Monday, September 23, 2013

ಗೊಂಚಲು - ಎಂಬತ್ತು + ಎಂಟು.....

ಹೀಗೊಂದು ಮಾತು.....

ಕಳೆದ ಮಹಿಳಾ ದಿನಾಚರಣೆಗಾಗಿ ಒಂದು ಲೇಖನ ಬರೆದಿದ್ದೆ.
ಬರೆದ ವಿಷಯ ಸತ್ಯವೇ. ತುಂಬಾ ಜನ ಮೆಚ್ಚಿಕೊಂಡರು ಕೂಡ. ಆದರೆ ನನಗೇ ಯಾಕೋ ಸಂತೃಪ್ತ ಅನ್ನಿಸಿಲ್ಲ. ಬರೆದ ಬರಹದಲ್ಲಿ ದೇಹ ಸದೃಢವಾಗೇ ಇದ್ದರೂ ಯಾಕೋ ಆತ್ಮ ಇಲ್ಲ ಅನ್ನಿಸ್ತಾ ಇತ್ತು. ಕಾರಣ ಇಷ್ಟೇ ನನ್ನ ಮನಸು ಪುರುಷ ಪ್ರಧಾನ ಮತ್ತು ಸ್ತ್ರೀ ಪ್ರಧಾನ ಎಂಬ ಎರಡೂ ವಾದಗಳನ್ನು ಒಪ್ಪಲಾರದು. ನಾನೆನ್ನುತ್ತೇನೆ ನಮ್ಮನೆಲ್ಲ ಸಷ್ಟಿಸಿದ ಪ್ರಕೃತಿ ಮಾತ್ರ ಪ್ರಧಾನ. ಅದರ ಪ್ರಾಧಾನ್ಯತೆಯನ್ನು ಒಪ್ಪಿಕೊಳ್ಳದ ನಾವು, ಅದು ನೀಡಿದ ಮಿತಿಗಳನ್ನು ಮೀರಲು ಹವಣಿಸುವ ನಾವು, ಪುರುಷ ಮೇಲು ಇಲ್ಲಾ ಸ್ತ್ರೀ ಮೇಲು ಎಂದುಕೊಂಡು ಬಡಿದಾಡಿಕೊಂಡು ನಿಜವಾದ ನಮ್ಮನ್ನು ನಾವೇ ಕಳೆದುಕೊಳ್ಳುತ್ತಿದ್ದೇವೇನೋ ಅನ್ನಿಸುತ್ತೆ ನಂಗೆ. ದೌರ್ಜನ್ಯಗಳ ಮಾತು ಬಿಟ್ಟುಬಿಡಿ. ಅದು ಮನಸಿನ ಸಂಸ್ಕಾರ ಇಲ್ಲದವರು ಮತ್ತೊಬ್ಬರ ಮೇಲೆ ನಡೆಸೋ ಕ್ರೌರ್ಯ. ಮಿತಿಗಳ ಅರಿತುಕೊಂಡು ಹೊಂದಿ ಬಾಳುವ ಬಗ್ಗೆ ಯೋಚಿಸೋಣ...

