Monday, February 27, 2017

ಗೊಂಚಲು - ಎರಡ್ನೂರಾ ಹತ್ತು.....

ಚಿತ್ರ ಚೌಕಟ್ಟು - ಭಾವದ ನಂಟು.....

(ಅರ್ಥ - ಅವರವರ ನಿಲುಕಿನಷ್ಟು...)

ಚಿತ್ರ ಚೌಕಟ್ಟು: ಗೆಳತಿ ಅರ್ಚನಾ ಖ್ಯಾಡಿ.
ಒಲೆಯುರಿಯ ನಿಟ್ಟಿಸೋ ದಿಟ್ಟಿಯಲ್ಲಿ ಸಾವಿರ ಬಣ್ಣದ ಹಸಿ ಹಸಿ ಹಸಿವು...
#ಹಸಿವಿಗೆ_ನಿತ್ಯಯೌವನ  

ಹಸಿವಿನ ಕಡೆಗೋಲಿನ ಮಥನಕ್ಕೆ ಸಿಕ್ಕ ಎದೆಯ ಭಾವಗಳು ಕಣ್ಣ ಪಾತ್ರೆಯಲಿ ಬೆಣ್ಣೆಯಂತೆ ತೇಲುತಾವೆ...
#ಅದುರುವ_ನೋಟಗಳು... 

ಕತ್ತಲು ಹೇಳುವ ಹಸಿವಿನ ಕಥೆಗಳಲಿ ವಿಧ ವಿಧ ಬೆವರಿನ ಘಮಲು...
#ಒಲೆ_ಉರಿದರೆ_ಹಸಿವಿನ_ನಿರ್ವಾಣ... 

ಕಲೆ ಉಳಿಸಿದ ಹೆಣ ಹೊತ್ತ ಹೆಗಲ ಗಾಯ, ಕಿವಿ ತುಂಬಿದ ಚಿತೆಯುರಿಯಲಿ ಸಿಡಿದ ತಲೆಬುರುಡೆಯ ಶಬ್ಧ, ಉಸಿರ ನಡುಗಿಸುವ ಮಣ್ಣಲ್ಲಿ ಹುಳುವಿಗಾಹಾರವಾದ ಮಾಂಸ - ಮಜ್ಜೆ; ಸಾವು ಕಲಿಸಿದ ಬದುಕ ಹಸಿವಿನ ಪಾಠಗಳು - ಮುಗುಳ್ನಗುವಿನ ಮೂಲ...
#ಗಾಳಿಗಾರೋಚಿಮಣಿ_ಉರಿಯಬಚ್ಚಿಟ್ಟಗಂಧಕದಕಡ್ಢಿ_ಗಡಿಗೆಯಲಿಬೇಯೋಬದುಕು...

ಒಳಮನೆಯಲಿ ಒಲೆ ಉರಿದು ಬಿರಿವ ಅಗುಳು - ಎದೆ ಗುಡಿಯೊಳಗೆ ಉರಿವ ನಗೆ ಹಣತೆ - ಬದುಕ ಸಿರಿವಂತ ಸಿಂಗಾರ...
#ಅನ್ನ_ನಗು_ಹಸಿವಮೀರುವಬೆಳಕು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Tuesday, February 21, 2017

ಗೊಂಚಲು - ಎರಡ್ನೂರೊಂಭತ್ತು.....

ಹುಳಿ ಹುಳಿ ಮಾತು.....

