Wednesday, October 24, 2018

ಗೊಂಚಲು - ಎರಡ್ನೂರಾ ಎಪ್ಪತ್ತು ಮತ್ತೇಳು.....

ಅವಳ್ಯಾರೋ ಕಪ್ಪು ಹುಡುಗಿ.....
(ನನ್ನೊಂದಿಗೇ ನಡೆದು ಹೋಗುವವಳು...) 

ಈ ಇಂಥ ವಾಚಾಳಿಯ ಎದೆಗೂ ಅಂಟಿದ ಒಂದಾಣೆ ಒದ್ದೆ ಮೌನ ಅವಳು...
ಮಳೆ ಹನಿಯ ಬೆನ್ನಿಗೆ ಅವಳ ನೆನಪ ಚಿತ್ರ ಅಂಟಿದೆ...

ಅವಳ ಬೆತ್ತಲಿಗೆ ಕತ್ತಲು ಸುಡುವಾಗ ಕಿಟಕಿಗೆ ಕಣ್ಣಿಟ್ಟ ಚಂದ್ರನೂ ನನ್ನಂತೆಯೇ ಬೆವರುತ್ತಾನೆ - ಇರುಳ ಸವತಿಯಂಥಾ ಕಪ್ಪು ವಿಗ್ರಹದೆಡೆಗೆ ಬೆಳದಿಂಗಳಿಗೆ ಮತ್ಸರ...
ಬೆವರ ಝರಿಯಲ್ಲಿ ಜಗದ ಮಡಿಯ ತೊಳೆವ ನನ್ನ ಪಾಲುದಾರ ಪಾಪಿ ಅವಳು...

ನಾ ಖುದ್ದು ಕೆರ್ಕಂಡ್ ಕೆರ್ಕಂಡ್ ಮಾಯದಂಗೆ ಕಾದಿಟ್ಕೊಂಡ ಎದೆಯ ಹಸಿ ಹಸಿ ಜೀವನ್ಮುಖೀ ಗಾಯ ಅವಳು...

ನಡು ಹಗಲಿಗೊಂದು ಬೆತ್ತಲೆ ಬಾಗಿನ - ಕತ್ತಲ ತಿರುವುಗಳಿಗೆಲ್ಲ ಸೂರ್ಯ ಸ್ನಾನ - ರತಿ ರಾಗ ರಂಜನೆಯ ಮಧುರ ಪಾಪಕ್ಕಲ್ಲಿ ಮನ್ಮಥನ ಹೊಣೆ, ಹರೆಯದ ಋಣ...
ನನ್ನೆಲ್ಲಾ ಸುಖೀ ಸಾಂಗತ್ಯದ ಹಸಿವು ಅವಳೇ...

ಖಾಲಿ ಖಾಲಿ ಎದೆಗೆ ಹೆಗಲ ಸನ್ನಿಧಿಯ ಸೌಗಂಧವಿಷ್ಟು ತುಂಬಲಿ - ಸಂಜೆಗಳು ಸಾಯದಂತ ಕನಸೊಂದಾದರೂ ಕಣ್ಣಾಳದಿ ನಗಲಿ ಎಂಬೆಲ್ಲ ನನ್ನ ಗೆಲುವಿನ ಸ್ವಚ್ಛಂದ ಸ್ವಾರ್ಥ ಅವಳು...

ಇರುಳ ಮಂಚಕೆ ಬೆಳದಿಂಗಳ ಮಿಂದು ಬಂದ ಬೆತ್ತಲೆ ಕರಡಿ ಅವಳು - ಕಣ್ಣ ಚಮೆಯಿಂದ ತುಟಿ ತಿರುವನು ತೀಡಿ ಚುಮುಚುಮು ಮುಂಜಾವಿನ ಸುಖದ ಮಂಪರಿಗೆ ಮತ್ತೆ ಮೆತ್ತೆಯ ನಶೆ ಏರಿಸಿ ಬಿಸಿ ಉಸಿರ ಸುಪ್ರಭಾತವ ನುಡಿವವಳು...
ಅವಳ ಉಸಿರಿಗೆ ನಾನು ಕೊಳಲು - ನನ್ನ ಬೆರಳಲಿ ಅವಳು ವೀಣೆ - ಮುಂಬೆಳಗ ಮುಂಗುರುಳಿಗೆ ಪ್ರಣಯದ ನುಡಿಸಾಣಿಕೆ...
ನನ್ನೆಲ್ಲ ಹುಚ್ಚು ತೀವ್ರತೆಯ ಹಿಂದುಮುಂದಿನ ನೆರಳವಳು...

