Sunday, April 19, 2015

ಗೊಂಚಲು - ನೂರೈವತ್ನಾಕು.....

ಸಂಜೆ ಮಳೆ - ಒದ್ದೆ ಭಾವ.....

ಕಿಟಕಿ ಮೂಲೆ - ನಾನು ಮತ್ತು ನನ್ನ ಏಕಾಂತ - ಹೊರಗೆ ಸುರಿವ ಸಂಜೆ ಸೋನೆ...
ಒಳಹೊರಗಾಡುವ ಅವಳ ನೆನಹು...
ನಾಭಿಸ್ಥಾನದಲೆಲ್ಲೋ ಬಯಕೆ ಹೊರಳುವ ಸದ್ದು...
ಕಣ್ಣ ಮೊನೆಯಲಿ ಸಿಂಗಾರ ಮಂಚ...
ಅವಳಿಗಲ್ಲಿ ಗರ್ಭ ಕಟ್ಟಿದ ಕನಸಂತೆ ನಿನ್ನೆ ...
ಬರೆದಿಡಬೇಕಿದೆ ಲಾಲಿ ಹಾಡೊಂದನು ಅವಳಾಸೆಯಂತೆ - ಬೇಕಂತೆ ಉಡುಗೊರೆ ಬೆತ್ತಲಿರುಳ ಮೊದಲ ಜಾವಕೆ...
ಹಹಹಾ...!!!
ಹುಚ್ಚು ಹುಡುಗಿ ಆಕೆ ಸೊನಗಾರನ ಕಾಣುವ ಮೊದಲೇ ಬಡಗಿಯ ಹುಡುಕುತ್ತಿದ್ದಾಳೆ ತೊಟ್ಟಿಲ ಕನಸಿಗೆ ಕಾವು ಕೊಡಲು...
ಕುಲಾವಿ, ಗಿಲಕಿಗಳೆಲ್ಲ ಅದಾಗಲೇ ಅವಳ ಅಂತಃಪುರ ಸಂಗಾತಿಗಳು...
ಮಲ್ಲಿಗೆ ನಲುಗದ ಹೊರತು ಮಗು ಹೊರಳಲಾರದು ಕಣೇ ಮಳ್ಳೀ ಹೂ ಅರಳೋ ಮುನ್ನವೇ ಕಾಯ ಹಂಬಲವೇಕೆ - ಮನದ ಮದುವೆಗೆ ಜಗದ ಬೆಂಬಲವಿಲ್ಲವೇ ಹುಡುಗೀ ಅಂತಂದರೆ;
ಮೋಡ ಕಾಣುವ ಮೊದಲೇ ನೆಲವ ಹದಗೊಳಿಸಿ ಬೀಜ ಎತ್ತಿಡದವನು ರೈತನಾದಾನೆಯೇ - ಮಳ್ಳ ನೀನು - ಕಂದನ ಕನಸೆಂದರೆ ನನಗೆ ನಾಳೆಯ ಎದುರ್ಗೊಳ್ಳಲೊಂದು ಭರವಸೆ, ಶಕ್ತಿ ಕಣೋ  - ನಿನ್ನೆಡೆಗೆ ನನ್ನದು ಚೌಕಟ್ಟುಗಳನೆಲ್ಲ ಮೀರಿದ ಆತ್ಮದ ಮೋಹ, ನಿನ್ನೆಡೆಗಿನ ತುಡಿತದಲ್ಲಿ ನನ್ನ ಮನಸಿದು ಜಗದೆಲ್ಲ ಬೇಲಿಗಳನೂ ಮುರಿದು ಮುನ್ನುಗ್ಗಿ ಕಾಲವೆಷ್ಟೋ ಸಂದುಹೋಯಿತು ಅಂತಾಳೆ...
ಅವಳಿಗೆ ನಾನೆಂದರೆ ಸ್ವಾರ್ಥಗಳ ಹಂಗಿಲ್ಲದ ಸ್ವಚ್ಛ ನಗು...
ಕಪ್ಪು ಹುಡುಗಿ ಅವಳು - ಆತ್ಮ ಅವಳದು ಶುದ್ಧ ಹಂಸೆ...