ಪ್ರಜ್ಞೆಗೆ ಸ್ಪಷ್ಟತೆ ಇಲ್ಲದ ನನ್ನ ಯಾವುದೇ ಕ್ರಿಯೆ ಅಥವಾ ನಿರ್ಧಾರ ನನ್ನೊಳಗನ್ನು ಮುರಿದು ಹಾಕುತ್ತದೆ; ಆಗ ಎತ್ತಿಡುವ ಪ್ರತಿ ಹೆಜ್ಜೆಯೂ ಹೆಣಭಾರ...
ನನ್ನೆಲ್ಲಾ ಕ್ರಿಯೆಗಳಿಗೂ ಸಾವಿರ ಸಮರ್ಥನೆಗಳಿದ್ದಾವು; ಆದ್ರೆ ಆ ಸಮರ್ಥನೆಗಳು ನನ್ನ ಮನಸಿಗೆ ಪ್ರಶಾಂತಿಯನ್ನು ಕೊಟ್ಟಾವಾ..? ನನ್ನೊಳಗೇ ಹುಟ್ಟುವ ಇದೊಂದೇ ಪ್ರಶ್ನೆ ಸಾಕು ನನ್ನ ಎಷ್ಟೋ ಗೊಂದಲಗಳಿಗೆ ಉತ್ತರ ಸಿಕ್ಕಲು... 
ಯಾವ ಸಮರ್ಥನೆಯೂ ಎದೆಯ ಪಾಪಪ್ರಜ್ಞೆಯ ನೀಸಲಾರದು - ಪ್ರಜ್ಞೆ ಹಾಗೂ ಭಾವಕ್ಕೆ ಸ್ಪಷ್ಟತೆ ಇರುವ ಕ್ರಿಯೆ ಪ್ರಕ್ರಿಯೆಗಳಲ್ಲಿ ಪಾಪಪ್ರಜ್ಞೆಗೆ ತಾವಿಲ್ಲ, ಹಾಗಾಗಿ ಸಮರ್ಥನೆಗಳ ಹಂಗೂ ಇಲ್ಲ... 
ಇಂತಾಗಿ ನಾಳೆಗಳಲ್ಲಿ ಪಾಪಪ್ರಜ್ಞೆಯನುಳಿಸದ ನನ್ನ ಯಾವ ಕ್ರಿಯೆಯೂ ನಂಗೆ ತಪ್ಪು ಅನ್ನಿಸಲ್ಲ...
(((*)))

ಉದ್ದೇಶಗಳಿಲ್ಲದ ನಡಿಗೆಗೂ ಉತ್ಸಾಹ ತುಂಬಿಕೊಳ್ಳಬೇಕು - ಕಣ್ಣ ಹನಿಗಳ ಕಷಾಯ ಕುಡಿದಾದರೂ; ಸಾವಿನ ಕಕ್ಷೆಯಲ್ಲಿ ಗಿರಕಿ ಹೊಡೆಯುವ ಬದುಕನೇ ಉತ್ಸವವಾಗಿಸಬೇಕು - ಉಸಿರ ವ್ಯಾಪ್ತಿಯ ಆಚೆಯ ನಗೆಯ ಕನಸಿನ ಬಸಿರ ಹೊತ್ತಾದರೂ...
'ಮನೆ ಸೋರುತ್ತಿದೆ’ - ಅವಳು ಗೊಣಗುತ್ತಾಳೆ; 'ನಡುಮನೆಯಲೇ ಕಾಮನಬಿಲ್ಲು ಹೆಳವನಿಗಾಗಿ’ - ನಾನು ನಗುತ್ತೇನೆ...
ಅವಳು ಕಣ್ತಪ್ಪಿಸುತ್ತಾಳೆ...
(((*)))

ನೆನಪುಗಳು ಎದೆಯ ಹಿಂಡದ ಹಾದಿಯೊಂದಿದ್ದರೆ ಸಾವೇ ಇರಬೇಕು..........!!!
(((*)))

ಬಯಲಿಗೆ ಬಾಗಿಲ ಹಂಗಿಲ್ಲ - ಬಯಲೆಂದರೇ ಪೂರಾ ಪೂರಾ ತೆರೆದ ಬಾಗಿಲು...
ಬಯಲಿಗೆ ಕತ್ತಲ ಭಯವಿಲ್ಲ - ಬಯಲೆಂದರೆ ಮಿತಿ ಇಲ್ಲದ ಬೆಳಕೇ ಬೆಳಕು...
ಬಯಲ ಭೈರಾಗಿಯ ನಡಿಗೆಗೆ ದಿಕ್ಕುಗಳ ಭ್ರಮೆಯಿಲ್ಲ - ಬೆಳಕೊಂದೆ ಆಯ್ಕೆ, ಬೆಳಕಷ್ಟೇ ಆದ್ಯತೆ...
(((*)))

ಹುಟ್ಟು ಬೆತ್ತಲೆಯ ಕೊಡುಗೆ - ಸಾವು ಬೆತ್ತಲೆಯ ನಡಿಗೆ - ಬದುಕಿಗೊಂದೆ ವಿಧವಿಧ ಬಟ್ಟೆಗಳ ಹುಚ್ಚಾಟದ ಗುಲಾಮೀ ಬಡಿವಾರ...
ಬದುಕಿಷ್ಟು ಗೋಜಲು ಗೋಜಲಾಗಲು ಸ್ಥಾವರದ ಗುಂಗೇ ಮೂಲವೇನೋ ಅಲ್ಲವಾ...?
(((*)))