ಇಷ್ಟೆಲ್ಲ ಜೀವರಾಶಿಗಳನ್ನು ಸೃಷ್ಟಿಸಿದ ಪ್ರಕೃತಿ ಪ್ರತಿ ಜೀವಕ್ಕೂ ಅದರದೇ ಆದ ವಿಶಷ್ಠ ಸಾಮರ್ಥ್ಯ ಮತ್ತು ಮಿತಿ ಎರಡನ್ನೂ ನೀಡಿದೆ. ಸುತ್ತಲಿನ ವಾತಾವರಣದ ಅನುಕೂಲತೆಯನ್ನು ಬಳಸಿಕೊಂಡು ತನ್ನ ಪ್ರಬೇಧಗಳನ್ನು ತಾನೇ ಸ್ವತಂತ್ರವಾಗಿ ವೃದ್ಧಿಸಿಕೊಳ್ಳಬಲ್ಲ ಸಾಮರ್ಥ್ಯ ನೀಡಿ ಸಸ್ಯ ಸಂಕುಲವನ್ನು ಸೃಷ್ಟಿಸಿ; ವಾತಾವರಣ ಮುನಿದರೆ ಉಳಿಯಲಾರದ ಮಿತಿಯನ್ನೂ ಅದಕೆ ನೀಡಿದ್ದು ಪ್ರಕೃತಿ...
ಅದೇ ಪ್ರಕೃತಿ ಪ್ರಾಣಿ ಪ್ರಪಂಚದಲ್ಲಿ ಪ್ರತ್ಯೇಕ ಗಂಡು - ಹೆಣ್ಣು ಎಂಬ ಎರಡು ಪ್ರಭೇದವನ್ನೇ ಸೃಷ್ಟಿಸಿತು. ಅದರಲ್ಲೂ ಮನುಷ್ಯ ಪ್ರಾಣಿಗೆ ವಿಶೇಷವಾದ ವಿವೇಚನಾ ಶಕ್ತಿಯನ್ನೂ ನೀಡಿತು. ಮನುಷ್ಯ ಸ್ವಲ್ಪ ಮುಂದುವರಿದ (?) ಪ್ರಾಣಿ ತಾನೇ...
ಈಗ ನಾವು ಪ್ರಕೃತಿಯ ಸೃಷ್ಟಿಯಲ್ಲಿನ ಮನುಷ್ಯ ಜಂತುವಿನ ಬಗ್ಗೆ ಮಾತಾಡೋಣ...
ಗಂಡು - ಹೆಣ್ಣು ಎರಡೂ ಬೌದ್ಧಿಕವಾಗಿ ಸಮಾನ ಪ್ರಾಭಲ್ಯವುಳ್ಳ ಶಕ್ತಿಗಳು. ದೈಹಿಕತೆಯಲ್ಲಿ ಮಿತಿಗಳನ್ನಿಟ್ಟದ್ದು ಪ್ರಕೃತಿ...
ದೈಹಿಕ ಮಿತಿಗಳ ಮೀರುತ್ತೇನೆಂದು ಹೊರಡುವವರಿಗೆ ಬೇಲಿಯಂತಹ ಸೃಷ್ಟಿಯೇ ಅಗೋಚರ ಮನಸು...
ಮನಸು ಇದು ಮನುಜನಿಗಾಗಿ ಪ್ರಕೃತಿ ನೀಡಿದ ಅದ್ಭುತ ಕೊಡುಗೆ ಮತ್ತು ಅಷ್ಟೇ ಪ್ರಭಾವಶಾಲಿ ಮಿತಿ ಕೂಡಾ...
ಎರಡು ಬೇರೆಯದೇ ಶಕ್ತಿಗಳು ಒಂದೇ ಭಾವದಲ್ಲಿ ಬೆಸೆದು ಹೊಳೆಯುವ ವಿಶಿಷ್ಟ ಜೀವನ ಪ್ರೀತಿಗೆ ಮೂಲ ಧಾತು ಈ ಮನಸೆಂಬೋ ಮನಸಿನ ಆಳದ ಒಲವ ಬಯಕೆ...
ಸುಂದರ - ಸದೃಢ ಕಾಯ, ಪ್ರಭಲ ಬುದ್ಧಿ ಶಕ್ತಿ ಇವೆರಡನ್ನೂ ನೀಡಿ ಅವುಗಳನ್ನು ನಿಯಂತ್ರಿಸಲು ಮನಸು ಮತ್ತು ಅದರೊಳಗೊಂದಿಷ್ಟು ಪ್ರಾಕೃತಿಕ ಬಯಕೆಗಳನ್ನು ನೀಡಿದ್ದು ಪ್ರಕೃತಿ. ತಾ ಮೇಲು ತಾ ಮೇಲು ಎಂದು ಸಾಧಿಸಲು ಹೊರಟಾಗ ಗಂಡು ಮತ್ತು ಹೆಣ್ಣು ಇಬ್ಬರೂ ಒಬ್ಬರ ಮೇಲೊಬ್ಬರು ಕಾಯ ಹಾಗೂ ಬುದ್ಧಿಯ ಮೀತಿಗಳನ್ನು ಮೀರಿಬಿಟ್ಟಾರು. ಆದರೂ ಮನಸಿನ ಮಿತಿಗಳನ್ನು ಮೀರಲಾಗದೇ ಸೋತದ್ದೇ ಹೆಚ್ಚು ಸಾರಿ...
ಎಲ್ಲ ಬಡಿದಾಟಗಳಿಂದ ತನ್ನ ಮೇಲರಿಮೆಯನ್ನು ಸಾಧಿಸಿದ ಮೇಲೆ ಮನಸಲ್ಲಿ ಪ್ರಕೃತಿ ಬಚ್ಚಿಟ್ಟ ಮೂಲ ಬಯಕೆ ತನ್ನ ಪ್ರತಿಕೃತಿಯ ಸೃಷ್ಟಿಯ ಮಾತು ಬಂದಾಗ ಎಲ್ಲ ಮೇಲರಿಮೆಗಳೂ ಸಾಯಲೇಬೇಕಾದ್ದು ಅನಿವಾರ್ಯ. ಅದು ನಮಗೆ ಪ್ರಕೃತಿ ನೀಡಿದ ಮಿತಿ...
ಗಂಡು ತನ್ನ ಪುರುಷ ಶಕ್ತಿಯ ಸದ್ಬಳಕೆಯ ಬಯಕೆ ತೀವ್ರವಾಗಿ ಕಾಡಿದ ಕ್ಷಣ ಹೆಣ್ಣು ಜೀವದ ಮಡಿಲ ಅರಸಿ ಚಡಪಡಿಸುತ್ತಾನೆ...
ಹೆಣ್ಣು ತನ್ನ ಮೂಲ ಭಾವವಾದ ತಾಯ್ತನದ ಪೂರ್ಣತ್ವ ಹೊಂದಲೋಸುಗ ಗಂಡಿನ ತೆಕ್ಕೆಗಾಗಿ ಹಂಬಲಿಸುತ್ತಾಳೆ...
ಒಂದು ಬೀಜ ಮತ್ತು ಇನ್ನೊಂದು ಕ್ಷೇತ್ರ...
ಒಂದನ್ನುಳಿದು ಇನ್ನೊಂದು ಅಪೂರ್ಣ...
ಬೀಜದ ಪೂರ್ಣತ್ವ ಅದು ಕ್ಷೇತ್ರದಲ್ಲಿ ಬೆರೆತು ಹೊಸ ಸಸಿಯಾಗಿ ನಕ್ಕಾಗ...
ಬೀಜವೊಂದಕ್ಕೆ ಮಡಿಲಲ್ಲಿ ತಾವು ನೀಡಿ - ನೀರು ಗೊಬ್ಬರ ಉಣಿಸಿ - ಬೀಜಕ್ಕೆ ಉಸಿರ ತುಂಬಿ ಜೀವ ನೀಡುವಲ್ಲಿ ಕ್ಷೇತ್ರದ ಗರಿಮೆ...
ಒಂದು ಇನ್ನೊಂದನ್ನು ಬೆರೆತು ಒಂದಾಗಿ (ಒಂದೇ ಆಗಿ) ಹೊಸದೊಂದು ನಗುವನ್ನು ಸೃಜಿಸಿ ಸಂತತಿಯೊಂದು ಹಸಿರಾಗಿ ಟಿಸಿಲೊಡೆಯಲು ಒಂದನ್ನೊಂದು ಸೇರಬೇಕಾದದ್ದು ಪ್ರಕೃತಿ ನಮಗೆ ನೀಡಿದ ಚಂದದ ಮಿತಿ ಹಾಗೂ ಪ್ರೀತಿ...

ಆ ಪ್ರಕೃತಿಯ ಮಿತಿಗಳ ಮನಸಾರೆ ಒಪ್ಪಿಕೊಂಡು - ನಮ್ಮ ಮನದ ಪ್ರೀತಿಯ ಪ್ರಾಮಾಣಿಕವಾಗಿ ಅಪ್ಪಿಕೊಂಡು - ‘ನೀನು’ ‘ನಾನು’ ಎಂಬ ಅಹಂಗಳಿಂದಾಚೆ ಬಂದು - ‘ನಾವಾ’ಗಿ ಬೆರೆತು ಈ ಪುರುಷ ಪ್ರಧಾನ, ಸ್ತ್ರೀ ಪ್ರಧಾನ, ಸಮಾನತೆ ಎಂಬೆಲ್ಲ ತಿಕ್ಕಾಟ ಬಡಿದಾಟಗಳನು ಮೀರಿ ಬರೀ ಪ್ರೇಮ ಪ್ರಧಾನವಾದ ಸಮಾಜವನ್ನು ನಿರ್ಮಿಸಲಾಗದಾ...
ಹಾಗೆ ಬಯಸೋದು ಅತಿಯಾಸೆಯಾದೀತಾ...
ಮನುಷ್ಯ ಸ್ವಲ್ಪ ಮುಂದುವರಿದ ಪ್ರಾಣಿ ಎಂಬುದು ಸತ್ಯವಾ...