ಅಮಾವಾಸ್ಯೆ - ಕರಡಿ ಕಾನು - ತಾರೆಗಳ ಮುಡಿದ ಬಾನ ಬೆಳಕಲ್ಲಿ ಹಾದಿ ತಪ್ಪಿದವನ ಮಾತಿನ ಕಂದರಕೆ ಮೌನದ ಕಂದೀಲು ಹಿಡಿದು ಬಂದ ಕನಸುಕಂಗಳ ನಶೆ ಅವಳು - ಪಿಶಾಚ ಪ್ರೇಮದ ಸಾರಥಿ...

ಸಾವಿನ ತೊಟ್ಟಿಲಲಿ ಅಳುವ ಕೂಸಿಗೆ ಬದುಕಿನ ಚಿತ್ರ ಭಿತ್ತಿಯ ನೂರಾರು ನಗೆಯ ಬಣ್ಣಗಳ ಕಥೆ ಕಟ್ಟಿ ಹಾಡುವ ಅಮ್ಮನ ಲಾಲಿ ಅವಳು...

ನೆನಪ ಸೊಗಡೆಂದರೂ, ಕನಸ ಬಸಿರೆಂದರೂ, ಕಣ್ಣ ನೀರೆಂದರೂ, ತೋಳ ಕಸುವೆಂದರೂ, ಹಾದಿಯ ಸೊಬಗಿಗೆ ಸುಮ್ಮನೇ ಕಟ್ಟಿಕೊಂಡ ಕಲ್ಪನೆಯ ಹಾಡೆಂದರೂ, ಉಸಿರ ಬಿಸಿಯಾಗಿ, ಹೆಜ್ಜೆ ಬೆಳಕಾಗಿ, ಏನೂ ಅಲ್ಲದೇ ಎಲ್ಲವೂ ಆಗಿ ಹೆಸರೇ ಇಲ್ಲದ ಅವಳೇ ಅವಳು - ಎಷ್ಟೆಷ್ಟೋ ಬರೆದ ಮೇಲೂ ಮತ್ತಷ್ಟೇ ಉಳಿದೇ ಹೋಗುವ ಕವಿತೆ...

ಅವಳ್ಯಾರೋ ಅವಳು ಕಪ್ಪು ಹುಡುಗಿ ಎಂಬುದು ಪ್ರಶ್ನೆ - ಅವಳ್ಯಾರೋ ಕಪ್ಪು ಹುಡುಗಿ ಎಂಬುದೇ ಉತ್ತರ...

ಅವಳೆಂದರೆ ಬದುಕು - ಅವಳೆಂದರೆ ಸಾವು... 

Thursday, October 4, 2018

ಗೊಂಚಲು - ಎರಡ್ನೂರಾ ಎಪ್ಪತ್ತು ಮತ್ತಾರು.....

ಮಳೆಬಿಲ್ಲ ಬೆಮರು..... 