ಒಂದರೆ ಘಳಿಗೆಯ ಮಟ್ಟಿಗೆ ಸತ್ತು ಮಲಗಬೇಕು - ನನ್ನೆಲ್ಲ ನಿಜ ಗಳಿಕೆಯ ಅರಿವಾಗಬೇಕು...
(((*)))

ಮದ ಮರೆತು ಮಡಿಲಲ್ಲಿ ಮಗುವಾಗಬಲ್ಲವಗೆ ಸೂಳೆ ತುಟಿಯಲ್ಲೂ ಪ್ರೇಮ ಸುಧೆ ಉಕ್ಕೀತು...
ಎದೆಯಿಂದ ಎದೆಗೆ ಕನಸು ಹಾಯದೆ ಹೋದರೆ ಮಡದಿ ಮಿದುವೆದೆಯಲ್ಲೂ ಬೆವರಷ್ಟೇ ಹರಿದೀತು...
#ಅರ್ಧ ಬರೆದ ಸತ್ಯ!!!
(((*)))

ಸುವ್ವಾಲಿಯಾಗದ ಕನಸುಗಳೆಲ್ಲ ಹುಳಿ ಹುಳಿ...
(((*)))

ವಿಕ್ಷಿಪ್ತ -
ನನ್ನಲ್ಲಿ ನನ್ನನೇ ಹುಡುಕು...
ನನ್ನಂತೆ ನಾನು, ಮತ್ತಂತೆಯೇ ನನ್ನ ಬದುಕು...
ಅವರಿವರಂತಾಗಲು ನಾನಾರು, ಇನ್ಯಾವ ಜರೂರು...
ಬೆಳಕ ನಶೆಯಲ್ಲಿ ಮನವಾಗಲಿ ನಗ್ನ ನಗ್ನ - ಸಿದ್ಧಿಸಲಿ ಶರಧಿದಡದ ಮೌನ ಧ್ಯಾನ...
ಯಾರಿಗೆ ಯಾರೂ ಸ್ವಂತವಲ್ಲದ ಸಾವಿನೊಕ್ಕಲ ಹಾದಿಯಲ್ಲಿ ಗುರುತುಳಿಯುವುದಾದರೆ, ನಕಲಿಯಲ್ಲದ ನಗುವ ಚಂದಕೆ - ಅದ್ಯಾವ ಹೋಲಿಕೆ...
ಮುಕ್ತ ನಗುವದುವೇ ಹುಳುಕಿಲ್ಲದ ಬೆಳಕು ಅಂತರಾತ್ಮಕೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Tuesday, February 7, 2017

ಗೊಂಚಲು - ಎರಡ್ನೂರೆಂಟು.....

ಬೆಳಕ ಬಿತ್ತಿದ ಈ ಬದುಕ ಮೊದಲ ಗೆಳತಿಯೇ.....  
(ಅಮ್ಮ ಅಂದರೆ ಅಮ್ಮ ಅಷ್ಟೇ... ಬೇರೆಲ್ಲ ಮಾತೂ ಬರಿ ಕ್ಲೀಷೆ ಅಷ್ಟೇ...)     