ಮಳೆ ನಿಂತೇ ಹೋಯ್ತು...

ಇರುಳ ಮೊದಲ ಜಾವದಲಿ ನನ್ನೊಳಗಿನ ಕನಸು ಕಳಚಿ ವಾಸ್ತವದರಿವಲ್ಲಿ ಕಣ್ತೆರೆದರೆ;
"ಎನ್ನೆದೆಯ ಮುಂಬಾಗಿಲಲೇ ಹೊಂಚಿ ಕೂತಿದೆ ನಸುನಗುತ ಬಂಗಾರ ಬಣ್ಣದ ಜಿಂಕೆ - ಅಪಹರಿಸಲು ಎನ್ನ ಉಸಿರ ದೀಪವ..."
ಕಿವಿಯ ಹಾಲೆಯ ಕಚ್ಚಿ ಆಸೆ ಕೆರಳಿಸಿದಷ್ಟು ಸುಲಭವಿಲ್ಲ ಮನಸ ಹಾಳೆಯ ಮೇಲೆ ನಗೆಯ ಕಾವ್ಯ ರಚಿಸುವುದು...
ಬದುಕು ಕಲ್ಪನೆಯಲಿನ ತಿಳಿ ಬೆಚ್ಚನೆ ಇರುಳಲ್ಲ - ಅದು ವಾಸ್ತವದ ಮಡಿಲ ಕೆಂಡ...
ಜಿಂಕೆಯ ಗೆಲುವು ಅವಳ ಕನಸುಗಳ ರಕ್ತ ಹೀರಬಾರದು - ನನ್ನ ತಬ್ಬಿದ ಒಂದೇ ತಪ್ಪಿಗೆ...
ಉಹುಂ ಅವಳ ಕನಸು ನನ್ನಲೂ ನಕ್ಕ ಈ ಘಳಿಗೆ ಅವಳರಿವನು ತಲುಪಲೇಬಾರದು...
ನಾನಿಲ್ಲದ ದಾರೀಲಿ ನಡೆದೂ ಕನಸ ಬೇಟೆಯಾಡೋದ ಕಲಿಸಬೇಕವಳಿಗೆ - ಜಿಂಕೆ ಗೆಲ್ಲುವ ಮುನ್ನ...

Friday, April 17, 2015

ಗೊಂಚಲು - ನೂರಾ ಐವತ್ಮೂರು.....

ಒಂದು ಚಿತ್ರ - ಎರಡು ಭಾವಗಳು.....
(ಮಸಣ ಕಂಡು ಹುಟ್ಟಿಕೊಂಡ ಹುಚ್ಚು ಸಾಲ್ಗಳು...)














ನೆನಪ ಬಿಂಬವಾದವರೇ -
ಕನಸುಗಳು ಹುಟ್ಟದ ಒಣ ಎದೆಯ ಗೂಡಲಿ ಎಷ್ಟಂತ ತಳ್ಳಲಿ ಕಾಲವ...
ಒಂಚೂರು ತಾವು ಕೊಡಿ ಪ್ಲೀಸ್ ನಿಮ್ಮ ಎಡ ಬಲದಲ್ಲಿ...
ಸುಳ್ಳು ನಗೆಯ, ಕರುಳ ಬೆಸೆಯದ ಮಾತಿಗಿಂತ ನಿಮ್ಮ ಮುಗಿಯದ ಮೌನವೇ ನಿರಾಳವೆನಿಸುತಿದೆ... 
ಬಸವಳಿದಿದೆ ಮನಸೂ - ಪಾಚಿಕೊಳ್ಳುವಾಸೆ ಒಂದಿಷ್ಟು ನೆಮ್ಮದಿಯಾಗಿ...