ಮಳೆಬಿಲ್ಲಿನಂಥವಳೇ - 
ಮಳೆಯೊಂದಿಗಿನ ನಿನ್ನ ನೆನಪನ್ನು ಬೇರ್ಪಡಿಸಲಾಗದೇ ಸದಾ ಸೋಲುತ್ತೇನೆ...
ತೋಯ್ದು ತೊಪ್ಪೆಯಾಗಿ ನನ್ನನೂ ತೋಯಿಸಿ ಮನೆ ಸೇರಿ ಹೆಗಲ ಚೀಲದಿಂದ ಕೊಡೆ ತೆಗೆದಿಟ್ಟು ಕಣ್ಮಿಟುಕಿಸಿ ಗೊಳ್ಳನೆ ನಗುತ್ತಿದ್ದ ನಿನ್ನವು ಮಾತ್ರ ಅನ್ನಿಸ್ತಿದ್ದ ಮುದ್ದು ಸಂಜೆಗಳು...
ಇರುಚಲನು ಮಿಂದ ಕಿಟಕಿ ಸರಳುಗಳ ತುಕ್ಕಿನ ಹಸಿ ಘಮಲಿಗೆ ಉಸಿರು ಬೀಗುವಾಗ ಸದ್ದಿಲ್ಲದೆ ಕಳ್ಳ ಬೆಕ್ಕಿನಂತೆ ಕರುಳ ಸೇರಿ ತುಟಿ ತಿರುವಲ್ಲಿ ಅರಳುತಿದ್ದ ಆಸೆ ಉಂಗುರ...
ಬೀದಿಗಿಳಿದು ತೋಯಲಾಗದ ಮಳೆಯ ಮಧ್ಯಾಹ್ನದ ಉತ್ತರಾರ್ಧದಲಿ ಒಟ್ಟೊಟ್ಟಿಗಿನ ಬಿಸಿನೀರ ಅಭ್ಯಂಜನಕೆಳೆದು ಕನ್ನಡಿಗೆ ನಾಚಿಕೆಯ ಬಿಂಬವ ಅಂಟಿಸಿದ್ದು...
ಒದ್ದೆ ಜಡೆಯ ಕೊಡವುವಾಗ ಇದ್ದಲ್ಲೇ ಘಲ್ಲೆಂದು ಲಘುವಾಗಿ ಕಂಪಿಸುವ ಆ ಪುಟ್ಟ ಎದೆ ಗೊಂಚಲು ನನ್ನಲ್ಲಿ ಎಬ್ಬಿಸುತಿದ್ದ ಅಬ್ಬರದ ಪ್ರಣಯಾತುರ ಅಲೆಗಳು...
ಮಿಂದೆದ್ದು ಬಂದವನ ತಾಜಾತನದ ಕಮ್ಮನೆ ಕಂಪಿಗೆ ಕಣ್ಣರಳಿಸಿ ಒರಟು ನಡು ತಬ್ಬಿ ತೆರೆದೆದೆಗೆ ಮುದ್ದಾಗಿ ಉಜ್ಜಿ ಗಂಡು ಬೆತ್ತಲೆಗೂ ರಂಗು ತುಂಬುತಿದ್ದ ಮೂಗುತಿಯ ಗೀರುಗಳೆಲ್ಲ ರೋಮಗಳ ಮರೆಯಲ್ಲಿನ್ನೂ ಬಿಮ್ಮಗೆ ಕೂತೇ ಇವೆ ಕಣೇ...
ಮತ್ತೆ ಹಸಿಯಾಗಿ ಕಾಡುವ ಬಾನು ಮುಡಿ ಬಿಚ್ಚಿ ಮೋಡ ಕರಗಿದ ಆ ತಿಳಿ ಬೆಳಕ ಹಾಸಿನಲಿ ಬೆನ್ನ ಬಯಲಲ್ಲಿ ನೀ ನೆಟ್ಟ ಉಗುರ ಹಳೇ ಗಾಯಗಳು...
ಮೀಯೋ ಕೋಣೆಯ ದರ್ಪಣದಂಚಿಗೆ ಅಂಟಿಸಿ ನೀ ಮರೆತ ಬಿಂದಿಗಳ ಚಿತ್ತಾರ ಇನ್ನೂ ಹಾಗ್ಹಾಗೇ ಇದೆ ಮಾರಾಯ್ತೀ - ಈ ನೆನಹುಗಳಂತೆಯೇ...
ಒಟ್ಟಾಗಿ ದಾಳಿಯಿಡುವ ಆ ಬಿಡಿ ಬಿಡಿ ಚಿತ್ರಗಳು ಈ ಎದೆಯ ಇಡಿ ಇಡಿಯಾಗಿ ಸುಡುತ್ತವೆ...
ನನ್ನೊಲವ ಕಪ್ಪು ಹುಡುಗೀ - ನೀನಿಲ್ಲದ ಮಳೆಗಿಲ್ಲಿ ಕನಸುಗಳಿಲ್ಲ; ನೆನಪಿನ ಉರಿಗಿಂದು ಸಾವಿನ ಬಣ್ಣ...
🔃🔃🔃