ಆತ ಬೆವರಿಳಿಸಿ ಹಣ ದುಡಿದರೆ - ಆಕೆ ಅನ್ನ ಬೇಯಿಸಿ ಬೆವರಾಗುತ್ತಾಳೆ...
ಅನ್ನ ಹೊಟ್ಟೆಗಿಳಿಯದೇ ಆತ ದುಡಿಯಲಾರ - ಆತನ ಹಣವೇ ಆಕೆಯ ಅನ್ನಕ್ಕೆ ಆಧಾರ...
ಹಾಗಿರುವಾಗ (ಹಣ) ದುಡಿಯುವ ಕೈ ಮತ್ತು ಬಡಿಸುವ ಕೈಗಳ ನಡುವೆ ಗುದ್ದಾಟವೇಕೆ...
ನಾಲ್ಕೂ ಕೈಗಳು ಪ್ರೇಮದಲಿ ಬೆಸೆದುಕೊಂಡರೆ ಕುಟುಂಬವೊಂದು ಒಲವ ಬಂಧದಲ್ಲಿ ಬೆಳಗಲಾರದಾ...
ಅಂಥ ಕುಟುಂಬಗಳು ನಾಲ್ಕು ಸೇರಿದರೆ ಒಂದು ಪುಟ್ಟ ಭವ್ಯ ಪ್ರೇಮ ಪೂರ್ಣ ಸಮಾಜ...
ಅಂಥ ಕುಟುಂಬಗಳ ಸಮುಚ್ಛಯವೇ  ನೂರಾಗಿ, ಸಾವಿರವಾಗಿ....
ಆಸೆ ಅತಿಯಾಯಿತಾ...!!!
*** ಈ ಬರಹ "ಪಂಜು" ಇ-ಪತ್ರಿಕೆಯ  23-09-2013ರ ಸಂಚಿಕೆಯಲ್ಲಿ ಪ್ರಕಟವಾಗಿದೆ... ಅಲ್ಲಿ ಓದಲು -http://www.panjumagazine.com/?p=4338

Sunday, September 22, 2013

ಗೊಂಚಲು - ಎಂಬತ್ತು ಮತ್ತೇಳು.....

ಎರಡು ವಿರುದ್ಧ ಭಾವಗಳು.....

ನನ್ನೆಲ್ಲ ಹಗಲುಗನಸುಗಳಲ್ಲಿ - ಮುಸ್ಸಂಜೆಯ ಯಾವುದೋ ಮೌನ ವಿಷಾದದಲ್ಲಿ - ಸರಿ ರಾತ್ರಿ ಜಿನುಗೋ ಬೆವರಲ್ಲಿ - ಮುಂಬೆಳಗಿನ ಸವಿಗನಸಲ್ಲಿ - ಅಲ್ಲೆಲ್ಲ ಮನೆಮಾಡಿ ಸುಮ್ಮನೇ ಬೆಳದಿಂಗಳಂತೆ ನಕ್ಕು ಕಾಡುವ ಗುಳಿ ಕೆನ್ನೆಯ ಚೆಲುವಿನ ಅಮೂರ್ತ ಛಾಯೆಗೆ ನಾನಿಟ್ಟ ಪ್ರೀತಿ ಹೆಸರು "ನನ್ನ ಕಪ್ಪು ಹುಡುಗಿ..."
ಎದುರಾ ಎದುರು ಕಣ್ಣಲ್ಲಿ ಕಣ್ಣಿಡದೆಯೇ ನನ್ನ ಕಣ್ಣಲ್ಲಿ ಕನಸ ತುಂಬಿದವಳು - ಮೈಯಾಗಿ ದಕ್ಕದೆಯೇ ಎದೆಯ ಬೆವರಾಗುವಾಕೆ - ಪಕ್ಕ ಕೂತು ಹೆಗಲುತಬ್ಬದೆಯೇ ನನ್ನ ನಿಟ್ಟುಸಿರುಗಳಿಗೆ ಸಾಂತ್ವನವಾಗಬಲ್ಲವಳು - ಮೂರ್ತವಾಗಿ ಬೆರಳಲಿ ಬೆರಳ ಬೆಸೆದು ಹೆಜ್ಜೆಗೆ ಹೆಜ್ಜೆ ಜೋಡಿಸದೆಯೇ ಬದುಕ ದಾರಿಗೆ ಭರವಸೆಯ ಬೆಳಕನೀಯುವವಳು ನನ್ನ ಒಲವಿನ ಕಲ್ಪನಾ ಛಾಯೆ...
ಬುದ್ಧಿಯ ಮಾತ ಮೀರಿ ಮನಸೆಂಬುದು ಆ ನನ್ನ ಛಾಯೆಗೆ ಸುತ್ತಲಿನ ಯಾವುದೋ ಮೂರ್ತಿಯ ರೂಪವ ಆರೋಪಿಸಿ, ಚಿತ್ರಕ್ಕೆ ಬಣ್ಣ ತುಂಬಿ, ಛಾಯೆಗೆ ಮತ್ತು ಅದರೊಂದಿಗಿನ ನನ್ನ ಬಂಧಕ್ಕೆ ಹೊಸ ಹೆಸರ ನೀಡ ಬಯಸಿದರೆ - ಆ ನಾಮಕರಣ ಶಾಸ್ತ್ರದ ಮುಂಚಿನ ದಿನವೇ ನನ್ನ ಉಸಿರು ನಿಲ್ಲಲಿ...
ಪ್ರೇಮ ಮೂರ್ತರೂಪದಲ್ಲಿ ದಕ್ಕದಿರುವುದರಲ್ಲಿಯೇ `ಈ' ಬದುಕಿಗೆ ಒಳಿತಿದೆ ಅನ್ನಿಸ್ತಿದೆ...

*****

ಕಪ್ಪು ಕಲ್ಯಾಣೀ -
ಕಾಲನ ಕತ್ತಿ ನನ್ನ ಕತ್ತ ಕತ್ತರಿಸುವುದರ ಬಗೆಗೆ ಭಯವಿಲ್ಲ ನನ್ನಲ್ಲಿ... 
ಅದು ಎಲ್ಲದರ ಅಂತಿಮ ಸತ್ಯ... 
ಅದನ್ನ ಒಪ್ಪಿಕೊಂಡಾಗಿದೆ...
ಆದರೂ - 
ನಿನಗೊಂದು ಹಾಯನ್ನೂ ಹೇಳಲಾಗದೇ - ನಿನ್ನದೊಂದು ಹೂನಗೆಯನ್ನೂ ಕಾಣದೇ ಥಟ್ ಅಂತ ಅಳಿದು ಹೋಗಿಬಿಟ್ಟರೆ... 
ಅನುಕ್ಷಣವೂ ಕಾಡುವ ಭಯ ಅದೊಂದೇ...  

Saturday, September 14, 2013

ಗೊಂಚಲು - ಎಂಬತ್ತು + ಆರು.....

ಹೀಗೆಲ್ಲ ಅನ್ನಬಹುದಾ.....

ಪ್ರೀತಿ – ಪ್ರೇಮ – ಒಲವು...
ಮೇಲ್ನೋಟಕ್ಕೆ ಮತ್ತು ಬಳಕೆಯಲ್ಲಿ ಮೂರೂ ಪದಗಳು ಒಂದೇ ಅರ್ಥ ಸೂಚಿಸುತ್ತವೆ... ಆದರೆ ಒಳಗಿಳಿಯುತ್ತ ಹೋದರೆ ಬೇರೆ ಬೇರೆಯಾಗಿಯೇ ದಕ್ಕುತ್ತವೆ...
ಹೌದು ಮೂರೂ ಪದಗಳ ಮೂಲ ಮತ್ತು ಸ್ಥಿರ ಭಾವ ಗೆಳೆತನವೇ – ಆದರೆ ಅಲ್ಲೆಲ್ಲ ದಕ್ಕುವ ಗೆಳೆತನದ ಸ್ತರ ಬೇರೆ ಬೇರೆ...