$$$

ಮಸಣಕಿಂತ ಎತ್ತರದ ''ನೆಮ್ಮದಿ ಕೇಂದ್ರ'' 
ಮನಸಿಗಿಂತ ಬಲವಾದ "ಶಕ್ತಿ ಪೀಠ"
ದೇಹಕಿಂತ ಪವಿತ್ರ "ಯಜ್ಞ ಭೂಮಿ"
ಒಲವಿಗಿಂತ ಶ್ರೇಷ್ಠ "ಆರಾಧನೆ"
ಕಾಮಕಿಂತ ದೊಡ್ಡ "ಉತ್ಸವ"
ಬದುಕಿಗಿಂತ ಹೆಚ್ಚಿನದಾದ "ತೀರ್ಥ ಯಾತ್ರೆ"
ಮಂದಹಾಸಕಿಂತ ಉತ್ತಮ "ಗಳಿಕೆ" ಬೇರೆ ಇನ್ನೊಂದಿದೆಯಾ...!!!
ಕನಸು - ತಾಯಿ
ಅನುಭವ - ಗುರುವು
ಸೋಲು, ಗೆಲುವುಗಳೆಂಬೋ ಅತಿಥಿಗಳು
ಬದುಕು ಮಹಾಯಜ್ಞ...

Thursday, April 16, 2015

ಗೊಂಚಲು - ನೂರಾ ಐವತ್ತು ಮತ್ತೆರಡು.....

ಇಳಿಸಂಜೆ ಮತ್ತು ಕೆಣಕೋ ಭಾವಗಳು.....

ಹೇಳಿ ಬಿಡು ಒಮ್ಮೆ ಬಾಯ್ತೆರೆದು ಭಾವ ಸತ್ತಿದೆ ಎಂದು...
ಲೋಕವನು ನಂಬಿಸಿದ ಸುಳ್ಳು ನಗೆಯಲೇ ಆತ್ಮವನೂ ನಂಬಿಸುವ ಹುಚ್ಚು ಹಂಬಲವೇಕೆ...
ಏಕಾಂತದ ಇಳಿ ಸಂಜೆಯಲೂ ಮಾತಿನ ಹೆಣಕಾಯುವ ಕರ್ಮ...
ಇರುಳ ಸಾಂಗತ್ಯದಲಾಗೀಗ ಮಲ್ಲಿಗೆ ಮುದುಡದ ಶುಶ್ಕ ಕಾಮ...
ಒಲವಿನಾರೈಕೆ ತಪ್ಪಿದ ರುಚಿಹೀನ ಬದುಕಿನಲಿ ತೆವಳುತಿರುವುದಕಿಂತ ಹೊರಳಿಬಿಡುವುದು ಲೇಸಲ್ಲವಾ ಒಂಟಿ ಪಯಣದ ಆ ತೀರಕೆ...
ಹೇಳಿ ಬಿಡು ಒಮ್ಮೆ ಬಾಯ್ತೆರೆದು ಭಾವ ಸತ್ತಿದೆ ಎಂದು...
ಹೊಸೆಯುವುದನಾದರೂ ಬಿಡುತ್ತೇನೆ ಬತ್ತಿಯನು ಹೊಸ ಕನಸಿನ ಕುರುಡು ದೀಪಕೆ...

@@@

ಹನಿ ಹನಿ ಜಿನುಗೋ ಮಳೆ...
ಬಿತ್ತ ಹೋದೆ ಕನಸ ಬೀಜಗಳ...
ಮನದ ಬಿಡಾರದಲಿನ ನೆನಹುಗಳ ನಿತ್ಯ ಯಜ್ಞಕ್ಕೆ ಮಳೆಯು ಹವಿಸ್ಸಾಗಿ ನಾಳೆಗಳ ಆಸೆಗಳೆಲ್ಲ ಅಗ್ಗಿಷ್ಟಿಕೆಗಳಾಗಿ ಉರಿದು ಹೋದವು...
ಕನಸುಗಳ ಬೂದಿಯನೆ ಭಸ್ಮವೆಂದು ಹಣೆಗಿಟ್ಟು ಉಜ್ಜುತಿದ್ದೇನೆ...
ಆಸೆ  - ಅಳಿಸಲಾದೀತಾ ಹಣೆಯ ಬರಹವ...
ಬರೆಯಲಾದೀತಾ ಮತ್ತಲ್ಲಿ ಹೊಸದೊಂದು ಕನಸ ಕವಿತೆಯ...

@@@

ಹೆಳವಾದ ಕನಸುಗಳೆದುರು ಹೆಂಡ ಕುಡಿದ ಭಂಡನಂತೆ ನಾಟ್ಯವಾಡೋ ಸಿಹಿ ಕಹಿ ನೆನಪುಗಳು - 
ಮತ್ತೆ ಇಲ್ಲಿ  ಸಂಜೆ ಮಳೆ...

