Tuesday, April 7, 2015

ಗೊಂಚಲು - ನೂರಾ ಐವತ್ತೊಂದು.....

ಸಂಚಾರಿ ತುಂಡು ಭಾವಗಳು......

ಭಾವ ಬಾಂಧವ್ಯಕ್ಕೆ ಸಂಬಂಧದ ಹೆಸರಿಟ್ಟು ಚೌಕಟ್ಟಿನೊಳಗೆ ಬದುಕಲು ಹವಣಿಸುತ್ತೀವಲ್ಲಾ ಅಲ್ಲೇ ಶುರುವಾಗುತ್ತೇನೋ ಸಲಿಗೆ ಸದರವಾಗಿ, ಪ್ರೀತಿ ಹಕ್ಕೆನಿಸಿ ನಗುವಿಗೂ ಲೆಕ್ಕಾಚಾರ...
***
ಹಸಿದ ಜೇಡನ ಬಲೆಯ ಹಸಿ ನೂಲಿನ ಮೂಲೆಯಲಿ ಗೂಡು ಕಟ್ಟಿ, ಮೊಟ್ಟೆಯಿಟ್ಟು, ಮರಿಯ ಪೊರೆಯುವ ಚಿಟ್ಟೆಯ ಬಯಕೆಯನ್ನು ಮೂರ್ಖತನ ಎನ್ನದೇ ಸಾಹಸ ಎನ್ನಲಾದೀತಾ...
ಆದರೂ,
ಸಾವಿಗೆ ಪ್ರೀತಿಯನುಣಿಸಿ, ಕರುಣೆಯ ಪಾಠ ಮಾಡಲು ಹವಣಿಸೋ ಹುಂಬ ಹೆಣಗಾಟವೇ ಅಲ್ಲವಾ ಬದುಕೆಂದರೆ...
***
ಯಾತರಲ್ಲೂ ಖುಷಿಯಿಲ್ಲ ಇಲ್ಲಿ...
ಬರಿದುಗೊಳಿಸೋ ಮಾತಲ್ಲೂ - ತುಂಬಿಕೊಳ್ಳೋ ಮೌನದಲ್ಲೂ...
ಒಂದು ಕಡೆ ಮಾತು ಹಿಂಸೇನ ಸೃಜಿಸಿದರೆ; ಇನ್ನೊಂದು ಕಡೆ ಮೌನ ಎದೆಯ ಭಾವಗಳ ಹಿಂಡಿ ಹಾಕುತ್ತೆ...
ನನ್ನೊಳಗೇ ಅವಿತಿರುವ ಬಯಲಾಗೋ ಬಯಕೆಯ ಮೌನ, ಅಡಗೋ ಬಯಕೆಯ ಮಾತು ಎರಡರ ನಡುವಿನ ಶೀತಲ ಸಮರದಲ್ಲಿ ಚೆಲ್ಲಾಪಿಲ್ಲಿಯಾಗಿಹೋದ ಭಾವ ಬಂಧಗಳು ಮತ್ತು ಕಂಗೆಟ್ಟು ಕೂತ ಕನಸುಗಳು...
ಎಂದೂ ಮುಗಿಯದ ತಳಮಳ...
ಯಾವುದನ್ನ ತಬ್ಬಿಕೊಳ್ಳಲಿ ‘ತಬ್ಬಲಿ’ ಭಾವದಿಂದಾಚೆ ಬಂದು ನಗೆಯ ಜೀವಿಸಲು...?????????????
***
ಇಲ್ಲಿ ಮುಸ್ಸಂಜೆಗಳಲಿ ಮಳೆಯಾಗುತ್ತಿದೆ...
ನನಗಾದರೋ ಎದೆ ನೆಲದ ಬಯಲಲ್ಲಿ ಹೂತು ಮರೆಯಲೆತ್ನಿಸಿದ ನೆನಪುಗಳೆಲ್ಲ ಮತ್ತೆ ಮೊಳಕೆಯೊಡೆದರೆ ಎಂಬ ಭಯ...
***
ಆಚೆ ನೀವು ಈಚೆ ನಾನು ನಡುವೆ ಮೌನದ ಗೋಡೆ...
ಸಶಬ್ದವಾಗಿ ಆಕಳಿಸಲೂ ಭಯ ನನಗೆ - ನೀವು ಕಟ್ಟಿದ ಗೋಡೆಯ ನನ್ನ ಮಾತಿಂದ ಮುರಿಯಲೆತ್ನಿಸಿದರೆ ಆಚೆ ಇರುವ ನಿಮ್ಮ ಕಣ್ಣಲ್ಲಿನ ಅಸಹನೆಯ ನೋಟಕ್ಕೆ ಎದುರು ನಿಲ್ಲುವುದು ಕಷ್ಟ ಕಷ್ಟ...
ಸತ್ಯಗಳೆದುರು ಮೂಕನಾಗದ ಹೊರತು ಬಂಧಗಳ ನಡುವೆ ನಗುವ ಸಾಧಿಸಲಾಗದೇನೋ..
ಸುಡುವ ಸುಳ್ಳು ನಗುವಿನೆದುರು ನನ್ನಲ್ಲಿ ಮಾತು ಹುಟ್ಟುವುದಿಲ್ಲ...
ಮಾತು (ಸಂವಹನ) ಹುಟ್ಟದೇ ಬಂಧ ಚಿಗುರಲಾರದು ಎಂಬುದು ಅನುಭವದ ಸತ್ಯ...
ಮೌನ ಸಾಧಿಸದೇ ಬಂಧಗಳು ಬಾಳಲಾರವು ಕಾಲಕೂ ಎಂಬುದೀಗ ನಾ ಅರ್ಥೈಸಿಕೊಂಡು ಅರಗಿಸಿಕೊಳ್ಳಲೇಬೇಕಿರುವ ಸತ್ಯ...
ಆದರೂ ಕೆಟ್ಟ ಆಸೆ ಹುಂಬ ಧೈರ್ಯವ ಮಾಡಿ ಗೋಡೆಗೊಂದು ಸಣ್ಣ ಕಿಂಡಿಯನಾದರೂ ಕೊರೆದುಬಿಡಲಾ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