ಪ್ರೀತಿ – ಪ್ರೀತಿಯೆಂದರೆ ಸರ್ವವ್ಯಾಪೀ ಸ್ನೇಹದ ಮುಗುಳ್ನಗು...ಮಗುವಿಂದ ಹಿಡಿದು ಮುಪ್ಪಾನ ಮುದುಕರವರೆಗೆ ಯಾರೆಂದರೆ ಅವರಲ್ಲಿ - ಇರುವೆಯಿಂದ ಚಂದಿರನವರೆಗೆ ಯಾರೆಂದರೆ ಯಾರೆಡೆಗೂ – ಚಿಗುರು, ಇಬ್ಬನಿ, ಕಾಮನಬಿಲ್ಲು, ಒಂದೊಳ್ಳೆ ಪುಸ್ತಕ ಹೀಗೆ ಯಾವ ಜೀವ, ಯಾವುದೇ ವಸ್ತು ವಿಷಯದ ಮೇಲೂ ಮೂಡಬಹುದಾದ ಮುಗಳ್ನಗೆಯ ಸಂವಹನ... ಪ್ರೀತಿ ಒಟ್ಟೊಟ್ಟಿಗೇ ಸಾವಿರ ಮುಖಗಳಲ್ಲೂ ನಗಬಹುದಾದ, ನೀಡಬಹುದಾದ, ಹಂಚಿದಷ್ಟೂ ಹರಡಿಕೊಳ್ಳುವ ಹಿತವಾದ ಮಿತವಾದ ಸಸ್ನೇಹ ಭಾವ ಬಂಧ...

ಪ್ರೇಮ – ಪ್ರೇಮವೆಂದರೆ ಪೂಜೆ... ಅಲ್ಲಿ ಎದುರಿಗೊಂದು ಸ್ಪಷ್ಟ ಮೂರ್ತಿ ಇದೆ... ಅಲ್ಲಿ ಮಂತ್ರ, ತಂತ್ರ, ಅಲಂಕಾರ, ಅಹಂಕಾರ ಎಲ್ಲವೂ ಮಿಳಿತವೆ... ಪ್ರೇಮ ಅವೆಲ್ಲವನೂ ಬಯಸುತ್ತೆ... ಪ್ರೇಮದಲ್ಲಿ ಬೇಡಿಕೆಯಿದೆ, ಕೂಡಿಕೆಯಿದೆ, ನಂಬಿಕೆಯಿದೆ, ಮೂಢನಂಬಿಕೆಯೂ ಇದೆ... ಪ್ರೇಮ ಅವ್ಯಕ್ತ ಮನಸು ಮತ್ತು ವ್ಯಕ್ತ ದೇಹ ಎರಡೂ ಸಮಾನವಾಗಿ ಸ್ಪಂದಿಸಿ ಕಟ್ಟಿಕೊಳ್ಳೊ ಗೂಡು... ಪಾತ್ರಗಳು ಬದಲಾದಂತೆ ಒಂಚೂರು ಆಚೀಚೆಯೂ ಆದೀತು ಪ್ರೇಮ... ಅದು ಕೇವಲ ಇಬ್ಬರ ನಡುವಿನ, ಒಂದು ಸಮಯದಲ್ಲಿ ಒಬ್ಬರು ಒಬ್ಬರೊಂದಿಗೆ ಮಾತ್ರ ಪ್ರಾಮಾಣಿಕವಾಗಿ ಸವಿಯಬಲ್ಲ ಸವಿಭಾವ ಸಂವಹನ...

ಒಲವು – ಒಲವೆಂದರೆ ಆರಾಧನೆ... ಒಲವೆಂದರೆ ಮೌನ... ಒಲವೆಂದರೆ ಧ್ಯಾನ... ಒಳಗು ಅರಳುವಿಕೆ... ಒಳಗೇ ಹುಟ್ಟಿ, ಒಳಗೇ ಬೆಳೆದು, ನಮ್ಮೊಳಗನೇ ಅಮೂರ್ತಗೊಳಿಸಿ ಬೆಳಗುವ ಸೌಂದರ್ಯ ಲಹರಿ... ಒಲವೆಂದರೆ ಮೂರ್ತಿ, ಕೀರ್ತಿಗಳ ಹಂಗಿಲ್ಲದೆ ಎಲ್ಲ ಹಮ್ಮುಗಳ ತೊಡೆದುಕೊಂಡು ನಮ್ಮೊಡನೆ ನಾವೇ ನಡೆಸುವ ಸಂತೃಪ್ತ ಸಂವಹನ... ಒಲವೆಂದರೆ ಊರ ಹೊರಗಿನ ಯಾರೂ ಸುಳಿಯದ ಗುಡ್ಡದ ತುದಿಯ ಹನುಮನ ಗುಡಿಯ ನೀರವ ಮೌನದ ನಡುವೆ ನಾವೇ ಮೊಳಗಿಸಿದ ಘಂಟೆಯ ಸದ್ದಿನ ಸೊಬಗು...  ಒಲವು ಅಡಿಯಿಟ್ಟರೆ ಒಮ್ಮೆ ಮನಸೆಂಬುದು ಸದಾ ಹಗುರ ಹಗುರ... ಒಲವೆಂದರೆ ನಮ್ಮನೇ ನಮಗೆ ತೋರಿ – ಒಳಗಿನ ಹೊಟ್ಟುಗಳ ಹೊರ ತೂರಿ – ನಮ್ಮಿಂದಲೇ ನಮ್ಮ ಗಟ್ಟಿಯಾಗಿಸಿ, ಹಸಿರ ಹೊತ್ತ ಬೆಟ್ಟವಾಗಿಸುವ ಅವ್ಯಕ್ತ ಅನುಭಾವದನುಸಂಧಾನ...

ಎಲ್ಲರ ಬದುಕಲೂ ಪ್ರೀತಿ ಮುಗಳ್ನಕ್ಕು – ಪ್ರೇಮ ಫಲಿಸಿ – ಒಲವು ಲಾಲೈಸಲಿ... :)

%%%%%

ಮೌನ – ಮೌನವೆಂದರೆ ಮೇಲಿಂದ ಸರಳ ಗೋಚರ ಎನ್ನಿಸುವ ಆದರೆ ಅಷ್ಟು ಸುಲಭಕ್ಕೆ ವಿಶ್ಲೇಷಣೆಗೆ ಸಿಕ್ಕದ, ಆಗಾಗ ಬೇರೆ ಬೇರೆ ರೂಪಗಳಲಿ ಎದುರಾಗಿ ಮಿಡಿವ ಭಾವ... ಚಿರ ಮೌನಕೆ ಜಾರುವ ಮೊದಲು ಸಂಚಾರಿಯಾಗಿ ದಕ್ಕಿದಷ್ಟು ಸುಲಭಕ್ಕೆ ಸ್ಥಿರ ಜೀವನಾಡಿಯಾಗಿ ದಕ್ಕದ ಮನದಾಳದ ಭಾವ... 