ವಸುಧೆ ಕೊರಳಿಗೆ ಮಳೆಯ ಮುತ್ತಿನ ಮಣಿ ಹಾರ - ದಿನಮಣಿಗೆ ಮೋಡದ ಹೊದಿಕೆ - ಕಡು ಸಂಜೆಗೂ ಮುಂಚಿನ ನಿದ್ದೆಗಣ್ಣ ಕೂಸಿನಂಥ ತಿಳಿಗತ್ತಲು; ಈ ತಂಪಿಗೆ, ಏಕಾಂತದ ಕಂಪಿಗೆ, ಇಂಪಾಗಿ ಸೊಂಪಾಗಿ ನೀ ಹಾಡಾಗಿ ಬಂದರೆ - ಎದೆಗೂಡ ತುಂಬೆಲ್ಲಾ ಒಲವಾ ಚೆಲುವ ಪಾರಿಜಾತದ ತಳಿರು, ಕಾಲ್ಗೆಜ್ಜೆ ಘಳಿರು...
ಇಬ್ಬನಿಯು ನೆಲ ತಬ್ಬಿದಂತೆ ಕೆನ್ನೆ ಗುಳಿಯ ಸುತ್ತ ತುಟಿಯ ತೇವದ ಚುಕ್ಕಿ ರಂಗೋಲಿ - ಕಟಿಯ ಬಳುಕಿನಂಚಲಿ ಹಸಿ ಬಿಸಿ ಸುಳಿ ಮಿಂಚು... 
ತುಸು ಸಾವರಿಸಿ ಸಹಕರಿಸು - ಆ ಬೆತ್ತಲ ಬೆಳದಿಂಗಳ ಬೆಂಕಿ ಚಿತ್ತಾರದಲಿ ಈ ಇರುಳ ಬಾಗಿಲ ಸಿಂಗರಿಸು... 
ಮರಳಿ ಹೊರಳಿ ನಾಭಿ ಸ್ಫೋಟಿಸಲಿ... 
ಹೊಸ ಹೊಸದಾಗಿ ಹಸಿವು ಕೆರಳಿ ಮತ್ತೆ ಮತ್ತಲ್ಲೇ ಮತ್ತಿನ ಮುದ್ದು ಹುಟ್ಟಲಿ...
#ಮಳೆ_ಸಂಜೆಯ_ಮತ್ತಿನಾಸೆ... 
🔃🔃🔃

ಬೆತ್ತಲೆ ಸೀಮೆಯ ಶ್ರೀಮಂತ ಅಂದದ ಗಣಿಯೆರಡು ಮಂದ ಬೆಳಕನ್ನು ಮೀಯುವಲ್ಲಿ, ನಾಚಿಕೆಯ ಬಾಗಿಲ ವಾಡೆಯಿಂದ ಇಣುಕಿದ ಅರೆಬರೆ ದಿಟ್ಟಿ ಉಸಿರ ಕೈ ಹಿಡಿದು ಹಾದಿ ತಪ್ಪಿ ಏರು ಜಾರಿನ ಊರೆಲ್ಲ ಅಲೆದಲೆದು, ಬೆನ್ನ ಹಾಳಿಯಲಿ ಬೆವರ ಟಿಸಿಲೊಡೆದು ಮಧುರ ಪಾಪದ ಕೇಳಿಯ ಒಪ್ಪಂದಕೆ ನಡು ಗದ್ದೆ ಕೊನೆಯ ಋಜು ಒತ್ತಿತು...
#ಪ್ರೇಮೋತ್ಖನನ...
🔃🔃🔃