@@@

ಆಸೆ - 
ಯಾನ ಹೊರಡಬೇಕು ಜರೂರಾಗಿ...
ನೆನಪುಗಳು ಹಿಂಬಾಲಿಸದ, ಕನಸುಗಳ ಕರೆ ತಲುಪದ ಅಜ್ಞಾತ ತೀರವೊಂದಿದ್ದರೆ ಆ ದೂರಕೆ...

@@@

ಕನಸೇ -
ಅಂದು ಅಂಗಳದಂಚಿನ ಕಣಕು ನೀರಲ್ಲಿ ತೇಲಿಬಿಟ್ಟ ಕಾಗದದ ದೋಣಿಯಲಿ ನಿನಗಾಗಿ ಕಾಮನಬಿಲ್ಲಿಂದ ಬಣ್ಣಗಳ ಕದ್ದು ತರೋ ಹಂಬಲದ ಸೊಬಗಿತ್ತು...
ಇಂದು ನೀ ಕೊಟ್ಟ ನವಿಲುಗರಿ ಮರಿ ಹಾಕೋ ಹೊತ್ತಲ್ಲಿ ಬದುಕಿನ ದೋಣಿಯೇ ತೂತಾಗಿ ಮಗುಚಿ ಬಿದ್ದಿದೆ...
ನಿನ್ನ ಅಂಗಾಲಿಗೊಂದು ಗೆಜ್ಜೆ ತೊಡಿಸುವೆನೆಂದು ನಾ ಕೊಟ್ಟ ಭಾಷೆಯನು ಜಾಣತನದಿಂದ ಮರೆಯಲೆಳಸುತ್ತೇನೆ...
ಅದಕೇ ಈ ಸಂಜೆ ಮಳೆಯ ದನಿಗೆ ಕಿವುಡನೂ, ಮಳೆಬಿಲ್ಲಿನೆದುರು ಕುರುಡನೂ ಆಗಬಯಸುತ್ತೇನೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Tuesday, April 7, 2015

ಗೊಂಚಲು - ನೂರಾ ಐವತ್ತೊಂದು.....

ಸಂಚಾರಿ ತುಂಡು ಭಾವಗಳು......