ನಿಜದ ಮೌನವೆಂದರೆ ಮಾತಾಡದೇ ಇರುವುದಲ್ಲ... ಮೌನವೆಂದರೆ ಒಳಗಣ ಮಾತು - ಅಂತರಂಗದ ಮೃದಂಗ ನಾದ... ಮೌನವೆಂದರೆ ಗೋಡೆಯಲ್ಲ... ಮೌನ - ಮಾತು ಮಾತಿನ ನಡುವಿನ ಖಾಲಿ... ಖಾಲಿಯೆಂದರೆ ಅದು ಖಾಲಿಯಲ್ಲ – ಕಳೆದುಕೊಳ್ಳುತ್ತಲೇ ತುಂಬಿಕೊಳ್ಳುವ ಪ್ರಕ್ರಿಯೆ – ಹೊಸ ಉಬ್ಬರಕೆ ಮುನ್ನುಡಿ... ಮೌನವೆಂದರೆ ಬೇಲಿಯಲ್ಲ... ಬಯಲು – ಎಲ್ಲವನೂ ಒಳಗೊಳ್ಳುವ ಬಯಲು... ಮಗುವ ನಗೆಯ ಮೌನದಿಂದ ಹಿಡಿದು ನಗುವೊಂದು ಚಿರಮೌನಕೆ ಜಾರುವವರೆಗಿನ ನಡುವಿನ ಈ ಬದುಕು ಕೂಡ ಒಂದು ಸುದೀರ್ಘ ಮೌನವೇ... 

Friday, September 13, 2013

ಗೊಂಚಲು - ಎಂಬತ್ತೈದು.....

ಹೀಗೆಲ್ಲ ಅನ್ನಿಸಿ.....

ಅಲೆಗಳು – ನಲಿವಿನಲೆಗಳು, ಒಲವಿನಲೆಗಳು, ಏನೋ ಅರಿಯದ ಒಳಗುದಿಯ ನೋವಿನಲೆಗಳು...
ಈ ಅಲೆಗಳಿಗೆಲ್ಲ ನಾನೆಂದರೆ ಏನೋ ವಿನಾಕಾರಣದ ಪ್ರೀತಿ – ಆ ಪ್ರೀತಿಯಿಂದಲೇ ಅಲೆದು ಬರುತ್ತವೆ ನನ್ನೆಡೆಗೆ...
ಆಗೊಂದು ಖುಷಿಯ ಅಲೆ ಕುಪ್ಪಳಿಸಿ ಬಂದು ನಗೆಯ ಸುರಿದು ಹೋದರೆ – ಹೀಗೊಂದು ಅರಿವಾಗದ ಗೊಂದಲಗಳ, ಹಿಂಡುವ ಭಾವಗಳ ಅವ್ಯಕ್ತ ನೋವಿನ ಅಲೆ ಮನಸ ತಾಕುತ್ತೆ...
ಗೊತ್ತು ನನಗೆ ನನ್ನಿಂದ ನಿರೀಕ್ಷೆಗಳಿಲ್ಲ ಅವಕೆ...
ಆದರೆ ನನ್ನ ಒಂದೇ ಒಂದು ಪ್ರೀತಿ ಮಾತು, ಆತ್ಮೀಯವಾದ ಮುಂಗುರುಳ ನೇವರಿಕೆ ಅವುಗಳ ಖುಷಿಯ ಇಮ್ಮಡಿಸಿ, ನೋವ  ಅಬ್ಬರವ ಚೂರೇ ಆದರೂ ಇಳಿಸುತ್ತದೆ – ಹೊಸ ಹುರುಪು ತುಂಬುತ್ತೆ...
ಆದರೆ ನಾನೋ ಅಷ್ಟನೂ ಮಾಡಲಾರದ – ನಗುವಿಗೊಂದು ಪ್ರತಿ ನಗು, ಅಳುವಿಗೊಂದು ಸಾಂತ್ವನದ ಸವಿ ನುಡಿಯನೂ ಕೊಡಲಾರದ - ಆತ್ಮಸಖನೆನ್ನಿಸಿಕೊಂಡೂ ಆತ್ಮಬಲ ತುಂಬಲಾರದ ಅಸಹಾಯ, ನಿಶ್ಚಲ, ಮೂಕ ಮರಳ ದಂಡೆ...
ಹಾಗಿದ್ದೂ ಈ ಅಲೆಗಳಿಗೆ ನಾನೆಂದರೆ ಅದೇಕಷ್ಟು ಆತ್ಮೀಯತೆಯೋ - ಎಲ್ಲ ಭಾವಗಳ ನಿರ್ಮಲ ಮನಸಿಂದ ನನ್ನೆದುರು ಹರವಿ ಹಿಂತಿರುಗುವಾಗ – ನಾನೇನನೂ ಕೊಡದೆಯೂ ಎಲ್ಲವನೂ ನನ್ನಿಂದಲೇ ಪಡೆದವರಂತೆ ಕಿವಿಯಲ್ಲೇ ಉಸುರುತ್ತಾರೆ ಮುದ್ದು  ಗೆಳೆಯಾ ನಾನೀಗ ಹಗುರ ಹಗುರ...
ಆಗೆಲ್ಲ ನನ್ನ ನಿರ್ಭಾವುಕ ಮನಸ್ಥಿತಿಯ ಬಗೆಗೆ ನನಗೇ ನನ್ನ ಮೇಲೆ ಮರುಕವಾಗುತ್ತದೆ...
ಆದರೂ ಒಳಗಿನ ಮಾತೊಂದ ಹೇಳಲಾ – ಆ ಪರಿ ನಿರ್ಭಾವುಕನಾದ ನನಗೂ; ನನ್ನ ಇರುವಿಕೆಗೆ ಅರ್ಥ ತುಂಬೋ ಈ ಅಲೆಗಳೆಂದರೆ ಆತ್ಮಸಾಂಗತ್ಯದ ಬಂಧವೇ – ಅವುಗಳೆಡೆಗೆ ಒಂದಿಷ್ಟು ಕಾಳಜಿಯಿದೆ – ಅವುಗಳ ಒಳಿತನ್ನು ಬಯಸಿ ಹಾರೈಸೋ ತುಡಿತವಿದೆ – ಆದರೆ ಅದನ್ನ ವ್ಯಕ್ತಪಡಿಸುವಲ್ಲಿ ಅತಿವಾಸ್ತವಿಕತೆಯ ರೂಢಿಸಿಕೊಂಡ ಮನಸ್ಥಿತಿಯ ಒದ್ದಾಟವಿದೆ... ಹಾಗಂತ ಹೇಳಿದರೆ ನಗಬಾರದು ನೀವು...!!!