2 comments:

  1. ಸತ್ಯಗಳೆದುರು ಮೂಕನಾಗದ ಹೊರತು ಬಂಧಗಳ ನಡುವೆ ನಗುವ ಸಾಧಿಸಲಾಗದೇನೋ, ಎಂಬ ತಮ್ಮ ಮಾತು ನೈಜವಾಗಿದೆ.

    ReplyDelete
  2. ಸಂಬಂಧಗಳನ್ನು ನಿನ್ನಷ್ಟು ಚೆನ್ನಾಗಿ ಅದ್ಯಾರು ವಿವರಸಬಲ್ಲರು ಹೇಳು...
    -ಪ್ರೀತಿಗೆ ಚೌಕಟ್ಟು ಹಾಕುವುದು
    -ಸಾವಿಗೂ ಪ್ರೀತಿಯುಣಿಸುವುದು
    -ಎಲ್ಲವೂ ನನ್ನದೇ ಮತ್ತು ಯಾವುದೂ ನನ್ನವಲ್ಲ ಅನ್ನುವಂತಹ ಜಂಟಿ ಭಾವಗಳ ಸಮಾಗಮ
    -ಮಳೆಗೆ ನೆನಪುಗಳ ಹೊರ ತೆಗೆದು, ಕನಸುಗಳ ಕಟ್ಟಿಕೊಡೊ ಶಕ್ತಿಯೆದೆಯೆನ್ನವುದು
    -ಮುರಿದ ಮಾತುಗಳು ಮನಸ್ಸುಗಳ ನಡುವೆ "ಸಣ್ಣ ಕಿಂಡಿಯನಾದರೂ ಕೊರೆದುಬಿಡಲಾ..." ಅನ್ನುವ ಆತ್ಮೀಯತೆ..

    ಏನಾ ನಾ ಹೇಳಲಿ ಎಂತಹ ಅಕ್ಕರೆಯ ಬರಹಕ್ಕೆ.. ಸಲಾಂ ಸಲಾಂ ಸಲಾಂ...

    ReplyDelete