ನಿನ್ನ ರಕ್ತವೇ ಅನ್ನವಾಗಿ ಈ ಜೀವ ಜಗಕೆ ಬಂತು...
ನಿನ್ನ ಕರುಳ ಮಮತೆಯೇ ಹಾಡಾಗಿ ತೊಟ್ಟಿಲ ತೂಗಿ ಉಸಿರ ತುಂಬಿತು...
ಸೆರಗ ತುದಿಯ ಮರೆಯಿಂದ ಭಯ ತೊರೆದು ಬೆಳಕಿಗೆ ಕಣ್ತೆರೆದೆ...
ಮೊದಲ ತೊದಲು ಹೆಜ್ಜೆಗೆ ನಿನ್ನ ಕಣ್ಣಂಕೆಯೇ ಶ್ರೀರಕ್ಷೆ...
ನಡಿಗೆಗೆ ಶಕ್ತಿ, ನುಡಿಗೆ ಯುಕ್ತಿ, ಜೀವನ ಯಾನಕ್ಕಿಷ್ಟು ಸ್ಪೂರ್ತಿ ಅದು ನಿನ್ನಿಂದ...
ಇಂದೀಗ ಅವಳ ಕಣ್ಣಲ್ಲೂ ನಾ ನಿನ್ನನೇ ಹುಡುಕುವಲ್ಲಿ ನನ್ನ ನಗುವಲ್ಲಿನ ಮಿಂಚು ನಿನ್ನಂದ...
ಅತ್ತದ್ದು ಮರೆಯೋಕೆ, ನಗೆಯ ಕನ್ನಡಕ ಧರಿಸಿ ಎದೆಯ ನೋವ ಭರಿಸೋಕೆ ನಿನ್ನಿರುವಿಕೆಯೇ ಕಾರಣ...
ನೀ ನಡೆದ ಹಾದಿ ನಾ ನಡೆಯಲಾರೆ - ನಿನ್ನ ಮುಡಿಯ ನೋವ ನಾ ಮುಡಿಯಲಾರೆ - ನೀ ತುಳಿದ ಧೂಳಲ್ಲಿ, ನಿನ್ನ ಕರುಣೆಯ ತೋಳಲ್ಲಿ ಅರಳಿದ್ದು ಈ ಬಾಳು - ಈ ಸತ್ಯವ ಮರೆಯಲಾರೆ...
ಹಿಮ್ಮಡಿಯ ಒಡಕಿನಲಿ ಹೆಪ್ಪುಗಟ್ಟಿರುವ ನಿನ್ನ ಹಾದಿಯ ಕಥೆಗಳು ದಾಖಲಾಗಲೇ ಇಲ್ಲ...
ಗೊಡ್ಡು ದನಕೂ ಅಕ್ಕರೆಯ ಕೈತುತ್ತನಿಡುವ ನಿನ್ನ ಪ್ರೀತಿಯ ಹರಿವಿನ ಹರಹು ನನ್ನೊಳಗೆ ಅರಗಲೇ ಇಲ್ಲ...
ನನ್ನದೊಂದು ಒಪ್ಪನೂ ಜಗದ ಬೀದಿಯಲಿ ಮೆರೆಸುವ, ಸಾವಿರ ತಪ್ಪುಗಳನು ಕದದ ಹಿಂದೆ ಮರೆಸುವ ನಿನ್ನ ಮಮತೆಯ ಸ್ವಾರ್ಥ ನಂಗೆ ಅರ್ಥವೇ ಆಗಲೊಲ್ಲದು... 
ಅತ್ತದ್ದು, ನಕ್ಕದ್ದು, ಸೋತದ್ದು, ಗೆದ್ದದ್ದು, ಎಷ್ಟೆಲ್ಲಾ ಮೊದಲುಗಳಿಗೆ ನೀನೇ ಸಾಕ್ಷಿ... 
ಇಂದಿಗೂ ಅಹಂ ಕಾಡದೆ ಅಳಬಹುದಾದದ್ದು, ಎಡವಿದ್ದನ್ನೂ ಗೆಲುವನ್ನು ಹೇಳಿಕೊಂಡಷ್ಟೇ ಧೈರ್ಯವಾಗಿ ಹೇಳಿಕೊಳ್ಳಬಹುದಾದದ್ದು, ಕಳಕೊಳ್ಳೋ ಭಯ ಕಿಂಚಿತ್ತೂ ಇಲ್ಲದೇ ರಚ್ಚೆ ಹಿಡಿದು ಜಗಳ ಕಾಯಬಹುದಾದದ್ದು ಅದು ನಿನ್ನ ಮಡಿಲಲ್ಲಿ ಮಾತ್ರವೇ... 
ನಿಂಗೆ ಹಸಿವಾದರೆ ಮಾಣೀ ಊಟ ಮಾಡು ಅನ್ನುವ, ನಿಂಗೆ ಚಳಿಯಾದರೆ ಮಾಣಿಗೆ ಕಂಬಳಿ ಹೊದೆಸೋ ನಿನ್ನ ಮುಗ್ಧತೆಯ ಮುದ್ದು ಎಂದಿಗೂ ಅಚ್ಚರಿಯೇ ನನಗೆ... 
ನನ್ನ ಮೊಬೈಲ್ ಕರೆಗಂಟೆಯಲಿ ನಿನ್ನ ಹೆಸರು ಕಂಡರೆ ಹೊಸ ಜಗಳಕ್ಕೆ ನಾಲಿಗೆ ತುರಿಸೋ ಸಂಭ್ರಮ ನನ್ನಲ್ಲಿ... 
ನಿನ್ನ ಕನಸು ಕನವರಿಕೆಗಳೆಲ್ಲಾ ನನ್ನ ಸುತ್ತಲೇ ಸುತ್ತುವಾಗ ಸೊಕ್ಕು ಸುರಿವ ನನ್ನ ನಗುವಲ್ಲಿ ನೀನೇ ನೀನು... 
ನಿನ್ನ ಮಾತೆಲ್ಲ ಮನದ ಮನೆಯದು, ನನ್ನ ನಡೆಯೆಲ್ಲ ಬುದ್ಧಿಯ ಕೈಯ್ಯಾಳು - ಆದರೂ, ಸಾವಿರ ಭಿನ್ನತೆಗಳ ಆಚೆ ನೀನು ಆಯಿ ನಾನು ಮಗರಾಯ... 
ಹುಚ್ಚು ಹುಡುಗೀ ನಿನ್ನ ಹುಟ್ಟು ಹಬ್ಬವಂತೆ ಇಂದು - ಶುಭಾಶಯ ಹೇಳಲು ನಾ ಫೋನು ಮಾಡಿದ್ರೆ, ನಿದ್ದೆಗಣ್ಣಲ್ಲಿ ಎದ್ದು ಬಂದು ಮಾತಾಡುತಿದ್ದ ನಿನ್ನ ಮೇಲೆ ಇನ್ನಿಲ್ಲದ ಮುದ್ದು ನಂಗಿಲ್ಲಿ... 
ಫೋನಲ್ಲೇ ಕೊಟ್ಟುಕೊಂಡ ಪಪ್ಪಿ ಬದುಕಿನ ದೊಡ್ಡ ಉಡುಗೊರೆ ಇಬ್ಬರಿಗೂ... 