*****

ಅವಳ ತಪ್ಪು ಒಪ್ಪುಗಳ ಅವಳಿಗರುಹುವಾಗ ಮೊದಲಿಗನಾಗಿ - ಅವಳದಲ್ಲದ ತಪ್ಪಿಗೆ ಜಗವೆಲ್ಲ ಅವಳ ದೂಷಿಸುವಾಗ ಅವಳಾತ್ಮ ಚೈತನ್ಯವಾಗಿ ನನ್ನ ನಗು ಅವಳ ಜತೆಗಿರಬೇಕು...
ಅವಳ ಒಡಲು ನೊಂದು ಅಳುವುಕ್ಕಿ ಬಂದು ಕಣ್ತುಂಬಿದ ಹನಿ ಕೆನ್ನೆ ತಾಕುವ ಮೊದಲೇ ನನ್ನ ಹೆಗಲು ಅವಳಿಗಾಸರೆಯಾಗಬೇಕು...
ನಾನಿಲ್ಲದೂರಲ್ಲೂ - ನಾನು ಬರೀ ನೆನಪು ಮಾತ್ರವೇ ಆದಾಗಲೂ ಅವಳು ನಗುತಿರಬೇಕು...
ಅವಳೊಂದಿಗೆ ನಾನು ಹಾಗೆ ಬಂಧವ ಬೆಸೆದಿರಬೇಕು...
ಆತ್ಮ ಸಾಂಗತ್ಯವೆಂದರೂ - ಒಲವಿನಾರಾಧನೆ ಎಂದರೂ ಅದೇ ಅಂದುಕೊಳ್ತೇನೆ ನಾನು...
ಆದರೆ ಅಂಥ ಸಾಂಗತ್ಯವ ಸಾಧಿಸಲಾರದ ನನ್ನ ಮನಸ್ಥಿತಿಯ ದೌರ್ಬಲ್ಯವನೂ ಒಪ್ಪಿಕೊಳ್ಳಲೇಬೇಕು ನಾನು...

*****

ಉಳಿಸಿಕೊಳ್ಳಬೇಕಿದ್ದ ಪ್ರೀತಿ - ಕಳೆದುಕೊಳ್ಳಬೇಕಿದ್ದ ಒಣ ಪ್ರತಿಷ್ಠೆಯಿಂದಾಗಿ ಸತ್ತು ಹೋದಾಗಲೂ ಎಂದಿನಂತೆ ನಗಬಲ್ಲ ನನ್ನ ಸ್ವಭಾವಕ್ಕೆ ಏನಂಥ ಹೆಸರಿಡಲಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Wednesday, September 4, 2013

ಗೊಂಚಲು - ಎಂಬತ್ನಾಕು.....

ಒಳಗಿನಳಲು.....


ಕೆಲ ಮಧುರ ಭಾವಗಳ ಒಳಗೆಳೆದುಕೊಳ್ಳಲಾಗದ ವಾಸ್ತವದ ಅಸಹಾಯಕತೆ...
ಸಂಜೆ ನೆರಳಂತೆ ಬೆಳೆದು ಕಾಡುವ ಮಧುರ ಯಾತನೆಯ ಭಾವಗಳಿಂದ ದೂರ ಓಡಿ ಓಡಿ ಆವರಿಸಿದ ನಿಶ್ಯಕ್ತಿ... 
ಬೇಡವೆಂದು ಹೊರನೂಕಿ ಒಳಸೇರಿಕೊಳ್ಳಲೂ, ಬೇಕೆಂದು ಸೆಳೆದು ಒಳಗೆ ಅಡಗಿಸಿಕೊಳ್ಳಲೂ ಮನದ ಮನೆಗೆ ಬಾಗಿಲೇ ಇಲ್ಲ...
ನನ್ನ ತಪ್ಪೆಷ್ಟು ಕಾಲನ ಕೈವಾಡವೆಷ್ಟು ಅರ್ಥವಾಗದೇ ಎಲ್ಲ ಗೋಜಲು ಗೋಜಲು...
ಅಲ್ಲೆಲ್ಲೋ ಮಳೆಯಾದ ಸೂಚನೆಗೆ ನನ್ನೆದೆನೆಲದಲ್ಲಿ ಸಣ್ಣ ಕಂಪನ...
ಆಸೆ – ನನ್ನೆದೆ ನೆಲವೂ ಅಂಥದೊಂದು ಮಳೆಯಲ್ಲಿ ಒಂದಿಷ್ಟೇ ಇಷ್ಟು ನೆನೆವಂತಿದ್ದಿದ್ದರೆ... 
ಅಲ್ಲೆಲ್ಲ ಸುರಿವ ಸೋನೆ ಇಲ್ಲಿಯೂ ಸುರಿದು ಒಂದೇ ಒಂದು ಹನಿಯ ಮೇಲಾದರೂ ಕೇವಲ ನನ್ನ ಹೆಸರು ಬರೆದಿದ್ದಿದ್ದರೆ...
ಹಾಗೆಂದುಕೊಳ್ಳುತಿರುವಾಗಲೇ ದಾರಿ ತಪ್ಪಿ ಇತ್ತ ಬಂದ ಒಂದ್ಯಾವುದೋ ಮಳೆ ಮೋಡ ಕೂಡ ಈ ಮರಳು ಕಾಡಿನ ಒರಟು ಬಿಸಿಗೆ ಹೆದರಿ ಹನಿವ ಮೊದಲೇ ದೂರ ಸರಿಯುತ್ತೆ...
ಖರ್ಜೂರ ಬೆಳೆವಷ್ಟಾದರೂ ಮೆದುವಾಗಿಸಬೇಕೆಂದುಕೊಳ್ಳುತ್ತೇನೆ ನನ್ನ ನಾನು...
ಆದರೆ ಅದಕೂ ಧುತ್ತನೆ ಕಾಡುವ ಮರಳ ಸುಂಟರಗಾಳಿಯ ಭಯ...
ಕಾಲನೆಂಬ ಸುಂಟರಗಾಳಿಗೆ ಸಿಕ್ಕ ಬದುಕೆಂಬ ಮರಳುಗಾಡಲ್ಲಿ ನಾಳೆಗಳಿಗೆ ಕಸುವ ತುಂಬೋ ಒಲವ ಕನಸಿನ ಮಳೆ ಸುರೀದೀತು ಹೇಗೆ...
ಹುಟ್ಟು ಬಂಜರಾದ ಎದೆನೆಲದಲ್ಲಿ ಒಲವಧಾರೆಗೇನು ಕೆಲಸ...
ಆದರೂ ಬಂಜರು ಬದುಕಿಗೇ ಹಸಿರಿನಾಸೆ ಅಧಿಕವೇನೋ...:(