ಭಾವ ಬಾಂಧವ್ಯಕ್ಕೆ ಸಂಬಂಧದ ಹೆಸರಿಟ್ಟು ಚೌಕಟ್ಟಿನೊಳಗೆ ಬದುಕಲು ಹವಣಿಸುತ್ತೀವಲ್ಲಾ ಅಲ್ಲೇ ಶುರುವಾಗುತ್ತೇನೋ ಸಲಿಗೆ ಸದರವಾಗಿ, ಪ್ರೀತಿ ಹಕ್ಕೆನಿಸಿ ನಗುವಿಗೂ ಲೆಕ್ಕಾಚಾರ...
***
ಹಸಿದ ಜೇಡನ ಬಲೆಯ ಹಸಿ ನೂಲಿನ ಮೂಲೆಯಲಿ ಗೂಡು ಕಟ್ಟಿ, ಮೊಟ್ಟೆಯಿಟ್ಟು, ಮರಿಯ ಪೊರೆಯುವ ಚಿಟ್ಟೆಯ ಬಯಕೆಯನ್ನು ಮೂರ್ಖತನ ಎನ್ನದೇ ಸಾಹಸ ಎನ್ನಲಾದೀತಾ...
ಆದರೂ,
ಸಾವಿಗೆ ಪ್ರೀತಿಯನುಣಿಸಿ, ಕರುಣೆಯ ಪಾಠ ಮಾಡಲು ಹವಣಿಸೋ ಹುಂಬ ಹೆಣಗಾಟವೇ ಅಲ್ಲವಾ ಬದುಕೆಂದರೆ...
***
ಯಾತರಲ್ಲೂ ಖುಷಿಯಿಲ್ಲ ಇಲ್ಲಿ...
ಬರಿದುಗೊಳಿಸೋ ಮಾತಲ್ಲೂ - ತುಂಬಿಕೊಳ್ಳೋ ಮೌನದಲ್ಲೂ...
ಒಂದು ಕಡೆ ಮಾತು ಹಿಂಸೇನ ಸೃಜಿಸಿದರೆ; ಇನ್ನೊಂದು ಕಡೆ ಮೌನ ಎದೆಯ ಭಾವಗಳ ಹಿಂಡಿ ಹಾಕುತ್ತೆ...
ನನ್ನೊಳಗೇ ಅವಿತಿರುವ ಬಯಲಾಗೋ ಬಯಕೆಯ ಮೌನ, ಅಡಗೋ ಬಯಕೆಯ ಮಾತು ಎರಡರ ನಡುವಿನ ಶೀತಲ ಸಮರದಲ್ಲಿ ಚೆಲ್ಲಾಪಿಲ್ಲಿಯಾಗಿಹೋದ ಭಾವ ಬಂಧಗಳು ಮತ್ತು ಕಂಗೆಟ್ಟು ಕೂತ ಕನಸುಗಳು...
ಎಂದೂ ಮುಗಿಯದ ತಳಮಳ...
ಯಾವುದನ್ನ ತಬ್ಬಿಕೊಳ್ಳಲಿ ‘ತಬ್ಬಲಿ’ ಭಾವದಿಂದಾಚೆ ಬಂದು ನಗೆಯ ಜೀವಿಸಲು...?????????????
***
ಇಲ್ಲಿ ಮುಸ್ಸಂಜೆಗಳಲಿ ಮಳೆಯಾಗುತ್ತಿದೆ...
ನನಗಾದರೋ ಎದೆ ನೆಲದ ಬಯಲಲ್ಲಿ ಹೂತು ಮರೆಯಲೆತ್ನಿಸಿದ ನೆನಪುಗಳೆಲ್ಲ ಮತ್ತೆ ಮೊಳಕೆಯೊಡೆದರೆ ಎಂಬ ಭಯ...
***
ಆಚೆ ನೀವು ಈಚೆ ನಾನು ನಡುವೆ ಮೌನದ ಗೋಡೆ...
ಸಶಬ್ದವಾಗಿ ಆಕಳಿಸಲೂ ಭಯ ನನಗೆ - ನೀವು ಕಟ್ಟಿದ ಗೋಡೆಯ ನನ್ನ ಮಾತಿಂದ ಮುರಿಯಲೆತ್ನಿಸಿದರೆ ಆಚೆ ಇರುವ ನಿಮ್ಮ ಕಣ್ಣಲ್ಲಿನ ಅಸಹನೆಯ ನೋಟಕ್ಕೆ ಎದುರು ನಿಲ್ಲುವುದು ಕಷ್ಟ ಕಷ್ಟ...
ಸತ್ಯಗಳೆದುರು ಮೂಕನಾಗದ ಹೊರತು ಬಂಧಗಳ ನಡುವೆ ನಗುವ ಸಾಧಿಸಲಾಗದೇನೋ..
ಸುಡುವ ಸುಳ್ಳು ನಗುವಿನೆದುರು ನನ್ನಲ್ಲಿ ಮಾತು ಹುಟ್ಟುವುದಿಲ್ಲ...
ಮಾತು (ಸಂವಹನ) ಹುಟ್ಟದೇ ಬಂಧ ಚಿಗುರಲಾರದು ಎಂಬುದು ಅನುಭವದ ಸತ್ಯ...
ಮೌನ ಸಾಧಿಸದೇ ಬಂಧಗಳು ಬಾಳಲಾರವು ಕಾಲಕೂ ಎಂಬುದೀಗ ನಾ ಅರ್ಥೈಸಿಕೊಂಡು ಅರಗಿಸಿಕೊಳ್ಳಲೇಬೇಕಿರುವ ಸತ್ಯ...
ಆದರೂ ಕೆಟ್ಟ ಆಸೆ ಹುಂಬ ಧೈರ್ಯವ ಮಾಡಿ ಗೋಡೆಗೊಂದು ಸಣ್ಣ ಕಿಂಡಿಯನಾದರೂ ಕೊರೆದುಬಿಡಲಾ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)