ಎನ್ನಾತ್ಮದ ಸಾಕ್ಷೀ ಪ್ರಜ್ಞೆಯೇ,
ಮತ್ತೇನಿಲ್ಲ - 
ಈ ಬದುಕ ಮುನ್ನಡೆಯ ಎಕೈಕ ಉದ್ದೇಶ ನೀನು; ಬದುಕಿಗೆ ಮುನ್ನುಡಿ ಬರೆದವಳು - ನಿನ್ನೊಡನೆಯ ಮಾತು ಮಾತಿನ ಜಗಳ, ಮರಳಿ ಮರಳಿ ತೋರುವ ಮರುಳ ಮನಸಿನ ಮುನಿಸು ಎಲ್ಲವೂ ನಿನ್ನೆಡೆಗಿನ ಪ್ರೀತಿಯ ಮತ್ತೊಂದು ಮಗ್ಗುಲಷ್ಟೇ...
ಲವ್ ಯೂ ಕಣೇ ಹುಡುಗೀ... 
ಹ್ಯಾಪಿ ಹುಟ್ದಬ್ಬ ಆಯೀ...❤❤
ಅಮ್ಮ ಅಂದರೆ ಅಮ್ಮ ಅಷ್ಟೇ... 
ಬೇರೆಲ್ಲ ಮಾತೂ ಬರಿ ಕ್ಲೀಷೆ ಅಷ್ಟೇ....


Thursday, February 2, 2017

ಗೊಂಚಲು - ಎರಡ್ನೂರ್ಯೋಳು.....

ಕೃಷ್ಣ ಕೃಷ್ಣಾ = ರಾಧೆಯೊಡಲ ಬೆಂಕಿ..... 