ಸ್ನಾನದ ಮನೆ ಮೂಲೇಲಿ ಮೊಟ್ಟೆ ಇಟ್ಟು ಕಾವಿಗೆ ಕೂತ ಪಾರಿವಾಳದಂತೋಳು ನೀನು - ಮನ್ಸಿಗೆ ತುಸುವೂ ವಿರಾಮ ಕೊಡದೇ ಎಲ್ಲೆಲ್ಲೂ ಸತಾಯಿಸ್ತೀಯಾ... 
ಛೀsss ನಾಚ್ಕೆ ಆಗಲ್ವೇನೆ - ಗಂಡೈಕ್ಳು ಮೀಯೋ ಹೊತ್ತಲ್ಲೂ ಕಣ್ಣು ಕೂಡ ಮಿಟುಕಿಸದೆ ಕೂರ್ತೀಯಲ್ಲ... 😜
#ಒಂದು ಪಾರಿವಾಳದ ಬಾಣಂತನ...
🔃🔃🔃

ಬೆಚ್ಚನೆ ರಮಣೀಯತೆಯ ಸಾಕಿಕೊಂಡ ತನ್ನ ಮೆತ್ತನ್ನ ಎದೆ ದಿಬ್ಬಗಳ ನಟ್ಟ ನಡುವಣ ಕಿರು ಓಣಿಯಲ್ಲಿ ನನ್ನ ಬಿಸಿ ಉಸಿರಿಗೆ ಆಸೆಯ ಘಮ ಉಣಿಸಿ ಕುಚ್ಚು ತಟ್ಟುತಾಳೆ - ಇರುಳೊಂದು ಹಿಂಗಿಂಗೆ ಶುರುವಾಗಿ ಮತ್ತೇರಿ ಬೆವರಾಗುತ್ತದೆ...
ಅವಳು ಹೇಳೋ ಶುಭರಾತ್ರಿ...😍
🔃🔃🔃

ನನ್ನುಸಿರು ನಿನ್ನುಸಿರೊಂದಿಗೆ ಹರೆಯದ ಹಸಿವಿನ ಪಿಸುಮಾತನಾಡುವಾಗ ತುಂಟ ತುಟಿಗಳು ಮಕ್ಕಳಂದದಿ ಕಚ್ಚಾಡುತ್ತವೆ -  ನಿನ್ನೆದೆ ಮೆತ್ತೆಯ ಅಲಂಕರಿಸಿದ ಮೊದಲ ಬೆವರ ಹನಿಗೆ ಎನ್ನ ಕಿರು ಬೆರಳು ಸುಡುವಾಗ ಕಿಬ್ಬೊಟ್ಟೆ ಇಳಿಜಾರಿನಲ್ಲಿ ಪತಂಗ ನಾಟ್ಯೋತ್ಸವ - ಸುಖ ರಸ ರಾಗಕ್ಕೆ ಇಕ್ಕಳಗಾಲಿನ ಶಯನಬಂಧದಿ ನೇಗಿಲ ಕಸುವು ನೆಲವ ಸೀಳಿ, ಒದ್ದೆ ನೆಲ ನೇಗಿಲ ನುಂಗಿ ಭುವಿ ಗರ್ಭದಿ ಬೀಜಾಂಕುರದ ಕನಸು...
#ಇರುಳ_ಬೆವರು_ಬೆತ್ತಲೆ_ಬೆಳಕು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಎರಡ್ನೂರಾ ಎಪ್ಪತ್ತೈದು.....

ಅವಳ(ಳೇ)_ಕಾವ್ಯ.....  

