಳಗಿನ ನಾನು ನಿನ್ನೊಳಿಹ ನನ್ನನ್ನ ಕಂಡು ಕೂಡುವಾತುರದಿ ಧುಮ್ಮಿಕ್ಕುವ ಧಾವಂತಕೆ ಹೃದಯ ತುಷಾರದ ಕನ್ನಡಿಯಲಿ ಅನುರಾಗದ ಇಂದ್ರಚಾಪ...
ಹಸಿರ ಉಸಿರಲ್ಲೂ ಹನಿ ಹನಿಯೊಳಗಣ ಸಾಗರ - ಶರಧಿಯೊಳಗೋ ಹನಿಹನಿಗಳದೇ ಮರ್ಮರ...
"ಹನಿಯಾಗು ಸಾಕು" - ಹನಿ ಕರಗಿ ಹಾಲಾಗಿ ನದಿ ಬಯಲಿಗೆ ಹಸಿರು, ಕಡಲಾಳದಿ ಮುತ್ತು...
#ಚಿತ್ರಾಂತರಂಗ...

ನನ್ನ ಜಂಗಮವಾಣಿ - ನನ್ನದೇ ಕೈಚಳಕ...
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)