ಅವನೆಂದರೆ ಅವಳ ಸೆರಗಿನ ನರುಗೆಂಪು...
ಬೆಳಗೆಂದರೆ ಅವನ ಅಮಲುಗಣ್ಣ ಬೆಳಕಲ್ಲಿ ಅರಳೋ ಅವಳ ತೃಪ್ತ ಮರುಳ ಮುಗುಳ್ನಗು...
ಚಂದಿರನ ಕಾವಲಿನಲಿ ಕದ್ದು ಸವಿದ ಇರುಳ ಒಲವಿಗೆ ಸಾಕ್ಷಿ: ಈಗವಳ ರೋಮಗಳೆಲ್ಲ ಹಸಿರೋ ಹಸಿರು - ಬಸಿದ ಬೆವರಿಗೆ ಸಾಗರ ಉಪ್ಪೋ ಉಪ್ಪು... 😉

ಅಲ್ಲಿ ಯಮುನೆ ದಡದಲ್ಲಿ ಕರಿಯ ಬಿದಿರಿಗೆ ಉಸಿರ ತುಂಬುತಿರೆ...
ಇಲ್ಲಿ ಹಾಡಿಗಳಲ್ಲಿ ಗೋಪಿಯರೆದೆಯಲಿ ಒಲವ ಹಾಲುಕ್ಕುವುದು ಯಾವ ವಿನೋದ...!!!

ಮಥುರೆಯ ಕಡಲು ಉಕ್ಕುಕ್ಕಿ ಹೇಳುವುದು ಯಮುನೆಯ ದಡದ ಮೌನದ ಕಥೆಯ...

ಕೃಷ್ಣನ ತೋಳಿಗೆ ರಾಧೆಯ ಮೂಗುತಿಯ ಗೀರಿನಾಭರಣ...
ನಕ್ಕ ಯಮುನೆಯಲಿ ಉಕ್ಕೋ ಹರೆಯ...

ಬೃಂದಾವನದಲಿಂದು ಪ್ರೇಮೋತ್ಸವವಂತೆ - ನಿರ್ಲಜ್ಜ ಚಂದಮ ತುಸು ಹೆಚ್ಚೇ ಬೆಳಗುವ...
ಗೋಪ ಗೋಪಿಯರ ಮೈತೊಳೆದ ಯಮುನೆಯ ಹರಿವಲ್ಲೀಗ ಹಸಿ ಹಾಲಿನ ಘಮ...

ಕೃಷ್ಣನ ನೆನಪಾದಾಗಲೆಲ್ಲ ಯಮುನೆ ರಾಧೆಯ ಪಾದ ಸೋಕುವಳಂತೆ... 

ಗೋಕುಲದ ಹಟ್ಟಿಗಳಲಿ ಹಾಲು ಕದಿವ ಬಾಲರೆಲ್ಲ ಈಗ ತುಂಟ ಕೃಷ್ಣರೇ... 

ಏನೋ ಮರುಳಲ್ಲಿ ರಾಧೆ ಬೃಂದಾವನವನ್ನೆಲ್ಲ ಬಿರಬಿರನೆ ಸುತ್ತುವಳು - ಅವಳು ತುಳಿದ ಹಾದಿಯ ಧೂಳಲ್ಲಿ ಕರಿಯನ ಹೆಜ್ಜೆ ಗುರುತು...

ನಿನ್ನೆಯಷ್ಟೇ ಮೈನೆರೆದ ಗೋಪಬಾಲೆ ಮಡುವಿನಲಿ ಮುಳುಗೆದ್ದು, ಬೃಂದಾವನದ ಹೂವ ಮುಡಿದು ಕೃಷ್ಣಾ ಅಂದು ನಾಚುತ್ತಾಳೆ - ಯಮುನೆಯ ಎದೆಯುಬ್ಬಿ ಹರಿವಿಗೇನೋ ಆವೇಗ - ಚಂದಿರ ಭಾವ ಮತ್ಸರದಿ ಸಣ್ಣಗೆ ಕಂಪಿಸುವನಂತೆ... 

ಏನೋ ನೆನಹಲ್ಲಿ ರಾಧೆ ನಿಡುಸುಯ್ವಳು - ಗೋಕುಲದ ಬಿದಿರೆಲ್ಲ ಕೊಳಲಾಗುವುದು - ಗಾಳಿಯಲೆಯಲ್ಲಿ ಜೋಗಿ ಜಂಗಮ ರಾಗ... 

ಮೂರು ಸಂಜೆಯಲಿ ಗೋಪಿ ಕೆಂಪಿ ಕರುವಿನ ಕೊರಳ ತಬ್ಬುವಳು - ಕರುವು ಗೋಪಿಯ ಉಸಿರ ಮೂಸುವುದು; ಗೋಪಿಗೂ, ಕರುವಿಗೂ ಕೃಷ್ಣ ಸಾನ್ನಿಧ್ಯ...