***


ಆಯೀ -

“ಬದುಕಿರುವುದಕ್ಕೆ ಒಂದು ಉದ್ದೇಶ ಬೇಕು; ಕೇವಲ ನನ್ನದು ಎಂಬ ಜೀವ – ಭಾವವೊಂದು ಜೊತೆಗಿರಬೇಕು; ಇಲ್ಲದಿರೆ ಒಂದು ಹಂತದಲ್ಲಿ ಎಲ್ಲ ಖಾಲಿ ಖಾಲಿ ಅನ್ನಿಸಿಬಿಡುತ್ತೆ..” ಹಾಗಂತ ಎಲ್ಲೋ ಓದಿದ ನೆನಪು... ಆ ಮಾತು ಸತ್ಯ ಅನ್ನಿಸಿದಾಗಲೆಲ್ಲ ನಾಳೆಗಳ ಬಗೆಗೆ ದಿಗಿಲಾಗುತ್ತೆ...
ಕಾರಣ – ಕೇವಲ ನಂದು, ನಂಗೆ ಮಾತ್ರ ಸ್ವಂತ ಅನ್ನುವಂತೆ ನಾವಿರೋದೇ ಇಬ್ಬರು... 
ಯಾರೇ ಒಬ್ಬರು ಕಳಚಿಕೊಂಡರೂ ಉಳಿದ ಒಬ್ಬರ ಬದುಕು ನಿರುದ್ದಿಶ್ಯವೇ...
ನೀನು ನನ್ನ ಉಸಿರ ನುಡಿ – ನಾ ನಿನ್ನ ಕರುಳ ಕುಡಿ...
ನಿನಗೆ ಅವನು ಇದ್ದೂ ಇಲ್ಲ – ನಂಗಾಗಿ ಅವಳು ಬರುವ ಸಾಧ್ಯತೆಯೇ ಇಲ್ಲ...
ನಾಳೆಗಳ್ಯಾಕೋ ಸ್ಮಶಾನದ ನಡುವಿನ ಒಂಟಿತನದಂತೆ ಕಾಡುತ್ತವೆ ಆಗಾಗ...
ಆಗೆಲ್ಲ ಸಮಾಧಾನಿಸಿಕೊಳ್ಳುತ್ತೇನೆ ನನ್ನ ನಾನೇ -
ಬಿಡು, ಇಂದಿನದೇ ಸಾಕಷ್ಟಿರುವಾಗ ನಿನ್ನೆ ನಾಳೆಗಳೇಕೆ ಕಾಡಬೇಕು ಹೇಳು...
ನಾಳೆಯ ಇಂದೇ ಕಂಡವರಿಲ್ಲ – ನಿನ್ನೆಯ ತಿರುಗಿ ಉಂಡವರಿಲ್ಲ ಎಂದುಕೊಂಡು ಇಂದನ್ನು ಆದಷ್ಟು ಮಟ್ಟಿಗೆ ನಗುತ ತಳ್ಳಿದರಾಯ್ತು... 
ಬದುಕೆಂದರೆ ಅದೇ ತಾನೆ...
ಬಲ್ಲೆ ನಾನು ನೀನೂ ಹೀಗಂದುಕೊಂಡೇ ದಿನವ ದೂಡ್ತೀಯಾ ಅಂತ...

Tuesday, September 3, 2013

ಗೊಂಚಲು - ಎಂಬತ್ತು ಮತ್ತು ಮೂರು.....

ಮತ್ತೊಂದಿಷ್ಟು ತುಂಡು ಭಾವಗಳು.....


ಪಾಪಪ್ರಜ್ಞೆಯ ನಿಟ್ಟುಸಿರು: 
ಗೆಳೆಯಾ –
ನೋವಲ್ಲೂ - ನಗುವಲ್ಲೂ ಮೊದಲು ನೆನಪಾಗೋದು ನೀನು; ಅದಕೆಂದೇ ನನ್ನ ನೋವುಗಳ ನಿನ್ನಲ್ಲಿ ಕೊನೇಲಿ ಹಂಚಿಕೊಳ್ತೇನೆ; ಹೆಚ್ಚಿನ ಸಲ ನನ್ನೊಳಗೇ ಬಚ್ಚಿಟ್ಟುಕೊಳ್ತೇನೆ...
ಕಾರಣ ಇಷ್ಟೇ –
ನನ್ನ ನೋವುಗಳಿಂದ ನೀನು ನೋಯಬಾರದು...
ಹಾಗಂದುಕೊಂಡು ನೋವ ನುಂಗಿ ನಗುವ ತೋರುವ ಮತ್ತು ಅದೇ ಹೊತ್ತಿಗೆ ನಂದ್ಯಾವುದೋ ಮಾಮೂಲಿ ನೋವಿಗೆ ಕಣ್ಣೀರಾಗಿ ಸಾಂತ್ವನದ ಮದ್ದಾಗುವ ನಿನ್ನ ಮನದ ಹಿರಿತನದೆದುರು ಗೆಳತೀ ನಾನೆಷ್ಟು ಕುಬ್ಜ ಅಲ್ಲವಾ...:(

ಚಂದ್ರ - ತಾರೆ - ನೀಲಿ:
ತುಂತುರಾಗಿ ಸುರಿದು ಖಾಲಿಯಾಗಿ - ನಿಚ್ಚಳ ನೀಲಿಯಾದ ಬಾನ ಬಯಲಲ್ಲಿ ಚಂದಮ ತಾ ನಗುತಿರುವ ತಾರೆಗಳೊಡಗೂಡಿ - ಎನ್ನೀ ಮನವ ಮರಳು ಮಾಡಿ...
ನಿನ್ನೊಲವ ನೆನಪ ಮೋಡಿ ಜತೆಗೂಡಿದ ಈ ಇರುಳಿಗೆಂಥ ಸೊಬಗು...

ನಗು:

ಚಂದಿರ ಎಂದಿಗಿಂತ ಜಾಸ್ತಿ ನಗ್ತಾ ಇದಾನೆ...
ನನ್ನಹಂಕಾರದ ಕೋಟೆ ಮುರಿದದ್ದು ಕಂಡು ಖುಷಿಯಾಗ್ತಿದೆಯೇನೋ ಪಾಪಿಗೆ...
ನಾನೂನು ನಗುತಿದ್ದೇನೆ...
ನಗುವುದ ಬಿಟ್ಟು ಬೇರೇನೂ ಮಾಡಲಾಗದ್ದಕ್ಕೆ...

ರಾತ್ರಿ ಹಾಡು:

ಕಣ್ರೆಪ್ಪೆ ಸೆಳೆಯುತಿದೆ ಕತ್ತಲೆಡೆಗೆ ಹರುಷದಲಿ...
ಸಣ್ಣಗೆ ಗುನುಗಿದಂತಿದೆ ಅಲ್ಲಿ - ನಿದಿರಮ್ಮನ ಊರಲ್ಲಿ
ಹೊಸ ಕನಸಿನ ಸುವ್ವಾಲಿ...

ಕೃಷ್ಣ ಸನ್ನಿಧಿ:

ಹಿಡಿಯಷ್ಟು ಸಿಕ್ಕಿ - ಬೆಟ್ಟದಷ್ಟು ಕಾಡಿ...
ಇಷ್ಟ ಕಷ್ಟಗಳಲೆಲ್ಲ ಜೊತೆಯಾಗಿ
ಗುಟ್ಟಾಗಿ ಮನದಲ್ಲೇ ಗಟ್ಟಿಯಾಗುವ ಭಾವ ಕೃಷ್ಣ...
ಸದಾ ಕೊಳಲಿನ ಉಯಿಲಂತೆ - ಬೇಕೆಂದಾಗ ಪಾಂಚಜನ್ಯದ ಹುಯಿಲಂತೆ ಜತೆಗಿರಲು ಎಲ್ಲರಿಗೂ ಕೃಷ್ಣನಂಥಹ ಗೆಳೆಯನೊಬ್ಬ ದಕ್ಕಲಿ...
ಬಾಹ್ಯಕ್ಕೆ ದಕ್ಕದಿರೆ ಅಂತರಂಗಕ್ಕಾದರೂ...