ಒಂದು ಸ್ವಚ್ಛಂದ, ಸಮೃದ್ಧ ಸುಖ ಸಾಂಗತ್ಯವ ಸುರಿದು ನೀ ಎದ್ದು ಹೋದ ಮೂರುವರೆ ನೂರು ಘಳಿಗೆಯ ನಂತರವೂ, ಇನ್ನೂ, ಈಗಲೂ ನಿನ್ನ ಕಂಕುಳ ತಿರುವಿನ ಹಸಿ ಬಿಸಿ ಘಮದ ನೆರಳು ಮಂಚದ ಮನೆಯ ಮೂಲೆ ಮೂಲೆಯನೂ ಏಕಸ್ವಾಮ್ಯದಿ ಆಳುತಿದೆ...
ಮತ್ತೆ ನಾಭಿ ಕುಂಡ ಕೆರಳುತಿದೆ  - ನಿನ್ನ ಮೈಸಿರಿಯ ಮುಡಿಬಿಚ್ಚಿ, ತೋಳ ಸಿಡಿಯ ಉರಿಯಲಿ ಮರಮರಳಿ ಮರುಳು ಅಲೆಯಂತೆ ಹೊರಹೊರಳಿ ಮತ್ತೆ ಮತ್ತೆ ಉರಿದುರಿದು ಹೋಗಬೇಕು...  
#ಇರುಳ_ಹೊಕ್ಕುಳಿಗೆ_ಇಕ್ಕಳ_ಕಾಲಿನ_ಕಂಬಳದ್ದೇ_ಧ್ಯಾನ...
🔀🔀🔀

ಬಿಸಿಲಿಗೆ ಬೆಂಕಿ ಹಚ್ಚುತಾಳೆ - ಮುದ್ದಿನ ಮಾತಲ್ಲಿ ಕೊರಳಿಗೆ ಆಸೆ ಪುನುಗು ಪೂಸಿಕೊಂಡು...
ಮೋಹದಲೆಯ ಸಿಡಿಸುತಾಳೆ - ಎದೆ ಕಣಿವೆಯಲಿ ಬೆಳುದಿಂಗಳ ಬಚ್ಚಿಟ್ಟುಕೊಂಡು...
ಮನಸ ಬೆರಳಿಗೆ ಕನಸಿನುಂಗುರ - ಕನಸ ಮೈಗೋ ಬೆವರ ಮಜ್ಜನ...
ಹರೆಯ ಕರೆವ ತೋಳ ತುಡಿತ ತಡೆಯಲಿ ಹ್ಯಾಂಗೆ - ಆ ಹಾದಿಯ ಬೇಲಿ ಮುರಿಯದ ಹಾಂಗೆ...
🔀🔀🔀

ಮಳೆ ಇಳಿದ ತಿಳಿ ನೀಲಿ ಬಯಲಲ್ಲಿ ತೇಲಾಡೋ ತುಂಡು ಬಿಳಿ ಮೋಡಗಳಂಚಿಗೆ ನಗೆಯ ಉಯ್ಯಾಲೆ ಕಟ್ಟಿ ಮೊರೆಯುತಿದ್ದಾನೆ ಚಂದಿರ...
ಬಾ ಹುಡುಗೀ ಬೆಳದಿಂಗಳ ಮೀಯೋಣ - ಹೆಜ್ಜೆ ಗೆಜ್ಜೆಯ ತಾಳಕೆ ಕಟಿಯ ಏರಿಯಲಿ ಕಿರು ಬೆರಳು ಹಾದಿ ತಪ್ಪಲಿ - ತುಟಿಯ ತಿರುವಿಗೆ ಉಸಿರು ಮಗ್ಗಿ ಕಲಿಸಲಿ...
ಇರುಳ ಮೊದಲ ಜಾವಕೆ ಮುತ್ತು ಮತ್ತೇರಲಿ...
🔀🔀🔀