ಅರಿವಿನಲೆ:

ಬರಹಗಾರರ ಪ್ರೀತಿಸುವುದರಿಂದ ಆಚೆಬಂದು ಕೇವಲ ಬರಹಗಳ ಮಾತ್ರ ಆರಾಧಿಸುವುದ ಕಲಿತಂದಿನಿಂದ ನನ್ನೊಳಗು ಇನ್ನಷ್ಟು ತೆರೆದುಕೊಂಡು; ನನ್ನ ಅರಿವಿನ ಪರಿಧಿ ಇಷ್ಟಿಷ್ಟಾಗಿ ಹಿಗ್ಗುತ್ತಿರುವುದರ ಅರಿವಾಗಿ ಮನಸಿಗೀಗೀಗ ಅರಳುವಿಕೆಯ ಹಿಗ್ಗು...
ಆ ಹಿಗ್ಗಿನಿಂದ ನನ್ನ ಮೇಲೆ ನನಗೇ ಇನ್ನಷ್ಟು ಪ್ರೀತಿಯಾಗುತ್ತಿದೆ...:)


ವಿದ್ಯೆಯ ಕೊಲೆ – ಶಿಕ್ಷಣವೆಂಬ ವ್ಯಾಪಾರ:
ಸಂದಿಗೊಂದಿಗಳಲೊಂದೊಂದು ರಂಗುರಂಗಿನ ಬಣ್ಣಗಳಲಿ ನಳನಳಿಸೋ, ಹೆಸರಲೇ ಹಣದ ವಾಸನೆ ಹೊಂದಿರೋ, ಅಂತರರಾಷ್ಟ್ರೀಯ ಮುದ್ರೆ ಹೊತ್ತಿರೋ ಭವ್ಯ ಪಂಜರಗಳಿವೆ ಇಲ್ಲಿ...
ಅಲ್ಲಿ ಆ ಪಂಜರಗಳ ಬಾಗಿಲಲ್ಲಿ ಈ ನೆಲದ ಗಂಧವಿಲ್ಲದ ಭಾಷೆಯ ಠುಸ್ಸು ಪುಸ್ಸು ಮಾತುಗಳಿಂದ, ಜೀವಸೆಲೆ ಇಲ್ಲದ – ಭಾವಸೆಲೆ ಉಕ್ಕಿಸದ ಹೆಪ್ಪಿಡೆಂಟ್ ನಗುವಿಂದ, ವಿನಾಕಾರಣ ಬಾಗಿ ಬಳುಕಿ ವಿಧ ವಿಧದ ಪ್ರಾಣಿಗಳ ಸೆಳೆಯುವ (ಅಲ್ಲಲ್ಲ ಆ ಪ್ರಾಣಿಗಳ ಖಿಸೆಯೊಳಗಣ ನೋಟುಗಳ ಸೆಳೆಯುವ) ರಿಂಗ್ ಮಾಸ್ಟರ್‌ಗಳಿದ್ದಾರೆ...
ಅವರ ಕೈಯಲ್ಲಿ ಅನುಶಾಸನದ ಹಂಗಿಲ್ಲದ ಶಿಸ್ತೆಂಬ ಹೆಸರಿನ ಬಾರುಕೋಲೂ ಇದೆ...
ಜೀವಿಸೋ ಆನಂದವ ಮರೆತು ಸುಖದ ಅಮಲಲ್ಲಿ ಕೊಳೆತ ಭಾವಗಳಲ್ಲಿ ಯಂತ್ರಗಳೆದುರು ಯಂತ್ರಗಳಾಗಿ ದುಡಿ ದುಡಿದು ಹೊಟ್ಟೆಯಷ್ಟೇ ಜೇಬನ್ನೂ ಉಬ್ಬಿಸಿಕೊಂಡು ಬರೋ ಮೂವತ್ತಕ್ಕೇ ಮುದುಕರಾದ ಅಪ್ಪಂದಿರು...
ಸೌಂದರ್ಯವೆಂದರೆ ಲಿಪ್‌ಸ್ಟಿಕ್ಕು, ಪೌಡರ‍್ರು ಮತ್ತು ತುಂಡುಬಟ್ಟೆ ಅಂದುಕೊಂಡಿರೋ; ಬೆತ್ತಲೆ ಬಂದಿದ್ದರೇ ಇನ್ನೂ ಸಹ್ಯವಾಗಿರುತ್ತಿತ್ತೇನೋ ಅನ್ನಿಸುವಂತೆ ಸಿಂಗರಿಸಿಕೊಂಡು ಬರೋ ದಸರಾ ಮೆರವಣಿಗೆಯ ಆನೆಗಳಂಥ ಅಮ್ಮಂದಿರು (ಅಲ್ಲಲ್ಲಿ ಬೋರೇಗೌಡನ ಬಡ ಎತ್ತಿನಂಥ ಝೀರೋ ಸೈಜುಗಳೂ ಇರುತ್ತವೆ)...
ನಿದ್ದೆಗಣ್ಣಲ್ಲಿ ಕಣ್ಣಿರಿಡುವ ತಮ್ಮ ಹಸುಕಂದಗಳನು ಅಂಥ ಆ ಸ್ಕೂಲುಗಳೆಂಬ ಪಂಜರಕ್ಕೆ ಎಳೆತಂದು ಗೇಟಿನೊಳಗೆ ನೂಕಿ, ಒಂದು ದಿನದ ಕಷ್ಟ ಕಳೆಯಿತೆಂಬ ನಿಟ್ಟುಸಿರೊಂದಿಗೆ ತಮ್ಮ ಮಹಲುಗಳಿಗೆ (ಅದೂ ಮತ್ತೊಂದು ಪಂಜರದಂತೆಯೇ ಇರುತ್ತೆ ಇಲ್ಲಿ)  ಹಿಂತಿರುಗುವುದ ನೋಡಿದಾಗಲೆಲ್ಲ ಶಿಕ್ಷಣದ ಹೆಸರಲ್ಲಿ ನಾವು ಎಂಥ ನಾಳೆಗಳ ಸೃಷ್ಟಿಸುತ್ತಿದ್ದೇವಪ್ಪಾ ಅಂತ ದಿಗಿಲಾಗುತ್ತದೆ...

** ಇಷ್ಟೆಲ್ಲ ಹೇಳಿದ ನಾನೂ ಇಂಥದೇ ಒಂದು ಪಂಜರದ ಕೂಲಿಯಾಳುಗಳಲ್ಲಿ ಒಬ್ಬ ಎಂಬುದು ನಿಮಗೆ ಹೇಳಲೇಬೇಕಾದ ಸತ್ಯ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)