ಏನ್ಗೊತ್ತಾ -
ಕನಸ ಕಣ್ಣಿನೆದುರು ನಕ್ಷತ್ರ ಉದುರಿದಂತೆ - ಯಾರೋ ಗೋಪಿಯ ಸುಳ್ಳೇ ಬಿಂಕದ ಒಂದೆಳೆ ತುಂಟ ಮಾತು, ಒಂದೇ ಒಂದು ಹಸಿ ತುಟಿಯ ಕೊಂಕು ನಗು - ಬೇಕಷ್ಟಾಯಿತು; ಅದು ಅಜ್ಜಿ ದೃಷ್ಟಿ ನಿವಾಳಿಸಿ, ಬೆಲ್ಲ ಬೆರೆಸಿ ಕುಡಿಸಿದ ಸರ್ವ ರೋಗ ನಿವಾರಕ ಮನೆ ಮದ್ದಿನಂತೆ - ಗಂಟಲಿಗಿಳಿದರೆ ಸಾಕು ಎದೆ ಬಗೆದ ಯಮ ನೋವೂ ಈಗಿದ್ದು ಈಗಿಲ್ಲದಂತೆ...
ಪೋಲಿ ಹೈಕಳ ಬದುಕು ಎಷ್ಟು ಸರಳ, ಸರಾಗ, ಸಹಜ ಮಾರಾಯ್ತೀ...
#ಹುಟ್ಟಾ_ಪೋಲಿಯ_ಪಕ್ಕಾ_ಅನುಭವಾಮೃತ...
🔀🔀🔀

ನಿದ್ದೆಗಣ್ಣ ಎದೆಯ ತೋಯಿಸೋ ನಿನ್ನ ಒದ್ದೆ ಮುಡಿಯ ಹಬೆಹಬೆ ಹನಿಯ ತಂಪು - ಕಿವಿ ತಿರುವಿನ ಸೀಗೆಯ ಸೊಂಪಾದ ಕಂಪು - ಗೆಜ್ಜೆ ಕಿಂಕಿಣಿಯಲಿ ಇನ್ನೂ ಬಾಕಿ ಉಳಿದ ಇರುಳ ಬಿಸಿಯುಸಿರ ಸುಸ್ತಿನ ಹಿತದ ಆಕಳಿಕೆಯ ಇಂಪು...
ದಿನನಿತ್ಯದ ಹೊಸ ಬೆಳಗೂ ಹಿಂಗಿಂಗೇ - ಹೊಂಗೆ ಇಬ್ಬನಿಯ ಮಿಂದಂಗೆ...
#ನಿನ್ನಿಂದ...
🔀🔀🔀

ನಕ್ಷತ್ರ ಕಂಗಳಾಳದಿ ಎದೆಯ ಕಾವ್ಯದ ರೂಹು...
ನಗೆಯ ಬೆಳಕಿನ ಹಾದಿ ತುಟಿಯ ತಿರುವು...
ಕೊರಳ ಶಂಖದ ದನಿಯೋ ನಿನ್ನ ಹೆಸರು...
ಕುಡಿ ಮೀಸೆ ಮರೆಯ ತುಂಟ ಕುಂಟು ನಗೆಯಲಿ ಅದ್ಯಾವ ವಶೀಕರಣ ವಿದ್ಯೆಯೋ...
ಕನಸ ಚೆಲ್ಲಿ ಹೋದವನೇ ಇನ್ನೆಷ್ಟು ಕಾಲ ಎದೆ ಮಾತ ಎದೆಯಲೇ ಕಾಯಲಿ...
ಪ್ರೇಮದ ಮಿಡಿ ನಾಗರ ಹೆಡೆ ಬಿಚ್ಚಿದ ಕಾಲಕ್ಕೆ ಸೆರಗ ಮರೆಯಲಿ ನಿನ್ನಾಸೆ ಸೊಗಸ ಅದ್ಹೇಗೆ ಮುಚ್ಚಿಡಲಿ...
ಸಂಜೆಯ ಬಾಗಿಲಿಗೆ ಬಾರೋ ಈ ಅಪರಿಚಿತ ಬೇಗುದಿ ತುಸು ಅಳಿಯಲಿ...
ಹೆಣ್ಣೆದೆಯ ಬೃಂದಾವನದ ಇರುಳಿಗೆ ಬೆಳದಿಂಗಳು ಸುರಿಯಲಿ...
#ಅವಳ(ಳೇ)_ಕಾವ್ಯ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)